Home Blog Page 204

ಸಿಬ್ಬಂದಿಯಿಂದ ಕಿರುಕುಳ ಆರೋಪ: ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ!

0

ಶಿವಮೊಗ್ಗ: ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್‌ಟೇಬಲೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಮಹಮ್ಮದ್ ಜಕ್ರೀಯಾ (55) ಎಂದು ಗುರುತಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಒಂದು ತಿಂಗಳ ರಜೆಯಲ್ಲಿದ್ದ ಜಕ್ರೀಯಾ, ಎರಡು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ನಿರಂತರವಾಗಿ ಕಿಂಡಲ್ ಮಾಡುತ್ತಿದ್ದಾನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ!

0

ಚಿಕ್ಕಮಗಳೂರು: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಪೋಷಕರೇ ಹೆಚ್ಚು. ಇಂಗ್ಲಿಷ್ ಕಲಿಯಲ್ಲ, ಡಿಸೆನ್ಸಿ ಇರಲ್ಲ, ನೀಟ್ ಇಲ್ಲ ಎನ್ನುವ ಆರೋಪಗಳ ನಡುವೆ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳನ್ನೇ ಮೀರಿಸುವ ಸಾಧನೆ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಕುಗ್ರಾಮದ ಸರ್ಕಾರಿ ಶಾಲೆ, 32 ಮಕ್ಕಳನ್ನು ಫ್ಲೈಟ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದು ಎಲ್ಲರ ಗಮನ ಸೆಳೆದಿದೆ. ಇದುವರೆಗೆ ಯಾವ ಖಾಸಗಿ ಶಾಲೆಯೂ ಮಾಡದ ಈ ಸಾಧನೆ, ಸರ್ಕಾರಿ ಶಾಲೆಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.

ಕೈಯಲ್ಲಿ ಫ್ಲೈಟ್ ಟಿಕೆಟ್ ಹಿಡಿದು ಕುಳಿತ ಮಕ್ಕಳ ಮುಖದಲ್ಲಿನ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುತ್ತಿಗೆಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಟ್ಟು 420 ವಿದ್ಯಾರ್ಥಿಗಳಿದ್ದು, 5, 6 ಮತ್ತು 7ನೇ ತರಗತಿಯ ಮಕ್ಕಳನ್ನು ವಾರ್ಷಿಕ ಶೈಕ್ಷಣಿಕ ಪ್ರವಾಸದ ಭಾಗವಾಗಿ ಫ್ಲೈಟ್‌ನಲ್ಲಿ ಕರೆದೊಯ್ಯಲಾಗಿದೆ.

ಕೆಲವು ಪೋಷಕರು ಮಕ್ಕಳನ್ನು ಕಳಿಸಲು ನಿರಾಕರಿಸಿದ್ದರೆ, ಇನ್ನೂ ಕೆಲವರು ಮಕ್ಕಳು ಸಣ್ಣವರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಪೋಷಕರ ಒಪ್ಪಿಗೆ ಪಡೆದು ಶಿಕ್ಷಕರು 32 ಮಕ್ಕಳನ್ನು ಫ್ಲೈಟ್ ಪ್ರವಾಸಕ್ಕೆ ಕರೆದೊಯ್ದು, ಸರ್ಕಾರಿ ಶಾಲೆಗಳು ಯಾರಿಗೂ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈ ಫ್ಲೈಟ್ ಪ್ರವಾಸದಿಂದ ಮಕ್ಕಳು ಮಾತ್ರವಲ್ಲದೆ ಪೋಷಕರೂ ಸಹ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಮಕ್ಕಳು ಖುಷಿಯಿಂದ ತಮ್ಮ ಸ್ನೇಹಿತರನ್ನ ಫ್ಲೈಟ್‌ನಲ್ಲಿ ಪ್ರವಾಸಕ್ಕೆ ಕಳುಹಿಸಿದ್ದಕ್ಕೆ ಹೆಮ್ಮೆ ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಮುತ್ತಿಗೆಪುರ ಸರ್ಕಾರಿ ಶಾಲೆಯ ಶಿಕ್ಷಕರು ಇದೊಂದು ಗಟ್ಟಿಯಾದ ಉತ್ತರ ನೀಡಿದ್ದಾರೆ.

