Home Blog Page 21

ರಾಜ್ಯಸಭೆ ಉಪಾಧ್ಯಕ್ಷರಾಗಿ ಹರಿವಂಶ್ ಮೂರನೇ ಬಾರಿಗೆ ಆಯ್ಕೆ: ಅವಿರೋಧ ಗೆಲುವು!

ನವದೆಹಲಿ: ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ, ಚುನಾವಣೆಯು ಅವಿರೋಧವಾಗಿ ನಡೆದಿದ್ದು, ಸದನವು ಧ್ವನಿಮತದ ಮೂಲಕ ಈ ನಿರ್ಧಾರವನ್ನು ಅಂಗೀಕರಿಸಿದೆ. ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.

ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಕಾರ್ಯವಿಧಾನ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಿಗದಿಪಡಿಸಿದ್ದು, ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ನೀಡಲಾಗಿತ್ತು.

ಚುನಾವಣೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಿದ ಬಳಿಕ, ಸಭಾಪತಿಗಳು ಹರಿವಂಶ್ ಅವರನ್ನು ಆಯ್ಕೆಯಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, “ಇದು ಸದನವು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.

ವಚನಾನಂದ ಶ್ರೀಗಳಿಗೆ ಹೆಚ್ಚಿದ ಸಂಕಷ್ಟ: ಹಾಸ್ಟೆಲ್ ವಿದ್ಯಾರ್ಥಿಗಳಿಂದಲೇ ದೂರು

0

ದಾವಣಗೆರೆ: ವಚನಾನಂದ ಶ್ರೀ ವಿರುದ್ಧದ ಆರೋಪಗಳು ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ಹಾಸ್ಟೆಲ್ ವಿದ್ಯಾರ್ಥಿಗಳೇ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಮಸಾಜ್ ಸಂಬಂಧಿತ ವಿವಾದದ ನಡುವೆ ಈ ದೂರು ಹೊರಬಂದಿದ್ದು, ಮಕ್ಕಳ ಮೇಲೆ ಅನಾಚಾರ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಉಚ್ಚಾಟನೆ ವಿವಾದದಿಂದ ಸುದ್ದಿಯಾಗಿದ್ದ ವಚನಾನಂದ ಶ್ರೀಗಳಿಗೆ ಈ ಬೆಳವಣಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ವಿದ್ಯಾರ್ಥಿಗಳಿಂದಲೇ ಬಂದಿರುವ ದೂರು ಪ್ರಕರಣದ ನೈತಿಕ ಹಾಗೂ ಕಾನೂನು ಅಂಶಗಳನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ.

ಮುಂದಿನ ತನಿಖೆಯ ಮೇಲೆ ಪ್ರಕರಣದ ದಿಕ್ಕು ನಿರ್ಧಾರವಾಗಲಿದ್ದು, ಧಾರ್ಮಿಕ ಸಂಸ್ಥೆಗಳ ಕಾರ್ಯವೈಖರಿಯ ಮೇಲೂ ಇದು ಪ್ರಶ್ನೆ ಎಬ್ಬಿಸಿದೆ.

ಸತತ 3ನೇ ಬಾರಿಗೆ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ಅವಿರೋಧ ಪುನರಾಯ್ಕೆ!

0

ನವದೆಹಲಿ: ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಚುನಾವಣೆಯು ಅವಿರೋಧವಾಗಿ ನಡೆಯಿತು.

ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ನಂತರ ಉಪಾಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ನಂತರ ಸಿ.ಪಿ. ರಾಧಾಕೃಷ್ಣನ್ ಅವರು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದ್ದರು.

ರಾಜ್ಯಸಭೆ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ಪ್ರಸ್ತಾವನೆಯನ್ನು ಸದನವು ಧ್ವನಿಮತದ ಮೂಲಕ ಅಂಗೀಕರಿಸಿತು. ಬಳಿಕ ಸಭಾಪತಿಗಳು ಹರಿವಂಶ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, ಇದು ಸದನವು ಅವರ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು. ಹರಿವಂಶ್ ನಾರಾಯಣ್ ಸಿಂಗ್ ಈಗಾಗಲೇ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದು ಅವರ ಮೂರನೇ ಅವಧಿಯಾಗಲಿದೆ.

ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಫಲಿತಾಂಶ ಕುಸಿತ ಭೀತಿಯಲ್ಲಿ SSLC ವಿದ್ಯಾರ್ಥಿಗಳು! ಪೋಷಕರ ಆಕ್ರೋಶ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ಮಹತ್ವದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಸ್ಪಷ್ಟ ಸೂಚನೆ ನೀಡಿದೆ.

ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡಬೇಕು ಎಂದು ಆದೇಶಿಸಿದೆ. ಜೊತೆಗೆ, ಇಂತಹ ನೀತಿ ಬದಲಾವಣೆಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ತಿಳಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ. ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಸರ್ಕಾರ ಗ್ರೇಡ್ ವ್ಯವಸ್ಥೆ ಜಾರಿಗೆ ತರುತ್ತಿದೆ ಎಂದು ಘೋಷಿಸಿದ್ದರಿಂದ ಅನೇಕ ವಿದ್ಯಾರ್ಥಿಗಳು ತೃತೀಯ ಭಾಷಾ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಅಂಕ ನೀಡುವಂತೆ ಕೋರ್ಟ್ ಆದೇಶಿಸಿರುವುದರಿಂದ ಫಲಿತಾಂಶ ಕುಸಿತವಾಗುವ ಭೀತಿ ವ್ಯಕ್ತವಾಗಿದೆ.

ಶಿಕ್ಷಣ ಇಲಾಖೆಯ ಈ ತುರ್ತು ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿ ನಿಯಮ ಬದಲಾವಣೆ ಮಾಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಗ್ರೇಡ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿತ್ತು. ಆದರೆ ಪರೀಕ್ಷಾ ಪ್ರಕ್ರಿಯೆಯ ಮಧ್ಯದಲ್ಲಿ ಇಂತಹ ಬದಲಾವಣೆ ಕಾನೂನುಬಾಹಿರ ಎಂದು ವಾದಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದೀಗ ನ್ಯಾಯಾಲಯದ ತೀರ್ಪಿನಿಂದ ಸರ್ಕಾರದ ನಿರ್ಧಾರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ.

ಚಾರಣಿಗರ ಗಮನಕ್ಕೆ: ಟ್ರ್ಯಾಕಿಂಗ್ ಆಪ್ ಇನ್‌ಸ್ಟಾಲ್ ಕಡ್ಡಾಯ, ಗೈಡ್ ಇಲ್ಲದೆ ಪ್ರವೇಶಕ್ಕೆ ನಿರ್ಬಂಧ!

ಬೆಂಗಳೂರು: ರಾಜ್ಯದಲ್ಲಿ ಚಾರಣಕ್ಕೆ ತೆರಳಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಲ್ಲಿ ಹೊಸ ನಿಯಮಗಳನ್ನು ಪ್ರಕಟಿಸಿದ್ದಾರೆ.

ಕೊಡಗು ಜಿಲ್ಲೆಯ ತಡಿಯಾಂಡಮೊಳ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಾರಣಿಗರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಹೊಸ ನಿಯಮಗಳು ಏನು?
ಹೊಸ SOP ಪ್ರಕಾರ, ಚಾರಣಿಗರು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಬುಕ್ಕಿಂಗ್ ಮಾಡಬೇಕು. ಪ್ರತಿ 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಚಾರಣಿಗರ ಮೊಬೈಲ್‌ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಸಲಾಗುತ್ತದೆ.

ಗೈಡ್‌ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಪ್ರತಿ ಚಾರಣ ಸ್ಥಳದಲ್ಲಿ ಒಮ್ಮೆ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ನಂತರವೇ ಮತ್ತೊಂದು ತಂಡವನ್ನು ಕಳುಹಿಸುವ ವ್ಯವಸ್ಥೆ ಜಾರಿಯಾಗಲಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತೊಂದು ಭೀಕರ ರಸ್ತೆ ಅಪಘಾತ: ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ 6 ಮಂದಿ ಸಜೀವ ದಹನ!

0

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ 6 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ.

ಯಾದಗಿರಿಯಿಂದ ರಾಯಚೂರು ಕಡೆ ತೆರಳುತ್ತಿದ್ದ ಕಾರು ಹಾಗೂ ಬೆಂಗಳೂರಿನಿಂದ ಕಲಬುರಗಿ ಕಡೆ ಬರುತ್ತಿದ್ದ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಪರಿಣಾಮವಾಗಿ ಎರಡೂ ವಾಹನಗಳಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕಾರಿನ ಒಳಗಿದ್ದ ಆರು ಮಂದಿ ಬೆಂಕಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅವರ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾರ್ಯಾಚರಣೆ ಮುಂದುವರಿದಿದೆ. ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ.

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ! ಬೆಂಗಳೂರಿನಲ್ಲಿ ರೇಟ್ ಎಷ್ಟು ಗೊತ್ತಾ?

