Home Blog Page 209

ಮುರಿದು ಬಿದ್ದ ಹಿಪ್ಪರಗಿ ಬ್ಯಾರೇಜ್ʼನ 22ನೇ ಗೇಟ್: ಭಾರಿ ಪ್ರಮಾಣದಲ್ಲಿ ನೀರು ಪೋಲು

0

ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜೀವನಾಡಿಯಂತಿರುವ ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್ ಗೇಟ್ ಸಂಖ್ಯೆ 22 ತಾಂತ್ರಿಕ ದೋಷದಿಂದಾಗಿ ಮುರಿದುಬಿದ್ದಿದ್ದು, ಭಾರಿ ಪ್ರಮಾಣದ ನೀರು ನದಿಗೆ ಪೋಲಾಗುತ್ತಿದೆ. ಬ್ಯಾರೇಜ್‌ನಿಂದ ನೀರು ಕೃಷ್ಣಾ ನದಿಯ ಮೂಲಕ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನತ್ತ ಅತೀವೇಗದಲ್ಲಿ ಹರಿಯುತ್ತಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ತಾತ್ಕಾಲಿಕವಾಗಿ ದುರಸ್ತಿ ಸಾಧ್ಯವಾಗದಷ್ಟು ಹಾನಿಗೊಳಗಾಗಿದೆ. ಪರಿಣಾಮ ಸಾವಿರಾರು ಕ್ಯೂಸೆಕ್ ನೀರು ಪೋಲಾಗುವ ಆತಂಕ ಎದುರಾಗಿದೆ.

ಮುಂಗಾರು ಹಂಗಾಮಿನಲ್ಲಿ ಸಂಗ್ರಹಿಸಿದ ನೀರನ್ನು ಬೇಸಿಗೆ ಸಮಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಬೇಕಾದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದೆ. ನೀರಿನ ಮಟ್ಟ ಕುಸಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ನದಿ ತೀರದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳಾದ ನಾಗರಾಜ್ ಹಾಗೂ ಪ್ರವೀಣ್ ಹುಣಸಿಕಟ್ಟಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ತಂಡದ ಸಹಕಾರದೊಂದಿಗೆ ತುರ್ತು ಕಾರ್ಯಾಚರಣೆ ನಡೆಸಿ ನೀರು ಪೋಲಾಗುವುದನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.

‘ಬಂಧನ ವೇಳೆ ವಿವಸ್ತ್ರಳಾಗಿರಲಿಲ್ಲ’ – ಬಿಜೆಪಿ ಮಹಿಳಾ ಕಾರ್ಯಕರ್ತೆ ಪ್ರಕರಣದಲ್ಲಿ ಆಯುಕ್ತ ಶಶಿಕುಮಾರ್ ಸ್ಪಷ್ಟನೆ

0

ಹುಬ್ಬಳ್ಳಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನು ಪೊಲೀಸರು ಬಟ್ಟೆ ಬಿಚ್ಚಿ ಥಳಿಸಿದ್ದಾರೆ ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕರಣದ ಹಿನ್ನೆಲೆ ಹಾಗೂ ಸತ್ಯಾಸತ್ಯತೆಯನ್ನು ವಿವರಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ, “ನಮ್ಮ ವೋಟ್ ಡಿಲೀಟ್ ಮಾಡಿದ್ದಾರೆ” ಎಂದು ಆರೋಪಿಸಿ ಗಲಾಟೆ ನಡೆಸಿದ್ದರು. ಈ ಘಟನೆ ಬಳಿಕ ಬಿಜೆಪಿ–ಕಾಂಗ್ರೆಸ್ ನಡುವೆ ತಿಕ್ಕಾಟ ಮುಂದುವರಿದಿತ್ತು.

ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು. ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಆಯುಕ್ತರ ಪ್ರಕಾರ, ಬಂಧಿತ ಮಹಿಳೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಮಹಿಳೆಯೊಬ್ಬರ ಕತ್ತು ಹಿಸುಕಲು ಯತ್ನಿಸಿದ್ದು ಹಾಗೂ ಖಾಸಗಿ ಅಂಗಕ್ಕೆ ಹೊಡೆದಿರುವ ಕುರಿತು ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ.

