Home Blog Page 215

ತುಮಕೂರು| ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಸೂಸೈಡ್

0

ತುಮಕೂರು:- ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ಮಕ್ಕಳ ಜೊತೆ ಸಂಪಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ವಿಜಯಲಕ್ಷ್ಮಿ ಎಂಬ ಮಹಿಳೆಯು, ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಅಷ್ಟೇ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು.

ಆದರೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂದೆ ಇದ್ದ ಸಂಪಿನಲ್ಲಿ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮೂವರ ಮೃತದೇಹ ಹೊರ ತೆಗೆದಿದ್ದಾರೆ. ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಸಾವಿನ ಕಾರಣ ನಿಗೂಢವಾಗಿದೆ. ಪೋಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

ಮದುವೆಗೆ ಒಪ್ಪದ ಪ್ರಿಯತಮೆ; ಮನನೊಂದು ಯುವಕ ನೇಣಿಗೆ ಶರಣು

0

ಕಾರವಾರ:- ಪ್ರೀತಿಸಿದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಜರುಗಿದೆ.

ಪವನ್ ಭಟ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧವನ್ನ ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಡ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

ಈ ನಿರಾಕರಣೆಯಿಂದ ಮನನೊಂದ ಪವನ್ ಭಟ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೌರ್ಜನ್ಯ ಪೀಡಿತ ಕುಟುಂಬಕ್ಕೆ ಭರವಸೆ ಮೂಡಿಸಿ: ಟಿ. ಶಾಮ್ ಭಟ್ 

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದ ದಲಿತ ದೌರ್ಜನ್ಯ ಪೀಡಿತ ಕುಟುಂಬ ಸದಸ್ಯರ ಭೇಟಿ ಮತ್ತು ಗ್ರಾಮದಲ್ಲಿನ ವಾಸ್ತವಿಕ ಪರಿಸ್ಥಿತಿಯ ಅಧ್ಯಯನದ ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.

ಸಭೆಯಲ್ಲಿ ಟಿ. ಶಾಮ್ ಭಟ್ ಮಾತನಾಡಿ, ದೌರ್ಜನ್ಯ ಪೀಡಿತ ಕುಟುಂಬಕ್ಕೆ ಭದ್ರತೆ ಕುರಿತು ಸಂಪೂರ್ಣ ಭರವಸೆ ಮೂಡಿಸಬೇಕು. ಗ್ರಾಮದಲ್ಲಿ ಎಲ್ಲ ಕುಟುಂಬಗಳು ಪ್ರಕರಣ ಪೂರ್ವದಲ್ಲಿ ಇದ್ದಂತೆ ಅನ್ಯೋನ್ಯವಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ವಾಸಿಸುವಂತೆ ವಾತಾವರಣ ರೂಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಗ್ರಾಮದಲ್ಲಿ ಮತ್ತಷ್ಟು ಸಭೆಗಳನ್ನು ಆಯೋಜಿಸಬೇಕು. ಗ್ರಾಮಸ್ಥರಲ್ಲಿ ಆಗಲಿ ಅಥವಾ ದೊಡಮನಿ ಕುಟುಂಬದಲ್ಲಿ ಯಾವುದೇ ಭಯದ ವಾತಾವರಣ ಇರದಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಕುಟುಂಬ ಸದಸ್ಯರ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ಡಿಸಿಆರ್‌ಇ ಡಿವೈಎಸ್‌ಪಿ ಸಂದೀಪಸಿಂಗ್ ಮುರಗೋಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್. ಹೊನಕೇರಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಎಮ್.ಎಸ್, ತಹಸೀಲ್ದಾರ ಜಿ.ಆರ್. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ವೀರಭದ್ರಪ್ಪ ಕಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಕರಣದ ತನಿಖೆಯನ್ನು ಈಗಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್ ಇಲಾಖೆ ತನಿಖೆಗೆ ಸಹಕಾರ ನೀಡಿ, ಗ್ರಾಮದಲ್ಲಿ ಅಗತ್ಯವಿದ್ದರೆ ಇನ್ನಷ್ಟು ಸೂಕ್ತ ಬಂದೋಬಸ್ತ್ ಕ್ರಮವಹಿಸಬೇಕು. ಡಿಸಿಆರ್‌ಇ ಪಾರದರ್ಶಕ ತನಿಖೆ ಮಾಡಿ ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು. ಜಿಲ್ಲಾಡಳಿತ ಪ್ರಕರಣದ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದು ಆಯೋಗಕ್ಕೆ ಸಲ್ಲಿಸಬೇಕು. ಗ್ರಾಮದ ಶಾಂತಿ, ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಟಿ. ಶಾಮ್ ಭಟ್ ಹೇಳಿದರು.

