Home Blog Page 206

“ಮಾತೃ ದೇವೋ ಭವ”: ತಾಯಿಗೆ ಶ್ರೇಷ್ಠ ಸ್ಥಾನ ನೀಡಿದ ಸನಾತನ ಧರ್ಮ!

ಹಿಂದೂ ಧರ್ಮದಲ್ಲಿ ತಾಯಿಗೆ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಸ್ಥಾನ ನೀಡಲಾಗಿದ್ದು, “ಮಾತೃ ದೇವೋ ಭವ” ಎಂಬ ವೇದವಾಕ್ಯದ ಮೂಲಕ ತಾಯಿಯನ್ನು ದೇವರಿಗಿಂತಲೂ ಮೊದಲು ಗೌರವಿಸುವ ಸಂಸ್ಕಾರವನ್ನು ಸನಾತನ ಧರ್ಮ ಸಾರುತ್ತದೆ.

ಸನಾತನ ಸಂಪ್ರದಾಯದ ಪ್ರಕಾರ ತಾಯಿಯು ಕೇವಲ ಕುಟುಂಬದ ಸದಸ್ಯೆಯಲ್ಲ, ಬದಲಿಗೆ ಮನೆಯ ಬೆಳಕು ಹಾಗೂ ಮಗುವಿನ ಪ್ರಥಮ ಗುರು ಎಂದು ಪರಿಗಣಿಸಲಾಗುತ್ತದೆ. ಮಗುವಿಗೆ ಜನ್ಮ ನೀಡಿ, ಪೋಷಿಸಿ, ಸಂಸ್ಕಾರ ನೀಡುವ ತಾಯಿಯ ಪ್ರೀತಿ ಮತ್ತು ತ್ಯಾಗವನ್ನು ಶಾಸ್ತ್ರಗಳು ದೈವಿಕ ಗುಣಗಳಿಗೆ ಹೋಲಿಕೆ ಮಾಡಿವೆ.

ಪುರಾಣಗಳಲ್ಲಿ ತಾಯಿಯ ಪ್ರಭಾವದ ಬಗ್ಗೆ ಅನೇಕ ಉದಾಹರಣೆಗಳಿವೆ. ಭಕ್ತ ಪ್ರಹ್ಲಾದನು ತನ್ನ ತಾಯಿ ಕಯಾದುವಿನ ಗರ್ಭದಲ್ಲಿದ್ದಾಗಲೇ ನಾರದ ಮುನಿಗಳಿಂದ ಹರಿನಾಮದ ಮಹತ್ವವನ್ನು ತಿಳಿದುಕೊಂಡಿದ್ದನೆಂಬ ಉಲ್ಲೇಖವಿದೆ. ಅದೇ ರೀತಿ ಅರ್ಜುನನ ಪುತ್ರ ಅಭಿಮನ್ಯು ಕೂಡ ಗರ್ಭಾವಸ್ಥೆಯಲ್ಲಿಯೇ ಯುದ್ಧತಂತ್ರದ ಜ್ಞಾನ ಪಡೆದಿದ್ದನೆಂದು ಪುರಾಣಗಳು ಹೇಳುತ್ತವೆ. ಇದು ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿಯ ಪಾತ್ರ ಎಷ್ಟು ಮಹತ್ವದ್ದೆಂಬುದನ್ನು ತೋರಿಸುತ್ತದೆ.

ಹಿಂದೂ ಸಂಪ್ರದಾಯವು ಜನ್ಮ ನೀಡಿದ ತಾಯಿಯ ಜೊತೆಗೆ ಗುರುವಿನ ಪತ್ನಿ, ಬ್ರಾಹ್ಮಣ ಪತ್ನಿ, ರಾಣಿ, ಸಾಕು ತಾಯಿ, ಗೋಮಾತೆ ಮತ್ತು ಭೂಮಾತೆ ಸೇರಿ ಏಳು ಮಂದಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಸ್ತ್ರೀಶಕ್ತಿಯ ಈ ಆರಾಧನೆಯೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ.

ಇನ್ನೊಂದೆಡೆ ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿಯನ್ನು ಜಗನ್ಮಾತೆಯರಾಗಿ ಪೂಜಿಸುವ ಮೂಲಕ ಸ್ತ್ರೀತ್ವಕ್ಕೆ ವಿಶೇಷ ಗೌರವ ನೀಡಲಾಗುತ್ತಿದೆ.

ಈ ವರ್ಷ ಮೇ 10ರಂದು ವಿಶ್ವ ತಾಯಂದಿರ ದಿನ ಆಚರಿಸಲಾಗುತ್ತಿದ್ದು, ಇದು ಕೇವಲ ಒಂದು ದಿನದ ಆಚರಣೆಯಾಗದೆ ಪ್ರತಿದಿನವೂ ತಾಯಿಯ ಸೇವೆ, ತ್ಯಾಗ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಸಂಕಲ್ಪವಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆಧುನಿಕ ಜೀವನದಲ್ಲಿ ಮನೆ ಹಾಗೂ ಉದ್ಯೋಗ ಎರಡನ್ನೂ ಸಮತೋಲನಗೊಳಿಸುತ್ತಿರುವ ತಾಯಂದಿರ ಆರೋಗ್ಯ, ವಿಶ್ರಾಂತಿ ಮತ್ತು ಮಾನಸಿಕ ನೆಮ್ಮದಿಯ ಕಡೆ ಕುಟುಂಬದವರು ಹೆಚ್ಚಿನ ಗಮನ ಹರಿಸಬೇಕೆಂಬ ಸಂದೇಶವೂ ತಾಯಂದಿರ ದಿನದ ಅಂಗವಾಗಿ ಕೇಳಿಬರುತ್ತಿದೆ.

‘ಐರನ್ ಮ್ಯಾನ್’ ಲುಕ್‌ನಲ್ಲಿ ಅನನ್ಯಾ ಬಿರ್ಲಾ! ಮೆಟ್ ಗಾಲಾದಲ್ಲಿ ಆರ್‌ಸಿಬಿ ಮಾಲಕಿಯ ಡಿಫರೆಂಟ್ ಅವತಾರ

ಆರ್‌ಸಿಬಿ  ತಂಡದ ಹೊಸ ಮಾಲಕಿ ಅನನ್ಯಾ ಬಿರ್ಲಾ ಮೆಟ್ ಗಾಲಾ 2026ರಲ್ಲಿ ತಮ್ಮ ಬೋಲ್ಡ್ ಫ್ಯಾಷನ್ ಸ್ಟೇಟ್ಮೆಂಟ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಉದ್ಯಮಿಯಾಗಿರುವ ಅನನ್ಯಾ, ಮಾಡೆಲಿಂಗ್ ಮತ್ತು ಫ್ಯಾಷನ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು, ಈ ಬಾರಿ ರೆಡ್ ಕಾರ್ಪೆಟ್ ಮೇಲೆ ವಿಭಿನ್ನ ಮಾಸ್ಕ್ ಧರಿಸಿ ಗಮನ ಸೆಳೆದಿದ್ದಾರೆ.

ಸ್ಟೀಲ್ ಚಮಚ, ಬಟ್ಟಲು ಹಾಗೂ ಅಡುಗೆಮನೆಯಲ್ಲಿ ಬಳಸುವ ಲೋಹದ ವಸ್ತುಗಳಿಂದ ವಿನ್ಯಾಸಗೊಳಿಸಲಾದ ವಿಶಿಷ್ಟ ಮಾಸ್ಕ್ ಧರಿಸಿದ್ದ ಅನನ್ಯಾ, ಮೆಟ್ ಗಾಲಾದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದರು. ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಅದನ್ನು ‘ಐರನ್ ಮ್ಯಾನ್’ ಶೈಲಿಗೆ ಹೋಲಿಕೆ ಮಾಡಿದ್ದಾರೆ.

