Home Blog Page 2

30 ರೂ.ಗೆ SSLC ಪ್ರಶ್ನೆಪತ್ರಿಕೆ ಪೇಪರ್ ಮಾರಾಟ: ಶಿಕ್ಷಕರು, ವಿದ್ಯಾರ್ಥಿಗಳೇ ಭಾಗಿ

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾರೀ ವಿಚಾರ ಬಹಿರಂಗವಾಗಿದೆ. ಈ ಕೃತ್ಯದಲ್ಲಿ ಒಟ್ಟು 6 ಶಿಕ್ಷಕರು ಮತ್ತು 9 ವಿದ್ಯಾರ್ಥಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಕೆಲ ವಿದ್ಯಾರ್ಥಿಗಳು ಕೇವಲ 30 ರೂ.ಗೆ ಮಾರಾಟ ಮಾಡಿರುವ ಮಾಹಿತಿ ದೊರೆತಿದೆ. ಇನ್ನು ಕೆಲವರು 50, 100 ಮತ್ತು 150 ರೂ.ಗೆ ಪೇಪರ್ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಈ ಅಕ್ರಮ ಮಾರಾಟದಿಂದ ಒಟ್ಟು ಸುಮಾರು 1500 ರೂ. ಸಂಗ್ರಹವಾಗಿದೆ ಎಂಬ ಮಾಹಿತಿ ಹೊರಬಂದಿದೆ.

ಈ ಪ್ರಕರಣ ಸಂಬಂಧ ಶಿಕ್ಷಕರ ಬ್ಯಾಂಕ್ ಖಾತೆಗಳನ್ನು ಸೈಬರ್ ಕ್ರೈಂ ಪೊಲೀಸರು ಪರಿಶೀಲಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆಗೆ ಹಣ ಪಡೆದಿರುವ ನೇರ ಸಾಕ್ಷ್ಯ ಮಾತ್ರ ಇನ್ನೂ ಲಭ್ಯವಾಗಿಲ್ಲ.

ಶಿಕ್ಷಕರು ತಮ್ಮ ಅಧಿಕೃತ ಐಡಿ ಬಳಸಿ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಬಂಧಿತ ಶಿಕ್ಷಕರ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ.

ಇನ್ನೂ, ಪ್ರಶ್ನೆಪತ್ರಿಕೆ ಪಡೆದ ವಿದ್ಯಾರ್ಥಿಗಳನ್ನು ಸಂಪರ್ಕಿಸಿದವರ ಬಗ್ಗೆ ಮಾಹಿತಿ ಸಂಗ್ರಹ ನಡೆಯುತ್ತಿದೆ. ಪ್ರಕರಣ ಬಹಿರಂಗವಾದ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳ ಐಡಿಗಳನ್ನು ಡಿಲೀಟ್ ಮಾಡಿದ್ದರೂ, ವಿದ್ಯಾರ್ಥಿಗಳ ಇನ್‌ಬಾಕ್ಸ್ ಆಧರಿಸಿ ಪೊಲೀಸರು ಸಂಪರ್ಕ ಪಟ್ಟಿ ತಯಾರಿಸಿದ್ದು, ಈಗ ಐಪಿ ಅಡ್ರೆಸ್ ಟ್ರೇಸ್ ಮಾಡುವ ಪ್ರಕ್ರಿಯೆ ಮುಂದುವರಿದಿದೆ.

ಮಾಜಿ ನಗರಸಭೆ ಸದಸ್ಯನ ಕಚೇರಿಗೆ ಕನ್ನ: ಕದ್ದ ಹಣದಿಂದ ಅಣ್ಣನ ಆಸ್ಪತ್ರೆ ಖರ್ಚು ಭರಿಸಿದ ಕಳ್ಳ!

0

ಬೆಂಗಳೂರು: ಯಲಹಂಕ ಉಪನಗರದ ಮುನೇಶ್ವರ ಬಡಾವಣೆಯಲ್ಲಿ ಮಾಜಿ ನಗರಸಭೆ ಸದಸ್ಯನ ಕಚೇರಿಯಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಕಳ್ಳತನ ಪ್ರಕರಣವನ್ನು ಯಲಹಂಕ ಉಪನಗರ ಪೊಲೀಸರು ಭೇದಿಸಿದ್ದಾರೆ.

ಮಾಜಿ ನಗರಸಭೆ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ರಾಮಚಂದ್ರಚಾರಿ ಕಚೇರಿಯ ಲಾಕರ್‌ನಿಂದ ಸುಮಾರು 10 ಲಕ್ಷ ರೂಪಾಯಿ ಹಣ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ಆಶೋಕ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ, ಆರೋಪಿ ಕಳೆದ ಮೂರು ವರ್ಷಗಳಿಂದ ಕಳ್ಳತನವನ್ನೇ ಜೀವನೋಪಾಯವಾಗಿ ಮಾಡಿಕೊಂಡಿದ್ದಾನೆ ಎಂಬುದು ಬಹಿರಂಗವಾಗಿದೆ. ಆರೋಪಿ ಪ್ರತಿದಿನ ಗೋಬಿ ತಿನ್ನಲು ಕಚೇರಿಯ ಬಳಿ ಬರುತ್ತಿದ್ದ ವೇಳೆ, ಕಚೇರಿ ಕೀ ಇಡುವ ಸ್ಥಳವನ್ನು ಗಮನಿಸಿದ್ದಾನೆ.

ಇತ್ತೀಚೆಗೆ ಕಚೇರಿಯಲ್ಲಿ ಹೆಚ್ಚಿನ ಹಣ ಇಡಲಾಗಿದೆ ಎಂಬ ಮಾಹಿತಿ ದೊರೆತ ಕೂಡಲೇ, ಯಾರಿಗೂ ತಿಳಿಯದಂತೆ ಕಚೇರಿ ಬೀಗ ತೆರೆದು ಹಣ ಕಳ್ಳತನ ಮಾಡಿದ್ದಾನೆ. ಕದ್ದ ಹಣವನ್ನು ತನ್ನ ಅಣ್ಣನ ಆಸ್ಪತ್ರೆ ಚಿಕಿತ್ಸಾ ಖರ್ಚಿಗೆ ಬಳಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ನಿಧನ: ಇಂದು ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

0

ಬೀದರ್: ಶತಾಯುಷಿ ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ (102) ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಕುರಿತು ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಳೆದ 10ರಿಂದ 12 ದಿನಗಳಿಂದ ವಯೋಸಹಜ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಡಾ. ಭೀಮಣ್ಣ ಖಂಡ್ರೆ ಅವರನ್ನು ಬೀದರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯಲ್ಲಿರುವ ಅವರ ನಿವಾಸದಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಮಾಹಿತಿ ನೀಡಿದ್ದಾರೆ.

ಕಳೆದ ಒಂದು ವಾರದಿಂದ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಹರಚರ ಗುರುಮೂರ್ತಿಗಳು, ಸಚಿವರು, ಶಾಸಕರು, ವಿವಿಧ ಪಕ್ಷಗಳ ನಾಯಕರು, ಸಮಾಜದ ಗಣ್ಯರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಲ್ಕಿಗೆ ಆಗಮಿಸಿ ಡಾ. ಭೀಮಣ್ಣ ಖಂಡ್ರೆ ಅವರ ಆರೋಗ್ಯ ವಿಚಾರಿಸಿದ್ದರು.

ಅಲ್ಲದೆ, ಅನೇಕರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ನಾಡಿನ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ನಾಯಕನ ನಿಧನದಿಂದ ಬೀದರ್ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶೋಕದ ವಾತಾವರಣ ಆವರಿಸಿದೆ.

ಮತ್ತೆ ಹದಗೆಟ್ಟ ಬೆಂಗಳೂರಿನ ವಾಯು ಗುಣಮಟ್ಟ: ರಾಜಧಾನಿ ಗಾಳಿಯಲ್ಲಿ ವಿಷ!?

