ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ
ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಬದಲಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗೊಲ್ಲ ಸಮಾಜದಿಂದ ಇಲ್ಲಿನ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ನೀಡಲಾಯಿತು.
ಸಮಾಜದ ಅಧ್ಯಕ್ಷ ಪಿ.ಎಫ್.ಗೌಡರ ಮಾತನಾಡಿ, ಕಾಡುಗೊಲ್ಲ ಎನ್ನುವುದು ಗೊಲ್ಲ ಸಮಾಜದ ಒಂದು ಉಪ ಪಂಗಡವಾಗಿದೆ. ಕಾಡುಗೊಲ್ಲ ಪಂಗಡಕ್ಕೆ ಮಾತ್ರ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸರಿಯಾದ ಕ್ರಮವಲ್ಲ. ಆದರೆ ಸರ್ಕಾರವು ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಸ್ಥಾಪನೆಯಿಂದ ಕೇವಲ ರಾಜ್ಯದ ಕೇವಲ 2 ಜಿಲ್ಲೆಗಳಿಗೆ ಹೆಚ್ವು ಉಪಯುಕ್ತ ಹಾಗೂ ಲಾಭ ಆಗಲಿದೆ. ಪರಿಣಾಮ ಅಂದಾಜು 35 ರಿಂದ 40 ಲಕ್ಷ ಜನಸಂಖ್ಯೆ ಹಾಗೂ 24 ಉಪ ಪಂಗಡಗಳಿಗೆ ಅನ್ಯಾಯವಾಗಲಿದೆ ಎಂದು ದೂರಿದರು.
ರಾಜ್ಯದ ಸಮಗ್ರ ಗೊಲ್ಲ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವ ಮೂಲಕ ಬಡ ಹಾಗೂ ಹಿಂದುಳಿದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕಿನ ಕಾಲಕಾಲೇಶ್ವರ, ಮ್ಯಾಕಲ್‌ಝರಿ, ಜಕ್ಕಲಿ, ಯರೆಬೇಲೆರಿ, ಡಸ ಹಡಗಲಿ ಹಾಗೂ ಕುರಹಟ್ಟಿ ಗ್ರಾಮಗಳಿಂದ ಗ್ರಾಮಸ್ಥರು ಭಾಗವಹಿಸಿದ್ದರು.
ಪುರಸಭೆ ಮಾಜಿ ಸದಸ್ಯ ಕಳಕಪ್ಪ ಗುಳೇದ, ಎಚ್.ವೈ.ಬೊನೇರ, ಪಿ.ವೈ.ಮ್ಯಾಗೇರಿ, ಶರಣಪ್ಪ ದಿವಾಣದ, ನಾಗಪ್ಪ ಮ್ಯಾಗೇರಿ, ದೇವಪ್ಪ ವರಗಾ, ಮುತ್ತು ಗೌಡರ, ಮುದಕಪ್ಪ ಬೊನೇರ, ಮಲ್ಲನಗೌಡ ಗೌಡರ, ಬಾಲಪ್ಪ ಗೌಡರ, ಯಲ್ಪಪ್ಪ ಮ್ಯಾಗೇರಿ, ಮುತ್ತು ದಿವಾಣದ, ದೇವಪ್ಪ ಗುಳೇದ, ಶ್ರೀಧರ ದಿವಾಣದ, ಕಳಕಪ್ಪ ದಿವಾಣದ, ಮುತ್ತಣ್ಣ ವರಗಾ, ಕಳಕಪ್ಪ ಕುರಿ, ಸಂತೋಷ ದಿವಾಣದ, ಮಂಜುನಾಥ ವರಗಾ ಸೇರಿ ಇತರರು ಇದ್ದರು.
ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮನವಿ
ಸಾಮರ್ಥ್ಯ ಅರಿತು ಒತ್ತಡ ನಿಭಾಯಿಸಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ವ್ಯಕ್ತಿಯು ತನ್ನ ಸಾಮರ್ಥ್ಯಗಳನ್ನು ಅರಿತುಕೊಂಡು ಜೀವನದ ಸಾಮಾನ್ಯ ಒತ್ತಡಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬರೂ ಮಾನಸಿಕ ಸಮತೋಲನ ಕಾಯ್ದುಕೊಳ್ಳುವ ಮೂಲಕ ಆರೋಗ್ಯವಂತ ಜೀವನ ನಡೆಸಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ವಿ.ಪಾಟೀಲ ಹೇಳಿದರು.
