ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಕೊರೋನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರು ಮುಂಜಾಗ್ರತೆ ಕ್ರಮವಾಗಿ ಕಡ್ಡಾಯವಾಗಿ ಪಟ್ಟಣದ ಪ್ರತಿಯೊಬ್ಬ ನಾಗರಿಕರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.
ಪಟ್ಟಣ ಪೊಲೀಸ್ ಠಾಣೆಯ ಹತ್ತಿರದ ಗಜೇಂದ್ರಗಡ-ಗದಗ ಮುಖ್ಯ ರಸ್ತೆಯಲ್ಲಿ ಸೋಮವಾರ ಪೊಲೀಸ್ ಇಲಾಖೆ ಹಾಗೂ ಪ.ಪಂ ವತಿಯಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಬಳಿಕೆ ಅವರು ಮಾತನಾಡಿದರು.
ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕೊರೊನಾ ಹರಡಂತೆ ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ಮಾರ್ಗಸೂಚಿಯನ್ನು ಎಲ್ಲರು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ನಿಯಮದಂತೆ ದಂಡ ವಿಧಿಸಲಾಗುವುದು. ಪಟ್ಟಣದ ವಿವಿಧ ಅಂಗಡಿ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರು ಸೇರಿದಂತೆ ಜನರು ಕೂಡ ಮಾಸ್ಕ್ ಧರಿಸದೆ ಮನೆಯಿಂದ ಬಂದ ಕಾರಣ ದಂಡ ವಿಧಿಸಲಾಗುತ್ತಿದೆ. ನಿಮ್ಮೆಲ್ಲರ ಸುರಕ್ಷೆತೆಗಾಗಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿರುವುದರಿಂದ ಸಾರ್ವಜನಿಕರು ಮನೆಯಿಂದ ಹೊರಗಡೆ ಬರುವ ಮುಂಚೆ ಮಾಸ್ಕ್ ಧರಿಸಿಕೊಂಡು ಬರುವುದು ರೂಢಿಸಿಕೊಳ್ಳಬೇಕು ಎಂದರು.
ಪಿಎಸ್‌ಐ ಬಸವರಾಜ ಕೊಳ್ಳಿ, ಎಎಸ್‌ಐ ಎಂ.ಎಸ್. ಭೂಸಗತ್ತಿ, ಶೇಖರ ಹೊಸಳ್ಳಿ, ಪ.ಪಂ ಸಿಬ್ಬಂದ ಶಂಕ್ರಪ್ಪ ದೊಡ್ಡಣ್ಣವರ, ಎಂ.ಎಚ್. ಕಾತರಕಿ, ರಾಮಚಂದ್ರ ಕಜ್ಜಿ, ಮಲ್ಲಪ್ಪ ಮಾರನಬಸರಿ, ಆರೀಫ್ ಮಿರ್ಜಾ ಸೇರಿದಂತೆ ಇತರರಿದ್ದರು
ಮಾಸ್ಕ್ ಧರಿಸದವರಿಗೆ ದಂಡ
ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಗೊಲ್ಲ ಜನಾಂಗದಲ್ಲಿ ಸುಮಾರು 34 ಒಳಪಂಗಡಗಳು ಇದ್ದುದ್ದನ್ನು ಒಡೆಯದೇ ಒಂದೇ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದು ಸೂಕ್ತ ಎಂದು ಗಂಗಾವತಿ ತಾಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಪ್ರಣವಾನಂದ ಯಾದವ ಇವರು ಅಭಿಪ್ರಾಯಪಟ್ಟಿದ್ದಾರೆ.
ಅವರು ‘ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆಗಾಗಿ ಒತ್ತಾಯಿಸಿ ಜಿಲ್ಲೆಯ ಗಂಗಾವತಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಈ ಹಿಂದಿನ ಸಿದ್ದರಾಮಯ್ಯನವರ ಸರ್ಕಾರವು ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆ ಮಾಡ್ತೀನಿ ಅಂದಾಗ ವೀರಶೈವ ಸಮಾಜದವರು, ಹಿರಿಯ ಮುಂಖಡರು, ರಾಜಕೀಯ ಮುಖಂಡರು ಸೇರಿದಂತೆ ಈಗಿನ ಸಿಎಂ ಯಡಿಯೂರಪ್ಪರವರು ಸಮಾಜವನ್ನು ಒಡೆಯುತ್ತಿರುವುದು ಎಷ್ಟು ಸಮಂಜಸ ಎಂದು ಧ್ವನಿಯೆತ್ತಿದ್ದರು.
ಆದರೆ ಇದೀಗ ಕರ್ನಾಟಕದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇರುವ ನಮ್ಮ ಗೊಲ್ಲ ಸಮಾಜವನ್ನು ತಮ್ಮ ಉಪಚುನಾವಣೆಗೋಸ್ಕರ ಸುಮಾರು 6 ಲಕ್ಷ ಜನಸಂಖ್ಯೆ ಇರುವ 3 ಜಿಲ್ಲೆಗಳನ್ನು ಮಾತ್ರ ಪರಿಗಣಿಸುವುದ ಎಷ್ಟು ಸೂಕ್ತ? ಬೇರೆ ಬೇರೆ ಜಿಲ್ಲೆಗಳಲ್ಲಿ ಮುಂಬರುವ ಚುನಾವಣೆಗಳಿಗೆ ಉಳಿದ ಸುಮಾರು 34 ಲಕ್ಷ ಜನಸಂಖ್ಯೆಯ ಮತಗಳು ಬೇಡವೆಂದು ಅಥವಾ ಅವರ ಅಭಿವೃದ್ಧಿಯನ್ನು ಕಡೆಗಣಿಸುವುದು ಸರಿಯಲ್ಲ. ಇದು ನಮ್ಮ ಮೇಲೆ ಮಲತಾಯಿ ಧೋರಣೆ ಮಾಡಿದಂತಾಗುತ್ತದೆ.
ಕಾರಣ ಗೊಲ್ಲ ಸಮಾಜದ ಕ್ಷೇಮಾಭಿವೃದ್ಧಿಗಾಗಿ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ದ ಬದಲಾಗಿ ‘ಅಖಿಲ ಕರ್ನಾಟಕ ಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪನೆ ಮಾಡಬೇಕು. ಇಲ್ಲದಿದ್ದಲ್ಲಿ ನಮ್ಮ ಸಮಾಜದ ಹಿರಿಯೂರು ಕ್ಷೇತ್ರದ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ ಅವರೊಂದಿಗೆ ಸಮಸ್ತ ಕರ್ನಾಟಕ ಗೊಲ್ಲ ಸಮಾಜದವರು ಸೇರಿ ಗೊಲ್ಲ ಸಮಾಜವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೊಲ್ಲಾರಿ ದುರುಗಪ್ಪ, ಕತ್ತಿ ಹನುಮಂತ, ಕೃಷ್ಣ ವಡ್ಡರಹಟ್ಟಿ, ಮಾಮಳಿ ಹನುಮಂತ ಮುಕ್ಕುಂಪಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಎಂ. ವೆಂಕಟೇಶ ಆನೆಗೊಂದಿ, ಗೋವಿಂದಪ್ಪ ಸಾಯಿನಗರ, ಯಮನೂರ ಪಾಟೀಲ್, ಪರಶುರಾಮ ಮಲ್ಲಾಪುರ, ಪಾಮಣ್ಣ ಹಾಗೂ ಯಂಕಪ್ಪ ಹೆಚ್.ಆರ್.ಜಿ ನಗರ, ಯಡೆಹಳ್ಳಿ ಬಸಣ್ಣ, ಸಣ್ಣ ಕರಡೆಪ್ಪ ಗುರುವಿನ್, ಹನುಮಂತ ಹಾಗೂ ನಾಗರಾಜ ಹಣವಾಳ, ರಾಮಣ್ಣ ವೆಂಕಟಗಿರಿ ಸೇರಿದಂತೆ ಯಾದವ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಗರಿಗೆದರಿದ ಮುಂಡರಗಿ ಪುರಸಭೆ ಚುನಾವಣೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧಿಕಾರದ ಗದ್ದುಗೆ ಏರಲು ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.
ಮುಂಡರಗಿ ಪುರಸಭೆ ಅಧ್ಯಕ್ಷ ಸ್ಥಾನವು (ಹಿಂದುಳಿದ ಬ ವರ್ಗ ಮಹಿಳೆಗೆ ಮೀಸಲಾಗಿದ್ದು) ಉಪಾಧ್ಯಕ್ಷ ಸ್ಥಾನವು (ಹಿಂದುಳಿದ ಅ ವರ್ಗಕ್ಕೆ ) ಮೀಸಲಾಗಿದೆ. ಈವರೆಗೂ ತಟಸ್ಥವಾಗಿದ್ದ ಪುರಸಭೆ ರಾಜಕೀಯ ಈಗ ಗರಿಗೆದರಿದೆ. ಮುಂಡರಗಿ ಪಟ್ಟಣದಲ್ಲಿ ಎಲ್ಲಾ ಸದಸ್ಯರು ಮುಖಂಡರುಗಳ ಮನೆಗಳತ್ತ ದೌಡಾಯಿಸುತ್ತಿದ್ದಾರೆ
2019 ಮೇ 29ರಂದು ಪಟ್ಟಣದ ಪುರಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಮೇ.31 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಹದಿನೇಳು ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿರಲಿಲ್ಲ. ಸರ್ಕಾರ ಈಗ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಆದೇಶ ಹೊರಡಿಸಿದೆ.
