Home Blog Page 205

ಟಿ.ಎಲ್. ರಾಜಕುಮಾರರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನಲ್ಲಿ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೃಹರಕ್ಷಕ ದಳ ಗದಗ ಜಿಲ್ಲಾ ಕಚೇರಿಯ ಸಿಬ್ಬಂದಿ ಟಿ.ಎಲ್. ರಾಜಕುಮಾರ ಅವರು ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ (45 ವರ್ಷ ಮೇಲ್ಪಟ್ಟು ವಿಭಾಗದಲ್ಲಿ) ಹಾಗೂ ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ದ್ವಿತೀಯ ಸ್ಥಾನ (45 ವರ್ಷ ಒಳಪಟ್ಟು ವಿಭಾಗದಲ್ಲಿ) ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಗೃಹರಕ್ಷಕ ದಳ ಇಲಾಖೆಯ ಜಿಲ್ಲಾ ಸಮಾದೇಶ್ಠ ಚನ್ನಾರಡ್ಡಿ ಬಸವರಾಜ ಗೊಳರಡ್ಡಿರವರು, ಅಡ್ಜುಟೆಂಟ್ ಕೆ.ಸಿ. ವಕ್ಕಳದ, ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ, ಘಟಕಾಧಿಕಾರಿಗಳಾದ ಎಸ್.ಎಫ್. ದೊಡ್ಡಮನಿ, ಸಿ.ಜಿ. ಮುದಿಯಪ್ಪನವರ, ಆರ್.ಎಂ. ಹುಡೇದ, ಸಿಬ್ಬಂದಿಗಳಾದ ಬಿ.ಡಿ. ನಾಯಕ, ಬಿ.ಎಸ್. ಬಸವರಡ್ಡಿ ಮುಂತಾದವರಿದ್ದರು.

ಸಾಮೂಹಿಕ ಸತ್ಯನಾರಾಯಣ ಪೂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ತಾಲೂಕು, ಗದಗ ಸಿಟಿ ವಲಯದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮವನ್ನು ನಗರದ ಸಂಸ್ಕೃತ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಓಂಕಾರೇಶ್ವರ ಹಿರೇಮಠದ ಪಟ್ಟಾಧ್ಯಕ್ಷರಾದ ಷ. ಬ್ರ. ಶ್ರೀ ಫಕೀರೇಶ್ವರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕೀರ್ತಿ ಜಕನೂರು ವಹಿಸಿದ್ದರು.

ಕ್ರಾಂತಿಸೇನಾ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ಮಹಿಳೆಯರು ಸಬಲರಾಗಲು ಧರ್ಮಸ್ಥಳ ಸಂಸ್ಥೆ ಸಹಾಯ ಮಾಡುತ್ತದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಪಾಲ್ಗೊಂಡಿದ್ದರು. ಯೋಜನಾಧಿಕಾರಿ ಉಮಾ ಎನ್.ಜಿ ಸಂಸ್ಥೆಯ ಚಟುವಟಿಕೆಗಳನ್ನು ತಿಳಿಸಿದರು.

ಸುಧೀರ ಕಾಟಿಗಾರ, ಡಾ. ಗಣೇಶ ಸುಲ್ತಾನಪುರ ಮಾತನಾಡಿದರು. ಪದ್ಮಾವತಿ ಪರಶುರಾಮ ಕಟಿಗಿ, ನಾಗರೆಡ್ಡಿ ತಿಮ್ಮಣ್ಣ ನಿಡಗುಂದಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಿರಣ ಎಂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಮಧ್ಯಾಹ್ನದ ಬಿಸಿಯೂಟದ ಜೊತೆ ಕೋಳಿಮೊಟ್ಟೆ ಯೋಜನೆ: ಶಾಲಾ ಮುಖ್ಯ ಶಿಕ್ಷಕರಿಗೆ ತಲೆನೋವು

