Home Blog Page 20

T20 World Cup: ಭಾರತ-ನಮೀಬಿಯಾ ಮುಖಾಮುಖಿ: ಪ್ಲೇಯಿಂಗ್ ಇಲೆವೆನ್‌ʼನಲ್ಲಿ 2 ಬದಲಾವಣೆ

0

ನವದೆಹಲಿ: ಟಿ20 ವಿಶ್ವಕಪ್‌ನ 18ನೇ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯಾ ತಂಡಗಳು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮೊದಲ ಪಂದ್ಯದಿಂದ ಹೊರಗುಳಿದಿದ್ದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ, ಮೊದಲ ಪಂದ್ಯದಲ್ಲಿ ಆಡಿದ್ದ ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರು ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟ್ ಬೀಸಲಿದ್ದು, ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಅವಕಾಶ ಪಡೆಯುವ ನಿರೀಕ್ಷೆಯಿದೆ. ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಆಗಮನದಿಂದ ಮೊಹಮ್ಮದ್ ಸಿರಾಜ್ ಹೊರಗುಳಿಯುವ ಸಾಧ್ಯತೆ ಇದೆ. ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆಯಿದೆ.

ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಇಶಾನ್ ಕಿಶನ್
  • ಸಂಜು ಸ್ಯಾಮ್ಸನ್
  • ತಿಲಕ್ ವರ್ಮಾ
  • ಸೂರ್ಯಕುಮಾರ್ ಯಾದವ್
  • ರಿಂಕು ಸಿಂಗ್
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ಅಕ್ಷರ್ ಪಟೇಲ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ವರುಣ್ ಚಕ್ರವರ್ತಿ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಬಾಕಿ ಬಿಲ್ ಬಿಡುಗಡೆ ಆಗದಿದ್ದರೆ ರಾಜ್ಯವೇ ಸ್ಥಗಿತ: ಸರ್ಕಾರಕ್ಕೆ ಗುತ್ತಿಗೆದಾರರ ಗಡುವು

0

ಮಂಡ್ಯ: ಬಾಕಿ ಬಿಲ್ ಬಿಡುಗಡೆ ಮಾಡದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಅಸಮಾಧಾನ ತೀವ್ರಗೊಂಡಿದೆ. ಸಾವಿರಾರು ಕೋಟಿ ರೂಪಾಯಿ ಪಾವತಿಗಳು ಬಾಕಿ ಉಳಿದಿರುವುದರಿಂದ ಮಾರ್ಚ್ 5ರಂದು ಬೃಹತ್ ಹೋರಾಟ ನಡೆಸಲು ಗುತ್ತಿಗೆದಾರರ ಸಂಘ ತೀರ್ಮಾನಿಸಿದೆ.

ಮಂಡ್ಯದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ನೇತೃತ್ವದಲ್ಲಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಯಿತು.

ರಾಜ್ಯದಲ್ಲಿ ಒಟ್ಟು 37 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿದಿದೆ ಎಂದು ಸಂಘ ಆರೋಪಿಸಿದೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರವೇ 950 ಕೋಟಿ ರೂ. ಪಾವತಿ ಬಾಕಿಯಾಗಿದೆ. “ಸಾಲ ಪಡೆದು ಕಾಮಗಾರಿ ಮಾಡಿದ್ದೇವೆ. ಆದರೆ ಸರ್ಕಾರದಿಂದ ಹಣ ಸಿಗದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಮಂಜುನಾಥ್ ಹೇಳಿದರು.

ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದನೆ ಇಲ್ಲ ಎಂದು ಆರೋಪಿಸಿದ ಅವರು, “ಕಮಿಷನ್ ವ್ಯವಸ್ಥೆ ಹೆಚ್ಚಾಗಿದೆ. ನಮ್ಮನ್ನೇ ಕಡೆಗಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ರಾಜ್ಯ ಗುತ್ತಿಗೆದಾರರ ಪ್ರತಿನಿಧಿ ಸಂಘವು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ 33 ಸಾವಿರ ಕೋಟಿ ರೂ. ಪಾವತಿಗಳು ಬಾಕಿ ಇರುವುದಾಗಿ ಗಮನ ಸೆಳೆದಿತ್ತು.

ಮಾರ್ಚ್ 5ರಂದು ನಡೆಯಲಿರುವ ಹೋರಾಟ ಸರ್ಕಾರಕ್ಕೆ ದೊಡ್ಡ ತಲೆನೋವಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಮತ್ತೆ ದುರಂತ: ತೆರೆದ ಮ್ಯಾನ್ಹೋಲ್ʼಗೆ ಬಿದ್ದು ಕಾರ್ಮಿಕ ಸಾವು!

0

ನವದೆಹಲಿ: ಗುಂಡಿಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಐದು ದಿನಗಳ ಬಳಿಕ, ತೆರೆದ ಮ್ಯಾನ್ಹೋಲ್ಗೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 32ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಬಿರ್ಜು ಕುಮಾರ್ ರೈ  ಒಳಚರಂಡಿ ಮ್ಯಾನ್ಹೋಲ್ಗೆ ಬಿದ್ದು ಮೃತಪಟ್ಟಿದ್ದಾರೆ.

ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಸಮೀಪ ಈ ಘಟನೆ ನಡೆದಿದೆ. ಬಿರ್ಜು ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ತೆರೆದಿದ್ದ ಒಳಚರಂಡಿ ಮ್ಯಾನ್ಹೋಲ್ಗೆ ಬಿದ್ದಿದ್ದಾರೆ. ಅವನ ಮುಂದೆ ನಡೆದುಕೊಂಡು ಹೋಗುತ್ತಿದ್ದ ಸ್ನೇಹಿತನಿಗೆ ಈ ಘಟನೆ ನಡೆದಿರುವುದು ತಕ್ಷಣ ಗಮನಕ್ಕೆ ಬಂದಿರಲಿಲ್ಲ. ಮಂಗಳವಾರವಷ್ಟೇ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನೆರೆಯ ನೋಯ್ಡಾದಲ್ಲೂ ಸಮಾನ ಘಟನೆ ನಡೆದಿತ್ತು. ಕಳೆದ ತಿಂಗಳು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟ ಮಂಜಿನ ನಡುವಲ್ಲಿ ಕಾರು ಚಾಲನೆ ಮಾಡುವ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಸೆಕ್ಟರ್ 150ರಲ್ಲಿ ತಮ್ಮ ಅಪಾರ್ಟ್‌ಮೆಂಟ್ ಕಟ್ಟಡದತ್ತ ತಿರುವು ಪಡೆಯುವಾಗ ರಸ್ತೆ ಹಾಗೂ ಹೊಂಡದ ನಡುವೆ ಇರುವ ಚರಂಡಿಯ ಬಳಿ ಸುರಕ್ಷತಾ ತಡೆಗೋಡೆಗಳಿದ್ದರೂ ದುರ್ಘಟನೆ ಸಂಭವಿಸಿತ್ತು.

ಅಮೆರಿಕಾ ನಮ್ಮನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ: ಪಾಕ್ ರಕ್ಷಣಾ ಸಚಿವ

0

ಇಸ್ಲಾಮಾಬಾದ್: ಅಮೆರಿಕಾ ಉತ್ತಮ ಸಂಬಂಧ ಹೊಂದಲು ಪಾಕಿಸ್ತಾನ ನಾಯಕರು ನಡೆಸುತ್ತಿರುವ ಪ್ರಯತ್ನಗಳ ನಡುವೆಯೇ ಪಾಕ್ ರಕ್ಷಣಾ ಸಚಿವ ಖವಾಜ ಆಸೀಫ್ ಅಮೆರಿಕಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಪಾಕಿಸ್ತಾನವನ್ನು “ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ” ಎಂದು ಅವರು ಸ್ವತಃ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜ ಆಸೀಫ್, 1999ರ ನಂತರ ಅಮೆರಿಕ ಮರು ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರ ದೇಶದ ದೊಡ್ಡ ತಪ್ಪಾಗಿತ್ತು ಎಂದು ಹೇಳಿದ್ದಾರೆ. ವಿಶೇಷವಾಗಿ ಅಫ್ಘಾನಿಸ್ತಾನ ಯುದ್ಧದ ಬಳಿಕ ಅಮೆರಿಕ ಬೆಳೆಸಿದ ಸಂಬಂಧಗಳು ಪಾಕಿಸ್ತಾನಕ್ಕೆ ಶಾಶ್ವತ ಹಾನಿ ಉಂಟುಮಾಡಿವೆ ಎಂದು  ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾ ತನ್ನ ಸ್ವಾರ್ಥದ ಲಾಭಕ್ಕಾಗಿ ಮಾತ್ರ ಇತರ ದೇಶಗಳಿಗೆ ಮಹತ್ವ ನೀಡುತ್ತದೆ ಎಂಬುದು ಜಗತ್ತಿಗೆ ತಿಳಿದ ಸಂಗತಿ ಎಂದು ಪರೋಕ್ಷವಾಗಿ ಟೀಕಿಸಿದರು. ಪಾಕಿಸ್ತಾನವು ಅಮೆರಿಕಾದೊಂದಿಗೆ ಕೈಜೋಡಿಸಿದ ಪರಿಣಾಮ ದೇಶವು ರಾಜಕೀಯ, ಆರ್ಥಿಕ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಗಂಭೀರ ಪರಿಣಾಮಗಳನ್ನು ಅನುಭವಿಸಿದೆ ಎಂದರು.

