Home Blog Page 3

ವಿಜಯಪುರ| ಪಿಸ್ತೂಲ್‌ ತೋರಿಸಿ ಚಿನ್ನಾಭರಣದ ಮಳಿಗೆ ದರೋಡೆ; ಇಬ್ಬರು ಮುಸುಕುಧಾರಿಗಳಿಂದ ಕೃತ್ಯ!

0

ವಿಜಯಪುರ:- ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಭಯಂಕರ ದರೋಡೆ ನಡೆದಿದೆ.

ಮಂಕಿ ಕ್ಯಾಪ್ ಮತ್ತು ಹೆಲ್ಮೆಟ್ ಧರಿಸಿದ್ದ ಇಬ್ಬರು ಮುಸುಕುಧಾರಿಗಳು ಪಿಸ್ತೂಲ್ ತೋರಿಸಿ, ಮಹಾರುದ್ರ ಕಂಚಗಾರರಿಗೆ ಸೇರಿದ ಚಿನ್ನಾಭರಣ ಮತ್ತು ಮೊಬೈಲ್ ಅಂಗಡಿಯನ್ನು ಲೂಟಿ ಮಾಡಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ಸಮಯದಲ್ಲಿ ವಿಡಿಯೋ ಮಾಡಲು ಮುಂದಾದ ಆತ್ಮಲಿಂಗ ಹೂಗಾರ ಎಂಬ ಯುವಕನ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಗಾಯಗೊಂಡ ಯುವಕನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.

ಈ ದರೋಡೆ ದೃಶ್ಯಾವಳಿ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರು ಸುಮಾರು 200 ಗ್ರಾಂ ಚಿನ್ನ ಮತ್ತು 1 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆ ಸ್ಥಳಕ್ಕೆ ಎಸ್.ಪಿ. ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ದರೋಡೆ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

“ನಾನು ಜೆಡಿಎಸ್ ಬಿಟ್ಟರೆ ದ್ರೋಹನಾ?” – ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ, ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ

0

ಹಾಸನ:“ನಾನು ಜೆಡಿಎಸ್ ಬಿಟ್ಟಿದ್ದಕ್ಕೆ ದ್ರೋಹ ಅಂತೆ. ಆದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂತ ಹೇಳಿ ಮೋಸ ಮಾಡಿದ್ರಲ್ಲಾ – ಅದು ದ್ರೋಹ ಅಲ್ಲವಾ?” ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ವಿರುದ್ಧ ಸಮಾವೇಶ ಮಾಡಿ ಬೈದ್ರು. ಗೌಡರ ಮಕ್ಕಳು ಭಾಷಣ ಮಾಡಿದರು. ದೇವೇಗೌಡರ ಬಗ್ಗೆ ಗೌರವ ಇದೆ, ಅವರ ಬಗ್ಗೆ ಮಾತಾಡಲ್ಲ. ಆದರೆ ಕುಟುಂಬ ರಾಜಕಾರಣಕ್ಕೆ ಬೇಸತ್ತು ಪಕ್ಷ ಬಿಟ್ಟೆ” ಎಂದು ಬಹಿರಂಗ ಆರೋಪ ಮಾಡಿದರು.

ಇನ್ನೂ, “ನಾನು ಮಂತ್ರಿಯಾಗಲೇಬೇಕು ಅನ್ನೋ ಆಸೆ ಇದೆ. ನಿಮಗೆ ಆಸೆ ಇರಬಹುದು, ನನಗೂ ಇದೆ. ಅರಸೀಕೆರೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಹೋದೆ. ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ರೆ ತಪ್ಪಿಲ್ಲ ಅಂದ್ರೆ, ನಾನು ಕಾಂಗ್ರೆಸ್‌ಗೆ ಹೋದ್ರೆ ತಪ್ಪಾ?” ಎಂದು ಪ್ರಶ್ನಿಸಿದರು.

“ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಎಷ್ಟು ಪ್ರಚಾರ ಮಾಡಿದ್ರೂ 50 ಸಾವಿರ ಮತವೂ ಬರಲ್ಲ” ಎಂದು ಭವಿಷ್ಯ ನುಡಿದಿದ್ದು, ಈ ಹೇಳಿಕೆಗಳು ಜೆಡಿಎಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್: ವೇದಿಕೆ ಏರಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

0

ರಾಮನಗರ: ಚನ್ನಪಟ್ಟಣದ ಬೊಂಬೆನಾಡು ಉತ್ಸವ ಕ್ಷಣಾರ್ಧದಲ್ಲಿ ಅಭಿಮಾನಿಗಳ ಅಟ್ಟಹಾಸಕ್ಕೆ ವೇದಿಕೆಯಾಗಿಬಿಟ್ಟಿತು. ಬಿಗ್ ಬಾಸ್ ಸೀಸನ್ 12 ವಿಜೇತ ಗಿಲ್ಲಿ ನಟರಾಜ್ ವೇದಿಕೆಯಲ್ಲಿ ಮಾತಾಡುತ್ತಿದ್ದಾಗಲೇ ಅಭಿಮಾನಿಗಳು ನಿಯಂತ್ರಣ ಕಳೆದುಕೊಂಡು ವೇದಿಕೆ ಮೇಲೆ ಹಾರಿದರು. ಶೇಕ್ ಹ್ಯಾಂಡ್, ಸೆಲ್ಫಿ, ಘೋಷಣೆ… ಒಂದೇ ವೇಳೆ ಗದ್ದಲ ಆರಂಭವಾಯಿತು.

ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಪೊಲೀಸರು ತಕ್ಷಣ ಮಧ್ಯಪ್ರವೇಶ ಮಾಡಿ ಅಭಿಮಾನಿಗಳನ್ನು ವೇದಿಕೆಯಿಂದ ಕೆಳಗಿಳಿಸಿದರು. ಕೆಲಕಾಲ ಕಾರ್ಯಕ್ರಮವೇ ಸ್ಥಗಿತಗೊಂಡ ಸ್ಥಿತಿ ನಿರ್ಮಾಣವಾಯಿತು. ವೇದಿಕೆಯಲ್ಲಿ ಗಿಲ್ಲಿಯ ಭದ್ರತೆ ಕುರಿತಾಗಿ ಆತಂಕ ಮೂಡಿತ್ತು.

ಬಿಗ್ ಬಾಸ್ ಗೆಲುವಿನ ಬಳಿಕ ಗಿಲ್ಲಿಗೆ 50 ಲಕ್ಷ ರೂ. ನಗದು, ಕಾರು ಹಾಗೂ ಸುದೀಪ್ ಅವರಿಂದ 10 ಲಕ್ಷ ರೂ. ಬಹುಮಾನ ದೊರೆತಿದೆ. ಗೆಲುವಿನ ದಿನದಿಂದಲೇ ರಾಜ್ಯಾದ್ಯಂತ ಗಿಲ್ಲಿ ಕ್ರೇಜ್ ಜೋರಾಗಿದ್ದು, ಎಲ್ಲಿ ಹೋದರೂ ಅಭಿಮಾನಿಗಳ ಪ್ರವಾಹ ಕಾಣಿಸುತ್ತಿದೆ.

ಬೊಂಬೆನಾಡು ಗಂಗೋತ್ಸವವನ್ನು ಶಾಸಕ ಸಿ.ಪಿ ಯೋಗೇಶ್ವರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಸ್ಥಳೀಯ ಪ್ರತಿಭೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