ನಗರದ ಜಿಲ್ಲಾ ಸತ್ರ ನ್ಯಾಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗದಗ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನ ಕೌಶಲ್ಯಗಳನ್ನು ಹೊಂದುವುದರ ಜೊತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಬೇಕು. ಮಾನಸಿಕ ಅಸ್ವಸ್ಥತೆಯಿಂದ ಬಳಲುವವವರು ಸಾಮಾಜಿಕ, ಆರ್ಥಿಕ ಹಾಗೂ ಔಧ್ಯೋಗಿಕವಾಗಿ ಹಿನ್ನಡೆ ಅನುಭವಿಸುತ್ತಾರೆ. ಹೀಗಾಗಿ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳು ಸಕಾಲಕ್ಕೆ ಚಿಕಿತ್ಸೆ ಪಡೆದರೆ ಖಾಯಿಲೆ ಗುಣಪಡಿಸಬಹುದಾಗಿದ್ದು, ಮೊದಲಿನಂತೆ ಸಹಜ ಜೀವನ ನಡೆಸಬಹುದು ಎಂದರು.
ಸರ್ಕಾರ ಮಾನಸಿಕವಾಗಿ ಅಸ್ವಸ್ಥಗೊಂಡಿರುವವರ ಬಗ್ಗೆ ನಿಗಾವಹಿಸಿದ್ದು, ಚಿಕಿತ್ಸೆಗಾಗಿ ಸಾಕಷ್ಟು ಹಣ ವ್ಯಯಿಸುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೇ, ಮಾನಸಿಕ ಅಸ್ವಸ್ಥರನ್ನು ಕಡೆಗಣಿಸದೇ ಅವರನ್ನೂ ನಮ್ಮವರೆಂದು ಭಾವಿಸಬೇಕು ಎಂದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ವಿ.ನರಸಿಂಹಸಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ, ಜೆಎಂಎಫ್‌ಸಿ ಮಹಾದೇವಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ ಬಸರೀಗಿಡದ, ಮಾನಸಿಕ ಆರೋಗ್ಯಾಧಿಕಾರಿ ಸೋಮಶೇಖರ ಬಿಜ್ಜಳ, ಮನೋರೋಗ ತಜ್ಞ ಡಾ.ತಾರಾಚಂದ ನಾಯ್ಕ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವೈ.ಕೆ. ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ, ವಕೀಲ ಸಂಘದ ಪದಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚೌಹಾಣ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಪುಷ್ಪಾ ಪಾಟೀಲ ಕಾರ್ಯಕ್ರಮ ವಂದಿಸಿದರು.
ಪೊಲೀಸರ ಕಾರ್ಯಚರಣೆ: ಗದಗನ ಐವರು ದರೋಡೆಕೋರರ ಬಂಧನ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ವಾಹನಗಳನ್ನು ಅಡ್ಡಗಟ್ಟಿ ಹೆದರಿಸಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್ ವೊಂದನ್ನ ಗದಗ ಪೊಲೀಸರು ಬಂಧಿಸಿದ್ದಾರೆ.
ನಗರದ ದೋಭಿಘಾಟ್ ನ ಬಳಿ ರಿಂಗ್ ರೋಡ್ ನಲ್ಲಿ ರಸ್ತೆಗೆ ಅಡ್ಡಲಾಗಿ ಹಗ್ಗ ಹಿಡಿದು ಅಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ, ಸವಾರರನ್ನು ಬೆದರಿಸಿ, ಹಣ, ಮೊಬೈಲ್, ಬಂಗಾರದ ಆಬರಣ ದೋಚಿಕೊಂಡು ಪರಾರಿಯಾಗುತ್ತಿದ್ದರು.