ಪುರಸಭೆಯು ಒಟ್ಟು 23 ವಾರ್ಡ್‌ಗಳ ಪೈಕಿ 12 ಬಿಜೆಪಿ, 6 ಕಾಂಗ್ರೆಸ್, 1 ಜೆಡಿಎಸ್ ಹಾಗೂ 4 ಸ್ಥಾನಗಳಿಗೆ ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿಜೆಪಿ ಬಹುಮತ ಇರುವ ಹಿನ್ನೆಲೆ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ಪಕ್ಕಾ ಆಗಿದೆ. ಬಿಜೆಪಿ ಸದಸ್ಯರ ಜೊತೆಗೆ ಓರ್ವ ಶಾಸಕ ಮತ್ತು ಓರ್ವ ಸಂಸದ ಸೇರಿ ಎರಡು ಮತಗಳು ಬಿಜೆಪಿಗೆ ಬರಲಿವೆ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸುಲಭವಾಗಲಿದೆ.
ಹಿಂದುಳಿದ ಬ ವರ್ಗ ಮಹಿಳೆ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಸಧ್ಯ ಬಿಜೆಪಿಯಲ್ಲಿ 7ನೇ ವಾರ್ಡ್‌ನ ಸದಸ್ಯೆ ಕವಿತಾ ಅಂದಪ್ಪ ಉಳ್ಳಾಗಡ್ಡಿ ಇವರು ಒಬ್ಬರೇ ಇದ್ದಾರೆ. ಹೀಗಾಗಿ ಕವಿತಾ ಅವರು ಅಧ್ಯಕ್ಷೆ ಆಗುವುದಕ್ಕೆ ಯಾವುದೇ ಪೈಪೋಟಿ ಇಲ್ಲದೆ ಅಧಿಕಾರದ ಚುಕ್ಕಾಣಿ ಕಮಲದ ಪರವಾಗಿದೆ .
ಹಿಂದುಳಿದ ಅ ವರ್ಗ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪ್ರಥಮ ಬಾರಿಗೆ ಪುರಸಭೇಗೆ ಆಯ್ಕೆಯಾದ ಸದಸ್ಯರು ಟಿ.ಬಿ.ದಂಡಿನ, ಶಿವಪ್ಪ ಚಿಕ್ಕಣ್ಣವರ, ಗಂಗಿಮಾಳವ್ವ ಮೋರನಾಳ, ನಿರ್ಮಲಾ ಕೊರ್ಲಹಳ್ಳಿ, ವೀಣಾದೇವಿ ಸೋನಿ ಹಾಗೂ ಶಿವಾನಂದ ಬಾರಕೇರ ಇದ್ದಾರೆ. ಇವರಲ್ಲಿ ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದು ಕಾದು ನೋಡಬೇಕಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಚಾಲನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕನಕ ಸಮುದಾಯ ಭವನದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸದಸ್ಯತ್ವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ನನ್ನ ಜಿಲ್ಲಾ ಪಂಚಾಯಿತಿ ಕ್ಷೇತ್ರವಾದ ತಿಮ್ಮಾಪುರ ಗ್ರಾಮದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಈ ಸದಸ್ಯತ್ವ ಅಭಿಯಾನದಲ್ಲಿ 18 ವರ್ಷದಿಂದ 35 ವರ್ಷದವರೆಗಿನ ಎಲ್ಲಾ ಯುವಕ ಹಾಗೂ ಯುವತಿಯರು ಸದಸ್ಯತ್ವ ಪಡೆದುಕೊಳ್ಳಬಹುದು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅನೇಕ ಜನಪರ ಯೋಜನೆಗಳನ್ನು ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಎಸ್ ಪಾಟೀಲ ಅವರು ತಮ್ಮ ಅನುದಾನದಲ್ಲಿ ತಿಮ್ಮಾಪುರ ಗ್ರಾಮಕ್ಕೆ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದನ್ನು ಮೆಚ್ಚಿ ಸ್ವಯಂ ಪ್ರೇರಿತರಾಗಿ ನೂರಾರು ಯುವಕರು ಯುವ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದುಕೊಳ್ಳಿ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ್, ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಶರಣಪ್ಪ ಜೋಗಿನ, ಬಸಪ್ಪ ಸತ್ಯಪ್ಪನವರ ಸೇರಿದಂತೆ ಗ್ರಾಮದ ಯುವಕರು ಪಾಲ್ಗೊಂಡಿದ್ದರು.
ಇಪಿಎಫ್‌ಒ ಚಂದಾದಾರರಿಗೆ ದೀಪಾವಳಿ ಬಂಫರ್ ಗಿಫ್ಟ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ
ಉದ್ಯೋಗಿಗಳ ಭವಿ? ನಿಧಿ ಸಂಘಟನೆ (ಇಪಿಎಫ್‌ಒ) ತನ್ನ ಚಂದಾದಾರರಿಗೆ ದೀಪಾವಳಿ ಬಂಫರ್ ಗಿಫ್ಟ್ ಎನ್ನುವಂತೆ, ಶೇ.8.5ರ ಬಡ್ಡಿಯ ಮೊದಲ ಕಂತು ಜಮೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ವ?ಕ್ಕೆ ಶೇ.8.5ಬಡ್ಡಿ ಯನ್ನು ತನ್ನ ಚಂದಾದಾರರಿಗೆ ಪಾವತಿಸುವುದಾಗಿ ಇಪಿಎಫ್ ಒ ಕೇಂದ್ರೀಯ ಮಂಡಳಿ ಸೆಪ್ಟೆಂಬರ್ ನಲ್ಲಿ ತಿಳಿಸಿದೆ.
ದೀಪಾವಳಿವೇಳೆಗೆ ಸರ್ಕಾರ ವಿಧಿಸಿರುವಂತ ಶೇ.8.5ರ ಬಡ್ಡಿಯನ್ನು ವರ್ಗಾಯಿಸಬಹುದು, ಉಳಿದ ಶೇ.0.35ರ? ಹಣವನ್ನು ಡಿಸೆಂಬರ್ ವೇಳೆಗೆ ಜಮಾ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ನಲ್ಲಿ ನಿವೃತ್ತಿ ನಿಧಿ ಸಂಸ್ಥೆಯ ಗಳಿಕೆಯು ತೀವ್ರವಾಗಿ ಹೊಡೆತ ಉಂಟಾಗಿತ್ತು.
ಇಪಿಎಫ್ ಒ ಆಡಳಿತ ಮಂಡಳಿ 2018-19ನೇ ಸಾಲಿಗೆ ಶೇ.8.65ಬಡ್ಡಿ ಯನ್ನು ನಿಗದಿಪಡಿಸಿತ್ತು. ಈ ಹಿಂದೆ 2016-17 ನೇ ಸಾಲಿಗೆ ಶೇ.8.65ಮತ್ತು 2017-18ರಲ್ಲಿ ಶೇ.8.55ರ? ಬಡ್ಡಿ ದರವನ್ನು ಮಂಡಳಿ ನೀಡಿತ್ತು. 2015-16ರಲ್ಲಿ ಬಡ್ಡಿ ದರ ಶೇ.8.8ಕ್ಕೆ ಏರಿಕೆಯಾಗಿತ್ತು. 2013-14, 2014-15ರಲ್ಲಿ ಶೇ.8.74ಬಡ್ಡಿ ದರ ನೀಡಿತ್ತು. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಇಪಿಎಫ್ ಒ94.41 ಲಕ್ಷ ಕ್ಲೇಮುಗಳನ್ನು ಇತ್ಯರ್ಥಪಡಿಸಿದ್ದು, ಸುಮಾರು ? 35445 ಕೋಟಿಯನ್ನು ತನ್ನ ಸದಸ್ಯರಿಗೆ ನೀಡಿದೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಸದಸ್ಯರಿಗೆ ಹಣದ ಅವಶ್ಯಕತೆಗಳನ್ನು ಪೂರೈಸಲು ನೆರವಾಗಲು, ತ್ವರಿತವಾಗಿ ಮುಂಗಡಗಳನ್ನು ಮತ್ತು ಅನಾರೋಗ್ಯಸಂಬಂಧಿತ ಕ್ಲೇಮುಗಳನ್ನು ಹೊಂದಿಸಲು ಪ್ರಯತ್ನಿಸುತ್ತದೆ. ಈ ಎರಡು ವರ್ಗಗಳ ಮುಂಗಡಗಳಿಗೆ ಆಟೊ ಮೋಡ್ ಅನ್ನು ಪರಿಚಯಿಸಿದೆ. ಸ್ವಯಂ ಪರಿಹಾರವು ಕ್ಲೇಮ್ ಸೆಟಲ್ ಮೆಂಟ್ ಆವರ್ತವನ್ನು ಕೇವಲ 3 ದಿನಗಳವರೆಗೆ ಇಳಿಸಿತು,20ದಿನಗಳೊಳಗೆ ಕ್ಲೇಮುಗಳನ್ನು ಇತ್ಯರ್ಥಪಡಿಸಬೇಕಾದ ಕಾನೂನುಬದ್ಧ ಅವಶ್ಯಕತೆಗೆ ವಿರುದ್ಧವಾಗಿ ಈ ಎರಡು ವಿಭಾಗಗಳಲ್ಲಿ ಹೆಚ್ಚಿನ ಕ್ಲೇಮುಗಳಿಗೆ ಕೇವಲ 3 ದಿನಗಳಿಗೆ ಮಾತ್ರ ಸೀಮಿತವಾಯಿತು.
ಶಿರಹಟ್ಟಿ ತಾಲೂಕಿನಲ್ಲಿ ದೊರೆಯುತ್ತಿಲ್ಲ ಮಾಸಾಶನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಶಿರಹಟ್ಟಿ
ಸತತ ಬರಗಾಲ, ಅತಿವೃಷ್ಟಿ ಹಾಗೂ ಕೊವಿಡ್-19 ನಿಂದ ತತ್ತರಿಸಿರುವಂತಹ ಬಡತನ ರೇಖೆಗಿಂತ ಕೆಳಗಿರುವಂತಹ ಜನತೆಗೆ ಸರಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ನೀಡುತ್ತಿದೆ. ಇತ್ತೀಚೆಗೆ ಜಿಲ್ಲಾಢಳಿತ ಫಲಾನುಭವಿಗಳ ಮನೆಗಳ ಬಾಗಿಲಿಗೆ ಮಂಜೂರಾತಿ ಪತ್ರವನ್ನು ನೀಡುತ್ತಿರುವುದು ಶ್ಲಾಘನೀಯ ಕಾರ‍್ಯ. ಆದರೆ ಶಿರಹಟ್ಟಿ ತಾಲೂಕಿನಲ್ಲಿ ಮಾತ್ರ ವಿವಿಧ ಮಾಸಾಶನಗಳ 562 ಅರ್ಜಿ ಇನ್ನೂ ಸಸ್ಪೆಂಡ್‌ನಲ್ಲಿಯೇ ಇವೆ. ಇವರ‍್ಯಾರಿಗೂ ಮಾಸಾಶನ ದೊರೆಯುತ್ತಿಲ್ಲ.
