Home Blog Page 2170

ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ; ಕೊಣ್ಣೂರಿನ ಹಳೇ ಸೇತುವೆ ಬಳಿ ಘಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಸೇತುವೆ ದಾಟುವ ವೇಳೆ ವ್ಯಕ್ತಿಯೊಬ್ಬ ನದಿಯಲ್ಲಿ ಕೊಚ್ಚಿಹೋದ ಘಟನೆ ತಾಲೂಕಿನ ಕೊಣ್ಣೂರಿನ ಹಳೇ ಸೇತುವೆ ಬಳಿ ನಡೆದಿದೆ.

ಭಾರಿ ಮಳೆಯಾದ ಪರಿಣಾಮ ನದಿಗೆ ನೀರಿನ ಹರಿವು ಹೆಚ್ಚಾಗಿದೆ. ಇನ್ನು ಬೆಳಿಗ್ಗೆ ತೋಟಕ್ಕೆ ಹೋಗಿ ಮರಳುವ ವೇಳೆ ವೆಂಕನಗೌಡ ಸಾಲಿಗೌಡ್ರ ನೀರಿನ ಸೆಳೆತಕ್ಕೆ ಸಿಕ್ಕು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.

ಭಾನುವಾರ ಸಂಜೆಯವರೆಗೂ ಅವರ ಮಾಹಿತಿ ಸಿಕ್ಕಿಲ್ಲ. ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ನದಿಗೆ ಬೋಟ್ ಇಳಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಸ್ ಚಾಲಕನ ಹುಚ್ಚು ಸಾಹಸ; ಪ್ರಯಾಣಿಕರ ಪರದಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಧಾರವಾಡ: ಬಸ್ ಚಾಲಕನ ಹುಚ್ಚು ಸಾಹಸಕ್ಕೆ ಪ್ರಯಾಣಿಕರು ಪರದಾಡಿದ ಘಟನೆ ಜಿಲ್ಲೆಯ ಇನಾಮಹೊಂಗಲ, ಮತ್ತು ಹಾರೊಬೆಳವಡಿ ಗ್ರಾಮದ ಮಧ್ಯದಲ್ಲಿ ನಡೆದಿದೆ.

ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಈ ಗ್ರಾಮಗಳ ಮಧ್ಯದಲ್ಲಿ ಹರಿಯುವ ಹಳ್ಳ ರಭಸವಾಗಿ ಸೇತುವೆ ಮೇಲೆ ಹರಿಯುತ್ತಿತ್ತು. ಈ ವೇಳೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ ಸೇತುವೆ ಮೇಲೆ ಬಂದಾಗ ಸಿಲುಕಿಕೊಂಡಿದೆ.

ಆದರೆ ಧೃತಿಗೆಡದೇ ಬಸ್ ಚಾಲಕ ಧೈರ್ಯದಿಂದ ಆ ಸೇತುವೆಯ ಮೇಲೆಯೇ ಬಸ್ ಓಡಿಸಿ ಪಾರು ಮಾಡಿದ್ದಾನೆ.

ಈ ವೇಳೆ ಸ್ಥಳೀಯರು ಭಯದಿಂದ‌ ಬಸ್ ಪಾರಾಗುತ್ತದೋ ಇಲ್ಲವೋ ಎನ್ನುವುದನ್ನು ತೆರೆದ ಕಣ್ಣಿನಲ್ಲಿ ನೋಡುತ್ತಾ ನಿಂತಿದ್ದರು.

ಯಾವುದೇ ಅನಾಹುತವಾಗದೇ ಬಸ್ ