Home Blog Page 2166

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ: ಜೋಳದ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ಆರೋಪಿ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗೋವಿನ ಜೋಳದ ಬೆಳೆ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಸಂಜೀವಪ್ಪ ದೇವಪ್ಪ ಗುಂಡಿಕೇರಿ ಬಂಧಿತ ಆರೋಪಿಯಾಗಿದ್ದಾನೆ.

ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಜಮೀನಿನಲ್ಲಿ ಗೋವಿನ ಜೋಳದ ಮಧ್ಯೆ ಬೆಳೆದಿದ್ದ 1.250 ಕೆಜಿ ಗಾಂಜಾ ಬೆಳೆಯನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿತನನ್ನು ಮಾಲು ಸಮೇತ ಬಂಧಿಸಿದ್ದಾರೆ.

ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ಒಂದು ವಾರದ ಹಿಂದೆ ಜಾನುವಾರು ಮೇಯಿಸಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ರಾಂಪುರ ಗ್ರಾಮದ ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಗುರುವಾರ ಬೆಳಗಿನ‌ ವೇಳೆ ಆನೆಗೊಂದಿ ಬಳಿ‌ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ.

ಗ್ರಾಮಸ್ಥರ ಆಕ್ರೋಶದ ನಡುವೆ ನಾಲ್ಕು ಬೋನ್‌ಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು.

ಮೂರ್ನಾಲ್ಕು ಚಿರತೆಗಳಿವೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ: ಶೇಖರಗೌಡ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:
ನಾಡಿನಾದ್ಯಂತ ಸಾಹಿತಿಗಳು, ಕಸಾಪ ಸದಸ್ಯರು ಹಾಗೂ ಮಠಾಧೀಶರು ಸೇರಿದಂತೆ ಪ್ರತಿಯೊಬ್ಬರು ತೋರುತ್ತಿರುವ ಪ್ರೀತಿಯನ್ನು ನೋಡಿದರೇ ನನಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಬುಧವಾರ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಭೇಟಿಯಾಗಿ, ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆಲ್ಲುವ ವಿಶ್ವಾಸ ಹೆಚ್ಚುತ್ತಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಯಾಗಿರುವ ನಾನು ರಾಜ್ಯದ ಬಹುತೇಕ ಜಿಲ್ಲೆಗಳನ್ನು ಸುತ್ತಾಡಿದ್ದೇನೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ, ಬೆಂಗಳೂರು ಭಾಗದ ಜಿಲ್ಲೆಗಳು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನು ನಿರೀಕ್ಷೆ ಮಾಡಿದ್ದಕ್ಕೂ ಮೀರಿ ಸಾಹಿತಿಗಳು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ ಎಂದರು.

ನಾನು ನೆಪ ಮಾತ್ರ ಎನ್ನುವಂತೆ ಅವರೇ ಸ್ವಯಂ ಪ್ರೇರಣೆಯಿಂದ ಈಗಾಗಲೇ ನನ್ನ ಪರವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.
ಇದರಿಂದ ನನಗೆ ಅತೀವ ವಿಶ್ವಾಸ ಮೂಡಿದ್ದು, ಇನ್ನು ಹೆಚ್ಚು ಹೆಚ್ಚು ಬೆಂಬಲ ಪಡೆಯುವುದಕ್ಕಾಗಿ ಸುತ್ತಾಟ ನಡೆಸಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಇದುವರೆಗೂ ಸಾಮಾನ್ಯ ವರ್ಗವನ್ನು ಮತ್ತು ಗ್ರಾಮೀಣ ಪ್ರದೇಶವನ್ನು ತಲುಪಿಲ್ಲ ಎನ್ನುವ ಆರೋಪ ಇದ್ದು, ಇದನ್ನು ತೊಡೆದು ಹಾಕಬೇಕು ಎನ್ನುವುದೇ ಹೆಬ್ಬಯಕೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇನ್ನಷ್ಟು ಅರ್ಥಪೂರ್ಣ ಮಾಡುವುದು ಮತ್ತು ನೂತನ ಬರಹಗಾರರನ್ನು ಗುರತಿಸುವ ಪ್ರಯತ್ನ ಮಾಡಬೇಕು ಎಂದುಕೊಂಡಿದ್ದೇನೆ.

