ಬೆಂಗಳೂರು: ಮಹದೇವಪ್ಪ ಅವರು ಕೂಡ ನಮ್ಮ ಹೈಕಮಾಂಡ್ ಆಗಿರುವುದರಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ವಿಚಾರ, ಮಾಹಿತಿ ಅವರಿಗೆ ತಿಳಿದಿರಬೇಕು. ಹೀಗಾಗಿ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಕುಮಾರಪಾರ್ಕ್ ಸರಕಾರಿ ನಿವಾಸ ಹಾಗೂ ಸುತ್ತೂರು ಸದನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ಅಧಿಕಾರ ಹಸ್ತಾಂತರ, ದಲಿತ ಸಿಎಂ ಬಗ್ಗೆ ಆಗುತ್ತಿರುವ ಚರ್ಚೆ ಕುರಿತು ಕೇಳಿದಾಗ, “ಮಹದೇವಪ್ಪ ಅವರ ಹೇಳಿಕೆ ನೋಡಿದೆ. ಅದರ ಹೊರತಾಗಿ ಬೇರೆ ಯಾವುದೇ ಚರ್ಚೆ ಇಲ್ಲ. ಅವರಿಗೆ ಸಿಎಂ ಬದಲಾವಣೆ ಮಾಹಿತಿ ಇರಬಹುದು, ಆದರೆ ಆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ” ಎಂದರು.
ಇಲಾಖೆ ವಿಚಾರವಾಗಿ ದೆಹಲಿಗೆ ಹೋಗಬೇಕಿದೆ
ಹೈಕಮಾಂಡ್ ನಿಮ್ಮನ್ನು ಹಾಗೂ ಸಿಎಂ ಅವರನ್ನು ಕರೆದಿದ್ದಾರಾ ಎಂದು ಕೇಳಿದಾಗ, “ನನಗೆ ಯಾವುದೇ ಕರೆ ಬಂದಿಲ್ಲ. ನಾನು ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳ ಮೇಲೆ ದೆಹಲಿಗೆ ಹೋಗಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಸಂಬಂಧಿಸಿದಂತೆ 1 ಲಕ್ಷ ಕೋಟಿ ರೂ. ನೀಡಲಾಗುತ್ತಿದ್ದು, ದೊಡ್ಡ ನಗರಗಳಿಗೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಮ್ಮ ನಗರಾಭಿವೃದ್ಧಿ ಸಚಿವರ ಬಳಿ ಚರ್ಚೆ ಮಾಡಿ, 2 ಹಾಗೂ 3ನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲು ಹೇಳುತ್ತೇನೆ” ಎಂದು ತಿಳಿಸಿದರು.
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ
ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ನೀವು ಮೌನವಾಗಿದ್ದೀರಿ ಎಂದು ಕೇಳಿದಾಗ, “ಸಚಿವರುಗಳನ್ನು ನಿಯಂತ್ರಣ ಮಾಡಬೇಕಿರುವುದು ಮುಖ್ಯಮಂತ್ರಿಗಳು. ಶಾಸಕರನ್ನು ಅವರೇ ನಿಯಂತ್ರಿಸಬೇಕು. ಪಕ್ಷದ ವಿಚಾರವಾಗಿ ದೆಹಲಿಗೆ ಮಾಹಿತಿ ನೀಡುವ ವಿಚಾರ ನಾನು ಮಾಡುತ್ತಿದ್ದೇನೆ” ಎಂದು ತಿಳಿಸಿದರು.
ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂಬ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ದೊಡ್ಡವರು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ” ಎಂದು ತಿಳಿಸಿದರು.