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಮಧ್ಯಾಹ್ನದ ಬಿಸಿಯೂಟದ ಜೊತೆ ಕೋಳಿಮೊಟ್ಟೆ ಯೋಜನೆ ಇದೀಗ ಮುಖ್ಯ ಶಿಕ್ಷಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮೊಟ್ಟೆಯ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣದಿಂದ ಸರಕಾರ ನೀಡುವ ಅನುದಾನ ಸಾಲದೆ, ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ಶಾಲಾ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ. ಈ ಯೋಜನೆಯ ಮೂಲಕ ಸರಕಾರ ನೀಡುವ ಅನುದಾನದಡಿ ಈ ಹಿಂದೆ ವಾರಕ್ಕೆ ಎರಡು ದಿನಗಳ ಕಾಲ ಮೊಟ್ಟೆ ನೀಡಲಾಗುತ್ತಿತ್ತು. 2024ರ ಸೆಪ್ಟೆಂಬರ್ ತಿಂಗಳಿನಿಂದ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ಅಜೀಂ ಪ್ರೇಮ್ ಫೌಂಡೇಷನ್ ಸಹಕಾರದೊಂದಿಗೆ ವಾರಕ್ಕೆ ಆರು ದಿನಗಳ ಕಾಲ ಮೊಟ್ಟೆ ವಿತರಣೆಗೆ ಸರಕಾರ ನಿರ್ಧಾರ ಕೈಗೊಂಡಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಸೇವಿಸುವ ಆಯ್ಕೆಯನ್ನೂ ನೀಡಲಾಗಿದೆ.

ಈ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸರಕಾರದ ಉದ್ದೇಶ ಒಳ್ಳೆಯದೇ. ಆದರೆ ಅದನ್ನು ಜಾರಿ ಮಾಡಿರುವ ವಿಧಾನ ಶಿಕ್ಷಕರಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ. ಸರಕಾರ ಬಾಳೆ ಹಣ್ಣು ಖರೀದಿಗೆ 6 ರೂ, ಮೊಟ್ಟೆಗೆ 6 ರೂನಂತೆ ನೀಡುತ್ತಿದ್ದು, ಅದರಲ್ಲಿ ಮೊಟ್ಟೆ ಖರೀದಿಯ ವೆಚ್ಚ 5 ರೂ, ಮೊಟ್ಟೆ ಬೇಯಿಸಲು ಗ್ಯಾಸ್ ವೆಚ್ಚ 50 ಪೈಸೆ, 20 ಪೈಸೆ ಅಂಗಡಿಯಿಂದ ಶಾಲೆಗೆ ಮೊಟ್ಟೆ ತರಲು ಸಾಗಾಣಿಕೆ ವೆಚ್ಚ ಹಾಗೂ ಮೊಟ್ಟೆ ಸುಲಿಯಲು 30 ಪೈಸೆ ಅಡಿಗೆಯವರಿಗೆ ನೀಡಲಾಗುತ್ತಿದೆ. ಒಟ್ಟು ಒಂದು ಮೊಟ್ಟೆಗೆ ಸರಕಾರ ನೀಡುವ ಮೊತ್ತ 6 ರೂ ಆಗಿದೆ.

ಆದರೆ, ಪ್ರಸ್ತುತ ಮೊಟ್ಟೆಯ ದರ ತೀವ್ರ ಏರಿಕೆಯಾಗಿದ್ದು, ಒಂದು ಮೊಟ್ಟೆಗೆ 8 ರೂ ಇದೆ. ಹೀಗಾಗಿ, ಸರಕಾರ ಕೊಡುವ ಅನುದಾನ ಸಾಕಾಗದೇ ಹೆಚ್ಚುವರಿಯಾಗಿ ಹಣವನ್ನು ಕೈಯಿಂದ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಶಿಕ್ಷಕರು ಹೋಲ್‌ಸೇಲ್ ದರದಲ್ಲಿ ದೂರದ ಪಟ್ಟಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ತರುವಾಗ ಮಾರ್ಗ ಮಧ್ಯೆ ಒಡೆದು ಹೋದರೆ ಅದರ ವೆಚ್ಚವನ್ನು ಶಿಕ್ಷಕರೇ ಭರಿಸಬೇಕು.