ಜ. 15ರಂದು ಹರಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಮಕರ ಸಂಕ್ರಾತಿ ಹಬ್ಬದ ಅಂಗವಾಗಿ ಜನವರಿ 15ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹರಜಾತ್ರೆ ನಡೆಯಲಿದ್ದು, ಈ ವೇಳೆ ಕಿತ್ತೂರು ರಾಣಿ ಚನ್ನಮ್ಮಾಜೀ ದ್ವಿಶತಮಾನ ವಿಜಯೋತ್ಸವ ಸಮಾರೋಪ ಸಮಾರಂಭ, ಲಿಂ. ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 13ನೇ ವರ್ಷದ ಪುಣ್ಯ ಸ್ಮರಣೋತ್ಸವ, ವಚನಾನಂದ ಮಹಾಸ್ವಾಮಿಗಳವರ ಅಷ್ಟಮ ವಾರ್ಷಿಕ ಪೀಠಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರದ ಪಂಚಮಸಾಲಿ ಗುರುಗಳಾದ ವಚನಾನಂದ ಶ್ರೀಗಳು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಹರಿಹರದ ಪೀಠದಲ್ಲಿ 2020ರಿಂದ ಹರಜಾತ್ರಾ ಮಹೋತ್ಸವ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ ಎಂದರು.

ಹಾವೇರಿಯ ಖ್ಯಾತ ವೈದ್ಯ ಡಾ. ಬಸವರಾಜ ವೀರಾಪೂರ ಅವರನ್ನು 2026ರ ಹರಜಾತ್ರೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲೆಯ ಸಮಾಜ ಬಾಂಧವರು ಹರಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಪ್ರಸಕ್ತ ವರ್ಷದಿಂದ ಹರಿಹರ ಪೀಠದಿಂದ ವೀರರಾಣಿ ಕಿತ್ತೂರ ಚನ್ನಮ್ಮಳ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ 2026ರ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಅಖಿಲ ಕರ್ನಾಟಕ ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ವೀರಣ್ಣ ಕರಿಬಿಷ್ಠಿ, ಎಸ್.ವಿ. ಪಲ್ಲೇದ, ಬಸವರಾಜ ವೀರಾಪೂರ, ಮೋಹನ್ ಲಿಂಬೆಕಾಯಿ, ಎಫ್.ವ್ಹಿ. ಮರಿಗೌಡ, ವಸಂತ ಪಡಗದ, ಅಶೋಕ ಸಂಕಣ್ಣನವರ, ಮಂಜು ಮಾಗಡಿ, ಮೋಹನ್ ಮಾಳಶೆಟ್ಟಿ, ಅನಿಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಹಿಂದಿನ ಜಾತ್ರಾ ಅವಧಿಯಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು. ಸುಮಾರು 6,543 ಯುವಕ-ಯುವತಿಯರು ಭಾಗವಹಿಸಿದ್ದರು. 14ಕ್ಕೂ ಹೆಚ್ಚು ವಿವಿಧ ಕಂಪನಿಗಳು ಹಾಜರಿದ್ದವು. ಈ ವೇಳೆ ಸುಮಾರು 6,453 ಉದ್ಯೋಗಗಳು ಸೃಷ್ಟಿಯಾದವು. ಶೈಕ್ಷಣಿಕ ಶೃಂಗ ಸಭೆ ನಡೆಸಲಾಗಿತ್ತು. ರಾಜ್ಯದ ವಿಶ್ವವಿದ್ಯಾಲಯದ ಕುಲಪತಿಗಳನ್ನು ಕರೆತಂದು ಮಾಹಿತಿ ನೀಡಲಾಯಿತು. ಅದರಂತೆ ಪ್ರಸಕ್ತ ವರ್ಷ ಕಿತ್ತೂರ ಚನ್ನಮ್ಮ ವಿಜಯೋತ್ಸವದ ದ್ವಿಶತಮಾನೋತ್ಸವದ ಸಮಾರೋಪ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಶಾಸಕರಿಗೊಂದು, ಜನಸಾಮಾನ್ಯರಿಗೊಂದು ಕಾನೂನೇ?!: ರಾಜು ಖಾನಪ್ಪನವರ 

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪಿ.ಎಸ್.ಐ ಈರಣ್ಣ ರಿತ್ತಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗಮಿಸುವ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈರಣ್ಣ ರಿತ್ತಿ ವರ್ಗಾವಣೆಗೆ ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಆಗಿಲ್ಲ. ಈರಣ್ಣ ರಿತ್ತಿ ಭ್ರಷ್ಟ ಅಧಿಕಾರಿಯಾಗಿದ್ದು, ಲಂಚದ ರೂಪದಲ್ಲಿ ಪಡೆದ ಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ನೀಡುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಬೆಳಿಗ್ಗೆ ನೇಮಕವಾದ ಎಸ್ಪಿ ಅವರನ್ನು ರಾತ್ರೋರಾತ್ರಿ ವರ್ಗಾವಣೆಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ದ್ವಿಮುಖ ನೀತಿಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರಥಮವಾಗಿ ಬಳ್ಳಾರಿಯಲ್ಲಿ ವೈಯಕ್ತಿಕ ಗನ್‌ಮ್ಯಾನ್‌ನಿಂದ ಯುವಕನ ಕೊಲೆ ನಡೆದಿದೆ. ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ಉದ್ದೇಶವೇನಿತ್ತು? ರೆಡ್ಡಿ ಕುಟುಂಬವನ್ನು ಮುಗಿಸುವ ಹುನ್ನಾರ ರಾಜ್ಯ ಸರ್ಕಾರದಿಂದ ನಡೆದಿರಬಹುದು ಎಂಬ ಅನುಮಾನವಿದೆ. ಘಟನೆಗೆ ಸಂಬಂಧಿಸಿದಂತೆ ಎಂಟು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿಲ್ಲ. ಶಾಸಕರಿಗೊಂದು, ಜನಸಾಮಾನ್ಯರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದ ಅವರು, ಈ ಮೂಲಕ ಡಾ. ಅಂಬೇಡ್ಕರ್ ಬರೆದ ಕಾನೂನಿಗೆ ಅವಮಾನ ಮಾಡಲಾಗುತ್ತಿದೆ ಎಂದರು.

ಜಗತ್ತಿಗೆ ರಾಮನನ್ನು ಸರಳವಾಗಿ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಬಳ್ಳಾರಿಯಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಬೆಂಬಲಿಗರು ಬಳ್ಳಾರಿಯಲ್ಲಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ತಮ್ಮ ಶಾಸಕರನ್ನು ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೊಲೆಯಾದ ಯುವಕನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕುಮಾರ ನಡಗೇರಿ, ಶಿವಯೋಗಿ ಹಿರೇಮಠ, ಈರಣ್ಣ ಪೂಜಾರ, ಪಿ.ಎಸ್. ಕಾಳೆ, ಸೋಮು ಗುಡಿ, ಹುಲಗಪ್ಪ ವಾಲ್ಮೀಕಿ, ಸುನೀಲ ಮುಳ್ಳಾಳ, ಸತೀಶ್ ಕುಂಬಾರ, ಹರೀಶ್ ಗೋಸಾವಿ, ವೆಂಕಟೇಶ್ ದೊಡ್ಡಮನಿ, ಕಿರಣ್ ಹಿರೇಮಠ ಉಪಸ್ಥಿತರಿದ್ದರು.

“ಜ. 7ರಂದು ರಾಜ್ಯ ಸರ್ಕಾರದ ದ್ವಿಮುಖ ನೀತಿ ಖಂಡಿಸಿ ಮುಳಗುಂದ ನಾಕಾದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಎಲ್ಲ ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು”

ರಾಜು ಖಾನಪ್ಪನವರ.
ರಾಜ್ಯ ಸಂಚಾಲಕ,
ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ.

ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಜ.9ರಂದು ತಜ್ಞ ವೈದ್ಯರಿಂದ ಬೃಹತ್ ಉಚಿತ ಆರೋಗ್ಯ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಖ್ಯಾತ ವೈದ್ಯರುಗಳು ಅಗಲಿದ ಶಿಕ್ಷಕರ ಸ್ಮರಣಾರ್ಥ ಜ.9ರಂದು ಎಸ್.ಎಸ್. ಕೂಡ್ಲಮಠ ಶಾಲಾವರಣದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಹೇಳಿದರು.

ಅವರು ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 6 ದಶಕಗಳಿಂದ ಶಿಕ್ಷಣ ಸೇವೆಯಲ್ಲಿ ನಿರತವಾಗಿರುವ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಖ್ಯಾತ ವೈದ್ಯರುಗಳಾದ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಬಳಿಗಾರ, ಹೃದಯರೋಗ ತಜ್ಞರಾದ ಡಾ. ರವಿ ಸಾಲ್ಮನಿ, ಡಾವಣಗೆರೆ ಎಸ್.ಎಸ್. ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ, ಚಿಕ್ಕ ಮಕ್ಕಳ ತಜ್ಞರಾದ ಡಾ. ವಿನೋದ ರಟಗೇರಿ, ತಜ್ಞವೈದ್ಯರಾದ ಪ್ರದೀಪ ಕಲ್ಲೊಳ್ಳಿಮಠ, ಲಂಡನ್‌ನ ರೇಡಿಯೋಲಾಜಿಸ್ಟ್ ಡಾ. ರಾಜಶ್ರೀ ಪಾಟೀಲ ಸೇರಿ ಸ್ಥಳೀಯ ವೈದ್ಯರುಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.

ಆರೋಗ್ಯ ಶಿಬಿರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸುವರು, ಎಸ್.ಪಿ. ಬಳಿಗಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಗದಗ ಜಿಮ್ಸ್ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ, ಎಫ್.ಡಿ. ಹುನಗುಂದ ಉಪಸ್ಥಿತರಿರುವರು. ಸಂಜೆ ವಾರ್ಷಿಕ ಸ್ನೇಹ ಸಮ್ಮೇಳನ ಜರುಗಲಿದೆ ಎಂದು ಹೇಳಿದರು.

ಈ ವೇಳೆ ಸಿ.ಎಂ. ರಾಗಿ, ಎಚ್.ಎಫ್. ತಳವಾರ, ಬಿ.ಎಂ. ಕಳಸದ, ಎಂ.ಎನ್. ಪಾಟೀಲ, ವೀರಣ್ಣ ಪವಾಡದ, ಪ್ರವೀಣ ಕಾಳಪ್ಪನವರ, ರಮೇಶ ಅಣ್ಣಿಗೇರಿ, ಸಿ.ಬಿ. ಮುಗಳಿ, ಎಲ್.ಪಿ. ಲಮಾಣಿ, ಆರ್.ಎಂ. ಜಂಬೇರಾಳ ಮುಂತಾದವರಿದ್ದರು.

ಮಾನವ ಹಕ್ಕುಗಳ ಉಲ್ಲಂಘನೆಯಾಗಬಾರದು: ಟಿ. ಶಾಮ್ ಭಟ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಮಂಗಳವಾರ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರು.

ದಲಿತ ಕುಟುಂಬಗಳು ವಾಸಿಸುವ ಓಣಿ, ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ, ಕೃತ್ಯ ನಡೆದ ಸ್ಥಳ ಪರಿಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೊಲೀಸ್ ಅಧಿಕಾರಿಗಳಿಂದ ಹಾಗೂ ಇತರರಿಂದ ವಿವರವಾದ ಮಾಹಿತಿಯನ್ನು ಅವರು ಪಡೆದುಕೊಂಡರು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಟಿ. ಶಾಮ್ ಭಟ್ ಹೇಳಿದರು.

ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ದೊರಕುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿವೈಎಸ್‌ಪಿ ವಿನೋದ ಮುಕ್ತೆದಾರ, ತಹಸೀಲ್ದಾರ ಜಿ.ಆರ್. ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ, ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವೇಕಾನಂದ ದೊಡಮನಿ ಕುಟುಂಬದ ಸದಸ್ಯರು ಇದ್ದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಇನಾಂವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.

ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ: ಶ್ರೀ ಗಂಗಾಧರ ಮಹಾಸ್ವಾಮೀಜಿ 

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜೀವ ಉಳಿಸುವ ಮಹಾನ್ ಕಾರ್ಯವಾಗಿರುವ ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಎಂದು ಕೊತಬಾಳ ಶ್ರೀ ಗಂಗಾಧರ ಮಹಾಸ್ವಾಮೀಜಿ ಹೇಳಿದರು.

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಕೊಪ್ಪಳ ಶಾಖೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರೆಗಳಲ್ಲಿ ಇಂಥಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈ ಕಾರ್ಯ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ನೂರಾರು ಜನರು ರಕ್ತದಾನ ಮಾಡುತ್ತಾರೆ. ಅದು ಹಲವರ ಜೀವ ಉಳಿಸಲು ಕಾರಣವಾಗುತ್ತದೆ ಎಂದರು.

ಇಟಗಿಯ ಶ್ರೀ ಗುರುಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಕಾರ್ಯವಾಗಿದೆ. ಅರ್ಹ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.

ಅಭಿನವ ನಾಗಲಿಂಗ ಅವಧೂತರು, ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಶ್ರೀ ಬಸವಭೂಷಣ ಸ್ವಾಮೀಜಿ, ಶ್ರೀ ಯಶವಂತದೇವರು ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸ್ವಾಮಿಜಿಗಳು ಸಾನ್ನಿಧ್ಯ ವಹಿಸಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ ಡಾ. ಶ್ರೀನಿವಾಸ ಹ್ಯಾಟಿ, ಕೊಪ್ಪಳ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ, ಉಪಸಭಾಪತಿಗಳಾದ ಡಾ. ಸಿ.ಎಸ್. ಕರಮುಡಿ, ಡಾ. ಮಂಜುನಾಥ, ನಿರ್ದೇಶಕರಾದ ಡಾ. ಶಿವನನಗೌಡ, ಡಾ. ಗವಿಸಿದ್ದನಗೌಡ, ರಾಜೇಶ ಯಾವಗಲ್, ಡಾ. ಸುರೇಶ ಹಕ್ಕಂಡಿ, ಡಾ. ಪರಮೇಶ್ವರ ಮೊದಲಾದವರು ಇದ್ದರು.

ಮನುಷ್ಯನಿಗೆ ಧರ್ಮ ಪರಿಪಾಲನೆ ಮುಖ್ಯ: ಶ್ರೀ ರಂಭಾಪುರಿ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಮಾನವ ಜನಾಂಗಕ್ಕೆ ದೇವರು ಕೊಟ್ಟ ಕೊಡುಗೆ ಅಪಾರ. ನಿಂತ ನೆಲ, ಹರಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಇವೆಲ್ಲಾ ದೇವರ ಕೊಡುಗೆ. ಅನ್ನ-ನೀರಿನಷ್ಟೇ ಮನುಷ್ಯನಿಗೆ ಧರ್ಮ ಪರಿಪಾಲನೆಯ ಅವಶ್ಯಕತೆ ಇದೆ. ಮನುಷ್ಯ ಹಲವಾರು ವ್ಯಸನಗಳಿಗೆ ಈಡಾಗಿ ಸಂಕಷ್ಟಕ್ಕೀಡಾಗುತ್ತಿದ್ದಾನೆ. ದುರ್ವ್ಯಸನಗಳಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಬುಕ್ಕಾಂಬುಧಿ ಗ್ರಾಮದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಟ್ಟದವರೆಗೆ ಪ್ರಾರಂಭಗೊಂಡ ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಬೆಳ್ಳಿ ಪುತ್ಥಳಿ ಮೆರವಣಿಗೆ ಸಂದರ್ಭದಲ್ಲಿ ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ಪಾಲ್ಗೊಂಡು ಪುಷ್ಪಾರ್ಚನೆಗೈದು ಚಾಲನೆಯಿತ್ತು ಲಿಖಿತ ಆಶೀರ್ವಚನ ನೀಡಿದರು.

ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಎಲ್ಲರೂ ಸುಖ ಬಯಸುವರೇ ವಿನಃ ಕಷ್ಟ ಯಾರಿಗೂ ಬೇಕಾಗಿಲ್ಲ. ಹೊರಗೆ ಬಡತನವಿದ್ದು, ಒಳಗೆ ಸಿರಿತನ ಇದ್ದರೆ ಬದುಕು ಬಲು ಸುಂದರ. ಹೊರಗೆ ಸಿರಿತನವಿದ್ದು ಒಳಗೆ ಬಡತನ ಇದ್ದರೆ ಬದುಕಿನ ಬಂಡಿ ಸುಗಮವಾಗಿ ಸಾಗದು. ಹೃದಯ ಶ್ರೀಮಂತಿಕೆಯಿಲ್ಲದೇ ಬುದ್ಧಿ ಶ್ರೀಮಂತಿಕೆ ಎಷ್ಟಿದ್ದರೂ ಪ್ರಯೋಜನವಿಲ್ಲ. ನೀರು ಎರೆದವರಿಗೂ ಕಡಿಯ ಬಂದವರಿಗೂ ಭೇದ-ಭಾವ ಎಣಿಸದೇ ವೃಕ್ಷವು ನೆರಳು, ಹಣ್ಣು ಕೊಡುತ್ತದೆ. ಅದರಂತೆ ಮಹಾತ್ಮರು ಯಾರಿಗೂ ಕೆಡಕು ಬಯಸದೇ ಹಿತವನ್ನೇ ಬಯಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀಮತ್ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆ ಹೋರಾಟ ಅನಿವಾರ್ಯ. ಸತ್ಯಕ್ಕಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ಸತ್ಯ ಧರ್ಮದ ರಕ್ಷಾ ಕವಚ. ಸುಳ್ಳಿಗೆ ಸುಣ್ಣ-ಬಣ್ಣ ಹಚ್ಚಬಹುದು. ನೈಜ ಸತ್ಯಕ್ಕೆ ಅದ್ಯಾವುದರ ಅವಶ್ಯಕತೆಯಿಲ್ಲ. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅಗತ್ಯವೋ ಹಾಗೆಯೇ ನೊಂದ ಮನಕ್ಕೆ ಆಧ್ಯಾತ್ಮಿಕ ಜ್ಞಾನ ಅವಶ್ಯಕವಾಗಿದೆ ಎಂದರು.

ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸ್ನೇಹ, ಸಂತೃಪ್ತಿ ಮತ್ತು ಸಂತೋಷಗಳೇ ಜೀವನದ ನಿಜವಾದ ಐಶ್ವರ್ಯ. ದುರ್ಜನರ ಸಹವಾಸದಿಂದ ದೂರವಿದ್ದು ಸಜ್ಜನರ ಸಹವಾಸ ಮಾಡುವುದು ಶ್ರೇಯಸ್ಕರ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸಬೇಕೆಂಬ ಸಂಕಲ್ಪದೊಂದಿಗೆ ಪಾದಯಾತ್ರೆ ನಡೆಸಿದರು. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಶಿವಾಚಾರ್ಯರು, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು ಸೇರಿದಂತೆ ಸಿದ್ಧರಬೆಟ್ಟ, ಹುಣಸಘಟ್ಟ, ನಂದೀಪುರ, ಮಳಲಿ, ಹಣ್ಣೆ, ಕೆ.ಬಿದರೆ, ಅಂಬಲದೇವರಹಳ್ಳಿ, ಬೀರೂರು ಮೊದಲಾದ ಶ್ರೀಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸಾನ್ನಿಧ್ಯ ವಹಿಸಿದ ಇಂದಿನ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಸಂಪತ್ತಿನಿಂದ ಸಿಗುವ ಸುಖ ಸೌಕರ್ಯಗಳು ಬೇಕು. ಅವುಗಳನ್ನು ಪಡೆಯಲು ಶ್ರಮ ಮತ್ತು ಸಾಧನೆ ಬೇಡವಾಗಿದೆ. ಅಧರ್ಮ ದಾರಿಯಲ್ಲಿ ನೂರು ಹೆಜ್ಜೆ ಹಾಕುವುದಕ್ಕಿಂತ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದು ತೋರಿದ ಮಹಾತ್ಮರ ದಾರಿಯಲ್ಲಿ ನಡೆದರೆ ಒಳ್ಳೆಯದು. ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಶಿವಯೋಗ ಸಾಧನೆ ಮಾಡಿದ ತಪಸ್ಸು ಮತ್ತು ಬೋಧಿಸಿದ ಚಿಂತನಗಳು ಎಂದೆಂದಿಗೂ ನಮ್ಮೆಲ್ಲರಿಗೂ ದಾರಿದೀಪವೆಂದರು.

ಲವ್ ಮ್ಯಾರೇಜ್ ಗೆ ವಿರೋಧ; ನಡುರಸ್ತೆಯಲ್ಲೇ ನವ ಜೋಡಿ ಮೇಲೆ ಯುವತಿ ಕುಟುಂಬಸ್ಥರಿಂದ ಅಟ್ಯಾಕ್..!

0

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ಪ್ರೀತಿಸಿ ಮದುವೆಯಾಗಿದ್ದ ನವದಂಪತಿಗಳ ಮೇಲೆ ಯುವತಿ ಕುಟುಂಬದವರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ಮೂಲದ ಎಸ್‌ಟಿ ಸಮುದಾಯದ ಸಂದೀಪ್ (24) ಮತ್ತು ಬಲಿಜಿಗ ಸಮುದಾಯದ ಕೀರ್ತನಾ (19) ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಇವರು ಎರಡು ದಿನದ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮನೆಯಲ್ಲಿ ಮಗಳು ಕಾಣದಿರುವ ಸಂಬಂಧ ಕೀರ್ತನ ಪೋಷಕರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಅದರಂತೆ ರಕ್ಷಣೆ ಕೋರಿ ಇಂದು ಪೊಲೀಸ್ ಠಾಣೆಗೆ ನವದಂಪತಿ ಬರುತ್ತಿದ್ದ ವೇಳೆ ಕಾರಿನ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್‌ ಮಾಡಿದ್ದಾರೆ. ಪರಿಣಾಮ ಕಾರಿನ‌ ಗಾಜು ಪುಡಿಪುಡಿಯಾಗಿದೆ. ಪೊಲೀಸರ ಮುಂದೆ ಮಗಳನ್ನ ವಾಪಸ್‌ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ ಯುವತಿ ನಾನು ಯಾವುದೇ ಕಾರಣಕ್ಕೂ ತಂದೆ-ತಾಯಿ ಜೊತೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಇದೀಗ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಎರಡು ಕುಟುಂಬಸ್ಥರು ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.

error: Content is protected !!