Home Blog Page 4

‘ಐಸಿಯು, ಸರ್ಜರಿ, ಚಾಂಪಿಯನ್ ಕೂಡ ಸೋಲುತ್ತಾನೆ’… ಅಮಿತಾಭ್ ಬಚ್ಚನ್ ನಿಗೂಢ ಪೋಸ್ಟ್‌ಗೆ ಅಭಿಮಾನಿಗಳಲ್ಲಿ ಆತಂಕ

ಮುಂಬೈ: ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಹಂಚಿಕೊಂಡಿರುವ ನಿಗೂಢ ಬ್ಲಾಗ್ ಮತ್ತು ಎಕ್ಸ್ ಪೋಸ್ಟ್‌ಗಳು ಅವರ ಆರೋಗ್ಯದ ಬಗ್ಗೆ ಹೊಸ ಅನುಮಾನಗಳಿಗೆ ಕಾರಣವಾಗಿವೆ. ಶಸ್ತ್ರಚಿಕಿತ್ಸೆ, ಐಸಿಯು ಹಾಗೂ ಚೇತರಿಕೆಯ ಕಠಿಣ ಹಂತಗಳ ಬಗ್ಗೆ ಬರೆದಿರುವ ಬರಹಗಳು ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಬ್ಲಾಗ್‌ನಲ್ಲಿ ಆಸ್ಪತ್ರೆಯಲ್ಲಿನ ಅನುಭವವನ್ನು ವಿವರಿಸಿರುವ ಅಮಿತಾಭ್, ಶಸ್ತ್ರಚಿಕಿತ್ಸೆಯ ಬಳಿಕ ಮನೆಗೆ ಮರಳುವ ಅವಧಿಯು ದೈಹಿಕ ಮತ್ತು ಮಾನಸಿಕವಾಗಿ ಅತ್ಯಂತ ಸವಾಲಿನದ್ದು ಎಂದು ಹೇಳಿದ್ದಾರೆ. ಆದರೆ ಈ ಅನುಭವ ತಮ್ಮದೇ ಆರೋಗ್ಯದ ಕುರಿತದ್ದೇ ಎಂಬುದನ್ನು ಅವರು ಎಲ್ಲಿಯೂ ಸ್ಪಷ್ಟಪಡಿಸಿಲ್ಲ.”ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕದ ದಿನಗಳು ಜೀವನದ ಅತ್ಯಂತ ಕಷ್ಟದ ಹಂತ. ಚಾಂಪಿಯನ್‌ಗಳೂ ಕೆಲವೊಮ್ಮೆ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಧೈರ್ಯದಿಂದ ಹೋರಾಡುವವರೇ ಕೊನೆಗೂ ಗೆಲ್ಲುತ್ತಾರೆ” ಎಂದು ಅವರು ಬರೆದಿದ್ದಾರೆ.

ಇದರ ಬೆನ್ನಲ್ಲೇ ಎಕ್ಸ್‌ನಲ್ಲಿ “The game is over… but the work goes on” (ಆಟ ಮುಗಿದಿದೆ, ಆದರೆ ಕೆಲಸ ಇನ್ನೂ ಮುಂದುವರಿಯುತ್ತಿದೆ) ಎಂದು ಪೋಸ್ಟ್ ಮಾಡಿರುವುದು ಮತ್ತಷ್ಟು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಕೂಡ ಅಮಿತಾಭ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಗಳು ಹರಡಿದ್ದರೂ, ಅದು ಸಾಮಾನ್ಯ ಆರೋಗ್ಯ ತಪಾಸಣೆ ಮಾತ್ರ ಎಂದು ಬಳಿಕ ಸ್ಪಷ್ಟವಾಗಿತ್ತು. ಸದ್ಯ ಅವರು ‘ಕೌನ್ ಬನೇಗಾ ಕರೋಡ್‌ಪತಿ’ ಹೊಸ ಸೀಸನ್ ಹಾಗೂ ‘ಕಲ್ಕಿ 2898 ಎಡಿ’ ಸೀಕ್ವೆಲ್‌ಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರಬಂದಿಲ್ಲ.

ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಲುಕಿದ ವಾರ್ನರ್: ತಪ್ಪೊಪ್ಪಿಕೊಂಡ ಮಾಜಿ ಆಸೀಸ್ ಆಟಗಾರನಿಗೆ 9 ತಿಂಗಳ ಜೈಲು ಶಿಕ್ಷೆ!?

