Home Blog Page 205

ದಕ್ಷಿಣ ಆಫ್ರಿಕಾ ವಿರುದ್ಧ 3–0 ಕ್ಲೀನ್ ಸ್ವೀಪ್: 14 ರ ವೈಭವ್ ಸೂರ್ಯವಂಶಿ ಯಿಂದ ವಿಶ್ವದಾಖಲೆ

0

ಭಾರತ ಅಂಡರ್–19 ತಂಡದ ನಾಯಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 3–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ, ಅಂಡರ್–19 ಒಡಿಐ ದ್ವಿಪಕ್ಷೀಯ ಸರಣಿಯನ್ನು ಗೆದ್ದ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಕೇವಲ 14ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವೈಭವ್, 13 ವರ್ಷಗಳ ಹಿಂದಿನ ಉನ್ಮುಕ್ತ್ ಚಂದ್ ಅವರ ದಾಖಲೆ ಮುರಿದು ಇತಿಹಾಸ ನಿರ್ಮಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ಅಂಡರ್–19 ತಂಡವನ್ನು ಮುನ್ನಡೆಸುವ ಮೂಲಕ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಸರಣಿಯನ್ನೇ ಕ್ಲೀನ್ ಸ್ವೀಪ್ ಮಾಡಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.

ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 233 ರನ್‌ಗಳ ಭಾರೀ ಅಂತರದಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು 3–0 ಅಂತರದಿಂದ ವಶಪಡಿಸಿಕೊಂಡಿತು. ಈ ಸಾಧನೆಯ ಮೂಲಕ ವೈಭವ್ ಸೂರ್ಯವಂಶಿ 13 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಪುಡಿಗಟ್ಟಿದರು.

ಈ ಹಿಂದೆ 2012ರಲ್ಲಿ ಭಾರತ ಅಂಡರ್–19 ತಂಡದ ನಾಯಕರಾಗಿದ್ದ ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾ ಅಂಡರ್–19 ತಂಡದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 5–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದರು. ಆ ಸಂದರ್ಭದಲ್ಲಿ ಉನ್ಮುಕ್ತ್ ಚಂದ್ ಅವರಿಗೆ 17 ವರ್ಷ ವಯಸ್ಸಾಗಿತ್ತು. ಈ ಮೂಲಕ ಅವರು ಅಂಡರ್–19 ಒಡಿಐ ದ್ವಿಪಕ್ಷೀಯ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆದರೆ ಇದೀಗ ಕೇವಲ 14ನೇ ವಯಸ್ಸಿನಲ್ಲಿ ಭಾರತ ಅಂಡರ್–19 ತಂಡವನ್ನು ಮುನ್ನಡೆಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ವೈಭವ್ ಸೂರ್ಯವಂಶಿ, ಉನ್ಮುಕ್ತ್ ಚಂದ್ ಅವರ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಚಾಮರಾಜನಗರ| ಹುಲಿ ದಾಳಿಗೆ ಹಸು ಬಲಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

0

ಚಾಮರಾಜನಗರ:- ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಗುರುವಿನಪುರ ರಸ್ತೆಯಲ್ಲಿರುವ ರಾಮಪ್ಪ ಎಂಬುವರ ತೋಟದಲ್ಲಿದ್ದ ಹಸುವಿನ ಮೇಲೆ ಇಂದು ನಸುಕಿನ ಜಾವ ಹುಲಿ ದಾಳಿ ಮಾಡಿದೆ. ಕುತ್ತಿಗೆ ಹಾಗೂ ಹಿಂಭಾಗದಲ್ಲಿ ತಿಂದುಹಾಕಿದ ಪರಿಣಾಮ ಹಸು ಸಾವಿಗೀಡಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಫರ್ ವಲಯದ ಅರಣ್ಯ ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದರು. ಗ್ರಾಮದ ಸಮೀಪದಲ್ಲಿರುವ ಜಮೀನುಗಳಲ್ಲಿ ಹುಲಿ ದಾಳಿ ನಡೆಸಿ ರೈತರ ಸಾಕುಪ್ರಾಣಿಗಳನ್ನು ಕೊಲ್ಲುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಸಹಾ ಹುಲಿ ದಾಳಿ ನಡೆಸಿ ಹಾಲು ಕೊಡುತ್ತಿದ್ದ ಹಸುವನ್ನು ಕೊಂದುಹಾಕಿತ್ತು. ಘಟನೆ ಮರೆಯುವ ಮುನ್ನವೇ ಮತ್ತೊಮ್ಮೆ ದಾಳಿ ನಡೆಸಿದೆ.

ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಹುಲಿಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸಾರ್ವಜನಿಕರು ಒತ್ತಯಿಸಿದ್ದಾರೆ.

ಮಹಿಳೆಯರ ಉದ್ಯೋಗ, ವಾಸಕ್ಕೆ ಸಿಲಿಕಾನ್ ಸಿಟಿ ಬೆಸ್ಟ್! ದೇಶದಲ್ಲೇ ಬೆಂಗಳೂರು ನಂ.1 ಎಂದ ಸಮೀಕ್ಷೆ!

0

ಬೆಂಗಳೂರು: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.

ಅವತಾರ್ ಗ್ರೂಪ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ಸಮೀಕ್ಷಾ ವರದಿಯಲ್ಲಿ, ದೇಶದ 125 ನಗರಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ.

ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧಾರವಾಗಿ ನಗರಗಳಿಗೆ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ. ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಾದ ಉದ್ಯೋಗಾವಕಾಶಗಳು ಹಾಗೂ ಮಹಿಳಾ ಸ್ನೇಹಿ ಕೆಲಸದ ವಾತಾವರಣ ಬೆಂಗಳೂರು ಮೊದಲ ಸ್ಥಾನ ಪಡೆಯಲು ಕಾರಣವಾಗಿದೆ.

ಈ ಪಟ್ಟಿಯಲ್ಲಿ ಚೆನ್ನೈ ಎರಡನೇ ಸ್ಥಾನ ಪಡೆದರೆ, ಪುಣೆ, ಹೈದರಾಬಾದ್ ಮತ್ತು ಮುಂಬೈ ಮುಂದಿನ ಸ್ಥಾನಗಳಲ್ಲಿವೆ. ಕೈಗಾರಿಕಾ ಬೆಳವಣಿಗೆ ಮಾತ್ರ ಮಹಿಳಾ ಸ್ನೇಹಿ ನಗರ ನಿರ್ಮಾಣಕ್ಕೆ ಸಾಕಾಗುವುದಿಲ್ಲ ಎಂಬುದನ್ನೂ ಈ ವರದಿ ಸ್ಪಷ್ಟಪಡಿಸಿದೆ.

ರಾಕಿಂಗ್ ಸ್ಟಾರ್ ಕಂಬ್ಯಾಕ್: ‘ಟಾಕ್ಸಿಕ್’ ಟೀಸರ್ ರಿಲೀಸ್, ಫ್ಯಾನ್ಸ್ ಫಿದಾ

ಕೆಜಿಎಫ್ 2 ನಂತರ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಯಶ್ ಬರ್ತ್‌ಡೇ ದಿನವೇ ರಿಲೀಸ್ ಆಗಿದ್ದು, ಫ್ಯಾನ್ಸ್‌ನಲ್ಲಿ ಹವಾ ಸೃಷ್ಟಿಸಿದೆ.

ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಮೂಲಕ ಯಶ್ ಮತ್ತೆ ಪ್ಯಾನ್-ವರ್ಡ್ ಲೆವಲ್ ಸಿನಿಮಾಗೆ ಕಾಲಿಟ್ಟಿದ್ದಾರೆ. ಯಶ್ ಹುಟ್ಟುಹಬ್ಬದ ದಿನವೇ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ನಿರ್ದೇಶಕಿ, ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಟೀಸರ್ ಆರಂಭವಾಗುವುದು ಸ್ಮಶಾನದ ದೃಶ್ಯಗಳಿಂದ. ಮೊದಲಿಗೆ ಗದ್ದಲ, ಗಲಾಟೆ ನಡೆಯುತ್ತದೆ. ಬಳಿಕ ಅಸಲಿ ಆಟ ಶುರುವಾಗುತ್ತದೆ. ಯಶ್ ಶರ್ಟ್‌ಲೆಸ್ ಲುಕ್‌ನಲ್ಲಿ, ಬ್ಯಾಕ್ ಶಾಟ್‌ನಿಂದ ಎಂಟ್ರಿ ಕೊಡುತ್ತಾರೆ. ಬೂಟುಗಾಲಿನಿಂದ ಬುಲೆಟ್ಸ್ ಹೊರಬಿಡುವ ದೃಶ್ಯ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡಿದೆ.

ಗೀತು ಮೋಹನ್ದಾಸ್ ತಮ್ಮ ಹಿಂದಿನ ಸಿನಿಮಾಗಳಲ್ಲಿ ಪಾತ್ರಗಳನ್ನು ಹೇಗೆ ವಿಭಿನ್ನವಾಗಿ ತೋರಿಸಿದ್ದರೋ, ಅದೇ ಶೈಲಿಯಲ್ಲಿ ಯಶ್ ಪಾತ್ರವನ್ನೂ ಪ್ರಸ್ತುತಪಡಿಸಿರುವುದು ಟೀಸರ್‌ನ ವಿಶೇಷತೆ. ಇದು ಸಂಪೂರ್ಣವಾಗಿ ಹೊಸ ಯಶ್ ಅನ್ನೋ ಭಾವನೆ ಮೂಡಿಸುತ್ತದೆ.

ಇನ್ನು ‘ಟಾಕ್ಸಿಕ್’ ಸಿನಿಮಾ ಹಿಂದಿಯಲ್ಲಿ ಸೂಪರ್ ಹಿಟ್ ಆದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಜೊತೆ ಕ್ಲ್ಯಾಶ್ ಆಗುತ್ತಿದೆ. ಇದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಈ ಸವಾಲನ್ನು ಎದುರಿಸಲು ಟಾಕ್ಸಿಕ್ ತಂಡ ಎಲ್ಲ ರೀತಿಯ ತಂತ್ರ ರೂಪಿಸಿಕೊಂಡಿದೆ.

ವಿಜಯ್ ರಾಜಕೀಯಕ್ಕೆ ಕಾಲಿಟ್ಟ ಬೆನ್ನಲ್ಲೇ ‘ಜನ ನಾಯಗನ್’ಗೆ ಸೆನ್ಸಾರ್ ಸಂಕಷ್ಟ: ರಾಜಕೀಯ ಕೆಸರೆರೆಚಾಟದ ಶಂಕೆ

ದಳಪತಿ ವಿಜಯ್ ರಾಜಕೀಯ ಪ್ರವೇಶದತ್ತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲೇ, ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಸೆನ್ಸಾರ್ ವಿವಾದದ ಸುಳಿಯಲ್ಲಿ ಸಿಲುಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಡಿಸೆಂಬರ್ 18ರಂದು ಕೆವಿಎನ್ ನಿರ್ಮಾಣ ಸಂಸ್ಥೆ ‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್‌ಗೆ ಸಲ್ಲಿಸಿತ್ತು. ಪರಿಶೀಲನೆ ನಡೆಸಿದ ಮಂಡಳಿ ಒಟ್ಟು 27 ಕಟ್ ಹಾಗೂ ಬದಲಾವಣೆ ಸೂಚನೆ ನೀಡಿತ್ತು. ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಿ ಚಿತ್ರವನ್ನು ಮರುಸಲ್ಲಿಕೆ ಮಾಡಿದರೂ, ಈ ಬಾರಿ ಪ್ರಮಾಣಪತ್ರ ನೀಡಲು ಮಂಡಳಿ ನಿರಾಕರಿಸಿದ್ದು, ವಿಶೇಷ ಮಂಡಳಿ ವೀಕ್ಷಣೆಗಾಗಿ ಶಿಫಾರಸು ಮಾಡಿದೆ.

