Home Blog Page 216

ಮರಕ್ಕೆ ಬೊಲೆರೊ ವಾಹನ ಡಿಕ್ಕಿ; ನಾಲ್ವರು ಕಾರ್ಮಿಕರು ಸಾವು

0

ಚಿತ್ರದುರ್ಗ:- ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು ಬಳಿ ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.

ಮೃತರನ್ನು ಕಿರಣ್(25), ಅರುಣ್(32), ಹನುಮಂತ(32) ಮತ್ತು ಗಿರಿರಾಜ್(46) ಎಂದು ಗುರುತಿಸಲಾಗಿದೆ. ಇನ್ನುಳಿದ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ಅಡಕೆ ಲೋಡ್​​ ಇಳಿಸಿ ಕಾರ್ಮಿಕರು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ದುರಂತದಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಮೃತ ಕಾರ್ಮಿಕರು ಕಲ್ಲವ್ವ ನಾಗತಿಹಳ್ಳಿ ಗ್ರಾಮದವರು ಎನ್ನಲಾಗಿದೆ.

ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕುಸ್ತಿಯಿಂದ ದೈಹಿಕ, ಮಾನಸಿಕ ಸಮತೋಲನ: ನಾಗವೇಣಿ 

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ಒದಗಿಸುವ ಸೇವಾ ಕಾರ್ಯವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಗವಿಮಠದ ಆವರಣದಲ್ಲಿ ಆಹ್ವಾನಿತ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು.

ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಮಾತನಾಡಿ, ಕುಸ್ತಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು, ಇದು ಒಂದು ದೇಹದಾರ್ಢ್ಯ ಚಟುವಟಿಕೆಯಾಗಿದೆ. ಈ ಕ್ರೀಡೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೈಹಿಕ ಹಾಗೂ ಮಾನಸಿಕ ಸಮತೋಲನ ಬೆಳವಣಿಗೆಗೆ ಸಹಕಾರಿಯಾಗುವುದರ ಮೂಲಕ ಸದೃಢ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಭಾಗವಹಿಸಿದ ಪುರುಷರ ವಿಭಾಗದಲ್ಲಿ ಆಹ್ವಾನಿತ 16 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಅಭಿ ಹನುಮನಹಳ್ಳಿ ಪ್ರಥಮ, ತಾಯಪ್ಪ ಹೊಸಪೇಟೆ ದ್ವಿತೀಯ, ದ್ವಿತೀಯ ಪಂದ್ಯದಲ್ಲಿ ಪ್ರಜ್ವಲ್ ಹಂಪಿಕಟ್ಟಿ ಪ್ರಥಮ, ಮೌಲಾ ಗಂಗಾವತಿ ದ್ವಿತೀಯ, ತೃತೀಯ ಪಂದ್ಯದಲ್ಲಿ ಪರಶುರಾಮ ಹೊಸಪೇಟೆ ಪ್ರಥಮ, ಮಹೇಂದ್ರ ಅಗ್ರಿಬೊಮ್ಮನಹಳ್ಳಿ ದ್ವಿತೀಯ, ಚತುರ್ಥ ಪಂದ್ಯದಲ್ಲಿ ಹರೀಶ್ ಹೊಸಪೇಟೆ ಪ್ರಥಮ, ಅಲ್ತಾಫ್ ಹಗರಿಬೊಮ್ಮನಹಳ್ಳಿ ದ್ವಿತೀಯ, ಐದನೇ ಪಂದ್ಯದಲ್ಲಿ ರಮೇಶ್ ಹೊಸಪೇಟೆ ಪ್ರಥಮ, ಎಚ್.ಬಿ. ಹಳ್ಳಿ ಇರ್ಫಾನ್ ದ್ವಿತೀಯ, ಆರನೇ ಪಂದ್ಯದಲ್ಲಿ ಇರ್ಫಾನ್ ಹೆಚ್.ಬಿ. ಹಳ್ಳಿ ಪ್ರಥಮ, ಕೀರ್ತಿ ಹೊಸಪೇಟೆ ದ್ವಿತೀಯ, ಏಳನೇ ಪಂದ್ಯದಲ್ಲಿ ಹುಲ್ಕಜ್ಜಿ ಎಚ್.ಬಿ. ಹಳ್ಳಿ ಪ್ರಥಮ, ಅಲ್ತಾಫ್ ಕೊಪ್ಪಳ ದ್ವಿತೀಯ, ಎಂಟನೇ ಪಂದ್ಯದಲ್ಲಿ ಗಂಗಾಧರ್ ಹೆಚ್.ಬಿ. ಹಳ್ಳಿ ಪ್ರಥಮ, ಸುರೇಶ್ ಬೆಳಗಾವಿ ದ್ವಿತೀಯ, ಒಂಬತ್ತನೇ ಪಂದ್ಯದಲ್ಲಿ ಸಚಿನ್ ಮೌಲಿ ಪ್ರಥಮ, ಮಹೇಶ್ ಶರಣಯ್ಯ ಗುಲ್ಬರ್ಗಾ ದ್ವಿತೀಯ, ಹತ್ತನೇ ಪಂದ್ಯದಲ್ಲಿ ಯೋಗೇಶ್ ಪೈ ಪ್ರಥಮ, ಶ್ರೀಕಾಂತ್ ದ್ವಿತೀಯ, ಹನ್ನೋಂದನೇ ಪಂದ್ಯದಲ್ಲಿ ಅಮರೇಶ್ ಗುಲ್ಬರ್ಗ ಪ್ರಥಮ, ಶ್ರೀ ಪವರ್ ದ್ವಿತೀಯ, ಹನ್ನರಡನೇ ಪಂದ್ಯದಲ್ಲಿ ಹನುಮಂತ್ ಅರಸಿಕೆರೆ ಪ್ರಥಮ, ಮಂಜುನಾಥ್ ಹೊಸಪೇಟೆ ದ್ವಿತೀಯ, ಹದಿಮೂರನೇ ಪಂದ್ಯದಲ್ಲಿ ಕೆಂಚಪ್ಪ ಹರಪನಹಳ್ಳಿ ಪ್ರಥಮ, ಬಾಬುರಾವ್ ಕೊಲ್ಲಾಪುರ ದ್ವಿತೀಯ, ಹದಿನಾಲ್ಕನೇ ಪಂದ್ಯದಲ್ಲಿ ಬಸವರಾಜ ಪಾಟೀಲ್ ಪ್ರಥಮ, ಪಪ್ಪು ಕೊಲ್ಲಾಪುರ ದ್ವಿತೀಯ, ಹದಿನೈದನೇ ಪಂದ್ಯದಲ್ಲಿ ಹನುಮಂತ ಮರಿಯಮ್ಮನಹಳ್ಳಿ ಪ್ರಥಮ, ಬಾಲಾಜಿ ಪಾಟೀಲ್ ದ್ವಿತೀಯ, ಹದಿನಾರನೇ ಪಂದ್ಯದಲ್ಲಿ ಕಾರ್ತಿಕ್ ಕಾಟಿ ರಾಣೆಬೆನ್ನೂರು ಪ್ರಥಮ, ಸತೀಶ್ ಮಹಾರಾಷ್ಟ್ರ ದ್ವಿತೀಯ ಸ್ಥಾನ ಪಡೆದರು.

ಪಂದ್ಯಾವಳಿಯಲ್ಲಿ ದೈಹಿಕ ನಿರ್ದೇಶಕರಾದ ಜಯರಾಮ ಮರಡಿತೋಟದ, ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ, ವಿನೋದ ಮುದಿಬಸನಗೌಡ್ರ, ದೈಹಿಕ ಶಿಕ್ಷಕರಾದ ರಾಜು ಮಗಿಮಾವಿನಹಳ್ಳಿ ಹಾಗೂ ರಾಜು ಎಸ್ ಭಾಗವಹಿಸಿದ್ದರು. ಪಂದ್ಯಗಳ ರೆಫರಿಯಾಗಿ ಸಣ್ಣದುರುಗಪ್ಪ ಹಾಗೂ ಈರಣ್ಣ ಈಮ್ಮಡಿಯವರ ಕಾರ್ಯನಿರ್ವಹಿಸಿದರು.

ಮಹಿಳಾ ವಿಭಾಗದಲ್ಲಿ ಆಹ್ವಾನಿತ 8 ತಂಡಗಳಲ್ಲಿ ಪ್ರಥಮ ಪಂದ್ಯದಲ್ಲಿ ಗದಗನ ಐಶ್ವರ್ಯ ಪ್ರಥಮ, ದ್ವಿತೀಯ ಪಂದ್ಯದಲ್ಲಿ ಕುಕನೂರಿನ ಅರಿಫಾ ಪ್ರಥಮ, ತೃತೀಯ ಪಂದ್ಯದಲ್ಲಿ ಹೋಸಪೇಟೆಯ ಸಿಂಧೂ ಪ್ರಥಮ, ಚತುರ್ಥ ಪಂದ್ಯದಲ್ಲಿ ಹೊಸಪೇಟೆಯ ಕವಿತಾ ಪ್ರಥಮ, ಐದನೇ ಪಂದ್ಯದಲ್ಲಿ ಜಲಜಾಕ್ಷಿ ಪ್ರಥಮ, ಆರನೇ ಪಂದ್ಯದಲ್ಲಿ ಶಿವಮೊಗ್ಗದ ಸಾತಿಯಾ ಪ್ರಥಮ, ಏಳನೇ ಪಂದ್ಯದಲ್ಲಿ ಗದಗನ ವೈಷ್ಣವಿ ಪ್ರಥಮ, ಎಂಟನೇ ಪಂದ್ಯದಲ್ಲಿ ಕಂಪ್ಲಿಯ ಬಿಂದಿಯಾ ಪ್ರಥಮ ಪಡೆದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಸೈಯದ್ ಅಜಂಪೀರ ಖಾದ್ರೀ

0

ವಿಜಯಸಾಕ್ಷಿ ಸುದ್ದಿ, ರೋಣ: ದೇಶದಲ್ಲಿ ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಹಿಂದಿದ್ದಾರೆ. ಹೀಗಾಗಿ ಮುಸ್ಲಿಮರು ಹೊತ್ತಿನ ಊಟ ಬಿಟ್ಟರೂ ಚಿಂತೆಯಿಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬೀಳಬಾರದು ಎಂದು ಮಾಜಿ ಶಾಸಕ ಹಾಗೂ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಸೈಯದ್ ಅಜಂಪೀರ ಖಾದ್ರೀ ಹೇಳಿದರು.

ಅವರು ಮಂಗಳವಾರ ಪಟ್ಟಣದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪಬ್ಲಿಕ್ ಶಾಲೆಯ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗದಂತೆ ಸಮುದಾಯದ ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಉನ್ನತಿ ಮತ್ತು ಸಮಾಜದ ಪ್ರಗತಿ ಶಿಕ್ಷಣದಿಂದ ಮಾತ್ರ ಎನ್ನುವುದನ್ನು ನಾವೆಲ್ಲರೂ ಅರಿಯಬೇಕಿದೆ. ಸಮಾಜದ ಬಂಧುಗಳು ಬಡತನದಿಂದ ಹೊರಬರಲು ಶಿಕ್ಷಣ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಯೋಚಿಸಬೇಕಿದೆ. ಇಂದಿನ ಮಕ್ಕಳು ನಾಳೆಯ ಉತ್ತಮ ಪ್ರಜೆಗಳಾಗಲಿದ್ದಾರೆ ಎಂದರು.

ಸಮಾಜದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯ. ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಬಗ್ಗೆ ತಿಳಿಸುವುದು ಕೂಡ ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ. ನಾವು ಬಡತನದಲ್ಲಿ ಹುಟ್ಟಿರಬಹುದು. ಆದರೆ ನಮ್ಮ ಮಕ್ಕಳು ನಮ್ಮಂತೆ ಬಡವರಾಗಿ ಉಳಿಯಬಾರದು ಎಂಬ ಚಿಂತನೆ ಪಾಲಕರಲ್ಲಿ ಬರಬೇಕು. ಮುಸ್ಲಿಮರಲ್ಲಿ ದಾನ ಮಾಡುವುದು ಕಡ್ಡಾಯ. ಹಾಗೆಯೇ, ಮಕ್ಕಳಿಗೆ ಅಕ್ಷರದ ದಾನ ಮಾಡುವುದು ಕೂಡ ಕಡ್ಡಾಯ. ಅಂದಾಗ ಮಾತ್ರ ಓರ್ವ ಮುಸ್ಲಿಮನಿಗೆ ಸ್ವರ್ಗ ಸಿಗಲು ಸಾಧ್ಯ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕು. ಸಮಾಜ ಮತ್ತಷ್ಟು ಪ್ರಗತಿಯತ್ತ ಸಾಗಲು ಅಕ್ಷರ ಜ್ಞಾನ ಬೇಕು. ಅಂದಾಗ ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಸಾಚಾರ್ ವರದಿ ಪ್ರಕಾರ ಮುಸ್ಲಿಂ ಬಂಧುಗಳು ಶಿಕ್ಷಣದಿಂದ ತೀರಾ ಹಿಂದುಳಿದಿರುವುದು ಕಂಡು ಬರುತ್ತದೆ. ಹೀಗಾಗಿ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಳೆದ ವರ್ಷ 52 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆ 2ನೇ ವರ್ಷಕ್ಕೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆಯೆಂದರೆ ಪಬ್ಲಿಕ್ ಶಾಲೆಯ ಗುಣಮಟ್ಟದ ಶಿಕ್ಷಣ ಕಾರಣ. ಮುಖ್ಯವಾಗಿ ಇಂದಿನ ವಿಜ್ಞಾನ ವಸ್ತುಪ್ರದರ್ಶನ ಬೆಳದು ನಿಂತ ಶಾಲೆಗಳಿಗೆ ಸವಾಲ್ ಹಾಕುವಂತಿತ್ತು. ಅಷ್ಟರ ಮಟ್ಟಿಗೆ ನಮಗೆ ಖುಷಿ ತಂದಿದೆ ಎಂದ ಅವರು, ಶಾಲೆಯ ಬೆಳವಣಿಗೆಯಲ್ಲಿ ನಮ್ಮ ಮನೆತನ ಸದಾ ಇರಲಿದೆ ಎಂದರು.

ಬಾವಾಸಾಬ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಯೂಸುಫ್ ಇಟಗಿ, ಖಲೀಲ ರಾಮದುರ್ಗ, ಪೈಜಹ್ಮದ ಕಲಾದಗಿ, ಅಬ್ದುಲ್‌ಲತೀಫ್ ಖತೀಬ, ದಸ್ತಗೀರ ಗಡವಾಲೆ, ಇಮಾಮಸಾಬ ದರಗಾದ, ಬಾಷಾಸಾಬ ಚಿನ್ನೂರ, ಮಲೀಕ ಯಲಿಗಾರ, ಅಸ್ಲಾಂ ಕೊಪ್ಪಳ, ರಿಯಾಜ ಮುಲ್ಲಾ ಸೇರಿದಂತೆ ಅಂಜುಮನ್ ಕಮಿಟಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಶಾಸಕ ಜಿ.ಎಸ್. ಪಾಟೀಲ ರಾಜ್ಯ ಕಂಡ ಅಪ್ರತಿಮ ನಾಯಕ. ಅವರ ಸೇವೆ ಸ್ಮರಣೀಯ. ಪಟ್ಟಣ ಸೇರಿದಂತೆ ಮತಕ್ಷೇತ್ರದ ಮುಸ್ಲಿಂ ಮಕ್ಕಳು ಇಂದು ವಿದ್ಯಾವಂತರಾಗಲು ಅವರು ಕೊಟ್ಟ ಕೊಡುಗೆ ಕಾರಣ ಎಂದು ಸಮಾಜದ ಹಿರಿಯರು ನನಗೆ ತಿಳಿಸಿದ್ದು ನನಗೆ ಬಹಳ ಸಂತಸ ತಂದಿದೆ.

  • ಸೈಯದ್ ಅಜಂಪೀರ ಖಾದ್ರೀ.
    ಅಧ್ಯಕ್ಷರು, ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ.

ಬ್ಯಾನರ್ ಗಲಾಟೆ ಕೇಸ್; ಮೃತನ ಕುಟುಂಬಕ್ಕೆ 25 ಲಕ್ಷ ಹಣ ಕೊಟ್ಟ ಸಚಿವ ಜಮೀರ್ ವಿರುದ್ಧ ದೂರು!

0

ಬಳ್ಳಾರಿ:- ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಮೃತ ಯುವಕನ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ 25 ಲಕ್ಷ ರೂ. ನಗದು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ.

ಹಿಂದುಪರ ಕಾರ್ಯಕರ್ತ ತೇಜಸ್ ಗೌಡ ಅವರು ದೂರಿನಲ್ಲಿ, ಸಚಿವರು ನಗದು ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಹಣದ ಮೂಲ ಮತ್ತು ವಿತರಣೆಯನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ನೀಡಿದ್ದ ಜಮೀರ್:

ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ರೂ. ಆರ್ಥಿಕ ನೆರವು ವಿತರಣೆ ಮಾಡಿದ್ದರು. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿದ್ದರು.

ಘಟನೆ ನಡೆದು ಎರಡು ದಿನಗಳ ಬಳಿಕ ಬಳ್ಳಾರಿಗೆ ಆಗಮಿಸಿದ ಜಮೀರ್ ಅಹಮದ್ ಖಾನ್ ಅವರು ನೇರವಾಗಿ, ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಹುಸೇನ್ ನಗರದಲ್ಲಿರುವ ಮೃತರ ಮನೆಗೆ ತೆರಳಿದ ಸಚಿವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ತಮ್ಮ ವೈಯಕ್ತಿಕ ಖಾತೆಯಿಂದ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಹಸ್ತಾಂತರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ: ಡಾ. ಈರಣ್ಣ ಹಳೇಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮಪಟ್ಟು ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದು ಗದಗ ಜಿಮ್ಸ್ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ ಹೇಳಿದರು.

ಅವರು ಸೋಮವಾರ ಗದಗದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಏರ್ಪಡಿಸಿದ್ದ 76ನೇ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಇಂದು ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಈ ಸ್ಪರ್ಧಾತ್ಮಕತೆಯಲ್ಲಿ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಶಿಕ್ಷಣದಲ್ಲಿ ವ್ಯವಹಾರಿಕತೆ ಹೆಚ್ಚುತ್ತಿರುವುದು ವಿಷಾದದ ಸಂಗತಿ. ನಾವೆಲ್ಲ ಯುವಕರಾಗಿದ್ದಾಗ ಬಿ.ಜಿ. ಅಣ್ಣಿಗೇರಿ ಗುರುಗಳ ಈ ಆಶ್ರಮದಲ್ಲಿ ಉಚಿತ ಪಾಠ ಹೇಳಿಸಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿದ್ದರ ಪರಿಣಾಮವಾಗಿ ಸಾವಿರಾರು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದರಲ್ಲದೆ, ಅಣ್ಣಿಗೇರಿ ಗುರುಗಳ ಪಾಠ ಬೋಧನೆಯ ವೈಖರಿಯನ್ನು ಬಣ್ಣಿಸಿ ಅಂತಹ ಗುರುಗಳು ನಮಗೆ ಲಭ್ಯವಾಗಿದ್ದು ನಮ್ಮೆಲ್ಲರ ಪುಣ್ಯ ಎಂದರು.

ಆಶ್ರಮವನ್ನು ಬಹಳಷ್ಟು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿರುವ ಸಮಿತಿಯವರ ಹಾಗೂ ಪ್ರತಿಭಾ ಪ್ರತಿಷ್ಠಾನದ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ. ಇಲ್ಲಿ ಇಂದಿಗೂ ಉಚಿತ ಪಾಠಗಳನ್ನು ಅನುಭವಿ ಶಿಕ್ಷಕ-ಶಿಕ್ಷಕಿಯರು ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ, ಆಶ್ರಮ ಮತ್ತು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿ ಸರ್ವರ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.

ಸುಭಾಷ್‌ಚಂದ್ರ ಬೆಟ್ಟದೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ದಂಡಿನ ಸಂದರ್ಭೋಚಿತವಾಗಿ ಮಾತನಾಡಿದರು. ಕೊನೆಗೆ ಮಂಜುಳಾ ತುಂಬುರಮಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಬಸಯ್ಯ ಬೆಳ್ಳೆರಿಮಠ, ಸಿದ್ದಣ್ಣ ಕವಲೂರ, ತೋಂಟೇಶ ವೀರಲಿಂಗಯ್ಯನಮಠ, ಬಸವರಾಜ ಬಿಂಗಿ, ರವಿ ದಂಡಿನ, ಶಿವಣ್ಣ ಕಟ್ಟಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಂಬುರಮಟ್ಟಿ ಹಾಗೂ ಆಶ್ರಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ: ಹೆಚ್.ಸಿ.ಮಹದೇವಪ್ಪ

0

ಮೈಸೂರು:- ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗೋದು ಗ್ಯಾರಂಟಿ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮತ್ತು ಅಹಿಂದ ವರ್ಗ ಮುಳುಗುತ್ತದೆ. ಸಿದ್ದರಾಮಯ್ಯ ಇಲ್ಲದೆ ಇರೋ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಜನನಾ ಸಿಎಂ ಸಿಎಂ ಎಂದು ಸುಮ್ಮನೆ ಘೋಷಣೆ ಕೂಗ್ತಿರಾ? ನನ್ನನ್ನು ಸೇರಿದಂತೆ ಎಲ್ಲರನ್ನೂ ಸುಮ್ಮನೆ ಮುಂದಿನ ಸಿಎಂ ಸಿಎಂ ಘೋಷಣೆ ಕೂಗುತ್ತಾರೆ. ದಲಿತ ಸಂಘಟನೆಯ ಮುಖಂಡರು ಬುದ್ಧಿವಂತರು. ಸಿದ್ದರಾಮಯ್ಯರೇ ಸಿಎಂ ಆಗಿರಲಿ. ಅವರು ಬದಲಾಗುವುದಾದರೆ ದಲಿತರಿಗೆ ಅವಕಾಶ ಕೊಡಿ ಅಂತಾರೆ ಎಂದು ತಿಳಿಸಿದರು.

2028 ರವರೆಗೂ ಸಿದ್ದರಾಮಯ್ಯ ಗಟ್ಟಿಯಾಗಿರಬೇಕು. ಈ ಬಾರಿ ಸಿದ್ದರಾಮಯ್ಯ ತಮ್ಮ ಅವಧಿ ಪೂರೈಸಬೇಕು. ಮುಂದಿನ ಅವಧಿಗೂ ಸಿದ್ದರಾಮಯ್ಯ ಇರಬೇಕು ಎಂಬುದಕ್ಕೆ ನಮ್ಮ ತಕರಾರು ಇಲ್ಲ. ‘ಮತ್ತೆ ಮುಖ್ಯಮಂತ್ರಿ’ ಎಂಬ ನಾಟಕವನ್ನು ಸಿಎಂ ಸಿದ್ದರಾಮಯ್ಯರು ನೋಡಬೇಕು. ಮತ್ತೆ ಮುಖ್ಯಮಂತ್ರಿ ನಾಟಕದಲ್ಲಿ ಇಡೀ ರಾಜಕೀಯದ ಚಿತ್ರಣವೇ ಇದೆ. ಸಿದ್ದರಾಮಯ್ಯ ಯಾವತ್ತೂ ಹೊಗಳಿಕೆಗೆ ಬೆಲೆ ಕೊಟ್ಟವರಲ್ಲ. ಇದ್ದರೆ ಇರುತ್ತೆ, ಹೋದ್ರೆ ಹೋಗುತ್ತೆ ಬಿಡಿ ಎನ್ನುವ ಮನಸ್ಥಿತಿ ಸಿದ್ದರಾಮಯ್ಯರದ್ದು. ಹಾಗಂತ ನಾವು ಅವರನ್ನು ಬಿಡುವುದಕ್ಕೆ ಬಿಡಬಾರದು. ಸಿದ್ದರಾಮಯ್ಯ ಮುಳುಗಿದರೆ ಕಾಂಗ್ರೆಸ್ ಮುಳುಗುತ್ತದೆ. ಸಿದ್ದರಾಮಯ್ಯ ಮುಳುಗಿದರೆ ಅಹಿಂದ ವರ್ಗ ಮುಳುಗುತ್ತದೆ ಎಂದು ಎಚ್ಚರಿಸಿದರು.

