Home Blog Page 203

ಬಳ್ಳಾರಿ ಪ್ರಕರಣ ಸಿಬಿಐಗೆ ನೀಡುವ ಅಗತ್ಯವಿಲ್ಲ: ರಾಜ್ಯ ಪೊಲೀಸರಿಗೆ ತನಿಖಾ ಸಾಮರ್ಥ್ಯ ಇದೆ – ಸಚಿವ ಪರಮೇಶ್ವರ್

0

ಬೆಂಗಳೂರು: ಬಳ್ಳಾರಿ ಘಟನೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಈ ಪ್ರಕರಣವನ್ನು ತನಿಖೆ ಮಾಡುವ ಸಂಪೂರ್ಣ ಸಾಮರ್ಥ್ಯ ರಾಜ್ಯ ಪೊಲೀಸರಿಗೆ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಬಂದರೆ ಮಾತ್ರ ಸಿಬಿಐಗೆ ವಹಿಸುವ ಬಗ್ಗೆ ಚರ್ಚಿಸಬಹುದು. ಆದರೆ ಈಗಾಗಲೇ ಯಾವುದೇ ಪ್ರಕರಣಗಳನ್ನು ಸಿಬಿಐಗೆ ನೀಡುವುದಿಲ್ಲ ಎಂಬ ತೀರ್ಮಾನವನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಸಿಬಿಐಗೆ ಒಪ್ಪಿಸುವ ಅಗತ್ಯತೆ ಇಲ್ಲ ಎಂದರು.

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಮತ್ತು ಪ್ರಸ್ತುತ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆ. ನಾನು ಕೂಡ ಅವರ ಬಗ್ಗೆ ಮಾತನಾಡಬಹುದು. ಆದರೆ ಅವರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದಾರೆ ಎಂದು ಭಾವಿಸುತ್ತೇನೆ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ʼ ಕೇಸ್: ಸಿದ್ದರಾಮಯ್ಯ ಸರ್ಕಾರದ ಬೌದ್ಧಿಕ ದಿವಾಳಿತನ – ಪ್ರಲ್ಹಾದ್ ಜೋಶಿ

0

ಬೆಂಗಳೂರು: ನ್ಯಾಷನಲ್ ಹೆರಾಲ್ಡ್‍ಗೆ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಿಗಿಂತ ಜಾಸ್ತಿ ದುಡ್ಡನ್ನು ಕಾಂಗ್ರೆಸ್ ಕೊಟ್ಟಿದೆ. ಇದು ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ನ್ಯಾಷನಲ್ ಹೆರಾಲ್ಡ್‍ಗೆ 2023-24ರಲ್ಲಿ 1.9 ಕೋಟಿ ಮೊತ್ತವನ್ನು ಕೊಡಲಾಗಿದೆ. 2024-25ರಲ್ಲಿ ಸುಮಾರು 1 ಕೋಟಿಯನ್ನು ಮಂಜೂರು ಮಾಡಿದ್ದಾರೆ. ಈ ಪತ್ರಿಕೆಯ ವಿಚಾರ ಹಗರಣವಾಗಿ, ಕೋರ್ಟಿನಲ್ಲಿದೆ ಎಂದು ಗಮನ ಸೆಳೆದರು.

ಇದರ ತಥಾಕಥಿತ ಟ್ರಸ್ಟಿಗಳು, ಎನ್‍ಜಿಒಗಳು, ಮಾಲೀಕರಲ್ಲಿ ತಾಯಿ- ಮಗ ಜಾಮೀನಿನಲ್ಲಿದ್ದಾರೆ. ಇದರ ಪ್ರಸಾರ ಸಂಖ್ಯೆ ಬಹುತೇಕ ಶೂನ್ಯವಾಗಿದೆ. ಅದಕ್ಕೆ ಇಷ್ಟು ದುಡ್ಡು ಕೊಟ್ಟಿದ್ದು, ಇದು ನೇರವಾಗಿ ಒಂದು ರೀತಿಯಲ್ಲಿ ಗಾಂಧಿ ಕುಟುಂಬಕ್ಕೆ ಕರ್ನಾಟಕ ಸರಕಾರದಿಂದ ದಾನ ಕೊಟ್ಟು ಸಂಪ್ರೀತಗೊಳಿಸುವ ಪ್ರಕ್ರಿಯೆ ಎಂದು ಆರೋಪಿಸಿದರು.

