Home Blog Page 202

SSLC ವಿದ್ಯಾರ್ಥಿಗಳೇ ಎಚ್ಚರ! ಪ್ರಶ್ನೆ ಪತ್ರಿಕೆ ಸಿಗುತ್ತೆ ಅಂತ ಯಾಮಾರಬೇಡಿ

0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಹೇಳಿ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಪೋಸ್ಟ್‌, ವೀಡಿಯೊ ಮತ್ತು ಬಯೋಗಳಲ್ಲಿ ಪ್ರಕಟಣೆ ನೀಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ.

ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್ ತಿಂಗಳಿಂದ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ ಹಾಗೂ ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ.

100 ರೂಪಾಯಿ ಫೋನ್‌ಪೇ ಅಥವಾ ಇತರೆ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗುತ್ತಿದೆ. ಈ ರೀತಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದ ಜೊತೆಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಕೇಳಿ ವಿದ್ಯಾರ್ಥಿಗಳು ಆತುರಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇಂತಹ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮೂಲಗಳಿಂದ ಬಂದ ಮಾಹಿತಿಯ ಮೇಲಷ್ಟೇ ನಂಬಿಕೆ ಇಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡದೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ.

ಚಾಮರಾಜನಗರ| ಮಲೆಮಹದೇಶ್ವರಸ್ವಾಮಿ ಹುಂಡಿಯಲ್ಲಿ ₹2.48 ಕೋಟಿ ಕಾಣಿಕೆ ಸಂಗ್ರಹ!

0

ಚಾಮರಾಜನಗರ:- ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.

ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸಾನ್ನಿಧ್ಯದಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ನೇತೃತ್ವ ವಹಿಸಿದ್ದರು. 29 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ನಗದು, ನಾಣ್ಯ ಹಾಗೂ ಇ-ಹುಂಡಿಯ ಎಣಿಕೆ ನಡೆಯಿತು.

ಈ ಅವಧಿಯಲ್ಲಿ ಒಟ್ಟು ₹2.48 ಕೋಟಿ ನಗದು ಸಂಗ್ರಹವಾಗಿದ್ದು, 35 ಗ್ರಾಂ ಚಿನ್ನ, 1 ಕೆಜಿ 62 ಗ್ರಾಂ ಬೆಳ್ಳಿ ದೊರೆತಿದೆ. ಜೊತೆಗೆ 6 ವಿದೇಶಿ ನೋಟುಗಳು ಹಾಗೂ ₹2000 ಮುಖಬೆಲೆಯ 2 ನೋಟುಗಳು ಪತ್ತೆಯಾಗಿವೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಭಾಗ್ಯಮ್ಮ, ಕುಪ್ತಾ, ಮರಿಸ್ವಾಮಿ ಕಾಗಲವಾಡಿ, ಮಹದೇವಪ್ಪ ಕೀಳನಪುರ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಪ್ರಾಧಿಕಾರದ ಹಣಕಾಸು ಹಾಗೂ ಲೆಕ್ಕಪತ್ರ ಸಲಹೆಗಾರ ಮಹದೇವು, ಉಪಕಾರ್ಯದರ್ಶಿ ಚಂದ್ರಶೇಖರ ಜಿ.ಎಲ್., ಲೆಕ್ಕ ಅಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಮಹೇಶ್ ಚಂದ್ರ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.

Gold Rate: ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ

0

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದೆ.

ಇಂದು ಶುಕ್ರವಾರ ಚಿನ್ನದ ಬೆಲೆ 65 ರೂ ಏರಿಕೆಯಾದರೆ, ಬೆಳ್ಳಿ ಬೆಲೆ 3-4 ರೂ ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,650 ರೂ ಇದ್ದದ್ದು 12,715 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,871 ರೂಗೆ ಏರಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 9ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,403 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ.

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಪ್ರಕರಣ: ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ವರ್ಗಾವಣೆ

0

ಹುಬ್ಬಳ್ಳಿ: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ದೇಶವ್ಯಾಪಿ ಟೀಕೆಗೆ ಗುರಿಯಾದ ಬಳಿಕ ಕೊನೆಗೂ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಒತ್ತಾಯ ಹಾಗೂ ಕಾಂಗ್ರೆಸ್ ಪ್ರತಿರೋಧದ ನಡುವೆಯೇ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ ಅವರನ್ನು ಪೊಲೀಸರು ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತಾ ಹಂಡಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಳೆದು ತೂಗಿ ಕ್ರಮಕ್ಕೆ ಮುಂದಾಗಿರುವ ಕಮಿಷನರ್, ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಕೆ. ಹಟ್ಟಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇನ್ಸ್ಪೆಕ್ಟರ್ ಹಟ್ಟಿ ಅವರನ್ನು ಕೇಶ್ವಾಪುರ ಠಾಣೆಯಿಂದ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಘಂಟಿಕೇರಿ ಠಾಣೆಯ ಇನ್ಸ್ಪೆಕ್ಟರ್ ಜಾದವ್ ಅವರಿಗೆ ಕೇಶ್ವಾಪುರ ಠಾಣೆಯ ಹೆಚ್ಚುವರಿ ಪ್ರಭಾರಿಯಾಗಿ ಜವಾಬ್ದಾರಿ ನೀಡಲಾಗಿದೆ.

ವಿವಸ್ತ್ರಗೊಳಿಸಿ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲಾಗಿದೆ ಎಂಬ ಆರೋಪ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಇಷ್ಟಾದರೂ ಆರಂಭದಲ್ಲಿ ತಮ್ಮ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದ ಕಮಿಷನರ್ ಎನ್. ಶಶಿಕುಮಾರ್, ಇದೀಗ ಪ್ರಕರಣದ ಗಂಭೀರತೆ ಅರಿತು ಕ್ರಮಕ್ಕೆ ಮುಂದಾದಂತೆ ಕಾಣುತ್ತಿದೆ.

ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಸಿಇಎನ್ ವಿಭಾಗದ ಎಸಿಪಿ ಶಿವರಾಜ್ ಕಟಕಬಾವಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಂಡಕ್ಕೆ ಸೂಚಿಸಲಾಗಿದೆ.

ಇನ್ನೊಂದೆಡೆ, ವಶಕ್ಕೆ ಪಡೆಯುವ ವೇಳೆ ಅನಾರೋಗ್ಯಕ್ಕೊಳಗಾದ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಹಿನ್ನೆಲೆ ವಶಕ್ಕೆ ಪಡೆಯುವ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಇಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಾಲಿ–ಮಾಜಿ ಶಾಸಕರು, ಎಂಎಲ್‌ಸಿಗಳು ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್ ಮಾಡಿದ್ದಾರೆ.

ಆಸ್ತಿಗಾಗಿ ಗಲಾಟೆ; ದೊಣ್ಣೆಯಿಂದ ಸ್ವಂತ ಅಕ್ಕನನ್ನೇ ಹಲ್ಲೆಗೈದ ತಮ್ಮ

0

ಬೆಂಗಳೂರು:- ಆಸ್ತಿಗಾಗಿ ಸ್ವಂತ ಅಕ್ಕನನ್ನೇ ದೊಣ್ಣೆಯಿಂದ ಹೊಡೆದು ತಮ್ಮ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಈ ಘಟನೆ ಡಿಸೆಂಬರ್ 12 ರಂದು ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೆಂಕಟೇಶ್ ಅಕ್ಕನಿಗೆ ಹಲ್ಲೆ ಮಾಡಿದ ಪಾಪಿ ತಮ್ಮ. ತಂಗಮಣಿ ತಮ್ಮನಿಂದಲೇ ಹಲ್ಲೆಗೆ ಒಳಗಾದ ಅಕ್ಕ. ಆರೋಗ್ಯ ಹದಗೆಟ್ಟು ಹಾಸಿಗೆ ಪಾಲಾಗಿದ್ದ ಅಪ್ಪನನ್ನು ನೋಡಲು ತಂಗಮಣಿ ತವರಿಗೆ ಬಂದಿದ್ದರು.

ಈ ವೇಳೆ ಆಸ್ತಿ ಕೇಳಲು ಬಂದಿದ್ದಾಳೆ ಎಂದು ತಿಳಿದ ತಮ್ಮ, ಅಕ್ಕನಿಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಗೆ ತಮ್ಮನ ಪತ್ನಿ ಕೂಡ ಸಾಥ್ ಕೊಟ್ಟಿದ್ದಾಳೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ಹಾಗೂ ಆತನ ಪತ್ನಿ ಮೇಲೆ FIR ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ನಿಮ್ಮ ಪಾದಗಳು ಪದೇ ಪದೇ ತಣ್ಣಗಾಗುತ್ತಾ? ಅದಕ್ಕೆ ಕಾರಣ ಏನ್ ಗೊತ್ತಾ?

0

ಸಾಮಾನ್ಯವಾಗಿ ಪಾದಗಳು ಚಳಿಗಾಲದಲ್ಲಿ ತಣ್ಣಗಾಗುತ್ತವೆ ಎಂದು ಬಹುತೇಕರು ಭಾವಿಸುತ್ತಾರೆ. ಸಾಕ್ಸ್ ಹಾಕಿಕೊಂಡರೂ, ದಪ್ಪ ಹೊದಿಕೆ ಹೊದ್ದರೂ ಪಾದಗಳು ಬೆಚ್ಚಗಾಗದೇ ಇರುವುದನ್ನು ಹವಾಮಾನದ ಪರಿಣಾಮ ಎಂದು ನಿರ್ಲಕ್ಷಿಸುವವರೇ ಹೆಚ್ಚು. ಆದರೆ ಕೆಲವೊಮ್ಮೆ ಇದು ದೇಹದಲ್ಲಿನ ಆಂತರಿಕ ಸಮಸ್ಯೆಯ ಸಂಕೇತವಾಗಿರಬಹುದು ಎಂಬುದು ಹಲವರಿಗೆ ತಿಳಿದಿಲ್ಲ.

ಹೌದು, ಪಾದಗಳು ಪದೇಪದೇ ತಣ್ಣಗಾಗುವುದು (Cold Feet) ಮಧುಮೇಹದ ಲಕ್ಷಣವಾಗಿರಬಹುದು. ಆದರೆ ಇದಕ್ಕೆ ಮಧುಮೇಹ ಮಾತ್ರವೇ ಕಾರಣವಲ್ಲ. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅಥವಾ ಇತರ ದೈಹಿಕ ಬದಲಾವಣೆಗಳೊಂದಿಗೆ ಕಂಡುಬಂದರೆ, ಜಾಗರೂಕರಾಗುವುದು ಅಗತ್ಯ.

ಮಧುಮೇಹ ಮತ್ತು ತಣ್ಣಗಾಗುವ ಪಾದಗಳ ನಡುವಿನ ಸಂಬಂಧ

ಲೇಡಿ ಹಾರ್ಡಿಂಜ್ ಆಸ್ಪತ್ರೆಯ ಡಾ. ಎಲ್.ಎಚ್. ಘೋಟೇಕರ್ ಅವರ ಪ್ರಕಾರ, ಮಧುಮೇಹದಲ್ಲಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾದಾಗ ನರಗಳು ಮತ್ತು ರಕ್ತನಾಳಗಳಿಗೆ ಹಾನಿಯಾಗುತ್ತದೆ. ಇದರಿಂದ

  • ಪಾದಗಳಲ್ಲಿ ಮರಗಟ್ಟುವಿಕೆ

  • ಜುಮ್ಮೆನಿಸುವಿಕೆ

  • ಸುಡುವ ಭಾವನೆ

  • ತಣ್ಣನೆಯ ಅನುಭವ

ಕಾಣಿಸಿಕೊಳ್ಳಬಹುದು. ಜೊತೆಗೆ ಪಾದಗಳಲ್ಲಿ ಪುನರಾವರ್ತಿತ ನೋವು, ಒಣ ಚರ್ಮ, ಗಾಯಗಳು ನಿಧಾನವಾಗಿ ಗುಣವಾಗುವುದು ಹಾಗೂ ಹೆಚ್ಚು ಆಯಾಸವಾಗುವುದೂ ಮಧುಮೇಹದ ಲಕ್ಷಣಗಳಾಗಿರಬಹುದು. ಚಳಿಗಾಲದಲ್ಲಿ ರಕ್ತದ ಹರಿವು ನಿಧಾನವಾಗುವ ಕಾರಣ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.

ಆದರೆ ಪಾದಗಳು ತಣ್ಣಗಾದ ಮಾತ್ರಕ್ಕೆ ಮಧುಮೇಹವಿದೆ ಎಂದು ಅರ್ಥವಲ್ಲ. ಆದರೆ ಇದಕ್ಕೆ ಜೊತೆಗೆ ಅತಿಯಾದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ, ತೂಕದಲ್ಲಿ ಬದಲಾವಣೆಗಳಂತಹ ಲಕ್ಷಣಗಳಿದ್ದರೆ, ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೂ ಪಾದಗಳು ತಣ್ಣಗಾಗುತ್ತವೆಯೇ?

ಹೌದು. ಪಾದಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ತಲುಪದಿದ್ದಾಗ ಅವು ತಣ್ಣಗಾಗುತ್ತವೆ. ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ ಹಾಗೂ ವಯಸ್ಸಾಗುವುದರಿಂದ ಈ ಸಮಸ್ಯೆ ಉಂಟಾಗಬಹುದು.

ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತಗೊಂಡು ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ಪಾದಗಳ ಚರ್ಮ ತಣ್ಣಗಾಗುವುದು, ಸ್ವಲ್ಪ ನೀಲಿ ಬಣ್ಣ ಕಾಣಿಸಿಕೊಳ್ಳುವುದು ಹಾಗೂ ಕೆಲವೊಮ್ಮೆ ಸೌಮ್ಯ ನೋವು ಅಥವಾ ಸೆಳೆತ ಉಂಟಾಗಬಹುದು. ಆದರೆ ನಡೆಯಲು ತೊಂದರೆ ಆಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ಪಾದಗಳು ತಣ್ಣಗಾಗುವುದನ್ನು ತಪ್ಪಿಸಲು ಏನು ಮಾಡಬೇಕು?

  • ಪಾದಗಳನ್ನು ಸದಾ ಬೆಚ್ಚಗಿಟ್ಟುಕೊಳ್ಳಿ

  • ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡಿ

  • ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ

  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ

  • ಧೂಮಪಾನದಿಂದ ದೂರವಿರಿ

  • ಪಾದಗಳನ್ನು ಸ್ವಚ್ಛವಾಗಿ ಮತ್ತು ಒಣವಾಗಿಟ್ಟುಕೊಳ್ಳಿ

ಕನ್ನಡ ಚಿತ್ರರಂಗದ ಜೀವಮಾನ ಸಾಧಕರಿಗೆ ಗೌರವ: ಜಯಮಾಲಾ ಮತ್ತು ಸಾ.ರಾ. ಗೋವಿಂದುಗೆ ಡಾ. ಡಾ. ರಾಜ್‌ಕುಮಾರ್‌ ಪ್ರಶಸ್ತಿ 

ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯರಿಗೆ ಪ್ರತಿಷ್ಠಿತ ಗೌರವ ಲಭಿಸಿದೆ. 2020 ಹಾಗೂ 2021ನೇ ಸಾಲಿನ ಡಾ. ರಾಜ್‌ಕುಮಾರ್‌ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ.

2020ನೇ ಸಾಲಿನಲ್ಲಿ ಡಾ. ರಾಜ್‌ಕುಮಾರ್‌ ಪ್ರಶಸ್ತಿಯನ್ನು ಹಿರಿಯ ನಟಿ ಜಯಮಾಲಾ ಅವರಿಗೆ ನೀಡಲಾಗಿದೆ. 1974ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಜಯಮಾಲಾ ಅವರು, ‘ಭೂತಯ್ಯನ ಮಗ ಅಯ್ಯು’ದಿಂದ ‘ತಾಯಿ ಸಾಹೇಬ’ವರೆಗೂ ಹಲವು ಸ್ಮರಣೀಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ದೀರ್ಘಕಾಲದ ಕಲಾಸೇವೆಯನ್ನು ಈ ಪ್ರಶಸ್ತಿ ಗೌರವಿಸಿದೆ.

ಅದೇ ವರ್ಷ, ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಹಾಗೂ ಹಿರಿಯ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ನೀಡಲಾಗಿದೆ. ಚಿತ್ರರಂಗಕ್ಕೆ ಅವರು ನೀಡಿದ ಜೀವಮಾನ ಕೊಡುಗೆಯನ್ನು ಇದು ಗುರುತಿಸುತ್ತದೆ.

ಇನ್ನು 2021ನೇ ಸಾಲಿನ ಡಾ. ರಾಜ್‌ಕುಮಾರ್‌ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ ಘೋಷಿಸಲಾಗಿದೆ. ಅವರು ಹಲವು ವರ್ಷಗಳಿಂದ ಸಿನಿಮಾ ನಿರ್ಮಾಣದ ಜೊತೆಗೆ ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

2021ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನಿರ್ದೇಶಕ ಶಿವರುದ್ರಯ್ಯ ಅವರಿಗೆ ಲಭಿಸಿದ್ದು, ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಹಿರಿಯ ನಟ ಎಂ.ಕೆ. ಸುಂದರ್ ರಾಜ್ ಅವರಿಗೆ ಘೋಷಿಸಲಾಗಿದೆ.

1993ರಿಂದ ನೀಡಲಾಗುತ್ತಿರುವ ಡಾ. ರಾಜ್‌ಕುಮಾರ್‌ ಪ್ರಶಸ್ತಿ ಕನ್ನಡ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಈ ಪ್ರಶಸ್ತಿಗೆ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. ಮೊದಲ ಪ್ರಶಸ್ತಿ ವಿಜೇತ ಕೆ.ಎಸ್. ಅಶ್ವತ್ಥ್ ಆಗಿದ್ದು, 2019ರಲ್ಲಿ ಉಮಾಶ್ರೀ ಈ ಗೌರವ ಪಡೆದಿದ್ದರು. ಇದೀಗ, ಜಯಮಾಲಾ ಮತ್ತು ಸಾ.ರಾ. ಗೋವಿಂದು ಅವರ ಸೇರ್ಪಡೆ ಈ ಗೌರವದ ಸಾಲನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ.

ಡ್ರೀಮ್ ಗರ್ಲ್ ಬದುಕಿನ ಕತ್ತಲು ಅಧ್ಯಾಯ: ಹೇಮಾ ಮಾಲಿನಿ ಹೇಳಿದ ದೆವ್ವದ ಮನೆಯ ಭಯಾನಕ ಕಥೆ

1980ರಲ್ಲಿ ಧರ್ಮೇಂದ್ರ ಅವರನ್ನು ವಿವಾಹವಾದ ನಂತರ, ಹೇಮಾ ಮಾಲಿನಿ ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದರು. ಇತ್ತೀಚೆಗೆ ಧರ್ಮೇಂದ್ರ ನಿಧನರಾದ ಬಳಿಕ, ಅವರ ಜೀವನದ ಕೆಲವು ಮರೆಮಾಚಿದ ನೆನಪುಗಳು ಮತ್ತೆ ಚರ್ಚೆಗೆ ಬಂದಿವೆ. ಅದರಲ್ಲಿ ಒಂದು ದೆವ್ವದ ಬಂಗಲೆಯ ಭಯಾನಕ ಅನುಭವ.

ಹೇಮಾ ಮಾಲಿನಿ ತಮ್ಮ ಆತ್ಮಕಥೆ ‘ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್’ ಪುಸ್ತಕದಲ್ಲಿ ಈ ಅನುಭವವನ್ನು ವಿವರವಾಗಿ ಬರೆದಿದ್ದಾರೆ. ಚೆನ್ನೈ ಮತ್ತು ದೆಹಲಿಯಲ್ಲಿ ಬೆಳೆದ ಅವರು, ಹಸಿರಿನಿಂದ ತುಂಬಿದ ಬಂಗಲೆಯಲ್ಲಿ ವಾಸಿಸುವುದನ್ನು ಬಹಳ ಇಷ್ಟಪಡುತ್ತಿದ್ದರು. ಮುಂಬೈಗೆ ಬಂದ ಬಳಿಕ ಫ್ಲಾಟ್ ಜೀವನಕ್ಕೆ ಹೊಂದಿಕೊಂಡರೂ, ಮನಸ್ಸಿನಲ್ಲಿ ಬಂಗಲೆ ಕನಸು ಜೀವಂತವಾಗಿಯೇ ಇತ್ತು.

ಒಮ್ಮೆ ಅವರ ತಂದೆ ಅವರನ್ನು ದಕ್ಷಿಣ ಮುಂಬೈನ ವಾಲ್ಕೇಶ್ವರಕ್ಕೆ ಕರೆದುಕೊಂಡು ಹೋಗಿದರು. ಸಮುದ್ರದ ಎದುರಿನ ಅಪಾರ್ಟ್ಮೆಂಟ್ ಅನ್ನು ಅವರು ಹೇಮಾ ಮಾಲಿನಿಗಾಗಿ ಖರೀದಿಸಿದರು. ಆದರೆ ದಕ್ಷಿಣ ಮುಂಬೈನಲ್ಲಿ ವಾಸಿಸುವುದು ಇಷ್ಟವಿಲ್ಲ, ಮರಗಳಿಂದ ಆವೃತವಾದ ಮನೆ ಬೇಕು ಎಂದು ಅವರು ತಂದೆಗೆ ತಿಳಿಸಿದರು. ಇದಾದ ನಂತರ ಜುಹುವಿನಲ್ಲಿ ಬಂಗಲೆಯನ್ನು ಹುಡುಕುವ ಕಾರ್ಯ ಆರಂಭವಾಯಿತು.

ಆ ದಿನಗಳಲ್ಲಿ ಹೇಮಾ ಮಾಲಿನಿ ರಾಜ್ ಕಪೂರ್ ಅವರೊಂದಿಗೆ ತಮ್ಮ ಮೊದಲ ಸಿನಿಮಾ ‘ಸಪ್ನೋ ಕಾ ಸೌದಾಗರ್’ ಚಿತ್ರೀಕರಣದಲ್ಲಿದ್ದರು. ಬಾಂದ್ರಾದಲ್ಲಿದ್ದ ಸಣ್ಣ ಅಪಾರ್ಟ್ಮೆಂಟ್‌ನಿಂದ ಬಂಗಲೆಗೆ ಸ್ಥಳಾಂತರಗೊಂಡ ನಂತರ, ಅವರ ಜೀವನದಲ್ಲಿ ವಿಚಿತ್ರ ತಿರುವು ಕಂಡಿತು.

ಪ್ರತಿ ರಾತ್ರಿ ಯಾರೋ ಕತ್ತು ಹಿಸುಕುತ್ತಿರುವ ಅನುಭವ, ಉಸಿರಾಡಲು ಆಗದ ಸ್ಥಿತಿ ಅವರನ್ನು ಕಾಡತೊಡಗಿತು. ಭಯದಿಂದ ಅವರು ತಾಯಿಯ ಪಕ್ಕದಲ್ಲೇ ಮಲಗುತ್ತಿದ್ದರು. ಇದು ಒಂದೆರಡು ದಿನಗಳ ವಿಷಯವಲ್ಲ, ಪ್ರತಿದಿನ ನಡೆಯುತ್ತಿದ್ದ ಕಾರಣ ಆತಂಕ ಹೆಚ್ಚಾಯಿತು. ಈ ಭಯಾನಕ ಅನುಭವವೇ ಹೇಮಾ ಮಾಲಿನಿ ಬದುಕಿನ ಒಂದು ಕತ್ತಲು ಅಧ್ಯಾಯವಾಗಿ ಉಳಿದಿದೆ.

ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್‌ ಶೆಟ್ಟಿ ಸ್ಪರ್ಧೆ: ಆಸ್ಕರ್‌ ರೇಸ್‌ನಲ್ಲಿ ‘ಕಾಂತಾರ: ಚಾಪ್ಟರ್ 1’

ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಇದೀಗ ಜಾಗತಿಕ ವೇದಿಕೆಯಲ್ಲಿ ದೊಡ್ಡ ಗುರುತನ್ನು ಪಡೆಯುವ ಹಾದಿಯಲ್ಲಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್‌ಗೆ ಪ್ರವೇಶ ಪಡೆದಿದ್ದು, ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಹಾಲಿವುಡ್ ನಿರ್ಮಾಣಗಳ ಜೊತೆ ಸ್ಪರ್ಧೆ ನಡೆಸಲಿದೆ. ಇದು ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ ಅಲ್ಲವಾದರೂ, ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

‘ಕಾಂತಾರ’ ಚಿತ್ರದ ಅಪಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಪ್ರೇಕ್ಷಕರನ್ನು ಮತ್ತೆ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದ್ದು, ಒಟಿಟಿ ವೇದಿಕೆಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಜನರ ಮೆಚ್ಚುಗೆ ಹಾಗೂ ವಾಣಿಜ್ಯ ಯಶಸ್ಸು ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಇದೇ ಬ್ಯಾನರ್‌ನ ‘ಮಹಾವತಾರ ನರಸಿಂಹ’ ಚಿತ್ರವೂ ಸಾಮಾನ್ಯ ಪ್ರವೇಶ ಪಟ್ಟಿಯ ಮೂಲಕ ಆಸ್ಕರ್ ರೇಸ್‌ಗೆ ಸೇರಿದೆ. ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಅಂತಿಮವಾಗಿ ಆಸ್ಕರ್ ಗೆಲುವು ಸಾಧಿಸಬಹುದೇ ಎಂಬ ನಿರೀಕ್ಷೆ ಸಿನಿಪ್ರೇಮಿಗಳಲ್ಲಿ ಮೂಡಿದೆ.

ಈವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಆದರೆ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು…’ ಹಾಡು ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ಹಾಡು ಕೂಡ ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕವೇ ರೇಸ್‌ಗೆ ಪ್ರವೇಶ ಪಡೆದಿತ್ತು. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಮೈಸೂರು–ಶಿವಮೊಗ್ಗದಲ್ಲಿ ವಾಯುಮಾಲಿನ್ಯ ಏರಿಕೆ: ಬೆಂಗಳೂರನ್ನೂ ಮೀರಿದ AQI

0

ಬೆಂಗಳೂರು: ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 154ರೊಂದಿಗೆ ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದೆ.

ಇಷ್ಟುದಿನ ಸಾಧಾರಣವಾಗಿದ್ದ ಮೈಸೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಇಂದು ಏಕಾಏಕಿ ವಾಯುಮಾಲಿನ್ಯ ಹೆಚ್ಚಾಗಿ, AQI 172ಕ್ಕೆ ತಲುಪಿದ್ದು ಬೆಂಗಳೂರನ್ನೂ ಮೀರಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರಂತರ ನಿರ್ಮಾಣ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿ ಪರಿಣಮಿಸಿವೆ. ಇದರಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಕಣ್ಣು ಕೊರಕು, ಉಸಿರಾಟದ ತೊಂದರೆ ಮತ್ತು ಅಲರ್ಜಿಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 62 ಹಾಗೂ PM10 ಪ್ರಮಾಣ 85 ದಾಖಲಾಗಿದೆ. PM10 ಎನ್ನುವುದು ಸೂಕ್ಷ್ಮ ಧೂಳಿನ ಕಣಗಳಾಗಿದ್ದು, PM2.5 ಮಾನವನ ಕೂದಲಿನ ದಪ್ಪದ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಶ್ವಾಸಕೋಶದೊಳಗೆ ನೇರವಾಗಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುವ ಮೂಲಕ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಆದರೆ ಇಂದಿನ ದಿನ ಬೆಂಗಳೂರಿನಲ್ಲಿ ಈ ಕಣಗಳ ಪ್ರಮಾಣ ಹಿಂದಿನ ದಿನಗಳಿಗಿಂತ ಸ್ವಲ್ಪ ಕಡಿಮೆಯಿರುವುದು ಸ್ವಲ್ಪ ನಿಟ್ಟುಸಿರಿನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಬೆಳಿಗ್ಗೆ ಮತ್ತು ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಅನಾವಶ್ಯಕ ಹೊರಾಟ ತಪ್ಪಿಸುವುದು, ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ವಾಯುಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI:

ಬೆಂಗಳೂರು – 154
ಮಂಗಳೂರು – 153
ಮೈಸೂರು – 172
ಬೆಳಗಾವಿ – 101
ಕಲಬುರ್ಗಿ – 88
ಶಿವಮೊಗ್ಗ – 172
ಬಳ್ಳಾರಿ – 181
ಹುಬ್ಬಳ್ಳಿ – 75
ಉಡುಪಿ – 139
ವಿಜಯಪುರ – 107
ವಾಯು ಗುಣಮಟ್ಟದಲ್ಲಿ ಉಂಟಾಗುತ್ತಿರುವ ಈ ಏರಿಳಿತಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸುತ್ತಿದ್ದು, ಎಚ್ಚರಿಕೆಯಿಂದಿರಲು ತಜ್ಞರು ಮನವಿ ಮಾಡಿದ್ದಾರೆ.

error: Content is protected !!