ಟೊಮೇಟೊ ದರ ದಿಢೀರ್ ಕುಸಿತ! ರೈತರಿಗೆ ಸಂಕಷ್ಟ, ಗ್ರಾಹಕರಿಗೆ ನಿಟ್ಟುಸಿರು

0

ಚಿಕ್ಕಬಳ್ಳಾಪುರ: ಕೆಲವೇ ದಿನಗಳ ಹಿಂದೆ ಆಪಲ್ ಬೆಲೆಯನ್ನೂ ಮೀರಿಸಿದ್ದ ಟೊಮೇಟೊ ದರ ಮತ್ತೆ ಭಾರೀ ಕುಸಿತ ಕಂಡಿದ್ದು, ರೈತರಿಗೆ ಮತ್ತೊಮ್ಮೆ ಆರ್ಥಿಕ ಆಘಾತ ತಂದಿದೆ. ಚಿಕ್ಕಬಳ್ಳಾಪುರ–ಕೋಲಾರ ಅವಳಿ ಜಿಲ್ಲೆಗಳ ರೈತರು ಕೊರೆಯುವ ಚಳಿಯಲ್ಲೂ ಅಪಾರ ಪ್ರಮಾಣದಲ್ಲಿ ಟೊಮೇಟೊ ಬೆಳೆ ಬೆಳೆಸಿ ಉತ್ತಮ ಫಸಲು ಪಡೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕಿಳಿದಿರುವುದು ರೈತರ ನಿರೀಕ್ಷೆಗಳನ್ನು ನುಚ್ಚು ನೂರಾಗಿಸಿದೆ.

ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್‌ ದರ ₹250 ರಿಂದ ಗರಿಷ್ಠ ₹600ಕ್ಕೆ ಮಾತ್ರ ವಹಿವಾಟಾಗಿದೆ. ಕಳೆದ ವಾರವಷ್ಟೇ ಇದೇ ಬಾಕ್ಸ್‌ಗೆ ₹600 ರಿಂದ ₹800 ದರವರೆಗೆ ಸಿಕ್ಕಿತ್ತು. ಆದರೆ ಈಗ ಕೆಲವು ಕಡೆ ₹150–₹250ಕ್ಕೆ ಮಾರಾಟವಾಗುತ್ತಿದೆ.

ಒಂದು ಎಕರೆ ಟೊಮೇಟೊ ಬೆಳೆ ಬೆಳೆಸಲು ₹50 ಸಾವಿರಕ್ಕೂ ಹೆಚ್ಚು ವೆಚ್ಚ ಬರುತ್ತದೆ. ನಾರು ಖರೀದಿ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಣೆ, ಉಳುಮೆ—all ಇದಕ್ಕಾಗಿ ರೈತರು ಸಾಲ ಮಾಡಿ ತೋಟ ಮಾಡುತ್ತಾರೆ. ಆದರೆ ಈಗ ಸಿಗುತ್ತಿರುವ ಬೆಲೆ ವೆಚ್ಚವೂ ವಾಪಸ್ ಬರದಂತಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಟೊಮೇಟೊ ಬೆಳೆ ಆರಂಭವಾಗಿರುವುದು, ಜೊತೆಗೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಟೊಮೇಟೊ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯದಾದ್ಯಂತ ಒಂದೇ ಸಮಯದಲ್ಲಿ ಫಸಲು ಬಂದಿರುವುದು ರೈತರಿಗೆ ಮಾರಕವಾಗಿದೆ.

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ; ಇಂದಿನ ಬೆಲೆ ಎಷ್ಟಿದೆ?

0

ಬೆಂಗಳೂರು: ಸತತ ಏರಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇಳಿಕೆಯಾಗಿದೆ. ಚಿನ್ನದ ಬೆಲೆ 130 ರೂ ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಮ್‌ಗೆ 9 ರೂ ತಗ್ಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ ಗ್ರಾಮ್‌ಗೆ 13,800 ರೂಗೆ ಇಳಿಕೆಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ 9 ರೂ ಕಡಿಮೆಯಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,26,500 ರೂ ಆಗಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,38,000 ರೂ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ.

ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,26,500 ರೂ ಇದ್ದು, 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 27,200 ರೂವರೆಗೆ ದಾಖಲಾಗಿದೆ.