ಚಿಕ್ಕಬಳ್ಳಾಪುರ | ವಿವಾಹಿತ ಪ್ರಿಯತಮೆ ಕೊಂದು ವಿವಾಹಿತ ಪ್ರಿಯಕರ ನೇಣಿಗೆ ಶರಣು

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗರಿಗಿರೆಡ್ಡಿ ಪಾಳ್ಯದಲ್ಲಿ ಪ್ರೇಮ ಸಂಬಂಧವೇ ರಕ್ತಪಾತದ ಅಂತ್ಯ ಕಂಡ ಭೀಕರ ಘಟನೆ ನಡೆದಿದೆ. ಮಾತಿಗೆ ಮಾತು ಬೆಳೆದು ನಡೆದ ಜಗಳದ ಪರಿಣಾಮವಾಗಿ ವಿವಾಹಿತ ಪ್ರಿಯತಮೆಯನ್ನು ಕತ್ತು ಕೊಯ್ದು ಕೊಂದ ಪ್ರಿಯಕರ, ಕೆಲವೇ ಗಂಟೆಗಳಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತಳಾದ 40 ವರ್ಷದ ಸಲ್ಮಾ, ತನ್ನ ಪ್ರಿಯಕರ 46 ವರ್ಷದ ಬಾಬಾಜಾನ್‌ನೊಂದಿಗೆ ಕಳೆದ ಆರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಘಟನೆ ನಡೆದ ದಿನ ಇಬ್ಬರ ಮಧ್ಯೆ ತೀವ್ರ ಜಗಳ ಉಂಟಾಗಿದ್ದು, ಆಕ್ರೋಶಗೊಂಡ ಬಾಬಾಜಾನ್ ಚಾಕುವಿನಿಂದ ಸಲ್ಮಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಅಲ್ಲಿಂದ ಪಲಾಯನ ಮಾಡಿದ ಆರೋಪಿ ಬಾಬಾಜಾನ್, ಚೇಳೂರಿನ ತನ್ನ ನಿವಾಸಕ್ಕೆ ತೆರಳಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಲ್ಮಾಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದರೆ, ಬಾಬಾಜಾನ್‌ಗೆ ಮೂರು ಮಕ್ಕಳು ಇದ್ದರೂ ಹೆಂಡತಿ ಹಾಗೂ ಮಕ್ಕಳು ಆತನನ್ನು ಬಿಟ್ಟು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡೂ ಮೃತದೇಹಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದು ಪ್ರೇಮ ಸಂಬಂಧದ ವೈಷಮ್ಯದಿಂದ ನಡೆದ ಡಬಲ್ ಡೆತ್ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ: ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಬಾಯ್ಬಿಟ್ಟ ಆರೋಪಿ!

0

ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸ್ ತನಿಖೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ.

ಮೃತ ಶರ್ಮಿಳಾಳ ನೆರೆಮನೆಯವನಾಗಿರುವ 18 ವರ್ಷದ ಆರೋಪಿ ಕರ್ನಲ್, ಮೊದಲಿಗೆ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿಹಾಕಿದ್ದ. ಆದರೆ ವಿಚಾರಣೆ ವೇಳೆ, ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

34 ವರ್ಷದ ಟೆಕ್ಕಿ ಶರ್ಮಿಳಾಳನ್ನು ಪ್ರೀತಿಸುತ್ತಿದ್ದ ಆರೋಪಿ, ಒಂದುವರೆ ತಿಂಗಳಿಂದ ಪ್ರತಿದಿನವೂ ಟೆರಸ್‌ನಿಂದ ಆಕೆಯ ಚಲನ-ವಲನಗಳನ್ನು ಗಮನಿಸುತ್ತಿದ್ದ. ಶರ್ಮಿಳಾ ಕೆಲಸಕ್ಕೆ ಹೋಗುವಾಗ ಹಾಗೂ ಕೆಲಸ ಮುಗಿಸಿ ವಾಪಸ್ ಬರುವ ವೇಳೆಯಲ್ಲೂ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜನವರಿ 3ರ ರಾತ್ರಿ ಆರೋಪಿ ಶರ್ಮಿಳಾ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಶರ್ಮಿಳಾ ಜೋರಾಗಿ ಕಿರುಚಿಕೊಂಡಾಗ, ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ. ಮಹಿಳೆ ಎಷ್ಟೇ ಬೇಡಿಕೊಂಡರೂ ಕನಿಕರವಿಲ್ಲದೆ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಮುಚ್ಚಿಹಾಕಲು ಟಿಶ್ಯು ಪೇಪರ್‌ನ್ನು ಹಾಸಿಗೆ ಮೇಲೆ ಇಟ್ಟು ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಾಲ್ಕನಿ ಡೋರ್ ಮೂಲಕ ಜಿಗಿದು ಆರೋಪಿ ಪರಾರಿಯಾಗಿದ್ದ. ಅಗ್ನಿ ಅವಘಡದಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸ್ ವಿಚಾರಣೆಯಲ್ಲಿ ಆತನ ಸತ್ಯ ಹೊರಬಿದ್ದಿದೆ. ಸದ್ಯ ಮೃತರ ಪೋಸ್ಟ್‌ಮಾರ್ಟಮ್ ವರದಿ ಹಾಗೂ ಕೆಲವು ಮೆಡಿಕಲ್ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತನಿಖೆ ಮುಂದುವರಿದಿದೆ.