0

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ (ಡ್ರಿಂಕ್ ಅಂಡ್ ಡ್ರೈವ್) ಪ್ರಕರಣದಲ್ಲಿ ಬಂಧನಕ್ಕೊಳಗಾದ ವಾರ್ನರ್, ಸಿಡ್ನಿ ನ್ಯಾಯಾಲಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಅವರಿಗೆ ಆಸ್ಟ್ರೇಲಿಯಾ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯ ವಿರಾಮದ ವೇಳೆ ತವರಿಗೆ ಮರಳಿದ್ದ ವಾರ್ನರ್, ಸಿಡ್ನಿಯ ಮರೂಬ್ರಾ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆದ ಬಳಿಕ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.

ಪರೀಕ್ಷೆಯಲ್ಲಿ ವಾರ್ನರ್ ಅವರ ರಕ್ತದಲ್ಲಿ 0.104 ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದ್ದು, ಇದು ಆಸ್ಟ್ರೇಲಿಯಾದಲ್ಲಿ ಅನುಮತಿಸಲಾದ 0.05 ಮಿತಿಗಿಂತ ಹೆಚ್ಚಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ವೇಳೆ ವಾರ್ನರ್ ಪರ ವಕೀಲ ಬೊಬ್ಬಿ ಹಿಲ್ ನ್ಯಾಯಾಲಯಕ್ಕೆ ಹಾಜರಾಗಿ, ತಮ್ಮ ಕಕ್ಷಿದಾರರ ಪರವಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸ್ನೇಹಿತರ ಮನೆಯಲ್ಲಿ ವೈನ್ ಸೇವಿಸಿದ ಬಳಿಕ ಟ್ಯಾಕ್ಸಿ ಮೂಲಕ ಮನೆಗೆ ತೆರಳುವ ಬದಲು ಸ್ವತಃ ಕಾರು ಚಲಾಯಿಸಿದ್ದು ದೊಡ್ಡ ತಪ್ಪಾಗಿದೆ ಎಂಬ ಅರಿವು ವಾರ್ನರ್ ಅವರಿಗೆ ಉಂಟಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದ ಶಿಕ್ಷೆಯನ್ನು ಆಗಸ್ಟ್ 18ರಂದು ಸಿಡ್ನಿ ನ್ಯಾಯಾಲಯ ಪ್ರಕಟಿಸಲಿದೆ. ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ, ಪ್ರಕರಣದ ಗಂಭೀರತೆಯನ್ನು ಆಧರಿಸಿ ಜೈಲು ಶಿಕ್ಷೆ, ಚಾಲನಾ ಪರವಾನಗಿ ಅಮಾನತು ಹಾಗೂ ದಂಡ ಸೇರಿದಂತೆ ವಿವಿಧ ಶಿಕ್ಷೆಗಳನ್ನು ವಿಧಿಸುವ ಅವಕಾಶವಿದೆ.

ಕೆಲವು ವರದಿಗಳ ಪ್ರಕಾರ, ಅವರಿಗೆ ಕನಿಷ್ಠ 9 ತಿಂಗಳ ಜೈಲು ಶಿಕ್ಷೆ, 6 ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಹಾಗೂ ಸುಮಾರು ₹1.20 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ ಅಂತಿಮ ತೀರ್ಪು ನ್ಯಾಯಾಲಯದ ನಿರ್ಧಾರವನ್ನು ಅವಲಂಬಿಸಿರುತ್ತದೆ.

ಡೇವಿಡ್ ವಾರ್ನರ್ ಈಗಾಗಲೇ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಅಮಾನತು ಮತ್ತು ನಿಷೇಧ ಸೇರಿದಂತೆ ಹಲವು ಶಿಕ್ಷೆಗಳನ್ನು ಎದುರಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರೂ, ಹೆಚ್ಚು ಕಾಲ ಮುಂದುವರಿಯದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪ್ರಸ್ತುತ ಅವರು ವಿವಿಧ ಫ್ರಾಂಚೈಸಿ ಹಾಗೂ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ.

ಈ ಹೊಸ ಪ್ರಕರಣವು ವಾರ್ನರ್ ಅವರ ಲೀಗ್ ಕ್ರಿಕೆಟ್ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂಬರುವ ಬಿಗ್ ಬ್ಯಾಷ್ ಲೀಗ್ (BBL) ಟೂರ್ನಿಯಲ್ಲಿ ಸಿಡ್ನಿ ಥಂಡರ್ ತಂಡದೊಂದಿಗೆ ಅವರ ಭವಿಷ್ಯದ ಕುರಿತು ಪ್ರಶ್ನೆಗಳು ಮೂಡಿದ್ದು, ನಾಯಕತ್ವ ಸೇರಿದಂತೆ ತಂಡದಲ್ಲಿನ ಸ್ಥಾನಕ್ಕೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.

