Home Blog Page 203

ಹಾಲಿವುಡ್ ಸಿನಿಮಾಗಳ ಜೊತೆ ರಿಷಬ್‌ ಶೆಟ್ಟಿ ಸ್ಪರ್ಧೆ: ಆಸ್ಕರ್‌ ರೇಸ್‌ನಲ್ಲಿ ‘ಕಾಂತಾರ: ಚಾಪ್ಟರ್ 1’

ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಇದೀಗ ಜಾಗತಿಕ ವೇದಿಕೆಯಲ್ಲಿ ದೊಡ್ಡ ಗುರುತನ್ನು ಪಡೆಯುವ ಹಾದಿಯಲ್ಲಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್‌ಗೆ ಪ್ರವೇಶ ಪಡೆದಿದ್ದು, ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಹಾಲಿವುಡ್ ನಿರ್ಮಾಣಗಳ ಜೊತೆ ಸ್ಪರ್ಧೆ ನಡೆಸಲಿದೆ. ಇದು ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ ಅಲ್ಲವಾದರೂ, ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

‘ಕಾಂತಾರ’ ಚಿತ್ರದ ಅಪಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಪ್ರೇಕ್ಷಕರನ್ನು ಮತ್ತೆ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆಸಿದ್ದು, ಒಟಿಟಿ ವೇದಿಕೆಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಜನರ ಮೆಚ್ಚುಗೆ ಹಾಗೂ ವಾಣಿಜ್ಯ ಯಶಸ್ಸು ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ಇದೇ ಬ್ಯಾನರ್‌ನ ‘ಮಹಾವತಾರ ನರಸಿಂಹ’ ಚಿತ್ರವೂ ಸಾಮಾನ್ಯ ಪ್ರವೇಶ ಪಟ್ಟಿಯ ಮೂಲಕ ಆಸ್ಕರ್ ರೇಸ್‌ಗೆ ಸೇರಿದೆ. ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಅಂತಿಮವಾಗಿ ಆಸ್ಕರ್ ಗೆಲುವು ಸಾಧಿಸಬಹುದೇ ಎಂಬ ನಿರೀಕ್ಷೆ ಸಿನಿಪ್ರೇಮಿಗಳಲ್ಲಿ ಮೂಡಿದೆ.

ಈವರೆಗೆ ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಆದರೆ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು…’ ಹಾಡು ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ಹಾಡು ಕೂಡ ಪ್ರತ್ಯೇಕ ಅರ್ಜಿ ಸಲ್ಲಿಕೆ ಮೂಲಕವೇ ರೇಸ್‌ಗೆ ಪ್ರವೇಶ ಪಡೆದಿತ್ತು. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಮೈಸೂರು–ಶಿವಮೊಗ್ಗದಲ್ಲಿ ವಾಯುಮಾಲಿನ್ಯ ಏರಿಕೆ: ಬೆಂಗಳೂರನ್ನೂ ಮೀರಿದ AQI

0

ಬೆಂಗಳೂರು: ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 154ರೊಂದಿಗೆ ಮಧ್ಯಮ ಮಟ್ಟದಲ್ಲಿದ್ದು, ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದೆ.