0

ಬೆಂಗಳೂರು: ಇನ್ನೇನು ಬೆಂಗಳೂರಿನ ವಾಯು ಗುಣಮಟ್ಟ ಸುಧಾರಿಸಿತೆನ್ನುವಷ್ಟರಲ್ಲಿ ಮತ್ತೆ ಕಳಪೆ ಹಂತಕ್ಕೆ ತಲುಪಿದೆ. ಕೆಲ ತಿಂಗಳ ಹಿಂದೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ ಇಂಡೆಕ್ಸ್ (AQI), ಹಂತ ಹಂತವಾಗಿ 130ರ ಆಸುಪಾಸಿಗೆ ಇಳಿದಿತ್ತು. ಆದರೆ ಇಂದಿನ ಅಂಕಿಅಂಶಗಳನ್ನು ನೋಡಿದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಮತ್ತೆ ವಾಯುಮಾಲಿನ್ಯಕ್ಕೆ ತುತ್ತಾಗಿರುವುದು ಸ್ಪಷ್ಟವಾಗಿದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ 190ಕ್ಕೆ ತಲುಪಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ, ಇನ್ನೂ ವಾಯು ಗುಣಮಟ್ಟ ಅನಾರೋಗ್ಯಕರ ಹಂತದಲ್ಲಿಯೇ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ, ಬೆಂಗಳೂರಿನ ಸ್ಥಿತಿ ದೆಹಲಿಯಂತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸೂಕ್ಷ್ಮ ಕಣಗಳಿಂದ ಶ್ವಾಸಕೋಶ ಸಮಸ್ಯೆ

ನಗರದಲ್ಲಿ PM2.5 ಮಟ್ಟ 111 ಹಾಗೂ PM10 ಮಟ್ಟ 141ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟದಲ್ಲಿವೆ. ವಿಶೇಷವಾಗಿ PM2.5 ಅತಿ ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾಮಗಾರಿಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಹಾಗೂ ಗಾಳಿಯ ಚಲನೆಯ ಕೊರತೆ ವಾಯುಮಾಲಿನ್ಯ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

PM10 ಕಣಗಳು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾಗಿದ್ದು, PM2.5 ಕಣಗಳು ಕೂದಲಿನ ದಪ್ಪದ ಕೇವಲ ಶೇ.3ರಷ್ಟು ಮಾತ್ರ ಇರುತ್ತವೆ. ಈ ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಪ್ರವೇಶಿಸಿ ರಕ್ತದಲ್ಲೂ ಸೇರಬಹುದು. ಇದರಿಂದ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ನಗರಕ್ಕೆ ಈಗ ಅನಿವಾರ್ಯವಾಗಿದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI

ಬೆಂಗಳೂರು – 190
ಮಂಗಳೂರು – 164
ಮೈಸೂರು – 96
ಬೆಳಗಾವಿ – 122
ಕಲಬುರಗಿ – 79
ಶಿವಮೊಗ್ಗ – 176
ಬಳ್ಳಾರಿ – 196
ಹುಬ್ಬಳ್ಳಿ – 116
ಉಡುಪಿ – 158
ವಿಜಯಪುರ – 66

ಗಾಳಿಯ ಗುಣಮಟ್ಟದ ಅಳತೆ

ಉತ್ತಮ – 0–50
ಮಧ್ಯಮ – 50–100
ಕಳಪೆ – 100–150
ಅನಾರೋಗ್ಯಕರ – 150–200
ಗಂಭೀರ – 200–300
ಅಪಾಯಕಾರಿ – 300–500+

PUC ಪ್ರಶ್ನೆಪತ್ರಿಕೆ ಲೀಕ್‌ಗೆ ಬ್ರೇಕ್! ಲೀಕ್ ಆದ ಕಾಲೇಜುಗಳಿಗೆ ಬ್ಲಾಕ್ ಲಿಸ್ಟ್, ಮಾನ್ಯತೆ–ಅನುದಾನಕ್ಕೆ ಕತ್ತರಿ

0

ಬೆಂಗಳೂರು: ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವಾಗಲೇ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಘಟನೆ ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ, ಜನವರಿ 6ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿತ್ತು.

