ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಈಗ ಕೇವಲ ಬಾಕ್ಸ್ ಆಫೀಸ್ ಸಕ್ಸಸ್ ಮಾತ್ರವಲ್ಲ, ಚಿತ್ರರಂಗದ ದಿಗ್ಗಜರ ಮೆಚ್ಚುಗೆಗೂ ಪಾತ್ರವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಧುರಂಧರ್’ ಸಿನಿಮಾವನ್ನು ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಎರಡು ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದೆ. ನಾನು ಮಾಡಿದ ಮೊದಲ ಕೆಲಸ ‘ಧುರಂಧರ್’ ಸಿನಿಮಾ ನೋಡುವುದು. ಅದ್ಭುತ, ಹೆಮ್ಮೆ – ಈ ಎರಡೇ ಭಾವನೆಗಳು ನನ್ನಲ್ಲಿ ಮೂಡಿವೆ. ಇಂತಹ ಸಿನಿಮಾ ತಾನೇ ತಾನಾಗಿ ಆಗುವುದಿಲ್ಲ” ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಸಿನಿಮಾದ ಪ್ರೊಡಕ್ಷನ್ ಡಿಸೈನ್, ಸಂಗೀತ ಹಾಗೂ ತಂತ್ರಜ್ಞರ ಕೆಲಸವನ್ನು ಅವರು ಎತ್ತಿ ಹಿಡಿದಿದ್ದಾರೆ. ಛಾಯಾಗ್ರಾಹಕ ವೀಕಾಸ್ ನೌಲಂಕಾ ಅವರ ಕೆಲಸವನ್ನು ಹೊಸ ತಲೆಮಾರಿನ ಛಾಯಾಗ್ರಾಹಕರಿಗೆ ಮಾರ್ಗದರ್ಶಕ ಎಂದು ಬಣ್ಣಿಸಿದ್ದಾರೆ. ಪ್ರತಿಯೊಂದು ವಿಭಾಗವೂ ಪರಸ್ಪರ ಸಿಂಕ್ ಆಗಿರುವುದು ಈ ಸಿನಿಮಾದ ದೊಡ್ಡ ಶಕ್ತಿ ಎಂದಿದ್ದಾರೆ.
“ಇದು ಸಂಪೂರ್ಣವಾಗಿ ನಿರ್ದೇಶಕ ಮತ್ತು ಬರಹಗಾರರ ಸಿನಿಮಾ. ಆದಿತ್ಯ ಧಾರ್ ಅವರೇ, ನಿಮ್ಮ ಸಿನಿಮಾ ಮಾಡುವ ಸ್ಕೇಲ್ ಮತ್ತು ಡಿಸೈನ್ ಯಾವಾಗಲೂ ದೊಡ್ಡದು. ಇದು ಇನ್ನೊಂದು ಲೆವೆಲ್. ನಾನು ಹೆಮ್ಮೆಯಿಂದ ಈ ಸಿನಿಮಾ ನೋಡಿದ್ದೇನೆ” ಎಂದು ಹೇಳಿದ್ದಾರೆ.
ಇನ್ನೂ ಮುಂದೆ ಹೋಗಿ, “ನೀವು ನಿಜಕ್ಕೂ ಧನ್ಯ. ನೀವು ದೇವರ ಮಗ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ. ಹೀಗೆ ಮುಂದುವರಿಯಿರಿ. ಯುವ ಜನತೆ ಇಂಥ ಸಿನಿಮಾ ಮಾಡಿದಾಗಲೇ ಭಾರತೀಯ ಚಿತ್ರರಂಗ ಬೆಳೆಯುತ್ತದೆ” ಎಂದು ಆದಿತ್ಯ ಧಾರ್‌ಗೆ ಭಾವುಕ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸಿನಿಮಾ ಈಗಾಗಲೇ 774 ಕೋಟಿ ರೂಪಾಯಿ ಮೀರಿದ ಕಲೆಕ್ಷನ್ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