ಭಾರತದಲ್ಲಿನ ಚಿನ್ನ–ಬೆಳ್ಳಿ ಬೆಲೆ (ಜನವರಿ 8)

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹13,800

  • 22 ಕ್ಯಾರಟ್ ಚಿನ್ನ (1 ಗ್ರಾಂ): ₹12,650

  • 18 ಕ್ಯಾರಟ್ ಚಿನ್ನ (1 ಗ್ರಾಂ): ₹10,350

  • ಬೆಳ್ಳಿ (1 ಗ್ರಾಂ): ₹252

ಬೆಂಗಳೂರಿನ ಚಿನ್ನ–ಬೆಳ್ಳಿ ಬೆಲೆ

  • 24 ಕ್ಯಾರಟ್ ಚಿನ್ನ (1 ಗ್ರಾಂ): ₹13,800

  • 22 ಕ್ಯಾರಟ್ ಚಿನ್ನ (1 ಗ್ರಾಂ): ₹12,650

  • ಬೆಳ್ಳಿ (1 ಗ್ರಾಂ): ₹252

ವಿವಿಧ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

  • ಬೆಂಗಳೂರು: ₹12,650

  • ಚೆನ್ನೈ: ₹12,750

  • ಮುಂಬೈ: ₹12,650

  • ದೆಹಲಿ: ₹12,665

  • ಕೋಲ್ಕತಾ: ₹12,650

  • ಕೇರಳ: ₹12,650

  • ಅಹ್ಮದಾಬಾದ್: ₹12,655

  • ಜೈಪುರ್: ₹12,665

  • ಲಕ್ನೋ: ₹12,665

  • ಭುವನೇಶ್ವರ್: ₹12,650

ಬಳ್ಳಾರಿ ಗಲಭೆ ಪ್ರಕರಣ: 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೆ ನೋಟಿಸ್‌

0

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ನೋಟಿಸ್‌ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಪ್ರಕರಣದಲ್ಲಿ ಒಟ್ಟು 107 ಜನರಿಗೆ ನೋಟಿಸ್‌ ನೀಡಲಾಗಿದ್ದು,

ಅವರಲ್ಲಿ 30ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಎಂಬುದು ತಿಳಿದುಬಂದಿದೆ. ಈ 107 ಮಂದಿಯಲ್ಲಿ ಬಹುತೇಕರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಗಲಭೆ ಸಂದರ್ಭದ ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಸಂದರ್ಭದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ನೋಟಿಸ್‌ ನೀಡಿರುವುದು ಗಮನ ಸೆಳೆದಿದೆ. ಈ ಹಿಂದೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದೀಗ ಕಾಂಗ್ರೆಸ್ ಕಾರ್ಯಕರ್ತರಿಗೂ ನೋಟಿಸ್‌ ನೀಡಿರುವ ಮೂಲಕ ಪೊಲೀಸರು ಪಕ್ಷಾತೀತವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಬಿಜೆಪಿ ಕಾರ್ಯಕರ್ತರಿಗೂ ನೋಟಿಸ್‌ ನೀಡಲಾಗಿದೆ. ಮತ್ತೆ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ರಾಮುಲು ಸೇರಿದಂತೆ ಒಟ್ಟು 33 ಬಿಜೆಪಿ ನಾಯಕರಿಗೆ ನೋಟಿಸ್‌ ಜಾರಿಯಾಗಿದೆ. ಈ ವಿಷಯವು ಮುಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಈಗಾಗಲೇ 26 ಮಂದಿಯನ್ನು ಬಂಧಿಸಿದ್ದಾರೆ. ಇದಲ್ಲದೆ, ರೆಡ್ಡಿ ಆಪ್ತರಾಗಿರುವ ಸುರೇಶ್ ಬಾಬು ಅವರನ್ನು ಕೂಡ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬಳ್ಳಾರಿ ಗಲಭೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ನಾಯಕರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ತಂದೆಯನ್ನೇ ಕೊಂದ ಕಿರಾತಕ ಮಗ!

0

ಚಿತ್ರದುರ್ಗ: ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಅತ್ತಿಘಟ್ಟ ಗ್ರಾಮದ ಸಣ್ಣ ನಿಂಗಪ್ಪ ಎಂದು ಗುರುತಿಸಲಾಗಿದೆ. ಪುತ್ರ ಲಿಂಗರಾಜ್ ಆರೋಪಿಯಾಗಿದ್ದಾನೆ. ವಯಸ್ಸಾಗಿದ್ದು ಕೂಡ ಮದುವೆ ಮಾಡಿಕೊಡುತ್ತಿಲ್ಲ ಎಂದು ತಂದೆಯ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದನು ಎಂದು ತಿಳಿದು ಬಂದಿದೆ.

ಇದೇ ವೇಳೆ ತಂದೆ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವಿಚಾರಕ್ಕೂ ಲಿಂಗರಾಜ್ ಕೋಪಗೊಂಡಿದ್ದ. ಈ ಎರಡೂ ವಿಚಾರಗಳ ಕುರಿತು ತಂದೆ–ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಲಿಂಗರಾಜ್ ಕಬ್ಬಿಣದ ರಾಡಿನಿಂದ ತಂದೆಯ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.

ತೀವ್ರವಾಗಿ ಗಾಯಗೊಂಡ ಸಣ್ಣ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಲಿಂಗರಾಜ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಐದು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ‘ಮರಿ ವೀರಪ್ಪನ್’ ಕೊನೆಗೂ ಅರೆಸ್ಟ್

0

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸತ್ತ ಬಳಿಕವೂ, ಅವನಂತೆಯೇ ಅರಣ್ಯ ಪ್ರದೇಶದಲ್ಲಿ ಕ್ರೌರ್ಯ ಮೆರೆದ ವ್ಯಕ್ತಿಯಾಗಿ ಗೋವಿಂದ್ ಅಲಿಯಾಸ್ ‘ಮರಿ ವೀರಪ್ಪನ್’ ಹೆಸರು ಕೇಳಿಬಂದಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಡೆದ ಭೀಕರ ಹುಲಿ ಬೇಟೆ ಪ್ರಕರಣದೊಂದಿಗೆ ಈ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಇದೀಗ ಆತನನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 2025ರಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಪ್ರದೇಶದಲ್ಲಿ ಹುಲಿಯೊಂದು ವಿಷ ಸೇವಿಸಿ ಸಾವನ್ನಪ್ಪಿತ್ತು. ಬಳಿಕ ಅದರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಕಾಡಿನೊಳಗೆ ಎಸೆದಿದ್ದರು. ಇದು ಕೇವಲ ಬೇಟೆಯಲ್ಲ, ಅರಣ್ಯ ವ್ಯವಸ್ಥೆಯ ಮೇಲಿನ ಸವಾಲು ಹಾಗೂ ಅಧಿಕಾರಿಗಳಿಗೆ ಹಾಕಿದ ಬೆದರಿಕೆ ಎಂದು ಹೇಳಲಾಗಿತ್ತು.

ತನಿಖೆಯಲ್ಲಿ ಗೋವಿಂದ್ ಕಾರ್ಬೊಫ್ಯೂರಾನ್ ವಿಷ ಬಳಸಿ ಹುಲಿ ಹಾಗೂ ಚಿರತೆಗಳನ್ನು ಗುರಿಯಾಗಿಸುತ್ತಿದ್ದಾನೆ ಎಂಬುದು ಬಹಿರಂಗವಾಗಿತ್ತು. ಈ ಪ್ರಕರಣ ಅರಣ್ಯ ಇಲಾಖೆ ಹಾಗೂ ಪೊಲೀಸರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆರೋಪಿಗಳು ಜಾಮೀನಿನಲ್ಲಿ ಹೊರಬಂದರೂ, ಗೋವಿಂದ್ ಮಾತ್ರ ಐದು ತಿಂಗಳ ಕಾಲ ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ.

ಖಚಿತ ಮಾಹಿತಿ ಆಧರಿಸಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಕೊನೆಗೂ ಗೋವಿಂದ್‌ನನ್ನು ಬಂಧಿಸಿದ್ದಾರೆ. ಈ ಬಂಧನವು ಮಲೆ ಮಹದೇಶ್ವರ ವನ್ಯಜೀವಿಧಾಮದ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ವಾಯು ಗುಣಮಟ್ಟದಲ್ಲಿ ವ್ಯತ್ಯಾಸ: ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮಾಲಿನ್ಯ ಏರಿಕೆ

