Home Blog Page 2167

ಸರಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಗೌರವಧನ ನೀಡಬೇಕು 

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ  
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 5 ಲಕ್ಷ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಸರಕಾರ ಮಾಸಿಕ 5 ಸಾವಿರದಿಂದ 10 ಸಾವಿರ ರೂ.ವರೆಗೆ ಶಾಲೆ ಆರಂಭವಾಗುವವರೆಗೂ ಪ್ರತಿ ತಿಂಗಳೂ ಗೌರವಧನ ನೀಡಬೇಕು ಮತ್ತು ವಿದ್ಯಾಗಮ ಯೋಜನೆ ಅಡಿಯಲ್ಲಿ ಪಾಠ ಮಾಡಲು ಹೋಗಿ 100 ಕ್ಕೂ ಹೆಚ್ಚು ಮೃತಪಟ್ಟ ಶಿಕ್ಷಕರಿಗೆ ಕೊವಿಡ್-19 ವಾರಿಯರ‍್ಸ್‌ಗೆ  ನೀಡುವ ಪರಿಹಾರ ನೀಡಬೇಕು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯ ಕಾರ್ಯದರ್ಶಿ ಶಶಿಧರ ದಿಂಡೂರ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರ ಶಾಲಾ ಪ್ರಾರಂಭಿಸಲು ಗೊಂದಲದ ಹೇಳಿಕೆ ನೀಡುವ ಮೂಲಕ ಶಿಕ್ಷಣ ಕ್ರಮವನ್ನು ಹಳಿ ತಪ್ಪಿಸುತ್ತಿರುವುದರಿಂದ ಪಾಲಕರು, ಮಕ್ಕಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿವೆ. ಶಾಲಾ ಪ್ರಾರಂಭದ ಬಗ್ಗೆ ಸರಕಾರ ಸ್ಪಷ್ಟ ನಿರ್ದೇಶನ ನೀಡಬೇಕು.
2020-21 ನೇ ಸಾಲಿನ ವಾರ್ಷಿಕ ಪಠ್ಯಕ್ರಮ  ಮತ್ತು ವೇಳಾ ಪಟ್ಟಿಯನ್ನು  ನಿಗಧಿ ಪಡೆಸಬೇಕು. ಶಾಲೆಗಳಲ್ಲಿ ಶುಲ್ಕ ಪಡೆಯುವ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು. ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರಬಾರದು. 2018-19 ಹಾಗೂ 2019-20 ಸಾಲಿನ ಆರ್‌ಟಿಇ ಬಾಕಿ ಶುಲ್ಕವನ್ನು ಮಂಜೂರು ಮಾಡಬೇಕು. ಆನ್‌ಲೈನ್ ಕ್ಲಾಸ್‌ಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲಾ ಪುನಾರಂಭಕ್ಕೂ ಮುನ್ನ ಪಾಲಕರ, ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಒಳಗೊಂಡ ಸಮಿತಿಯಲ್ಲಿ ಚರ್ಚಿಸಿ ರೂಪರೇಶ ನಿರ್ದೇರಿಸಬೇಕೆಂದು ಶಶಿಧರ ದಿಂಡೂರ ಸರಕಾರಕ್ಕೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಜಯದೇವ ಮೆಣಸಗಿ ಮಾತನಾಡಿ, ಕಳೆದ 6-7 ತಿಂಗಳಿಂದ ಪಾಲಕರು, ಮಕ್ಕಳು ಸರಕಾರದ ಗೊಂದಲದ ನೀತಿಗಳಿಂದ ಒತ್ತಡದಲ್ಲಿದ್ದಾರೆ. ಸಚಿವರು ತಮ್ಮದೇ ಆದ ಗೊತ್ತುವಳಿ, ನಿರ್ದೇಶನ ಮೂಲಕ ಮಕ್ಕಳಿಗೆ, ಪಾಲಕರಿಗೆ ಹಾಗೂ ಶಾಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಕ್ರಮ ಅಳವಡಿಸಬೇಕು. ಸರಕಾರ ತಾರತಮ್ಯ ಮಾಡದೇ ಎಲ್ಲ ಶಾಲೆಗಳಿಗೂ ಒಂದೇರೀತಿ ದಿಕ್ಸೂಚಿ ಸೂಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ.ಸೂನಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕಾನೂನು ಕುರಿತು ಅರಿವು ಮೂಡಿಸುವುದು ಅಗತ್ಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಮಗು ಭ್ರೂಣದಲ್ಲಿ ಇರುವಾಗ ಜಾರಿಯಾಗುವ ಕಾನೂನು, ಮರಣದವರೆಗೆ ಅನ್ವಯವಾಗಿರುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜಶೇಖರ ಪಾಟೀಲ ಅವರು ನುಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ, ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರೋಟರಿ ಗದಗ ಸೆಂಟ್ರಲ್ ಇವರ ಸಹಯೋದಲ್ಲಿ ಜರುಗಿದ ಅರೆ ಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಕುರಿತು ಅರಿವು ಮೂಡಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗಾಗಿ ಜಾರಿಯಲ್ಲಿರುವ ಯೋಜನೆ ಹಾಗೂ ಕಾನೂನುಗಳ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅರೆ ಕಾಲಿಕ ಸ್ವಯಂ ಸೇವಕರಾಗಿ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳು ವಿವಿಧ ಕಾನೂನುಗಳ ಕುರಿತು ಮಾಹಿತಿ ಪಡೆದು ಆರ್ಥಿಕವಾಗಿ ದುರ್ಬಲ ಹಾಗೂ ಶೋಷಿತರಿಗೆ ಇವುಗಳ ಅರಿವು ಮೂಡಿಸುವದರ ಜೊತೆಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲು ಮುಂದಾಗುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಸಾರ್ವಜನಿಕರಲ್ಲಿ ಕಾನೂನಿನ ನೆರವು ಅರಿವು ಕುರಿತು ಜಾಗೃತಿ ಮೂಡಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾನೂನುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಅರೆ ಕಾಲಿಕ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು ಆಯ್ಕೆಯಾದ ಸ್ವಯಂ ಸೇವಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸುವಂತೆ ತಿಳಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರಶಿಂಸಾ ಎಂ.ವಿ., ಜಿ.ಪಂ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ರೋಟರಿ ಗದಗ ಸೆಂಟ್ರಲ್ ಅದ್ಯಕ್ಷ ರಾಜು ಕಂಟಿಗೊಣ್ಣವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು, ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿಗಳಾದ ಜೆ.ಸಿ.ರಶ್ಮಿ, ಕು.ಸಾವಿತ್ರಿ ಕಬಾಡಿ ವಿವಿಧ ಕಾನೂನುಗಳ ಕುರಿತು ಅರೆ ಕಾಲಿಕ ಸ್ವಯಂ ಸೇವಕರಿಗೆ ಉಪನ್ಯಾಸ ನೀಡಿದರು. ಶ್ರೀಮತಿ ಉಷಾ ನಾಲ್ವಾಡ ಪ್ರಾರ್ಥಿಸಿದರು. ಕು. ಪ್ರಭಾವತಿ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.