ವಿಷಯ ತಿಳಿದ ಪೊಲೀಸರು ಗ್ಯಾಂಗ್ ಅನ್ನು ಹೆಡೆ ಮುರಿಕಟ್ಟಿದ್ದಾರೆ. ಎಲ್ಲಾ ಆರೋಪಿಗಳು ಗದಗ ನಗರದವರಾಗಿದ್ದು. ಆರೋಪಿತರು ರೋಹಿತ್ ಕಟ್ಟಿಮನಿ, ಹನಮಂತ ಹಂದಿಗುಂದ, ಸುನಿಲ್, ಸಾಹಿಲ್, ಗಣೇಶ್ ಇವರನ್ನು ಬಂಧಿಸಿದ್ದಾರೆ. ಅಲ್ಲದೇ ದರೊಡೆಗೆ ಬಳಸುತ್ತಿದ್ದ ರಾಡು, ಬಡಿಗೆ, ಚಾಕು, ಹಗ್ಗ ಸೇರಿದಂತೆ ಮತ್ತು 500 ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಪಿಐ ಪಿ.ವಿ. ಸಾಲಿಮಠ, ಪಿಎಸ್ ಐ ಜಿ.ಟಿ. ಜಕ್ಕಲಿ, ಎಎಸ್ಐ ವಿ.ಎಸ್. ಬಿಕ್ಷಾವತಿಮಠ, ಸಿಬ್ಬಂದಿಗಳಾದ ರಮೇಶ ಬೇವಿನಕಟ್ಟಿ, ಆರ್.ಎಸ್. ಹಾದಿ, ಬಿ.ಜಿ. ಹೊರಕೇರಿ, ವಿ.ಎಸ್. ಶೆಟ್ಟೆಣ್ಣವರ, ಎಚ್.ಐ. ಯಡಿಯಾಪುರ, ಪಿ.ಎಸ್. ಕಲ್ಲೂರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬುಲೆಟ್ ಪವ್ಯನಿಂದ ಚಾಕು ಇರಿತ; ನಕ್ಷತ್ರ ಹೋಟೆಲ್ ನಲ್ಲಿ ಘಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕುಡಿದ ನಶೆಯಲ್ಲಿ ಇಬ್ಬರು ಯುವಕರು ಸೇರಿ ಒಬ್ಬ ಯುವಕನಿಗೆ ಚಾಕು ಇರಿದ ಘಟನೆ ನಗರದ ನಕ್ಷತ್ರ ಹೋಟೆಲ್ ನಲ್ಲಿ ನಡೆದಿದೆ.
ಬೆಟಗೇರಿಯ ಹೆಲ್ತ್ ಕ್ಯಾಂಪ್ ನಿವಾಸಿ ನಿಖಿಲ್ ಮುದಗಲ್ ಇರಿತಕ್ಕೊಳಗಾಗಿದ್ದು, ಪವನ್ ಕುಮಾರ ಅಲಿಯಾಸ್ ಬುಲೆಟ್ ಪವ್ಯ ಹಾಗೂ ಪವನ್ ಸಕ್ರಿ ಅವರಿಬ್ಬರೂ ಸೇರಿ ಈ ಕೃತ್ಯವೆಸಗಿದ್ದಾರೆ.
ಚೂರಿ ಇರಿತಕ್ಕೊಳಗಾದ ನಿಖಿಲ್ ಶೌಚಾಲಯಕ್ಕೆ ಹೋಗುವಾಗ ಎದುರುಗಡೆಯಿಂದ ಬಂದ ಬುಲೆಟ್ ಪವ್ಯನಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ಬುಲೆಟ್ ಪವ್ಯ ಹಾಗೂ ಪವನ್ ಸಕ್ರಿ ನಿಖಿಲ್ ನಿಗೆ ಚೂರಿ ಇರಿದು ಹಲ್ಲೆ ಮಾಡಿದ್ದಾರೆ.
ಚೂರಿ ಇರಿತಕ್ಕೊಳಗಾದ ನಿಖಿಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ. ಈ ಪ್ರಕರಣದಿಂದಾಗಿ ಗದಗ ನಗರದಲ್ಲಿ ಮತ್ತೆ ಮರಿ ಪುಡಾರಿಗಳು ಗರಿ ಬಿಚ್ಚಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಹಿಂದೆಯೂ ಮುಳಗುಂದ ರಸ್ತೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆದರೆ ಆಗ ಪೊಲೀಸರು ರಾಜಿ ಮಾಡಿಸಿ ಕಳಿಸಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ನಡೆದ ಘಟನೆಯ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಸ್ತೆ ಗುಂಡಿಗೆ ಬಿದ್ದು ಟಾಟಾ ಏಸ್ ಪಲ್ಟಿ; 13 ಕಾರ್ಮಿಕರಿಗೆ ಗಾಯ
ವಿಜಯಸಾಕ್ಷಿ ಸುದ್ದಿ ಗದಗ
ಗುಂಡಿ ಬಿದ್ದಿರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾಏಸ್ ಪಲ್ಟಿಯಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ಉಣಚಗೇರಿ ಗ್ರಾಮದ ಬಳಿ ನಡೆದಿದೆ.