0

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂದು (ಜನವರಿ 8, 2026) ವಾಯು ಗುಣಮಟ್ಟದ ಸೂಚ್ಯಂಕ (AQI) ವಿಭಿನ್ನ ಮಟ್ಟದಲ್ಲಿ ದಾಖಲಾಗಿದೆ. ಚಳಿಗಾಲದ ಪ್ರಭಾವ ಹಾಗೂ ವಾಹನ ಸಂಚಾರದ ಒತ್ತಡದಿಂದಾಗಿ ಕೆಲವು ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಸ್ವಲ್ಪ ಹೆಚ್ಚಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಹೆಬ್ಬಾಳ, ಬಿಟಿಎಂ ಲೇಔಟ್ ಮತ್ತು ಪೀಣ್ಯ ಭಾಗಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ವಾಹನಗಳ ದಟ್ಟಣೆಯಿಂದಾಗಿ AQI ಮಟ್ಟ 170ರ ಗಡಿ ದಾಟುವ ಸಾಧ್ಯತೆ ಇದೆ.

ರಸ್ತೆ ಧೂಳು ಮತ್ತು ಹಳೆಯ ವಾಹನಗಳಿಂದ ಹೊರಬರುವ ಹೊಗೆ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ. ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ಹಿರಿಯ ನಾಗರಿಕರು ಅನಗತ್ಯವಾಗಿ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಎನ್–95 (N95) ಮಾಸ್ಕ್ ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ. ವಾಯು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮುಂಜಾನೆ ವಾಕಿಂಗ್‌ಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಗಾಳಿಯ ಗುಣಮಟ್ಟ ಸುಧಾರಣೆಗೆ ಗಿಡಗಳನ್ನು ಬೆಳೆಸುವುದು ಅಥವಾ ಸಾಧ್ಯವಾದಲ್ಲಿ ಏರ್ ಪ್ಯೂರಿಫೈಯರ್ ಬಳಸುವಂತೆ ಸಲಹೆ ನೀಡಲಾಗಿದೆ.

ಇನ್ನೂ ಕರಾವಳಿ ನಗರ ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನಗರದ ವಿವಿಧ ಭಾಗಗಳಲ್ಲಿ AQI 150ರ ಗಡಿ ದಾಟಿದ್ದು, ಚಳಿಗಾಲದ ಹವಾಮಾನ ಮತ್ತು ಸ್ಥಳೀಯ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ಸಂಚಾರ ಇದಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಉತ್ತಮ ಗಾಳಿಯ ಗುಣಮಟ್ಟ ಹೊಂದಿರುವ ಮಂಗಳೂರಿನಲ್ಲಿ ಈ ಬದಲಾವಣೆ ಜನರಲ್ಲಿ ಆತಂಕ ಮೂಡಿಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಹದಗೆಟ್ಟಿದ್ದು, ಹೆಬ್ಬಾಳ ಮತ್ತು ವಿವೇಕಾನಂದ ನಗರ ಭಾಗಗಳಲ್ಲಿ AQI 150 ದಾಟಿದೆ. ಇದು ಉಸಿರಾಟದ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಳ್ಳಾರಿಯಲ್ಲಿ ಸದ್ಯಕ್ಕೆ ಗಾಳಿಯ ಗುಣಮಟ್ಟ ‘ಸಾಧಾರಣ’ ಸ್ಥಿತಿಯಲ್ಲಿದೆ. ಆದರೆ ಗಣಿ ಮತ್ತು ಕೈಗಾರಿಕಾ ಚಟುವಟಿಕೆಗಳ ಸಮೀಪದ ಪ್ರದೇಶಗಳಲ್ಲಿ ಧೂಳಿನ ಕಣಗಳ (PM10) ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಬೆಳಗಾವಿಯಲ್ಲಿ ಗಾಳಿಯ ಗುಣಮಟ್ಟ ಸುಮಾರು AQI 82ರಷ್ಟಿದ್ದು, ಸಾಧಾರಣ ಮಟ್ಟದಲ್ಲಿದೆ. ಮುಂಜಾನೆ ಮಂಜು ಹೆಚ್ಚಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಗಾಳಿಯ ಗುಣಮಟ್ಟ 70 ರಿಂದ 110ರ ನಡುವೆ ಬದಲಾಗುತ್ತಿದ್ದು, ಮುಖ್ಯ ರಸ್ತೆಗಳಲ್ಲಿ ವಾಹನಗಳ ಹೊಗೆಯಿಂದಾಗಿ ಗಾಳಿ ಸ್ವಲ್ಪ ಕಲುಷಿತಗೊಂಡಿದೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 3–0 ಕ್ಲೀನ್ ಸ್ವೀಪ್: 14 ರ ವೈಭವ್ ಸೂರ್ಯವಂಶಿ ಯಿಂದ ವಿಶ್ವದಾಖಲೆ