ಈ ಬಾರಿ ಮೆಟ್ ಗಾಲಾ ಥೀಮ್‌ಗೆ ತಕ್ಕಂತೆ ಅನೇಕ ಸೆಲೆಬ್ರಿಟಿಗಳು ವಿಭಿನ್ನ ಮಾಸ್ಕ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಾಲಿನಲ್ಲಿ ಅನನ್ಯಾ ಬಿರ್ಲಾ ತಮ್ಮದೇ ವಿಶಿಷ್ಟ ಫ್ಯಾಷನ್ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.

ಕಪ್ಪು ಬಣ್ಣದ ಡಿಸೈನರ್ ಉಡುಪು, ಲೆಹಂಗಾ ಮತ್ತು ಗ್ಲೌಸ್ ಜೊತೆಗೆ ಸ್ಟೀಲ್ ಮಾಸ್ಕ್ ಕಾಂಬಿನೇಷನ್ ಅನನ್ಯಾರ ಲುಕ್‌ಗೆ ಹೊಸ ಟಚ್ ನೀಡಿತ್ತು. ಖ್ಯಾತ ಡಿಸೈನರ್ ಶುಬೋದ್ ಗುಪ್ತಾ ಈ ಔಟ್‌ಫಿಟ್ ವಿನ್ಯಾಸ ಮಾಡಿದ್ದು, ಫ್ಯಾಷನ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತುರ್ತು ಕಾಮಗಾರಿ: ಮೇ 10ರಂದು ನೇರಳೆ ಮಾರ್ಗದಲ್ಲಿ 2 ಗಂಟೆ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು: ನೇರಳೆ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಮೇ 10ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮೆಟ್ರೋ ಸಂಚಾರ ಭಾಗಶಃ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.

ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಸೆಂಟ್ರಲ್ ಕಾಲೇಜು ಮಾರ್ಗದಲ್ಲಿ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಈ ವ್ಯತ್ಯಯ ಉಂಟಾಗಲಿದೆ.

ಕಾಮಗಾರಿ ಹಿನ್ನೆಲೆ ಬಾಲಗಂಗಾಧರ ನಾಥ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ನಡುವಿನ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಚಲಘಟ್ಟ – ವಿಜಯನಗರ, ಎಂಜಿ ರೋಡ್ – ವೈಟ್‌ಫೀಲ್ಡ್, ಮಾದವರ – ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಆರ್‌ವಿ ರೋಡ್ – ಬೊಮ್ಮಸಂದ್ರ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಮುಂದುವರಿಯಲಿದೆ.

ಬೆಳಗ್ಗೆ 9 ಗಂಟೆಯ ಬಳಿಕ ಸ್ಥಗಿತಗೊಂಡಿದ್ದ ನಿಲ್ದಾಣಗಳಲ್ಲೂ ಮೆಟ್ರೋ ಸೇವೆ ಪುನರಾರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.

ಪ್ರಯಾಣಿಕರು ಈ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳುವಂತೆ ಹಾಗೂ ಮೆಟ್ರೋ ಸಿಬ್ಬಂದಿಗೆ ಸಹಕರಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; ಜಲ ನ್ಯಾಯಮಂಡಳಿ ರಚನೆಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ 6 ತಿಂಗಳ ಗಡುವು

ನವದೆಹಲಿ: ಪೆನ್ನಾರ್ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದವನ್ನು ಬಗೆಹರಿಸಲು ಅಂತರರಾಜ್ಯ ಜಲ ನ್ಯಾಯಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠ, ನ್ಯಾಯಮಂಡಳಿ ರಚನೆಗೆ ಹೆಚ್ಚಿನ ಸಮಯ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ವೇಗವಾಗಿ ಕೈಗೊಳ್ಳುತ್ತಿದೆ ಎಂದು ನ್ಯಾಯಪೀಠ ಹೇಳಿದೆ. ಶಾಸನಬದ್ಧ ಹಾಗೂ ಕಾರ್ಯವಿಧಾನ ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಮಂಜಸವಾದ ಸಮಯ ಅಗತ್ಯವಿದೆ. ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ವಿಳಂಬ ಉದ್ದೇಶಪೂರ್ವಕವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೆನ್ನಾರ್ ಅಥವಾ ಪೆನ್ನೈಯಾರ್ ಅಂತರರಾಜ್ಯ ನದಿ ಕರ್ನಾಟಕದ ಮೇಲ್ಭಾಗದಿಂದ ಹರಿದು ತಮಿಳುನಾಡಿನ ಕೆಳಭಾಗಕ್ಕೆ ಸೇರುತ್ತದೆ. ಈ ನೀರು ಹಂಚಿಕೆ ವಿಚಾರ ಹಲವು ವರ್ಷಗಳಿಂದ ಎರಡೂ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ.