ಮಕ್ಕಳಿಗೆ ಬೋಧನೆಯ ಜೊತೆಗೆ ಹೆಚ್ಚುವರಿಯಾಗಿ ಮೊಟ್ಟೆ ವಿತರಣೆಯ ಕಾಯಕವನ್ನೂ ಹೆಗಲ ಮೇಲೆ ಹಾಕಿಕೊಂಡಿರುವ ಶಿಕ್ಷಕರಿಗೆ ಬೆಲೆ ಏರಿಕೆಯಿಂದ ಶಾಲೆಗಳನ್ನು ನಿಭಾಯಿಸುವುದೇ ಸವಾಲಿನ ಕೆಲಸವಾಗಿದೆ. ಕೆಲವು ಶಿಕ್ಷಕರಂತೂ ಬಿಸಿಯೂಟದ ಜವಾಬ್ದಾರಿಯೇ ಬೇಡ ಎಂದು ಬೇರೆ ಶಿಕ್ಷಕರಿಗೆ ಹಸ್ತಾಂತರ ಮಾಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಮೊಟ್ಟೆ ಬೆಲೆ ಏರಿಕೆ ಆಗಿರುವುದರಿಂದ ಕೆಲವು ಶಾಲೆಗಳಲ್ಲಿ ಮೊಟ್ಟೆ ಬದಲಿಗೆ ಬಾಳೆ ಹಣ್ಣು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಮುಂಡರಗಿ ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಸೇರಿ ಒಟ್ಟು 125 ಸರಕಾರಿ ಶಾಲೆಗಳಿದ್ದು, ಪ್ರತಿದಿನ ಸುಮಾರು 19178 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸಣ್ಣ-ಪುಟ ಶಾಲೆಗಳನ್ನು ನಿಭಾಯಿಸಬಹುದು. ಆದರೆ 100ರಿಂದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲದೇ ಎಸ್‌ಡಿಎಮ್‌ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಕಿರುಕುಳ ದಿನೆ ದಿನೇ ಹೆಚ್ಚಾಗುತ್ತಿದೆ. ಸರ್ಕಾರ ಇದರಲ್ಲಿ ಬದಲಾವಣೆ ಮಾಡಬೇಕು. ಮೊಟ್ಟೆಗಾಗಿಯೇ ನಿತ್ಯ 250 ರೂಗಿಂತ ಹೆಚ್ಚಿನ ಹಣವನ್ನು ಕೈಯಿಂದ ಭರಿಸಬೇಕಿದೆ. ಅಕಸ್ಮಾತ್ ಮೊಟ್ಟೆ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಮೇಲಧಿಕಾರಿಗಳಿಂದ ನೋಟಿಸ್ ಬರುತ್ತದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು.

ಮೊಟ್ಟೆಯ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಪೂರಕ ಪೌಷ್ಟಿಕ ಮೊಟ್ಟೆಯ ಘಟಕದ ಬೆಲೆ ಹೆಚ್ಚಿಸಿ ಪರಿಷ್ಕರಿಸುವಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಂಘಟನೆಯ ಮೂಲಕವೂ ಮನವಿ ನೀಡಲಾಗಿದೆ. ಈ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿಗಳು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಸರಕಾರ ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸುವ ಬಗ್ಗೆ ಆಶಾಭಾವನೆ ಇದೆ.

  • ಎಸ್.ವಾಯ್. ವಿಭೂತಿ.
    ಸಹಾಯಕ ನಿರ್ದೇಶಕರು,
    ಅಕ್ಷರ ದಾಸೋಹ-ಮುಂಡರಗಿ.