ಮಕ್ಕಳ ಪಾಲಿಗೆ ಪಿಡುಗಾಗುತ್ತಿರುವ ಸಾಮಾಜಿಕ ಮಾಧ್ಯಮಗಳು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಆಗಷ್ಟೇ ಮಕ್ಕಳಿಗೆ ಆನ್‌ಲೈನ್‌ ಸುರಕ್ಷತೆ ಸೂಕ್ತವಾಗಿ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಮಕ್ಕಳು ನಮ್ಮ ದೇಶದ ಭವಿಷ್ಯ, ಆದರೆ ಇಂದು ಮಕ್ಕಳ ಬೆಳವಣಿಗೆಗೆ ಮೊಬೈಲ್‌ ಅಡ್ಡಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ಕಾಲದಲ್ಲಿ ಮೊಬೈಲ್‌ ಗೀಳು ಇರಲಿಲ್ಲ, ನಾವು ಕೇಳಿ, ನೋಡಿ ಕಲಿಯುತ್ತಿದ್ದೇವು. ಆದರೆ, ಇಂದಿನ ಮಕ್ಕಳಿಗೆ ಎಲ್ಲವೂ ರೆಡಿಮೇಡ್‌ ಸಿಗುತ್ತಿವೆ. ಇಂದಿನ ಮಕ್ಕಳು ಹುಟ್ಟಿನಿಂದಲೇ ಮೊಬೈಲ್‌ ನೋಡುತ್ತಾ ಬೆಳೆಯುತ್ತಾರೆ. ಅವರಿಗೆ ಎಲ್ಲವೂ ಕುಂತಲ್ಲೇ, ನಿಂತಲ್ಲೇ ಸಿಗುತ್ತವೆ. ಇದು ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ ಎಂದರು.

ಇಂದು ಲಾಪ್‌ಟಾಪ್‌, ಮೊಬೈಲ್‌ ಬಳಸುವವರ ಸಂಖ್ಯೆ, ನಗರ ಪ್ರದೇಶದವರಿಗಿಂತ ಗ್ರಾಮಾಂತರ ಪ್ರದೇಶದವರೆ ಅಧಿಕವಾಗಿದ್ದಾರೆ. ಶೇಕಡ 78 ರಷ್ಟು ಮಂದಿ ಗ್ರಾಮೀಣ ಪ್ರದೇಶದವರು ಮೊಬೈಲ್‌, ಲಾಪ್‌ಟಾಪ್‌ ಉಪಯೋಗಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ ಎಂದರು.

ಸಾಮಾಜಿಕ ಜಾಲತಾಣಗಳ ಪಿಡುಗಿನಿಂದ ಶೋಷಣೆಗೊಳದಾದವರು ಪ್ರತಿದಿನ ನನ್ನ ಬಳಿ ದೂರು ತೆಗೆದುಕೊಂಡು ಬರುತ್ತಾರೆ, 14 ರಿಂದ 18 ವರ್ಷದ ಮಕ್ಕಳು ಅತಿಹೆಚ್ಚು ಆನ್‌ಲೈನ್‌ ಗೀಳಿಗೆ ಸಿಲುಕುತ್ತಿದ್ದಾರೆ, ಇದು ನಿಜಕ್ಕೂ ಕಳವಳಕಾರಿ. ಕಾನೂನು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಒಳಗೊಂಡಂತೆ ಸಮಿತಿ ಮಾಡಿದರೂ ಸಾಮಾಜಿಕ ಜಾಲತಾಣದ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಪೊಲೀಸರು, ಶಾಲಾ, ಕಾಲೇಜುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಮೂಡಿಸಬೇಕು. ಶಾಲೆಗಳಿಗೆ ಹೋಗಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು, ಮಕ್ಕಳು ನಮ್ಮ ಸಮಾಜದ ಭವಿಷ್ಯ, ಮಕ್ಕಳನ್ನು ತಿದ್ದಿ ತೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ: 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

0

ಉತ್ತರ ಕನ್ನಡ: ಓವರ್‌ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಗುದ್ದಿದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾನಸಗೇರಿ ಗ್ರಾಮದ ಮೊರಾರ್ಜಿ ಹಾಸ್ಟೆಲ್ ಬಳಿ ನಡೆದಿದೆ.

