Home Blog Page 2

ರೈತರನ್ನು ಬೆದರಿಸಿ ಭೂಮಿ ಪಡೆಯಲು ಸಾಧ್ಯವಿಲ್ಲ: ಬಿಡದಿ ಟೌನ್ ಶಿಪ್ ವಿರೋಧಿಸಿ JDSನಿಂದ 3 ದಿನಗಳ ಪಾದಯಾತ್ರೆ – ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರೈತರನ್ನು ಹೆದರಿಸಿ ಅಥವಾ ಬೆದರಿಸಿ ಒತ್ತಾಯಪೂರ್ವಕವಾಗಿ ಸಹಿ ಪಡೆಯಬಹುದು ಎಂದು ಸರ್ಕಾರ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಜೆ.ಪಿ. ಭವನದಲ್ಲಿ ನಡೆದ ಬಿಡದಿ ಪಾದಯಾತ್ರೆಯ ಪೂರ್ವಸಿದ್ಧತಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಕ್ಕುಗಳ ರಕ್ಷಣೆಗೆ ಜೆಡಿಎಸ್ ಹೋರಾಟ ರೂಪಿಸಿದ್ದು, ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿಗೆ ಧಕ್ಕೆ ಬರುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸತ್ಯಾಗ್ರಹ ಘೋಷಣೆ ಮಾಡಿದ ತಕ್ಷಣವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದರು. ಅದೇ ದಿನ ನಾಲ್ಕು ಹಳ್ಳಿಗಳಿಗೆ ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಸಮಿತಿ ರಚಿಸುವುದಾಗಿ ಹೇಳಿದ ಸರ್ಕಾರ, ಅದರ ಉದ್ದೇಶವೇನು, ಸದಸ್ಯರು ಯಾರು ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ. ಜಿಲ್ಲೆಯ ಜನರ ಭವಿಷ್ಯದ ಕುರಿತು ಅಧಿಕಾರಿಗಳಿಗೆ ಮರಣಶಾಸನ ಬರೆಯುವ ಅಧಿಕಾರವನ್ನು ಮುಖ್ಯಮಂತ್ರಿ ನೀಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಇದೇ ವೇಳೆ, ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದ ಅವರು, ಈಗಾಗಲೇ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಿ ಬಳಿಕ ಸಮಿತಿ ರಚಿಸುತ್ತೇವೆ ಎನ್ನುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.

ಬಿಡದಿ ಭಾಗದ ರೈತರ ಪರವಾಗಿ ಈ ಹಿಂದೆಯೂ ಜೆಡಿಎಸ್ 11 ಕಿಲೋಮೀಟರ್ ಪಾದಯಾತ್ರೆ ನಡೆಸಿತ್ತು. ಇದೀಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಆಗಸ್ಟ್‌ 9, 10 ಮತ್ತು 11ರಂದು ಮೂರು ದಿನಗಳ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು, ರೈತರ ಹಕ್ಕುಗಳಿಗಾಗಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು.

ಆ. 8 ಮತ್ತು 9ರಂದು ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಆಗಸ್ಟ್ 8 ಹಾಗೂ 9ರಂದು ಮುಳಗುಂದದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮೌಂಟೇನ್ ಬೈಕ್ (ಎಂಟಿಬಿ) ಸೈಕ್ಲಿಂಗ್ ಸ್ಪರ್ಧೆಗೆ ಗದಗ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ಭಾನುವಾರ ಪಟ್ಟಣದ ಯಲಿಶಿರುಂಜ ರಸ್ತೆಯ ಗುಡ್ಡಗಾಡು ಪ್ರದೇಶದ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 80 ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂಡರ್-14 ವಿಭಾಗದಲ್ಲಿ 4 ಬಾಲಕರು ಹಾಗೂ 4 ಬಾಲಕಿಯರು, ಅಂಡರ್-16 ವಿಭಾಗದಲ್ಲಿ 3 ಬಾಲಕರು ಮತ್ತು 3 ಬಾಲಕಿಯರು, ಜೂನಿಯರ್ ವಿಭಾಗದಲ್ಲಿ 2 ಬಾಲಕರು ಹಾಗೂ 1 ಬಾಲಕಿಯನ್ನು, ಎಲೈಟ್ ಪುರುಷರ ವಿಭಾಗದಲ್ಲಿ ಒಬ್ಬ ಹಾಗೂ ಎಲೈಟ್ ಮಹಿಳಾ ವಿಭಾಗದಲ್ಲಿ ಒಬ್ಬ ಕ್ರೀಡಾಪಟುವನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಕ್ರೀಡಾಪಟುಗಳು ಆಗಸ್ಟ್ 8 ಮತ್ತು 9ರಂದು ಮುಳಗುಂದದಲ್ಲಿ ನಡೆಯುವ ರಾಜ್ಯಮಟ್ಟದ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಗಾರ ಎಂ.ಐ. ಕಣಕೆ, ಜಿಲ್ಲಾ ಅಧ್ಯಕ್ಷ ಎಸ್.ವಿ. ಕಣವಿ, ಚಂದ್ರಶೇಖರ ದೊಡ್ಡಮನಿ, ದಾವಲ್ ಕುರ್ತಕೋಟಿ ಸೇರಿದಂತೆ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

18 ವರ್ಷದ ಕನಸಿನ ರೈಲು ಮಾರ್ಗಕ್ಕೆ ಮತ್ತೆ ಜೀವ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ (ಮುಂಡರಗಿ–ಹೂವಿನಹಡಗಲಿ ಮಾರ್ಗವಾಗಿ) ನೂತನ ರೈಲು ಮಾರ್ಗ ಯೋಜನೆಯ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿಯ ನಿಯೋಗವು ಕೇಂದ್ರ ಶಿಕ್ಷಣ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದೆ.

ಸಮಿತಿಯ ಅಧ್ಯಕ್ಷ ಬಸವರಾಜ ಎಸ್. ದೇಸಾಯಿ ನೇತೃತ್ವದ ನಿಯೋಗವು ಆಗಸ್ಟ್ 1ರಂದು ನವದೆಹಲಿಯಲ್ಲಿರುವ ಸಚಿವರ ನಿವಾಸದಲ್ಲಿ ಭೇಟಿ ನೀಡಿ, ಸುಮಾರು 94 ಕಿ.ಮೀ. ಉದ್ದದ ಈ ರೈಲು ಮಾರ್ಗಕ್ಕೆ ಈಗಾಗಲೇ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಅನುದಾನವೂ ಮಂಜೂರಾಗಿದೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿತು.

ಕಳೆದ 18 ವರ್ಷಗಳಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಈ ಯೋಜನೆಯಿಂದ ಗದಗ, ಮುಂಡರಗಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ ಭಾಗಗಳ ಸಂಪರ್ಕ ಸುಧಾರಣೆಯಾಗುವುದರ ಜೊತೆಗೆ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಉದ್ಯೋಗ ಹಾಗೂ ಉತ್ತರ–ಮಧ್ಯ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ ಎಂದು ನಿಯೋಗ ವಿವರಿಸಿತು.

ಮನವಿ ಸ್ವೀಕರಿಸಿದ ಸಚಿವ ಪ್ರಲ್ಹಾದ್ ಜೋಶಿ, ಯೋಜನೆಯ ಮಹತ್ವವನ್ನು ಒಪ್ಪಿಕೊಂಡು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ಶೀಘ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಮುತ್ತಪ್ಪ ಪಾವಡಶೆಟ್ಟರ್, ನಿತಿನ್ ವಿ. ದೊಡ್ಡಣ್ಣವರ ಹಾಗೂ ಸಚಿನ್ ಬಿ. ದೇಸಾಯಿ ಉಪಸ್ಥಿತರಿದ್ದರು.

“ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಜನರ 18 ವರ್ಷದ ಕನಸು. ಕಾಮಗಾರಿ ಆರಂಭವಾಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.”