ದೀರ್ಘಾವಧಿ ಸಿಎಂ ಆಗಿ ಚರಿತ್ರೆ ಬರೆದ ಸಿದ್ದರಾಮಯ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಸಮಾನವಾಗಿ ಸಿಎಂ ಅಧಿಕಾರಾವಧಿಯನ್ನು ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿಯ ಸಿಎಂ ಎನ್ನುವ ದಾಖಲೆ ಬರೆದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಇಲ್ಲಿನ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಮಾತನಾಡಿ, ರಾಜ್ಯ ರಾಜಕಾರಣದ ಇತಿಹಾಸದ ಪುಟಗಳಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸಿದ್ದರಾಮಯ್ಯನವರದ್ದಾಗಿದೆ. ಮೈಸೂರಿನ ಸಿದ್ದರಾಮನಹುಂಡಿ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯ ವಿಧಾನಸೌಧದ ಶಕ್ತಿ ಪೀಠದಲ್ಲಿ ದೀರ್ಘಕಾಲ ಕುಳಿತು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ನೀಡಿದ್ದ ಐದು ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಳಪ್ಪ ಗಂಗರಾತ್ರಿ, ರಾಮಪ್ಪ ಹಚ್ಚಪ್ಪನವರ, ಶರಣಪ್ಪ ಜೋಗಿನ, ಮಲ್ಲಪ್ಪ ಇದ್ಲಿ, ಸಂಗಪ್ಪ ಮಳ್ಳಿ, ಚಿನ್ನಪ್ಪ ಬಿಸನಳ್ಳಿ, ವಿರೂಪಾಕ್ಷಪ್ಪ ಸೋಮಾಪೂರ, ಹನುಮಪ್ಪ ಜೋಗಿನ, ಭೀಮಪ್ಪ ಆಲೂರು, ಕಪ್ಪತ್ತಪ್ಪ ಸೊಂಪೂರ, ರಾಮಣ್ಣ ಗಾಣದ, ಮಾರುತಿ ಬಾಬರಿ, ಮುದುವಪ್ಪ ದೇವರವರ, ಅರ್ಚಕರಾದ ವೆಂಕಟೇಶ ಪೂಜಾರ, ಶಂಕ್ರಪ್ಪ ಪೂಜಾರ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು.

ಧೂಮಪಾನ ಅಡ್ಡೆಗಳ ಮೇಲೆ ಕೋಟ್ಪಾ ದಾಳಿ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರೀತ್ ಖೋನಾ ನೇತೃತ್ವದಲ್ಲಿ ತಾಲೂಕಾ ತನಿಖಾ ದಳ ಹಾಗೂ ಜಿಲ್ಲಾ ತಂಬಾಕು ಕೋಶ ಗದಗ ವತಿಯಿಂದ ನಗರದ ಮುಳಗುಂದ ರಸ್ತೆಯಲ್ಲಿ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ-2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪ್ರಕರಣ ದಾಖಲಿಸಿ, 4 ಸಾವಿರ ರೂ ದಂಡ ವಿಧಿಸಿ ಶಾಲೆಗಳ 100 ಅಡಿ ಒಳಗಡೆ ತಂಬಾಕು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲಾಯಿತು.

