Home Blog Page 206

ಡಿಪೋ ಮ್ಯಾನೇಜರ್​​ ಕಿರುಕುಳ; ಕೆಎಸ್​ಆರ್​ಟಿಸಿ ಬಸ್ ಚಾಲಕ ನೇಣಿಗೆ ಶರಣು!

0

ಶಿವಮೊಗ್ಗ:- ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಕೆಎಸ್​ಆರ್​ಟಿಸಿ ಬಸ್ ಚಾಲಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜರುಗಿದೆ.

ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕನನ್ನು ನಾಗಪ್ಪ (54) ಎಂದು ಗುರುತಿಸಲಾಗಿದೆ. ಡ್ಯೂಟಿ ನೀಡದೇ ಡಿಪೋ ಮ್ಯಾನೇಜರ್​​ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ. ಮೃತ ಕೆಎಸ್ಆರ್​​ಟಿಸಿ ಬಸ್​​ ಚಾಲಕ ನಾಗಪ್ಪ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ತ್ಯಾಗರ್ತಿ ಗ್ರಾಮದಲ್ಲಿ ವಾಸವಿದ್ದರು. ನಾಗಪ್ಪ ಅವರಿಗೆ ಕಳೆದ ಒಂದೂವರೆ ತಿಂಗಳಿಂದ ಡಿಪೋ ಮ್ಯಾನೇಜರ್ ಡ್ಯೂಟಿ ನೀಡಿರಲಿಲ್ಲ. ಮೂರ್ನಾಲ್ಕು ಬಾರಿ ಡ್ಯೂಟಿ ಸಿಗದೇ ಮನೆಗೆ ವಾಪಸ್ ಕೂಡ ಬಂದಿದ್ದರು.

ಡ್ಯೂಟಿ ಸಿಗದ ಕಾರಣ ನಾಗಪ್ಪ ಸಾಕಷ್ಟು ಮನನೊಂದಿದ್ದರು. ಹೀಗಾಗಿ ಕಳೆದ ಸೋಮವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಲ್ಕು ದಿನದ ಬಳಿಕ ಕೊನೆಯುಸಿರೆಳೆದಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಾಗಪ್ಪ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಸದ್ಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲವ್ ಮಾಡುವಂತೆ ಪಾಗಲ್‌ ಪ್ರೇಮಿ ಕಿರುಕುಳ; ಅಪ್ರಾಪ್ತೆ ಸೂಸೈಡ್!

0

ಮೈಸೂರು:- ಜಿಲ್ಲೆಯ ನಂಜನಗೂಡು ನೀಲಕಂಠ ನಗರದಲ್ಲಿ ಪ್ರೀತಿಸುವಂತೆ ಅಪ್ರಾಪ್ತೆಗೆ ಪಾಗಲ್ ಪ್ರೇಮಿಯೊಬ್ಬ ಕಿರುಕುಳ ಕೊಟ್ಟ ಕಾರಣ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

17 ವರ್ಷದ ದಿವ್ಯಾ ನೇಣಿಗೆ ಶರಣಾದ ಅಪ್ರಾಪ್ತೆ. ದೇಬೂರು ಗ್ರಾಮದ ಆದಿತ್ಯ ಎಂಬಾತ ದಿವ್ಯಾಳಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದ ಎಂಬ ಆರೋಪವಿದೆ. ನಂಜನಗೂಡಿನ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿವ್ಯಾಳನ್ನು ಪ್ರೀತಿಸುವಂತೆ ಆದಿತ್ಯ ದುಂಬಾಲು ಬಿದ್ದಿದ್ದ. ಈ ಹಿನ್ನೆಲೆ ದಿವ್ಯ ಆದಿತ್ಯ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದಳು.

ಈ ಬಗ್ಗೆ ದಿವ್ಯಾಳ ತಂದೆ ಆದಿತ್ಯಗೆ ಕಿವಿಮಾತು ಹೇಳಿದ್ದರು. ಹೀಗಿದ್ದರೂ ಆದಿತ್ಯ ವರ್ತನೆ ಬದಲಿಸಿಕೊಂಡಿರಲಿಲ್ಲ. ಹೀಗಾಗಿ ಮನನೊಂದು ದಿವ್ಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪ್ರಕರಣ ಸಂಬಂಧ ಆದಿತ್ಯನ ವಿರುದ್ಧ ದಿವ್ಯಾ ತಂದೆ ಗುರುಮೂರ್ತಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಾನು ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಇದ್ದರೆ ಒಳ್ಳೆಯದಾಗುತ್ತಿತ್ತು: ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ಬಗ್ಗೆ ಗುಲ್ಶನ್ ದೇವಯ್ಯ ಅಸಮಾಧಾನ

