ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ಬಳಿಕ ಈ ದರ ಇಳಿಕೆಯಾಗುತ್ತದೆಯೇ ಅಥವಾ ಮತ್ತಷ್ಟು ಏರಿಕೆಯಾಗುತ್ತದೆಯೇ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ತಮ್ಮ ಎಂಟನೇ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿಯ ದರಗಳ ಕುರಿತು ಮಾರುಕಟ್ಟೆಯಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ರಾಷ್ಟ್ರಗಳ ಮೇಲೆ ಸುಂಕ ಸಮರದ ಬೆದರಿಕೆ ಹಾಕುತ್ತಿರುವ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯೆಂದು ಪರಿಗಣಿಸುವ ಚಿನ್ನ ಮತ್ತು ಬೆಳ್ಳಿಯತ್ತ ಹೆಚ್ಚಿನ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಚಿನ್ನ–ಬೆಳ್ಳಿಯ ದರದಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ.
ಚಿನ್ನ ಹಾಗೂ ಬೆಳ್ಳಿ ದಿನೇದಿನೇ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಈ ಲೋಹಗಳ ಮೇಲಿರುವ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆ ಮತ್ತಷ್ಟು ತೀವ್ರವಾಗಿದೆ.
ಪ್ರಸ್ತುತ ಭಾರತಕ್ಕೆ ಆಮದಾಗುವ ಚಿನ್ನದ ಮೇಲೆ ಒಟ್ಟು 6% ಸುಂಕ ವಿಧಿಸಲಾಗಿದೆ. ಇದರಲ್ಲಿ 5% ಮೂಲ ಕಸ್ಟಮ್ಸ್ ಸುಂಕ, 1% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಸೇರಿದ್ದು, ಜೊತೆಗೆ ಮೌಲ್ಯದ ಮೇಲೆ 3% ಜಿಎಸ್‌ಟಿ ವಿಧಿಸಲಾಗುತ್ತಿದೆ.
ಗಮನಾರ್ಹವಾಗಿ, 2023ರವರೆಗೆ ಚಿನ್ನದ ಮೇಲೆ 15% ಸುಂಕ ಜಾರಿಯಲ್ಲಿತ್ತು. ಆದರೆ ಅಕ್ರಮ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ 2024ರ ಬಜೆಟ್‌ನಲ್ಲಿ ಸುಂಕವನ್ನು 6%ಕ್ಕೆ ಇಳಿಕೆ ಮಾಡಿತ್ತು.
ಈ ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಘೋಷಣೆ ಆಗದೇ ಇದ್ದರೆ, ಹಾಲಿ ತೆರಿಗೆ ವ್ಯವಸ್ಥೆಯೇ ಮುಂದುವರಿಯಲಿದೆ. ಆದರೆ ಸುಂಕ ಇಳಿಕೆಯಾದಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬರುವ ಸಾಧ್ಯತೆಯಿದೆ.
ಆದರೆ ಜಾಗತಿಕ ಮಟ್ಟದಲ್ಲಿ ನಡೆಯುವ ಆರ್ಥಿಕ ಬೆಳವಣಿಗೆಗಳು ಚಿನ್ನದ ದರದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಡಾಲರ್ ಬಲಿಷ್ಠವಾಗಿ ರೂಪಾಯಿ ಮೌಲ್ಯ ಕುಸಿದರೆ, ಸುಂಕ ಇಳಿಕೆಯಾದರೂ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಯಾವ ರೀತಿಯ ಘೋಷಣೆ ಮಾಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ.