400 ಕೋಟಿ ದರೋಡೆಗೆ ಬಿಗ್‌ ಟ್ವಿಸ್ಟ್: ರಾಬರಿಯಾದ ಹಣ ಆ ಪವರ್‌ಫುಲ್ ರಾಜಕಾರಣಿಗೆ ಸೇರಿದ್ದಾ?

0

ಬೆಳಗಾವಿ: ಚೋರ್ಲಾ ಘಾಟ್ ಬಳಿ ನಡೆದ 400 ಕೋಟಿ ರೂ. ರಾಬರಿ ಪ್ರಕರಣ ಇದೀಗ ಕೇವಲ ಕ್ರೈಂ ಕೇಸ್ ಆಗಿಯೇ ಉಳಿಯದೆ, ರಾಜಕೀಯ ತಲ್ಲಣಕ್ಕೆ ಕಾರಣವಾಗುವ ಮಟ್ಟಕ್ಕೆ ತಲುಪಿದೆ. ಪ್ರಕರಣದಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಸಂಪರ್ಕವಿದೆ ಎಂಬ ಶಂಕೆಗಳು ಹೆಚ್ಚಾಗುತ್ತಿದ್ದು, ತನಿಖೆಯ ದಿಕ್ಕು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಈ ನಡುವೆ ಮಹಾರಾಷ್ಟ್ರ ಪೊಲೀಸರು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಹೊರಿಸಿದ್ದಾರೆ. “ಘಟನೆ ನಡೆದ ಸ್ಥಳ ಯಾವ ರಾಜ್ಯ ವ್ಯಾಪ್ತಿಗೆ ಸೇರಿದೆ ಎಂಬುದೇ ಸ್ಪಷ್ಟವಾಗಿಲ್ಲ. ದೂರು ಬಂದರೆ ನಮ್ಮ ಪೊಲೀಸರು ತನಿಖೆ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಏನಾಗಿದೆ ಎಂಬುದು ಇನ್ನೂ ಗೊತ್ತಿಲ್ಲ” ಎಂದು ಅವರು ಹೇಳಿದ್ದಾರೆ. 400 ಕೋಟಿ ಕಾಂಗ್ರೆಸ್‌ಗೆ ಸೇರಿದೆ ಎಂಬ ಮಹಾರಾಷ್ಟ್ರ ಸಿಎಂ ಆರೋಪಕ್ಕೂ ಅವರು ಪ್ರಶ್ನೆ ಎತ್ತಿದ್ದಾರೆ.

ಇತ್ತ, ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹಣ ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ನಾಯಕರಿಗೆ ಮೊದಲೇ ಮಾಹಿತಿ ಹೇಗೆ ಗೊತ್ತಾಯಿತು? ಇದು ಲೀಗಲ್ ಹಣ ಆಗಲು ಸಾಧ್ಯವೇ ಇಲ್ಲ. ಸಂಪೂರ್ಣ ತನಿಖೆಯಾಗಬೇಕು. ತಪ್ಪಿತಸ್ಥರು ಹೊರಬರಬೇಕು” ಎಂದು ಆಗ್ರಹಿಸಿದ್ದಾರೆ.

ಪ್ರಕರಣ ಇದೀಗ ಕೇವಲ ದರೋಡೆ ಅಲ್ಲ, ಬಹುರಾಜ್ಯ ಹಣದ ಜಾಲವೊಂದರ ಸುಳಿವು ನೀಡುತ್ತಿರುವಂತೆ ಕಾಣಿಸುತ್ತಿದ್ದು, ಎಸ್‌ಐಟಿ ತನಿಖೆಯಿಂದ ಇನ್ನಷ್ಟು ಸ್ಫೋಟಕ ವಿಚಾರಗಳು ಹೊರಬೀಳುವ ಸಾಧ್ಯತೆ ಇದೆ.

ವಿಂಜೋ ಆನ್ಲೈನ್ ಗೇಮಿಂಗ್: 3,522 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಬಹಿರಂಗ – ಚಾರ್ಜ್ ಶೀಟ್ ಸಲ್ಲಿಸಿದ ED

0

ಬೆಂಗಳೂರು: ವಿಂಜೋ ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ವಿಂಜೋ ಪ್ರೈವೇಟ್ ಲಿಮಿಟೆಡ್, ಕಂಪನಿಯ ನಿರ್ದೇಶಕರಾದ ಪವನ್ ನಂದಾ, ಸೌಮ್ಯ ಸಿಂಗ್ ರಾಥೋಡ್, ಹಾಗೂ ವಿಂಜೋದ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್, ವಿಂಜೋ ಎಸ್ಜಿ ಪ್ರೈವೇಟ್ ಲಿಮಿಟೆಡ್ ಮತ್ತು ಜೋ ಪ್ರೈವೇಟ್ ಲಿಮಿಟೆಡ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಇ.ಡಿ ತನಿಖೆಯಲ್ಲಿ ಸುಮಾರು 3,522 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಬಹಿರಂಗವಾಗಿದೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿದ್ದವು. ಬಳಿಕ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ತನಿಖೆಯ ಭಾಗವಾಗಿ ವಿಂಜೋ ಕಂಪನಿಯ ಕಚೇರಿಗಳು, ನಿರ್ದೇಶಕರ ನಿವಾಸಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಫಿಕ್ಸೆಡ್ ಡೆಪಾಸಿಟ್ ಹಾಗೂ ಕ್ರಿಪ್ಟೋಕರೆನ್ಸಿ ವಾಲೆಟ್‌ಗಳು ಸೇರಿದಂತೆ ಸುಮಾರು 690 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ.

ವಿಂಜೋ ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ ನಡೆಸುತ್ತಿದ್ದು, ಸುಮಾರು 25 ಕೋಟಿ ಬಳಕೆದಾರರನ್ನು ಹೊಂದಿತ್ತು. 100ಕ್ಕೂ ಹೆಚ್ಚು ಆಟಗಳನ್ನು ನೀಡುತ್ತಿದ್ದ ಕಂಪನಿ, ಬಳಕೆದಾರರ ಬೆಟ್ಟಿಂಗ್ ಮೊತ್ತದಿಂದ ಕಮಿಷನ್ ಪಡೆಯುತ್ತಿತ್ತು. ಆರಂಭದಲ್ಲಿ ಬೋನಸ್ ನೀಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಆದರೆ ನಂತರ ತಂತ್ರಜ್ಞಾನದ ಮೂಲಕ ಬಳಕೆದಾರರನ್ನು ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರೂ. ವಂಚನೆ ನಡೆಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಭಾರತ ಸರ್ಕಾರ ರಿಯಲ್ ಮನಿ ಗೇಮ್ಸ್ ನಿಷೇಧಿಸಿದ ನಂತರವೂ, ಬಳಕೆದಾರರ 47.66 ಕೋಟಿ ರೂ. ಠೇವಣಿಯನ್ನು ವಿಂಜೋ ಹಿಂದಿರುಗಿಸಿಲ್ಲ. 2021–22ನೇ ಆರ್ಥಿಕ ವರ್ಷದಲ್ಲಿ 3,522.05 ಕೋಟಿ ರೂ. ವಂಚನೆಯಿಂದ ಗಳಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಕ್ರಮವಾಗಿ ಗಳಿಸಿದ ಹಣವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್ ಕಂಪನಿಗಳಿಗೆ ವರ್ಗಾಯಿಸಿದ್ದು, ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ಸುಮಾರು 55 ಮಿಲಿಯನ್ ಯುಎಸ್ ಡಾಲರ್ ಹಣ ವಿದೇಶಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ ಎಂದು ಇ.ಡಿ ಹೇಳಿದೆ.