ಕೋಟ್ಪಾ ಕಾಯ್ದೆ ಸೆಕ್ಷನ್ 6ಬಿ ಪ್ರಕಾರ ಶಾಲಾ ಕಾಲೇಜುಗಳ ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದ್ದರೂ ಸಹ ಕೆಲವು ಸ್ಥಳಗಳಲ್ಲಿ ಮಾರಾಟ ಮಾಡುತ್ತಿರುವದು ಕಂಡುಬಂದಿದ್ದು, ಅಂತಹ ಅಂಗಡಿಗಳ ವಿರುದ್ಧ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಿ ಕ್ರಮ ವಹಿಸಲಾಯಿತು. ಪಾನ್-ಬೀಡಾ ಅಂಗಡಿ, ಹೋಟೆಲ್‌ಗಳಲ್ಲಿ ಅನಧಿಕೃತ ಧೂಮಪಾನ ಅಡ್ಡೆಗಳನ್ನು ಮಾಡಿಕೊಂಡು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವಿಸಿ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವನೆಯಿಂದಾಗುವ ಅಪಾಯಕಾರಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಇತ್ಯಾದಿ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಕಾಯ್ದೆ ಉಲ್ಲಂಘನೆಯಾದಲ್ಲಿ ದಂಡದ ಮೊತ್ತ ರೂ. 1000 ಆಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಿಷೇಧಿಸಲಾಗಿದೆ. ಸೆಕ್ಷನ್ 6ಎ ಪ್ರಕಾರ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ನಿಷೇಧಿಸಲಾಗಿದ್ದು, ಈ ಸೆಕ್ಷನ್‌ನಲ್ಲಿ ರೂ. 1000ವರೆಗೆ ದಂಡ ಹೆಚ್ಚಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕೃತ ಸೆಕ್ಷನ್ 4 ಹಾಗೂ ಸೆಕ್ಷನ್ 6ಎ ನಾಮಫಲಕವನ್ನು ಕಡ್ಡಾಯವಾಗಿ ಸ್ಥಳದ ಮಾಲಿಕರು ಬಿತ್ತರಿಸಬೇಕು. ಶಾಲಾ-ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ತಾಲುಕಾ ಆರೋಗ್ಯ ಶಿಕ್ಷಣಾಧಿಕಾರಿ ರಾಜೇಂದ್ರ ಗಡಾದ, ಪೊಲೀಸ್ ಇಲಾಖೆಯ ಪ್ರವೀಣ ವೈ, ಸಿ.ಆರ್. ಹಾದಿಮನಿ, ಎಸ್.ಎಂ. ಬೆಳ್ಳಮ್ಮನವರ, ಸಾಮಾಜಿಕ ಕಾರ್ಯಕರ್ತೆ ಬಸಮ್ಮ ಚಿತ್ತರಗಿ, ರಮೇಶ ಚಕ್ಕಡಿ ಹಾಗೂ ಫಕೀರೇಶ ಖಾನಾಪೂರ ಉಪಸ್ಥಿತರಿದ್ದರು.

ಉತ್ತರಾಯಣದ ಈ ಕಾಲ ಬದಲಾವಣೆಯ ಪರ್ವ: ವೀಣಾ ತಿರ್ಲಾಪುರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯದೇವನು ಮಕರ ಚಕ್ರವನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಉತ್ತರಾಯಣದ ಈ ಪರ್ವ ಬದಲಾವಣೆಗೆ ನಾಂದಿಯಾಗುತ್ತದೆ. ಅಂತೆಯೇ ಮಾನವನಲ್ಲಿಯೂ ಸಹ ಬದಲಾವಣೆ ಸಹಜವಾಗಿರುತ್ತದೆ. ಈ ಕಾಲದಲ್ಲಿ ಚಳಿ ತೊರೆದು ಸೂರ್ಯನ ಕಿರಣ ವ್ಯಾಪ್ತಿ ಮತ್ತು ಅದರ ಶಾಖ ಭೂಮಿಯ ಮೇಲೆ ಹೆಚ್ಚಾಗುತ್ತಾ ಹೋದಂತೆ ಅನೇಕ ಬದಲಾವಣೆ ಪ್ರಕೃತಿಯಲ್ಲಿಯೂ ಸಹ ನಾವು ನೋಡುತ್ತೇವೆ. ಬದಲಾವಣೆಗೆ ತಕ್ಕಂತೆ ನಮ್ಮ ಆಚಾರ-ವಿಚಾರ, ನಡತೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ವೀಣಾ ತಿರ್ಲಾಪುರ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ವಿವಿಧೋದ್ದೇಶ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರೇಮಾ ಮೇಟಿ ಮಾತನಾಡಿ, ಈ ಋತುಮಾನ ಮನುಷ್ಯನನ್ನು ದೈಹಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡ ಬದಲಾವಣೆ ಮಾಡುತ್ತದೆ. ಇದು ಸುಗ್ಗಿಯ ಕಾಲ ಮತ್ತು ಹರ್ಷದ ಪರ್ವಕಾಲ ಎಂದು ನುಡಿದರು.

