ಇಂದಿನ ನಮ್ಮ ಬದುಕನ್ನು ಒಮ್ಮೆ ಶಾಂತವಾಗಿ ಗಮನಿಸಿದರೆ, ಚಹಾ ಇಲ್ಲದೆ ಒಂದು ದಿನವೂ ಪೂರ್ಣವಾಗುವುದಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಬೆಳಿಗ್ಗೆ ಕಣ್ಣು ತೆರೆದ ಕೂಡಲೇ ಮೊದಲು ಚಹಾ ಬೇಕು ಎನ್ನುವ ಮಾತು ಮನೆಮನೆಗಳಲ್ಲಿ ಕೇಳಿಬರುತ್ತದೆ. ಕೆಲಸಕ್ಕೆ ಹೊರಡುವ ಮೊದಲು ಒಂದು ಕಪ್ ಚಹಾ, ಮಧ್ಯಾಹ್ನ ಕೆಲಸದ ಒತ್ತಡದಲ್ಲಿ ಮತ್ತೊಂದು ಚಹಾ, ಸಂಜೆ ದಣಿವು ತೀರಿಸಿಕೊಳ್ಳಲು ಮತ್ತೆ ಚಹಾ, ಸ್ನೇಹಿತರು ಬಂದಾಗ ಚಹಾ, ಅತಿಥಿಗಳು ಬಂದಾಗ ಚಹಾ… ಹೀಗೆ ದಿನವಿಡೀ ಚಹಾ ನಮ್ಮ ಬದುಕಿನ ಜೊತೆಗೆ ನಡೆದುಕೊಳ್ಳುತ್ತದೆ. ಬಸ್ ನಿಲ್ದಾಣ, ಆಸ್ಪತ್ರೆ, ಕಚೇರಿ, ಶಾಲೆಯ ಬಳಿ, ಹಳ್ಳಿಯ ಬೀದಿ ಮೂಲೆಗೂ ಒಂದು ಚಹಾ ಅಂಗಡಿ ಇರಲೇಬೇಕು ಎಂಬ ಭಾವನೆ ನಮಗೆ ಸಹಜವಾಗಿದೆ. ಚಹಾ ಇಲ್ಲದ ಜಾಗವೊಂದನ್ನು ಊಹಿಸುವುದೇ ಕಷ್ಟವಾಗಿರುವ ಈ ಕಾಲದಲ್ಲಿ, ಒಂದು ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ, ಸಾರ್ವಜನಿಕವಾಗಿ ಚಹಾ ಮಾರಾಟವೂ ಇಲ್ಲ ಎಂದರೆ ಅದು ನಂಬಲಾರದ ಕಥೆಯಂತೆ ತೋರುತ್ತದೆ. ಆದರೆ ಇಂತಹ ಅಸಾಧ್ಯವೆನಿಸುವ ವಾಸ್ತವವೇ ಸವದತ್ತಿ ತಾಲೂಕಿನ ಹಿರೇ ಉಳ್ಳಿಗೇರಿ ಗ್ರಾಮದಲ್ಲಿ ನೋಡಬಹುದು.
ಸವದತ್ತಿ ಪಟ್ಟಣದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಹಿರೇ ಉಳ್ಳಿಗೇರಿ, ಧಾರವಾಡ ಸವದತ್ತಿ ಮುಖ್ಯ ರಸ್ತೆಗೆ ಹತ್ತಿಕೊಂಡೇ ಇರುವ ಗ್ರಾಮ. ರಸ್ತೆ ಸಂಪರ್ಕ ಉತ್ತಮವಾಗಿದೆ, ವಾಹನ ಸಂಚಾರ ನಿರಂತರವಾಗಿದೆ. ಸುತ್ತಮುತ್ತಲ ಹಳ್ಳಿಗಳು, ಪಟ್ಟಣಗಳ ಸಂಪರ್ಕವೂ ಇದೆ. ಇಷ್ಟೆಲ್ಲಾ ಅನುಕೂಲಗಳಿದ್ದರೂ, ಈ ಗ್ರಾಮದಲ್ಲಿ ಮಾತ್ರ ಒಂದೂ ಹೋಟೆಲ್ ಇಲ್ಲ. ಅದರೊಂದಿಗೆ, ಹೋಟೆಲ್ ಇಲ್ಲದ ಕಾರಣ ಮಾತ್ರವಲ್ಲ, ಸಾಮಾಜಿಕ ನಿರ್ಧಾರವಾಗಿ ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲಿಯೂ ಚಹಾ ಮಾರಾಟ ನಡೆಯುವುದಿಲ್ಲ.
ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಹಿರೇ ಉಳ್ಳಿಗೇರಿ ಜನರು ಮನೆಗಳಲ್ಲಿ ಚಹಾ ಕುಡಿಯುತ್ತಾರೆ. ಅದು ನಿಷೇಧಿತವಲ್ಲ, ಅಪರಾಧವೂ ಅಲ್ಲ. ಆದರೆ ಗ್ರಾಮ ಮಟ್ಟದಲ್ಲಿ ಅಂದರೆ ಸಾರ್ವಜನಿಕವಾಗಿ ಚಹಾ ಅಂಗಡಿ ಅಥವಾ ಹೋಟೆಲ್ ತೆರೆಯುವುದು ಇಲ್ಲಿನ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಅಂತರವೇ ಹಿರೇ ಉಳ್ಳಿಗೇರಿಯನ್ನು ವಿಭಿನ್ನವಾಗಿಸುತ್ತದೆ.
ಗ್ರಾಮದಲ್ಲಿ ಸುಮಾರು 350ರಿಂದ 400 ಮನೆಗಳು ಇವೆ. ಜನಸಂಖ್ಯೆ ಸುಮಾರು 3 ಸಾವಿರಕ್ಕೂ ಹೆಚ್ಚು. ಇಷ್ಟು ದೊಡ್ಡ ಗ್ರಾಮದಲ್ಲಿ ಸಾಮಾನ್ಯವಾಗಿ ಎರಡು ಮೂರು ಹೋಟೆಲ್‌ಗಳು, ಚಹಾ ಅಂಗಡಿಗಳು, ಉಪಹಾರ ಕೇಂದ್ರಗಳು ಇರುವುದು ಸಹಜ. ಆದರೆ ಹಿರೇ ಉಳ್ಳಿಗೇರಿಯಲ್ಲಿ ಕಿರಾಣಿ ಅಂಗಡಿಗಳಿವೆ, ಡಬ್ಬಿ ಅಂಗಡಿಗಳಿವೆ, ದಿನಸಿ ವಸ್ತುಗಳ ವ್ಯಾಪಾರ ನಡೆಯುತ್ತದೆ, ಆದರೆ ಚಹಾ ಮಾರುವುದಿಲ್ಲ.
ಗ್ರಾಮದ ಹಿರಿಯರನ್ನು ಕೇಳಿದರೆ, ಈ ಸಂಪ್ರದಾಯದ ಬೇರುಗಳು ತುಂಬಾ ಆಳದಲ್ಲಿವೆ ಎಂಬುದು ತಿಳಿಯುತ್ತದೆ. ನಮಗೆ ಬುದ್ಧಿ ಬಂದಾಗಿನಿಂದಲೂ ಈ ಗ್ರಾಮದಲ್ಲಿ ಹೋಟೆಲ್‌ಗಳೇ ಇಲ್ಲ. ನಮ್ಮ ಅಜ್ಜಂದಿರ ಕಾಲದಲ್ಲೂ ಹೀಗೆಯೇ ಇತ್ತು. ಆಗಲೂ ಯಾರೂ ಇಲ್ಲಿ ಚಹಾ ಮಾರಾಟ ಮಾಡಿರಲಿಲ್ಲ ಎಂದು ಅವರು ಹೇಳುತ್ತಾರೆ. ಇದು ಯಾವುದೇ ಲಿಖಿತ ನಿಯಮವಲ್ಲ, ಪಂಚಾಯತ್ ನಿರ್ಣಯವೂ ಅಲ್ಲ. ಇದು ಪೀಳಿಗೆಯಿಂದ ಪೀಳಿಗೆ ಸಾಗಿಬಂದ ಒಂದು ಸಾಂಪ್ರದಾಯವೇ ಎನ್ನಬಹುದು.
ಒಮ್ಮೆ ಯಾರಾದರೂ ಹೊಸದಾಗಿ ಹೋಟೆಲ್ ತೆರೆಯಬೇಕು ಎಂದು ಯೋಚಿಸಿದರೂ, ಅದು ಯಶಸ್ವಿಯಾಗುವುದಿಲ್ಲ ಎಂಬ ನಂಬಿಕೆ ಇಲ್ಲಿದೆ. ಕಾರಣ, ಗ್ರಾಮಸ್ಥರು ಅಲ್ಲಿ ಹೋಗಿ ಚಹಾ ಕುಡಿಯುವುದೇ ಇಲ್ಲ. ವ್ಯಾಪಾರ ನಡೆಯದ ಜಾಗದಲ್ಲಿ ಹೋಟೆಲ್ ಉಳಿಯುವುದು ಸಾಧ್ಯವಿಲ್ಲ. ಹೀಗಾಗಿ ಈ ಗ್ರಾಮದಲ್ಲಿ ಹೋಟೆಲ್‌ಗಳ ಸ್ಥಾಪನೆಯ ಪ್ರಯತ್ನಗಳೇ ನಡೆದಿಲ್ಲ ಎಂಬ ಮಾತು ಕೇಳಿಬರುತ್ತದೆ.