0

ಭಾರತ ಅಂಡರ್–19 ತಂಡದ ನಾಯಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 3–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ, ಅಂಡರ್–19 ಒಡಿಐ ದ್ವಿಪಕ್ಷೀಯ ಸರಣಿಯನ್ನು ಗೆದ್ದ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಕೇವಲ 14ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವೈಭವ್, 13 ವರ್ಷಗಳ ಹಿಂದಿನ ಉನ್ಮುಕ್ತ್ ಚಂದ್ ಅವರ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ಅಂಡರ್–19 ತಂಡವನ್ನು ಮುನ್ನಡೆಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಸರಣಿಯನ್ನೇ ಕ್ಲೀನ್ ಸ್ವೀಪ್ ಮಾಡಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.

ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 233 ರನ್‌ಗಳ ಭಾರೀ ಅಂತರದಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು 3–0 ಅಂತರದಿಂದ ವಶಪಡಿಸಿಕೊಂಡಿತು. ಈ ಸಾಧನೆಯ ಮೂಲಕ ವೈಭವ್ ಸೂರ್ಯವಂಶಿ 13 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಪುಡಿಗಟ್ಟಿದರು.

ಈ ಹಿಂದೆ 2012ರಲ್ಲಿ ಭಾರತ ಅಂಡರ್–19 ತಂಡದ ನಾಯಕರಾಗಿದ್ದ ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾ ಅಂಡರ್–19 ತಂಡದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 5–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದರು. ಆ ಸಂದರ್ಭದಲ್ಲಿ ಉನ್ಮುಕ್ತ್ ಚಂದ್ ಅವರಿಗೆ 17 ವರ್ಷ ವಯಸ್ಸಾಗಿತ್ತು. ಈ ಮೂಲಕ ಅವರು ಅಂಡರ್–19 ಒಡಿಐ ದ್ವಿಪಕ್ಷೀಯ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆದರೆ ಇದೀಗ ಕೇವಲ 14ನೇ ವಯಸ್ಸಿನಲ್ಲಿ ಭಾರತ ಅಂಡರ್–19 ತಂಡವನ್ನು ಮುನ್ನಡೆಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ವೈಭವ್ ಸೂರ್ಯವಂಶಿ, ಉನ್ಮುಕ್ತ್ ಚಂದ್ ಅವರ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಚಾಮರಾಜನಗರ| ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

0

ಚಾಮರಾಜನಗರ:- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಗುರುವಿನಪುರ ರಸ್ತೆಯಲ್ಲಿರುವ ರಾಮಪ್ಪ ಎಂಬುವರ ತೋಟದಲ್ಲಿದ್ದ ಹಸುವಿನ ಮೇಲೆ ಇಂದು ನಸುಕಿನ ಜಾವ ಹುಲಿ ದಾಳಿ ಮಾಡಿದೆ. ಕುತ್ತಿಗೆ ಹಾಗೂ ಹಿಂಭಾಗದಲ್ಲಿ ತಿಂದುಹಾಕಿದ ಪರಿಣಾಮ ಹಸು ಸಾವಿಗೀಡಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಫರ್ ವಲಯದ ಅರಣ್ಯ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದರು. ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿ ಹುಲಿ ದಾಳಿ ನಡೆಸಿ ರೈತರ ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಸಹಾ ಹುಲಿ ದಾಳಿ ನಡೆಸಿ ಹಾಲು ಕೊಡುತ್ತಿದ್ದ ಹಸುವನ್ನು ಕೊಂದುಹಾಕಿತ್ತು. ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ದಾಳಿ ನಡೆಸಿದೆ.

ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸಾರ್ವಜನಿಕರು ಒತ್ತಯಿಸಿದ್ದಾರೆ.

error: Content is protected !!