ಬಂಧನದ ವೇಳೆ ಮಹಿಳೆ ವಿವಸ್ತ್ರಳಾಗಿರಲಿಲ್ಲ. ಪೊಲೀಸ್ ವ್ಯಾನ್ ಒಳಗೆ ಹತ್ತಿಸಿದ ಬಳಿಕ ತಾನೇ ಬಟ್ಟೆ ಬಿಚ್ಚಿಕೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆಯುಕ್ತರು ಹೇಳಿದ್ದಾರೆ. ಮಹಿಳಾ ಹಾಗೂ ಪುರುಷ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ್ದು, ನಾಲ್ವರು ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ.

2020ರಿಂದ ಈ ಮಹಿಳೆಯ ವಿರುದ್ಧ ಧಾರವಾಡ ಮತ್ತು ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಒಟ್ಟು 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲೇ ಹೆಚ್ಚುವರಿ ಮಹಿಳಾ ಸಿಬ್ಬಂದಿ ನಿಯೋಜಿಸಿ ಬಂಧನ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಯಾರು ಶೂಟ್ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಡಿಯೋ ವೈರಲ್ ಮಾಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅಂಡರ್-19 ಕ್ರಿಕೆಟ್ʼನಲ್ಲಿ ಹೊಸ ಇತಿಹಾಸ: ಪಂತ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

0

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ ಸೇರಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ನಡೆದ ಯೂತ್ ಒಡಿಐ ಪಂದ್ಯದಲ್ಲಿ ವೈಭವ್, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಷಭ್ ಪಂತ್ ಅವರ ಭರ್ಜರಿ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಯೂತ್ ಒಡಿಐ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ 2016ರಲ್ಲಿ ನೇಪಾಳ ಅಂಡರ್-19 ತಂಡದ ವಿರುದ್ಧ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ರಿಷಭ್ ಪಂತ್ ಅವರ ಹೆಸರಿನಲ್ಲಿತ್ತು. ಇದೀಗ ಆ ದಾಖಲೆಯನ್ನು ಮುರಿದು ವೈಭವ್ ಸೂರ್ಯವಂಶಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ 68 ರನ್‌ಗಳು ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 10 ಭರ್ಜರಿ ಸಿಕ್ಸರ್‌ಗಳು ಹಾಗೂ 1 ಫೋರ್ ಸಿಡಿಯಿತು. ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಯೂತ್ ಏಕದಿನ ಪಂದ್ಯದಲ್ಲಿ ಮಹತ್ವದ ಗೆಲುವು ಸಾಧಿಸಿತು.

ಈ ಅದ್ಭುತ ಇನಿಂಗ್ಸ್ ಮೂಲಕ ವೈಭವ್ ಸೂರ್ಯವಂಶಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂಬ ಭರವಸೆ ಮೂಡಿಸಿದ್ದಾರೆ.

ಮಂಡ್ಯ: ದೂರುದಾರನ ಮೇಲೆ ಮಹಿಳಾ ಪೊಲೀಸ್ ಅಧಿಕಾರಿಯ ದರ್ಪ?

0

ಮಂಡ್ಯ: ದೂರು ನೀಡಲು ಬಂದ ವ್ಯಕ್ತಿಯ ಮೇಲೆಯೇ ಮಹಿಳಾ ಪೊಲೀಸ್ ಅಧಿಕಾರಿ ದರ್ಪ ತೋರಿದ್ದಾರೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದಲ್ಲಿ ಕೇಳಿಬಂದಿದೆ. ಸರ್ಕಾರ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾತಾಡುತ್ತಿರುವ ನಡುವೆಯೇ, ಅಧಿಕಾರಿಗಳ ದರ್ಪ ಮತ್ತು ದೌರ್ಜನ್ಯ ನಿಲ್ಲುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮರಾಣಿ ವಿರುದ್ಧ ದರ್ಪ ಹಾಗೂ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವೈರಲ್ ವಿಡಿಯೋದಲ್ಲಿ, ನಡು ಬೀದಿಯಲ್ಲೇ ದೂರುದಾರನಿಗೆ ಆವಾಜ್ ಹಾಕಿ ಬೆದರಿಸುತ್ತಿರುವ ದೃಶ್ಯಗಳು ಕಾಣಿಸಿವೆ ಎನ್ನಲಾಗಿದೆ.

ಕೆ.ಆರ್.ಪೇಟೆಯ ಚಂದ್ರಶೇಖರ್ ಎಂಬುವವರು, ತನಗೆ ಇನ್ಸ್ಪೆಕ್ಟರ್ ಸುಮರಾಣಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ನೀಡಲು ಬಂದ ವ್ಯಕ್ತಿಯೊಂದಿಗೆ ಈ ರೀತಿ ಬೇಜಬ್ದಾರಿಯಾಗಿ ವರ್ತಿಸಿದರೆ, ನ್ಯಾಯ ಸಿಗುತ್ತದೆ ಎಂಬ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಹಿಳಾ ಅಧಿಕಾರಿಯ ದರ್ಪ ಮತ್ತು ವರ್ತನೆ ನೋಡಿದರೆ, ಠಾಣೆಗೆ ಬರಲು ನೊಂದವರು ಹೆದರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಚಂದ್ರಶೇಖರ್ ಅವರು ಮಹಿಳಾ ಪೊಲೀಸ್ ಅಧಿಕಾರಿಯ ದರ್ಪದ ವಿರುದ್ಧ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಈ ಬೇಜಬ್ದಾರಿ ಹಾಗೂ ದರ್ಪ ತೋರುವ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

BJP ಕಾರ್ಯಕರ್ತೆಯ ಮೇಲಿನ ಹಲ್ಲೆ ಪ್ರಕರಣ: ಕಾಂಗ್ರೆಸ್ ಕಾರ್ಪೊರೇಟರ್ ವಿರುದ್ಧ ಕ್ರಮಕ್ಕೆ ಸಿಟಿ ರವಿ ಆಗ್ರಹ

0

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿಟಿ ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಅವರನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಇದು ಮಾನವ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ಗಂಭೀರ ಮಹಿಳಾ ದೌರ್ಜನ್ಯವಾಗಿದೆ ಎಂದು ಕಿಡಿಕಾರಿದರು.

ರಾಜಕೀಯ ಪ್ರಭಾವ ಬಳಸಿ ಈ ಕೃತ್ಯ ನಡೆಸಲಾಗಿದೆ. ಮಾನವೀಯ ಜಗತ್ತು ತಲೆತಗ್ಗಿಸುವಂತಹ ವರ್ತನೆ ಇದಾಗಿದೆ ಎಂದು ಅವರು ಹೇಳಿದರು. ಮಹಿಳಾ ಆಯೋಗವು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈ ಘಟನೆಯ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸುಳ್ಳು ದೂರು ನೀಡಿರುವ ಕಾಂಗ್ರೆಸ್ ಕಾರ್ಪೊರೇಟರ್ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಈ ಕೃತ್ಯಕ್ಕೆ ಯಾವುದೇ ಪ್ರಾಯಶ್ಚಿತ್ತವಿಲ್ಲ. ಪೊಲೀಸರು ಕಾಂಗ್ರೆಸ್ ಕಾರ್ಪೊರೇಟರ್ ಅಡಿಯಾಳಿನಂತೆ ಕೆಲಸ ಮಾಡಿದ್ದಾರೆ ಎಂದು ಸಿಟಿ ರವಿ ಗಂಭೀರ ಆರೋಪ ಮಾಡಿದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಖಾಸಗಿ ಟ್ಯಾಕ್ಸಿಗಳ ನಿಲುಗಡೆಗೆ ಅವಕಾಶ ಕಲ್ಪಿಸಲು ಸಂಸದ ಡಾ.ಕೆ.ಸುಧಾಕರ್‌ ಸೂಚನೆ