ವಿಚಾರಣೆ ವೇಳೆ ಕರ್ನಾಟಕ ಸರ್ಕಾರದ ಪರ ವಕೀಲ ನಿಶಾಂತ್ ಪಾಟೀಲ್ ಹಾಜರಾಗಿ, ಇದು ವಾಸ್ತವವಾಗಿ ಸಣ್ಣ ಮಟ್ಟದ ವಿವಾದವಾಗಿದ್ದು, ಶೀಘ್ರ ಪರಿಹಾರ ಸಾಧ್ಯ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ, ಜಲಶಕ್ತಿ ಸಚಿವಾಲಯ ಈಗಾಗಲೇ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಅಗತ್ಯ ಕ್ರಮಗಳನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದೆ. ವಿವಿಧ ಸಚಿವಾಲಯಗಳ ನಡುವಿನ ಸಮಾಲೋಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಸಂಪುಟ ಟಿಪ್ಪಣಿಗೆ ಜಲಶಕ್ತಿ ಸಚಿವರ ಅನುಮೋದನೆಯೂ ದೊರೆತಿದೆ ಎಂದು ತಿಳಿಸಿದೆ.

ಪ್ರಸ್ತುತ ಕರಡು ಸಂಪುಟ ಟಿಪ್ಪಣಿಯನ್ನು ಕೇಂದ್ರ ಸಚಿವ ಸಂಪುಟದ ಪರಿಗಣನೆಗಾಗಿ ಸಂಪುಟ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಸಚಿವ ಸಂಪುಟ ಅನುಮೋದನೆಯ ಬಳಿಕ, ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಅನ್ವಯ ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರಿಗೆ ಶಿಫಾರಸು ಕಳುಹಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಸದಸ್ಯರನ್ನು ನಾಮನಿರ್ದೇಶನ ಮಾಡಿದ ಬಳಿಕ, ಕಾನೂನು ವ್ಯವಹಾರಗಳ ಇಲಾಖೆ ಅಧಿಸೂಚನೆ ಸಿದ್ಧಪಡಿಸಿ ಪರಿಶೀಲನೆ ನಡೆಸಲಿದೆ. ಬಳಿಕ ಪೆನ್ನೈಯಾರ್ ವಿವಾದ ನ್ಯಾಯಮಂಡಳಿಯ ಅಧಿಕೃತ ರಚನೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸರ್ಕಾರಿ ಶಾಲೆಗಾಗಿ 800 ವರ್ಷ ಹಳೆಯ ಶಿವ ದೇವಾಲಯ ನೆಲಸಮ: ತೆಲಂಗಾಣದಲ್ಲಿ ಭಾರೀ ಆಕ್ರೋಶ

ಹೈದರಾಬಾದ್‌: ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಸುಮಾರು 800 ವರ್ಷ ಹಳೆಯ ಕಾಕತೀಯರ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಾರ್ವಜನಿಕರು, ಇತಿಹಾಸ ತಜ್ಞರು ಹಾಗೂ ಪರಂಪರೆ ಸಂರಕ್ಷಣಾ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನಾಪುರ ಮಂಡಲದ ಅಶೋಕ್ ನಗರದಲ್ಲಿದ್ದ ಈ ಶಿವ ದೇವಾಲಯವು 13ನೇ ಶತಮಾನದಲ್ಲಿ ಕಾಕತೀಯ ಅರಸ ಗಣಪತಿದೇವನ ಕಾಲಕ್ಕೆ ಸೇರಿದದ್ದು ಎಂದು ಹೇಳಲಾಗಿದೆ. ದೇವಾಲಯದಲ್ಲಿದ್ದ ಶಾಸನದಲ್ಲಿ ರಾಜನನ್ನು “ಮಹಾರಾಜ” ಹಾಗೂ “ರಾಜಾಧಿರಾಜುಲು” ಎಂದು ಉಲ್ಲೇಖಿಸಿರುವ ಅಪರೂಪದ ಏಳು ಸಾಲಿನ ತೆಲುಗು ಶಾಸನ ಕೂಡ ಪತ್ತೆಯಾಗಿತ್ತು.

1965ರಲ್ಲೇ ಈ ದೇವಾಲಯವನ್ನು ಪರಂಪರೆ ಇಲಾಖೆಯಲ್ಲಿ ದಾಖಲಿಸಲಾಗಿತ್ತು. ಐತಿಹಾಸಿಕ ಕೋಟೆಗಳಿಗೆ ಪ್ರಸಿದ್ಧಿಯಾಗಿರುವ ಕೋಟ ಕಟ್ಟ ಪ್ರದೇಶದ ಮಣ್ಣಿನ ಕೋಟೆಯೊಳಗೆ ಈ ದೇವಾಲಯವಿತ್ತು. ಈ ಪರಂಪರೆಯ ತಾಣವನ್ನು ಸಂರಕ್ಷಿಸುವ ಅಥವಾ ಅಗತ್ಯವಿದ್ದರೆ ಸ್ಥಳಾಂತರಿಸುವ ಅವಕಾಶ ಇದ್ದರೂ ಅದನ್ನು ಧ್ವಂಸ ಮಾಡಲಾಗಿದೆ ಎಂಬುದು ಇತಿಹಾಸ ತಜ್ಞರ ಆರೋಪವಾಗಿದೆ.

ಈ ಘಟನೆಗೆ ಸಂಬಂಧಿಸಿ ತೆಲಂಗಾಣದ ವಕೀಲ ರಾಮರಾವ್ ಇಮ್ಮನೇನಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಆರಂಭಿಸಿವೆ.

ರಾಜ್ಯ ಸರ್ಕಾರ ಕಡ್ಡಾಯ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಪುರಾತತ್ವ ಹಾಗೂ ದತ್ತಿ ಇಲಾಖೆಗಳ ಅಗತ್ಯ ಅನುಮೋದನೆಗಳಿಲ್ಲದೆ ಕಾಮಗಾರಿಗೆ ಅವಕಾಶ ನೀಡಿದವರ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ ಸೆಕ್ಷನ್ 30 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ದೇವಾಲಯವನ್ನು ಉದ್ದೇಶಪೂರ್ವಕವಾಗಿ ಧ್ವಂಸ ಮಾಡಲಾಗಿದೆ ಎಂಬ ಆರೋಪವನ್ನು ವಾರಂಗಲ್ ಜಿಲ್ಲಾಡಳಿತ ತಳ್ಳಿ ಹಾಕಿದೆ. 30 ಎಕರೆ ಪ್ರದೇಶದಲ್ಲಿ ದಟ್ಟ ಪೊದೆಗಳನ್ನು ತೆರವುಗೊಳಿಸುವ ವೇಳೆ ಶಿಥಿಲಗೊಂಡ ಹಳೆಯ ಅವಶೇಷಗಳು ಮಾತ್ರ ಪತ್ತೆಯಾಗಿವೆ. ಇದನ್ನು ಅಧಿಕೃತ ಸಂರಕ್ಷಿತ ಸ್ಮಾರಕವಾಗಿ ದಾಖಲಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

“ದೇವರೇ ಕಾಪಾಡಬೇಕು”: ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಜಯ್ʼಗೆ ಕುಮಾರಸ್ವಾಮಿ ಟಾಂಗ್

ಹಾಸನ: ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಸರ್ಕಾರ ರಚನೆಗೆ ಸಜ್ಜಾಗಿರುವ ನಟ ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ವಿಜಯ್ ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತರಲು ಭಾರೀ ಪ್ರಮಾಣದ ಹಣದ ಅಗತ್ಯವಿದ್ದು, ಅದನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ತಮಿಳುನಾಡು ಸರ್ಕಾರದ ವಾರ್ಷಿಕ ಬಜೆಟ್ ಸುಮಾರು ₹3.30 ಲಕ್ಷ ಕೋಟಿ ರಿಂದ ₹3.40 ಲಕ್ಷ ಕೋಟಿ ವರೆಗೆ ಇದೆ. ಆದರೆ ವಿಜಯ್ ಪ್ರಕಟಿಸಿರುವ ಉಚಿತ ಯೋಜನೆಗಳನ್ನು ಜಾರಿಗೆ ತರಲು ವರ್ಷಕ್ಕೆ ಅಂದಾಜು ₹6 ರಿಂದ ₹7 ಲಕ್ಷ ಕೋಟಿ ವೆಚ್ಚವಾಗಬಹುದು ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ರಾಜ್ಯದ ಒಟ್ಟು ಬಜೆಟ್‌ಗಿಂತಲೂ ಹೆಚ್ಚು ಹಣ ಬೇಕಾಗುವ ಯೋಜನೆಗಳನ್ನು ಜಾರಿಗೆ ತರುವುದು ಸುಲಭದ ಕೆಲಸವಲ್ಲ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ವಿಜಯ್ ಹೇಗೆ ಹೊಂದಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ ಎಂದು ಹೇಳಿದರು. ಇದೇ ವೇಳೆ “ವಿಜಯ್ ಅವರನ್ನು ದೇವರೇ ಕಾಪಾಡಬೇಕು” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ದೃತರಾಷ್ಟ್ರ ಮುಂದೆ ದುರ್ಯೋಧನ ಪಟ್ಟಾಭಿಷೇಕ’: ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿ

0

ಕೊಪ್ಪಳ: ಬಿಜೆಪಿ ಒಳರಾಜಕೀಯ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದಾರೆ. ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವನ್ನು ಟೀಕಿಸಿದ ಅವರು, “ಇದು ಸಂಭ್ರಮೋತ್ಸವ ಅಲ್ಲ, ದೃತರಾಷ್ಟ್ರನ ಮುಂದೆ ದುರ್ಯೋಧನನ ಪಟ್ಟಾಭಿಷೇಕ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಪುನರುಚ್ಚರಿಸಿದ ಯತ್ನಾಳ್, “ಭ್ರಷ್ಟಾಚಾರ ಮಾಡಿ ಜೈಲುಗೂ ಹೋಗಿದ್ದವರು ಆದರ್ಶ ನಾಯಕನಾಗಲು ಸಾಧ್ಯವಿಲ್ಲ. ಬಿಜೆಪಿ ನಾಯಕತ್ವವನ್ನು ಒತ್ತಡಕ್ಕೆ ತರುವ ರಾಜಕೀಯ ನಾಟಕವೇ ಈ ಅಭಿಮಾನೋತ್ಸವ” ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಹರಿಹಾಯ್ದ ಅವರು, “ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಜನರನ್ನು ಸೇರಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷವನ್ನು ಕುಟುಂಬ ರಾಜಕಾರಣದ ಕೇಂದ್ರವನ್ನಾಗಿ ಮಾಡಿದ್ದಾರೆ” ಎಂದು ಟೀಕಿಸಿದರು.