ಇಂದಿನ ಯುವಜನತೆ ಈ ಸಂಪ್ರದಾಯವನ್ನು ಹೇಗೆ ನೋಡುತ್ತದೆ ಎಂಬುದು ಕೂಡ ಗಮನಾರ್ಹ. ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನ ಎಲ್ಲ ಪದ್ಧತಿಗಳ ಪರಿಚಯ ಇದ್ದರೂ, ಹಿರೇ ಉಳ್ಳಿಗೇರಿಯ ಯುವಕರು ಕೂಡ ಈ ಗ್ರಾಮಪದ್ಧತಿಯನ್ನು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಹೊರಗಿನ ಊರುಗಳಿಗೆ ಹೋದಾಗ ಚಹಾ ಕುಡಿಯಬಹುದು, ಆದರೆ ತಮ್ಮ ಗ್ರಾಮದಲ್ಲಿ ಸಾರ್ವಜನಿಕವಾಗಿ ಚಹಾ ವ್ಯಾಪಾರ ನಡೆಯಬಾರದು ಎಂಬ ಅಲಿಖಿತ ನಿಯಮವನ್ನು ಅವರು ಪಾಲಿಸುತ್ತಾರೆ.
ಇದರ ಪರಿಣಾಮವಾಗಿ ಗ್ರಾಮದಲ್ಲಿ ಜೀವನಶೈಲಿ ಸ್ವಲ್ಪ ವಿಭಿನ್ನವಾಗಿದೆ. ಬೆಳಿಗ್ಗೆ ಹೊಲಕ್ಕೆ ಹೋಗುವ ಮುನ್ನ ಹಾಲು, ಮಜ್ಜಿಗೆ ಅಥವಾ ನೀರು ಕುಡಿಯುವುದು ಸಾಮಾನ್ಯ. ಸಂಜೆ ವೇಳೆ ಮನೆಗಳಲ್ಲಿ ಚಹಾ ಮಾಡಿಕೊಳ್ಳುತ್ತಾರೆ, ಆದರೆ ಚಹಾ ಕುಡಿಯಲು ಹೊರಗೆ ಹೋಗುವುದು ಎಂಬ ಕಲ್ಪನೆ ಇಲ್ಲ. ಅತಿಥಿಗಳು ಬಂದರೂ, ಮನೆಯೊಳಗೇ ಆತಿಥ್ಯ ನೀಡಲಾಗುತ್ತದೆ. ಹೀಗಾಗಿ ಹೋಟೆಲ್‌ಗಳ ಅವಶ್ಯಕತೆಯೇ ಉಂಟಾಗಿಲ್ಲ.
ಅಬ್ಬಾ, ಇಂತಹ ಗ್ರಾಮವೂ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ ಹಿರೇ ಉಳ್ಳಿಗೇರಿ ನಮಗೆ ಒಂದು ಮಹತ್ವದ ಪಾಠ ಕಲಿಸುತ್ತದೆ. ನಾವು ಅನಿವಾರ್ಯ ಎಂದು ಭಾವಿಸುವ ಅನೇಕ ಅಭ್ಯಾಸಗಳು ವಾಸ್ತವದಲ್ಲಿ ಆಯ್ಕೆಯ ವಿಷಯವಾಗಿವೆ. ಚಹಾ ಇಲ್ಲದೆ ಸಾರ್ವಜನಿಕ ಬದುಕು ಸಾಗಲಾರದು ಎಂಬ ನಮ್ಮ ಕಲ್ಪನೆಯನ್ನು ಈ ಗ್ರಾಮ ಮೌನವಾಗಿ ಪ್ರಶ್ನಿಸುತ್ತದೆ.
ಇಂದು ಜಗತ್ತು ಒಂದೇ ರೀತಿಯ ಸಂಸ್ಕೃತಿಯತ್ತ ಸಾಗುತ್ತಿರುವಾಗ, ಹಿರೇ ಉಳ್ಳಿಗೇರಿಯಂತಹ ಗ್ರಾಮಗಳು ನಮ್ಮ ವೈವಿಧ್ಯತೆಯನ್ನು ನೆನಪಿಸುತ್ತವೆ. ಇದು ಹಿಂದುಳಿದತನದ ಸಂಕೇತವಲ್ಲ; ಬದಲಾಗಿ ತಮ್ಮದೇ ಆದ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕುವ ಆತ್ಮವಿಶ್ವಾಸದ ಉದಾಹರಣೆ. ಹಿರೇ ಉಳ್ಳಿಗೇರಿ ಕೇವಲ ಚಹಾ ಇಲ್ಲದ ಗ್ರಾಮ ಅಲ್ಲ. ಅದು ಹೋಟೆಲ್ ಸಂಸ್ಕೃತಿಗೆ ಹೊರತಾಗಿ ಬದುಕುವ ಒಂದು ಸಮಾಜ, ಮತ್ತು ನಮ್ಮ ದಿನನಿತ್ಯದ ಅಭ್ಯಾಸಗಳ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸುವ ಒಂದು ಅಪರೂಪದ ಗ್ರಾಮೀಣ ಕಥೆ.

-
ಮನೋಜ ಮಸನಿ
ಪ್ರಶಿಕ್ಷಣಾರ್ಥಿ,
ವಾರ್ತಾ ಇಲಾಖೆ ಧಾರವಾಡ.