ಅಸ್ಸಾಂನಲ್ಲಿ ಮಹಾಪ್ರವಾಹದ ರೌದ್ರನರ್ತನ: ಒಂದೇ ದಿನ 21 ಸಾವು, 5.64 ಲಕ್ಷ ಜನ ತತ್ತರ!

0

ಗುವಾಹಟಿ: ಅಸ್ಸಾಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮೀರಿ ಸಾಗಿದ್ದು, ಒಂದೇ ದಿನ 21 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರ್ಷದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ರಾಜ್ಯದ 16 ಜಿಲ್ಲೆಗಳ 5.64 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಶಿವಸಾಗರ್ ಜಿಲ್ಲೆಯಲ್ಲಿ ಅತಿ ಹೆಚ್ಚು 13 ಮಂದಿ ಮೃತಪಟ್ಟಿದ್ದಾರೆ. ಚರೈದಿಯೋದಲ್ಲಿ ಐವರು, ಗೋಲಾಘಾಟ್‌ನಲ್ಲಿ ಇಬ್ಬರು ಹಾಗೂ ಜೋರ್ಹಾಟ್‌ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಶಿವಸಾಗರ್‌ನಲ್ಲಿ 3.59 ಲಕ್ಷಕ್ಕೂ ಹೆಚ್ಚು, ಜೋರ್ಹಾಟ್‌ನಲ್ಲಿ 87 ಸಾವಿರಕ್ಕೂ ಹೆಚ್ಚು ಹಾಗೂ ಚರೈದಿಯೋದಲ್ಲಿ 72 ಸಾವಿರಕ್ಕೂ ಅಧಿಕ ಮಂದಿ ಪ್ರವಾಹದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರವಾಹ ಪೀಡಿತ ಚರೈದಿಯೋ, ನಜಿರಾ, ಶಿವಸಾಗರ್, ಸೋನಾರಿ, ಜೋರ್ಹಾಟ್ ಹಾಗೂ ತಿಯೋಕ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ 44 ಆದಾಯ ವಲಯಗಳ ವ್ಯಾಪ್ತಿಯ 872 ಗ್ರಾಮಗಳು ಜಲಾವೃತವಾಗಿದ್ದು, 71 ಪರಿಹಾರ ಶಿಬಿರಗಳಲ್ಲಿ 12,284 ಮಂದಿ ಆಶ್ರಯ ಪಡೆದಿದ್ದಾರೆ. 202 ಪರಿಹಾರ ವಿತರಣಾ ಕೇಂದ್ರಗಳ ಮೂಲಕ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.

ಶಿವಸಾಗರ್ ಜಿಲ್ಲೆಯ ದಿಖೌ ಮತ್ತು ದಿಸಾಂಗ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬ್ರಹ್ಮಪುತ್ರ ಸೇರಿದಂತೆ ಹಲವು ಪ್ರಮುಖ ನದಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಭಾರತೀಯ ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಪ್ರವಾಹದ ಪರಿಣಾಮ ಸಿಮಾಲುಗುರಿ ಪ್ರದೇಶದಲ್ಲಿ ರೈಲು ಹಳಿಗಳು ಜಲಾವೃತವಾಗಿದ್ದು, ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗದಂತೆ ಶಿವಸಾಗರ್, ಚರೈದಿಯೋ ಹಾಗೂ ಜೋರ್ಹಾಟ್ ಜಿಲ್ಲೆಗಳಲ್ಲಿ ಜುಲೈ 24ರವರೆಗೆ ಇಂಟ್ರಾ-ಸರ್ಕಲ್ ರೋಮಿಂಗ್ ವ್ಯವಸ್ಥೆಯನ್ನು ಕೇಂದ್ರ ದೂರಸಂಪರ್ಕ ಇಲಾಖೆ ಜಾರಿಗೆ ತಂದಿದೆ.

ದೆಹಲಿ ಭದ್ರತೆ ಹೆಚ್ಚಳ: ರಾಜೀವ್ ಚೌಕ್ ಸೇರಿ 16 ಮೆಟ್ರೋ ನಿಲ್ದಾಣಗಳು ತಾತ್ಕಾಲಿಕ ಬಂದ್!

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಅಧಿಕಾರಿಗಳು, ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಮಂಡಿ ಹೌಸ್ ಸೇರಿದಂತೆ 16 ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನವನ್ನು ಬುಧವಾರ ಬೆಳಗ್ಗೆಯಿಂದ ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.

ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಸಂಬಂಧಿತ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮುಚ್ಚಿರಲಿವೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ತಿಳಿಸಿದೆ.

ತಾತ್ಕಾಲಿಕವಾಗಿ ಮುಚ್ಚಲಾದ ಮೆಟ್ರೋ ನಿಲ್ದಾಣಗಳು

  • ಲೋಕ ಕಲ್ಯಾಣ ಮಾರ್ಗ
  • ರಾಜೀವ್ ಚೌಕ್
  • ಪಟೇಲ್ ಚೌಕ್
  • ರಾಮಕೃಷ್ಣ ಆಶ್ರಮ ಮಾರ್ಗ
  • ಬಾರಾಖಂಬಾ ರೋಡ್
  • ಸುಪ್ರೀಂ ಕೋರ್ಟ್
  • ಸೇವಾ ತೀರ್ಥ
  • ಜನಪಥ್
  • ಮಂಡಿ ಹೌಸ್
  • ಸೆಂಟ್ರಲ್ ಸೆಕ್ರೆಟರಿಯೇಟ್
  • ಐಟಿಒ
  • ದೆಹಲಿ ಗೇಟ್
  • ಇಂದ್ರಪ್ರಸ್ಥ
  • ಖಾನ್ ಮಾರ್ಕೆಟ್
  • ಜೋರ್ ಬಾಗ್
  • ಶಿವಾಜಿ ಸ್ಟೇಡಿಯಂ

ಆದಾಗ್ಯೂ, ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣಗಳಲ್ಲಿ ವಿವಿಧ ಮಾರ್ಗಗಳ ನಡುವೆ ರೈಲು ಬದಲಾಯಿಸುವ (Interchange) ಸೌಲಭ್ಯ ಎಂದಿನಂತೆ ಮುಂದುವರಿಯಲಿದೆ ಎಂದು ಡಿಎಂಆರ್‌ಸಿ ಸ್ಪಷ್ಟಪಡಿಸಿದೆ.

ಈ ಹಿಂದೆ ಜುಲೈ 20ರಂದು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಸಿಜೆಪಿ ಹಮ್ಮಿಕೊಂಡಿದ್ದ ‘ಸಂಸದ್ ಚಲೋ’ ಮೆರವಣಿಗೆಯ ಸಂದರ್ಭದಲ್ಲಿಯೂ ಸಾವಿರಾರು ಪ್ರತಿಭಟನಾಕಾರರು ದೆಹಲಿಯಲ್ಲಿ ಸೇರಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ಬಾರಿ ಕೂಡ ಭದ್ರತಾ ದೃಷ್ಟಿಯಿಂದ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.

ನೀಟ್ ಪರೀಕ್ಷೆ ಸಂಪೂರ್ಣ ರದ್ದುಪಡಿಸಬೇಕು; ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಆಗ್ರಹ

0

ಚೆನ್ನೈ: ದೇಶಾದ್ಯಂತ ನೀಟ್ ಪರೀಕ್ಷೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ವಿವಾದ ತೀವ್ರಗೊಂಡಿರುವ ನಡುವೆಯೇ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ, ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಟಿವಿಕೆ ಪಕ್ಷ ತನ್ನ ಅಧಿಕೃತ ನಿಲುವು ಪ್ರಕಟಿಸಿದೆ. ವೈದ್ಯಕೀಯ ಪ್ರವೇಶಕ್ಕೆ ಸಂಬಂಧಿಸಿದ ಪ್ರಸ್ತುತ ನೀಟ್ ವ್ಯವಸ್ಥೆಯನ್ನು ಕೈಬಿಟ್ಟು, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪಕ್ಷ ಒತ್ತಾಯಿಸಿದೆ.

ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಬೇಕು ಎಂದು ಟಿವಿಕೆ ತಿಳಿಸಿದೆ. ಜೊತೆಗೆ, ಶಿಕ್ಷಣವನ್ನು ಕೇಂದ್ರದ ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.

ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಮಧ್ಯಂತರ ಕ್ರಮವಾಗಿ ವಿಶೇಷ ವ್ಯವಸ್ಥೆ ರೂಪಿಸಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಪಕ್ಷ ಸಲಹೆ ನೀಡಿದೆ.