ಜನರ ಮೂಗಿಗೆ ತುಪ್ಪ ಒರೆಸದಿರಿ: ಬಸವರಾಜ ಬೊಮ್ಮಾಯಿ 

0

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಜನಪರ ವಿಚಾರಗಳಲ್ಲಿ ಅಧಿಕಾರಿಗಳು ಜನರ ಮೂಗಿಗೆ ತುಪ್ಪ ಒರೆಸುವ ಕ್ರಮವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಸಲ್ಲದು ಎಂದು ಸ್ಪಷ್ಟಪಡಿಸಿದರು.

ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ-ಮನೆಗೆ ನೀರು ತಲುಪುವಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡದೇ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಸೂಚಿಸಿದರು.

ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಹಿತದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಯಾವುದೇ ವಿಳಂಬ, ಅಸಡ್ಡೆಗೆ ಅವಕಾಶ ನೀಡಬಾರದು ಎಂದು ಸಂಸದರು ತಿಳಿಸಿದರು.

ಶಾಲೆ ಎಂಬುದು ಪವಿತ್ರ ಸ್ಥಳ. ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿ ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಈ ಕಾರ್ಯಕ್ಕೆ ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಗಳ ಸಹಯೋಗ ಪಡೆಯುವಂತೆ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳ್ಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಂಬಂಧಿತ ಮಾಹಿತಿಯನ್ನು ಸಭೆಗೆ ತರಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯ ಕೆಲವೊಂದು ಶಾಲಾ ಆವರಣಗಳಲ್ಲಿ ಸಾರಾಯಿ ಬಾಟಲಿಗಳು ಬಿದ್ದಿರುವುದು ಕಂಡುಬರುತ್ತಿವೆ. ಎಲ್ಲ ಶಾಲೆಗಳಲ್ಲಿ ಸಿಸಿ ಟಿವಿ ಅಳವಡಿಸಲು ಕ್ರಮ ವಹಿಸಬೇಕು ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಜೆಜೆಎಂ ಅಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಗ್ರಾಮದ ಪ್ರತಿ ಮನೆಗೂ ನೀರು ತಲುಪಬೇಕು. ಆದರೆ ಈವರೆಗೂ ಕೇವಲ ಪೈಪ್‌ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನಷ್ಟೇ ಮಾಡಿದ್ದು, ಜೆಜೆಎಂ ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ. ನೀರು ಮನೆ ಬಾಗಿಲಿಗೆ ತಲುಪಿದಾಗಷ್ಟೇ ಯೋಜನೆಯ ಸದ್ಬಳಕೆಯಾದಂತಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಅವಳಿ ನಗರದ ನೀರು ಪೂರೈಕೆ ಸಂಬಂಧಿ ವ್ಯವಸ್ಥಿತವಾಗಿ ಯೋಜನೆಯನ್ನು ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು. ಅದನ್ನು ಸದ್ಬಳಕೆ ಮಾಡಬೇಕು. ಬಡವರು ಮತ್ತು ಅರ್ಹರಿಗೆ ಮನೆ ಮಂಜೂರು ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು. ಮನೆ ಮಂಜೂರು ಮಾಡದಿರುವುದಕ್ಕೆ ನಿಮ್ಮಲ್ಲಿ 101 ಕಾರಣಗಳಿರುತ್ತವೆ, ಆ ಮನೋಭಾವ ಬಿಡಿ. ಜೊತೆಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆದಿದೆ ಎಂಬ ದೂರುಗಳು ಕೇಳಿಬರುತ್ತಿವೆ.
– ಬಸವರಾಜ ಬೊಮ್ಮಾಯಿ, ಸಂಸದರು, ಹಾವೇರಿ–ಗದಗ.

ಗದಗ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್‌ದಿಂದ: ಸಂಸದ ಬೊಮ್ಮಾಯಿ ಅವರಿಗೆ ಮನವಿ ಅರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಹೊರವಲಯದಲ್ಲಿರುವ ರೇಲ್ವೆ ಬೈಪಾಸ್ ನಿಲ್ದಾಣದಲ್ಲಿ ಸಕಲ ಮೂಲಭೂತ ಸೌಲಭ್ಯ ಆದ ನಂತರ ರೈಲು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಗದಗ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್ ವತಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಅವರ ಮೂಲಕ ಕೇಂದ್ರ ರೇಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.