ಈ ಬಗ್ಗೆ ಟಿವಿ9 ಸುದ್ದಿ ಪ್ರಸಾರದ ಬಳಿಕ ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಯಾವ ಕಾಲೇಜಿನಿಂದ ಪ್ರಶ್ನೆಪತ್ರಿಕೆ ಲೀಕ್ ಆಗುತ್ತದೋ, ಆ ಕಾಲೇಜನ್ನು ನೇರವಾಗಿ ಬ್ಲಾಕ್ ಲಿಸ್ಟ್‌ಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಕಾಲೇಜುಗಳಾದರೆ ಅನುದಾನ ಕಡಿತ ಹಾಗೂ ಕಪ್ಪುಪಟ್ಟಿಗೆ ಸೇರಿಸುವುದು, ಖಾಸಗಿ ಅನುದಾನರಹಿತ ಕಾಲೇಜುಗಳಾದರೆ ಮಾನ್ಯತೆ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಇದಲ್ಲದೆ, ಪ್ರಶ್ನೆಪತ್ರಿಕೆ ಲೀಕ್‌ಗೆ ಕಾರಣರಾದ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಮತ್ತು ಕಾನೂನು ಕ್ರಮಕ್ಕೂ ಇಲಾಖೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ವೈರಲ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಲೀಕ್‌ಗೆ ಸಂಬಂಧಿಸಿದ ಖಾತೆಗಳ ವಿವರಗಳನ್ನು ಸಹ ಪೊಲೀಸರಿಗೆ ನೀಡಲಾಗಿದೆ.

8 ವರ್ಷಗಳಿಂದ ಬಾಲಿವುಡ್‌ನಲ್ಲಿ ಅವಕಾಶಗಳೇ ಸಿಗುತ್ತಿಲ್ಲ. ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು- ಎ.ಆರ್.ರೆಹಮಾನ್

ಬಾಲಿವುಡ್‌ಗೆ ಎವರ್‌ಗ್ರೀನ್ ಸಂಗೀತ ಕೊಟ್ಟ ದಿಗ್ಗಜ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಇದೀಗ ಬಾಲಿವುಡ್ ವ್ಯವಸ್ಥೆಯ ವಿರುದ್ಧವೇ ಗಂಭೀರ ಪ್ರಶ್ನೆ ಎತ್ತಿದ್ದಾರೆ. ಬಿಬಿಸಿ ಏಷ್ಯನ್ ನೆಟ್ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ, “ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ನನಗೆ ಅವಕಾಶಗಳೇ ಸಿಗುತ್ತಿಲ್ಲ. ಇದಕ್ಕೆ ಕೋಮುವಾದಿ ಮನಸ್ಥಿತಿಯೂ ಕಾರಣವಾಗಿರಬಹುದು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಇಂಧನ ಹಾಕಿದೆ.

ನಾನು ಯಾರ ಬಳಿಯೂ ಕೆಲಸಕ್ಕಾಗಿ ಹೋಗಲ್ಲ. ನನ್ನನ್ನು ಹುಡುಕಿ ಬರುವ ಕೆಲಸವನ್ನಷ್ಟೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿರುವ ರೆಹಮಾನ್, 90ರ ದಶಕದಲ್ಲಿ ಇಂತಹ ಪಕ್ಷಪಾತ ಇರಲಿಲ್ಲ ಎಂದು ನೆನಪಿಸಿದ್ದಾರೆ. ಈಗ ಸಂಗೀತ ಕಂಪನಿಗಳು ತಮಗೆ ಅವಕಾಶ ನೀಡದೆ, ಐವರು ಸಂಗೀತ ನಿರ್ದೇಶಕರ ಜೊತೆ ಒಪ್ಪಂದ ಮಾಡಿಕೊಂಡಿರುವುದು ನೋವು ತಂದಿದೆ ಎಂದಿದ್ದಾರೆ.