562ಅರ್ಜಿ ಸಸ್ಪೆಂಡ್…!
ಕಂದಾಯ ಇಲಾಖೆಯ ಅಂಕಿಅಂಶದ ಪ್ರಕಾರ ಇಂದಿರಾಗಾಂಧಿ ಓಎಪಿ-1ರಲ್ಲಿ 32, ಓಎಪಿ-2ರಲ್ಲಿ 48, ಓಎಪಿ-3ರಲ್ಲಿ 1, ಸಂಧ್ಯಾಸುರಕ್ಷಾ ಯೋಜನೆಯಡಿ 200, ವಿಧವಾ ವೇತನ 165, ಅಂಗವಿಕಲ ಮಾಸಾಶನ ಪಿಎಚ್‌ಪಿ-1 66, ಪಿಎಚ್‌ಪಿ-37, ಮನಸ್ವಿನಿ 13 ಹೀಗೆ ಶಿರಹಟ್ಟಿ ತಾಲೂಕಿನಾದ್ಯಂತ ಒಟ್ಟು 562 ಅರ್ಜಿಗಳು ವಿವಿಧ ಕಾರಣಗಳಿಂದ ಸಸ್ಪೆಂಡ್‌ನಲ್ಲಿದ್ದು, ಇವರಲ್ಲಿ ಅರ್ಜಿ ಹಾಕಿದವರು ತಮಗೆ ಮಾಸಾಶನ ಬರದೇ ಇರುವುದರಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತಿಲ್ಲ.
ತಾಂತ್ರಿಕ ಕಾರಣಗಳಿಂದ ಸಾಮಾಜಿಕ ಭದ್ರತೆ ಯೋಜನೆಯಡಿ ಅರ್ಜಿಗಳು ಸಸ್ಪೆಂಡ್‌ನಲ್ಲಿದ್ದು, ಇವುಗಳನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ತಲುಪಿಸುವುದಕ್ಕೆ ಕ್ರಮ ಕೈಕೊಳ್ಳಲಾಗುವುದು.
ಯಲ್ಲಪ್ಪ ಗೋಣೆಣ್ಣನವರ, ತಹಸೀಲ್ದಾರ, ಶಿರಹಟ್ಟಿ.
ಸಿಬ್ಬಂದಿಗಳ ಸಮನ್ವಯತೆ ಕೊರತೆ :
ಶಿರಹಟ್ಟಿಯ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿಯ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕ ಕಚೇರಿಯಲ್ಲಿಯ ಸಿಬ್ಬಂದಿ, ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು ಸರಿಯಾದ ಸಮಯಕ್ಕೆ ಅರ್ಜಿಗಳನ್ನು ಪರಿಶೀಲಿಸಿ ಕಳುಹಿಸುವಲ್ಲಿ ವಿಳಂಬ ಸೇರಿದಂತೆ ಸಿಬ್ಬಂದಿಗಳ ಮಧ್ಯೆ ಸಮನ್ವಯದ ಕೊರತೆ ಇರುವುದರಿಂದ ಸರಕಾರ ಅರ್ಹ ಫಲಾನುಭವಿಗಳಿಗೆ ಮಾಸಾಶನ ನೀಡಲು ಮುಂದಿದ್ದರೂ ಸಹ ಇಲ್ಲಿಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಅದೆಷ್ಟೋ ಅರ್ಹ ಫಲಾನುಭವಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ತಹಸೀಲ್ದಾರ ಕ್ರಮ ವಹಿಸುವುದು ಅವಶ್ಯ :
ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಮಾಸಾಶನಗಳನ್ನು ಪಡೆಯುತ್ತಿರುವಂತಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಹಣ ಸಂದಾಯವಾಗದೇ ಇರುವುದಕ್ಕೆ ಹಲವಾರು ತಾಂತ್ರಿಕ ಕಾರಣಗಳನ್ನು ಕಚೇರಿಗಳ ಸಿಬ್ಬಂದಿಗಳು ಹೇಳುತ್ತಿದ್ದು, ಇದಕ್ಕೆ ತಹಶೀಲ್ದಾರ ಶಾಶ್ವತ ಪರಿಹಾರವನ್ನು ಕಲ್ಪಿಸಿ ಸರಕಾರದ ಸೌಲಭ್ಯದಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದಂತಹ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸುವುದು ಅವಶ್ಯವಿದೆ.