ಮಂಗಳವಾರ ಗದಗಿಗೆ ಆಗಮಿಸಿದ್ದ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಶ ಬನಸಾಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ರೇಲ್ವೆ ಪ್ರವಾಸ ಕೈಗೊಂಡು ಗದಗಿನ ಈ ರೇಲ್ವೆ ಬೈಪಾಸ್ ಸ್ಟೇಷನ್‌ನಲ್ಲಿ ಇಳಿಯುವುದು, ಹತ್ತುವುದನ್ನು ಮಾಡಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಬೈಪಾಸ್ ನಿಲ್ದಾಣದಲ್ಲಿ ಭದ್ರತೆ ಇಲ್ಲ, ಪೊಲೀಸ್ ಉಸ್ತುವಾರಿ ಇಲ್ಲ, ಬೈಪಾಸ್ ನಿಲ್ದಾಣದಿಂದ ಮಧ್ಯರಾತ್ರಿ ಗದಗ ಸಿಟಿಗೆ ಸಂಚರಿಸಲು ಬಸ್, ಅಟೋ ವ್ಯವಸ್ಥೆ ಇಲ್ಲ. ಆದ್ದರಿಂದ ಈ ಎಲ್ಲ ವ್ಯವಸ್ಥೆಯ ಬಳಿಕವೇ ಇಲ್ಲಿ ರೈಲು ನಿಲುಗಡೆ ಆಗಬೇಕು ಎಂದು ಮನವಿಯಲ್ಲಿ ವಿವರಿಸಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಬಸವರಾಜ ಬೊಮ್ಮಾಯಿ, ಮನವಿಯ ಗಂಭೀರತೆಯನ್ನು ಅರಿತು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರ ಗಮನಕ್ಕೆ ತರುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ಹೀರಾಚಂದ್ರ ಸೆಮ್ಲಾನಿ, ಖಜಾಂಚಿ ಮಹಾವೀರ ಸೋಳಂಕಿ, ಸುರೇಶ ಓಸ್ವಾಲ, ಹರೀಶ್ ಶಹಾ, ಸುರೇಶ ಕೋಠಾರಿ, ಪೃಥ್ವಿರಾಜ ಬನಸಾಲಿ, ಮದನಲಾಲ ಲುಂಕಡ, ಪ್ರವೀಣ ಸಂಕಲೇಚಾ, ಸ್ವರೂಪ ದೂಖಾ, ಧೀರಜ್ ಭಾಪಣಾ, ರಾಜೇಂದ್ರ ಸಂಘವಿ, ಮೋಹನ ಪವಾರ, ಮಹಾವೀರ ಸಂಕಲೇಚಾ, ರಾಜೇಂದ್ರ ಪಾಲರೇಚಾ, ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ರಾಜು ಕುರಡಗಿ ಮುಂತಾದವರಿದ್ದರು.

ಬ್ಯಾಂಕುಗಳು ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲಿ: ಸಂಸದ ಬಸವರಾಜ ಬೊಮ್ಮಾಯಿ

0
  • ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಗದಗ: ಬ್ಯಾಂಕುಗಳು ಕೇವಲ ಹಣಕಾಸು ಸಂಸ್ಥೆಗಳಲ್ಲ, ಸಮಾಜದ ಆರ್ಥಿಕ ಚಲನೆಗೆ ದಿಕ್ಕು ತೋರಿಸುವ ಪ್ರಮುಖ ಸಂಸ್ಥೆಗಳಾಗಿವೆ. ಬ್ಯಾಂಕುಗಳಲ್ಲಿ ಇರುವ ಹಣ ಸಂಪೂರ್ಣವಾಗಿ ಸಾರ್ವಜನಿಕರದ್ದೇ ಆಗಿದ್ದು, ಆ ಹಣವನ್ನು ಸ್ಥಳೀಯವಾಗಿ ಸದ್ಬಳಕೆ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಹಕಾರ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಗ್ರಹವಾಗುವ ಬ್ಯಾಂಕ್ ಹಣವನ್ನು ಇದೇ ಪ್ರದೇಶದ ಅಭಿವೃದ್ಧಿಗೆ ಬಳಸಬೇಕು. ಇದರಿಂದ ಉದ್ಯೋಗ ಸೃಷ್ಟಿ, ವ್ಯಾಪಾರ ವೃದ್ಧಿ ಹಾಗೂ ಗ್ರಾಮೀಣ ಆರ್ಥಿಕ ಬಲವರ್ಧನೆ ಸಾಧ್ಯವಾಗುತ್ತದೆ. ಈ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು ಎಂದು ಸಂಸದರು ಅಭಿಪ್ರಾಯಪಟ್ಟರು.

ರೈತರು, ಮಹಿಳೆಯರು, ಯುವ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ದೊರಕುವಂತೆ ಬೃಹತ್ ಮಟ್ಟದಲ್ಲಿ ಲೋನ್ ಮೇಳಗಳನ್ನು ಆಯೋಜಿಸಬೇಕು. ಸಾಲ ಅರ್ಜಿಗಳ ಪ್ರಕ್ರಿಯೆ ಸರಳವಾಗಿರಬೇಕು. ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ಅಡೆತಡೆ ಆಗಬಾರದು ಎಂದು ಹೇಳಿದರು.

ಬಡತನ ನಿವಾರಣೆಯಲ್ಲಿ ಹೌಸಿಂಗ್ ಲೋನ್ ಮಹತ್ವದ ಪಾತ್ರ ವಹಿಸುತ್ತದೆ. ಸ್ವಂತ ಮನೆ ಹೊಂದುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನಮಟ್ಟ ಸುಧಾರಿಸುತ್ತದೆ. ಈ ಹಿನ್ನೆಲೆಯಲ್ಲಿ ಗೃಹ ಸಾಲ ವಿತರಣೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಂಸದರು ಸಲಹೆ ನೀಡಿದರು.