ತಮ್ಮ ರಾಜಕೀಯ ಪ್ರಭಾವದ ಬಗ್ಗೆ ಮಾತನಾಡಿದ ಯತ್ನಾಳ್, “ನನ್ನ ಮಟ್ಟ ಸಿಎಂ ಮಟ್ಟಕ್ಕಿಂತ ಹೆಚ್ಚಾಗಿದೆ. ವಿಜಯಪುರದಲ್ಲಿ ಸಿಎಂ ಬಂದಾಗಿಗಿಂತ ನನಗೆ ಹೆಚ್ಚು ಚಪ್ಪಾಳೆ ಸಿಕ್ಕಿತ್ತು” ಎಂದು ಹೇಳಿದರು. ಜೊತೆಗೆ, “ನಾನು ಯಾರ ಮನೆಯಿಗೂ ಹೋಗಿ ಹೊಂದಾಣಿಕೆ ರಾಜಕಾರಣ ಮಾಡುವವನಲ್ಲ” ಎಂದು ಪರೋಕ್ಷವಾಗಿ ಯಡಿಯೂರಪ್ಪ ಹಾಗೂ ಇತರ ನಾಯಕರನ್ನು ಗುರಿಯಾಗಿಸಿದರು.

ಹೊಸ ಪಕ್ಷದ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, “ರಾಜ್ಯಾದ್ಯಂತ ಪ್ರವಾಸ ಮಾಡಿ ಜನಾಭಿಪ್ರಾಯ ಪಡೆದು ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಸ್ಪಷ್ಟಪಡಿಸಿದರು.

‘ಬಂಗಾಳದಲ್ಲಿ ಬಿಜೆಪಿ ಸರ್ಕಾರ ಫಿಕ್ಸ್?’: ಅಮಿತ್ ಶಾ ಕೋಲ್ಕತ್ತಾ ಎಂಟ್ರಿ, ಸಿಎಂ ಆಯ್ಕೆಗಾಗಿ ಹೈವೋಲ್ಟೇಜ್ ಸಭೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರ ಗತಿಯನ್ನ ಪಡೆದುಕೊಂಡಿವೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕೋಲ್ಕತ್ತಾಗೆ ಆಗಮಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಆಯ್ಕೆಗೂ ಮುನ್ನ ಅಮಿತ್ ಶಾ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮಿತ್ ಶಾ ಅವರನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸ್ವಾಗತಿಸಿದರು. ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾ, “ಬಂಗಾಳ ಜನರು ಬಿಜೆಪಿಗೆ ನೀಡಿರುವ ಬೆಂಬಲಕ್ಕೆ ಕೃತಜ್ಞತೆಗಳು. ಜನರ ನಿರೀಕ್ಷೆಗಳನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ” ಎಂದು ಹೇಳಿದರು.

ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದೊಳಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕರ ಆಯ್ಕೆ ನಡೆಯಲಿದ್ದು, ಸಂಜೆ ವೇಳೆಗೆ ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ. ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿರುವ ಈ ಬೆಳವಣಿಗೆ ಮೇಲೆ ದೇಶದ ಗಮನ ನೆಟ್ಟಿದೆ.

ಶ್ರೀದೇವಿ ಆಸ್ತಿ ವಿವಾದದಲ್ಲಿ ಬೋನಿ ಕಪೂರ್ ಕುಟುಂಬಕ್ಕೆ ಜಯ: 40 ವರ್ಷದ ದಾವೆ ಹೈಕೋರ್ಟ್ ವಜಾ

ಬಾಲಿವುಡ್‌ ಖ್ಯಾತ ನಟಿ ಶ್ರೀದೇವಿ ಖರೀದಿಸಿದ್ದ ಚೆನ್ನೈನ ಬಹುಮೌಲ್ಯದ ಭೂಮಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಬೋನಿ ಕಪೂರ್ ಕುಟುಂಬಕ್ಕೆ ಭಾರೀ ಜಯ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್, ಶೋಲಿಂಗನಲ್ಲೂರ್‌ನ 2.70 ಎಕರೆ ಆಸ್ತಿಯ ಮೇಲಿನ ದಾವೆಯನ್ನು ಸಂಪೂರ್ಣ ವಜಾಗೊಳಿಸಿದೆ.