ಹೊರಟ್ಟಿ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಎಚ್.ಕೆ. ಪಾಟೀಲ ಮತ್ತು ತಮ್ಮ ಮಧ್ಯೆ ಹೊಂದಾಣಿಕೆ ಇತ್ತು ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ರಾಜಕೀಯ ಪಿತೂರಿ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್. ಪಾಟೀಲ ಪ್ರತಿಕ್ರಿಯೆ ನೀಡಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಅವರು ಶಾಸಕ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಕೆ. ಪಾಟೀಲ ಅವರನ್ನು ತೇಜೋವಧೆ ಮಾಡುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಎಚ್.ಕೆ. ಪಾಟೀಲ ಅವರೊಂದಿಗೆ ವಿಷಯಾಧಾರಿತ ಒಪ್ಪಂದ ಇತ್ತು. ಆದರೆ ಈ ಬಾರಿ ಆ ರೀತಿ ಒಪ್ಪಂದ ಇಲ್ಲ. ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎನ್ನುವ ಬಸವರಾಜ ಹೊರಟ್ಟಿ ಅವರ ಹೇಳಿಕೆಯಲ್ಲಿ ಯಾವುದೇ ನಿಜಾಂಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ಇಂಥ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಯಾವುತ್ತೂ ಸಹಿಸುವುದಿಲ್ಲ. ಎಚ್.ಕೆ. ಪಾಟೀಲ ಅವರ ತೇಜೋವಧೆಗೆ ನೀಡಿರುವ ಇಂಥ ಹೇಳಿಕೆಯನ್ನು ಹೊರಟ್ಟಿ ಅವರು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಚಿತ್ರವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷ ಮತ್ತು ಸರಕಾರದಲ್ಲಿ ನಾನಾ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಚ್.ಕೆ.ಪಾಟೀಲ, ಪ್ರಬುದ್ಧ ರಾಜಕಾರಣಿ ಎಂಬ ಖ್ಯಾತಿ ಹೊಂದಿದ್ದಾರೆ. ಅಂತಹ ನಾಯಕರ ವಿರುದ್ಧ ಇಂತಹ ಸಣ್ಣತನದ ಹೇಳಿಕೆ ನೀಡಿವುದು ಶೋಭೆಯಲ್ಲ. ಒಂದು ವೇಳೆ ಹೊಂದಾಣಿಕೆ ಮಾಡಿಕೊಂಡಿದ್ದೆ ಆದಲ್ಲಿ 2008ರ ಚುನಾವಣೆಯಲ್ಲಿ ಎಚ್.ಕೆ. ಪಾಟೀಲ ಸೋಲುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಮುಖಂಡ ಟಿ.ಈಶ್ವರ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಆಗ ಹೊರಟ್ಟಿ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದು ಎಲ್ಲರಿಗೂ ಗೊತ್ತಿರುವುದೇ. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೂ ಒಳ ಒಪ್ಪಂದಗಳಿವೆ. ಇದೆಲ್ಲವನ್ನೂ ಅರಿತಿರುವ ಜೆಡಿಎಸ್ ವರಿಷ್ಟರು ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡದೇ, ಅಧಿಕಾರದಿಂದ ದೂರವಿರಿಸಿದರು ಎಂದು ದೂರಿದರು.
ಸಜ್ಜನ ರಾಜಕಾರಣಿ ಎಚ್.ಕೆ.ಪಾಟೀಲ ವಿರುದ್ಧ ಆರೋಪ ಕುರಿತು ನಾಲ್ಕು ದಿನಗಳಲ್ಲಿ ಬಸವರಾಜ ಹೊರಟ್ಟಿ ಅವರು ಕ್ಷಮೆ ಕೋರಬೇಕು. ಇಲ್ಲವೇ ಹೊರಟ್ಟಿಯ ಅವರ ರಾಜಕೀಯ ಒಳಒಪ್ಪಂದಗಳನ್ನು ನಾವು ಬಯಲಿಗೆಳೆಯುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ ಉಪಸ್ಥಿತರಿದ್ದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ವರ್ತನೆಗೆ ಖಂಡನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವರ್ತನೆಗೆ ಮತ್ತು ತಾಡಪಲ ವಿತರಣೆಯಲ್ಲಿ ತಾರತಮ್ಯ, ಅವ್ಯವಹಾರ ಖಂಡಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ರೈತ ಸಂಘ ವತಿಯಿಂದ ಉಪತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ದಲಿತ ರೈತ ಸಂಘದ ಅಧ್ಯಕ್ಷ ದುರಗೇಶ ಬಂಡಿವಡ್ಡರ ಮಾತನಾಡಿ, ರೈತರ ಅನುಕೂಲಕ್ಕಾಗಿ ಸರ್ಕಾರ ಕೃಷಿ ಇಲಾಖೆಯಿಂದ ಪ್ರತಿ ವರ್ಷ ಸಬ್ಸಿಡಿ ದರದಲ್ಲಿ ತಾಡಪಲಗಳನ್ನು ವಿತರಿಸುತ್ತಿದೆ. ಆದರೆ, ನರೇಗಲ್ಲ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿಜವಾದ ರೈತರಿಗೆ ತಲುಪಬೇಕಾದ ತಾಡಪತ್ರಿಗಳನ್ನು ರಾಜಕೀಯ, ಗಣ್ಯ ವ್ಯಕ್ತಿಗಳ ಮನೆಗೆ ಸೇರಿಸುತ್ತಿದ್ದಾರೆ.