ಇದೆಲ್ಲಕ್ಕಿಂತ ಮಿಗಿಲಾಗಿ ಸಾಹಿತ್ಯ ಸಮ್ಮೇಳನ ಕೇವಲ ಒಂದು ವರ್ಗದ ಸಮ್ಮೇಳನವಾಗದೆ ಅದನ್ನು ಇಡೀ ನಾಡಿನ ಜನಜಾತ್ರೆ ಮಾಡಬೇಕಾಗಿದೆ. ಅದಕ್ಕೊಂದು ಸಾಮಾಜಿಕ ಜಾಗೃತಿಯ ಸ್ಪರ್ಶ ನೀಡಬೇಕಾಗಿದೆ. ಈ ರೀತಿಯ ಕನಸು ಕಟ್ಟಿಕೊಂಡಿರುವ ನಾನು ಅವಕಾಶವನ್ನು ನೀಡುವಂತೆ ಮನವಿ ಮಾಡಿದ್ದಕ್ಕೆ ಉತ್ತಮ ಪ್ರತಿಕ್ರಿಯೇ ಮತ್ತು ಪ್ರೀತಿ ವ್ಯಕ್ತವಾಗುತ್ತಿರುವುದರಿಂದ ನನ್ನ ಉತ್ಸಾಹ ಇಮ್ಮಡಿಯಾಗಿದೆ ಎಂದು ತಿಳಿಸಿದರು.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಹ ನನಗೆ ಆಶಿರ್ವಾದ ಮಾಡಿದ್ದು ಸಂತೋಷವಾಗಿದೆ. ಅವರ ಆಶಿರ್ವಾದ ಇರುವುದು ನನ್ನ ಹೋರಾಟಕ್ಕೆ ನೂರಾನೆ ಬಲ ಬಂದಿದೆ ಎಂದರು.

ಕಸಪಾ ಕೊಪ್ಪಳ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಶರಣೇಗೌಡ ಪೊಲೀಸ್ ಪಾಟೀಲ್, ರಾಮಚಂದ್ರ ಗೊಂಡಬಾಳ, ಚನ್ನಪ್ಪ ಕಡ್ಡಿಪುಡಿ, ಈಶಪ್ಪ ದಿನ್ನಿ, ನಾಗರಾಜನಾಯಕ ಡೊಳ್ಳಿನ, ರುದ್ರೇಶ ಅರಾಳ, ಹಾಲಯ್ಯ ಹುಡೇಜಾಲಿ, ವೀರೇಶ ತಾಳಿಕೋಟಿ, ಹಾವೇರಿ ಎಂ. ಎಸ್. ದಂಡಿನ್ ಮೊದಲಾದವರು ಇದ್ದರು.

ಬಿಟಿ ಹತ್ತಿಯಲ್ಲಿ ಗಾಂಜಾ ಬೆಳೆ; ಆರೋಪಿ ಅಂದರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಿಟಿ ಹತ್ತಿ ಬೆಳೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿ ಯೊಬ್ಬನನ್ನು ಮುಳಗುಂದ ಪೊಲೀಸರು ಬಂಧಿಸಿದ್ದಾರೆ.

ಚನ್ನಪ್ಪ ನಾಗಪ್ಪ ಆರೇರ್ ಎಂಬಾತನೇ ಬಂಧಿತ ಆರೋಪಿ. ಮುಳಗುಂದ ಸಮೀಪದ ಯಲಿಶಿರುಂದ ರಸ್ತೆಯಲ್ಲಿ ಇರುವ ತನ್ನ ಜಮೀನಿನಲ್ಲಿ ಕಳೆದ ಹಲವು ದಿನಗಳಿಂದ ಬಿಟಿ ಹತ್ತಿ ಬೆಳೆಯ ಮಧ್ಯ ಈ ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ‌ಪಡೆದ ಮುಳಗುಂದ ಪೊಲೀಸರು ದಾಳಿ ನಡೆಸಿ‌ 17 ಸಾವಿರ ರೂ ಮೌಲ್ಯದ ಗಾಂಜಾಗಿಡಗಳನ್ನು ಜಪ್ತಿ ಮಾಡಿದ್ದಾರೆ.

ಪಿಎಸ್ಐ ಸಚಿನ್ ಅಲಮೇಲಕರ್, ಎಎಸ್ ಐ ಎ ಕೆ ಮಾಳವಾಡ, ಸಿಬ್ಬಂದಿಗಳಾದ ಎಚ್ ಐ ಕಲ್ಲಣ್ಣವರ್, ಪ್ರಭಯ್ಯ ಕೊಡಬಾಳಮಠ, ಬಿ ಸಿ ಕೋಳಿವಾಡ, ಎನ್ ಎನ್ ದಳವಾಯಿ, ಡಿ ಐ ತಹಸೀಲ್ದಾರ ಈ ಕಾರ್ಯಾಚರಣೆಯಲ್ಲಿ ಇದ್ದರು.

ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸಿ; ಜಿಲ್ಲಾ ಮಂತ್ರಿ ನೇತೃತ್ವದಲ್ಲಿ ಕೊಪ್ಪಳ ಶಾಸಕ, ಸಂಸದರಿಂದ ಸಿಎಂಗೆ ಪ್ರಸ್ತಾವನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ವಿಶ್ವ‌ವಿದ್ಯಾಲಯ ಸ್ಥಾಪಿಸಬೇಕು ಎಂದು ಕೊಪ್ಪಳ‌ ಜಿ‌ಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಶಾಸಕ, ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದರು.

ಗಂಗಾವತಿ ತಾಲೂಕು ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ. ಅಲ್ಲದೇ ಜಿಲ್ಲೆಯ ಕೃಷಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ.

ಜಿಲ್ಲೆಯಲ್ಲಿ ಎರಡು ಕೃಷಿ ಸಂಶೋಧನಾ ಕೇಂದ್ರಗಳು, ಒಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಒಂದು ಕೃಷಿ ವಿಜ್ಞಾನ ಕೇಂದ್ರವಿದ್ದು, ಒಟ್ಟು 19 ವಿಜ್ಞಾನಿಗಳು ಮತ್ತು 20 ಬೋಧಕೇತರ ಸಿಬ್ಬಂದಿ ಇದ್ದಾರೆ. ಕೃಷಿ‌ ವಿವಿ ಸ್ಥಾಪನೆಗೆ ಬೇಕಾದ ಎಲ್ಲಾ ಅನುಕೂಲತೆ ಇದೆ. ಕೃಷಿಗೆ ಪೂರಕವಾದ ವಾತಾವರಣವನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ‌ ವಿವಿ ಅಗತ್ಯವಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಪದವಿ ಹೊಂದಲು 140 ಕಿ.ಮೀ. ದೂರದ ರಾಯಚೂರು ಇಲ್ಲವೇ 220 ಕಿ.ಮೀ ದೂರದ ಧಾರವಾಡಕ್ಕೆ ಹೋಗಬೇಕಿದೆ. ಇದರಿಂದ ಕೃಷಿ ಪದವಿ ತಂತ್ರಜ್ಞಾನ ಸಂಬಂಧ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಕೊಪ್ಪಳದಲ್ಲಿಯೇ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿವಿ ಸ್ಥಾಪಿಸಲು ಬೇಕಾದ ಭೂಪ್ರದೇಶ ಹಾಗೂ ನೀರಾವರಿ ಸೌಲಭ್ಯವಿರುತ್ತದೆ. ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅಗತ್ಯವಾದ ಪ್ರಯೋಗಾಲಯಗಳು, ವಸತಿ ನಿಲಯ, ವಡ್ಡರಹಟ್ಟಿ ಕ್ಯಾಂಪ್ ಡಿಎಟಿಸಿಯಲ್ಲಿ ಲಭ್ಯವಿದ್ದು, ಇವುಗಳನ್ನು ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅವಶ್ಯಕತೆಯಿದ್ದಲ್ಲಿ ಬಳಸಿಕೊಳ್ಳಬಹುದಾಗಿದೆ.

ಅಲ್ಲದೇ ಗಂಗಾವತಿ ನಗರವು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರೈಲು ಹಾಗೂ ಸಾರಿಗೆ ಸಂಪರ್ಕವನ್ನೂ ಸಹ ಹೊಂದಿದೆ. ಇಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿ ಹಾಗೂ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಬಿ.ಸಿ.ಪಾಟೀಲರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಪ್ರಸ್ತಾವನೆ ಸಲ್ಲಿಕೆಗೂ ಮುನ್ನ ವಿಕಾಸಸೌಧದ ಕೃಷಿ ಮಂತ್ರಿಗಳ ಕಚೇರಿಯಲ್ಲಿ ಕೃಷಿ ವಿವಿ ಸ್ಥಾಪನೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೆಸುಗೂರ, ಪರಣ್ಣ ಮನವಳಿ ಇದ್ದರು.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ ಆರೋಪಿತರಿಗೆ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ರೈಲು ನಿಲ್ದಾಣದ ಹತ್ತಿರದ ರಸ್ತೆ ಮೇಲೆ ನಿಂತುಕೊಂಡಿದ್ದ ಗಂಗಾವತಿ ನಿವಾಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ವೇಶ್ಯಾವಾಟಿಕೆಗೆ ಬಳಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ(ಪೋಕ್ಸೋ) ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2014 ರ ನವೆಂಬರ್ 18 ರಂದು ಸಂಜೆ 6 ಗಂಟೆಗೆ ಕೊಪ್ಪಳ ರೈಲು ನಿಲ್ದಾಣದ ಮುಂದೆ ರಸ್ತೆ ಮೇಲೆ ನಿಂತಿದ್ದ ಅಪ್ರಾಪ್ತ ಬಾಲಕಿಯನ್ನು ಆಂಧ್ರಪ್ರದೇಶದ ಪರವೀನ್ ಗಂ.ಜಯರಾಮ ಎಂಬ ಮಹಿಳೆ ಅಪಹರಿಸಿ, ಆಂಧ್ರಪ್ರದೇಶದ ಪೆನಗೊಂಡ ನಗರದಲ್ಲಿನ ತನ್ನ ಮನೆಗೆ ಕರೆದೊಯ್ದು, ಬಾಲಕಿಯನ್ನು ಕೂಡಿ ಹಾಕಿ ರಾಮು ತಂ. ಬಾಬು ಮತ್ತು ಇತರರಿಂದ ಹಣ ಪಡೆದು ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಆರೋಪಿತರ ಮೇಲಿನ ಆರೋಪಗಳು ಸಾಬೀತಾಗಿದ್ದು, ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದ ಆರೋಪಕ್ಕಾಗಿ ಪರವೀನ್ ಗಂ.ಜಯರಾಮ ಎಂಬ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 45,000 ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ರಾಮು ತಂ. ಬಾಬು ಎಂಬ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.25,000 ಗಳ ದಂಡವನ್ನು ವಿಧಿಸಿ ಶಂಕರ ಎಂ.ಜಾಲವಾದಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು(ಪೋಕ್ಸೋ), ಕೊಪ್ಪಳ ಇವರು ತೀರ್ಪು ಹೊರಡಿಸಿರುತ್ತಾರೆ.

ಸರ್ಕಾರದ ಪರವಾಗಿ ಎಂ.ಎ ಪಾಟೀಲ, ಕೆ. ನಾಗರಾಜ ಆಚಾರ್, ಸವಿತಾ ಎಂ.ಶಿಗ್ಲಿ ಹಾಗೂ ಅಂಬಣ್ಣ ಸರ್ಕಾರಿ ಅಭಿಯೋಜಕರು ಕೊಪ್ಪಳ ಇವರು ಪ್ರಕರಣ ನಡೆಸಿದ್ದು, ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣ ಮನೋಹರ ಇವರು ವಾದ ಮಂಡಿಸಿದ್ದರು ಎಂದು ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.

ಜಸ್ಟಿಸ್ ಫಾರ್ ಮನಿಷಾ ವಾಲ್ಮೀಕಿ ಅಭಿಯಾನ: ಕೊಪ್ಪಳದಲ್ಲಿ ಕಾಂಗ್ರೆಸ್‌ ಎಸ್ಸಿ ಘಟಕದ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಅತ್ಯಾಚಾರಕ್ಕೆ ಒಳಗಾಗಿ ದಾರುಣವಾಗಿ ಪ್ರಾಣ ತ್ಯಾಗ ಮಾಡಿದ ಮನಿಷಾ ವಾಲ್ಮೀಕಿ ಹತ್ಯೆಗೈದ ವಿಕೃತ ಕಾಮಿ ಕೋಮುವಾದಿ ಕಿಡಿಗೇಡಿಗಳನ್ನು ಗಲ್ಲಿಗೇರಿಸಲಿ ಅಥವಾ ಎನ್ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿ ಕೊಪ್ಪಳದಲ್ಲಿಂದು ಕಾಂಗ್ರೆಸ್‌ನ ಎಸ್ಸಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಅಶೋಕ ಸರ್ಕಲ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರಗೈದವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಸಾವಿಗೀಡಾದ ಮನಿಷಾ ವಾಲ್ಮೀಕಿ ಕುಟುಂಬಕ್ಕೆ ಪರಿಹಾರ ಕೊಡಬೇಕು. ಮತ್ತು ಕೇಂದ್ರ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿಗಳ ಮೊತ್ತದ ಪರಿಹಾರವನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಭಾರದ ಹಾಗೇ ಸಂವಿಧಾನಾತ್ಮಕವಾಗಿ ಇಚ್ಛಾಶಕ್ತಿಯನ್ನು ಗೌರವಾನ್ವಿತ ರಾಷ್ಟ್ರಪತಿಗಳು ಎತ್ತಿ ಹಿಡಿಯಬೇಕೆಂದು JUSTICE FOR MANISHA VALMIKI “ ಎಂಬ ಅಭಿಯಾನದ ಮೂಲಕ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ್ ಹಿಟ್ನಾಳ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಕಾಟನ್ ಪಾಷಾ , ಸಲಿಂ ಅಳವಂಡಿ, ಶಿವಕುಮಾರ ಶೆಟ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಳೆಗೆ ಕುಸಿದ ಮನೆ, ವೃದ್ಧೆ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯೊಂದು ಕುಸಿದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ನಡೆದಿದೆ.

ಶಂಕ್ರವ್ವ ನಿಂಗನಗೌಡ ಭೀಮನಗೌಡ್ರೆ(70) ಮೃತ ದುರ್ದೈವಿಯಾಗಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಗೆ ಹಳೆಯ ಮನೆ ಕುಸಿದಿದೆ.

ನಸುಕಿನ ವೇಳೆ ಮನೆ ಕುಸಿದ ಪರಿಣಾಮ ವೃದ್ಧೆ ಬಚಾವಾಗಲು ಸಾಧ್ಯವಾಗಿಲ್ಲ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿರಹಟ್ಟಿಯಲ್ಲಿ ಖರೀದಿ ನೊಂದಣಿಗೆ ಒಂದು ತಿಂಗಳು ಬೇಕಂತೆ…?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಕೊವಿಡ್-19ನಿಂದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸರಕಾರ ಖರೀದಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಉತ್ತೇಜಿಸುತ್ತಿರುವುದರಿಂದ ಸರಕಾರಕ್ಕೂ ಕೂಡಾ ಆದಾಯ ಸಹಜವಾಗಿಯೇ ಬರಲಿದೆ. ಆದರೆ ಇದಕ್ಕೆ ತದ್ವಿರುದ್ದವೆಂಬಂತೆ ಶಿರಹಟ್ಟಿ ತಾಲೂಕಿನಲ್ಲಿ ಮಾತ್ರ ಉಪನೊಂದಣಿ ಅಧಿಕಾರಿ ಕಚೇರಿಯಲ್ಲಿ ಖರೀದಿ ನೊಂದಣಿ ಮಾಡಬೇಕಿದ್ದರೆ ಬರೋಬ್ಬರಿ ಒಂದು ತಿಂಗಳು ಬೇಕಂತೆ… ಹೀಗೆ ಅರ್ಜಿದಾರರು ನೀಡಿದಂತಹ ಅರ್ಜಿಯಲ್ಲಿ ದಿನಾಂಕ ನಮೂದಿಸಿ ಕೊಡುತ್ತಿದ್ದಾರೆ.
ಪರದಾಡುತ್ತಿರುವ ಗ್ರಾಮೀಣ ಪ್ರದೇಶದ ಜನತೆ : ನೊಂದಣಿ ಪ್ರಕ್ರಿಯೆ ಒಂದು ತಿಂಗಳು ಗಟ್ಟಲೇ ವಿಳಂಬವಾಗುತ್ತಿರುವುದರಿಂದ ಸತತ ಬರಗಾಲ ಹಾಗೂ ಅತೀವೃಷ್ಟಿಯಿಂದ ಕಂಗೆಟ್ಟಿರುವಂತಹ ಬಡ ರೈತರು ಹಾಗೂ ಸಾರ್ವಜನಿಕರು ನಿತ್ಯವೂ ಕಚೇರಿಗೆ ಪರದಾಡುವುದು ತಪ್ಪುತ್ತಿಲ್ಲ. ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುವುದರ ಜೊತೆಗೆ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವಂತಹ ಜನತೆಯು ಇಲ್ಲಿಯ ಆಡಳಿತ ವ್ಯವಸ್ಥೆಗೆ ನಿತ್ಯವೂ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ.

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಒಳ್ಳೇಯ ಬೆಳವಣಿಗೆಯಲ್ಲ, ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡಬಾರದು. ನಿಯಮಾನುಸಾರ ಖರೀದಿ ನೊಂದಣಿಯಾಗಬೇಕು. ಇಲ್ಲದೇ ಹೋದಲ್ಲಿ ಇಲ್ಲಿಯ ಅವ್ಯವಸ್ಥೆಯ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
ತಿಪ್ಪಣ್ಣ ಕೊಂಚಿಗೇರಿ, ತಾಪಂ ಸದಸ್ಯ.


ಮಧ್ಯವರ್ತಿಗಳ ದಾರಿ ಸುಗಮ : ನೊಂದಣಿ ಕಚೇರಿಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದನ್ನು ಇದನ್ನು ಸರಿಪಡಿಸಿಕೊಳ್ಳಬೇಕೆಂದು ಇತ್ತೀಚೆಗೆ ತಾಲೂಕ ಪಂಚಾಯತನಲ್ಲಿ ಜರುಗಿದಂತಹ ಸಭೆಯಲ್ಲಿ ಸದಸ್ಯರು ಉಪನೊಂದಣಾಧಿಕಾರಿಗೆ ಸೂಚನೆ ನೀಡಿದ್ದರೂ ಸಹ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿರುವುದಿಲ್ಲ. ಹೀಗಾಗಿ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಹಿಡಿದುಕೊಂಡು ಹೋಗಿ ಹಣ ನೀಡಿದರೆ ಖರೀದಿ ಸುಲಭವಾಗಿಯೇ ಆಗುತ್ತಿದೆ ಎನ್ನುವ ಆರೋಪಗಳು ಸಹ ಇಲ್ಲಿ ಕೇಳಿ ಬರುತ್ತಿವೆ.

ಆಸರೆ, ಮಾರ್ಟಗೇಜ್ ಜಾಸ್ತಿ ಇರುವುದರಿಂದ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಎಂ.ವಿ.ಪತ್ತಾರ, ಉಪನೊಂದಣಾಧಿಕಾರಿ.

ತಹಸೀಲ್ದಾರ/ತಾಪಂ ಇಓ ಗಮನ ಹರಿಸಿ :ಕಂದಾಯ ಇಲಾಖೆಯ ಕಚೇರಿಗಳ ಸಂಕೀರ್ಣದಲ್ಲಿಯೇ ಇರುವ ಉಪನೊಂದಣಾಧಿಕಾರಿ ಕಚೇರಿ ಪಕ್ಕದಲ್ಲಿಯೇ ಇದ್ದು ಮಧ್ಯವರ್ತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಹಸೀಲ್ದಾರ ಇತ್ತ ಕಡೆ ಗಮನ ಹರಿಸಿ ಇಲ್ಲಿಯ ಅವ್ಯವಸ್ಥೆಯನ್ನು ಸರಿಪಡಿಸುವ ಅವಶ್ಯವಿದೆ. ಇಲಾಖೆಗಳ ಪ್ರಗತಿಪರಿಶೀಲನೆ ನಡೆಸುವ ತಾಲೂಕ ಪಂಚಾಯತ ಕಾರ‍್ಯನಿರ್ವಾಹಕ ಅಧಿಕಾರಿ ಕೇವಲ ಸಭೆಗಳಲ್ಲಿ ಮಾತ್ರ ನಿರ್ದೇಶನ ನೀಡದೇ ವಾಸ್ತವಾಂಶ ತಿಳಿಯಲು ಹಾಗೂ ಬಡ ಜನತೆಗೆ ಅನುಕೂಲ ಕಲ್ಪಿಸುವುದಕ್ಕಾಗಿ ಇಲ್ಲಿ ಭೇಟಿ ನೀಡಿ ಪರಿಶೀಲಿಸಿ ಯೋಗ್ಯ ಕ್ರಮ ವಹಿ ಅವಶ್ಯವಿದೆ.

ಕೃಷಿ ಸಚಿವ ಕೌರವನ ವಿರುದ್ಧ ಕಿಡಿ ಕಾರಿದ ನೌಕರರು!

0

ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಪೊಲೀಸ್ ಇಲಾಖೆಯಿಂದ ಸಿನಿಮಾ, ಸಿನಿಮಾದಿಂದ ರಾಜಕೀಯಕ್ಕೆ ಬಂದು, ರಾಜಕೀಯದಲ್ಲೂ ಜೆಡಿಎಸ್, ಕಾಂಗ್ರೆಸ್ ಇನ್ನಿಂಗ್ಸ್ ಮುಗಿಸಿ ಇದೀಗ ಬಿಜೆಪಿ ಸರಕಾರದಲ್ಲಿ ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲ ಅಕ್ಷರಶಃ ಇಲಾಖೆಯ ನೌಕರರ ಪಾಲಿಗೆ “ಕೌರವ” ಎನಿಸಿದ್ದಾರೆ.
2020ರ ಜುಲೈ 1ರಂದು ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ವಿನೋದ್.ಆರ್.ಪಿ ಎಂಬುವವರು ನೇರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದ ಪ್ರತಿಗಳು ಇದೀಗ ವೈರಲ್ ಆಗಿದ್ದು, ಸಚಿವ ಬಿ.ಸಿ.ಪಾಟೀಲ್ ನಡೆ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ.
ಜೂನ್ 26, 2020ರ ಸರಕಾರದ ಆದೇಶದಲ್ಲಿ ಜುಲೈ10ರವರೆಗೆ ಇಲಾಖೆಯ ಗ್ರೂಪ್-ಬಿ, ಗ್ರೂಪ್-ಸಿ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿತ್ತು.

ಈ ವಿಷಯದಲ್ಲಿ ಅಧಿಕಾರಿಗಳ, ನೌಕರರ ಹಿತ ಕಾಪಾಡಬೇಕಾದ ಕೃಷಿ ಸಚಿವ ಬಿ.ಸಿ.ಪಾಟೀಲ್, ತಮ್ಮ ಇಲಾಖೆಯ ನೌಕರರು ವರ್ಗಾವಣೆ ಬಯಸಿದರೂ ಸರಿ, ಇದ್ದ ಸ್ಥಳದಲ್ಲೇ ಮುಂದುವರಿಯಲು ಇಚ್ಛಿಸಿದರೂ ಸರಿ ಲಕ್ಷಾಂತರ ರೂಪಾಯಿ ಕಡ್ಡಾಯವಾಗಿ ನೀಡಬೇಕು ಎಂದು ಮೌಖಿಕವಾಗಿ ಆದೇಶಿಸಿದ್ದಾರೆ ಎಂಬ ಗಂಭೀರ ಆರೋಪ ಸ್ವತಃ ಕೃಷಿ ಇಲಾಖೆಯ ನೌಕರರೇ ಮಾಡಿದ್ದಾರೆ.

ನಾನು ಯಾವತ್ತೂ ಗಾಳಿಯಲ್ಲಿ ಗುಂಡು ಹೊಡೆಯಲ್ಲ. ಸತ್ಯವನ್ನೇ ಹೇಳ್ತಿನಿ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಪದೇ ಪದೇ ಜಿಲ್ಲೆಗೆ ಬರುವುದು ವಸೂಲಿ ಮಾಡಿ ಸೂಟ್‌ಕೇಸ್ ತುಂಬಿಸಿಕೊಂಡು ಹೋಗೋಕೆ ಅಂತ ಸುಮಾರು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಈಗ ಆ ಸತ್ಯ ನೌಕರರಿಂದಲೇ ಹೊರ ಬಂದಿದಂತಾಗಿದೆ.
-ಶಿವರಾಜ ತಂಗಡಗಿ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೊಪ್ಪಳ.

ಕೃಷಿ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಸನ್ನಿವೇಶ ಸೃಷ್ಟಿಯಾಗಿರುವುದು ಅಸಹ್ಯಕರ ಮತ್ತು ದುರದೃಷ್ಟಕರ. ಇಲಾಖೆಯ ಗ್ರೂಪ್ ಬಿ ಮತ್ತು ಸಿ ನೌಕರರಿಗೆ ಇರುವ ವೇತನವಾದರೂ ಎಷ್ಟು? ಹೊರಗಿನಿಂದ ಅವರಿಗೆ ಏನಾದರೂ ಆದಾಯ ಸಿಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ನೋ ರೆಸ್ಪಾನ್ಸ್
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೃಷಿ ಸಚಿವ ಬಿ.ಸಿ.ಪಾಟೀಲ ಅವರನ್ನು ಸಂಪರ್ಕಿಸಲು ಹಲವು ಸಲ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಈ ಕುರಿತು ಮಾತನಾಡಿರುವ ಸಾಕ್ಷ್ಯಗಳು ನಮ್ಮ ಬಳಿ ಇದ್ದು, ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವವನ್ನು ಪರಿಶೀಲಿಸಲು ಕೋರಿರುವ ನೌಕರರು, ಆರೋಪ ಸಾಬೀತಾದರೆ ತಕ್ಷಣವೇ ಬಿ.ಸಿ.ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು, ಈ ಪ್ರಕರಣದಲ್ಲಿ ಭಾಗಿಯಾದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಮಗಾಗುತ್ತಿರುವ ಅನ್ಯಾಯವನ್ನು ಒಂದು ವೇಳೆ ತಮ್ಮ ಹಂತದಲ್ಲಿ ಸರಿಪಡಿಸದಿದ್ದರೆ ಪ್ರಧಾನ ಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಗಮನಕ್ಕೂ ವಿಷಯ ತರುವುದಾಗಿಯೂ, ಮತ್ತು ಇಲಾಖೆಯ ನೌಕರರು ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದಾಗಿಯೂ ಅಳಲು ತೋಡಿಕೊಂಡಿದ್ದಾರೆ.
                                                              ಏಜೆಂಟರ ಮೂಲಕ ಎತ್ತುವಳಿ?
ಸಚಿವರು ನೌಕರರಿಂದ ವಂತಿಗೆ ವಸೂಲಿ ಮಾಡಲು ಕೆಲ ಏಜೆಂಟರನ್ನು ಕಳಿಸುತ್ತಾರೆ. ಯಾವುದೇ ಕೆಲಸಕ್ಕೆ ಬಾರದ ಏಜೆಂಟರು ಅಧಿಕಾರಗಳೊಂದಿಗೆ ದರ್ಪದಿಂದ ವರ್ತಿಸುತ್ತಾರೆ. ತಾವೇ ಸಚಿವರು ಎಂಬಂತೆ ದೌರ್ಜನ್ಯ ಮೆರೆಯುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

error: Content is protected !!