ಇದೇ ಸಂದರ್ಭದಲ್ಲಿ ದಿ. ಚಂದ್ರಶೇಖರಪ್ಪ ಬಸವಂತಪ್ಪ ಭೂಮರೆಡ್ಡಿ, ದಿ. ಸಂಜಯ್ ರೆಡ್ಡಿ ವೀರಪ್ಪ ಮಾಸರೆಡ್ಡಿ ಮತ್ತು ದಿ. ಕಿರಣ ಹನುಮಪ್ಪ ಮಧುರೆಡ್ಡಿಯವರಿಗೆ ಮೌನಾಚರಣೆ ಸಲ್ಲಿಸಲಾಯಿತು.

ವೇದಿಕೆಯ ಮೇಲೆ ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ್, ಖಜಾಂಚಿ ಸರೋಜಾ ಪೈಲ್ ಉಪಸ್ಥಿತರಿದ್ದರು. ನೀಲ ಮುದರಡ್ಡಿ, ಸುಮಂಗಲ ಪಾಟೀಲ್, ಅಕ್ಕಮ್ಮ ರೆಡ್ಡಿ, ಶಾಂತ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು. ಕವಿತಾ ಕೊಣ್ಣೂರ್ ಪ್ರಾರ್ಥಿಸಿದರು. ಮಧು ಪಾಟೀಲ್ ನಿರೂಪಿಸಿದರು. ಭಾಗ್ಯ ಶಿರೋಳ ವಂದಿಸಿದರು.

ಸ್ನೇಹಿತನ ಪತ್ನಿಯ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಆರೋಪಿ ಅರೆಸ್ಟ್

0

ಬೆಂಗಳೂರು: ಸ್ನೇಹಿತನ ಪತ್ನಿಯೊಂದಿಗೆ ನಡೆದ ವೈಮನಸ್ಸಿನ ಹಿನ್ನೆಲೆಯಲ್ಲಿ ಆಕೆಯ 6 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರುಹಳ್ಳಿಯಲ್ಲಿ ನಡೆದಿದೆ.

ಹತ್ಯೆಯಾದ ಬಾಲಕಿಯನ್ನು ಶನಾದ್ (6) ಎಂದು ಗುರುತಿಸಲಾಗಿದ್ದು, ಆರೋಪಿ ಯೂಸಫ್ ನನ್ನುಪೊಲೀಸರು ಬಂಧಿಸಿದ್ದಾರೆ. ಯೂಸಫ್ ಹಾಗೂ ಬಾಲಕಿಯ ತಂದೆ ಇಜಾಮುಲ್ ಶೇಖ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಉದ್ಯೋಗ ನಿಮಿತ್ತ ನಲ್ಲೂರುಹಳ್ಳಿಯ ಸಮೀಪದ ಮನೆಗಳಲ್ಲಿ ವಾಸವಾಗಿದ್ದರು. ಆರೋಪಿ ಆಗಾಗ ಸ್ನೇಹಿತನ ಮನೆಗೆ ಭೇಟಿ ನೀಡುತ್ತಿದ್ದ ವೇಳೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಇದೇ ದ್ವೇಷದಿಂದ ಬಾಲಕಿಯನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಚರಂಡಿಗೆ ಎಸೆದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಆರೋಪಿ ಬಾಲಕಿಯನ್ನು ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಗು ಕಾಣೆಯಾಗಿದ್ದ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿ ಶವ ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಉದ್ಯೋಗ ಹಕ್ಕು ಕಿತ್ತುಕೊಳ್ಳುವ ಯತ್ನ ಸಹಿಸುವುದಿಲ್ಲ: ವಿಬಿಜಿ ರಾಮ್‌ಜಿ ಕಾಯ್ದೆಗೆ ಡಿಕೆಶಿ ವಿರೋಧ