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು, ಕೇವಲ ಎಂಎಲ್‌ಎ, ಸಂಸದರ, ಜಿ.ಪಂ, ತಾ.ಪಂ ಅಧ್ಯಕ್ಷ ಹಾಗೂ ಸದಸ್ಯರ ಮಾತುಗಳನ್ನು ಕೇಳಿ ತಮಗೆ ಬೇಕಾದ ಶ್ರೀಮಂತ ರೈತರಿಗೆ ತಾಡಪತ್ರಿಗಳನ್ನು ನೀಡುತ್ತಿದ್ದಾರೆ. ಕೃಷಿ ಸಾಮಗ್ರಿಗಳ ವಿತರಣೆಯಲ್ಲಿ ಪದೇ ಪದೇ ಕೃಷಿ ಅಧಿಕಾರಿ ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ನರೇಗಲ್ಲ ಸುತ್ತಮುತ್ತಲಿನ ದಲಿತ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಉಪತಹಸೀಲ್ದಾರ ಅನುಪಸ್ಥಿತಿಯಲ್ಲಿ ನಾಡಕಚೇರಿ ಗಣಕ ಯಂತ್ರ ನಿರ್ವಾಹಕ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದುರಗಪ್ಪ ಬಂಡಿವಡ್ಡರ, ಯಲ್ಪಪ್ಪ ಮಣ್ಣೊಡ್ಡರ, ರಾಮಣ್ಣ ಹನಮಸಾಗರ, ವೆಂಕಟೇಶ ಬಂಡಿವಡ್ಡರ, ಹನಮಂತಪ್ಪ ಮಣ್ಣೊಡ್ಡರ, ಸುರೇಶ ಮಣ್ಣೊಡ್ಡರ, ಆಂಜನೇಯ ನವಲಗುಂದ, ಕಳೂಳೆಪ್ಪ ಬಂಡಿವಡ್ಡರ, ಹುಚ್ಚಪ್ಪ ಬಂಡಿವಡ್ಡರ, ಅಂಜನೇಯ ಕಟ್ಟಿಮನಿ, ಕಲ್ಲಪ್ಪ ಬಂಡಿವಡ್ಡರ, ದೊಡ್ಡಮರದಪ್ಪ ಕಟ್ಟಿಮನಿ ಸೇರಿದಂತೆ ಇತರರಿದ್ದರು.

ಸ್ಲಂ ಜನರನ್ನು ಕಡೆಗಣಿಸಿದರೆ ಹೋರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಡಿಯಲ್ಲಿ ವಸತಿ ಕಲ್ಪಿಸುವಲ್ಲಿ ಸ್ಲಂ ಜನರನ್ನು ಕಡೆಗಣಿಸಿದರೆ ಜಿಲ್ಲಾ ಸ್ಲಂ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಎಚ್ಚರಿಕ್ಕೆ ನೀಡಿದ್ದಾರೆ.
