Home Blog Page 5

ಗ್ಯಾಸ್ʼನಿಂದ ತಲೆನೋವು ಕಾಡುತ್ತಿದೆಯೇ? ಈ ಮನೆಮದ್ದುಗಳಿಂದ ಸುಲಭವಾಗಿ ನಿವಾರಿಸಿಕೊಳ್ಳಿ

0

ಅನೇಕರು ಆಗಾಗ್ಗೆ ಗ್ಯಾಸ್, ಅಜೀರ್ಣ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆಯೊಂದಿಗೆ ತಲೆನೋವಿನಿಂದಲೂ ಬಳಲುತ್ತಾರೆ. ಜೀರ್ಣಕ್ರಿಯೆಯಲ್ಲಿ ಉಂಟಾಗುವ ಅಸ್ವಸ್ಥತೆಗಳು ಕೆಲವೊಮ್ಮೆ ತಲೆನೋವಿಗೂ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆಯ ಜೊತೆಗೆ ಕೆಲವು ಸರಳ ಮನೆಮದ್ದುಗಳೂ ಪರಿಹಾರ ನೀಡಬಹುದು.

ತಜ್ಞರ ಪ್ರಕಾರ, ಜಠರಗರುಳಿನ ಆರೋಗ್ಯ ಮತ್ತು ದೇಹದ ಒಟ್ಟಾರೆ ಆರೋಗ್ಯದ ನಡುವೆ ನಿಕಟ ಸಂಬಂಧವಿದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದರೆ ಅನಿಲ, ಅಜೀರ್ಣ, ಮಲಬದ್ಧತೆ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಈ ಸಮಸ್ಯೆಗಳ ಪರಿಣಾಮವಾಗಿ ತಲೆನೋವು, ವಾಕರಿಕೆ ಅಥವಾ ವಾಂತಿಯಂತಹ ಲಕ್ಷಣಗಳೂ ಕಂಡುಬರಬಹುದು.

ನಿಂಬೆ ನೀರು

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ನೆರವಾಗಬಹುದು. ನಿಂಬೆಯಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೊಟ್ಟೆಯ ಆಮ್ಲದ ಸಮತೋಲನ ಕಾಪಾಡಲು ಸಹಕಾರಿಯಾಗುತ್ತವೆ ಎಂದು ಹೇಳಲಾಗುತ್ತದೆ.

ಪುದೀನಾ ಚಹಾ

ಪುದೀನಾ ಎಲೆಗಳಿಂದ ತಯಾರಿಸಿದ ಚಹಾ ಜೀರ್ಣಕ್ರಿಯೆಗೆ ನೆರವಾಗುವುದರ ಜೊತೆಗೆ ಸ್ನಾಯುಗಳನ್ನು ಸಡಿಲಗೊಳಿಸಲು ಸಹಕಾರಿ. ಇದು ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುವ ಮೂಲಕ ಗ್ಯಾಸ್‌ನಿಂದ ಉಂಟಾಗುವ ತಲೆನೋವಿನ ತೀವ್ರತೆಯನ್ನು ತಗ್ಗಿಸಲು ನೆರವಾಗಬಹುದು.

ಮೆಗ್ನೀಸಿಯಮ್ ಇರುವ ಆಹಾರ

ಮೆಗ್ನೀಸಿಯಮ್ ದೇಹದ ಹಲವು ಕ್ರಿಯೆಗಳಿಗೆ ಅಗತ್ಯವಾದ ಖನಿಜವಾಗಿದೆ. ಬಾದಾಮಿ, ಕುಂಬಳಕಾಯಿ ಬೀಜ, ಹಸಿರು ಸೊಪ್ಪುಗಳು ಹಾಗೂ ಬೇಳೆಕಾಳುಗಳಂತಹ ಮೆಗ್ನೀಸಿಯಮ್ ಸಮೃದ್ಧ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಮಜ್ಜಿಗೆ

ಮಜ್ಜಿಗೆಯಲ್ಲಿ ಪ್ರೋಬಯಾಟಿಕ್‌ಗಳು ಮತ್ತು ಲ್ಯಾಕ್ಟಿಕ್ ಆಮ್ಲವಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಅಜೀರ್ಣ, ಗ್ಯಾಸ್ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಮಜ್ಜಿಗೆ ಉಪಯುಕ್ತ ಪಾನೀಯವೆಂದು ಪರಿಗಣಿಸಲಾಗುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳನ್ನು ಜಗಿದು ತಿನ್ನುವುದು ಅಥವಾ ತುಳಸಿ ಕಷಾಯ ಸೇವಿಸುವುದು ಜೀರ್ಣಕ್ರಿಯೆಗೆ ನೆರವಾಗಬಹುದು. ತುಳಸಿಯಲ್ಲಿರುವ ನೈಸರ್ಗಿಕ ಗುಣಗಳು ಹೊಟ್ಟೆಯ ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಸೌಮ್ಯವಾದ ಗ್ಯಾಸ್‌ನಿಂದ ಉಂಟಾಗುವ ಅಸ್ವಸ್ಥತೆಯನ್ನು ತಗ್ಗಿಸಲು ಸಹಕಾರಿಯಾಗಬಹುದು.

ಆಹಾರ ಪದ್ಧತಿಗೂ ಗಮನ ಕೊಡಿ

ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಗಳನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ಎಣ್ಣೆಯುಕ್ತ ಮತ್ತು ಅತಿಯಾದ ಖಾರ ಆಹಾರವನ್ನು ಮಿತವಾಗಿ ಸೇವಿಸುವುದು ಹಾಗೂ ನಿಯಮಿತ ವ್ಯಾಯಾಮ ಮಾಡುವುದು ಅಗತ್ಯ.

ಗೋಲ್ಡ್ ಪ್ರಿಯರಿಗೆ ಸಂತಸದ ವಿಚಾರ! ಚಿನ್ನ-ಬೆಳ್ಳಿ ಬೆಲೆ ಇಳಿಕೆ, ಇಂದಿನ ರೇಟ್ ಎಷ್ಟು?

0

ನವದೆಹಲಿ: ದೇಶೀಯ ಬಂಗಾರ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು ಬೆಲೆ ಇಳಿಕೆ ಕಂಡುಬಂದಿದ್ದು, ಗ್ರಾಹಕರು ದಿಲ್ ಖುಷ್ ಆಗಿದ್ದಾರೆ.

22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಮ್‌ಗೆ 13,850 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 15,110 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಇಂದು ಗ್ರಾಮ್​ಗೆ 5 ರೂ ತಗ್ಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,100 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,332 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ.

ಕಾನೂನು ಪದವಿ ವಿದ್ಯಾರ್ಥಿಗಳಿಗೆ ಹೈಕೋರ್ಟ್‌ ಸಿಹಿಸುದ್ದಿ: 2 ವಿಷಯ ಬದಲಾವಣೆ ಕುರಿತ KSLU ಸುತ್ತೋಲೆ ರದ್ದು

ಬೆಂಗಳೂರು: ಕಾನೂನು ಪದವಿ (ಎಲ್‌ಎಲ್‌ಬಿ) ವ್ಯಾಸಂಗ ಮಾಡುತ್ತಿರುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಹತ್ವದ ರಿಲೀಫ್ ನೀಡಿರುವ ಕರ್ನಾಟಕ ಹೈಕೋರ್ಟ್‌, ಪರಿಷ್ಕೃತ ಪಠ್ಯಕ್ರಮದ ಅನ್ವಯ ಹೊಸ ವಿಷಯಗಳನ್ನು ಕಡ್ಡಾಯಗೊಳಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದೆ.