ಬಿಜೆಪಿ ನಾಯಕನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ

0

ಬೆಂಗಳೂರು: ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲು ಸರ್ಕಾರ ಆದೇಶಿಸಿದ್ದ ಬೆನ್ನಲ್ಲೇ ವಿವಾದ ಉಂಟಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ ಅಧ್ಯಕ್ಷ ಭೂಕಾಂತ್ ಅವರಿಗೆ ಸಚಿವ ಸಂಪುಟದ ಸ್ಥಾನಮಾನ ನೀಡಿರುವುದಕ್ಕೆ ಕಾಂಗ್ರೆಸ್ ಪಾಳಯದಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.

ಬಿಜೆಪಿ ನಾಯಕನಾಗಿರುವ ಭೂಕಾಂತ್ ಅವರಿಗೆ ಕಾಂಗ್ರೆಸ್ ಸರ್ಕಾರದಿಂದ ಸಚಿವ ಸ್ಥಾನಮಾನ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ಈ ಅಸಮಾಧಾನದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಭೂಕಾಂತ್‌ಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ಹಿಂಪಡೆದು ಆದೇಶ ಹೊರಡಿಸಿದೆ.

ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವುದು ವಿವಾದಕ್ಕೆ ಮತ್ತಷ್ಟು ಇಂಧನ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿರುವುದು ಯಾಕೆ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಎತ್ತಿದ್ದರು.

ಇಲ್ಲಿಯವರೆಗೆ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ದೊರೆಯುತ್ತಿದ್ದ ಸಚಿವ ಸ್ಥಾನಮಾನವನ್ನು ಎಲ್ಲಾ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೂ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಆದರೆ ಈ ನಿರ್ಧಾರಕ್ಕೆ ಕಾಂಗ್ರೆಸ್ ಒಳಗೇ ವಿರೋಧ ವ್ಯಕ್ತವಾಗಿತ್ತು.

ಮಾಜಿ ಸಂಸದ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. “ನಮ್ಮದು ಸರ್ವಧರ್ಮ ಪಾಲಿಸಿಯಾಗಿದೆ. ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ.

ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ” ಎಂದು ಲೇವಡಿ ಮಾಡಿದ್ದರು. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಭೂಕಾಂತ್‌ಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ಹಿಂಪಡೆಯುವ ತೀರ್ಮಾನ ಕೈಗೊಂಡಿದೆ.

ಬೀದರ್- ನವೋದಯ ಹಾಸ್ಟೆಲ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

0

ಬೀದರ್: ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಮಂಠಾಳ ಗ್ರಾಮದ ಶರತ್ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸ್ಥಳದಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ “ಮಮ್ಮಿ Sorry… ಅಪ್ಪ I Love You… Keep Smile Forever” ಎಂದು ಬರೆದಿರುವುದು ಕಂಡುಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒತ್ತಡವೇ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿಯ ಸಾವಿನ ಹಿನ್ನೆಲೆಯಲ್ಲಿ ಕುಟುಂಬಸ್ಥರ ರೋದನ ವಸತಿ ಶಾಲೆಯ ವಾತಾವರಣವನ್ನು ಶೋಕಮಯಗೊಳಿಸಿದೆ. ಈ ಘಟನೆ ಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಶಾಲಾ ಬಸ್ ಹರಿದು 2 ಮತ್ತು 4 ವರ್ಷದ ಇಬ್ಬರು ಮಕ್ಕಳ ಸಾವು

0

ಬೆಂಗಳೂರು: ರಾಜಧಾನಿಯಲ್ಲಿ ಮನಕಲಕುವ ರಸ್ತೆ ದುರಂತ ಸಂಭವಿಸಿದ್ದು, ಶಾಲಾ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಸಮೀಪ ನಡೆದಿದೆ.