ಬೆಂಗಳೂರು: ಸತತ ಮೂರು ದಿನ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು ₹300ರವರೆಗೆ ಏರಿಕೆಯಾಗಿದ್ದ ಬೆಲೆ, ಇಂದು ಪ್ರತಿ ಗ್ರಾಮ್‌ಗೆ ₹125ರಷ್ಟು ಇಳಿಕೆಯಾಗಿದೆ.

ಯಾಕೆ ಇಳಿಕೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದು, ಇರಾನ್ ಸಂಬಂಧಿತ ಉದ್ವಿಗ್ನತೆ ತಗ್ಗುವ ಸಾಧ್ಯತೆಗಳು ಹೆಚ್ಚಾದ ಹಿನ್ನೆಲೆ ಹೂಡಿಕೆದಾರರ ಒತ್ತಡ ಕಡಿಮೆಯಾಗಿರುವುದು ಪ್ರಮುಖ ಕಾರಣವೆಂದು ತಜ್ಞರು ಹೇಳುತ್ತಾರೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ದಾಖಲಾಗಿದೆ.

ಭಾರತದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ (ಏಪ್ರಿಲ್ 17)

  • 24 ಕ್ಯಾರಟ್ (1 ಗ್ರಾಂ): ₹15,420
  • 22 ಕ್ಯಾರಟ್ (1 ಗ್ರಾಂ): ₹14,135
  • 18 ಕ್ಯಾರಟ್ (1 ಗ್ರಾಂ): ₹11,565
  • ಬೆಳ್ಳಿ (1 ಗ್ರಾಂ): ₹265

10 ಗ್ರಾಂ ದರ

  • 22 ಕ್ಯಾರಟ್ ಚಿನ್ನ: ₹1,41,350
  • 24 ಕ್ಯಾರಟ್ ಚಿನ್ನ: ₹1,54,200

ಬೆಂಗಳೂರು ದರಗಳು
ಬೆಂಗಳೂರುದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,41,350 ಇದ್ದು, 100 ಗ್ರಾಂ ಬೆಳ್ಳಿ ₹26,500ಕ್ಕೆ ಲಭ್ಯವಿದೆ.

ಇತರೆ ನಗರಗಳ ದರ (22 ಕ್ಯಾರಟ್ – 1 ಗ್ರಾಂ)

  • ಚೆನ್ನೈ: ₹14,210
  • ಮುಂಬೈ: ₹14,135
  • ದೆಹಲಿ: ₹14,150
  • ಕೋಲ್ಕತಾ: ₹14,135
  • ಕೇರಳ: ₹14,135
  • ಅಹ್ಮದಾಬಾದ್: ₹14,140
  • ಜೈಪುರ್: ₹14,150
  • ಲಕ್ನೋ: ₹14,150
  • ಭುವನೇಶ್ವರ್: ₹14,135

ಒಟ್ಟಾರೆ, ಚಿನ್ನ-ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಬೆಳವಣಿಗೆಗಳ ಮೇಲೆ ಬೆಲೆಗಳು ನಿರ್ಧಾರವಾಗಲಿವೆ.

ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ಗೆ ಕಾರು ನೀಡಿದ ಶೋರೂಂ ಸಿಬ್ಬಂದಿ: ಸರಣಿ ಅಪಘಾತ, ಓರ್ವನ ಕಾಲು ಕಟ್!

ಬೆಂಗಳೂರು: ನಗರದಲ್ಲಿ ಶೋರೂಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಭಾರೀ ಅನಾಹುತ ಸಂಭವಿಸಿರುವ ಘಟನೆ ಮಹದೇವಪುರದ ವಿಜ್ಞೇಶ್ವರ ನಗರದಲ್ಲಿ ಬೆಳಕಿಗೆ ಬಂದಿದೆ. ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಮಾಡಲು ಕಾರು ನೀಡಿದ ಪರಿಣಾಮ, ಸರಣಿ ಅಪಘಾತ ಸಂಭವಿಸಿ ಹಲವರಿಗೆ ಗಾಯಗಳಾಗಿವೆ.

ಏಪ್ರಿಲ್ 12ರಂದು ಅಭಿಲಾಷ್ ಎಂಬಾತ ಮಹೀಂದ್ರಾ ಕಾರು ಶೋರೂಂಗೆ ಕಾರು ಖರೀದಿಸುವ ಉದ್ದೇಶದಿಂದ ಬಂದಿದ್ದನು. ಆದರೆ ಆತ ಮದ್ಯಪಾನ ಮಾಡಿರುವುದು ತಿಳಿದಿದ್ದರೂ, ಶೋರೂಂ ಸಿಬ್ಬಂದಿ ಕಾರನ್ನು ಟೆಸ್ಟ್ ಡ್ರೈವ್‌ಗೆ ನೀಡಿರುವುದು ಗಂಭೀರ ನಿರ್ಲಕ್ಷ್ಯವೆಂದು ಆರೋಪಿಸಲಾಗಿದೆ.

