Home Blog Page 21

ಕೂಡ್ಲಿಗಿಯಲ್ಲಿ ಪೊಲೀಸರ ‘ಮೆಗಾ ಆಪರೇಷನ್ʼ: 4 ಕಳ್ಳತನ ಕೇಸ್ ಭೇದಿಸಿ ಲಕ್ಷಾಂತರ ಮೌಲ್ಯದ ಚಿನ್ನ ವಶ!

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಉಪವಿಭಾಗದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳಿಗೆ ಕೊನೆಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಮತ್ತು ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ನೀಡಿದ ಮಾಹಿತಿಯಂತೆ, ವಶಪಡಿಸಿಕೊಂಡಿರುವ ಆಭರಣಗಳ ಒಟ್ಟು ಮೌಲ್ಯ ಸುಮಾರು 14.06 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಹಗರಿಬೊಮ್ಮನಹಳ್ಳಿ ಠಾಣೆಯ ಎರಡು ಕೇಸ್‌ಗಳು, ತಂಬ್ರಹಳ್ಳಿ ಠಾಣೆಯ 23/2026 ಮತ್ತು ಮರಿಯಮ್ಮನಹಳ್ಳಿ ಠಾಣೆಯ 62/2026 ಪ್ರಕರಣಗಳು ಈ ಕಾರ್ಯಾಚರಣೆಯಿಂದ ಭೇದಗೊಂಡಿವೆ. ಪ್ರಕರಣಗಳ ತನಿಖೆ ವೇಳೆ ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇಟ್ಟು ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ವಿವಿಧ ಪೊಲೀಸ್ ತಂಡಗಳು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಪೊಲೀಸ್ ಇಲಾಖೆಯ ಈ ವೇಗದ ಕಾರ್ಯಾಚರಣೆ ಜಿಲ್ಲೆಯ ಜನರಲ್ಲಿ ಭದ್ರತೆಯ ಭರವಸೆ ಮೂಡಿಸಿದೆ.

ಪ್ರತಿಕೂಲ ಸಾಕ್ಷ್ಯ ನೀಡಿದ ಸಂತ್ರಸ್ತೆಗೆ ಪರಿಹಾರ ಇಲ್ಲ; ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷ್ಯ ನೀಡದೇ ಪ್ರತಿಕೂಲ ಹೇಳಿಕೆ ನೀಡುವ ಸಂತ್ರಸ್ತರಿಗೆ ಸರ್ಕಾರದ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರತಿಕೂಲ ಸಾಕ್ಷ್ಯ ನೀಡಿದ ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆಯಲ್ಲಿ ಸಂತ್ರಸ್ತೆ ನೀಡಿದ ಪ್ರತಿಕೂಲ ಹೇಳಿಕೆಯ ಆಧಾರದ ಮೇಲೆ ಆರೋಪಿ ಖುಲಾಸೆಯಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ಬೆಂಬಲ ನೀಡದೇ ವ್ಯತಿರಿಕ್ತ ಸಾಕ್ಷ್ಯ ನೀಡಿದ ಸಂತ್ರಸ್ತೆಗೆ ಪರಿಹಾರ ನೀಡಲು ವಿಚಾರಣಾ ನ್ಯಾಯಾಧೀಶರಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾಗಿರುತ್ತಾರೆ. ಅವರು ಕೇವಲ ಶಿಫಾರಸು ಕಳುಹಿಸುವ ಅಂಚೆ ಕಚೇರಿಯಂತೆ ಕಾರ್ಯನಿರ್ವಹಿಸದೆ, ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಹಾರ ಶಿಫಾರಸು ಮಾಡಬೇಕು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಲವು ಬಾರಿ ಸುತ್ತೋಲೆಗಳ ಮೂಲಕ ಸೂಚಿಸಿದೆ ಎಂದು ಪೀಠ ಉಲ್ಲೇಖಿಸಿದೆ.

ಆದರೂ, ಈ ಪ್ರಕರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಸಮರ್ಪಕ ಪರಿಶೀಲನೆ ನಡೆಸದೇ ಪರಿಹಾರ ಶಿಫಾರಸು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೀಗಾಗಿ, ಸಂತ್ರಸ್ತರ ಪರಿಹಾರ ಯೋಜನೆಯ ನಿಯಮಾವಳಿಗಳ ಪ್ರಕಾರ ಈ ಪ್ರಕರಣದ ಸಂತ್ರಸ್ತೆ ಪರಿಹಾರಕ್ಕೆ ಅರ್ಹಳಲ್ಲ ಎಂದು ತಿಳಿಸಿದ ಪೀಠ, ವಿಚಾರಣಾ ನ್ಯಾಯಾಲಯದ ಪರಿಹಾರ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:

ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಸಂತ್ರಸ್ತೆ ಸಿಆರ್‌ಪಿಸಿ ಸೆಕ್ಷನ್ 161 ಅಡಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಗೂ ಸೆಕ್ಷನ್ 164 ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಗಳಲ್ಲಿ ಆರೋಪದ ಬಗ್ಗೆ ವಿವರಿಸಿದ್ದರು.

ಆದರೆ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ಸಾಕ್ಷ್ಯ ನೀಡಿದ್ದರು. ಇದರ ಪರಿಣಾಮವಾಗಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಇದಾದ ಬಳಿಕ, ಈ ಅಂಶವನ್ನು ಪರಿಗಣಿಸದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದರು.

ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಮಹತ್ವದ ಸ್ಪಷ್ಟನೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿಗೆ ‘ಡಿಜಿಟಲ್ ಲಾಕ್’: ಕೈದಿಗಳ ಪ್ರತಿಯೊಂದು ಹೆಜ್ಜೆಯ ಮೇಲೂ ಈಗ ಬಯೋಮೆಟ್ರಿಕ್ ಕಣ್ಗಾವಲು!

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಿರಂತರವಾಗಿ ಬಯಲಾಗುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಇಲಾಖೆ ಇದೀಗ ಹೈಟೆಕ್ ಅಸ್ತ್ರ ಬಳಸಿದೆ. ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಪ್ರಮುಖ ಕಾರಾಗೃಹಗಳಲ್ಲಿ ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್’ ಮತ್ತು ಬಯೋಮೆಟ್ರಿಕ್ ಕಣ್ಗಾವಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಜಾರಿಗೆ ಬಂದಿರುವ ಈ ವ್ಯವಸ್ಥೆ, ಜೈಲಿನೊಳಗಿನ ಪ್ರತಿಯೊಂದು ಚಲನವಲನವನ್ನು ಸೆಕೆಂಡ್ ಟು ಸೆಕೆಂಡ್ ಟ್ರ್ಯಾಕ್ ಮಾಡಲಿದೆ.

ಇತ್ತೀಚಿನ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದ್ದ ಗಂಭೀರ ಭದ್ರತಾ ವೈಫಲ್ಯಗಳು ಸರ್ಕಾರವನ್ನು ಕಠಿಣ ಕ್ರಮಕ್ಕೆ ಒತ್ತಾಯಿಸಿತ್ತು. ದಾಳಿಯ ವೇಳೆ ಕೈದಿಗಳು ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಯತ್ನಿಸಿದ್ದು, 200ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿದ್ದವು. ಇನ್ನೂ ಕೆಲವು ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದ ಘಟನೆ ಜೈಲು ವ್ಯವಸ್ಥೆಯನ್ನೇ ಪ್ರಶ್ನೆಗೆ ಒಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಸಿಬ್ಬಂದಿಯ ಮೇಲೂ ಬಿಗಿ ನಿಗಾ ಇಡಲಾಗುತ್ತಿದೆ.

ಹೊಸ ವ್ಯವಸ್ಥೆಯಡಿ ಜೈಲಿನ ಬ್ಯಾರಕ್, ಆಸ್ಪತ್ರೆ, ಅಡುಗೆಮನೆ, ಸಂದರ್ಶಕರ ಕೊಠಡಿ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೈದಿಯೊಬ್ಬರು ಒಂದು ವಿಭಾಗದಿಂದ ಮತ್ತೊಂದಕ್ಕೆ ಹೋಗಬೇಕಾದರೆ ಹೆಬ್ಬೆರಳಿನ ಗುರುತು ನೀಡುವುದು ಕಡ್ಡಾಯ. ಇದರಿಂದ ಯಾವ ಕೈದಿ ಎಲ್ಲಿ ಎಷ್ಟು ಸಮಯ ಕಳೆದಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಡಿಜಿಟಲ್ ದಾಖಲಾಗಲಿದೆ.

ಕೈದಿಗಳು ಗುಂಪು ಸೇರುವುದು, ಮೊಬೈಲ್ ಬಳಕೆ, ಸಿಬ್ಬಂದಿಯ ಶಾಮೀಲಾತಿ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸುವ ಗುರಿಯೊಂದಿಗೆ ಈ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಜೈಲಿನೊಳಗಿನ ಅಕ್ರಮ ಸಾಮ್ರಾಜ್ಯಕ್ಕೆ ಈಗ ‘ಡಿಜಿಟಲ್ ಬ್ರೇಕ್’ ಬೀಳಲಿದೆ ಎಂಬ ನಿರೀಕ್ಷೆ ಅಧಿಕಾರಿಗಳಲ್ಲಿದೆ.

ಶೃಂಗೇರಿ ಮರುಮತ ಎಣಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ: ಆದೇಶವನ್ನು ಗೌರವಿಸುತ್ತೇನೆ ಎಂದ ಜೀವರಾಜ್

ಬೆಂಗಳೂರು: ಶೃಂಗೇರಿ ಕ್ಷೇತ್ರದ ಹೈವೋಲ್ಟೇಜ್ ಮರುಮತ ಎಣಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಭಾರೀ ಟ್ವಿಸ್ಟ್ ನೀಡಿದೆ. ಬಿಜೆಪಿ ನಾಯಕ ಜೀವರಾಜ್ ಅವರ ಗೆಲುವಿನ ಮೇಲೆ ತಾತ್ಕಾಲಿಕ ಬ್ರೇಕ್ ಹಾಕಿರುವ ಕೋರ್ಟ್, ಮರುಮತ ಎಣಿಕೆ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.

ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ನಿಗದಿ ಮಾಡಿದೆ. ಇದರಿಂದ ಶೃಂಗೇರಿ ಕ್ಷೇತ್ರದ ರಾಜಕೀಯ ಕದನ ಮತ್ತಷ್ಟು ತೀವ್ರಗೊಂಡಿದೆ.

ಕೋರ್ಟ್ ಆದೇಶದ ಬಳಿಕ ಮಾತನಾಡಿದ ಜೀವರಾಜ್, “ಇದು ಅಂತಿಮ ತೀರ್ಪಲ್ಲ. ಮಧ್ಯಂತರ ಆದೇಶ ಮಾತ್ರ. ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ರಾಜಕೀಯದಲ್ಲಿ ಇಂತಹ ಏರುಪೇರು ಸಾಮಾನ್ಯ” ಎಂದು ಹೇಳಿದ್ದಾರೆ.

ತಡೆಯಾಜ್ಞೆಯಿಂದಾಗಿ ಸದ್ಯ ಹಾಲಿ ಶಾಸಕರೇ ಮುಂದುವರಿಯಲಿದ್ದು, ಅಂತಿಮ ತೀರ್ಪಿನತ್ತ ರಾಜ್ಯ ರಾಜಕೀಯ ಕಣ್ಣು ನೆಟ್ಟಿದೆ. ಶೃಂಗೇರಿ ಕ್ಷೇತ್ರದ ಈ ಕಾನೂನು ಸಮರ ಈಗ ರಾಜ್ಯ ರಾಜಕೀಯದ ಅತ್ಯಂತ ಕುತೂಹಲಕರ ಕೇಸ್ ಆಗಿ ಪರಿಣಮಿಸಿದೆ.

ಎರಡು ಬೈಕ್​ಗಳ ನಡುವೆ ಅಪಘಾತ: ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಅಪರಿಚಿತ ವಾಹನ, ಸ್ಥಳದಲ್ಲೇ ಸಾವು!

ಗದಗ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಸ್ತೆಗೆ ಬಿದ್ದ ಯುವಕನ ತಲೆ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಯುವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಬಳಿ ನಡೆದಿದೆ.

ಸಾಹೇಬ ಮಹತೋ (30) ಮೃತ ಕಾರ್ಮಿಕ. ಈತ ಬಿಹಾರ ರಾಜ್ಯದ ಪೂರ್ವ ಚಂಪಾರಣ ಜಿಲ್ಲೆಯ ಹೈಸಿಂಗಪುರ ಗ್ರಾಮದ ನಿವಾಸಿ ಆಗಿದ್ದು, ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ವೇಗವಾಗಿ ಸಂಚರಿಸುತ್ತಿದ್ದ ಎರಡು ಬೈಕ್‌ಗಳು ಕೊರ್ಲಹಳ್ಳಿ ಸಮೀಪ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ತೀವ್ರತೆಗೆ ಸಾಹೇಬ ಮಹತೋ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾನೆ. ಇದೇ ವೇಳೆ ಹಿಂದಿನಿಂದ ಬಂದ ಅಪರಿಚಿತ ವಾಹನ ಆತನ ತಲೆಯ ಮೇಲೆ ಹರಿದ ಪರಿಣಾಮ ಸಾಹೇಬ ಮಹತೋ (30) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಅಪಘಾತದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಬಿಹಾರ ರಾಜ್ಯದ ಮುಜಿಯಾ ಮೂಲದ ರಂಜಿತ್ ಎಂಬಾತ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದದ್ದನ್ನು ಕಂಡ ಸ್ಥಳೀಯರು ತಕ್ಷಣವೇ ಮುಂಡರಗಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪಿಎಸ್‌ಐ ಚನ್ನಯ್ಯ ದೇವೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್, ಚಿನ್ನ ಖರೀದಿ ಕಡಿಮೆ ಮಾಡಿ: ದೇಶ ಉಳಿಸಲು ‘ಉಳಿತಾಯ ಮಂತ್ರ’ ನೀಡಿದ ಪ್ರಧಾನಿ ಮೋದಿ

ನವದೆಹಲಿ: ದೇಶದ ಆರ್ಥಿಕ ಭದ್ರತೆಯನ್ನು ಬಲಪಡಿಸಲು ಮತ್ತು ವಿದೇಶಗಳಿಗೆ ಹರಿದುಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಡಾಲರ್ ಹೊರಹರಿವನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ‘ಉಳಿತಾಯದ ಮಹಾ ಅಭಿಯಾನ’ಕ್ಕೆ ಕರೆ ನೀಡಿದ್ದಾರೆ.

ಜಾಗತಿಕ ಯುದ್ಧ ಪರಿಸ್ಥಿತಿಯಿಂದಾಗಿ ರಸಗೊಬ್ಬರ, ಕಚ್ಚಾತೈಲ ಮತ್ತು ಇಂಧನ ಬೆಲೆಗಳು ಏರಿಕೆಯಾಗಿದ್ದರೂ, ಸರ್ಕಾರವು ಅದರ ಹೊರೆಯನ್ನು ಹೊತ್ತು ಜನರಿಗೆ ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನು ಸಣ್ಣ ಮಟ್ಟದ ಉಳಿತಾಯದ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ನೀಡಿರುವ ಸಲಹೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಬಸ್ ಮತ್ತು ಮೆಟ್ರೋಗಳನ್ನು ಹೆಚ್ಚು ಬಳಸುವುದು, ಸಾಧ್ಯವಾದರೆ ವರ್ಕ್ ಫ್ರಮ್ ಹೋಮ್ ಅನುಸರಿಸುವುದು ಸೇರಿವೆ.

ಇದಲ್ಲದೆ, ಅನಗತ್ಯವಾಗಿ ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಅವರು ಕರೆ ನೀಡಿದ್ದಾರೆ. ಚಿನ್ನವು ದೇಶದ ಅತಿ ದೊಡ್ಡ ಆಮದು ವೆಚ್ಚಗಳಲ್ಲಿ ಒಂದಾಗಿದ್ದು, ಭಾರತವು ಚೀನಾದ ನಂತರ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. 2026ರ ಅಂದಾಜಿನ ಪ್ರಕಾರ, ಭಾರತವು ಸುಮಾರು 6.76 ಲಕ್ಷ ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಚಿನ್ನ ಖರೀದಿ ಕಡಿಮೆಯಾದರೆ ವರ್ಷಕ್ಕೆ 2 ರಿಂದ 3 ಲಕ್ಷ ಕೋಟಿ ರೂಪಾಯಿ ಉಳಿತಾಯ ಸಾಧ್ಯವೆಂದು ಅಂದಾಜಿಸಲಾಗಿದೆ.

ಸದ್ಯ ಭಾರತವು ವರ್ಷಕ್ಕೆ ಸುಮಾರು 17 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ತೈಲ ಬೆಲೆ ಏರಿಕೆಯಾಗಿರುವುದರಿಂದ ಇಂಧನ ಬಳಕೆಯನ್ನು ಕಡಿಮೆ ಮಾಡುವ ಮೂಲಕ ವಿದೇಶಿ ವಿನಿಮಯ ವೆಚ್ಚವನ್ನು ತಗ್ಗಿಸಬಹುದು ಎಂದು ಮೋದಿ ಹೇಳಿದ್ದಾರೆ.

ಅಡುಗೆ ಎಣ್ಣೆ ಬಳಕೆಯನ್ನು ಮಿತಿಗೊಳಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದು ಮತ್ತು ರಾಸಾಯನಿಕ ಗೊಬ್ಬರದ ಬದಲು ಸಾವಯವ ಕೃಷಿಗೆ ಒತ್ತು ನೀಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. 2026ರಲ್ಲಿ ಭಾರತವು ಸುಮಾರು 1.83 ಲಕ್ಷ ಕೋಟಿ ರೂಪಾಯಿ ಮೌಲ್ಯದ ಖಾದ್ಯ ತೈಲ ಮತ್ತು 1.34 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ.

ಅಮೆರಿಕನ್ ಡಾಲರ್ ಜಾಗತಿಕ ವ್ಯಾಪಾರದ ಪ್ರಮುಖ ಕರೆನ್ಸಿಯಾಗಿರುವುದರಿಂದ, ಭಾರತ ಹೆಚ್ಚು ಆಮದು ಮಾಡಿದಷ್ಟೂ ಡಾಲರ್ ಬೇಡಿಕೆ ಹೆಚ್ಚುತ್ತದೆ. ಇದರಿಂದ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಹೆಚ್ಚುತ್ತದೆ. ಆಮದು ಕಡಿಮೆಯಾದರೆ ಡಾಲರ್ ಮೇಲಿನ ಅವಲಂಬನೆ ತಗ್ಗಿ, ರೂಪಾಯಿ ಬಲವಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಮದು ವೆಚ್ಚ ಕಡಿಮೆಯಾದಷ್ಟೂ ದೇಶದ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳವಾಗಲಿದ್ದು, ಬೆಲೆ ಏರಿಕೆಯ ಮೇಲಿನ ಒತ್ತಡವೂ ತಗ್ಗಲಿದೆ. ದೇಶದ ಆರ್ಥಿಕ ಸ್ಥಿರತೆ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಜನರ ಸಣ್ಣ ಉಳಿತಾಯವೂ ದೊಡ್ಡ ಕೊಡುಗೆ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಚಿನ್ನ ಖರೀದಿ ಹೇಳಿಕೆಗೆ ಕಾಂಗ್ರೆಸ್ ವಿರೋಧ: ಆರ್ ಅಶೋಕ್ ತಿರುಗೇಟು!

ಬೆಂಗಳೂರು: ಚಿನ್ನ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಬಿಜೆಪಿ ನಾಯಕರು ತಿರುಗೇಟು ನೀಡಲು ಆರಂಭಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕಾಂಗ್ರೆಸ್ ಪಕ್ಷದ ನೆನಪಿನ ಶಕ್ತಿ ನಿಗೂಢವಾಗಿ ಕೆಲಸ ಮಾಡುತ್ತದೆ ಎಂದು ಟೀಕಿಸಿದ್ದಾರೆ. ಇದೇ ರೀತಿಯ ಆರ್ಥಿಕ ಶಿಸ್ತಿನ ಮನವಿಯನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರಗಳೂ ಮಾಡಿದ್ದವು ಎಂದು ಹೇಳಿ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

1967ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾರತೀಯರು ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಮನವಿ ಮಾಡಿದ್ದನ್ನು “ರಾಷ್ಟ್ರೀಯ ಶಿಸ್ತು” ಎಂದು ಕರೆಯಲಾಗಿತ್ತು. 2013ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಚಿನ್ನ ಖರೀದಿಸಬೇಡಿ ಎಂದು ಹೇಳಿದಾಗ ಅದನ್ನು “ಆರ್ಥಿಕ ಜವಾಬ್ದಾರಿ” ಎಂದು ವಿವರಿಸಲಾಗಿತ್ತು ಎಂದು ಆರ್ ಅಶೋಕ್ ತಿಳಿಸಿದ್ದಾರೆ.

ಈಗ ಪ್ರಧಾನಿ ನರೇಂದ್ರ ಮೋದಿ ದೇಶದ ವಿದೇಶಿ ವಿನಿಮಯ ಉಳಿಸಲು ಹಾಗೂ ರೂಪಾಯಿ ಮೌಲ್ಯ ಬಲಪಡಿಸಲು ಇದೇ ರೀತಿಯ ಕರೆ ನೀಡಿದಾಗ ಕಾಂಗ್ರೆಸ್ ನಾಯಕರು ಅದನ್ನು ವಿಚಿತ್ರ ಬೆಳವಣಿಗೆಯಂತೆ ಚಿತ್ರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವಾಸ, ವಿಶ್ವಾಸಾರ್ಹತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಆಕ್ರೋಶ ಹೊರಹಾಕುವ ಮೊದಲು ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ಹಳೆಯ ಹೇಳಿಕೆಗಳ ಇತಿಹಾಸವನ್ನು ಒಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದು ಅವರು ಖಾರವಾಗಿ ಟೀಕಿಸಿದ್ದಾರೆ.

ಬೆಂಗಳೂರಿಗರಿಗೆ ಗುಡ್ ನ್ಯೂಸ್..! ಮನೆ ಬಾಗಿಲಿಗೆ ಇ-ಖಾತಾ ಸೇವೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಗುಡ್ ನ್ಯೂಸ್ ನೀಡಿದೆ.

ಇ-ಖಾತಾ ಪಡೆಯಲು ಕಷ್ಟಪಡುತ್ತಿರುವ ಸಾರ್ವಜನಿಕರಿಗಾಗಿ ವಿಶೇಷ ಇ-ಖಾತಾ ಮೇಳ ಆಯೋಜಿಸಲು BBMP ಮುಂದಾಗಿದೆ.

ಮೇ 16ರಿಂದ ನಗರದ ವಿವಿಧ ಭಾಗಗಳಲ್ಲಿ ಇ-ಖಾತಾ ಮೇಳ ಆರಂಭವಾಗಲಿದ್ದು, BBMP ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಸ್ಥಳಗಳಲ್ಲಿ ಈ ಮೇಳ ನಡೆಯಲಿದೆ. ಈಗಾಗಲೇ ಸುಮಾರು 10 ಲಕ್ಷ ಇ-ಖಾತಾಗಳನ್ನು ವಿತರಣೆ ಮಾಡಲಾಗಿದ್ದು, ಇನ್ನೂ 25 ಲಕ್ಷ ಆಸ್ತಿಗಳನ್ನು ಇ-ಖಾತಾ ವ್ಯಾಪ್ತಿಗೆ ತರಲು BBMP ಯೋಜನೆ ರೂಪಿಸಿದೆ.

ಮೇ 16ರ ಬಳಿಕ ಪ್ರತಿ ಶನಿವಾರವೂ ಇ-ಖಾತಾ ಮೇಳ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೇರವಾಗಿ ಇ-ಖಾತಾಗೆ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದಾಗಿದೆ.

ಇ-ಖಾತಾ ಮೇಳದಲ್ಲಿ ಯಾವುದೇ ಮಧ್ಯವರ್ತಿಗಳ ಕಾಟ ಅಥವಾ ಲಂಚದ ಬೇಡಿಕೆ ಇರುವುದಿಲ್ಲ ಎಂದು BBMP ತಿಳಿಸಿದೆ. ಸಾರ್ವಜನಿಕರು ನೇರವಾಗಿ ಅಧಿಕಾರಿಗಳ ಮೂಲಕ ಸೇವೆ ಪಡೆಯಬಹುದಾಗಿದೆ.

ಇ-ಖಾತಾಗೆ ಅಗತ್ಯವಿರುವ ದಾಖಲೆಗಳು ಹೀಗಿವೆ:

  • ಸೇಲ್ ಡೀಡ್ / ಟೈಟಲ್ ಡೀಡ್
  • ಪ್ರಾಪರ್ಟಿ ಟ್ಯಾಕ್ಸ್ ರಸೀದಿ
  • ಎಸ್‌ಎಎಸ್ ಪ್ರಾಪರ್ಟಿ ಟ್ಯಾಕ್ಸ್ ಐಡಿ
  • ಆಧಾರ್ ಕಾರ್ಡ್ ಹಾಗೂ ಇ-ಕೆವೈಸಿ
  • ಇಸಿ (Encumbrance Certificate)
  • ಬೆಸ್ಕಾಂ ಬಿಲ್
  • ಆಸ್ತಿಯ ಜಿಪಿಎಸ್ ಲೊಕೇಶನ್

ಇ-ಖಾತಾ ಸೇವೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು BBMP ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಮಳೆ ಅವಾಂತರ..! ಗೋಡೆ ಕುಸಿದು ಬಾಲಕಿ ದುರ್ಮರಣ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಸೋಮವಾರ ಸುರಿದ ಧಾರಾಕಾರ ಮಳೆಗೆ ಸಿದ್ದಪ್ಪ ಎಂಬುವರ ಮನೆಯ ಅಡುಗೆ ಕೋಣೆಯ ಗೋಡೆ ಏಕಾಏಕಿ ಕುಸಿದಿದೆ. ಈ ವೇಳೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಬಿದ್ದಿದೆ.

ಘಟನೆಯಲ್ಲಿ ಅಕ್ಷತಾ (8) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಗಾಳಿ ಎಷ್ಟು ಸುರಕ್ಷಿತ? ಇಲ್ಲಿದೆ ಇಂದಿನ AQI ವರದಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಇಂದು ಮಿಶ್ರ ಮಟ್ಟದಲ್ಲಿ ದಾಖಲಾಗಿದ್ದು, ನಗರದ ಕೆಲವು ಭಾಗಗಳಲ್ಲಿ ವಾಯು ಮಾಲಿನ್ಯ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂದಿನ ವರದಿ ಪ್ರಕಾರ, ನಗರದ ಸರಾಸರಿ AQI 54ರಿಂದ 96ರ ನಡುವೆಯಿದ್ದು, ಇದು ‘ಸಾಧಾರಣ’ ವಿಭಾಗಕ್ಕೆ ಸೇರಿದೆ. ಆದರೆ ಸಿಲ್ಕ್ ಬೋರ್ಡ್ ಹಾಗೂ ಬಿಟಿಎಂ ಲೇಔಟ್‌ನಂತಹ ಜನನಿಬಿಡ ಪ್ರದೇಶಗಳಲ್ಲಿ AQI ಮಟ್ಟ 138ರವರೆಗೆ ದಾಖಲಾಗಿದ್ದು, ಇದು ಸೂಕ್ಷ್ಮ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಹಾನಿಕಾರಕ ಎಂದು ತಜ್ಞರು ತಿಳಿಸಿದ್ದಾರೆ.

ಗಾಳಿಯಲ್ಲಿನ ಅತಿ ಸೂಕ್ಷ್ಮ ಧೂಳಿನ ಕಣಗಳಾದ PM2.5 ಪ್ರಮಾಣ ಸುಮಾರು 34µg/m³ ಹಾಗೂ PM10 ಪ್ರಮಾಣ 40µg/m³ ದಾಖಲಾಗಿದೆ. ವಾಹನ ದಟ್ಟಣೆ, ರಸ್ತೆ ಬದಿಯ ಧೂಳು ಹಾಗೂ ನಗರ ಸಂಚಾರದ ಒತ್ತಡವೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ನಗರದ ಆರ್ಕ್ ಸೆರೆನ್ ಕೌಂಟಿ ಹಾಗೂ ಆದರ್ಶ್ ಪಾಮ್ ರಿಟ್ರೀಟ್ ಪ್ರದೇಶಗಳಲ್ಲಿ AQI ಮಟ್ಟ 100ರ ಗಡಿ ದಾಟಿದ್ದು, ವಾಯು ಗುಣಮಟ್ಟ ಕಳಪೆ ಮಟ್ಟ ತಲುಪಿದೆ. ಮತ್ತೊಂದೆಡೆ ಹೆಬ್ಬಾಳ ಹಾಗೂ ಪೀಣ್ಯದಂತಹ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತುಸು ಉತ್ತಮವಾಗಿದೆ.

ತಜ್ಞರ ಪ್ರಕಾರ, ಬೆಂಗಳೂರಿನ ಒಟ್ಟಾರೆ AQI ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.43ರಷ್ಟು ಏರಿಕೆಯಾಗಿದ್ದು, ನಗರದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಸೂಚನೆ ನೀಡುತ್ತಿದೆ.

ರಾಜ್ಯದ ಇತರ ನಗರಗಳ ಇಂದಿನ AQI ವಿವರ ಹೀಗಿದೆ:

  • ಬೆಂಗಳೂರು – 111
  • ಮಂಗಳೂರು – 100
  • ಮೈಸೂರು – 86
  • ಬೆಳಗಾವಿ – 110
  • ಕಲಬುರಗಿ – 84
  • ಶಿವಮೊಗ್ಗ – 96
  • ಬಳ್ಳಾರಿ – 106
  • ಹುಬ್ಬಳ್ಳಿ – 118
  • ಉಡುಪಿ – 100
  • ವಿಜಯಪುರ – 82

ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಮಸ್ಯೆ ಇರುವವರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

error: Content is protected !!