400 ಕೋಟಿ ರೂ. ದರೋಡೆ ಪ್ರಕರಣ: ಮಹಾರಾಷ್ಟ್ರ ಪೊಲೀಸರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ – ಸತೀಶ್ ಜಾರಕಿಹೊಳಿ

0

ಬೆಳಗಾವಿ: ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಮ್ಮ ಎಸ್‌ಪಿ ಮಹಾರಾಷ್ಟ್ರಕ್ಕೆ ಪತ್ರ ಬರೆದಿದ್ದಾರೆ ಮತ್ತು ನಮ್ಮ ಪೊಲೀಸ್ ತಂಡ ಅಲ್ಲಿಗೆ ಭೇಟಿ ನೀಡಿದೆ. ಆದರೆ ಮಹಾರಾಷ್ಟ್ರ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಿದರೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆ ಅಕ್ಟೋಬರ್ 16ರಂದು ನಡೆದಿದೆ ಎಂದು ತಿಳಿಸಿದರು. ಘಟನೆ ನಡೆದಿರುವುದು ಚೋರ್ಲಾ ಘಾಟ್ ಗಡಿಭಾಗವಾಗಿದ್ದು, ಅದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಹೊಂದಿದೆ. ಘಟನೆ ನಡೆದ ಸ್ಥಳ ಯಾವ ರಾಜ್ಯದ ವ್ಯಾಪ್ತಿಗೆ ಸೇರಿದೆ ಎಂಬುದು ಮೊದಲು ಸ್ಪಷ್ಟವಾಗಬೇಕಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಅವರ ಜನರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ದೂರುದಾರನೇ ಬಂದು ಪ್ರಕರಣದಲ್ಲಿ ಪೊಲೀಸರ ಪಾತ್ರದ ಬಗ್ಗೆ ಹೇಳಬೇಕು. ಆಗ ಸತ್ಯ ಗೊತ್ತಾಗುತ್ತದೆ” ಎಂದು ಹೇಳಿದರು.

400 ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಆ ಹಣವನ್ನು ಎಣಿಸಿದವರು ಯಾರು? ಇಲ್ಲಿ ಕಾಂಗ್ರೆಸ್–ಬಿಜೆಪಿ ಎಂಬ ಪ್ರಶ್ನೆಯೇ ಇಲ್ಲ. ಎಲ್ಲ ಪಕ್ಷದವರೂ ಸೇರಿಯೇ ಇರುತ್ತಾರೆ. ಮೊದಲಿಗೆ ಘಟನೆ ಎಲ್ಲಿ ನಡೆದಿದೆ ಎಂಬುದೇ ಗೊತ್ತಿಲ್ಲ” ಎಂದು ತಿಳಿಸಿದರು.