ಬಸವರಾಜ ಎಸ್. ದೇಸಾಯಿ, ಅಧ್ಯಕ್ಷರು, ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ

ಇಂಟರ್‌ಲಾಕ್ ಕಾಮಗಾರಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ 35ನೇ ವಾರ್ಡಿನ ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎಂಎಲ್‌ಸಿ ಎಸ್.ವಿ. ಸಂಕನೂರ ಅವರ ಅನುದಾನದಡಿ ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಂಟರ್‌ಲಾಕ್ ಫೇವರ್ಸ್ ಕಾಮಗಾರಿಯನ್ನು ಮಂಗಳವಾರ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ 35ನೇ ವಾರ್ಡಿನ ಸದಸ್ಯೆ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಶ್ರೀ ಕಾಶಿಲಿಂಗೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಕಲ್ಲೇಶ ಡಿ. ಮೂರಶಿಳ್ಳಿ, ಸಾಯಿಬಾಬೂಜಿ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್.ಕೆ. ತೊಂಡಿಹಾಳ, ಗೌರವಾಧ್ಯಕ್ಷ ಎಂ.ಆರ್. ಸೋಂಪುರ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಮಡಿವಾಳರ, ಗೌರವಾಧ್ಯಕ್ಷೆ ರತ್ನಕ್ಕ ಯಳಮಲಿ, ಕಾರ್ಯದರ್ಶಿ ಎಚ್.ಬಿ. ಆದಪ್ಪನವರ, ಬಸವರಾಜ ಕುಕನೂರ, ಎಸ್.ಕೆ. ಕಂಡೆಪ್ಪಗೌಡರ, ಮಲ್ಲಣ್ಣ ಅಂಗಡಿ ಸೇರಿದಂತೆ ಟ್ರಸ್ಟ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು, ಬಡಾವಣೆಯ ಹಿರಿಯರು, ಮಹಿಳೆಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.

ಮತದಾರರ ಪಟ್ಟಿಯಲ್ಲಿ ತಪ್ಪಿದ್ದರೆ ಈಗಲೇ ಸರಿಪಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಮತದಾರರ ಪಟ್ಟಿಯಲ್ಲಿ ಹೆಸರು, ತಂದೆ ಅಥವಾ ಪತಿಯ ಹೆಸರು, ವಯಸ್ಸು, ಫೋಟೊ ಸೇರಿದಂತೆ ಯಾವುದೇ ವಿವರಗಳಲ್ಲಿ ದೋಷಗಳಿದ್ದರೆ ಅವುಗಳನ್ನು ತಕ್ಷಣ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾದ ಮತದಾರರು ಹೊಸ ಮತಗಟ್ಟೆಗೆ ಹೆಸರು ಸ್ಥಳಾಂತರಿಸಲು ನಮೂನೆ–8 ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಹಾಗೂ ಹೊಸದಾಗಿ ಮತದಾರರ ಗುರುತಿನ ಚೀಟಿ ಪಡೆಯಬೇಕಾದವರು ನಮೂನೆ–6 ಮೂಲಕ ಅರ್ಜಿ ಸಲ್ಲಿಸಬೇಕು. ಮೃತಪಟ್ಟ ಮತದಾರರ ಮಾಹಿತಿಯನ್ನು ಕುಟುಂಬಸ್ಥರು ಸಂಬಂಧಿತ ಬಿಎಲ್‌ಒಗಳಿಗೆ ನೀಡಬೇಕು. ಮಾಹಿತಿ ಸಿಗದಿದ್ದರೆ ಪಂಚನಾಮೆ ಆಧರಿಸಿ ಹೆಸರು ಕೈಬಿಡಲಾಗುವುದು ಎಂದು ತಿಳಿಸಿದರು.

ಒಂದೇ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಅನುಕ್ರಮವಾಗಿ ಇರುವಂತೆ ಕ್ರಮ ಕೈಗೊಳ್ಳಲು ಮತದಾರರ ನೋಂದಣಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪಾರದರ್ಶಕವಾಗಿ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಅಥವಾ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆ, ದೂರು ಅಥವಾ ಸಮಸ್ಯೆಗಳಿದ್ದರೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಸಲ್ಲಿಸಬೇಕು. ಅವುಗಳನ್ನು ತ್ವರಿತವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಯಾಗಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

“ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ ನಮೂನೆ–8 ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಿ. ಹೊಸ ಮತದಾರರು ನಮೂನೆ–6 ಸಲ್ಲಿಸಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು. ಯಾವುದೇ ದೂರುಗಳಿದ್ದರೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ನೀಡಿ.”

ಸ್ನೇಹಲ್ ಆರ್., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಧಾರವಾಡ

ಬೆಳೆದ ಬೆಳೆಯನ್ನೇ ನಾಶಪಡಿಸುವ ದುಃಸ್ಥಿತಿ; ರೈತನ ಕಣ್ಣೀರಿನ ಕಥೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಭಾಗದಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಕ್ಷೇತ್ರ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ–ಸೂಲ ಮಾಡಿ ಬೆಳೆದ ಬೆಳೆ ಒಣಗಿ ಹಾಳಾಗಿರುವುದನ್ನು ನೋಡಲಾಗದೆ, ಕನಿಷ್ಠ ಕುರಿಗಳಿಗೆ ಮೇವಾಗಲಿ ಎಂಬ ಆಶಯದಿಂದ ರೈತರು ತಮ್ಮ ಹೊಲಗಳನ್ನೇ ಕುರಿ ಮೇಯಿಸಲು ಬಿಡುತ್ತಿರುವ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ.

ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಶೇಂಗಾ, ಹೆಸರು, ಗೋವಿನ ಜೋಳ, ಮೆಣಸಿನಕಾಯಿ, ಈರುಳ್ಳಿ, ಉದ್ದು ಸೇರಿದಂತೆ ಹಲವು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಿ ನಲುಗಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಇಳುವರಿ ನೀಡುವ ನಿರೀಕ್ಷೆಯನ್ನೇ ಕೈಬಿಟ್ಟಿರುವ ರೈತರು, ಬೆಳೆಯನ್ನು ಜಾನುವಾರುಗಳಿಗೆ ಮೇವಾಗಲು ಬಿಟ್ಟಿದ್ದಾರೆ.

ಬೆಳೆ ಉಳಿಸಿಕೊಳ್ಳಲು ಕೆಲ ರೈತರು ಬೋರ್‌ವೆಲ್ ನೀರು ಬಳಸಿ ಕೃತಕ ನೀರಾವರಿ ಮಾಡಿದರೂ ಪ್ರಯೋಜನವಾಗಿಲ್ಲ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ನೀರು ಪೂರೈಸುವುದಕ್ಕೂ ರೈತರು ಹಿಂದೇಟು ಹಾಕುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಎರಡರ ಕೊರತೆಯೂ ಎದುರಾಗುವ ಆತಂಕ ವ್ಯಕ್ತವಾಗಿದೆ.

ಕೆಲವೆಡೆ ರೈತರು ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಬೆಳೆ ಹಾನಿ ಪರಿಶೀಲನೆ ಹೆಸರಲ್ಲಿ ಕಾಟಾಚಾರದ ಭೇಟಿ ಮಾತ್ರ ನಡೆಯುತ್ತಿದ್ದು, ರೈತರು ಆರ್ಥಿಕವಾಗಿ ಸಂಪೂರ್ಣ ಕುಸಿದುಬಿದ್ದಿದ್ದಾರೆ.

ರೈತರಾದ ಅಜಯ್ ಗುಡ್ಡದ, ರಮೇಶ್ ನಾಗರಾಳ ಹಾಗೂ ಗಣೇಶ ಹೆಸರೆಡ್ಡಿ ಅವರು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ, ಬೆಳೆ ವಿಮೆ ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

“ಮೂರು ಎಕರೆ ಗೋವಿನ ಜೋಳ ಬೆಳೆ ಮಳೆ ಇಲ್ಲದೆ ಸಂಪೂರ್ಣ ಒಣಗಿದೆ. ಇಳುವರಿ ಸಿಗುವ ನಿರೀಕ್ಷೆ ಇಲ್ಲದ ಕಾರಣ ಕುರಿಗಳಿಗೆ ಮೇಯಲು ಬಿಟ್ಟಿದ್ದೇನೆ. ಜಿಲ್ಲೆಯ ರೈತರೆಲ್ಲರೂ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ವಿಮೆ ಹಾಗೂ ಬರ ಪರಿಹಾರ ಬಿಡುಗಡೆ ಮಾಡಬೇಕು.”