ಅವರು ಜಿಲ್ಲಾ ಸ್ಲಂ ಸಮಿತಿಯ ಆವರಣದಲ್ಲಿ ಕರೆದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಹಲವಾರು ವರ್ಷಗಳಿಂದ ಗದಗ-ಬೆಟಗೇರಿ ನಗರದ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿಯಿಂದ ಹಲವಾರು ಹೋರಾಟಗಳನ್ನು ನಡೆಸಿ ನಮ್ಮ ಭಾಗದ ಜನಪ್ರತಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಆದರೆ ಮೂಲ ವಸತಿರಹಿತರಿಗೆ ಹಾಗೂ ಗುಡಿಸಲು ನಿವಾಸಿಗಳಿಗೆ ವಸತಿ ಕಲ್ಪಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವುದು ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ. ಈಗಾಗಲೇ ಘೋಷಿತ ಹಾಗೂ ಅಘೋಷಿತ ಸ್ಲಂಗಳ ಸರ್ವೇ ನಡೆಸಿರುವುದನ್ನು ಪರಿಗಣಿಸಿ ಕನಿಷ್ಠಮಟ್ಟದ ಸೌಲಭ್ಯವಿಲ್ಲದೇ ತಮ್ಮ ಬದುಕನ್ನು ನಡೆಸುತ್ತಿರುವ ಗುಡಿಸಲು ಕುಟುಂಬಗಳಿಗೆ ವಸತಿ ಯೋಜನೆಯನ್ನು ಮಂಜೂರು ಮಾಡಬೇಕು. ಸುಮಾರು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತ ಬಂದಿರುವ ನಗರದ ಮೂಲ ವಸತಿರಹಿತ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡುವ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಮಾತನಾಡಿ, ವಸತಿರಹಿತ ಕುಟುಂಬಗಳ ಹೋರಾಟಗಳ ಮೂಲಕ ಎಚೆತ್ತುಕೊಂಡ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿ ಮನೆಗಳು ನಿರ್ಮಾಣ ಹಂತದಲ್ಲಿವೆ. ಮನೆ ಹಂಚಿಕೆಯ ಆಯ್ಕೆ ಪ್ರಕ್ರಿಯ ಸಂದರ್ಭದಲ್ಲಿ ನಿಜವಾದ ವಸತಿರಹಿತರ ಕುಟುಂಬಗಳನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸ್ಲಂ ಸಮಿತಿಯಿಂದ ಅನಿರ್ದಿಷ್ಟ ಧರಣಿಸತ್ಯಾಗ್ರಹ ನಡೆಸಲಾಗುವುದು ಎಂದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ ಮುಂದಿನ ಹೋರಾಟದ ರೂಪರೇಷಗಳ ಕುರಿತು ಮಾತನಾಡಿದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ವಿಶಾಲಕ್ಷಿ ಹಿರೇಗೌಡ್ರ, ಭಾರತಿ ಬಗಾಡೆ, ನಜಮುನಿಸಾ ಮುರಗೋಡ, ಪುಷ್ಪಾ ಬಿಜಾಪೂರ, ಹಸೀನಾ ಕೊಪ್ಪಳ, ಮರ್ದಾನಬಿ ಬಳ್ಳಾರಿ, ಯುವ ಸಮಿತಿ ಅಧ್ಯಕ್ಷ ವಿಕ್ರಮ.ಎಫ್.ಜಿ, ಜಾಫರ ಢಾಲಾಯತ, ಸಲೀಮ ಕದಡಿ, ಶರಣಪ್ಪ, ಚಾಂದಸಾಬ ಬದಾಮಿ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪೈಪ್‌ಲೈನ್ ಕಾಮಗಾರಿಯಿಂದ ಭೂ ಕುಸಿತ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣದ ವಾರ್ಡ್ ನಂ.12 ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭೂ ಕುಸಿತ ಕಂಡಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಇತ್ತೀಚಿಗೆ ಪ.ಪಂ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಪೈಪ್‌ಲೈನ್ ಕಾಮಗಾರಿಗಾಗಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಮುಗಿದ ನಂತರ ಸರಿಯಾಗಿ ಮಣ್ಣು ಮುಚ್ಚದ ಪರಿಣಾಮ ಮಳೆಯಿಂದಾಗಿ ರಸ್ತೆಯ ಮಧ್ಯದಲ್ಲಿ ಭೂ ಕುಸಿತ ಕಂಡಿದೆ ಎನ್ನಲಾಗುತ್ತಿದೆ.
ಭೂ ಕುಸಿತ ಉಂಟಾಗಿರುವುದರಿಂದ ಸಾರ್ವಜನಿಕರು ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವುದಕ್ಕೆ ಮತ್ತು ಪಾದಾಚಾರಿಗಳಿಗೆ ಭಯ ಸೃಷ್ಟಿಯಾಗಿದೆ. ಕುಸಿತ ರಸ್ತೆಯಲ್ಲಿ ಹೋಗುವಾಗ ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಈ ಭೂ ಕುಸಿತದಿಂದ ಸುತ್ತಮುತ್ತಲಿನ ಮನೆಗಳಲ್ಲಿ ಮಳೆಯ ನೀರು ಒಳಗೆ ಬರುವ ಭಯ ಪ್ರಾರಂಭವಾಗಿದೆ.