ಇಷ್ಟುದಿನ ಸಾಧಾರಣವಾಗಿದ್ದ ಮೈಸೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಇಂದು ಏಕಾಏಕಿ ವಾಯುಮಾಲಿನ್ಯ ಹೆಚ್ಚಾಗಿ, AQI 172ಕ್ಕೆ ತಲುಪಿದ್ದು ಬೆಂಗಳೂರನ್ನೂ ಮೀರಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರಂತರ ನಿರ್ಮಾಣ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿ ಪರಿಣಮಿಸಿವೆ. ಇದರಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಆರೋಗ್ಯದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಕಣ್ಣು ಕೊರಕು, ಉಸಿರಾಟದ ತೊಂದರೆ ಮತ್ತು ಅಲರ್ಜಿಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 62 ಹಾಗೂ PM10 ಪ್ರಮಾಣ 85 ದಾಖಲಾಗಿದೆ. PM10 ಎನ್ನುವುದು ಸೂಕ್ಷ್ಮ ಧೂಳಿನ ಕಣಗಳಾಗಿದ್ದು, PM2.5 ಮಾನವನ ಕೂದಲಿನ ದಪ್ಪದ ಶೇ.3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳು. ಇವು ಶ್ವಾಸಕೋಶದೊಳಗೆ ನೇರವಾಗಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುವ ಮೂಲಕ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಆದರೆ ಇಂದಿನ ದಿನ ಬೆಂಗಳೂರಿನಲ್ಲಿ ಈ ಕಣಗಳ ಪ್ರಮಾಣ ಹಿಂದಿನ ದಿನಗಳಿಗಿಂತ ಸ್ವಲ್ಪ ಕಡಿಮೆಯಿರುವುದು ಸ್ವಲ್ಪ ನಿಟ್ಟುಸಿರಿನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಬೆಳಿಗ್ಗೆ ಮತ್ತು ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಅನಾವಶ್ಯಕ ಹೊರಾಟ ತಪ್ಪಿಸುವುದು, ಮನೆಯೊಳಗೆ ಗಿಡಗಳನ್ನು ಬೆಳೆಸುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ವಾಯುಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI:

ಬೆಂಗಳೂರು – 154
ಮಂಗಳೂರು – 153
ಮೈಸೂರು – 172
ಬೆಳಗಾವಿ – 101
ಕಲಬುರ್ಗಿ – 88
ಶಿವಮೊಗ್ಗ – 172
ಬಳ್ಳಾರಿ – 181
ಹುಬ್ಬಳ್ಳಿ – 75
ಉಡುಪಿ – 139
ವಿಜಯಪುರ – 107
ವಾಯು ಗುಣಮಟ್ಟದಲ್ಲಿ ಉಂಟಾಗುತ್ತಿರುವ ಈ ಏರಿಳಿತಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸುತ್ತಿದ್ದು, ಎಚ್ಚರಿಕೆಯಿಂದಿರಲು ತಜ್ಞರು ಮನವಿ ಮಾಡಿದ್ದಾರೆ.

ಹಾವೇರಿ|ಚಿಟ್ ಫಂಡ್‌ ಹೆಸರಲ್ಲಿ ಕೋಟ್ಯಂತರ ವಂಚನೆ: ಕೋರ್ಟ್‌ ಬಳಿ ಆರೋಪಿ ಹಿಡಿದ ಸಂತ್ರಸ್ತರು! ರಸ್ತೆಯಲ್ಲಿ ಮೆರವಣಿಗೆ!

0

ಹಾವೇರಿ: ಚಿಟ್ಸ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ನುಂಗಿಹಾಕಿದ್ದ ವಂಚಕನೊಬ್ಬ ನ್ಯಾಯಾಲಯಕ್ಕೆ ಬರುವ ವೇಳೆ ಗ್ರಾಹಕರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಭಾರೀ ಹೈಡ್ರಾಮವೇ ನಡೆದಿದೆ.

ಎಸ್, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ‘ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್’ ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಗೊಂಡ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.

ಈಶ್ವರ ಚಿನ್ನಿಕಟ್ಟಿ ‘ಸಾಲೇಶ್ವರ ಪಟ್ಟ ಜ್ಯೋತಿ ಕ್ರೆಡಿಟ್ ಸಹಕಾರಿ’ ಹೆಸರಿನಲ್ಲಿ ಚಿಟ್ ಫಂಡ್ ನಡೆಸಿ, ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಚಿಟ್ ಫಂಡ್ ಕ್ಲೋಸ್ ಮಾಡಿ ಪರಾರಿಯಾಗಿದ್ದ ಈಶ್ವರ ಚಿನ್ನಿಕಟ್ಟಿ, ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ಕರೆತರುತ್ತಿದ್ದ ವೇಳೆ ವಿಷಯ ತಿಳಿದ ಸಂತ್ರಸ್ತರು ಕೋರ್ಟ್ ಬಳಿ ಆತನನ್ನು ಅಡ್ಡಗಟ್ಟಿದ್ದಾರೆ. ಪೊಲೀಸ್ ಜೀಪ್‌ನಿಂದ ಕೆಳಗಿಳಿಸಿ ನಡುರಸ್ತೆಯಲ್ಲೇ ವಂಚಕನನ್ನು ಮೆರವಣಿಗೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತರು, ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಚಿಟ್ ಫಂಡ್ಸ್ ಕಾಯ್ದೆ ಅಡಿಯಲ್ಲಿ ಈಶ್ವರ ಚಿನ್ನಿಕಟ್ಟಿ ವಿರುದ್ಧ ರಾಣೇಬೆನ್ನೂರು ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ಶೀತದಲೆ.. ಈ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಇಂದಿನ ಹವಾಮಾನ ಹೀಗಿದೆ!