ಭೀಮನಗೌಡ ಪಾಟೀಲ, ರೈತ, ಶಿರುಂಜ ಗ್ರಾಮ

ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಿದ್ದರೆ ಧರಣಿ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ತಕ್ಷಣ ಕಡಿವಾಣ ಹಾಕಬೇಕು. ದಂಧೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭೀಮ್ ಶಕ್ತಿ ಸಂಘಟನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ಗುತ್ತೆಮ್ಮನವರ, ರಾಜ್ಯಾಧ್ಯಕ್ಷ ಶಂಕರ ಮುಗುಳಿ ಹಾಗೂ ರಾಜ್ಯ ಕಾನೂನು ಸಲಹೆಗಾರ ಮೈಲಾರಪ್ಪ ಡಿ.ಎಚ್. ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಹಲವು ಗ್ರಾಮಗಳ ಹಳ್ಳಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಪರಿಸರ ಹಾನಿ, ಅಂತರ್ಜಲ ಮಟ್ಟ ಕುಸಿತ, ರೈತರಿಗೆ ನೀರಾವರಿ ಸಮಸ್ಯೆ ಹಾಗೂ ಗ್ರಾಮೀಣ ರಸ್ತೆಗಳ ಹಾನಿ ಉಂಟಾಗಿದೆ ಎಂದು ಆರೋಪಿಸಲಾಯಿತು.

ಒಂದೇ ಪಾಸ್‌ ಬಳಸಿ ಹಲವು ಬಾರಿ ಮರಳು ಸಾಗಣೆ ಮಾಡಲಾಗುತ್ತಿದ್ದು, ಜಿಪಿಎಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಅಕ್ರಮ ದಂಧೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ಕೆಲ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ ಎಂದು ಸಂಘಟನೆ ಆರೋಪಿಸಿತು.

ಕೂಡಲೇ ಜಂಟಿ ದಾಳಿ ನಡೆಸಿ ಅಕ್ರಮ ಮರಳು ದಂಧೆ ತಡೆಗಟ್ಟಬೇಕು. ತಪ್ಪಿತಸ್ಥರು ಹಾಗೂ ಅವರಿಗೆ ಸಹಕಾರ ನೀಡುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಶಂಕರ ಮುಗುಳಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಮ್ಯಾಗೇರಿ, ಜಿಲ್ಲಾ ಗೌರವಾಧ್ಯಕ್ಷ ಮರಿಯಪ್ಪ ಪೂಜಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿದ್ದಪ್ಪ ಮಾದರ, ಸಂಘಟನಾ ಕಾರ್ಯದರ್ಶಿ ಮುತ್ತಪ್ಪ ಪೂಜಾರ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಕೃಷ್ಣಪ್ಪ ಮರಾಠಿ, ಕಾರ್ಯದರ್ಶಿ ಯಮನಪ್ಪ ಪೂಜಾರ, ಶಿರಹಟ್ಟಿ ತಾಲೂಕು ಅಧ್ಯಕ್ಷ ಕೊಟೆಪ್ಪ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್‌ಗೆ ವರವಲ್ಲ, ಸಂಕಟ: ವಿಜಯಕುಮಾರ ಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೂತನ ಸಚಿವ ಸಂಪುಟ ರಚನೆ ವೇಳೆ ಸಾಕಷ್ಟು ಗೊಂದಲಕ್ಕೆ ಕಾರಣವಾದ ಕಾಂಗ್ರೆಸ್ ಸರ್ಕಾರ ಈಗ ಅದೇ ಸಂಪುಟ ವಿಸ್ತರಣೆಯಿಂದ ಅಸಮಾಧಾನದ ಸಂಕಟ ಎದುರಿಸುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು, ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಹಲವು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರ್ಕಾರದೊಳಗಿನ ಭಿನ್ನಮತವನ್ನು ಬಯಲಿಗೆಳೆದಿದೆ ಎಂದು ಹೇಳಿದರು.

ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೆಸ್ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಒಳಜಗಳದಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಸಚಿವ ಸ್ಥಾನ ಸಿಗಲಿಲ್ಲವೆಂದು ತಮ್ಮದೇ ಶಾಸಕರು ರಾಜೀನಾಮೆ ನೀಡುತ್ತಿರುವ ಬಗ್ಗೆ ಏನು ಉತ್ತರ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟ ವಿಸ್ತರಣೆ ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅದರ ರಾಜಕೀಯ ಪರಿಣಾಮ ಎದುರಾಗಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಜನಪರ ಆಡಳಿತ ಎಂಬುದು ಕೇವಲ ಮರೀಚಿಕೆಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯು ಸರ್ಕಾರಕ್ಕೆ ಬಲ ನೀಡುವ ಬದಲು ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.

ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷ ರವಿ ಗುಡಿಮನಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಗದಗ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಗುಡಿಮನಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಸಂಗಪ್ಪ ಗುಡಿಮನಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಸಿಕಟ್ಟಿ, ಮಾಜಿ ಅಧ್ಯಕ್ಷ ಬಾಲಚಂದ್ರ ಬರಮಗೌಡ, ಉಪಾಧ್ಯಕ್ಷರಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಕೋಶಾಧ್ಯಕ್ಷ ಅರವಿಂದ ಕಾಮತ ಹಾಗೂ ಸದಸ್ಯರು ಉಪಸ್ಥಿತರಿದ್ದು, ರವಿ ಗುಡಿಮನಿ ಅವರಿಗೆ ಶುಭ ಹಾರೈಸಿದರು.

ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಸಮರ್ಥ ನಾಯಕತ್ವ ಹಾಗೂ ಜನಪರ ಸೇವೆ ಸಲ್ಲಿಸುವ ಮೂಲಕ ಸಂಘದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿದರು.

ಗುರುವಂದನೆಗೆ ಸಾಕ್ಷಿಯಾದ ಶತಮಾನದ ಶಾಲೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರುವಂದನೆ ಎಂದರೆ ನಮಗೆ ಜ್ಞಾನ, ವಿದ್ಯೆ ಹಾಗೂ ಸಂಸ್ಕಾರವನ್ನು ನೀಡಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಸಂಪ್ರದಾಯವಾಗಿದ್ದು, ಭಾರತೀಯ ಗುರು-ಶಿಷ್ಯ ಪರಂಪರೆಯ ಶ್ರೇಷ್ಠ ಸಂಕೇತವಾಗಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗುರುಗಳು ಬದುಕಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವವರು. ನೈತಿಕತೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವ ಗುರುಗಳು ತಂದೆ-ತಾಯಿಯ ನಂತರ ದೈವಸ್ವರೂಪಿಗಳಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಂ.ಎನ್. ಸರ್ವಿ ಮಾತನಾಡಿ, ಶಾಲೆಯು ಶತಮಾನದ ಹೊಸ್ತಿಲಲ್ಲಿದ್ದು, ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ನೆನೆದು ಗುರುವಂದನಾ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ ಎಂದರು. ಶಾಲೆಯ ಇತಿಹಾಸವನ್ನು ವಿವರಿಸಿದ ಅವರು, 1934ರಲ್ಲಿ ಗುರುಮಠದಲ್ಲಿ ಶಾಲೆ ಆರಂಭವಾಗಿ, ಬಳಿಕ ಶಾಶ್ವತ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯನ್ನು ವಿವರಿಸಿದರು.

ಹಳೆಯ ವಿದ್ಯಾರ್ಥಿ ಶರಣಯ್ಯ ಹಿರೇಮಠ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗಿದ್ದು, ಕೇವಲ ಒಬ್ಬ ಖಾಯಂ ಶಿಕ್ಷಕರಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದ ತರಗತಿಗಳಿಗೆ ಅತಿಥಿ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಶೈಕ್ಷಣಿಕ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಶತಮಾನದ ಹೊಸ್ತಿಲಲ್ಲಿರುವ ಶಾಲೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದೇವಪ್ಪ ಸರ್ವಿ, ಪಿ.ವಿ. ಸರ್ವಿ, ಬಿ.ಎ. ಬನ್ನಿಗೋಳ, ಮುಖ್ಯ ಶಿಕ್ಷಕ ಎಲ್.ಎಸ್. ದೊಡ್ಡಮನಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಸ್. ಜೀರಗಿ, ಜೆ.ಎಚ್. ಮುಲ್ಲಾ, ವಿ. ಮನೋಹರ, ಸುರೇಖಾ ಕಬಲಶೆಟ್ಟಿ, ಡಿ.ಎಸ್. ಗಂಗನಗೌಡ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.