‘ಕಾಂತಾರ: ಚಾಪ್ಟರ್ 1’ ರಿಷಬ್ ಶೆಟ್ಟಿ ನಿರ್ದೇಶನದೊಂದಿಗೆ ಬಂದಿರುವ ದೊಡ್ಡ ಹಿಟ್ ಸಿನಿಮಾದಾಗಿ ಮಿಂಚುತ್ತಿದೆ. ಸಿನಿಮಾದಲ್ಲಿನ ಪ್ರಮುಖ ವಿಲನ್ ಪಾತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸಿದ್ದಾರೆ.

ಅರ್ಧ ಸಿನಿಮಾದಷ್ಟೇ ಕುಲಶೇಖರನ ಪಾತ್ರ ಸಾಯುತ್ತದೆ ಎಂಬುದರಿಂದ ಕೆಲವರು ಆಶ್ಚರ್ಯ ಪಟ್ಟು ವಿಚಾರಿಸುತ್ತಿದ್ದಾರೆ. ತಕ್ಷಣದ ಶೂಟಿಂಗ್ ವೇಳೆಯಲ್ಲಿ ಅವರಿಗೆ ಕ್ಲೈಮ್ಯಾಕ್ಸ್ ಬಗ್ಗೆ ಗೊತ್ತಿಲ್ಲದಿದ್ದರೂ, ನಂತರ ರಿಷಬ್ ಶೆಟ್ಟಿ ಸಂಪೂರ್ಣ ಕಥೆಯನ್ನು ವಿವರಿಸಿ ಅಸಮಾಧಾನವನ್ನು ನಿವಾರಿಸಿದ್ದಾರೆ.

ಗುಲ್ಶನ್ ದೇವಯ್ಯ ಹೇಳಿದ್ದು, “ನಾನು ಕೂಡ ಕ್ಲೈಮ್ಯಾಕ್ಸ್‌ನಲ್ಲಿ ಇದ್ದರೆ ಒಳ್ಳೆಯದಾಗುತ್ತಿತ್ತು ಎಂಬ ಸಹಜ ಆಸೆ ಇದ್ದೆ, ಆದರೆ ನನ್ನ ಪಾತ್ರ ಸಾಯುತ್ತದೆ ಎಂಬುದನ್ನು ಅರಿತು ಸಂತೋಷವಾಗಿದೆ. ನಾನು ಸಿನಿಮಾ ಕುರಿತು ಬಹಳ ಉತ್ತಮ ಅಭಿಪ್ರಾಯ ಹೊಂದಿದ್ದೇನೆ ಮತ್ತು ಕನ್ನಡ ಚಿತ್ರರಂಗದ ಅವಕಾಶಗಳು ಇದ್ದರೆ ಬೆಂಗಳೂರಿನಲ್ಲಿ ನೆಲೆಸಲು ಸಿದ್ಧನಾಗಿದ್ದೇನೆ.”

ಈ ರೀತಿಯಾಗಿ ‘ಕಾಂತಾರ: ಚಾಪ್ಟರ್ 1’ ಹಿಟ್ ಸಿನಿಮಾದಲ್ಲಿ ತಮ್ಮ ಪಾತ್ರದ ಅನುಭವವನ್ನು ಹಂಚಿಕೊಂಡು, ಗುಲ್ಶನ್ ದೇವಯ್ಯ ಅಭಿಮಾನಿಗಳಿಗೆ ಉತ್ಸಾಹ ಮತ್ತು ವಿಷಯದ ಹಿನ್ನಲೆ ತಿಳಿಸಿದ್ದಾರೆ.

ಈ ರಾಜ್ಯಕ್ಕೆ ಸಿದ್ದರಾಮಯ್ಯ ಅಗತ್ಯ, ಅವರ ಮಾರ್ಗದರ್ಶನದಲ್ಲೇ ಚುನಾವಣೆ: ಶಾಸಕ ಹೆಚ್.ಸಿ. ಬಾಲಕೃಷ್ಣ

0

ರಾಮನಗರ: ಸಿದ್ದರಾಮಯ್ಯ ಅವರ ಅಗತ್ಯ ಈ ರಾಜ್ಯಕ್ಕೆ ಇದೆ. ಮುಂದಿನ ಚುನಾವಣೆಯೂ ಅವರ ಮಾರ್ಗದರ್ಶನದಲ್ಲೇ ನಡೆಯಬೇಕು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಮಾಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,

ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕಾಂಗ್ರೆಸ್ ಹೈಕಮಾಂಡ್‌ನ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ನಾನಾಗಲಿ ಅಥವಾ ಶಾಸಕರಾಗಲಿ ಮುಖ್ಯಮಂತ್ರಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಸಿದ್ದರಾಮಯ್ಯ ಮುಂದುವರೆಯಬೇಕಾ ಅಥವಾ ಡಿಕೆಶಿಗೆ ಅವಕಾಶ ನೀಡಬೇಕಾ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದರು.

ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರನ್ನೂ ಒಳಗೊಂಡ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿದೆ. ಪಕ್ಷಕ್ಕೆ ಬಂದ ನಂತರ ಅವರು ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿದ್ದಾರೆ.

ಈಗ ಅವರು ನಮ್ಮ ಮನೆ ಯಜಮಾನ ಮತ್ತು ಪ್ರಶ್ನಾತೀತ ನಾಯಕ ಎಂದು ಬಣ್ಣಿಸಿದರು. ಅವರಿಗೆ ತಕ್ಷಣವೇ ಸ್ಥಾನ ಕೊಡಬೇಕು ಅಥವಾ ದಿನಾಂಕ ನಿಗದಿಪಡಿಸಬೇಕು ಎಂದು ಕೇಳಲಾಗುವುದಿಲ್ಲ. ಆದರೆ ಒಳ್ಳೆಯ ನಾಯಕತ್ವದ ಆಧಾರದ ಮೇಲೆ ಅವರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ನಿರ್ಧಾರ ಪಕ್ಷದ ಸಂಘಟನೆಗೆ ಅನುಕೂಲಕರವಾಗಲಿದೆ ಎಂದು ಹೆಚ್.ಸಿ. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಬಳ್ಳಾರಿ ಪ್ರಕರಣ ಸಿಬಿಐಗೆ ನೀಡುವ ಅಗತ್ಯವಿಲ್ಲ: ರಾಜ್ಯ ಪೊಲೀಸರಿಗೆ ತನಿಖಾ ಸಾಮರ್ಥ್ಯ ಇದೆ – ಸಚಿವ ಪರಮೇಶ್ವರ್

0

ಬೆಂಗಳೂರು: ಬಳ್ಳಾರಿ ಘಟನೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಈ ಪ್ರಕರಣವನ್ನು ತನಿಖೆ ಮಾಡುವ ಸಂಪೂರ್ಣ ಸಾಮರ್ಥ್ಯ ರಾಜ್ಯ ಪೊಲೀಸರಿಗೆ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಬಂದರೆ ಮಾತ್ರ ಸಿಬಿಐಗೆ ವಹಿಸುವ ಬಗ್ಗೆ ಚರ್ಚಿಸಬಹುದು. ಆದರೆ ಈಗಾಗಲೇ ಯಾವುದೇ ಪ್ರಕರಣಗಳನ್ನು ಸಿಬಿಐಗೆ ನೀಡುವುದಿಲ್ಲ ಎಂಬ ತೀರ್ಮಾನವನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಸಿಬಿಐಗೆ ಒಪ್ಪಿಸುವ ಅಗತ್ಯತೆ ಇಲ್ಲ ಎಂದರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಮತ್ತು ಪ್ರಸ್ತುತ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆ. ನಾನು ಕೂಡ ಅವರ ಬಗ್ಗೆ ಮಾತನಾಡಬಹುದು. ಆದರೆ ಅವರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದಾರೆ ಎಂದು ಭಾವಿಸುತ್ತೇನೆ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ʼ ಕೇಸ್: ಸಿದ್ದರಾಮಯ್ಯ ಸರ್ಕಾರದ ಬೌದ್ಧಿಕ ದಿವಾಳಿತನ – ಪ್ರಲ್ಹಾದ್ ಜೋಶಿ

0

ಬೆಂಗಳೂರು: ನ್ಯಾಷನಲ್ ಹೆರಾಲ್ಡ್‍ಗೆ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಿಗಿಂತ ಜಾಸ್ತಿ ದುಡ್ಡನ್ನು ಕಾಂಗ್ರೆಸ್ ಕೊಟ್ಟಿದೆ. ಇದು ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ನ್ಯಾಷನಲ್ ಹೆರಾಲ್ಡ್‍ಗೆ 2023-24ರಲ್ಲಿ 1.9 ಕೋಟಿ ಮೊತ್ತವನ್ನು ಕೊಡಲಾಗಿದೆ. 2024-25ರಲ್ಲಿ ಸುಮಾರು 1 ಕೋಟಿಯನ್ನು ಮಂಜೂರು ಮಾಡಿದ್ದಾರೆ. ಈ ಪತ್ರಿಕೆಯ ವಿಚಾರ ಹಗರಣವಾಗಿ, ಕೋರ್ಟಿನಲ್ಲಿದೆ ಎಂದು ಗಮನ ಸೆಳೆದರು.

ಇದರ ತಥಾಕಥಿತ ಟ್ರಸ್ಟಿಗಳು, ಎನ್‍ಜಿಒಗಳು, ಮಾಲೀಕರಲ್ಲಿ ತಾಯಿ- ಮಗ ಜಾಮೀನಿನಲ್ಲಿದ್ದಾರೆ. ಇದರ ಪ್ರಸಾರ ಸಂಖ್ಯೆ ಬಹುತೇಕ ಶೂನ್ಯವಾಗಿದೆ. ಅದಕ್ಕೆ ಇಷ್ಟು ದುಡ್ಡು ಕೊಟ್ಟಿದ್ದು, ಇದು ನೇರವಾಗಿ ಒಂದು ರೀತಿಯಲ್ಲಿ ಗಾಂಧಿ ಕುಟುಂಬಕ್ಕೆ ಕರ್ನಾಟಕ ಸರಕಾರದಿಂದ ದಾನ ಕೊಟ್ಟು ಸಂಪ್ರೀತಗೊಳಿಸುವ ಪ್ರಕ್ರಿಯೆ ಎಂದು ಆರೋಪಿಸಿದರು.

ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಆಗಷ್ಟೇ ಮಕ್ಕಳಿಗೆ ಆನ್‌ಲೈನ್‌ ಸುರಕ್ಷತೆ ಸೂಕ್ತವಾಗಿ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಮಕ್ಕಳು ನಮ್ಮ ದೇಶದ ಭವಿಷ್ಯ, ಆದರೆ ಇಂದು ಮಕ್ಕಳ ಬೆಳವಣಿಗೆಗೆ ಮೊಬೈಲ್‌ ಅಡ್ಡಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ಕಾಲದಲ್ಲಿ ಮೊಬೈಲ್‌ ಗೀಳು ಇರಲಿಲ್ಲ, ನಾವು ಕೇಳಿ, ನೋಡಿ ಕಲಿಯುತ್ತಿದ್ದೇವು. ಆದರೆ, ಇಂದಿನ ಮಕ್ಕಳಿಗೆ ಎಲ್ಲವೂ ರೆಡಿಮೇಡ್‌ ಸಿಗುತ್ತಿವೆ. ಇಂದಿನ ಮಕ್ಕಳು ಹುಟ್ಟಿನಿಂದಲೇ ಮೊಬೈಲ್‌ ನೋಡುತ್ತಾ ಬೆಳೆಯುತ್ತಾರೆ. ಅವರಿಗೆ ಎಲ್ಲವೂ ಕುಂತಲ್ಲೇ, ನಿಂತಲ್ಲೇ ಸಿಗುತ್ತವೆ. ಇದು ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ ಎಂದರು.

ಇಂದು ಲಾಪ್‌ಟಾಪ್‌, ಮೊಬೈಲ್‌ ಬಳಸುವವರ ಸಂಖ್ಯೆ, ನಗರ ಪ್ರದೇಶದವರಿಗಿಂತ ಗ್ರಾಮಾಂತರ ಪ್ರದೇಶದವರೆ ಅಧಿಕವಾಗಿದ್ದಾರೆ. ಶೇಕಡ 78 ರಷ್ಟು ಮಂದಿ ಗ್ರಾಮೀಣ ಪ್ರದೇಶದವರು ಮೊಬೈಲ್‌, ಲಾಪ್‌ಟಾಪ್‌ ಉಪಯೋಗಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ ಎಂದರು.

ಸಾಮಾಜಿಕ ಜಾಲತಾಣಗಳ ಪಿಡುಗಿನಿಂದ ಶೋಷಣೆಗೊಳದಾದವರು ಪ್ರತಿದಿನ ನನ್ನ ಬಳಿ ದೂರು ತೆಗೆದುಕೊಂಡು ಬರುತ್ತಾರೆ, 14 ರಿಂದ 18 ವರ್ಷದ ಮಕ್ಕಳು ಅತಿಹೆಚ್ಚು ಆನ್‌ಲೈನ್‌ ಗೀಳಿಗೆ ಸಿಲುಕುತ್ತಿದ್ದಾರೆ, ಇದು ನಿಜಕ್ಕೂ ಕಳವಳಕಾರಿ. ಕಾನೂನು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಒಳಗೊಂಡಂತೆ ಸಮಿತಿ ಮಾಡಿದರೂ ಸಾಮಾಜಿಕ ಜಾಲತಾಣದ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಪೊಲೀಸರು, ಶಾಲಾ, ಕಾಲೇಜುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಮೂಡಿಸಬೇಕು. ಶಾಲೆಗಳಿಗೆ ಹೋಗಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು, ಮಕ್ಕಳು ನಮ್ಮ ಸಮಾಜದ ಭವಿಷ್ಯ, ಮಕ್ಕಳನ್ನು ತಿದ್ದಿ ತೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ: 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

0

ಉತ್ತರ ಕನ್ನಡ: ಓವರ್‌ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಗುದ್ದಿದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾನಸಗೇರಿ ಗ್ರಾಮದ ಮೊರಾರ್ಜಿ ಹಾಸ್ಟೆಲ್ ಬಳಿ ನಡೆದಿದೆ.

ಈ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ, 8 ವಿದ್ಯಾರ್ಥಿನಿಯರು, ಇಬ್ಬರು ಶಾಲಾ ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಬಸ್ ನಿರ್ವಾಹಕ ಸೇರಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಎದುರಿನಿಂದ ಕಾರೊಂದು ಬಂದಿದ್ದು, ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯ ಮರಕ್ಕೆ ಗುದ್ದಿದೆ.

ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣವೇ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

0

ನವದೆಹಲಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಮಹಿಳೆಯೊಬ್ಬರನ್ನು ವ್ಯಾವಹಾರಿಕವಾಗಿ ವಶಪಡಿಸಿ, ಅರೆಬೆತ್ತಲೆಯ ಸ್ಥಿತಿಯಲ್ಲಿ ಪೊಲೀಸ್ ವಾಹನದಲ್ಲಿ ಎಳೆದೊಯ್ಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ದೇಶವನ್ನು ಆಘಾತಕ್ಕೆ ಒಳಪಡಿಸಿದೆ.

ಘಟನೆಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂ ಪ್ರೇರಿತ ದೂರು (Suo Moto Case) ದಾಖಲಿಸಿದ್ದು, ಆಯೋಗದ ಅಧ್ಯಕ್ಷೆ ವಿಜಯಾ ರಹಟ್ಕರ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಯೋಗವು ಮಹಿಳೆಯ ವ್ಯಕ್ತಿತ್ವದ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಲಿಂಗ ಆಧಾರಿತ ಹಿಂಸೆಯನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ ಎಂದು ಸೂಚಿಸಿದೆ.

ಅಯೋಗವು ಪೊಲೀಸರು ತಕ್ಷಣ FIR ದಾಖಲು ಮಾಡುವುದು, ನ್ಯಾಯಸಮ್ಮತ, ನಿಷ್ಪಕ್ಷಪಾತ ಮತ್ತು ಸಮಯಬದ್ಧ ತನಿಖೆ ನಡೆಸುವುದು, ವಿಡಿಯೋ ಸಾಕ್ಷ್ಯ ಪರಿಶೀಲಿಸುವುದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಹಾಗೂ ಸಂತ್ರಸ್ಥರಿಗೆ ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪುನರ್ವಸತಿ ಮತ್ತು ಪರಿಹಾರ ನೀಡಲು ಸೂಚಿಸಿದೆ. 5 ದಿನದ ಒಳಗೆ ಈ ಕ್ರಮಗಳ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಬೆಳಗಾವಿ ಬಾಯ್ಲರ್ ಸ್ಫೋಟ: ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಸಾವು – ಮೃತರ ಸಂಖ್ಯೆ 7ಕ್ಕೆ ಏರಿಕೆ

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ತೇರದಾಳ ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ ಹಾಗೂ ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಎಂದು ಗುರುತಿಸಲಾಗಿದೆ.

ಬುಧವಾರ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಕಾರ್ಖಾನೆಯು ವಿಕ್ರಮ ಇನಾಮದಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ನಿನ್ನೆ ಕಾರ್ಖಾನೆಯ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೇಲೆ ಬಿದ್ದಿತ್ತು. ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಕುರಿತು ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

error: Content is protected !!