ಕಾರು ಚಲಾಯಿಸಿದ ಅಭಿಲಾಷ್ ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲಿದ್ದ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಯಿಂದ ರಮೇಶ್ ಎಂಬುವವರ ಕಾಲು ಮುರಿದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಅಭಿಲಾಷ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಗಾಯಗೊಂಡಿರುವ ಆತ ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹದೇವಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಎನ್ಎಸ್ ಸೆಕ್ಷನ್ 125(a), 281 ಹಾಗೂ ಐಎಂವಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

ಇದಲ್ಲದೆ, ಮದ್ಯಪಾನ ಮಾಡಿದ ವ್ಯಕ್ತಿಗೆ ಟೆಸ್ಟ್ ಡ್ರೈವ್ ಅವಕಾಶ ನೀಡಿದ ಶೋರೂಂ ಸಿಬ್ಬಂದಿಯ ವಿರುದ್ಧವೂ ತನಿಖೆ ಚುರುಕುಗೊಂಡಿದೆ.

“ಲವ್ ಮಾಕ್ಟೇಲ್ 3”ಗೆ 25 ದಿನ ಪೂರೈಸಿದ ಸಂಭ್ರಮ!

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್3 ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿಕೊಂಡಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ಕಂಡಿತ್ತು.

ಇದೀಗ ಇಪ್ಪತೈದು ದಿನಗಳನ್ನು ಯಶಸ್ವಿಯಾಗಿ ದಾಟಿಕೊಳ್ಳುವ ಮೂಲಕ ೨೦೨೬ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಟಾಕ್ಸಿಕ್ ಚಿತ್ರ ಮುಂದಕ್ಕೆ ಹೋಗುತ್ತಲೇ ಮಾರ್ಚ್ 19ರಂದು ಲವ್ ಮಾಕ್ಟೇಲ್3 ಚಿತ್ರ ಬಿಡುಗಡೆಗೊಂಡಿತ್ತು. ಕೆವಿಎನ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ಎಲ್ಲ ದಿಕ್ಕಿನಿಂದಲೂ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೊಂಡಿದ್ದ ಲವ್ ಮಾಕ್ಟೇಲ್3 ಅದೇ ಆವೇಗದೊಂದಿಗೆ ಇಪ್ಪತೈದರ ನಿರ್ಣಾಯಕ ಘಟ್ಟವನ್ನು ದಾಟಿಕೊಂಡಿದೆ. ಇಂಥಾ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಲೇ, ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ ಸರಣಿಯ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ್ದಾರೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ: ಅಪಾರ ಪ್ರಮಾಣದ ಕಾಡು ಭಸ್ಮ!

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿರುವ ಘಟನೆ ವರದಿಯಾಗಿದೆ.

ಲೊಕ್ಕನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ವೇಗವಾಗಿ ವ್ಯಾಪಿಸಿದ್ದು, ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಬೆಂಕಿ ವಾಚರ್‌ಗಳು ಸ್ಥಳಕ್ಕೆ ದೌಡಾಯಿಸಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿಯಿಂದ ಎಷ್ಟು ಎಕರೆ ಅರಣ್ಯ ಹಾನಿಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಕಳೆದ ಕೆಲವು ದಿನಗಳಿಂದಲೂ ಈ ಭಾಗದಲ್ಲಿ ನಿರಂತರವಾಗಿ ಕಾಡು ಬೆಂಕಿ ಕಾಣಿಸಿಕೊಂಡಿದ್ದು, ಬೈಲೂರು ಮತ್ತು ಕೊಳ್ಳೇಗಾಲ ವಲಯಗಳಲ್ಲಿ ಹಲವು ಬಾರಿ ಬೆಂಕಿ ಅವಘಡ ಸಂಭವಿಸಿ ನೂರಾರು ಎಕರೆ ಅರಣ್ಯ ಪ್ರದೇಶ ಹಾನಿಗೊಳಗಾಗಿದೆ.

ಅರಣ್ಯದಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ ಜಾಗೃತಿ ಮೂಡಿಸಿದರೂ ಸಹ ಬೆಂಕಿ ಘಟನೆಗಳು ಮುಂದುವರಿಯುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪರಿಸರ ಪ್ರಿಯರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

error: Content is protected !!