ಗಣರಾಜ್ಯೋತ್ಸವ ದಿನದಂದೇ ತಪ್ಪಿದ ಭಾರಿ ದುರಂತ: BMTC ಬಸ್‌ʼಗೆ ಗುದ್ದಿದ ಪ್ಯಾಸೆಂಜರ್ ರೈಲು

0

ಬೆಂಗಳೂರು: ಗಣರಾಜ್ಯೋತ್ಸವದ ದಿನವೇ ಸಂಭವಿಸಬಹುದಾದ ಭಾರಿ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಕಾಡುಗೋಡಿ ಸಮೀಪದ ಸಾದರಮಂಗಲದಲ್ಲಿ ಬಿಎಂಟಿಸಿ ಬಸ್‌ಗೆ ಪ್ಯಾಸೆಂಜರ್ ರೈಲು ಗುದ್ದಿದ ಘಟನೆ ನಡೆದಿದೆ.

ಪ್ರಯಾಣಿಕರನ್ನು ಇಳಿಸಿದ ನಂತರ ಬಸ್ ಡಿಪೋಗೆ ತೆರಳುವ ಸಲುವಾಗಿ ರಿವರ್ಸ್ ಮಾಡುತ್ತಿದ್ದ ಸಂದರ್ಭದಲ್ಲೇ, ಹಿಂಬದಿಯಿಂದ ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಬಸ್‌ಗೆ ಗುದ್ದಿದೆ.

ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆದರೆ ರೈಲು ಗುದ್ದಿದ ತೀವ್ರತೆಗೆ ಬಿಎಂಟಿಸಿ ಬಸ್‌ನ ಹಿಂಭಾಗ ಸಂಪೂರ್ಣವಾಗಿ ಚಿದ್ರಚಿದ್ರವಾಗಿದೆ.

ಗುದ್ದಿದ ರೈಲು ಎಸ್‌ಎಂಬಿಟಿ – ಟಾಟಾನಗರ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಬಿಎಂಟಿಸಿ ಬಸ್ ಸಾದರಮಂಗಲದಲ್ಲಿ ಪ್ರಯಾಣಿಕರನ್ನು ಇಳಿಸಿ ಡಿಪೋ ನಂಬರ್ 51ಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಗಡಿಭಾಗದಲ್ಲಿ 400 ಕೋಟಿ ದರೋಡೆ ಪ್ರಕರಣ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದೇನು..?

0

ತುಮಕೂರು: ಬೆಳಗಾವಿ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಸುಮಾರು 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಪೊಲೀಸ್ ತನಿಖೆಯಿಂದ ಯಾವ ವರದಿ ಬರುತ್ತದೆಯೋ ಅದರ ನಂತರವೇ ಸಂಪೂರ್ಣ ಸತ್ಯ ತಿಳಿದುಬರಲಿದೆ ಎಂದು ಹೇಳಿದರು. ಪ್ರಸ್ತುತ ಪ್ರಕರಣದಲ್ಲಿ ಸಾಕಷ್ಟು ಗೊಂದಲಗಳಿದ್ದು, ನಮಗೂ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಆದರೆ ಆ ಮಾಹಿತಿಗಳಲ್ಲೂ ಕನ್‌ಫ್ಯೂಷನ್ ಇರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಡಿಜಿಪಿ ಅವರು ಮಹಾರಾಷ್ಟ್ರ ಡಿಜಿಪಿಯವರೊಂದಿಗೆ ಮಾತನಾಡಿದ್ದು, ಕೆಲವೊಂದು ಮಾಹಿತಿಗಳನ್ನು ಮಹಾರಾಷ್ಟ್ರ ಪೊಲೀಸರು ಹಂಚಿಕೊಂಡಿದ್ದಾರೆ. ಆದರೆ ತನಿಖೆಯನ್ನು SIT ಕೈಗೆತ್ತಿಕೊಂಡಿರುವುದರಿಂದ, ತನಿಖೆ ಪೂರ್ಣಗೊಂಡು ಹೊರಬರುವ ತನಕ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಇಲ್ಲಿಯವರೆಗೆ ಲಭ್ಯವಾದ ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಾವಿ ಪೊಲೀಸರು ಸೇರಿದಂತೆ ಯಾವುದೇ ಕರ್ನಾಟಕ ಪೊಲೀಸ್ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

error: Content is protected !!