ಹೇಳಿಕೆಯಲ್ಲಿ ಯಾವುದೇ ಪಕ್ಷದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, “ನೀಟ್ ರದ್ದು ಮಾಡುತ್ತೇವೆ ಎಂದು ಹೇಳಿ ಜನರ ಮತ ಪಡೆಯುವ ರಾಜಕೀಯವನ್ನು ನಾವು ಮಾಡುವುದಿಲ್ಲ” ಎಂದು ಟಿವಿಕೆ ಪರೋಕ್ಷವಾಗಿ ಟೀಕಿಸಿದೆ.

ಇದೇ ವೇಳೆ ದೆಹಲಿಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದ್ದು, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸ್ ಬಲಪ್ರಯೋಗ: ವಿಡಿಯೋ ನೋಡಲು ಸಮಯವಿಲ್ಲ ಎಂದ ಸುಪ್ರೀಂ ಕೋರ್ಟ್

0

ನವದೆಹಲಿ: ವಿದ್ಯಾರ್ಥಿಗಳ ‘ಸಂಸದ್ ಚಲೋ’ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಾಗೂ ಬಲಪ್ರಯೋಗ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (ಸುವೋ ಮೋಟು) ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಪ್ರಕರಣದ ತುರ್ತು ವಿಚಾರಣೆಗೆ ಅವಕಾಶ ನೀಡಲು ನಿರಾಕರಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ಕ್ರಮವನ್ನು ಸಾಬೀತುಪಡಿಸಲು ವಿಡಿಯೋ ಸಾಕ್ಷ್ಯಗಳನ್ನು ಸಲ್ಲಿಸಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ನಮ್ಮ ಸಮಯವನ್ನೂ ವ್ಯರ್ಥ ಮಾಡಬೇಡಿ, ನಿಮ್ಮ ಸಮಯವನ್ನೂ ಹಾಳು ಮಾಡಿಕೊಳ್ಳಬೇಡಿ” ಎಂದು ಹೇಳಿದರು.

ಪ್ರತಿಭಟನೆಯ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ವಕೀಲರು ಮನವಿ ಮಾಡಿದಾಗ, “ವಿಡಿಯೋಗಳನ್ನು ನೋಡುವ ಆಸಕ್ತಿ ನಮಗಿಲ್ಲ. ಅದನ್ನು ನೋಡಲು ನಮ್ಮ ಬಳಿ ಸಮಯವೂ ಇಲ್ಲ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿತು.

ಇದಕ್ಕೂ ಮೊದಲು ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೂಡ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿದ್ದ ಪೀಠ, “ಇಂತಹ ವಿಷಯಗಳಿಗೆ ನ್ಯಾಯಾಲಯವನ್ನು ಎಳೆಯಬೇಡಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ನೀಟ್ ಪರೀಕ್ಷೆಯಲ್ಲಿನ ಅಕ್ರಮವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜುಲೈ 20ರಂದು ‘ಸಂಸದ್ ಚಲೋ’ ಮೆರವಣಿಗೆಗೆ ಕರೆ ನೀಡಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪೊಲೀಸ್ ಬಲಪ್ರಯೋಗವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ನೀಟ್ ಪ್ರತಿಭಟನೆಗೆ ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿ ಕಾಂಗ್ರೆಸ್ ಬಳಸುತ್ತಿದೆ: ರಾಹುಲ್ ಗಾಂಧಿ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

0

ನವದೆಹಲಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಧರ್ಮೇಂದ್ರ ಪ್ರಧಾನ್, ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ರಾಜಕೀಯ ದಾಳಗಳನ್ನಾಗಿ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ನಿವಾಸದ ಎದುರು ನಡೆದ ಧರಣಿ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಭದ್ರತಾ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರ ಸಮಗ್ರ ಚರ್ಚೆಗೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ ಬಳಿಕವೂ, ಕಾಂಗ್ರೆಸ್ ಪ್ರಜಾಸತ್ತಾತ್ಮಕ ಚರ್ಚೆಗಿಂತ ರಾಜಕೀಯ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಪ್ರಧಾನ್ ಹೇಳಿದ್ದಾರೆ.

ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಿಂತ ರಾಜಕೀಯ ಲಾಭಕ್ಕಾಗಿ ಗದ್ದಲ ಸೃಷ್ಟಿಸುವುದೇ ಕಾಂಗ್ರೆಸ್‌ನ ಉದ್ದೇಶ ಎಂದು ಆರೋಪಿಸಿದ ಅವರು, ನೀಟ್ ಪರೀಕ್ಷೆ ಕುರಿತ ಎಲ್ಲಾ ನ್ಯಾಯಸಮ್ಮತ ಕಳವಳಗಳನ್ನು ಸಂಸತ್ತಿನಲ್ಲೇ ಚರ್ಚಿಸಿ ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಯಾವುದೇ ರಾಜಕೀಯ ಅಭಿಯಾನದ ಸಾಧನವಾಗಬಾರದು. ಅವರಿಗೆ ಘೋಷಣೆಗಳಿಗಿಂತ ಪರಿಹಾರ, ಗೊಂದಲಕ್ಕಿಂತ ಸ್ಪಷ್ಟತೆ ಹಾಗೂ ಅಡ್ಡಿಪಡಿಸುವಿಕೆಗಿಂತ ಜವಾಬ್ದಾರಿಯುತ ಆಡಳಿತ ಸಿಗಬೇಕು ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸುಧಾರಣೆಗಳು, ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮದುವೆ ಭರವಸೆ ನೀಡಿ ವಂಚನೆ ಆರೋಪ: PSI ವಿರುದ್ಧ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ ಆರೋಪ ಎದುರಿಸುತ್ತಿರುವ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಗಾದಿಲಿಂಗಪ್ಪ ವಿರುದ್ಧದ ತನಿಖೆಯನ್ನು ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಪ್ರಕರಣದಲ್ಲಿ ಆರೋಪಿಯಾಗಿದ್ದ ಪಿಎಸ್‌ಐ ಅವರ ತಾಯಿ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪಿಎಸ್‌ಐ ಗಾದಿಲಿಂಗಪ್ಪ ಹಾಗೂ ಅವರ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ನ್ಯಾಯಪೀಠವು, ಪಿಎಸ್‌ಐ ಅವರ ತಾಯಿ ವಿರುದ್ಧ ಮಾಡಿರುವ ಆರೋಪಗಳು ಪ್ರಾಥಮಿಕವಾಗಿ ಅಸಂಭವವಾಗಿರುವುದರಿಂದ ಅವರ ವಿರುದ್ಧದ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಆದರೆ, ಮೊದಲನೇ ಆರೋಪಿಯಾಗಿರುವ ಪಿಎಸ್‌ಐ ವಿರುದ್ಧದ ಆರೋಪಗಳ ಕುರಿತು ತನಿಖೆಯನ್ನು ಪೊಲೀಸರು ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, ದೂರುದಾರರು ಈ ಹಿಂದೆ ದಾಖಲಿಸಿದ್ದ ಮೊದಲ ದೂರುವನ್ನು ಹಿಂಪಡೆದಿರುವುದನ್ನೇ ಆಧಾರವನ್ನಾಗಿ ಮಾಡಿಕೊಂಡು ತನಿಖೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ನ್ಯಾಯಾಲಯದ ಆದೇಶದ ಪ್ರಕಾರ, ದೂರುದಾರೆ ವಕೀಲರಾಗಿದ್ದು, ಪಿಎಸ್‌ಐ ಗಾದಿಲಿಂಗಪ್ಪ ಅವರೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಂದೇಶಗಳ ವಿನಿಮಯ ನಡೆದು ಸ್ನೇಹ ಪ್ರೀತಿಗೆ ತಿರುಗಿದೆ. ಈ ವೇಳೆ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಮದುವೆಯಾಗದೆ ವಂಚಿಸಿದ್ದಾರೆ ಎಂದು ದೂರುದಾರೆ ಆರೋಪಿಸಿದ್ದಾರೆ.

ಈ ಸಂಬಂಧ ದೂರುದಾರರು ಮೊದಲಿಗೆ ಪಿಎಸ್‌ಐ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಆ ದೂರುವನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ ವರದಿ ಸಲ್ಲಿಸಿದ್ದರು. ನಂತರ ಮತ್ತೊಮ್ಮೆ ದೂರು ದಾಖಲಿಸಿದ ಮಹಿಳೆ, ದೂರು ಹಿಂಪಡೆಯುವಂತೆ ತಮ್ಮ ಮೇಲೆ ಒತ್ತಡ ಹಾಗೂ ಬೆದರಿಕೆ ಹೇರಲಾಗಿತ್ತು ಎಂದು ಆರೋಪಿಸಿದ್ದರು.