ಈ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ, 8 ವಿದ್ಯಾರ್ಥಿನಿಯರು, ಇಬ್ಬರು ಶಾಲಾ ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಬಸ್ ನಿರ್ವಾಹಕ ಸೇರಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಎದುರಿನಿಂದ ಕಾರೊಂದು ಬಂದಿದ್ದು, ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯ ಮರಕ್ಕೆ ಗುದ್ದಿದೆ.

ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣವೇ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಘಟನೆ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

0

ನವದೆಹಲಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಮಹಿಳೆಯೊಬ್ಬರನ್ನು ವ್ಯಾವಹಾರಿಕವಾಗಿ ವಶಪಡಿಸಿ, ಅರೆಬೆತ್ತಲೆಯ ಸ್ಥಿತಿಯಲ್ಲಿ ಪೊಲೀಸ್ ವಾಹನದಲ್ಲಿ ಎಳೆದೊಯ್ಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ದೇಶವನ್ನು ಆಘಾತಕ್ಕೆ ಒಳಪಡಿಸಿದೆ.

ಘಟನೆಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂ ಪ್ರೇರಿತ ದೂರು (Suo Moto Case) ದಾಖಲಿಸಿದ್ದು, ಆಯೋಗದ ಅಧ್ಯಕ್ಷೆ ವಿಜಯಾ ರಹಟ್ಕರ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಯೋಗವು ಮಹಿಳೆಯ ವ್ಯಕ್ತಿತ್ವದ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಲಿಂಗ ಆಧಾರಿತ ಹಿಂಸೆಯನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ ಎಂದು ಸೂಚಿಸಿದೆ.

ಅಯೋಗವು ಪೊಲೀಸರು ತಕ್ಷಣ FIR ದಾಖಲು ಮಾಡುವುದು, ನ್ಯಾಯಸಮ್ಮತ, ನಿಷ್ಪಕ್ಷಪಾತ ಮತ್ತು ಸಮಯಬದ್ಧ ತನಿಖೆ ನಡೆಸುವುದು, ವಿಡಿಯೋ ಸಾಕ್ಷ್ಯ ಪರಿಶೀಲಿಸುವುದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಹಾಗೂ ಸಂತ್ರಸ್ಥರಿಗೆ ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪುನರ್ವಸತಿ ಮತ್ತು ಪರಿಹಾರ ನೀಡಲು ಸೂಚಿಸಿದೆ. 5 ದಿನದ ಒಳಗೆ ಈ ಕ್ರಮಗಳ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಬೆಳಗಾವಿ ಬಾಯ್ಲರ್ ಸ್ಫೋಟ: ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಸಾವು – ಮೃತರ ಸಂಖ್ಯೆ 7ಕ್ಕೆ ಏರಿಕೆ

0

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ತೇರದಾಳ ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ ಹಾಗೂ ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್ ಎಂದು ಗುರುತಿಸಲಾಗಿದೆ.

ಬುಧವಾರ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು. ಕಾರ್ಖಾನೆಯು ವಿಕ್ರಮ ಇನಾಮದಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ನಿನ್ನೆ ಕಾರ್ಖಾನೆಯ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಕುದಿಯುವ ಕಬ್ಬಿನ ಹಾಲು ಕಾರ್ಮಿಕರ ಮೇಲೆ ಬಿದ್ದಿತ್ತು. ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಕುರಿತು ಮುರಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಯ್ಲರ್ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಉತ್ತರ ಕರ್ನಾಟಕದ ಹೆಮ್ಮೆ ಖಡಕ್ ರೊಟ್ಟಿ ಜಾತ್ರೆ: ಶಿರೋಳ ತೋಂಟದಾರ್ಯ ಮಠದಲ್ಲಿ ಸಂಭ್ರಮ

0

ಗದಗ: ಉತ್ತರ ಕರ್ನಾಟಕದ ಜನಜೀವನದ ಭಾಗವೇ ಆಗಿರುವ ಖಡಕ್ ರೊಟ್ಟಿ ಜಾತ್ರೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿರುವ ತೋಂಟದಾರ್ಯ ಮಠದಲ್ಲಿ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಹರಿದುಬರುತ್ತಿದ್ದು, ಗ್ರಾಮ ಸಕಲ ಸಿದ್ಧತೆಯೊಂದಿಗೆ ಜಾತ್ರೆಗೆ ಸಜ್ಜಾಗಿದೆ.