ಮೃತ ಮಕ್ಕಳನ್ನು ವರ್ಷಾ (2) ಮತ್ತು ಭಾನು (4) ಎಂದು ಗುರುತಿಸಲಾಗಿದೆ. ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್ ವಿಭಾಗದಲ್ಲಿ ಕಾನ್ಸ್ಟೇಬಲ್ ಆಗಿದ್ದು, ತಮ್ಮ ಮಗಳು ವರ್ಷಾ ಹಾಗೂ ಅಣ್ಣನ ಮಗಳು ಭಾನು ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಾಲು ತರಲು ತೆರಳುತ್ತಿದ್ದರು.

ಇದೇ ವೇಳೆ ಸ್ಕೂಲ್ ಟೈಮ್ ಆಗಿದ್ದರಿಂದ ಖಾಸಗಿ ಶಾಲೆಯ ಬಸ್ ಮಕ್ಕಳ ಪಿಕಪ್‌ಗೆ ತೆರಳುತ್ತಿತ್ತು. ಬಸ್ ಬರುತ್ತಿರುವುದನ್ನು ಗಮನಿಸಿದ ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರೆಂದು ತಿಳಿದುಬಂದಿದೆ. ಆದರೆ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯ ಥಣಿಸಂದ್ರ ಬಳಿ ಬಸ್ ಯೂ-ಟರ್ನ್ ತೆಗೆದುಕೊಳ್ಳುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಇಬ್ಬರು ಮಕ್ಕಳು ಬೈಕ್‌ನಿಂದ ಕೆಳಗೆ ಬಿದ್ದು, ಬಸ್‌ನ ಹಿಂಬದಿ ಚಕ್ರ ಅವರ ಮೇಲೆ ಹರಿದಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ಕುರಿತು ಉತ್ತರ ವಿಭಾಗದ ಸಂಚಾರ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯ ಸರ್ಕಾರ ಕನ್ನಡ ಶಾಲೆ ಮುಚ್ಚುತ್ತಿರುವುದು ಖಂಡನೀಯ: ಬಸವರಾಜ ಬೊಮ್ಮಾಯಿ

0

ನವದೆಹಲಿ: ಕರ್ನಾಟಕ ಸರ್ಕಾರ ಈಗಾಗಲೇ 638 ಕನ್ನಡ ಶಾಲೆಗಳನ್ನು ಮುಚ್ಚಿದೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಅವರು ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ.

ಇದು ಕನ್ನಡ ವಿರೋಧಿ ಮತ್ತು ಕನ್ನಡ ಶಾಲೆಗಳ ವಿರೋಧಿಯಾಗಿದೆ. ಇದನ್ನು ಖಂಡಿಸುತ್ತೇನೆ ಹಾಗೂ ಕನ್ನಡ ಶಾಲೆಗಳನ್ನು ಪುನಾರಾರಂಭಿಸುವಂತೆ ಆಗ್ರಹಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನವ ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಲೋಕಸಭೆ ಸ್ಪೀಕರ್ ವಿರುದ್ದ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮೇಲಿಂದ ಮೇಲೆ ಚುನಾವಣೆಯಲ್ಲಿ ಸೋಲುತ್ತಿರುವುದರಿಂದ ಹತಾಶರಾಗಿದ್ದಾರೆ. ಅವರ ನಾಯಕ ಹತಾಶರಾಗಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಅವರು ನಗರ ನಕ್ಷಲರಂತೆ ವರ್ತಿಸುತ್ತಿದ್ದಾರೆ.

ಬೆಂಚ್ ಗಳ ಮೇಲೆ ನಿಲ್ಲುವುದು, ಸ್ಪೀಕರ್ ಮೇಲೆ ದಾಳಿ ಮಾಡುವುದು ಇದು ಮಿತಿ ಮೀರಿದೆ. ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಮಂತ್ರಿಯ ಆಸನದವರೆಗೆ ಬಂದು ಅವರು ಬರುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಸಂಸತ್ತಿನ ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ಹೇಳಿದರು.