“ಕಳೆದ 8 ವರ್ಷಗಳಲ್ಲಿ ಅಧಿಕಾರ ಬದಲಾವಣೆ ಆಯ್ತು. ಈಗ ಸೃಜನಶೀಲತೆ ಇಲ್ಲದವರು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದು ಮತೀಯವಾದವೂ ಇರಬಹುದು” ಎಂಬ ರೆಹಮಾನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ‘ರೋಜಾ’, ‘ಬಾಂಬೆ’, ‘ದಿಲ್ ಸೆ’, ‘ತಾಲ್’ ಮುಂತಾದ ಐತಿಹಾಸಿಕ ಸಿನಿಮಾಗಳಿಗೆ ಸಂಗೀತ ನೀಡಿದರೂ ಕೂಡ, ಇಂದು ಬಾಲಿವುಡ್‌ನಲ್ಲಿ ನಾನು ಇನ್ನೂ ಹೊರಗಿನವನಂತೆ ಕಾಣುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಇಳಯರಾಜಾ ಅವರಿಗೂ ಎದುರಾಗಿದೆ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ, ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಮೆಗಾ ಪ್ರಾಜೆಕ್ಟ್ ‘ರಾಮಾಯಣ’ ಸಿನಿಮಾಗೆ ರೆಹಮಾನ್ ಸಂಗೀತ ನೀಡುತ್ತಿರುವುದು ವಿಶೇಷ. “ನಿಮ್ಮ ಹೆಸರು ಮುಸ್ಲಿಂ, ರಾಮಾಯಣಕ್ಕೆ ಮ್ಯೂಸಿಕ್ ಮಾಡಿದರೆ ವಿರೋಧ ಬರಲ್ವಾ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಹಮಾನ್, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ, ಮಹಾಭಾರತ ಕಥೆಗಳು ನನಗೆ ತುಂಬಾ ಚೆನ್ನಾಗಿ ಗೊತ್ತು. ಅವು ಮಾನವೀಯ ಮೌಲ್ಯಗಳಿಂದ ತುಂಬಿವೆ. ನಾನು ಎಲ್ಲ ಧರ್ಮಗಳ ಒಳ್ಳೇತನವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಸಕಲೇಶಪುರ | ಮಹಿಳೆಯನ್ನು ಬಲಿ ಪಡೆದಿದ್ದ ಪುಂಡಾನೆ ಕೊನೆಗೂ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಮಹಿಳೆ ಶೋಭ ಅವರನ್ನು ಬಲಿ ಪಡೆದಿದ್ದ ಪುಂಡ ಕಾಡಾನೆ ಕೊನೆಗೂ ಸೆರೆ ಸಿಕ್ಕಿದೆ. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಉಗ್ರ ಕಾರ್ಯಾಚರಣೆಯಲ್ಲಿ ಕಾಡಾನೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೂ ನಿತ್ರಾಣಗೊಳ್ಳದ ಕಾಡಾನೆ ಸುಮಾರು 12 ಕಿಲೋ ಮೀಟರ್ ದೂರ ಸುತ್ತಾಡಿ ಕೊನೆಗೆ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದ ಕಾಫಿ ತೋಟದಲ್ಲಿ ಕುಸಿದು ಬಿದ್ದಿದೆ.

ಕಾಡಾನೆಯನ್ನು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪುಂಡಾನೆ ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಎರಡು ವಾರಗಳ ಹಿಂದೆ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಪ್ರವೇಶಿಸಿದ್ದ ಈ ಕಾಡಾನೆ ಶೋಭ ಎಂಬ ಮಹಿಳೆಯನ್ನು ಕೊಂದು ಹಾಕಿತ್ತು. ಬಳಿಕ ಜನರ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 14ರಂದು ಅರಣ್ಯ ಸಚಿವರಿಂದ ಸೆರೆ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು.

ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರಗಳಿಂದ ಧನಂಜಯ, ಸುಗ್ರೀವ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಎಂಬ ಐದು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ಕರೆತರಲಾಗಿತ್ತು. ಜ.16ರಂದು ಬೆಳಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆಯನ್ನು ಹುಡುಕಾಟ ಆರಂಭಿಸಿದ್ರು. ಮಧ್ಯಾಹ್ನ ಡ್ರೋನ್ ಬಳಸಿ ಚಂದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಇರುವ ಸ್ಥಳ ಪತ್ತೆ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆ ಆರಂಭವಾಗಿದ್ದು, 3:45ಕ್ಕೆ ವೈದ್ಯ ರಮೇಶ್ ಮೊದಲ ಅರವಳಿಕೆ ಚುಚ್ಚುಮದ್ದು ನೀಡಿದರು. ನಂತರ ಕಾಡಾನೆ ಕಾಫಿ ತೋಟ, ರೈತರ ಜಮೀನುಗಳಲ್ಲಿ ಓಡಾಡಿತು. ನಿತ್ರಾಣಗೊಳ್ಳದ ಹಿನ್ನೆಲೆ ಮತ್ತೊಮ್ಮೆ ಚುಚ್ಚುಮದ್ದು ನೀಡಲಾಯಿತು. ಎರಡೂ ಡೋಸ್ ಬಳಿಕವೂ ಕಾಡಾನೆ ಎರಡು ಗಂಟೆಗಳ ಕಾಲ ಓಡಾಡಿ ಸಂಜೆ 6:45ರ ಸುಮಾರಿಗೆ ಕುಸಿದು ಬಿದ್ದಿತು.

ಬಿದ್ದ ಬಳಿಕ ಸಾಕಾನೆಗಳ ಸಹಾಯದಿಂದ ಆರೈಕೆ ನೀಡಿ ರಿವರ್ಸಲ್ ಇಂಜೆಕ್ಷನ್ ನೀಡಲಾಯಿತು. ಎಚ್ಚರಗೊಂಡ ನಂತರ ಕುಮ್ಕಿ ಆನೆಗಳು ಸುತ್ತುವರೆದು ನಿಯಂತ್ರಿಸಿ, ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸ್ಥಳಾಂತರ ಮಾಡಲಾಯಿತು. ಕತ್ತಲಾದರೂ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರಿಂದ ಜನಸಮೂಹ ನಿಯಂತ್ರಣ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು.

ನಾಳೆಯೇ BBK12 ಫಿನಾಲೆ: ಹಳೆಯ ವಿನ್ನರ್‌ಗಳ ಲಿಸ್ಟ್ ಇಲ್ಲಿದೆ ನೋಡಿ, ಈ ಬಾರಿ ಯಾರ ಕೈ ಸೇರಲಿದೆ ಟ್ರೋಫಿ?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ಟ್ರೋಫಿ ಯಾರ ಕೈ ಸೇರುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಪೀಕ್ ಮಟ್ಟ ತಲುಪಿದೆ. ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಕ್ಷಿತಾ, ರಘು ಮತ್ತು ಧನುಶ್ — ಈ ಆರು ಮಂದಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

ಫಿನಾಲೆ ಹತ್ತಿರ ಬರುತ್ತಿದ್ದಂತೆ, ಹಳೆಯ ಸೀಸನ್‌ಗಳ ವಿನ್ನರ್‌ಗಳ ಚರ್ಚೆ ಮತ್ತೆ ಟ್ರೆಂಡ್ ಆಗಿದೆ. 2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಮೊದಲ ಸೀಸನ್‌ನಲ್ಲಿ ವಿಜಯ್ ರಾಘವೇಂದ್ರ ವಿನ್ನರ್ ಆಗಿ ಇತಿಹಾಸ ಬರೆಯಿದ್ದರು. ಆ ಶೋ ಈಟಿವಿಯಲ್ಲಿ ಪ್ರಸಾರವಾಗಿ 98 ದಿನ ನಡೆದಿತ್ತು.