0

ಬೆಂಗಳೂರು:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಮೊದಲಿನಂತೆಯೇ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು, ಅದಕ್ಕೆ ಪೂರಕವಾಗಿ ನಿಯಮ ರೂಪಿಸಬೇಕೆಂದು ಸಂಸದ ಡಾ.ಕೆ.ಸುಧಾಕರ್‌ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಟ್ಯಾಕ್ಸಿ ಚಾಲಕರು ಹಾಗೂ ಪ್ರಾಧಿಕಾರದ ನಡುವಿನ ಸಂಧಾನ ಸಭೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ಮೂಡಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸುಮಾರು 500 ಮೀಟರ್‌ ದೂರದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ವಿಮಾನದಿಂದ ಇಳಿದು ಬಂದ ಪ್ರಯಾಣಿಕರು ನಡೆದುಕೊಂಡು ಹೋಗಿ ಟ್ಯಾಕ್ಸಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಈ ಹೊಸ ಪಾರ್ಕಿಂಗ್‌ ನಿಯಮದ ವಿರುದ್ಧ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದರು. ಟ್ಯಾಕ್ಸಿ ಚಾಲಕರ ಸಂಘದ ಮನವಿಯ ಮೇರೆಗೆ ಸಂಸದ ಡಾ.ಕೆ.ಸುಧಾಕರ್‌ ಅವರು ಚಾಲಕರು ಹಾಗೂ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಹಾಗೂ ಸುತ್ತಮುತ್ತಲಿನ ಊರುಗಳ 18 ರಿಂದ 20 ಸಾವಿರ ಯುವಕರು ಟ್ಯಾಕ್ಸಿ ಚಲಾಯಿಸುತ್ತಿದ್ದು, ಇವರನ್ನೇ ನಂಬಿಕೊಂಡು ಸುಮಾರು 1 ಲಕ್ಷ ಕುಟುಂಬ ಸದಸ್ಯರು ಇದ್ದಾರೆ. ಖಾಸಗಿ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು 15-20 ವರ್ಷಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ.

ಇವರಲ್ಲಿ ಅನೇಕರು ಪ್ರಯಾಣಿಕರ ಜೊತೆ ನೇರ ಸಂಪರ್ಕ ಹೊಂದಿದ್ದು, ಅನೇಕ ವರ್ಷಗಳ ಪರಿಚಯದ ಮೂಲಕ ಸೇವೆ ನೀಡುತ್ತಿದ್ದಾರೆ. ಆದರೆ ಕಳೆದ ಡಿಸೆಂಬರ್‌ 8 ರಿಂದ 500 ಮೀಟರ್‌ ದೂರದಲ್ಲಿ ಚಾಲಕರಿಗೆ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಇದರಿಂದ ಸಮಸ್ಯೆ ಹೆಚ್ಚಿದೆ. ಈ ಹಿಂದೆ ನೀಡಿದ್ದ ಸ್ಥಳವನ್ನೇ ಈ ಚಾಲಕರಿಗೆ ನೀಡಬೇಕು. ಖಾಸಗಿ ಕಂಪನಿಗಳು 1,200-1,500 ರೂ. ದರ ನಿಗದಿ ಮಾಡಿದರೆ,

ಈ ಚಾಲಕರು ಇನ್ನೂ ಕಡಿಮೆ ದರಕ್ಕೆ ಸೇವೆ ನೀಡುತ್ತಾರೆ. ಆದ್ದರಿಂದ ಇಲ್ಲಿ ಎಲ್ಲರಿಗೂ ಅವಕಾಶ ನೀಡಬೇಕಿದೆ. ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ದಟ್ಟಣೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕನಿಷ್ಠ ಪ್ರಮಾಣದಲ್ಲಿ ಬಳಕೆದಾರರ ಶುಲ್ಕ ಪಡೆದು ಸ್ಥಳ ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಅಗ್ರಿಗೇಟರ್‌ಗಳು ಎಲ್ಲ ಕಡೆ ಇದ್ದು, ಯಾರ ಸೇವೆ ಬೇಕೆಂದು ಗ್ರಾಹಕರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ ಅಧಿಕಾರಿಗಳಿಗೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಧಾನ ಸಭೆಯಲ್ಲಿ ಖಾಸಗಿ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಒಂದು ವಾರದಲ್ಲಿ ಎಲ್ಲವೂ ಸುಖಾಂತ್ಯವಾಗಲಿದೆ. ಖಾಸಗಿ ಟ್ಯಾಕ್ಸಿ ಚಾಲಕರಲ್ಲಿ ಎಲ್ಲರೂ ಕನ್ನಡಿಗರು ಹಾಗೂ ಸ್ಥಳೀಯ ನಿವಾಸಿಗಳು ಆಗಿದ್ದಾರೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚಾಲಕರೇ ಇಲ್ಲಿದ್ದಾರೆ. ಇವರಲ್ಲಿ ಬಹಳಷ್ಟು ಜನರು ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ.