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕಲಾಪವನ್ನು ಸುಗಮವಾಗಿ ನಡೆಸಲು ಬಿಡುತ್ತಾರೆ ಎನ್ನುವ ನಂಬಿಕೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಏನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ಅವರು ಜನರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ. ಅವರು ತೊಂದರೆ ಕೊಡುವುದನ್ನೇ ಅಜಂಡಾ ಮಾಡಿಕೊಂಡಿದ್ದಾರೆ. ಬಹುತೇಕ ಅದೇ ಆಗಬಹುದು ಎಂದು ಹೇಳಿದರು.

ಆಯವ್ಯಯದ ದಿನಾಂಕ ಸಧ್ಯದಲ್ಲಿಯೇ ನಿಗದಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯ ದ ದಿನಾಂಕವನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಂ ಎಲ್ ಎ ಗಳು ಮತ್ತು ಎಂಎಲ್ ಸಿ ಗಳು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದರು.

ಪತ್ರಕರ್ತರು ನಾಯಕತ್ವ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಪತ್ರಕರ್ತರು ಪದೇ ಪದೇ ಒಂದೇ ವಿಷಯವನ್ನು ಕೇಳಬಾರದು. ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಅದರಂತೆ ನಾನು ಮತ್ತು ಉಪಮುಖ್ಯಮಂತ್ರಿಗಳಿಬ್ಬರೂ ನಡೆದುಕೊಳ್ಳುತ್ತೇವೆ ಎಂದರು.

ಮದುವೆಯಾದ 6ನೇ ದಿನವೇ ವರನಿಗೆ ಶಾಕ್..! ಮೊದಲು ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ಮರುಮದುವೆ ಆರೋಪ – ಬ್ರೋಕರ್‌ಗಳ ವಿರುದ್ಧವೂ ದೂರು

0

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮದುವೆಯಾದ ಕೇವಲ ಆರು ದಿನಗಳಲ್ಲೇ ವರನ ಜೀವನದಲ್ಲಿ ಅಚ್ಚರಿ ತಿರುವು ಕಂಡ ಘಟನೆ ಬೆಳಕಿಗೆ ಬಂದಿದೆ. ಮದುವೆಗೆ ಮುನ್ನ ನೀಡಿದ ಮಾಹಿತಿ ಸುಳ್ಳು ಎಂದು ಆರೋಪಿಸಿ ವರ ರವಿ ಜವಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಅವರು ಫೆಬ್ರವರಿ 06ರಂದು ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗಿರಿಯಾಪುರ ಗ್ರಾಮದ ರೇಖಾ ಕೆ ಅವರೊಂದಿಗೆ ಮದುವೆಯಾಗಿದ್ದರು. ದಂಜನ್ ನಾಯಕ್ ಹಾಗೂ ಶಾರದಮ್ಮ ಎಂಬವರು ಬ್ರೋಕರ್‌ಗಳಾಗಿ ಮಧ್ಯವರ್ತಿತ್ವ ವಹಿಸಿದ್ದರೆಂದು ತಿಳಿದುಬಂದಿದೆ.

ಮದುವೆಗೂ ಮುನ್ನ ರೇಖಾ ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಆದರೆ ಮದುವೆಯ ನಂತರ, ಆ ಇಬ್ಬರು ಮಕ್ಕಳು ರೇಖಾ ಅವರ ಹಿಂದಿನ ಮದುವೆಯಿಂದ ಜನಿಸಿದ್ದವರು ಎಂಬ ವಿಚಾರ ರವಿಗೆ ತಿಳಿದು ಬಂದಿದೆ ಎಂದು ಆರೋಪಿಸಲಾಗಿದೆ.

ಈ ಬೆಳವಣಿಗೆ ರವಿಗೆ ತೀವ್ರ ಆಘಾತ ತಂದಿದ್ದು, ತನ್ನನ್ನು ಉದ್ದೇಶಪೂರ್ವಕವಾಗಿ ವಂಚಿಸಲಾಗಿದೆ ಎಂದು ಆರೋಪಿಸಿ ರೇಖಾ ಹಾಗೂ ಮಧ್ಯವರ್ತಿಗಳ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹಲಗೇರಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮದುವೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ. ಮದುವೆ ಸಂಬಂಧಗಳಲ್ಲಿ ಪಾರದರ್ಶಕತೆ ಮತ್ತು ಪೂರ್ವ ಪರಿಶೀಲನೆಯ ಅಗತ್ಯತೆ ಈ ಘಟನೆ ಮತ್ತೊಮ್ಮೆ ಹೀಗೇ ಸದ್ದು ಮಾಡಿಸಿದೆ.

error: Content is protected !!