2014ರ ಸೀಸನ್ 2ರಲ್ಲಿ ಅಕುಲ್ ಬಾಲಾಜಿ ವಿನ್ನರ್ ಆಗಿ ಹೊರಹೊಮ್ಮಿದರು. 2015ರ ಸೀಸನ್ 3ರಲ್ಲಿ ಶ್ರುತಿ ವಿನ್ನರ್, ಚಂದನ್ ಕುಮಾರ್ ರನ್ನರ್ ಅಪ್ ಆಗಿದ್ದರು. ಸೀಸನ್ 4ರಲ್ಲಿ ಪ್ರಥಮ್ ವಿನ್ನರ್ ಆಗಿ ಭಾರಿ ಕ್ರೇಜ್ ಗಳಿಸಿಕೊಂಡರೆ, ಶೋ 112 ದಿನಗಳ ಕಾಲ ನಡೆದಿತ್ತು.

ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿನ್ನರ್, ಸೀಸನ್ 6ರಲ್ಲಿ ಶಶಿಕುಮಾರ್ ವಿನ್ನರ್, ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿ ದಾಖಲೆ ಬರೆದರು. ಸೀಸನ್ 7 ಅನ್ನು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯುತ್ತಮ ಸೀಸನ್ ಎಂದು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.

ಸೀಸನ್ 8ರಲ್ಲಿ ಮಂಜು ಪಾವಗಡ ಟ್ರೋಫಿ ಗೆದ್ದರು. ಕೋವಿಡ್ ಕಾರಣದಿಂದ ಶೋ ಮಧ್ಯದಲ್ಲೇ ನಿಂತು ಮತ್ತೆ ಮುಂದುವರೆದದ್ದು ಇದೇ ಮೊದಲ ಬಾರಿ. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ, ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್, ಸೀಸನ್ 11ರಲ್ಲಿ ಹನುಮಂತ — ಈ ಮೂವರು ತಲಾ ಸೀಸನ್‌ಗಳ ವಿನ್ನರ್ ಆಗಿದ್ದಾರೆ.

ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಒಟ್ಟು 112 ದಿನಗಳ ಪ್ರಯಾಣ ಮುಗಿಸುತ್ತಿದ್ದು, ಜನವರಿ 18ರಂದು ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ವಿನ್ನರ್ ಹೆಸರು ಇತಿಹಾಸದಲ್ಲಿ ಸೇರಲಿದೆ.

BBK12 ಫಿನಾಲೆಗೆ ಟ್ವಿಸ್ಟ್: ಸುದೀಪ್ ಇಲ್ಲ, ಫ್ಯಾನ್ಸ್ ಶಾಕ್ – ವಿನ್ನರ್ ಘೋಷಣೆ ಭಾನುವಾರ ಮಾತ್ರ!

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೂ ಮೊದಲುವೇ ಶಾಕ್ ಸಿಕ್ಕಿದೆ. ಜನವರಿ 17 ಹಾಗೂ 18ರಂದು ಎರಡು ದಿನ ನಡೆಯಬೇಕಿದ್ದ ಫಿನಾಲೆ, ಈಗ ಕೇವಲ ಭಾನುವಾರಕ್ಕೆ ಸೀಮಿತವಾಗಿದೆ. ಕಾರಣ – ನಿರೂಪಕ ಕಿಚ್ಚಾ ಸುದೀಪ್ ಇಂದು ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ ಶುರುವಾಗಿದೆ.

ಸುದೀಪ್ ಅವರು ಕೆಲ ಸಂದರ್ಭಗಳಲ್ಲಿ ಎಪಿಸೋಡ್ ಮಿಸ್ ಮಾಡಿಕೊಂಡಿದ್ದರು. ಆದರೆ, ಫಿನಾಲೆ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ಇದರೊಂದಿಗೆ ಎರಡು ದಿನಗಳ ಫಿನಾಲೆ ಸಂಪ್ರದಾಯಕ್ಕೂ ಈ ಬಾರಿ ಬ್ರೇಕ್ ಬಿದ್ದಿದೆ.