ಸೆನ್ಸಾರ್ ಮಂಡಳಿಯಿಂದ ಸ್ಪಷ್ಟ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಚಿತ್ರತಂಡ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ಮಧ್ಯೆ, ವಿಜಯ್ ರಾಜಕೀಯ ಪ್ರವೇಶದ ಕಾರಣಕ್ಕೆ ಉದ್ದೇಶಪೂರ್ವಕ ವಿಳಂಬ ನಡೆಯುತ್ತಿದೆಯೇ? ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ.

ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಜನವರಿ 9ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣದಿಂದ ‘ಜನ ನಾಯಗನ್’ ಬಿಡುಗಡೆಗೂ ಮೊದಲೇ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿತ್ತು. ಆದರೆ, ರಿಲೀಸ್ ಮುಂದೂಡಿಕೆಯ ಹಿನ್ನೆಲೆಯಲ್ಲಿ, ಈಗ ಪ್ರೇಕ್ಷಕರಿಗೆ ಹಣ ಹಿಂತಿರುಗಿಸುವ ಸವಾಲು ಚಿತ್ರತಂಡದ ಮುಂದಿದೆ.

ಒಂದೊಮ್ಮೆ ಎಲ್ಲ ಅಡೆತಡೆಗಳು ವಾರದೊಳಗೆ ನಿವಾರಣೆಯಾದರೆ, ಜನವರಿ 14ರಂದು ‘ಜನ ನಾಯಗನ್’ ತೆರೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ, ಸೆನ್ಸಾರ್ ಮತ್ತು ರಾಜಕೀಯ ಗೊಂದಲಗಳು ಮುಂದುವರಿದರೆ, ರಿಲೀಸ್ ಇನ್ನಷ್ಟು ಮುಂದೂಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ.

ಇಂದು ಯಶ್ ಬರ್ತ್‌ಡೇ: ಅಭಿಮಾನಿಗಳಿಗೆ ನಿರಾಸೆ ತಂದ ರಾಖಿ ಬಾಯ್ ನಿರ್ಧಾರ

ರಾಕಿಂಗ್ ಸ್ಟಾರ್ ಯಶ್ ನಾಳೆ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಈ ಬಾರಿ ಆದರೂ ಯಶ್ ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗಬಹುದು ಎಂಬ ನಿರೀಕ್ಷೆ ಗಟ್ಟಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಯಶ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಹಂಚಿಕೊಂಡಿರುವ ಯಶ್, “ನೀವು ಎಷ್ಟು ವರ್ಷಗಳಿಂದ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದೀರೋ ಅನ್ನೋದು ನನಗೆ ಚೆನ್ನಾಗಿ ಗೊತ್ತು. ಈ ವರ್ಷವಾದರೂ ಪ್ರಯತ್ನಿಸೋಣ ಅಂದುಕೊಂಡಿದ್ದೆ” ಎಂದು ಹೇಳಿದ್ದಾರೆ.

ಆದರೆ, ‘ಟಾಕ್ಸಿಕ್’ ಸಿನಿಮಾವನ್ನು ಮಾರ್ಚ್ 19ಕ್ಕೆ ರಿಲೀಸ್ ಮಾಡುವ ಗುರಿ ಹೊಂದಿರುವುದರಿಂದ, ಪ್ರಾಜೆಕ್ಟ್ ಕೆಲಸಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ಅಭಿಮಾನಿಗಳೊಂದಿಗೆ ನೇರ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಅಭಿಮಾನಿಗಳಿಗೆ ಭವಿಷ್ಯದ ಭರವಸೆ ನೀಡಿರುವ ಯಶ್, “ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ. ನೀವು ಕಳಿಸುವ ಪ್ರತಿಯೊಂದು ಶುಭಾಶಯ ಮತ್ತು ಪ್ರೀತಿಯ ಸಂದೇಶವನ್ನು ನಾನು ಮನಸಾರೆ ಸ್ವೀಕರಿಸುತ್ತೇನೆ” ಎಂದು ತಿಳಿಸಿದ್ದಾರೆ.

‘ಎಲ್ಲಾ ಪುಗಳುಮ್’ ಹಾಡು ಹಾಡಿ ಸಂಕಷ್ಟಕ್ಕೆ ಸಿಲುಕಿದ ಮಮಿತಾ ಬೈಜು: ವಿಜಯ್ ರಿಯಾಕ್ಷನ್ ವೈರಲ್

‘ಪ್ರೇಮುಲು’ ಚಿತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಮಲಯಾಳಂ ನಟಿ ಮಮಿತಾ ಬೈಜು, ಇದೀಗ ಅನಿರೀಕ್ಷಿತ ಟ್ರೋಲ್‌ಗೆ ಗುರಿಯಾಗಿದ್ದಾರೆ. ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಮಿತಾ ಹಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಸಿನಿಮಾದಲ್ಲಿ ಮಮಿತಾ, ವಿಜಯ್ ಅವರ ಸಾಕು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಲವು ದಿನಗಳ ಶೂಟಿಂಗ್ ವೇಳೆ ಇಬ್ಬರ ನಡುವೆ ಉತ್ತಮ ಬಾಂಧವ್ಯ ನಿರ್ಮಾಣವಾಗಿತ್ತು. ಇದೇ ಆತ್ಮೀಯತೆಯಿಂದ ಮಮಿತಾ ವಿಜಯ್ ಎದುರು ಹಾಡು ಹಾಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಮಮಿತಾ ಹಾಡಿದ ‘ಎಲ್ಲಾ ಪುಗಳುಮ್’ ಹಾಡು ಟ್ರೋಲಿಗರ ಟಾರ್ಗೆಟ್ ಆಗಿದೆ. ಈ ಹಾಡು 2007ರಲ್ಲಿ ಬಿಡುಗಡೆಯಾದ ‘ಅಳಗಿಯ ತಮಿಳ ಮಗನ್’ ಸಿನಿಮಾದ ಜನಪ್ರಿಯ ಹಾಡಾಗಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಒರಿಜಿನಲ್ ಹಾಡಿನೊಂದಿಗೆ ಹೋಲಿಸಿ ಮಮಿತಾ ಹಾಡನ್ನು ಮೀಮ್ಸ್ ಮೂಲಕ ಟೀಕಿಸಲಾಗುತ್ತಿದೆ.

ಈ ವೇಳೆ ವಿಜಯ್ ಅವರ ಮುಖಭಾವ ಸಿಟ್ಟಿನಿಂದ ಇದ್ದಂತೆ ಕಾಣಿಸಿಕೊಂಡಿದ್ದು, ಅದನ್ನೇ ಕ್ಯಾಪ್ಚರ್ ಮಾಡಿ ಟ್ರೋಲ್‌ಗಳು ಹರಿದಾಡುತ್ತಿವೆ. “ನಾವು ಬೇಡಿದ್ದು ಏನು – ದೇವರು ಕೊಟ್ಟಿದ್ದು ಏನು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋಗಳು ವೈರಲ್ ಆಗಿವೆ.

ಇನ್ನೊಂದೆಡೆ, ಸೆನ್ಸಾರ್ ಮಂಡಳಿಯ ಸಮಸ್ಯೆಯಿಂದ ‘ಜನ ನಾಯಗನ್’ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ವಿಧಿವಶ!

0

ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾದರು.

ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿದ್ದ ಅವರು, 2010ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಮುಖ್ಯಸ್ಥರಾಗಿದ್ದು, ಅವರ ಅಧ್ಯಯನ ಆಧಾರಿತ ವರದಿ ‘ಗಾಡ್ಗೀಳ್ ಆಯೋಗದ ವರದಿ’ ಎಂದು ಪ್ರಸಿದ್ಧಿಯಾಯಿತು.

1942ರ ಮೇ 24ರಂದು ಪುಣೆಯಲ್ಲಿ ಜನಿಸಿದ ಡಾ. ಗಾಡ್ಗೀಳ್ ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮತ್ತು ಪಿಎಚ್‌ಡಿ ಪಡೆದಿದ್ದರು. 1971ರಲ್ಲಿ ಭಾರತಕ್ಕೆ ಮರಳಿ, 1973ರಿಂದ 2004ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದರು. ಜೊತೆಗೆ NCERT, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ವಿಜ್ಞಾನ ಕ್ಷೇತ್ರದ ಜೊತೆಗೆ ಕ್ರೀಡಾರಂಗದಲ್ಲೂ ಸಾಧನೆ ಮಾಡಿದ್ದ ಅವರು, ಹೈಜಂಪ್‌ನಲ್ಲಿ ಮಹತ್ವದ ದಾಖಲೆಗಳನ್ನು ನಿರ್ಮಿಸಿದ್ದರು ಇದೀಗ ಅವರ ನಿಧನಕ್ಕೆ ಹಲವು ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನ; ಇಬ್ಬರು ಖದೀಮರು ಅರೆಸ್ಟ್

0

ಮಂಡ್ಯ:-ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ ಇಬ್ಬರು ಖದೀಮರು ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಜರುಗಿದೆ.

ಆರೋಪಿಗಳು, ವಿಳಾಸ ಕೇಳುವ ನೆಪದಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತಿದ್ದ ಮಹಿಳೆಯ ಬಳಿ ಸರಕಿತ್ತು ಪರಾರಿ ಆಗಲು ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಸ್ಥಳೀಯರು, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೂಡಲೇ ಬೆಸಗರಹಳ್ಳಿ ಪೋಲೀಸರು, ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರಗಳ್ಳತನ ಯತ್ನದ ಮಾಹಿತಿ ತಿಳಿದು ಸ್ಥಳಕ್ಕೆ ಎಸ್ಪಿ ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಗದಗ| ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0

ಗದಗ:- ಜಿಲ್ಲೆಯ ಪಾಪನಾಶಿ ಟೋಲ್ ನಾಕಾ ಬಳಿ ಸರ್ಕಾರಿ ಬಸ್‌ನಲ್ಲಿ ಹತ್ತಿದ್ದ ಬಾಲಕಿಯನ್ನು ಇಳಿಸಿದ್ದಕ್ಕೆ ಕೋಪಗೊಂಡ ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಘಟನೆಯು ಜನವರಿ 6, 2026ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ನಡೆದಿತ್ತು. NWKRTCಗೆ ಸೇರಿದ KA-26 F-0852 ನಂಬರ್ ಬಸ್‌ನ ಮಹಿಳಾ ಕಂಡಕ್ಟರ್ ನೇತ್ರಾವತಿ ಗಂಡ ಮಹಾಂತೇಶ ಪತ್ರಿಮಠ (ವಯಸ್ಸು 46) ಅವರು ಟೋಲ್ ನಾಕಾ ಬಳಿ ಬಸ್ ನಿಲ್ಲಿಸಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿನಿಯೊಬ್ಬಳನ್ನು ಹತ್ತಿಸದೇ ಕೆಳಗಿಳಿಸಿದ್ದರು.

ಇದರಿಂದ ಕೋಪಗೊಂಡ ಆಕೆಯ ತಂದೆ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಪ್ರಕಾಶ ಲಕ್ಷ್ಮಣ ಸಂಕಣ್ಣವರ ಹಾಗೂ ಶಿಂಗಟರಾಯನಕೇರಿಯ ನೀಲಪ್ಪ @ ಮುತ್ತಣ್ಣ ಹುಚ್ಚಪ್ಪ ಜಂತ್ಲಿ ಇಬ್ಬರು, ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಹಲ್ಲೆಗೊಳಗಾದ ನೇತ್ರಾವತಿ ಅವರು‌ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಗದಗ ಗ್ರಾಮೀಣ ಪೊಲೀಸರು, ತ್ವರಿತ ಕ್ರಮ ಕೈಗೊಂಡು ಆರೋಪಿಗಳಾದ ಪ್ರಕಾಶ ಸಂಕಣ್ಣವರ ಹಾಗೂ ನೀಲಪ್ಪ ಜಂತ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

error: Content is protected !!