ಗೋಗೇರಿ ಗ್ರಾಮದ ಟಾಟಾ ಏಸ್ ಇಂದು ಸುಮಾರು 13 ಜನ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ಗುಂಡಿ ಬಿದ್ದಿದ್ದರಿಂದ ರಸ್ತೆಯ ಪಕ್ಕಕ್ಕೆ ಚಕ್ರ ಸರೆದಿದೆ. ಪರಿಣಾಮ ವಾಹನ ರಸ್ತೆಯ ಮಧ್ಯದಲ್ಲಿ ಪಲ್ಟಿಯಾಗಿದೆ. ಅದರಲ್ಲಿ ಇದ್ದ ಎಲ್ಲಾ ಕಾರ್ಮಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲಾ.
ಗಾಯಾಳುಗಳನ್ನು ಗಜೇಂದ್ರಗಡ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಲ್ಲಾ ಕಾರ್ಮಿಕರು ಕಟ್ಟಡ ಕಾರ್ಮಿಕರಾಗಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕಡೆ ಹೊರಟಿದ್ದರು. ಈ ಬಗ್ಗೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ; ಕೊಣ್ಣೂರಿನ ಹಳೇ ಸೇತುವೆ ಬಳಿ ಘಟನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಸೇತುವೆ ದಾಟುವ ವೇಳೆ ವ್ಯಕ್ತಿಯೊಬ್ಬ ನದಿಯಲ್ಲಿ ಕೊಚ್ಚಿಹೋದ ಘಟನೆ ತಾಲೂಕಿನ ಕೊಣ್ಣೂರಿನ ಹಳೇ ಸೇತುವೆ ಬಳಿ ನಡೆದಿದೆ.
ಭಾರಿ ಮಳೆಯಾದ ಪರಿಣಾಮ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ಇನ್ನು ಬೆಳಿಗ್ಗೆ ತೋಟಕ್ಕೆ ಹೋಗಿ ಮರಳುವ ವೇಳೆ ವೆಂಕನಗೌಡ ಸಾಲಿಗೌಡ್ರ ನೀರಿನ ಸೆಳೆತಕ್ಕೆ ಸಿಕ್ಕು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಭಾನುವಾರ ಸಂಜೆಯವರೆಗೂ ಅವರ ಮಾಹಿತಿ ಸಿಕ್ಕಿಲ್ಲ. ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ನದಿಗೆ ಬೋಟ್ ಇಳಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಸ್ ಚಾಲಕನ ಹುಚ್ಚು ಸಾಹಸ; ಪ್ರಯಾಣಿಕರ ಪರದಾಟ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಧಾರವಾಡ: ಬಸ್ ಚಾಲಕನ ಹುಚ್ಚು ಸಾಹಸಕ್ಕೆ ಪ್ರಯಾಣಿಕರು ಪರದಾಡಿದ ಘಟನೆ ಜಿಲ್ಲೆಯ ಇನಾಮಹೊಂಗಲ, ಮತ್ತು ಹಾರೊಬೆಳವಡಿ ಗ್ರಾಮದ ಮಧ್ಯದಲ್ಲಿ ನಡೆದಿದೆ.
ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಈ ಗ್ರಾಮಗಳ ಮಧ್ಯದಲ್ಲಿ ಹರಿಯುವ ಹಳ್ಳ ರಭಸವಾಗಿ ಸೇತುವೆ ಮೇಲೆ ಹರಿಯುತ್ತಿತ್ತು. ಈ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ ಸೇತುವೆ ಮೇಲೆ ಬಂದಾಗ ಸಿಲುಕಿಕೊಂಡಿದೆ.
ಆದರೆ ಧೃತಿಗೆಡದೇ ಬಸ್ ಚಾಲಕ ಧೈರ್ಯದಿಂದ ಆ ಸೇತುವೆಯ ಮೇಲೆಯೇ ಬಸ್ ಓಡಿಸಿ ಪಾರು ಮಾಡಿದ್ದಾನೆ.
ಈ ವೇಳೆ ಸ್ಥಳೀಯರು ಭಯದಿಂದ ಬಸ್ ಪಾರಾಗುತ್ತದೋ ಇಲ್ಲವೋ ಎನ್ನುವುದನ್ನು ತೆರೆದ ಕಣ್ಣಿನಲ್ಲಿ ನೋಡುತ್ತಾ ನಿಂತಿದ್ದರು.
ಯಾವುದೇ ಅನಾಹುತವಾಗದೇ ಬಸ್ ಪಾರಾಗಿದ್ದನ್ನು ಕಂಡು ಕೊನೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ನಿಟ್ಟುಸಿರುಬಿಟ್ಟರು.