ಈ ಎರಡನೇ ಎಫ್‌ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಪಿಎಸ್‌ಐ ಹಾಗೂ ಅವರ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪಿಎಸ್‌ಐ ವಿರುದ್ಧದ ತನಿಖೆ ಮುಂದುವರಿಸಲು ಅವಕಾಶ ನೀಡಿದ್ದು, ತಾಯಿ ವಿರುದ್ಧದ ತನಿಖೆಗೆ ಮಾತ್ರ ತಾತ್ಕಾಲಿಕ ತಡೆ ನೀಡಿದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟ; ಕಮ್ಮಿನ್ಸ್, ಹ್ಯಾಜಲ್ವುಡ್, ಲಿಯಾನ್ ತಂಡಕ್ಕೆ ವಾಪಸ್

0

ಬಾಂಗ್ಲಾದೇಶ ವಿರುದ್ಧ ಆಗಸ್ಟ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ 13 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಸರಣಿಯ ಮೊದಲ ಟೆಸ್ಟ್ ಡಾರ್ವಿನ್‌ನಲ್ಲಿ ಹಾಗೂ ಎರಡನೇ ಪಂದ್ಯ ಮೆಕೆ ನಗರದಲ್ಲಿ ನಡೆಯಲಿದೆ. ಈ ಸರಣಿಗೆ ನಾಯಕ ಪ್ಯಾಟ್ ಕಮ್ಮಿನ್ಸ್, ವೇಗಿ ಜೋಶ್ ಹ್ಯಾಜಲ್ವುಡ್ ಮತ್ತು ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ಆಸ್ಟ್ರೇಲಿಯಾ ತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

ಗಾಯದ ಕಾರಣದಿಂದ ಈ ಮೂವರು ಆಟಗಾರರು ಇತ್ತೀಚಿನ ಆಶಸ್ ಸರಣಿಯ ಸಿಡ್ನಿ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರ ಮರಳುವಿಕೆಯಿಂದ ಕಳೆದ ಆಶಸ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ವೇಗಿ ಮೈಕೆಲ್ ನೆಸರ್‌ಗೆ ಮುಖ್ಯ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದರೆ ಮೈಕೆಲ್ ನೆಸರ್, ಟಾಡ್ ಮರ್ಫಿ ಹಾಗೂ ಬ್ರೆಂಡನ್ ಡಾಗೆಟ್ ಅವರನ್ನು ಬ್ಯಾಕಪ್ ಆಟಗಾರರಾಗಿ ಆಯ್ಕೆ ಮಾಡಲಾಗಿದೆ.

ಉಸ್ಮಾನ್ ಖವಾಜಾ ನಿವೃತ್ತಿಯ ಬಳಿಕ ಆಸ್ಟ್ರೇಲಿಯಾ ತಂಡದಲ್ಲಿ ಬ್ಯಾಟಿಂಗ್ ಕ್ರಮದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಕ್ಯಾಮರೂನ್ ಗ್ರೀನ್ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸುವ ನಿರೀಕ್ಷೆಯಿದ್ದು, ಜ್ಯಾಕ್ ವೆದರ್ಲ್ಯಾಂಡ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮಾರ್ನಸ್ ಲ್ಯಾಬುಶೇನ್ ಮತ್ತು ಸ್ಟೀವ್ ಸ್ಮಿತ್ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ಜೋಶ್ ಇಂಗ್ಲಿಸ್ ಅವರನ್ನು ಬ್ಯಾಕಪ್ ಬ್ಯಾಟರ್ ಹಾಗೂ ವಿಕೆಟ್‌ಕೀಪರ್ ಆಗಿ ತಂಡದಲ್ಲಿ ಸೇರಿಸಲಾಗಿದೆ.

ವೇಗಿ ಜೋಶ್ ಹ್ಯಾಜಲ್ವುಡ್ ತಂಡಕ್ಕೆ ಮರಳಿರುವುದರಿಂದ ಅಂತಿಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಸವಾಲಾಗುವ ಸಾಧ್ಯತೆಯಿದೆ. ಸ್ಕಾಟ್ ಬೋಲ್ಯಾಂಡ್ ಮತ್ತು ಮಿಚೆಲ್ ಸ್ಟಾರ್ಕ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದು, ವಿಶೇಷವಾಗಿ ಬೋಲ್ಯಾಂಡ್ ಇತ್ತೀಚಿನ ಪಂದ್ಯಗಳಲ್ಲಿ ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹ್ಯಾಜಲ್ವುಡ್ ಮತ್ತು ಬೋಲ್ಯಾಂಡ್ ಅವರಲ್ಲಿ ಯಾರಿಗೆ ಅಂತಿಮ ತಂಡದಲ್ಲಿ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