1940ರ ದಾಖಲೆಗಳನ್ನು ಆಧಾರವಾಗಿಸಿಕೊಂಡು ಎಂ.ಸಿ. ಶಿವಕಾಮಿ ಹಾಗೂ ಇತರರು ಈ ಜಾಗ ತಮ್ಮ ಕುಟುಂಬಕ್ಕೆ ಸೇರಿದೆ ಎಂದು ವಾದಿಸಿದ್ದರು. 1988ರಲ್ಲಿ ಶ್ರೀದೇವಿ ನಡೆಸಿದ ಖರೀದಿ ವ್ಯವಹಾರ ಕಾನೂನುಬದ್ಧವಲ್ಲ ಎಂದು ಆರೋಪಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ ಬೋನಿ ಕಪೂರ್ ಪರ ವಕೀಲರು, ನಾಲ್ಕು ದಶಕಗಳ ಬಳಿಕ ಆಸ್ತಿ ಮೇಲೆ ಹಕ್ಕು ಹೇಳುವುದು ಕೇವಲ ಕಬಳಿಕೆ ಉದ್ದೇಶದ ಪ್ರಯತ್ನ ಎಂದು ತೀವ್ರವಾಗಿ ವಾದಿಸಿದ್ದರು. ದೂರುದಾರರು ಸಲ್ಲಿಸಿದ್ದ ವಾರಸುದಾರರ ದಾಖಲೆಗಳು ಮಾನ್ಯವಲ್ಲ ಎಂದು ಕೋರ್ಟ್ ಗಮನಕ್ಕೆ ತರಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಈ ದಾವೆ ಕಾಲಮಿತಿಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ ಕಾನೂನಿನ ದುರುಪಯೋಗದ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ತೀರ್ಪಿನೊಂದಿಗೆ ಶ್ರೀದೇವಿ ಆಸ್ತಿ ಕಾನೂನುಬದ್ಧವಾಗಿ ಬೋನಿ ಕಪೂರ್ ಹಾಗೂ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಸೇರಿದೆ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.

ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಗೆ ಸರ್ಕಾರ ಆದೇಶ: ಪ್ರತಿ ಕ್ವಿಂಟಾಲ್‌ʼಗೆ ₹7,721 ನಿಗದಿ

ಬೆಂಗಳೂರು: 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಕ್ವಿಂಟಾಲ್‌ ಸೂರ್ಯಕಾಂತಿಗೆ 7 ಸಾವಿರ 721 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಈ ಕುರಿತು ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದಾರೆ.

ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸೂರ್ಯಕಾಂತಿ ಖರೀದಿ ಕೇಂದ್ರಗಳನ್ನು ಆರಂಭಿಸಲು ನಿರ್ದೇಶನ ನೀಡಲಾಗಿದೆ.

ಇದೇ ವೇಳೆ, ನಾಫೆಡ್ ಮತ್ತು ಎನ್‌ಸಿಸಿಎಫ್ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಗಳಾಗಿ ನೇಮಕ ಮಾಡಲಾಗಿದ್ದು, ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳವನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯಾಗಿ ಜವಾಬ್ದಾರಿ ನೀಡಲಾಗಿದೆ.

ರೈತರ ನೋಂದಣಿ ಅವಧಿಯನ್ನು 50 ದಿನಗಳ ಕಾಲ ಹಾಗೂ ಖರೀದಿ ಅವಧಿಯನ್ನು 60 ದಿನಗಳ ಕಾಲ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯ ಜೊತೆಯಲ್ಲೇ ಖರೀದಿ ಕಾರ್ಯವೂ ಆರಂಭವಾಗಬೇಕು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ತಾಂತ್ರಿಕ ಹಾಗೂ ವೈಜ್ಞಾನಿಕ ಸೌಲಭ್ಯ ಹೊಂದಿರುವ ಗೋದಾಮುಗಳಿರುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಸರ್ಕಾರ ಸೂಚಿಸಿದೆ.

ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಾರಂಭ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

error: Content is protected !!