ಬ್ಯಾಂಕುಗಳು ಕಚೇರಿಗಳಿಗೆ ಸೀಮಿತವಾಗದೆ ಜನರ ಬಳಿಗೆ ಹೋಗಬೇಕು. ಸಾಲ ಮಂಜೂರಾತಿಯಲ್ಲಿ ವಿಳಂಬವಾಗಬಾರದು. ಅರ್ಹರಿಗೆ ಯಾವುದೇ ಅಡಚಣೆ ಇಲ್ಲದೆ ಸಾಲ ಸೌಲಭ್ಯ ದೊರೆಯಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಎಂ.ವಿ ಮಾತನಾಡಿ, ಜಿಲ್ಲೆಯಲ್ಲಿ 31-12-2025ರವರೆಗೆ ಲೀಡ್ ಬ್ಯಾಂಕ್‌ನ 183 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 2025ರವರೆಗೆ ಜಿಲ್ಲೆಯ ಸಾಲ ಠೇವಣಿ ಅನುಪಾತ ಶೇ. 102.18ರಷ್ಟಾಗಿರುತ್ತದೆ. ಎಲ್ಲ ಬ್ಯಾಂಕ್‌ನ ನಿಯಂತ್ರಣಾಧಿಕಾರಿಗಳು ಸಾಲ ಠೇವಣಿ ಅನುಪಾತವನ್ನು ಸುಧಾರಿಸಲು ಶಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಲ ಯೋಜನೆಗಳಾದ ಪ್ರಧಾನಮಂತ್ರಿ ಮುದ್ರಾ ಯೋಜನೆ, ಉದ್ಯೋಗಿನಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸ ಹಿಂದುಳಿದ ಅಭಿವೃದ್ಧಿ ನಿಗಮ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂನ ಎನ್‌ಆರ್‌ಎಲ್‌ಎಂ (ಸ್ವ-ಸಹಾಯ ಗುಂಪು), ಪಿಎಂಎವೈ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ, ಪಿಎಂಎಫ್‌ಬಿವೈ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಬಾರ್ಡ್‌ನ ಎಜಿಎಂ ಮಯೂರ ಕಾಂಬ್ಳೆ, ಆರ್‌ಬಿಐ ಎಜಿಎಂ ಸೂರಜ ಎಸ್, ಎಸ್‌ಬಿಐ ರೀಜನಲ್ ಮ್ಯಾನೇಜರ್ ನಾಗಸುಬ್ಬಾರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕು. ಸರ್ಕಾರದ ಜನಪರ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಬ್ಯಾಂಕುಗಳು ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಬೇಕು. ಲಾಭವೇ ಮುಖ್ಯ ಎಂಬ ಮನೋಭಾವವನ್ನು ಬಿಟ್ಟು, ಬ್ಯಾಂಕುಗಳು ಸ್ಥಾಪನೆಯಾದ ಮೂಲ ಉದ್ದೇಶವನ್ನು ಮೊದಲು ಈಡೇರಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಾಳೆ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಸಿಎಂ ಸಿದ್ದರಾಮಯ್ಯ!

0

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹಾವೇರಿಯ ನೂತನ ಮೆಡಿಕಲ್ ಕಾಲೇಜು ಹಾಗೂ ಐಬಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದ್ದಾರೆ. ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಿಎಂ ಹಾಗೂ ಡಿಸಿಎಂ ಅವರು ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ ಸದಾಶಿವ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.

ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಶೀಘ್ರದಲ್ಲಿ ಉದ್ಘಾಟನೆ ಆಗಬೇಕೆಂಬ ಆಸೆ ಇತ್ತು. ಲೋಕಸಭೆ ಚುನಾವಣೆಗೆ ಮುಂಚೆಯೇ ಕಟ್ಟಡ ಉದ್ಘಾಟನೆ ಮಾಡುವ ಉದ್ದೇಶ ಇದ್ದರೂ, ಕೇಂದ್ರದ ನಾಯಕರು ಬರಲಿದ್ದಾರೆ ಎಂಬ ಕಾರಣದಿಂದ ಉದ್ಘಾಟನೆ ಸ್ವಲ್ಪ ತಡವಾಯಿತು. ಕೇಂದ್ರ ನಾಯಕರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡಿದ್ದರು ಎಂದರು.

ಈ ಮೆಡಿಕಲ್ ಕಾಲೇಜು ಆರಂಭವಾದರೆ ಹಾವೇರಿ ಜಿಲ್ಲೆಯ ಜನರು ಚಿಕಿತ್ಸೆಗಾಗಿ ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುವ ಅಗತ್ಯ ಕಡಿಮೆಯಾಗಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಅವರ ಅಧಿಕಾರದ ಅವಧಿಯಲ್ಲಿ ಮೆಡಿಕಲ್ ಕಾಲೇಜು ಉದ್ಘಾಟನೆ ಆಗುತ್ತಿರುವುದು ಇದೇ ಮೊದಲ ಬಾರಿಗೆ. ತಾನು ಉಸ್ತುವಾರಿ ವಹಿಸಿರುವ ಜಿಲ್ಲೆಗೆ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಸಿಎಂ ಹಾಗೂ ಡಿಸಿಎಂ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

error: Content is protected !!