ಸುಮಾರು 50 ಕ್ಕೂ ಅಧಿಕ ಅಡಿ ದೂರದ ವರೆಗೆ ಭೂ ಕುಸಿತ ಕಂಡಿದೆ. ಒಂದು ಮಳೆಗೆ ಈ ರೀತಿಯಾದರೆ, ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದ ಮಳೆಗಳದರೆ ಗತಿಯೇನು ಎನ್ನುವಂತಾಗಿದೆ.
ಅಪಾಯ ನಿರ್ಮಾಣವಾಗುವ ಮೊದಲೇ ಪ.ಪಂ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಈ ರಸ್ತೆಯನ್ನು ದುರಸ್ತಿ ಕಾರ್ಯ ಮಾಡಿಸಿಬೇಕು ಎಂದು ನರೇಗಲ್ಲ ಪಟ್ಟಣದ ನಿವಾಸಿ ಆನಂದ ಕೊಟಗಿ ಆಗ್ರಹಿಸಿದ್ದಾರೆ.

ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯ ಹೊಸ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನೆರೆ ಮತ್ತು ಮಳೆಗೆ ಹಾನಿಯುಂಟಾಗಿರುವ ಕುರಿತು ಜಂಟಿ ಬೆಳೆ ಸಮೀಕ್ಷೆ ಕೈಗೊಂಡು ಶೀಘ್ರವೇ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರಿಗೆ ಸಕಾಲಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಂಟಿ ಬೆಳೆ ಸಮೀಕ್ಷೆ ಮತ್ತು ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ಆಗಷ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಸುರಿದ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಏಳು ತಾಲೂಕುಗಳನ್ನು ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲದೇ, ಜಂಟಿ ಬೆಳೆ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಮುಕ್ತಾಯಗೊಳಿಸಿ ಬೆಳೆ ಹಾನಿಯ ಬಗ್ಗೆ ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಬೇಕು ಎಂದರು.
ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಹೀಗಾಗಿ ಜಂಟಿ ಸಮೀಕ್ಷೆ ಕಾರ್ಯದಲ್ಲಿ ಯಾವ ರೈತರು ಬಿಟ್ಟು ಹೋಗದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಬೆಳೆ ಮಳೆಗೆ ಹಾಳಾಗಿದ್ದರೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 99.2 ರಷ್ಟು ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ರೈತರು ಮಾಡಿರುವ ಸಮೀಕ್ಷೆಯಲ್ಲಿ 13,350 ಮರಳಿ ಸರ್ವೇ ಮಾಡಿದೆ. ಬೆಳೆ ಸಮೀಕ್ಷೆ ಕುರಿತು ಸಲ್ಲಿಕೆ ಆಗಿದ್ದ ಸುಮಾರು 396 ಆಕ್ಷೇಪಣಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕಂದಾಯ ಇಲಾಖೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಮುಖ್ಯಸ್ಥರು, ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ಇತರರು ಸಭೆಯಲ್ಲಿ ಇದ್ದರು.
 

ಕಾರ್, ಬೈಕ್ ಮುಖಾಮುಖಿ ಡಿಕ್ಕಿ; ವ್ಯಕ್ತಿ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಕಾರ್ ಹಾಗೂ ದ್ವಿಚಕ್ರ ವಾಹನದ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಬಳಿ ನಡೆದಿದೆ.
ಡೋಣಿ ಗ್ರಾಮದ ನೀಲಪ್ಪ ತೋಟಗಂಟಿ (55) ಮೃತ ದುರ್ಧೈವಿಯಾಗಿದ್ದು, ಪತ್ನಿ ಯಲ್ಲವ್ವ ತೋಟಗಂಟಿ ಗಂಭೀರ ಗಾಯಗೊಂಡಿದ್ದು, ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕೊರೋನಾದಿಂದ ರಾಜ್ಯದ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಅವರ ಸಂಕಷ್ಟಗಳಿಗೆ ಸರಕಾರ ತಕ್ಷಣ ಸ್ಪಂದಿಸಿ ಪರಿಹಾರ ಘೋಷಣೆ ಮಾಡಬೇಕೆಂದು ಮುಖಂಡ ಸಿ.ವಿ.ಚಂದ್ರಶೇಖರ ಸರಕಾರಕ್ಕೆ ಒತ್ತಾಯಿಸಿದರು.