ಈ ಮೂಲಕ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹಿಂದಿನ ಪಠ್ಯಕ್ರಮದಂತೆ ಕಾರ್ಮಿಕ ಕಾನೂನು–1 ಮತ್ತು ಕಾರ್ಮಿಕ ಕಾನೂನು–2 ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೆಎಸ್‌ಎಲ್‌ಯುಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ಮೂರು ವರ್ಷದ ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆನಂದ ಕರೆಗೋಣೆಪ್ಪರ ಹಾಗೂ ಆರತಿ ರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠ ಬುಧವಾರ ನಡೆಸಿತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುವಂತೆ ವಿಶ್ವವಿದ್ಯಾಲಯದ ಸುತ್ತೋಲೆಯನ್ನು ರದ್ದುಪಡಿಸಿ, ಅವರಿಗೆ ಹಿಂದಿನ ಪಠ್ಯಕ್ರಮದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಆದೇಶಿಸಿತು.

ಸುತ್ತೋಲೆಯಲ್ಲಿ ಏನಿತ್ತು?

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು 2026ರ ಏಪ್ರಿಲ್ 8ರಂದು ಸುತ್ತೋಲೆ ಹೊರಡಿಸಿ, 2025-26ನೇ ಶೈಕ್ಷಣಿಕ ವರ್ಷದಿಂದ ಎಲ್‌ಎಲ್‌ಬಿ ಕೋರ್ಸ್‌ನ ಪಠ್ಯಕ್ರಮವನ್ನು ಪರಿಷ್ಕರಿಸಿತ್ತು.

ಅದರಂತೆ, ಕಾರ್ಮಿಕ ಕಾನೂನು–1 ಮತ್ತು ಕಾರ್ಮಿಕ ಕಾನೂನು–2 ವಿಷಯಗಳ ಬದಲಿಗೆ ಕಾರ್ಮಿಕ ಹಾಗೂ ಕೈಗಾರಿಕಾ ಕಾನೂನು–1 ಮತ್ತು ಕಾರ್ಮಿಕ ಹಾಗೂ ಕೈಗಾರಿಕಾ ಕಾನೂನು–2 ವಿಷಯಗಳನ್ನು ಹೊಸದಾಗಿ ಅಳವಡಿಸಿ, ಹೊಸ ವಿದ್ಯಾರ್ಥಿಗಳ ಜೊತೆಗೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಅದನ್ನು ಕಡ್ಡಾಯಗೊಳಿಸಲಾಗಿತ್ತು.

ವಿದ್ಯಾರ್ಥಿಗಳ ಆಕ್ಷೇಪ ಏನು?

ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಗರಿಷ್ಠ ಐದು ವರ್ಷಗಳೊಳಗೆ ಪದವಿ ಪೂರ್ಣಗೊಳಿಸುವ ಅವಕಾಶ ಹೊಂದಿರುತ್ತಾರೆ. ಈ ಅವಧಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಬೇಕಾಗುತ್ತದೆ.

ಆದರೆ, ಈಗಾಗಲೇ ಅಧ್ಯಯನ ಮಾಡಿದ್ದ ವಿಷಯಗಳ ಬದಲಿಗೆ ಹೊಸ ವಿಷಯಗಳನ್ನು ಕಡ್ಡಾಯಗೊಳಿಸಿರುವುದು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಈ ವಾದವನ್ನು ಪರಿಗಣಿಸಿದ ಹೈಕೋರ್ಟ್‌, ಪುನರಾವರ್ತಿತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುತ್ತೋಲೆಯನ್ನು ರದ್ದುಪಡಿಸಿ, ಅವರಿಗೆ ಹಿಂದಿನ ಪಠ್ಯಕ್ರಮದ ಪ್ರಕಾರವೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೆಎಸ್‌ಎಲ್‌ಯುಗೆ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಶ್ರೀವತ್ಸ ವಾದ ಮಂಡಿಸಿದ್ದು, ವಕೀಲ ಶಶಾಂಕ್ ನ್ಯಾಯಾಲಯದಲ್ಲಿ ಹಾಜರಿದ್ದರು.

ಪ್ಯಾರಿಸ್‌ಗೆ ವಿಸಿಟ್ ಕೊಟ್ಟ ಮೋದಿ: ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಸಹಭಾಗಿತ್ವ ಅತ್ಯಗತ್ಯ ಎಂದ PM!

0

ಪ್ಯಾರಿಸ್: ಜಿ7 ಶೃಂಗಸಭೆ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಆಗಮಿಸಿದ್ದು, ಅವರಿಗೆ ಭಾರತೀಯ ಸಮುದಾಯದವರು ಅದ್ಧೂರಿ ಸ್ವಾಗತ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಅಭಿವೃದ್ಧಿಗೆ ಭಾರತ–ಫ್ರಾನ್ಸ್ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಎವಿಯನ್-ಲೆಸ್-ಬೈನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾರತ ಭಾಗವಹಿಸಿದ್ದು, ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಮೋದಿ ಪ್ಯಾರಿಸ್‌ಗೆ ತಲುಪಿದ್ದಾರೆ. ಪ್ಯಾರಿಸ್‌ನಲ್ಲಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಯುರೋಪಿನ ಪ್ರಮುಖ ತಂತ್ರಜ್ಞಾನ ಮೇಳ ‘ವಿವಾಟೆಕ್ 2026’ನಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಸಮೃದ್ಧಿಗೆ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಗ್ಲೋಬಲ್ ಸೌತ್‌ನ ಸಹಕಾರ ಅಗತ್ಯವಿದೆ ಎಂದು ಹೇಳಿದ್ದು, ಜಿ7 ರಾಷ್ಟ್ರಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ವ್ಯಾಪಾರ ಹಾಗೂ ಸಂಪರ್ಕವನ್ನು ಹೆಚ್ಚಿಸುವ ಹೊಸ ಚೌಕಟ್ಟಿನ ಅಗತ್ಯವನ್ನು ಒತ್ತಿಹೇಳಿದ್ದಾರೆ.

ಜಿ7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಭಾರತ ಮತ್ತು ಫ್ರಾನ್ಸ್ ನಡುವೆ ರಕ್ಷಣೆ, ಭದ್ರತೆ, ಬಾಹ್ಯಾಕಾಶ, ನಾಗರಿಕ ಪರಮಾಣು ಶಕ್ತಿ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಲವಾದ ಕಾರ್ಯತಂತ್ರದ ಸಹಕಾರ ಮುಂದುವರಿದಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಫ್ರಾನ್ಸ್‌ನಲ್ಲಿ ಸುಮಾರು 1.19 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ.

ವಿಧಾನಪರಿಷತ್ ಚುನಾವಣೆ! ಜೆಡಿಎಸ್‌ಗೆ ಶಾಕ್ ಕೊಟ್ರಾ ಜಿ.ಟಿ ದೇವೇಗೌಡ? ಅಡ್ಡ ಮತದಾನದ ಶಂಕೆ!

ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇಂದು ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.

ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌ಗೆ 4 ಸ್ಥಾನಗಳು ಬಹುತೇಕ ಖಚಿತವಾಗಿರುವಂತೆ ಕಂಡುಬಂದರೂ, ಐದನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಮುಂದುವರಿದಿದೆ.

ಈ ಮಧ್ಯೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರು ಮತದಾನ ಬಳಿಕ “ಆತ್ಮಸಾಕ್ಷಿಗೆ ಮತ ಹಾಕಿದ್ದೇನೆ, ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ” ಎಂದು ಹೇಳಿದರೂ, ಯಾರಿಗೆ ಮತ ನೀಡಿದರೆಂಬುದನ್ನು ಬಹಿರಂಗಪಡಿಸದಿರುವುದು ಕ್ರಾಸ್ ವೋಟಿಂಗ್ ಶಂಕೆಗೆ ಕಾರಣವಾಗಿದೆ.

ಮತದಾನ ವೇಳೆ ಜಿಟಿಡಿ ಏಜೆಂಟ್‌ಗಳಿಗೆ ಖಾಲಿ ಮತಪೆಟ್ಟಿಗೆ ತೋರಿಸಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ತಮ್ಮ ಮತ ಚಲಾಯಿಸಿದ್ದಾರೆ. ನಂತರ ಬಿಜೆಪಿ ಶಾಸಕರು ವೇದವ್ಯಾಸ ಕಾಮತ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಮತದಾನ ಮಾಡಿದ್ದಾರೆ.

ಜಿಟಿಡಿ ಕ್ರಾಸ್ ವೋಟ್ ಮಾಡಿದರೆಂಬ ಊಹಾಪೋಹಗಳಿಗೂ ರಾಜಕೀಯ ಕಾರಣಗಳು ಚರ್ಚೆಯಾಗುತ್ತಿವೆ. 2023ರ ಚುನಾವಣೆಯ ಬಳಿಕ ಜೆಡಿಎಸ್ ನಾಯಕರೊಂದಿಗೆ ಅಸಮಾಧಾನ, ಪಕ್ಷದ ಸಭೆಗಳಿಂದ ದೂರವಿರುವುದು, ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಪಕ್ಷದ ಕಾರ್ಯಕ್ರಮಗಳಲ್ಲಿ ಆಹ್ವಾನ ಕೊರತೆ ಸೇರಿದಂತೆ ಹಲವು ಅಸಮಾಧಾನಗಳು ಕಾರಣವಾಗಿರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಒಟ್ಟು 222 ಶಾಸಕರ ಸಂಖ್ಯಾಬಲದಲ್ಲಿ ಕಾಂಗ್ರೆಸ್ 135, ಬಿಜೆಪಿ 62, ಜೆಡಿಎಸ್ 18 ಸೇರಿದಂತೆ ಇತರರು ಇದ್ದು, 5ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಇರಿಸಿ ಕಟ್ಟುನಿಟ್ಟಿನ ನಿಗಾವಹಿಸಿರುವುದು ಗಮನಾರ್ಹವಾಗಿದೆ.

ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನಕ್ಕೆ ₹2.73 ಕೋಟಿ ಸಂಗ್ರಹ!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಮತ್ತೆ ಕೋಟಿ-ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದ್ದು, ಭಕ್ತರಿಂದ ಕೇವಲ 27 ದಿನಗಳಲ್ಲಿ ಭರ್ಜರಿ ಆದಾಯ ದಾಖಲಾಗಿದೆ.

ಮಲೆ ಮಹದೇಶ್ವರ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಹುಂಡಿ ಎಣಿಕೆ ವೇಳೆ ಒಟ್ಟು ₹2,73,57,105 ನಗದು ಸಂಗ್ರಹವಾಗಿದ್ದು, ಜೊತೆಗೆ 44 ಗ್ರಾಂ ಚಿನ್ನ ಹಾಗೂ 977 ಗ್ರಾಂ ಬೆಳ್ಳಿ ಕಾಣಿಕೆಯಾಗಿ ದೊರೆತಿದೆ. ವೀಕೆಂಡ್ ಮತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಈ ಆದಾಯಕ್ಕೆ ಕಾರಣವಾಗಿದೆ.

ಎಣಿಕೆ ವೇಳೆ ಏಳು ವಿದೇಶಿ ನೋಟುಗಳು ಹಾಗೂ ನಿಷೇಧಿತ ಹತ್ತು 2,000 ಮುಖಬೆಲೆಯ ಹಳೆಯ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯ ಪ್ರಾಧಿಕಾರದ ಸಿಬ್ಬಂದಿ ಸಮ್ಮುಖದಲ್ಲಿ ಶಾಂತಿಯುತವಾಗಿ ನಡೆದಿದೆ.

ಹಾಸ್ಟೆಲ್ ವಿದ್ಯಾರ್ಥಿಗಳೇ ಕಳ್ಳರು! ಮೂವರು ಅರೆಸ್ಟ್, 15 ಬೈಕ್‌ಗಳು ಜಪ್ತಿ

ರಾಯಚೂರು: ಹಾಸ್ಟೆಲ್‌ಗಳಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ಪದವಿ ವಿದ್ಯಾರ್ಥಿಗಳು ಸ್ಥಳೀಯ ಯುವಕನೊಂದಿಗೆ ಸೇರಿ ದೊಡ್ಡ ಮಟ್ಟದ ಬೈಕ್ ಕಳ್ಳತನ ಜಾಲ ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ರಾಯಚೂರು ನೇತಾಜಿನಗರ ಠಾಣೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 15 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತರನ್ನು ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸವಿದ್ದ ಬಿಎ ವಿದ್ಯಾರ್ಥಿ ಆಕಾಶ್, ಬಿಕಾಂ ವಿದ್ಯಾರ್ಥಿ ಕಾರ್ತಿಕ್ ಹಾಗೂ ಸ್ಥಳೀಯ ಯುವಕ ಆಂಜನೇಯ ಎಂದು ಗುರುತಿಸಲಾಗಿದೆ. ಆರೋಪಿಗಳು ರಾಯಚೂರು ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ತೆಲಂಗಾಣ ರಾಜ್ಯದಲ್ಲೂ ಬೈಕ್ ಕಳ್ಳತನ ನಡೆಸಿ ಮಾರಾಟ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಮೇ 25ರಂದು ನಾರಾಯಣ ಎಂಬ ವಿದ್ಯಾರ್ಥಿಯ ಪಲ್ಸರ್ ಬೈಕ್ ಕಳ್ಳತನವಾಗಿದ್ದು, ನಂತರ ಅದೇ ಬೈಕ್ ಮಾರ್ಪಾಡು ಮಾಡಿ ಮಾರಾಟಕ್ಕೆ ಇಟ್ಟಿರುವ ಜಾಹೀರಾತು ಆತನ ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಅದು ತನ್ನದೇ ಬೈಕ್ ಎಂಬುದು ಖಚಿತವಾಗಿದ್ದು, ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ಆಧರಿಸಿ ವಿಶೇಷ ತಂಡ ರಚಿಸಿದ ಪೊಲೀಸರು, ಬೈಕ್ ಮಾರಾಟದ ನೆಪದಲ್ಲಿ ಆರೋಪಿಗಳಿಗೆ ಬಲೆ ಬೀಸಿ ಬಂಧಿಸಿದ್ದಾರೆ. ತೀವ್ರ ವಿಚಾರಣೆಯಲ್ಲಿ ಆರೋಪಿಗಳು ಹಲವು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ! 5 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೋಗಿಹಳ್ಳಿಯಲ್ಲಿ ದೇವಸ್ಥಾನದ ಬಳಿ ತೆರಳುತ್ತಿದ್ದ ಬಾಲಕನ ಮೇಲೆ ಆರೇಳು ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಬಾಲಕನ ಕುತ್ತಿಗೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಾಹಿತಿಯ ಪ್ರಕಾರ, ಬಾಲಕ ಊರಿನ ಆಂಜನೇಯ ದೇವಸ್ಥಾನದ ಕಡೆ ತೆರಳುತ್ತಿದ್ದ ವೇಳೆ ಏಕಾಏಕಿ ಆರೇಳು ಬೀದಿ ನಾಯಿಗಳು ದಾಳಿ ನಡೆಸಿದ್ದು, ಕುತ್ತಿಗೆಗೆ ಕಚ್ಚಿದಿವೆ. ಈ ವೇಳೆ ಸಮೀಪದಲ್ಲೇ ವಾಕಿಂಗ್ ಮಾಡುತ್ತಿದ್ದವರು ತಕ್ಷಣ ಮಧ್ಯಪ್ರವೇಶಿಸಿ ಬಾಲಕನನ್ನು ನಾಯಿಗಳಿಂದ ರಕ್ಷಿಸಿದ್ದಾರೆ.