ಶಿಕ್ಷಣದ ಜೊತೆಗೆ ಜೀವನ ಕೌಶಲ್ಯ ಅಳವಡಿಸಿಕೊಳ್ಳಿ: ಯತೀಶ್ ಎನ್
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪ್ರತಿಯೊಬ್ಬರ ಜೀವನದಲ್ಲೂ ಮುಂದೆ ಒಂದು ಗುರಿ, ಹಿಂದೆ ಒಬ್ಬ ಗುರು ಇರಬೇಕು. ಅಂದಾಗ ಯಶಸ್ಸು ಸಾಧಿಸಬಹುದು. ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಕೊಳ್ಳಬೇಕು. ಅಲ್ಲದೇ, ತರಬೇತಿಯ ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಎಸ್ಪಿ ಯತೀಶ್ ಎನ್ ಹೇಳಿದರು.
ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಛೇರಿ ಗದಗ ಇವರ ಸಹಯೋಗದಲ್ಲಿ ಗದಗ-ಬೆಟಗೇರಿಯ ಅನನ್ಯ ನಗರ ಹಗೂ ಗ್ರಾಮೀಣಾಭಿವೃದ್ಧಿ ವಿವಿದೋದ್ದೇಶಗಳ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಮಾತನಾಡಿ, ಉತ್ತಮ ತರಬೇತಿ ಪಡೆದುಕೊಳ್ಳುವ ಮೂಲಕ ಸ್ವಯಂ ಉದ್ಯೋಗ ಮಾಡಬೇಕು ಎಂದ ಅವರು ಕೌಶಲ್ಯಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಿಡಾಕ್ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಅಂಗಡಿ ಮಾತನಾಡಿ, ನೂತನ ಉದ್ಯಮಗಳ ಆಯ್ಕೆ ಮಾಡಿಕೊಳ್ಳಬೇಕು. ಉದ್ಯಮಿಗಳಾಗಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದರು.
ಉದ್ಯಮಿದಾರ ರಮೇಶ ಹತ್ತಿಕಾಳ, ಜಿಲ್ಲಾ ಖಾದಿ ಗ್ರಾಮೋದ್ಯೊಗ ಅಧಿಕಾರಿ ಎಸ್.ಎಮ್. ಹಂಚಿನಮನಿ ಸೇರಿದಂತೆ ಇತರರು ಇದ್ದರು. ಮಂಜುನಾಥ ಮುಳಗುಂದ ಕಾರ್ಯಕ್ರಮ ವಂದಿಸಿದರು. ದ ವಂದನಾರ್ಪಣೆಯನ್ನು ಕು. ವಿಜಯಲಕ್ಷ್ಮಿ ನೆಲ್ಲೂರ ವಂದಿಸಿದರು.
ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಗೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ, ಗದಗ ಜಿಲ್ಲೆ ರಚನೆಯಾಗಿ ೨೦ ವರ್ಷಗಳಾದರೂ ಇನ್ನೂ ಅನೇಕ ರಸ್ತೆಗಳನ್ನು ಅಭಿವೃದ್ದಿ ಮಾಡುವಲ್ಲಿ ಅನೇಕ ಸರಕಾರಗಳು ಮುಂದಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ಅಧಿಕಾರಿಗಳು ರಸ್ತೆಗಳ ಬಗ್ಗೆ ಯಾರೊಬ್ಬರೂ ಮಾತಾಡುತ್ತಿಲ್ಲ. ಈ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ಅನೇಕ ಬಾರಿ ಆಯಾ ತಾಲೂಕಿನಲ್ಲಿ ಮತ್ತು ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ, ಶಾಸಕರಿಗೆ ಶಾಶ್ವತ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಅನೇಕ ಬಾರಿ ರಾಜ್ಯ ಸರ್ಕಾರಕ್ಕೂ ಕೂಡಾ ಮನವಿ ಮಾಡಿಕೊಂಡು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಗದಗ- ಗಜೇಂದ್ರಗಡ, ರೋಣ-ಹೊಳೆಆಲೂರ, ಲಕ್ಷ್ಮೇಶ್ವರ-ಗದಗ, ನರಗುಂದ-ಗದಗ, ಮುಂಡರಗಿ-ಹೆಬ್ಬಾಳ, ಶಿರಹಟ್ಟಿ-ಗದಗ ರಸ್ತೆಗಳು ಸೇರಿದಂತೆ ಇನ್ನೂ ಅನೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಈ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಸರಕಾರ ವಿಶೇಷ ಪ್ಯಾಕೇಜ್ ನೀಡಿ ರಸ್ತೆ ದುರಸ್ತಿಗೆ ಆಗ್ರಹಿಸಬೇಕು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ಹನಮಂತ ಅಬ್ಬಿಗೇರಿ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆಗಳು ಎಷ್ಟೊಂದು ಹದಗೆಟ್ಟಿವೆ ಎಂದರು ಕೆಲವೊಂದು ಕಡೆ ಅಪಘಾತಕ್ಕೀಡಾಗಿ ಚಿಕ್ಕ ವಾಹನಗಳು ಉರುಳಿ ಬಿದ್ದವೆ. ಬೈಕ ಸವಾರರು ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬಸ್‌ಗಳ ಸಂಚಾರಕ್ಕೆ ಬಸ್ ಮತ್ತು ಇತರೆ ವಾಹನ ಚಾಲಕರು ಜೀವವನ್ನು ಕೈಯಲ್ಲಿ ಇಟ್ಟುಕೊಂಡು ವಾಹನ ಚಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಮುಳಗುಂದ ನಾಕಾದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಶರಣಪ್ಪ ಪುರ್ತಗೇರಿ, ನಿಂಗನಗೌಡ ಮಾಲಿಪಾಟೀಲ, ನೀಲನಗೌಡ ಪಾಟೀಲ, ಉಮೇಶ ಮೇಟಿ, ರಜಾಕ ಢಾಲಾಯತ, ಬಸವರಾಜ ಮೇಟಿ, ಬಸವರಾಜ ಹೊಗೆಸೊಪ್ಪಿನ, ನಿಂಗಪ್ಪ ಹೊನ್ನಾಪೂರ, ವಿರುಪಾಕ್ಷಿ ಹಿತ್ತಲಮನಿ, ಹನಮಂತ ಪೂಜಾರ, ಆಶು ಜೂಲಗುಡ್ಡ ಇತರರು ಉಪಸ್ಥಿತರಿದ್ದರು.