ಆದ್ದರಿಂದ ಪ್ರಾಧಿಕಾರವು ಚಾಲಕರ ಜೊತೆ ಸಮನ್ವಯದಿಂದ ವರ್ತಿಸಬೇಕು. ಚಾಲಕರಿಗೆ ತೊಂದರೆಯಾಗದಂತೆ ಮೂರು ನಾಲ್ಕು ದಿನಗಳಲ್ಲಿ ಒಂದು ಪರಿಹಾರ ಕಂಡುಕೊಳ್ಳಬೇಕಿದೆ. ರಾಜ್ಯದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕೂಡ ಸಭೆ ಮಾಡಲಿದ್ದಾರೆ. ನಾನು ಸಹ ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ. ಅಗತ್ಯವಿದ್ದರೆ ನಾಗರಿಕ ವಿಮಾನಯಾನ ಸಚಿವರಾದ ಕೆ.ರಾಮಮೋಹನ್ ನಾಯ್ಡು ಅವರಿಗೆ ಮಾಹಿತಿ ನೀಡಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಬ್ಯಾನರ್ ಗಲಾಟೆ ಪ್ರಕರಣ: ಮತ್ತೊಬ್ಬ ಉನ್ನತ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ

0

ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಬ್ಯಾನರ್ ವಿಚಾರವಾಗಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಉನ್ನತ ಪೊಲೀಸ್ ಅಧಿಕಾರಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿದ್ದ ಬೆನ್ನಲ್ಲೇ, ಬಳ್ಳಾರಿ ವಲಯ ಪೊಲೀಸ್ ಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದೇ ವೇಳೆ ಬಳ್ಳಾರಿ ವಲಯದ ನೂತನ ಐಜಿ ಆಗಿ ಹರ್ಷ ಗುಪ್ತಾ ಅವರನ್ನು ಹಾಗೂ ನೂತನ ಎಸ್ಪಿ ಆಗಿ ಡಾ. ಸುಮನ ಡಿ. ಪೆನ್ನೇಕರ್ ಅವರನ್ನು ನೇಮಕ ಮಾಡಲಾಗಿದೆ.

ಜನವರಿ 1ರಂದು ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರು ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಆದರೆ ಬ್ಯಾನರ್ ಗಲಾಟೆ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿತ್ತು.

ಅಲ್ಲದೇ, ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್ ವಿರುದ್ಧ ಡಿಜಿ–ಐಜಿಪಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರ ಆಧಾರದ ಮೇಲೆ ಇದೀಗ ರಾಜ್ಯ ಸರ್ಕಾರ ಐಜಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿದೆ.

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಗಾತ್ರದ ಹುಲಿ ಸಾವು

0

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವನ್ಯಜೀವಿ ವಲಯದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಗಾತ್ರದ ಹುಲಿ ಒಂದು ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಅರಣ್ಯ ಇಲಾಖೆ ಹಾಗೂ ಹುಲಿ ಗಣತಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ, ಗಂಗೆಗಿರಿ ಮೀಸಲು ಅರಣ್ಯ ಪ್ರದೇಶದ ಶಿರಗೋಳ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಎನ್‌ಟಿಸಿಎ ಮಾರ್ಗಸೂಚಿಯಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಚಿಕ್ಕಮಗಳೂರು ಕ್ಷೇತ್ರ ನಿರ್ದೇಶಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮೃತಪಟ್ಟಿರುವ ಹುಲಿ ಎಂಟರಿಂದ ಹತ್ತು ವರ್ಷದ ವಯಸ್ಸಿನದಾಗಿದೆ ಎಂದು ತಿಳಿದುಬಂದಿದೆ.

ಮೇಲ್ನೋಟಕ್ಕೆ ಎರಡು ಹುಲಿಗಳು ಪರಸ್ಪರ ಕಾದಾಟ ನಡೆಸಿದ ಪರಿಣಾಮ ಈ ಹುಲಿ ಸಾವನ್ನಪ್ಪಿರುವ ಸಾಧ್ಯತೆ ಕಂಡುಬಂದಿದೆ. ಹುಲಿ ಕಳೇಬರದ ಮೇಲೆ ಎನ್‌ಟಿಸಿಎ ಸದಸ್ಯರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಈ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲು ನಿರ್ಧರಿಸಲಾಗಿದ್ದು, ನಂತರ ನಿಯಮಾನುಸಾರ ಹುಲಿ ಕಳೇಬರವನ್ನು ಸುಟ್ಟು ಹಾಕಲಾಗಿದೆ.