ಜಾತ್ರೆಯ ವಿಶೇಷತೆಯಾದ ಖಡಕ್ ಜೋಳದ ರೊಟ್ಟಿ ತಯಾರಿಕೆ ಕಾರ್ಯ ಭಕ್ತರಿಂದ ಭರದಿಂದ ನಡೆಯುತ್ತಿದೆ. ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸಿ ಮಠಕ್ಕೆ ಅರ್ಪಿಸುವ ಮೂಲಕ ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿ ಪ್ರದರ್ಶಿಸುತ್ತಿದ್ದಾರೆ.

ಇಂದು ಸಂಜೆ ಅದ್ಧೂರಿಯಾಗಿ ಮಹಾರಥೋತ್ಸವ ನಡೆಯಲಿದ್ದು, ನಾಳೆ ಆರೋಗ್ಯ ಶಿಬಿರ ಹಾಗೂ ಬಹು ನಿರೀಕ್ಷಿತ ಖಡಕ್ ರೊಟ್ಟಿ ಊಟದ ಜಾತ್ರೆ ನಡೆಯಲಿದೆ. ಖಡಕ್ ರೊಟ್ಟಿಯ ಜೊತೆಗೆ ಬಾನ, ಪಲ್ಯ, ಕರಿಹಿಂಡಿ, ಬಿಸಿಬರ್ತ ಅನ್ನ ಮತ್ತು ಸಾಂಬರ್ ರುಚಿ ಸವಿಯಲು ಭಕ್ತರು ದೂರ ದೂರದ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ.
ಇಂದು ಮಹಾರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ನಾಳೆ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವುದು ಜಾತ್ರೆಯ ಪ್ರಮುಖ ಸಂಪ್ರದಾಯವಾಗಿದೆ. ಗದಗ ಜಿಲ್ಲೆಯೊಂದಿಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಧಾರ್ಮಿಕ ಆಚರಣೆ, ಸಂಸ್ಕೃತಿ ಮತ್ತು ಆಹಾರ ಪರಂಪರೆಯ ಸಂಗಮವಾದ ಶಿರೋಳ ತೋಂಟದಾರ್ಯ ಮಠದ ಖಡಕ್ ರೊಟ್ಟಿ ಜಾತ್ರೆ ಉತ್ತರ ಕರ್ನಾಟಕದ ಹೆಮ್ಮೆಯ ಉತ್ಸವವಾಗಿ ಮತ್ತೊಮ್ಮೆ ಮೆರೆದಿದೆ.

ಮುಂದೆ ಬಿಜೆಪಿ, ಜೆಡಿಎಸ್ ವಿಲೀನ ಸಾಧ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು:“ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

“ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸುತ್ತೇನೆ.

ಗೋವಿಂದರಾಜು ಅವರು ಕುಟುಂಬ ಸ್ನೇಹಿತರು, ನನಗೆ ಮೊದಲಿನಿಂದಲೂ ಪರಿಚಯಸ್ಥರು. ಅವರು ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ” ಎಂದರು.

“ನಮ್ಮದು ಜಾತ್ಯಾತೀತ ಸಿದ್ಧಾಂತ. ಹೀಗಾಗಿ ಜಮೀರ್ ಅಹ್ಮದ್ ಖಾನ್ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಬೇಗ ವಿಲೀನವಾದಷ್ಟೂ ನಮಗೇ ಒಳ್ಳೆಯದು. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರೇ ಹೇಳುತ್ತಿದ್ದಾರೆ” ಎಂದರು.