ಈಶಾನ್ಯ ಶಿಕ್ಷಕರ ವಿಪ ಕ್ಷೇತ್ರಕ್ಕೆ ಮೂವರ ನಡುವೆ ಪೈಪೋಟಿ
ಬಿಯಸ್ಕೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಅ. ೮ರಂದು ನಾಮಪತ್ರ ಸಲ್ಲಿಕೆ ದಿನ ಅಂತ್ಯವಾಗಿದ್ದು, ಒಟ್ಟು ೮ ಜನರಿಂದ ನಾಮಪತ್ರ ಸಲ್ಲಿಕೆಯಾಗಿವೆ. ಚುನಾವಣಾ ಕಣ ರಂಗೇರಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ.
ಕಳೆದ ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಮತ್ತೊಮ್ಮೆ ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಈ ಹಿಂದೆ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಶಶೀಲ್ ನಮೋಶಿ 2014 ರಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯದೆ ಸೋತಿದ್ದರು. ಇದೀಗ ಮತ್ತೆ ಗೆಲುವಿನ ಹಳಿಗೆ ಮರಳಲು ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದು, ರಾಜ್ಯದಲ್ಲಿ ತನ್ನದೇ ಪಕ್ಷ ಅಧಿಕಾರದಲ್ಲಿರುವ ಕಾರಣ ಗೆಲುವಿನ ವಿಶ್ವಾಸದಲ್ಲಿ ಆ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿ ನಮೋಶಿ ಇದ್ದಾರೆ. ಇನ್ನು ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಸಿದ್ದು, ದೇವೇಗೌಡರು ಚುನಾವಣಾ ಪ್ರಚಾರ ಸಭೆ ನಡೆಸಿದ್ದಾರೆ.
ಆಡಳಿತ ಪಕ್ಷದ ಪರ ಒಲವು?
ಕಲ್ಯಾಣ ಕರ್ನಾಟಕ ಭಾಗದ ಒಟ್ಟು ೬ ಜಿಲ್ಲೆಗಳ ಶಿಕ್ಷಕ ಮತದಾರರು ಈ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದಾರೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಮಾನ್ಯ ಮತದಾರರ ಯೋಚನೆಯಂತೆ ಶಿಕ್ಷಕರ ಮತದಾರರ ಯೋಚನೆಯ ದಿಕ್ಕೆ ಬದಲಿರುತ್ತದೆ. ರಾಜ್ಯ ಸರ್ಕಾರ ಯಾವ ಪಕ್ಷದ್ದು ಇರುತ್ತದೆಯೋ ಅದೇ ಪಕ್ಷಕ್ಕೆ ಮಣೆ ಹಾಕುವುದು ವಾಡಿಕೆ. ಕಳೆದ 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಹೈಕೋರ್ಟ್‌ನ ವಕೀಲ, ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ 9022 ಮತ ಪಡೆದು ಗೆಲುವಿನ ನಗೆ ಬೀರಿದ್ದರು. ಈ ಬಾರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಬಿಜೆಪಿ ಗೆಲ್ಲುವುದು ಸುಲಭ ಎನ್ನುವ ಲೆಕ್ಕಾಚಾರ ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ.