ಬಾನಂಗಳದಲ್ಲಿ ರುಸ್ತುಂ ಹವಾ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚಿತ್ರದುರ್ಗ: ಚಾಲಕ ರಹಿತ ಡ್ರೋಣ್ ರುಸ್ತುಂ -2 ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ. ದೇಶದ ವಾಯು ಪಡೆಗೆ ಶಕ್ತಿ ತುಂಬಲಿರುವ ರುಸ್ತುಂ-2 ಡ್ರೋಣ್ ಹಾರಾಟವನ್ನು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದ DRDO ಪ್ರದೇಶದ ಏರೋ ನಾಟಿಕ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿ ಹಾರಾಟ ನಡೆಸಲಾಗಿದೆ.
ಸತತ ಎಂಟು ಗಂಟೆ ಕಾಲ 40 KM ವ್ಯಾಪ್ತಿಯಲ್ಲಿ ರುಸ್ತುಂ-2 ಯಶಸ್ವಿಯಾಗಿ ಹಾರಾಟ ನಡೆಸಿದೆ. 16 ಸಾವಿರ ಅಡಿ ಎತ್ತರದಲ್ಲಿ ಸತತ ಹಾರಾಟ ನಡೆಸಿದ ರುಸ್ತುಂ-2 ಭಾರತೀಯ ಸೈನ್ಯಕ್ಕೆ ಬಲ ತುಂಬಲಿದೆ.
ರುಸ್ತುಂ-2 ಡ್ರೋಣ್ ಭಾರತ ದೇಶದ ಹೆಮ್ಮೆಯ ಚಾಲಕ ರಹಿತ ವಿಮಾನವಾಗಿದ್ದು, 2019 ಸೆಪ್ಟೆಂಬರ್ 17 ರಂದು ಪ್ರಾಯೋಗಿಕ ಹಾರಟದ ವೇಳೆ ಪತನವಾಗಿತ್ತು.
ಆದರೀಗ ರುಸ್ತುಂ-2 ಯಶಸ್ವಿ ಹಾರಾಟ ನಡೆಸುವ ಮೂಲಕ DRDO ಸಿಬ್ಬಂದಿಗಳಿಗೆ ಹುಮ್ಮಸ್ಸು ತುಂಬಿದೆ.
ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರಾಮನಗರ: ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 19 ವರ್ಷದ ಹೇಮಲತಾ ಮೃತ ದುರ್ದೈವಿಯಾಗಿದ್ದಾಳೆ. ಆಕ್ಟೋಬರ್ 8 ರಂದು ಹೇಮಲತಾ ಮನೆಯಿಂದ ನಾಪತ್ತೆಯಾಗಿದ್ದು, ಮರುದಿನ ಕುದೂರು ಠಾಣೆಯಲ್ಲಿ ನಾಪತ್ತೆಯಾದ ದೂರು ನೀಡಲಾಗಿತ್ತು.
ಈಗ ತಮ್ಮ ಮನೆಯ ಸಮೀಪದ ಹೇಮಲತಾಳ ದೊಡ್ಡಪ್ಪ ರವೀಂದ್ರಕುಮಾರ್ ಎಂಬುವವರ ಜಮೀನಿನಲ್ಲಿ ಶವ ಪತ್ತೆಯಾಗಿದೆ.
ಹೇಮಲತಾಳನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಆಕೆಯ ಬಟ್ಟೆಗಳನ್ನು ಬೇರೆಡೆ ಎಸೆದು, ಮಣ್ಣಿನಲ್ಲಿ ಮುಚ್ಚಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ಮಳೆಗೆ ರೈತರ ಬೆಳೆ ಹಾನಿ; ಹೊಲಗಳಿಗೆ ನುಗ್ಗಿದ ನೀರು, ಸಂಕಷ್ಟದಲ್ಲಿ ರೈತ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ನಾರಿಹಳ್ಳ ತುಂಬಿ ಹರಿಯುತ್ತಿದೆ.
ಜೊತೆಗೆ ನಾರಿಹಳ್ಳ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಟ್ಟ ಪರಿಣಾಮ ನೀರು ರೈತರ ಹೊಲಗಳಿಗೆ ನುಗ್ಗಿದೆ.
ಮಳೆ ಹಾಗೂ ನಾರಿಹಳ್ಳ ಜಲಾಶಯದ ನೀರಿನ ರಭಸಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದ್ದು, ಸಂಡೂರು ತಾಲೂಕಿನ, ಕುರೆಕುಪ್ಪೆ, ವಡ್ಡು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರ ಬೆಳೆ ಹಾಳಾಗಿದೆ.
ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ.