ಈ ನಾಡಿನಲ್ಲಿ ಧರ್ಮಕ್ಕೆ ಸಂಕಟ ಬಂದಾಗ ಧರ್ಮ ಸಂಸ್ಥಾಪನೆಗಾಗಿ ಧರ್ಮಾತ್ಮರು, ಶರಣ ಶರಣೆಯರು, ಯೋಗಿಗಳು, ಪುಣ್ಯ ಪುರುಷರು, ಸಾಧು-ಸಂತರು, ದಾರ್ಶನಿಕರು, ಮಹಾತ್ಮರು ಕಾಲಕಾಲಕ್ಕೆ ತಕ್ಕಂತೆ ಉದಯಿಸಿ ತಮ್ಮ ಆಚಾರ-ವಿಚಾರದಿಂದಲೋ ಅವತರಿಸಿ ಬಂದಿರುವುದರಿಂದ ಈ ನಾಡಿಗೆ ಧರ್ಮದ ನಾಡೆಂದು, ಮಹಾತ್ಮರ ಮಂಗಲದ ವಾಸಸ್ಥಾನವೆಂದು, ಭಕ್ತವಂತರ ನಾಡೆಂದೂ ಕರೆಯುವುದುಂಟು.
ಇಂತಹ ಪುಣ್ಯದ ಭೂಮಿಯಲ್ಲಿ ಅವತಾರಿ ಪುರುಷರಾಗಿ ಹಾಲಕೆರೆಯ ಪರಮಪೂಜ್ಯ ಮಹಾ ತಪಸ್ವಿ ಲಿಂಗೈಕ್ಯ ಗುರು ಅನ್ನದಾನ ಶಿವಯೋಗಿಗಳು, ಕೋಡಿಕೊಪ್ಪದ ಲಿಂಗೈಕ್ಯ ಹಠಯೋಗಿ ಹುಚ್ಚೀರಪ್ಪಜ್ಜನವರೂ, ಗದುಗಿನ ಗಾನಯೋಗಿ ಪಂಡಿತ ಲಿಂಗೈಕ್ಯ ಡಾ. ಪುಟ್ಟರಾಜ ಗವಾಯಿಗಳವರೂ ಜನಿಸಿ ಭಕ್ತರ ಬಾಳಿಗೆ ಬೆಳಕನ್ನು ಚೆಲ್ಲಿದರು.
ಇಂತಹ ಅನೇಕ ಮಹಿಮಾ ಪುರುಷರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯ ಶ್ರೀ ಅಣ್ಣಯ್ಯ-ತಮ್ಮಯ್ಯನವರು ಶಿವಶರಣರಾಗಿ, ಭಕ್ತಿವಂತರಾಗಿ, ಗುರು-ಲಿಂಗ-ಜಂಗಮರ ಸೇವಾ ತತ್ಪರರಾಗಿ ದಾಸೋಹ ಮೂರ್ತಿಗಳಾಗಿ, ಮನು ಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಿಮಾ ಪುರುಷರಾಗಿ ಮೆರೆದ ವಿಷಯ ಇಂದಿಗೂ ಚಿರಸ್ಮರಣೀಯ.
ಕಲಬುರ್ಗಿ ಜಿಲ್ಲೆಯ ವಾಗಿನಗಿರಿಯಿಂದ ಬಂದ ಕುದರಿ ಮನೆತನದ ಉಭಯ ಶಿವಶರಣರು 1811ರಲ್ಲಿ ಅಣ್ಣಯ್ಯನವರು ಹಾಗೂ 1814ರಲ್ಲಿ ತಮ್ಮಯ್ಯನವರು ವೀರಶೈವ ಸದಾಚಾರ ಸಂಪನ್ನರಾದ ಸಣ್ಣಬಸವಪ್ಪ ಶೆಟ್ಟರ ಹಾಗೂ ಚನ್ನಮ್ಮ ಎಂಬ ಪುಣ್ಯ ದಂಪತಿಗಳ ಉದರದಿಂದ ಸತ್ಪುತ್ರರಾಗಿ ಜನ್ಮವೆತ್ತಿ ಬಂದರು.
ಈ ಶರಣರು ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬದುಕಿಗೆ ವಿಶಿಷ್ಟವಾದ ಅರ್ಥ ಕೊಟ್ಟು ಜನರ ಬಾಳಿಗೆ ಬೆಳಕನ್ನು ನೀಡಿದರು. ತಮ್ಮಯ್ಯ ಶರಣರು ಬಾಲ್ಯಾವಸ್ಥೆಯಲ್ಲಿಯ ಅನೇಕ ಪವಾಡಗಳನ್ನು ತೋರಿಸಿದರು. ಕೋಡಿಕೊಪ್ಪದ ಹಠಯೋಗಿ ಹುಚ್ಚೀರಪ್ಪಜ್ಜನವರು ಇಡಿ ಜಗತ್ತಿಗೆ ನೀಡಿದ ಸಂದೇಶ “ಯಾವುದು ಹೌದು ಅದು ಅಲ್ಲ; ಯಾವುದು ಅಲ್ಲ ಅದು ಹೌದು” ಎನ್ನುವ ನುಡಿಯನ್ನು ಸಾರಿದ ಹಾಗೇ 137 ವರ್ಷಗಳ ಹಿಂದೆಯ ತಮ್ಮಯ್ಯ ಶರಣರು ಕಲಿಯುಗದಲ್ಲಿ ದುಷ್ಟರ ಹಾವಳಿ ಹೆಚ್ಚಾಗುವುದು “ಸತ್ಯ ಸುಳ್ಳಾಗುತ್ತದೆ, ಸುಳ್ಳು ಸತ್ಯವಾಗುತ್ತದೆ” ಎಂಬ ಭವಿಷ್ಯವಾಣಿ ನುಡಿದರು. ಅಂದು ಅವರು ಹೇಳಿರುವ ಮಾತು ಇಂದಿನ ದಿನಗಳಲ್ಲಿ ನಾವು ನಿತ್ಯ ಕಾಣುತ್ತಿದ್ದೇವೆ.
ಶರಣರು ಬಾಲ್ಯದಲ್ಲಿಯೇ ಮಹಾತೇಜಸ್ವಿಗಳಾಗಿ ಅವತಾರಿಕ ಪುರುಷರಾಗಿ ಅದ್ಭುತ ಪವಾಡ ರೂಪಗಳನ್ನು ತೋರಿಸಿ ಮಹಾ ಶಿವಶರಣರೆನಿಸಿಕೊಂಡು ಆಟಿಕೆಯ ಸಾಮಗ್ರಿ ಕಟ್ಟಿಗೆಯ ಬಸವಣ್ಣನಿಂದ ಓಂಕಾರ ನುಡಿಸಿದರು. ಅದೇ ಬಸವಣ್ಣನಿಂದ ಬಂದ ಅಪವಾದಕ್ಕೆ ಕಳ್ಳನಿಂದ ನಿಜವ ನುಡಿಸಿದರು. ಇಂತಹ ಪವಾಡ ಸನ್ನಿವೇಶವನ್ನು, ಪ್ರತ್ಯಕ್ಷವಾಗಿ ಕಂಡ ಭಕ್ತರು ಇವರು ಸಾಮಾನ್ಯರಲ್ಲವೆಂದು ಮಹಾ ಪವಾಡ ಪುರುಷರೆಂದು ಅರಿತು ಅಪಾರವಾದ ಭಕ್ತಿ, ಪ್ರೀತಿ, ವಿಶ್ವಾಸಗಳನ್ನಿಟ್ಟುಕೊಂಡು ನಡೆಯ ಹತ್ತಿದರು.
ಗುರುವಿನ ಆಜ್ಞೆಯಂತೆ ಇಲಕಲ್ಲ ಪಟ್ಟಣದ ರುದ್ರಪ್ಪ ಮಾಟೂರ ಇವರ ಪುತ್ರಿ ಗಂಗಮ್ಮನವರನ್ನು ಅಣ್ಣಯ್ಯ (ಮಲ್ಲಿರ್ಜುನಪ್ಪ)ನೊಂದಿಗೆ ಹಾಗೂ ಜಾಲಿಹಾಳ ಗ್ರಾಮದ ಪರಪ್ಪ ಕಡಗದ ಇವರ ಪುತ್ರಿ ಅಂದಾನಮ್ಮನವರನ್ನು ತಮ್ಮಯ್ಯ (ಬಸವಶ್ರೇಷ್ಠ)ನೊಂದಿಗೆ 1835ರಲ್ಲಿ ಮದುವೆಯಾದರು. ಉಭಯ ಶರಣರು ಸಂಸಾರವನ್ನು ದಾಸೋಹ ಮೂರ್ತಿಗಳಾಗಿ ಸಾಗಿಸುತ್ತಿದ್ದರು.
1884ರಲ್ಲಿ ತಮ್ಮಯ್ಯನವರು, 1889ರಲ್ಲಿ ಅಣ್ಣಯ್ಯನವರು ಲಿಂಗೈಕ್ಯರಾದರು. ತಮ್ಮಯ್ಯ ಶರಣರು ತಾವು ಲಿಂಗೈಕ್ಯರಾಗುವುದಕ್ಕಿಂತ ಒಂದು ವಾರ ಮೊದಲೇ ಲಿಂಗೈಕ್ಯರಾಗುವುದನ್ನು ಹಾಗೂ ಐದು ವರ್ಷಗಳ ನಂತರ ನಮ್ಮ ಅಣ್ಣಯ್ಯನವರು ಲಿಂಗೈಕ್ಯರಾಗುತ್ತಾರೆಂದು ಭಕ್ತರಲ್ಲಿ ಭವಿಷ್ಯ ನುಡಿದಿದ್ದರು. ಐಕ್ಯರಾದ ಎಂಟು ದಿನಗಳ ನಂತರ ಶರಣರು ಮುಷ್ಠಿಗೇರಿ, ನೆಲ್ಲೂರು ಗ್ರಾಮದ ಜಂಗಮರಿಗೆ ದರ್ಶನ ಕೊಟ್ಟರು.
ಶರಣರ ಪವಾಡಗಳು ಒಂದೆರಡಲ್ಲ. ತಂದೆಯ ಕಾಲದಲ್ಲಿ ಹೊಲಮನೆಗಳನ್ನು ಬರೆಯಿಸಿಕೊಂಡಿದ್ದ ಸಾಲಗಾರರನ್ನು ಕರೆಯಿಸಿ ಶರಣರು ನಿಮ್ಮ ಹೊಲ, ಮನೆಗಳನ್ನು ನೀವು ತೆಗೆದುಕೊಳ್ಳಿ, ನಿಮ್ಮ ಸಾಲವು ತೀರಿ ಹೋಯಿತು ಎಂದು ಹೇಳಿ ಸಾವಿರಾರು ಸಾಲದ ಕಾಗದಪತ್ರಗಳನ್ನು ಸುಟ್ಟು ಹಾಕಿದರು. ಸಾಲಿಗರ ಮನೆಯಲ್ಲಿ ಬರೀ ನೀರು ಕುಡಿದು ನಿಮ್ಮ ಸಾಲ ಮುಟ್ಟಿರುತ್ತದೆ ಎಂದು ಹೇಳಿದರು. ಇವರ ಹೊಲದಲ್ಲಿ ಕುಸುಬಿ ಕದ್ದ ಕಳ್ಳರಿಗೆ ಬುದ್ಧಿ ಬರುವಂತೆ ಮಾಡಿ ಸನ್ಮಾರ್ಗಕ್ಕೆ ಹಚ್ಚಿದರು. ಸುಳ್ಳು ಹೇಳಿದ ಜಂಗಮನಿಗೆ ಬುದ್ದಿ ಹೇಳಿದರು.
ಶರಣರ ಕಾಲಿಗೆ ಹುಣ್ಣು ಆಗಿತ್ತು. ಹುಳಗಳು ಬಿದ್ದಿರಲು ಅವುಗಳಿಗೆ ಸಕ್ಕರಿ ಹಾಕಿ ಜೋಪಾನ ಮಾಡುತ್ತಿದ್ದರು. ಸದ್ಭಕ್ತರಿಗೆ ಸಂತಾನ ಫಲವನ್ನು ಆಗ್ರಹಿಸಿದರು. ಮುಚ್ಚಿದ್ದ ಕದವನ್ನು ಕೂಡಲ ಸಂಗಮೇಶ್ವರನಿಂದ ತೆಗೆಯಿಸಿದರು. ಹಾವಿನ ಹೆಡೆಯಲ್ಲಿದ್ದ ರತ್ನದ ದೇವರ ಗರ್ಭ ಗುಡಿಯಲ್ಲಿಯ ಲಿಂಗಕ್ಕೆ ಬೆಳಕು ಮಾಡಿದರು. ಅಚ್ಚು ಮುರಿದ ಬಂಡಿಯನ್ನು ಹಾಲಕೆರೆಯಿಂದ ಜಕ್ಕಲಿಯವರೆಗೂ ನಡೆಯಿಸಿದರು. ಹೀಗೆ ಅನಂತಾ ಮಹಿಮೆಗಳಿಂದ ಜನರ ಮನ ಮಾಲಿನ್ಯವನ್ನು ಕಳೆದು ಅವರಿಗೆ ಸತ್ಯ, ಜ್ಞಾನದ ಬೆಳಕನ್ನು ತೋರಿಸಿದರು.
ಇಂತಹ ಪುಣ್ಯ ಪುರುಷರು ನಡೆದಾಡಿದ ಈ ನೆಲ ಪಾವನವಾಗಿದೆ.ಅವರ ಕಾಯಕದ ಬದುಕು, ನಮ್ಮ ಜೀವನದ ಸೂತ್ರವಾಗಿದೆ. ಪುಣ್ಯಾತ್ಮರು ತೋರಿದ ಮಾರ್ಗದಲ್ಲಿ ಭಕ್ತರೆಲ್ಲರೂ ಬದುಕು ಕಂಡುಕೊಂಡರೆ ಸಜ್ಜನ ಸಮಾಜ ನಿರ್ಮಾಣಗೊಂಡು ಸುಭಿಕ್ಷೆ ನೆಲೆಸಲು ಸಾಧ್ಯ. ಅವರ ದಾಸೋಹ ಕಾಯಕದ ಪ್ರೀತಿ, ಹಸಿವು ಮುಕ್ತ ಸಮಾಜ ನಿರ್ಮಾಣದ ಶರಣರ ಕಳಕಳಿ, ಸದೃಢ ಸಮಾಜದ ಪರಿಕಲ್ಪನೆ, ಇಂದಿನ ಪ್ರಜಾಪ್ರಭುತ್ವದ ಆಶಯ ಬಿಂಬಿಸುವ ಸದಾಶಯವಾಗಿದೆ.
– ಸಂಗಮೇಶ ಮೆಣಸಗಿ.
ಜಕ್ಕಲಿ.