“ಅನೇಕ ಕ್ಷೇತ್ರಗಳಲ್ಲಿ ಬಹಳ ಗೊಂದಲಗಳಿವೆ. ನಮ್ಮ ಭವಿಷ್ಯ ಏನು ಎಂಬ ಪ್ರಶ್ನೆಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅನೇಕರು ಉತ್ಸುಕರಾಗಿದ್ದಾರೆ. ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106, ಬೆಂಗಳೂರು ಪೂರ್ವದಲ್ಲಿ 78 ಅರ್ಜಿಗಳನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 779 ಟಿಕೆಟ್ ಆಕಾಂಕ್ಷಿಗಳು ನಮ್ಮ ಅರ್ಜಿ ಸ್ವೀಕರಿಸಿದ್ದಾರೆ. ಅರ್ಜಿ ತೆಗೆದುಕೊಂಡವರು ಕೊನೆ ದಿನದವರೆಗೂ ಕಾಯಬೇಡಿ. ಎರಡು ಮೂರು ದಿನಗಳಲ್ಲೇ ಸಲ್ಲಿಕೆ ಮಾಡಿ. ನಾವು ಕೂಡ ಪಕ್ಷದ ಅಭ್ಯರ್ಥಿ ಆಯ್ಕೆಗೆ ವಿಮರ್ಷೆ ಮಾಡಬೇಕಿದೆ. ಕೊನೆ ಘಳಿಗೆಯಲ್ಲಿ ಸಲ್ಲಿಕೆಯಾದರೆ ವಿಮರ್ಷೆ ಮಾಡುವುದು ಕಷ್ಟವಾಗುತ್ತದೆ. ಜ.10ರ ಒಳಗಾಗಿ ಅರ್ಜಿ ಕೊಟ್ಟರೆ ನಾವು ನಮ್ಮ ತಂಡವನ್ನು ಕಳುಹಿಸಿ ವರದಿ ಪಡೆಯಬಹುದು. ಯಾರು ವಾರ್ಡ್ ಗಳಲ್ಲಿ ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂದು ಪರಿಶೀಲನೆ ಮಾಡಬಹುದು” ಎಂದು ತಿಳಿಸಿದರು.

ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ ಮಾಡಿಕೊಂಡ್ರಾ..? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

0

ತುಮಕೂರು: ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗುವ ಘಟನೆಗಳು ಸಾಮಾನ್ಯವಾಗಿರುವ ನಡುವೆ, ತುಮಕೂರು ಜಿಲ್ಲೆಯಲ್ಲಿ ಇದಕ್ಕೆ ವಿರುದ್ಧವಾದ ಪ್ರಕರಣ ಬೆಳಕಿಗೆ ಬಂದಿದೆ. ಸೊಸೆ ಕಾಟಕ್ಕೆ ಬೇಸೆತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60)  ಶವ ಪತ್ತೆಯಾಗಿದೆ. ಶವ ಫಾರ್ಮ್‌ಹೌಸ್‌ನಿಂದ ಸುಮಾರು 200 ಮೀಟರ್ ದೂರದಲ್ಲಿರುವ ಪಂಪ್‌ಹೌಸ್‌ನಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸುತ್ತಿದ್ದಳು ಎನ್ನಲಾಗಿದೆ.

ಇದೇ ಕಾರಣಕ್ಕೆ ಅಡುಗೆ ಸೇರಿದಂತೆ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ವಿಚಾರವನ್ನೂ ಚರ್ಚಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಮಗನನ್ನು ಸೊಸೆ ತನ್ನಿಂದ ದೂರ ಮಾಡಬಹುದು ಎಂಬ ಭಯದಿಂದ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಿನ್ನೆ ಬೆಳಗ್ಗೆ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆರಂಭದಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದ ಕಾರಣ ಅನುಮಾನ ಹೆಚ್ಚಾಗಿತ್ತು.

ಪೊಲೀಸರ ಪರಿಶೀಲನೆಯ ಬಳಿಕ ಮಧ್ಯರಾತ್ರಿ 1.45ರ ಸುಮಾರಿಗೆ ಭ್ರಮರಾಂಬಿಕೆ ತಾವೇ ನಡೆದುಕೊಂಡು ಪಂಪ್‌ಹೌಸ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಶವವನ್ನು ಕೆಳಗಿಳಿಸುವ ವೇಳೆ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಸಿಬ್ಬಂದಿಯಿಂದ ಕಿರುಕುಳ ಆರೋಪ: ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ!

0

ಶಿವಮೊಗ್ಗ: ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಮಹಮ್ಮದ್ ಜಕ್ರೀಯಾ (55) ಎಂದು ಗುರುತಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಒಂದು ತಿಂಗಳ ರಜೆಯಲ್ಲಿದ್ದ ಜಕ್ರೀಯಾ, ಎರಡು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ನಿರಂತರವಾಗಿ ಕಿಂಡಲ್ ಮಾಡುತ್ತಿದ್ದಾನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

error: Content is protected !!