37 ವರ್ಷದ ಸ್ಕಾಟ್ ಬೋಲ್ಯಾಂಡ್ ಇದುವರೆಗೆ 19 ಟೆಸ್ಟ್ ಪಂದ್ಯಗಳಲ್ಲಿ 82 ವಿಕೆಟ್‌ಗಳನ್ನು ಕಬಳಿಸಿದ್ದು, ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ಮಂಡಿರಜ್ಜು ಗಾಯದಿಂದ ಆಶಸ್ ಸರಣಿಯಿಂದ ಹೊರಗುಳಿದಿದ್ದ ಜೋಶ್ ಹ್ಯಾಜಲ್ವುಡ್ ಇದೀಗ ಸಂಪೂರ್ಣ ಫಿಟ್ ಆಗಿದ್ದು ತಂಡಕ್ಕೆ ಮರಳಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದ ಕಳೆದ ಕೆಲವು ತಿಂಗಳು ಸೀಮಿತ ಪಂದ್ಯಗಳನ್ನಷ್ಟೇ ಆಡಿದ್ದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಇದೀಗ ಪೂರ್ಣ ಫಿಟ್ ಆಗಿದ್ದಾರೆ. ಮಂಡಿರಜ್ಜು ಶಸ್ತ್ರಚಿಕಿತ್ಸೆಯ ಬಳಿಕ ನಾಥನ್ ಲಿಯಾನ್ ಕೂಡ ತಂಡ ಸೇರಿಕೊಂಡಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ, ಎಲ್ಲಾ ಆಟಗಾರರ ಫಿಟ್ನೆಸ್ ಮೇಲೆ ವೈದ್ಯಕೀಯ ತಂಡ ನಿರಂತರವಾಗಿ ನಿಗಾ ವಹಿಸಲಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ:

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜ್ಯಾಕ್ ವೆದರ್ಲ್ಯಾಂಡ್ ಹಾಗೂ ಬ್ಯೂ ವೆಬ್ಸ್ಟರ್.

ಸರಣಿಯ ವೇಳಾಪಟ್ಟಿ:

  • ಮೊದಲ ಟೆಸ್ಟ್: ಆಗಸ್ಟ್ 13 ರಿಂದ 17, 2026 – ಮರಾರಾ ಕ್ರಿಕೆಟ್ ಮೈದಾನ, ಡಾರ್ವಿನ್.
  • ಎರಡನೇ ಟೆಸ್ಟ್: ಆಗಸ್ಟ್ 22 ರಿಂದ 26, 2026 – ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮೆಕೆ.

ಕ್ಯಾಲಿಫೋರ್ನಿಯಾದಲ್ಲಿ ಭೀಕರ ರಸ್ತೆ ಅಪಘಾತ: ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಸಾವು, ಮತ್ತೋರ್ವ ಗಂಭೀರ

0

ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಕುಟುಂಬದ ಮುಖ್ಯಸ್ಥ ಹಾಗೂ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಹೈದರಾಬಾದ್‌ನ ಸೈದಾಬಾದ್ ನಿವಾಸಿ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ವಾಹನದೊಂದಿಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ನವೀದ್ ಅವರ ಪತ್ನಿ ನಾಜಿಯಾ ಸಲ್ಮಾ, ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶೇಖ್ ನವೀದ್ ಮತ್ತು ಅವರ ಕಿರಿಯ ಪುತ್ರಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ಚಿಕಿತ್ಸೆ ಮುಂದುವರಿದಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದ ನವೀದ್ ಅಲ್ಲಿಯೇ ಕುಟುಂಬದೊಂದಿಗೆ ನೆಲೆಸಿದ್ದರು. ಮಗನಿಗೆ ಕರೆ ಮಾಡಿದ ವೇಳೆ ಅಮೆರಿಕದ ಪೊಲೀಸರಿಂದ ಅಪಘಾತದ ಮಾಹಿತಿ ತಿಳಿದುಬಂದಿದೆ ಎಂದು ನವೀದ್ ಅವರ ತಂದೆ ಶೇಖ್ ಅಬ್ದುಲ್ ಸಯೀದ್ ತಿಳಿಸಿದ್ದಾರೆ.

ಮೃತರ ಕುಟುಂಬ ಸದಸ್ಯರು ತುರ್ತಾಗಿ ಅಮೆರಿಕಕ್ಕೆ ತೆರಳಲು ಅವಕಾಶ ಕಲ್ಪಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಜ್ಲಿಸ್ ಬಚಾವೋ ತೆಹ್ರೀಕ್ ಸಂಘಟನೆಯ ವಕ್ತಾರ ಅಮ್ಜದ್ ಉಲ್ಲಾ ಖಾನ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ತುರ್ತು ವೀಸಾ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.