0

ಬೆಂಗಳೂರು:- ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಶೀತದಲೆಯ ಪ್ರಮಾಣ ಹೆಚ್ಚಾಗಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ದಾವಣಗೆರೆ, ಹಾವೇರಿ,ಬಾಗಲಕೋಟೆ, ಗದಗ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತದಲೆಯ ಪ್ರಮಾಣ ಹೆಚ್ಚಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಮುಂದಿನ 24 ರಿಂದ 48 ಗಂಟೆಯವರೆಗೆ ಇದೇ ತಾಪಮಾನ ಮುಂದುವರೆಯಲಿದ್ದು, ಬೆಚ್ಚಗಿನ ಉಡುಪು ಧರಿಸಿ ಸುರಕ್ಷಿತವಾಗಿರುವಂತೆ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿ ಹಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದೇ ವೇಳೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಕಳೆದ ಹಲವು ದಿನಗಳಿಂದ ಕಾಣಿಸಿಕೊಂಡಿರುವ ಒಣ ಹವೆಯ ವಾತಾವರಣ ಇಂದು ಸಹ ಮುಂದುವರಿಯಲಿದೆ.

ಭೀಕರ ಅಪಘಾತ; ನಿಂತಿದ್ದ ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದು ನಾಲ್ವರು ಸಾವು

0

ತುಮಕೂರು:- ತುಮಕೂರಿನ ಬೆಳ್ಳಾವಿ ಕ್ರಾಸ್ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ರೂಸರ್‌ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ಕೊಪ್ಪಳ ಮೂಲದವರಾದ ಮೃತರೆಲ್ಲರೂ ತಮ್ಮೂರಿಗೆ ತೆರಳುತ್ತಿದ್ದ ವೇಳೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸ್ಥಳೀಯ ಪೊಲೀಸರು ಮೃತ ದೇಹಗಳನ್ನ ತುಮಕೂರು ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಕ್ಷಕರಿಗೆ ಟಿಇಟಿ ಕಡ್ಡಾಯ ನಿಯಮ ಸಡಿಲಗೊಳಿಸಬೇಕು ಎಂಬ ಬೇಡಿಕೆಯೂ ಸೇರಿ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಿಕ್ಷಕರು ಗುರುವಾರ ಕಪ್ಪು ಪಟ್ಟಿ ಧರಿಸಿದ ಶಿಕ್ಷಕರು ಪಾಠ ಪ್ರವಚನಗಳನ್ನು ನಡೆಸಿದರು.

ಶಿಕ್ಷಕರಿಗೆ ಟಿಇಟಿ ಕಡ್ಡಾಯ ನಿಯಮ ಸಡಿಲಗೊಳಿಸಬೇಕು ಎಂಬ ಪ್ರಮುಖ ಬೇಡಿಕೆ ಸುಪ್ರೀಂ ಕೋರ್ಟ್ ಆದೇಶ ಪುನರ್ ಪರಿಶೀಲನೆ ಸಲ್ಲಿಸಿ ಕಾನೂನು ಹೋರಾಟ ಒಂದು ಕಡೆಯಾದರೆ, ಮತ್ತೊಂದು ಕಡೆ ಸರ್ಕಾರ ಹಾಲಿ ಕರ್ತವ್ಯ ನಿರತ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂಬುದು ಶಿಕ್ಷಕರ ಬೇಡಿಕೆಯಾಗಿದ್ದು, ಇದರ ಜೊತೆಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಾತಿ ಕೈಬಿಟ್ಟು ಖಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು, ದೇಶಾದ್ಯಂತ ಎಲ್ಲಾ ಶಿಕ್ಷಕರಿಗೂ ಏಕರೂಪದ ವೇತನ ನೀಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಶಿಕ್ಷಕರು ತರಗತಿಯಲ್ಲಿ ಕಪ್ಪು ಪಟ್ಟಿ ಧರಿಸಿ ಪಾಠ ಪ್ರವಚನ ಮಾಡಿ ಪ್ರತಿಭಟನೆ ನಡೆಸಿದರು.

ಪ್ರಶ್ನಿಸುವ ಮಗುವೇ ಭವಿಷ್ಯದ ವಿಜ್ಞಾನಿ: ಶಾಸಕ ಎನ್.ಎಚ್. ಕೋನರಡ್ಡಿ

0

ವಿಜಯಸಾಕ್ಷಿ ಸುದ್ದಿ, ನವಲಗುಂದ: ವಿಜ್ಞಾನ ಪ್ರದರ್ಶನ ಎಂದರೆ ಕೇವಲ ಮಾದರಿಗಳ ಪ್ರದರ್ಶನವಲ್ಲ. ಇದು ಸೃಜನಶೀಲತೆ ಮತ್ತು ಕುತೂಹಲದ ಹಬ್ಬ. ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು, ಪರಿಶ್ರಮವನ್ನು ಮತ್ತು ವೈಜ್ಞಾನಿಕ ಚಿಂತನೆಯುಳ್ಳ ನವೀನ ಆಲೋಚನೆಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಪ್ರತಿ ಯೋಜನೆಯ ಹಿಂದೆ ಇರುವ ಶ್ರಮ, ಪರಿಶೀಲನೆ, ಪ್ರಯೋಗ ಹಾಗೂ ಅರಿವು ಅಮೂಲ್ಯವಾದದ್ದು. ಪ್ರಶ್ನಿಸುವಿಕೆಯೇ ವಿಜ್ಞಾನದ ತಳಹದಿಯಾಗಿದ್ದು, ಪ್ರಶ್ನಿಸುವ ಮಗುವೇ ಭವಿಷ್ಯದ ವಿಜ್ಞಾನಿ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.

ರಾಯಾಪುರದ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಇಂದು ಮಾಡುತ್ತಿರುವುದು ನಿಜವಾದ ವಿಜ್ಞಾನಿಯ ಕೆಲಸವೇ ಆಗಿದೆ. ವಸ್ತುಪ್ರದರ್ಶನದಲ್ಲಿ ನೀವು ಗಮನಿಸುತ್ತೀರಿ, ಪ್ರಶ್ನಿಸುತ್ತೀರಿ, ಊಹಿಸುತ್ತೀರಿ, ಪ್ರಯೋಗ ಮಾಡುತ್ತೀರಿ ಮತ್ತು ಕಂಡುಹಿಡಿಯುತ್ತೀರಿ. ಈ ಪ್ರಕ್ರಿಯೆಯೇ ನಿಮಗೆ ಆತ್ಮವಿಶ್ವಾಸ ನೀಡುತ್ತದೆ ಮತ್ತು ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಶಕ್ತಿಯನ್ನು ನೀಡುತ್ತದೆ ಎಂದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ವಿಜ್ಞಾನ ವಿಷಯವು ಪಾಠ-ಪುಸ್ತಕಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ನಮ್ಮ ದಿನನಿತ್ಯದ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ವಿಜ್ಞಾನ ಇದೆ. ನಾವು ಬಳಸುವ ಮೊಬೈಲ್ ಫೋನ್‌ಗಳಿಂದ ಹಿಡಿದು ವಿದ್ಯುತ್, ವೈದ್ಯಕೀಯ ಚಿಕಿತ್ಸೆಗಳು, ಸಂಚಾರ ಸೌಲಭ್ಯಗಳು, ಬಾಹ್ಯಾಕಾಶ ಸಂಶೋಧನೆಗಳವರೆಗೆ ಎಲ್ಲವೂ ವಿಜ್ಞಾನದ ಕೊಡುಗೆ. ಪಾಲಕರೂ ಕೂಡ ತಮ್ಮ ಮಕ್ಕಳ ಕುತೂಹಲವನ್ನು ಪ್ರೋತ್ಸಾಹಿಸಬೇಕು. ಅವರಿಗೆ ಪ್ರಯೋಗ ಮಾಡಲು ಅವಕಾಶ ನೀಡಬೇಕು. ಇಂದಿನ ಪ್ರಯೋಗ ಮಾಡುವ ಮಗು ನಾಳೆಯ ವಿಜ್ಞಾನಿಯಾಗಬಲ್ಲದು ಎಂದರು.

ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಸತತವಾಗಿ ಕಲಿಯಿರಿ, ಕಲ್ಪನೆ ಮಾಡಿ ಮತ್ತು ಪ್ರಯೋಗಗಳನ್ನು ಮುಂದುವರಿಸಿ. ಶಿಕ್ಷಕರು ಮಕ್ಕಳನ್ನು ವೈಜ್ಞಾನಿಕ ಮನೋಭಾವದತ್ತ ದಾರಿ ತೋರುತ್ತಿರುವ ಕಾರ್ಯವು ಅವರನ್ನು ಭವಿಷ್ಯದ ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಪರಿಸರ ಕ್ಷೇತ್ರದ ತಜ್ಞರನ್ನಾಗಿ ರೂಪಿಸಬಲ್ಲದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕರು(ಅ) ಹಾಗೂ ಡಯಟ್ ಪ್ರಾಂಶುಪಾಲ ಬಸವರಾಜ ನಾಲತವಾಡ ಮಾತನಾಡಿ, ಇಂದು ನಾವು ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿರುವುದು ವಿಜ್ಞಾನ, ಸೃಜನಶೀಲತೆ ಮತ್ತು ಸಂಶೋಧನೆಯ ಸಂಭ್ರಮ ಆಚರಿಸಲು. ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತದೆ. ಪ್ರಶ್ನಿಸಲು ಮತ್ತು ಉತ್ತರ ಕಂಡುಹಿಡಿಯಲು ಧೈರ್ಯ ನೀಡುತ್ತದೆ. ಕಲ್ಪನೆ ಮತ್ತು ಜ್ಞಾನವನ್ನು ನೈಜ ಜೀವನಕ್ಕೆ ಸಂಪರ್ಕಿಸುತ್ತದೆ. ಟೀಮ್ ವರ್ಕ್ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಬೆಳೆಸುತ್ತದೆ. ಹೊಸ ಆವಿಷ್ಕಾರಗಳತ್ತ ವಿದ್ಯಾರ್ಥಿಗಳನ್ನು ತೆಗೆದುಕೊಂಡು ಹೋಗುತ್ತದೆ ಎಂದರು.

ಡಾ. ಗಾಯತ್ರಿ ಜೋಶಿ ಪ್ರಾರ್ಥಿಸಿದರು. ಉಪನಿರ್ದೇಶಕ (ಆಡಳಿತ) ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ದೀಪಕ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಎನ್ ಶೆಟ್ಟಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪನ್ಯಾಸಕರಾದ ಕುಮಾರ ಹುಲಗೂರ, ಗೀತಾ ಚುಳುಕಿ ಹಾಗೂ ಈರಯ್ಯ ವೆಂಕಟಾಪೂರಮಠ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಪುಟ್ಟಪ್ಪ ಭಜಂತ್ರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಉಪನಿರ್ದೇಶಕರಾದ ಗಿರೀಶ ಪದಕಿ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ರವಿಕುಮಾರ ಹೊಸಮನಿ, ಶ್ಯಾಮ್ ಮಲ್ಲನಗೌಡ್ರ, ನಾರಾಯಣ ಭಜಂತ್ರಿ, ಎಸ್.ಎಫ್. ಸಿದ್ದನಗೌಡರ, ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಓ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಶಿಕ್ಷಣಾಧಿಕಾರಿಗಳಾದ ಪಿ.ಕೆ. ಚಿಕ್ಕಮಠ, ನಫೀಸಾ ದಾವಲಸಾಬನವರ, ಹೊನ್ನಪ್ಪನವರ, ವಿ.ಎಫ್. ಚುಳುಕಿ, ಲಗಮಣ್ಣವರ, ಜಯಶ್ರೀ ವರೂರ, ರೂಪಾ ಪೂರಂಕರ, ಬಶೆಟ್ಟಿ, ಹೇಮರಾಜ ಅರ್ಜುನವರ, ಶ್ರೀಧರಪಾಟೀಲ ಕುಲಕರ್ಣಿ, ಹುದ್ದಾರ, ಜ್ಞಾನ ವಿಕಾಸ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀನಿವಾಸ, ಡಯಟ್‌ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಒಟ್ಟು ವಿದ್ಯಾರ್ಥಿಗಳ 15 ವೈಯಕ್ತಿಕ ಮತ್ತು 10 ಗುಂಪು ವಿಭಾಗದಿಂದ, 10 ಶಿಕ್ಷಕರ ವಿಭಾಗದಿಂದ ಮಾದರಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ತೆಲಂಗಾಣದಲ್ಲಿ ನಡೆಯುವ ದಕ್ಷಿಣ ಭಾರತ ವಲಯಮಟ್ಟದ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ತಾಲೂಕಿನ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಹಿರಿದು: ಎನ್.ಜಿ. ಮನೋಹರ್

0

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಶೋಷಿತರ ಹಾಗೂ ದಮನಿತರ ಧ್ವನಿಯಾಗಿ ಪತ್ರಿಕೋದ್ಯಮ ಬೆಳೆಯುತ್ತ ಬಂದಿದೆ. ಆದರೆ ತಾಲೂಕಿನಲ್ಲಿ ಕೆಲ ಪತ್ರಕರ್ತರು ಕೇವಲ ಒಂದು ವರ್ಗದತ್ತ ಹೆಚ್ಚು ಕೇಂದ್ರೀಕೃತರಾಗಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ. ಮನೋಹರ್ ಅಭಿಪ್ರಾಯಪಟ್ಟರು.

ಹರಪನಹಳ್ಳಿ ನಗರದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್‌ನಲ್ಲಿ ನೂತನವಾಗಿ ಆಯ್ಕೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ಪದಾಧಿಕಾರಿಗಳಿಗೆ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಚಳವಳಿ ಹಾಗೂ ಆಂದೋಲನಗಳು ಯಶಸ್ವಿಯಾಗಬೇಕಾದರೆ ಸುದ್ದಿ ಮಾಧ್ಯಮಗಳ ಪಾತ್ರ ಅಮೋಘವಾಗಿದೆ. ಇಂದಿನ ಪತ್ರಿಕೋದ್ಯಮದಲ್ಲೇ ಆಂತರಿಕ ಸಮಸ್ಯೆಗಳು ರೆಕ್ಕೆಯಿಲ್ಲದ ಹಕ್ಕಿಯಂತಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸುವುದು ಹಾಗೂ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಸಮಾಜ ಗಮನದಲ್ಲಿಟ್ಟುಕೊಳ್ಳಬೇಕು. ಸಮಾಜಮುಖಿ ಕೆಲಸಗಳು ನಡೆಯಬೇಕು. ಅಂತಹ ಕಾರ್ಯಗಳು ನಿಮ್ಮಿಂದ ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಸಂಗಯ್ಯ, ಸಿ. ನಾಗರಾಜ, ಕಮ್ಮತ್ತರ ಅಂಜಿನಪ್ಪ, ವೀರಪ್ಪ, ಪಿ. ಸುಬ್ಬಣ್ಣ, ಇಸ್ಮಾಯಿಲ್ ಗಿರಿರಾಜ್, ಜಮಾಲುದ್ದೀನ್, ಶೋಭಾಕುಮಾರಿ, ಹುಸೇನ್ ಬಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಹಾಗೂ ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ. ಮನೋಹರ್, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಎಚ್.ಎಂ. ಲತಾ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಗುರುಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ತಾಲೂಕಾಧ್ಯಕ್ಷ ಎ. ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ವೈ. ದುರುಗೇಶ್, ಗೌರವಾದ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪಾಧ್ಯಕ್ಷ ಪಿ. ವೆಂಕಟೇಶ್, ಹಿರಿಯ ಪತ್ರಕರ್ತ ಡಿ. ವಿಶ್ವನಾಥ, ನಾಗಭೂಷಣ, ವೆಂಕಟಪತಿ ರಾಜು, ರಾಮಚಂದ್ರ ನಾಗತಿಕಟ್ಟೆ, ಭೋವಿ ಮಂಜುನಾಥ, ಎ. ಬಸವರಾಜ, ಕೆ. ಬಸವರಾಜ, ಶಬ್ಬೀರ್, ಮೈಲಾರಿ, ಶಶಿ, ಪಿ. ಬಸವರಾಜ ಮುಂತಾದವರು ಹಾಜರಿದ್ದರು.

ಪ್ರಗತಿಪರ ಚಿಂತಕ ಹಾಗೂ ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಹಾಗೂ ಪತನಗೊಳಿಸುವ ಶಕ್ತಿ ಮಾಧ್ಯಮಕ್ಕಿದೆ. ಸತ್ಯದಿಂದ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದೇ, ವಾಸ್ತವಕ್ಕೆ ಸಮೀಪವಿರುವ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು. ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಹೇಳಿದರು.

ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಗುತ್ತಿಗೆದಾರರು ಹಾಗೂ ಆಯಾ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.

ಅವರು ಗುರುವಾರ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಸಲಹೆ–ಸೂಚನೆ ಹಾಗೂ ಸಹಕಾರ ನೀಡುವ ಕಾರ್ಯವಾಗಬೇಕು. ವಿನಾಕಾರಣ ಹಾಗೂ ದುರುದ್ದೇಶದಿಂದ ಕಾಮಗಾರಿಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ಪಂಚಾಯತ್‌ರಾಜ್ ಇಲಾಖೆಯ ಅಂಗನವಾಡಿಗಳಿಗೆ ಜೆಜೆಎಂ ಮುಖಾಂತರ ನೀರು ಸರಬರಾಜು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಿಡಿಪಿಓ ಹಾಗೂ ಆರ್‌ಡಿಪಿಆರ್ ಇಂಜಿನಿಯರ್‌ಗಳ ವಿಭಿನ್ನ ಹೇಳಿಕೆಗಳನ್ನು ಕೇಳಿದ ಶಾಸಕರು, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸದಿದ್ದರೆ ಕಾಮಗಾರಿಗಳು ಅಪೂರ್ಣವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು. ಆದ್ದರಿಂದ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ ಎಂದು ಸೂಚಿಸಿದರು.

ನಿರ್ಮಿತಿ ಕೇಂದ್ರದವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಿ ಹೈಟೆಕ್ ಶೌಚಾಲಯ ನಿರ್ಮಾಣದ ಯೋಜನೆ ರೂಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಹಾಕಿಸಿಕೊಂಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗೆ ಸರ್ಕಾರದಿಂದ ಮೌಲಾನಾ ಅಬ್ದುಲ್ ಕಲಾಂ ಶಾಲೆಗೆ ಅನುದಾನ ಲಭ್ಯವಾಗಲಿದ್ದು, ಒಂದು ಎಕರೆ ನಿವೇಶನ ಗುರುತಿಸುವಂತೆ ಸೂಚಿಸಿದರು. ಆದರ್ಶ ಗ್ರಾಮ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮತಮ್ಮ ಇಲಾಖೆಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ ಮಾತನಾಡಿ, ಅಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು ಹಾಗೂ ಸಭೆಯ ಗಂಭೀರತೆಯನ್ನು ಅರಿತು ನಡೆದುಕೊಳ್ಳಬೇಕು ಎಂದರು.

ತಾ.ಪಂ ಇಒ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು. ಸಭೆಯಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಹೆಸ್ಕಾಂ, ಆಹಾರ, ತೋಟಗಾರಿಕೆ, ಕೃಷಿ, ಅಲ್ಪಸಂಖ್ಯಾತರ, ನಿರ್ಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿ, ಕೆಲವು ಶಾಲೆಗಳ ಶೌಚಾಲಯಗಳು ಅಪೂರ್ಣಗೊಂಡಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣದ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೇಂದ್ರ ಸರ್ಕಾರ ಕೂಲಿಕಾರರ ಹಿತ ಕಾಪಾಡಿಲ್ಲ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿರುವ ಬಗ್ಗೆ ಸಚಿವ ಸಂಪುಟ ಸಭೆ ಚರ್ಚೆ ನಡೆಸಿದ್ದು, ಇದರ ಬದಲಿಗೆ ತಂದಿರುವ ವಿಬಿಜಿ, ರಾಮ್ ಜಿ ಯೋಜನೆಯ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ ತಿಳಿಸಿದರು.

ಅವರು ಗುರುವಾರ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ತಿಳಿಸಿದರು.

ಜನರ ನ್ಯಾಯಾಲಯಕ್ಕೂ ವಿಬಿಜಿ, ರಾಮ್ ಜಿ ಯೋಜನೆ ತೆಗೆದುಕೊಂಡು ಹೋಗಲು ನಿರ್ಣಯಿಸಲಾಗಿದೆ. ಸಂವಿಧಾನದ 73ನೇ ತಿದ್ದುಪಡಿಯಾದ ನಂತರ ದೇಶದಲ್ಲಿ ವಿಕೇಂದ್ರೀಕರಣವಾಗಿದೆ. ಈ ಯೋಜನೆಯಿಂದ ವಿಕೇಂದ್ರೀಕರಣಕ್ಕೆ ಕೊಡಲಿ ಏಟು ಬಿದ್ದಿದೆ. ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಎಂ.ಜಿ.ಎನ್.ಆರ್.ಇ.ಜಿ.ಎ ವಾಪಸ್ಸು ಪಡೆಯುವ ಮೂಲಕ ಮಾಡಲಾಗಿದೆ ಎಂದರು.

ಎಂ.ಜಿ.ಎನ್.ಆರ್.ಇ.ಜಿ.ಎ ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಈಗ ಕರಾಳ ಕಾನೂನು ತಂದು ಕಾರ್ಮಿಕರು, ಗುತ್ತಿಗೆದಾರರು ಮಾಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕಿದೆ. ಕೂಲಿಕಾರರ ಹಿತ ಕಾಪಾಡುವ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರಿಸಿಲ್ಲ. ಬದಲಿಗೆ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ. ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಈ ಕರಾಳ ಶಾಸನವನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹಾಗೂ ಜನರ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

ಮೇಲ್ನೋಟಕ್ಕೆ 125 ದಿನ ಕೆಲಸ ನೀಡುವುದು ಎಂದಿದ್ದರೂ, ನಿರ್ದಿಷ್ಟವಾಗಿ ಆಗುವಂತಿಲ್ಲ. ಇದಕ್ಕೆ ಹಣವೆಲ್ಲಿದೆ? ಶೇ. 40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಭಾರೀ ಪ್ರಮಾಣದ ಆರ್ಥಿಕ ಹೊರೆ ಬೀಳುವಂತಿದ್ದರೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಆದರೆ ಹಾಗೆ ಆಗಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರ ಇದನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.

ಪಂಚಾಯತಿ ಚುನಾವಣೆಯನ್ನು ಆದಷ್ಟು ಶೀಘ್ರವಾಗಿ ನಡೆಸಲು ತೀರ್ಮಾನಿಸಿದೆ. ಹಲವಾರು ಪಂಚಾಯಿತಿಗಳು ಸುಪ್ರೀಂ ಕೋರ್ಟಿಗೆ ಹೋಗುವಂತೆ ರಾಜ್ಯ ಸರ್ಕಾರವನ್ನು ಕೋರಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪೈಕಿ ಇಬ್ಬರು ಶಿಕ್ಷಾ ಬಂಧಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಬಿಡುಗಡೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

error: Content is protected !!