ಹೆಬ್ಬೆ ವಲಯದ ಗಂಗೆಗಿರಿ–ಶಿರಗುಳ ಮೀಸಲು ಅರಣ್ಯ ಪ್ರದೇಶದಲ್ಲಿ ತನ್ನ ಪ್ರದೇಶಕ್ಕಾಗಿ ಎರಡು ಹುಲಿಗಳು ದೊಡ್ಡ ಮಟ್ಟದಲ್ಲಿ ಕಾದಾಟ ನಡೆಸಿದ್ದು, ಈ ಸಂದರ್ಭದಲ್ಲಿ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನಾ ಭೇಟಿ ನೀಡಿ, ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದರು.

ದೇವರಾಜ ಅರಸು–ಸಿದ್ದರಾಮಯ್ಯ ಆಡಳಿತ ಹೋಲಿಕೆ ಬೇಡ: ಯಡಿಯೂರಪ್ಪ ವಾಗ್ದಾಳಿ

0

ಬೆಂಗಳೂರು: ದೇವರಾಜ ಅರಸು ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ದೇವರಾಜ ಅರಸು ಅವರ ಆಡಳಿತ ವೈಖರಿ ಬೇರೆ, ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಬೇರೆ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸುವ ಪ್ರಯತ್ನವನ್ನು ಜನರು ಮೆಚ್ಚುವುದಿಲ್ಲ ಎಂದು ಕಿಡಿಕಾರಿದರು.

ಇನ್ನೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಜಯಭೇರಿ ಬಾರಿಸುತ್ತಿದೆ ಎಂದು ತಿಳಿಸಿದ ಅವರು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಸರ್ಕಾರ ರಚಿಸುವ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದರು. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಕುಟುಂಬದಲ್ಲಿ ಸಂಭ್ರಮ

0

ಹರಿಯಾಣ: ಹರಿಯಾಣದಲ್ಲಿ ಮಹಿಳೆಯೊಬ್ಬಳು ಹತ್ತು ಹೆಣ್ಣುಮಕ್ಕಳ ಬಳಿಕ ಇದೀಗ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿ ಚರ್ಚೆಗೆ ಕಾರಣವಾಗಿದೆ. ತಾಯಿ ಮತ್ತು ಶಿಶುವಿನ ಆರೋಗ್ಯದ ಜೊತೆಗೆ, ಗಂಡು ಮಗು ಬೇಕೇ ಬೇಕು ಎನ್ನುವ ಮನಸ್ಥಿತಿಯ ಬಗ್ಗೆ ಕಳವಳವೂ ವ್ಯಕ್ತವಾಗುತ್ತಿದೆ.

ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಹೆರಿಗೆ ಅತ್ಯಂತ ಅಪಾಯಕರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ವೈದ್ಯ ಡಾ. ನರವೀರ್ ಶಿಯೋರನ್ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ತಾಯಿಗೆ ಮೂರು ಯುನಿಟ್ ರಕ್ತ ನೀಡಬೇಕಾಯಿತು. ಪ್ರಸ್ತುತ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜನವರಿ 3ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವರು ಈಗ ಫತೇಹಾಬಾದ್ ಜಿಲ್ಲೆಯ ತಮ್ಮ ಹಳ್ಳಿಗೆ ಮರಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್, “ನಮಗೂ ಹಾಗೂ ನನ್ನ ಹೆಣ್ಣುಮಕ್ಕಳಿಗೂ ತಮ್ಮನೊಬ್ಬ ಬೇಕೆಂಬ ಆಸೆ ಇತ್ತು” ಎಂದು ಹೇಳಿದ್ದಾರೆ.

2007ರಲ್ಲಿ ವಿವಾಹವಾದ ದಂಪತಿಗೆ ಹಿರಿಯ ಮಗಳು 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. “ನಮ್ಮ ಆದಾಯ ಕಡಿಮೆ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ. ಏನೇ ನಡೆದರೂ ಅದು ದೇವರ ಇಚ್ಛೆ. ಇದರಲ್ಲಿ ನಾನು ಸಂತೋಷವಾಗಿದ್ದೇನೆ” ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.

error: Content is protected !!