ಕ್ಷೇತ್ರದಲ್ಲಿ ನಾಯಕರ ರೌಂಡ್ ಮತ್ತು ಸೌಂಡ್:
ಚುನಾವಣಾ ನಾಮಪತ್ರ ಸಲ್ಲಿಕೆ ಮುಗಿದಿದ್ದು, ಚುನಾವಣಾ ರಣಕಣ ರಂಗೇರಿದೆ. ಬಿಜೆಪಿಯಿಂದ ಉಸ್ತುವಾರಿ ವಹಿಸಿಕೊಂಡ ಸಚಿವ ಈಶ್ವರಪ್ಪ ಒಂದು ಸುತ್ತಿನ ಪ್ರಚಾರ ಸಭೆ ನಡೆಸಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕು ಎನ್ನುವ ಹಂಬಲದಲ್ಲಿರುವ ಬಿಜೆಪಿ ಪ್ರಚಾರದಲ್ಲಿ ಮುಂದೆ ಇದೆ. ಒಂದು ಸುತ್ತಿನ ೬ ಜಿಲ್ಲೆಗಳ ಪ್ರವಾಸ ಮುಗಿಸಿ ಎರಡನೇ ಸುತ್ತಿಗೆ ಅಣಿಯಾಗಿದೆ. ೬ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ಸಂಸದರು ಹೆಚ್ಚಿದ್ದು ಬಿಜೆಪಿ ಸಹಜವಾಗಿ ಗೆಲುವಿನ ಉತ್ಸಾಹದಲ್ಲಿದೆ.
ಇನ್ನು ಕಳೆದ ಬಾರಿ ಗೆದ್ದ ಕಾರಣ ಈ ಬಾರಿಯೂ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್‌ನ ಅಭ್ಯರ್ಥಿ ಪರ ಸ್ವತಃ ದೇವೇಗೌಡರೇ ಅಖಾಡಕ್ಕೆ ಇಳಿದು ಪ್ರಚಾರಕ್ಕೆ ಮುಂದಾಗಿ ತನ್ನ ಅಭ್ಯರ್ಥಿ ಗೆಲ್ಲಿಸಲು ಮುಂದಾಗಿದ್ದಾರೆ.
ಇವರೆಲ್ಲ ಅಭ್ಯರ್ಥಿಗಳು
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿತ್ತು. ಅದರಂತೆ ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ, ಬಿಜೆಪಿಯಿಂದ ಶಶಿಲ್ ನಮೋಶಿ, ಜೆಡಿಎಸ್‌ನಿಂದ ತಿಮ್ಮಯ್ಯ ಪುರ್ಲೆ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ನಿಂಗಯ್ಯ ಮಠ, ತುಳಸಪ್ಪ ದಾಸರ, ಡಾ. ಚಂದ್ರಕಾಂತ ಶಿಂಗೆ, ಪ್ರಭುಲಿಂಗಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಶಶಿಲ್ ನಮೋಶಿ 4 ಸೆಟ್ ಸಲ್ಲಿಸಿದ್ದರೆ, ಶರಣಪ್ಪ ಮಟ್ಟೂರ 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.
6 ಜಿಲ್ಲೆ, 31 ಸಾವಿರ ಮತದಾರರು
ಈಶಾನ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಆರು ಜಿಲ್ಲೆಗಳು ಬರಲಿವೆ. ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ ಶಿಕ್ಷಕರು ಮತದಾರರಾಗಿದ್ದಾರೆ. ಇನ್ನೂ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಲಭ್ಯ ಮಾಹಿತಿ ಪ್ರಕಾರ ಒಟ್ಟು 31 ಸಾವಿರ ಮತದಾರರಿದ್ದಾರೆ. ಅ. 8ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೊನೆಯ ದಿನವಾಗಿತ್ತು. ಮೊದಲಿದ್ದ ಮತದಾರರ ಜೊತೆಗೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದರಲ್ಲಿ ಯಾರು ಹೆಚ್ಚಾಗಿ ಶಿಕ್ಷಕರ ಮನ ಗೆಲ್ಲುತ್ತಾರೋ ಅವರು ಗೆದ್ದು ಬರಲಿದ್ದಾರೆ.
ಕಳೆದ ಬಾರಿ ಮತದಾರರು, ಫಲಿತಾಂಶ..
ಕಳೆದ ಬಾರಿ ಕ್ಷೇತ್ರದಲ್ಲಿ ಒಟ್ಟು 31,809 ಮತದಾರರಿದ್ದರು. ಇದರಲ್ಲಿ 19,183 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ ಒಟ್ಟು ೧೭,೭೪೮ ಮತ ಕ್ರಮಬದ್ದವಾಗಿದ್ದವು, 1,403 ಮತ ತಿರಸ್ಕೃತವಾಗಿದ್ದು, 32 ನೋಟಾ ಚಲಾವಣೆಯಾಗಿತ್ತು. ಚಲಾಯಿತ ಮತಗಳಲ್ಲಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ 9022 ಮತ ಪಡೆದು ಜಯಗಳಿಸಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದರು. ಇನ್ನು ಬಿಜೆಪಿಯ ಶಶೀಲ್ ನಮೋಶಿ 6933 ಮತ ಸೋಲುಂಡಿದ್ದರು. ಹ್ಯಾಟ್ರಿಕ್ ಜಯ ಸಾಧಿಸಬೇಕೆಂದಿದ್ದ ನಮೋಶಿ ಕನಸು 2014 ರಲ್ಲಿ ಭಗ್ನಗೊಂಡಿತ್ತು.