ದಾಳಿಯಿಂದ ಬಾಲಕನ ಕುತ್ತಿಗೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸ್ಥಳೀಯರು ಬೀದಿ ನಾಯಿಗಳ ಹೆಚ್ಚುತ್ತಿರುವ ಸಮಸ್ಯೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ದಾರುಣ ಘಟನೆ! ಕಾಂಪೌಂಡ್ ಗೋಡೆ ಕುಸಿದು 5 ವರ್ಷದ ಬಾಲಕ ಸಾವು

ಬೆಂಗಳೂರು: ರಾಜಧಾನಿಯ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆಯಲ್ಲಿ ಕಾಂಪೌಂಡ್ ಗೋಡೆ ಮತ್ತು ಕಬ್ಬಿಣದ ಗೇಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ 5 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತಪಟ್ಟ ಮಗುವನ್ನು ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ. ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಸವಿದ್ದು, ಅವರ ಪತ್ನಿ ಹಾಗೂ ಅಫೀನ್ ಕೇವಲ ಕೆಲ ದಿನಗಳ ಹಿಂದಷ್ಟೇ ಬಂಡಿಕೊಡಿಗೇಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ಅಫೀನ್ ತನ್ನ ನೆರೆಮನೆಯ ಮಕ್ಕಳೊಂದಿಗೆ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದ ವೇಳೆ, ಮಕ್ಕಳು ಗೇಟ್ ಅನ್ನು ಹಿಡಿದು ಜೀಕಾಡಿದ ಪರಿಣಾಮ ಗೋಡೆ ಗೇಟ್ ಸಮೇತ ಕುಸಿದು ಬಿದ್ದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯಿಂದ ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ, ತೀವ್ರ ಗಾಯಗೊಂಡ ಅಫೀನ್ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಮತ್ತೊಂದು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಬಾಗಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

.

ಪೋಕ್ಸೋ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ – ವಚನಾನಂದ ಸ್ವಾಮೀಜಿ ಭವಿಷ್ಯ ಇಂದು ನಿರ್ಧಾರ!

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಜಾಮೀನು ರದ್ದುಪಡಿಸುವ ಕುರಿತು ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸುವ ಸಾಧ್ಯತೆ ಇದೆ.

ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಈಗಾಗಲೇ 410 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, 63 ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ.

ಸ್ವಾಮೀಜಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಅವರು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಹೊರಗಿದ್ದರೆ ಸಾಕ್ಷ್ಯಗಳಿಗೆ ಬೆದರಿಕೆ ಹಾಗೂ ಪ್ರಕರಣ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸಂತ್ರಸ್ತರ ಪರವಾಗಿ ಬೆದರಿಕೆ ಕರೆಗಳ ಆಡಿಯೋ ಸೇರಿದಂತೆ ಪೆನ್‌ಡ್ರೈವ್ ದಾಖಲೆಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಇತ್ತ ಸ್ವಾಮೀಜಿ ಪರ ವಕೀಲರು ಇದು ಮಠದ ಆಂತರಿಕ ಜಟಾಪಟಿಯಿಂದ ಹುಟ್ಟಿದ ಷಡ್ಯಂತ್ರ ಎಂದು ವಾದ ಮಂಡಿಸಿದ್ದಾರೆ. ವಾದ–ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದು, ಇಂದು ಮಧ್ಯಾಹ್ನ ಹೊರಬರುವ ತೀರ್ಪು ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.

error: Content is protected !!