ಅವರು ಕೊಪ್ಪಳ ತಾಲೂಕು ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಸಿ.ವಿ.ಚಂದ್ರಶೇಖರವರ ಸಹಯೋಗದಲ್ಲಿ ಶಿಕ್ಷಕರಿಗೆ ಫುಡ್‌ಕಿಟ್ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನ್ಯಾಯವಾದಿ ರಾಘವೇಂದ್ರ ಆರ್. ಪಾನಘಂಟಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸರಕಾರ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪರಿಹಾರ ನೀಡಿದೆ. ಆದರೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವ ಪರಿಹಾರ ನೀಡದಿರುವುದು ಖೇದಕರ. ಕೂಡಲೇ ಶಾಸಕರು ಹಾಗೂ ಸಂಸದರು ಸರಕಾರಕ್ಕೆ ಒತ್ತಾಯ ಮಾಡಿ ಶಿಕ್ಷಕರಿಗೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಹಿದ್ ತಹಸೀಲ್ದಾರ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಗನ್ನಾಥ ಅಲ್ಲಂಪಲ್ಲಿ ಹಾಗೂ ಕಾರ್ಯದರ್ಶಿ ಪ್ರಹ್ಲಾದ ಅಗಳಿ, ದಾನಪ್ಪ ಕವಲೂರ, ಮಹಮ್ಮದ್ ಅಲಿಮುದ್ದೀನ್, ಮಲ್ಲಿಕಾರ್ಜುನ ಚೌಕಿಮಠ, ಶಿವನಗೌಡ ಪಾಟೀಲ, ವೀರಣ್ಣ ಕಂಬಳಿ ಹಾಗೂ ಜಿಲ್ಲೆಯ ಮತ್ತು ತಾಲೂಕಿನ ಪದಾಧಿಕಾರಿಗಳು ಭಾಗವಹಿಸಿದ್ದರು.
ಎ.ಕೆ.ಮುಲ್ಲನವರ್ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ನಾಗರಾಜ ಗುಡಿ ವಂದನಾರ್ಪಣೆ ಮಾಡಿದರು.
 

ಕುಸಿದ ಮನೆಗಳ ನಷ್ಟ ವೀಕ್ಷಿಸಿದ ಇಂಜಿನಿಯರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಅವುಗಳ ನಷ್ಟ ಪ್ರಮಾಣವನ್ನು ಗದಗನ ಪಂಚಾಯಿತ್ ರಾಜ್ ಇಂಜಿನಿಯರ ವಿಭಾಗದ ಇಂಜಿನಿಯರ ಮಂಜುನಾಥ ಕಲಬುರ್ಗಿ ವೀಕ್ಷಿಸಿದರು.
ಮಂಗಳವರ ಗ್ರಾಮಕ್ಕೆ ಭೇಟಿ ನೀಡಿ ಸುಮಾರು ೧೫ ಮನೆ ಗೋಡೆ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮಾತನಾಡಿದ ಅವರು, ಶೇಕಡಾ ೫೦ ಹಾನಿ ಸಂಭವಿಸಿದ್ದು, ಈ ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಮತ್ತು ಕಂದಾಯ ನಿರೀಕ್ಷಕರು ತಹಸೀಲ್ದಾರ್ ಸಮ್ಮುಖದಲ್ಲಿ ನಷ್ಟ ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮ ಮಾಡುತ್ತಾರೆ ಎಂದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಮಾತನಾಡಿ ತಿಮ್ಮಾಪುರ ಗ್ರಾಮಕ್ಕೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹಳೆಯ ಮಣ್ಣಿನ ಮನೆಗಳು ಹೆಚ್ಚಿ ಪ್ರಮಾಣದಲ್ಲಿ ಇದ್ದು, ಭಾರಿ ಮಳೆಗೆ ಅವುಗಳ ಗೋಡೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದ್ದು ಕಂದಾಯ ಇಲಾಖೆ ಬೇಗನೆ ಸಂತ್ರಸ್ತರಿಗೆ ಪರಿಹಾರ ಧನವನ್ನು ನೀಡಬೇಕು ಎಂದು ಆಗ್ರಹಿಸಿದರು.

error: Content is protected !!