ಈ ಹಿಂದೆ ಸುದೀಪ್ ಗೈರುಗೊಳ್ಳಲು ಕಾರಣ ಸಿಸಿಎಲ್ ಬ್ಯುಸಿ ಶೆಡ್ಯೂಲ್. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ‘ಪಂಜಾಬ್ ದೆ ಶೇರ್’ ವಿರುದ್ಧ ಗೆಲುವು ದಾಖಲಿಸಿದೆ. ಪಂದ್ಯ ಮುಗಿಸಿ ರಾತ್ರಿ ಪ್ರಯಾಣ ಮಾಡಿ ಬೆಳಿಗ್ಗೆ ಶೂಟಿಂಗ್ ನಡೆಸುವುದು ಅಸಾಧ್ಯವಾಗಿದ್ದರಿಂದ, ಸುದೀಪ್ ಒಂದು ದಿನ ಬಿಡುವು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇಂದು ಫಿನಾಲೆ ಬದಲಾಗಿ ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ವಿಶೇಷ ಡ್ಯಾನ್ಸ್ ಪರ್ಫಾರ್ಮನ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ವೋಟಿಂಗ್ ಅವಕಾಶ ಇರಲಿದ್ದು, ಆ ಬಳಿಕ ಫಿನಾಲೆ ಎಪಿಸೋಡ್‌ನಲ್ಲಿ ಆರು ಫೈನಲಿಸ್ಟ್‌ಗಳ ಪೈಕಿ ನಾಲ್ವರು ಎಲಿಮಿನೇಟ್, ಒಬ್ಬ ವಿನ್ನರ್ ಹಾಗೂ ರನ್ನರ್‌ಅಪ್ ಘೋಷಣೆ ನಡೆಯಲಿದೆ. ಫಿನಾಲೆ ಎಪಿಸೋಡ್ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ, ವಿಶ್ವದರ್ಜೆಯ ಈಜುಕೊಳ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

0

ತುಮಕೂರು:- ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ ಹಾಗೂ ಈಜುಕೊಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟ 2025-2026ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಹಾಗೂ ವಿಶ್ವದರ್ಜೆಯ ಈಜುಕೊಳ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ಕ್ರೀಡಾಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಹಣ ಮೀಸಲಿಡಲಿದೆ. ತುಮಕೂರಿನ ಯುವಜನತೆ ಈ ಸೌಲಭ್ಯಗಳ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದರು.

ತುಮಕೂರು ಜಿಲ್ಲೆಯಿಂದ ಉತ್ತಮ ಕ್ರೀಡಾಪಟುಗಳು ಹೊರಬಂದು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ. ಕ್ರೀಡೆಯಿಂದ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದ ಸಿಎಂ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳ ರೂವಾರಿಯಾಗಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಬಡ್ಡಿ ಪಟುವಾಗಿದ್ದೆ; ಫುಟ್‌ಬಾಲ್ ಹಾಗೂ ಕ್ರಿಕೆಟ್ ಮೇಲೂ ಆಸಕ್ತಿ ಇತ್ತು. ಇಂದಿಗೂ ಏಕದಿನ, ಟಿ–20 ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತೇನೆ ಎಂದು ಹೇಳಿದರು.

ಕ್ರೀಡೆಯಲ್ಲಿ ಸೋಲು–ಗೆಲುವಿಗಿಂತ ಕ್ರೀಡಾಸ್ಪೂರ್ತಿ ಮುಖ್ಯ ಎಂದು ಒತ್ತಿ ಹೇಳಿದ ಅವರು, ಗುರಿ ಸಾಧಿಸಲು ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯವೆಂದರು. ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ಪೇದೆ ಹುದ್ದೆಯಿಂದ ಆರಕ್ಷಕ ಉಪಾಧೀಕ್ಷಕರ ಹುದ್ದೆಯವರೆಗೆ ಶೇ.3 ಮೀಸಲಾತಿ ನೀಡಲಾಗುತ್ತಿದೆ. ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾದ ಅಥವಾ ಭಾಗವಹಿಸಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳಲ್ಲಿಯೂ ಶೇ.2 ಮೀಸಲಾತಿ ಇದೆ. ಜೊತೆಗೆ ಒಲಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಕ್ರೀಡಾಪಟುಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

error: Content is protected !!