ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗದ ಕಾಮಗಾರಿ ತ್ವರಿತಗೊಳಿಸುವುದು, ಬಳ್ಳಾರಿ–ಗದಗ–ಹುಬ್ಬಳ್ಳಿ ಹಾಗೂ ವಿಜಯಪುರ ಮಾರ್ಗಗಳಿಗೆ ಹೊಸ ರೈಲುಗಳನ್ನು ಆರಂಭಿಸುವುದು ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಗದಗ ಜಿಲ್ಲಾ ವಿಕಾಸ ವೇದಿಕೆ ನೈರುತ್ಯ ರೈಲ್ವೆ ಇಲಾಖೆಯ ಮುಂದೆ ಮಂಡಿಸಿದೆ.
ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅವರು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಯಾದ ಮನೋಜ್ ಬಾಗಡೆ ಅವರಿಗೆ ಮನವಿ ಸಲ್ಲಿಸಿ, ಗದಗ–ಹರಪನಹಳ್ಳಿ ರೈಲು ಮಾರ್ಗದ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗದಗ–ಯಲವಗಿ, ಗದಗ–ವಾಡಿ ಹಾಗೂ ಗದಗ–ಕೃಷ್ಣ ಮಾರ್ಗಗಳ ಸರ್ವೆಗೆ ಈಗಾಗಲೇ ಅನುದಾನ ಘೋಷಣೆಯಾಗಿದ್ದು, ವಿಳಂಬ ಮಾಡದೆ ಸರ್ವೆ ಕಾರ್ಯ ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಂಡರಾಪುರ–ವಿಜಯಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಹಿಂದಿನಂತೆ ಗದಗ–ಹುಬ್ಬಳ್ಳಿ ಮುಖ್ಯ ಜಂಕ್ಷನ್ ಮೂಲಕವೇ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಸಾವಿರಾರು ಭಕ್ತರು ಪಂಡರಾಪುರಕ್ಕೆ ಸಂಚರಿಸುವ ಹಿನ್ನೆಲೆಯಲ್ಲಿ ಈ ರೈಲು ಮಾರ್ಗ ಅತ್ಯಂತ ಅವಶ್ಯಕವಾಗಿದೆ ಎಂದು ವಿವರಿಸಿದರು.
ಬಳ್ಳಾರಿಯಿಂದ ಗದಗ, ಹುಬ್ಬಳ್ಳಿ, ಬಾಗಲಕೋಟೆ ಹಾಗೂ ವಿಜಯಪುರ ಕಡೆಗೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಮರ್ಪಕ ರೈಲುಗಳಿಲ್ಲ. ಬೆಳಿಗ್ಗೆ 6 ಗಂಟೆಯ ನಂತರ ಮಧ್ಯಾಹ್ನ 3.55ರವರೆಗೆ ಹುಬ್ಬಳ್ಳಿ ಮಾರ್ಗಕ್ಕೆ ಯಾವುದೇ ರೈಲು ಇಲ್ಲದಿರುವುದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಆದ್ದರಿಂದ ಗುಂತಕಲ್ ಅಥವಾ ಚಿತ್ರದುರ್ಗ–ರಾಯದುರ್ಗ–ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ ಮಾರ್ಗವಾಗಿ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಗದಗ ಈಗ ಪ್ರಮುಖ ರೈಲ್ವೆ ಜಂಕ್ಷನ್ ಆಗಿದ್ದು, ಬಾಗಲಕೋಟೆ ಹಾಗೂ ವಿಜಯಪುರ ಮಾರ್ಗಕ್ಕೂ ಹೊಸ ರೈಲುಗಳನ್ನು ನೀಡಿದರೆ ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಸಂಚಾರಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ತಿಳಿಸಿದರು.
ಇತ್ತೀಚೆಗೆ ಪೂರ್ಣಗೊಂಡಿರುವ ಗದಗ–ಸೊಲ್ಲಾಪುರ ಡಬ್ಲಿಂಗ್ ಯೋಜನೆ ಉದ್ಘಾಟನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಆಹ್ವಾನಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ರೈಲು ಸೌಲಭ್ಯಗಳನ್ನು ಘೋಷಿಸುವಂತೆ ಮನವಿ ಮಾಡಲಾಗಿದೆ ಎಂದರು.
ಈ ಹಿಂದೆ ವಿಜಯನಗರ ಜಿಲ್ಲೆಯ ಅಧಿಕಾರಿಗಳು, ಬಳ್ಳಾರಿ ಲೋಕಸಭಾ ಸದಸ್ಯ ಈ. ತುಕಾರಾಂ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಅವರಿಗೂ ಇದೇ ಬೇಡಿಕೆ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದರು.
ಈ ಸಂದರ್ಭದಲ್ಲಿ ಗದಗ–ಹರಪನಹಳ್ಳಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ, ರವಿಗೌಡ ಪಾಟೀಲ, ಧ್ರುವಕುಮಾರ ಹೂಗಾರ, ಬಸಪ್ಪ ವಡ್ಡರ, ಅಂದಾನಗೌಡ ಕುಲಕರ್ಣಿ, ವೀರಭದ್ರಪ್ಪ ಕಬ್ಬಿಣದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಗದಗ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ಹರಪನಹಳ್ಳಿ ಹೊಸ ರೈಲು ಮಾರ್ಗದ ಕಾಮಗಾರಿ ತ್ವರಿತಗೊಳಿಸುವುದರ ಜೊತೆಗೆ ಬಳ್ಳಾರಿ, ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಹೆಚ್ಚಿನ ರೈಲುಗಳನ್ನು ಆರಂಭಿಸಿದರೆ ಈ ಭಾಗದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.”
– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ




