ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವವರ ವಿರುದ್ಧ ಗುತ್ತಿಗೆದಾರರು ಹಾಗೂ ಆಯಾ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.
ಅವರು ಗುರುವಾರ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಸಲಹೆ–ಸೂಚನೆ ಹಾಗೂ ಸಹಕಾರ ನೀಡುವ ಕಾರ್ಯವಾಗಬೇಕು. ವಿನಾಕಾರಣ ಹಾಗೂ ದುರುದ್ದೇಶದಿಂದ ಕಾಮಗಾರಿಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು. ಪಂಚಾಯತ್‌ರಾಜ್ ಇಲಾಖೆಯ ಅಂಗನವಾಡಿಗಳಿಗೆ ಜೆಜೆಎಂ ಮುಖಾಂತರ ನೀರು ಸರಬರಾಜು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಿಡಿಪಿಓ ಹಾಗೂ ಆರ್‌ಡಿಪಿಆರ್ ಇಂಜಿನಿಯರ್‌ಗಳ ವಿಭಿನ್ನ ಹೇಳಿಕೆಗಳನ್ನು ಕೇಳಿದ ಶಾಸಕರು, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸದಿದ್ದರೆ ಕಾಮಗಾರಿಗಳು ಅಪೂರ್ಣವಾಗಬಹುದು ಅಥವಾ ಸ್ಥಗಿತಗೊಳ್ಳಬಹುದು. ಆದ್ದರಿಂದ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ ಎಂದು ಸೂಚಿಸಿದರು.
ನಿರ್ಮಿತಿ ಕೇಂದ್ರದವರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಿ ಹೈಟೆಕ್ ಶೌಚಾಲಯ ನಿರ್ಮಾಣದ ಯೋಜನೆ ರೂಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಹಾಕಿಸಿಕೊಂಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಗೆ ಸರ್ಕಾರದಿಂದ ಮೌಲಾನಾ ಅಬ್ದುಲ್ ಕಲಾಂ ಶಾಲೆಗೆ ಅನುದಾನ ಲಭ್ಯವಾಗಲಿದ್ದು, ಒಂದು ಎಕರೆ ನಿವೇಶನ ಗುರುತಿಸುವಂತೆ ಸೂಚಿಸಿದರು. ಆದರ್ಶ ಗ್ರಾಮ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮತಮ್ಮ ಇಲಾಖೆಗಳ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ ಮಾತನಾಡಿ, ಅಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು ಹಾಗೂ ಸಭೆಯ ಗಂಭೀರತೆಯನ್ನು ಅರಿತು ನಡೆದುಕೊಳ್ಳಬೇಕು ಎಂದರು.
ತಾ.ಪಂ ಇಒ ಕೃಷ್ಣಪ್ಪ ಧರ್ಮರ ಉಪಸ್ಥಿತರಿದ್ದರು. ಸಭೆಯಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಹೆಸ್ಕಾಂ, ಆಹಾರ, ತೋಟಗಾರಿಕೆ, ಕೃಷಿ, ಅಲ್ಪಸಂಖ್ಯಾತರ, ನಿರ್ಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಯ ಚರ್ಚೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿ, ಕೆಲವು ಶಾಲೆಗಳ ಶೌಚಾಲಯಗಳು ಅಪೂರ್ಣಗೊಂಡಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣದ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