0

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್‌ಜಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವುದರ ಜೊತೆಗೆ ಬೀದಿಗಿಳಿದು ಜನಾಂದೋಲನ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಹೋಟೆಲ್ ಲಲಿತ್ ಅಶೋಕದಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ಸಚಿವರು, ಸಂಸದರು, ಶಾಸಕರು ಹಾಗೂ ಮುಖಂಡರ ಸಭೆಗೂ ಮುನ್ನ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಕಾಯ್ದೆಯು ಪಂಚಾಯಿತಿಗಳ ಅಧಿಕಾರ ಕಡಿತಗೊಳಿಸಿ ದೆಹಲಿಯಿಂದ ತೀರ್ಮಾನಗಳನ್ನು ಹೇರುವ ಪ್ರಯತ್ನವಾಗಿದೆ. ಶೇಕಡಾ 40% ಅನುದಾನ ಭರಿಸುವುದು ರಾಜ್ಯಗಳಿಗೆ ಅಸಾಧ್ಯ ಎಂದು ಅವರು ಹೇಳಿದರು.

ರಾಜ್ಯಗಳ ಅಭಿಪ್ರಾಯ ಪಡೆಯದೇ ತೀರ್ಮಾನಿಸಿರುವುದನ್ನು ಖಂಡಿಸಿ ಪ್ರತಿ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಭೆ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಕ್ರೆಡಲ್‌ನಿಂದ ಸಿಎಂಗೆ ₹77.17 ಕೋಟಿ ಡಿವಿಡೆಂಡ್; ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5 ಕೋಟಿ ಕೊಡುಗೆ!

0

ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯು 2024–25ನೇ ಸಾಲಿನ ಲಾಭಾಂಶವಾಗಿ ₹77.17 ಕೋಟಿ ಮೊತ್ತದ ಡಿವಿಡೆಂಡ್‌ನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಸಲ್ಲಿಸಿದರು.

2024–25ರಲ್ಲಿ ಕ್ರೆಡಲ್ ₹257.25 ಕೋಟಿ ನಿವ್ವಳ ಲಾಭ ಗಳಿಸಿದ್ದು, ಅದರ ಶೇ.30ರಷ್ಟು ಮೊತ್ತವನ್ನು ಡಿವಿಡೆಂಡ್ ರೂಪದಲ್ಲಿ ಕೆಪಿಸಿಎಲ್ ಕಚೇರಿಯಲ್ಲಿ ಮುಖ್ಯಮಂತ್ರಿ ಸ್ವೀಕರಿಸಿದರು. ಇದೇ ವೇಳೆ ಕ್ರೆಡಲ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹5 ಕೋಟಿ ಮೊತ್ತದ ಚೆಕ್‌ನ್ನೂ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ರೆಡಲ್ ಅಧ್ಯಕ್ಷ ಹಾಗೂ ಶಾಸಕ ಟಿ.ಡಿ. ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾವೇರಿ| ಸಾರಿಗೆ ಬಸ್ ಡಿಕ್ಕಿ..ವಿದ್ಯಾರ್ಥಿ ಗಂಭೀರ

0

ಹಾವೇರಿ:- ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.

ಹಾವೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ. ಈ ವೇಳೆ ಏಕಾಏಕಿ ಸಾರಿಗೆ ಬಸ್ ವಿದ್ಯಾರ್ಥಿಗೆ ಡಿಕ್ಕಿಯಾಗಿದೆ.

ವಿದ್ಯಾರ್ಥಿ ಹಾವೇರಿ ತಾಲೂಕಿನ ಕೊಣನತಂಬಿಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಬೆನ್ನಿಗೆ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!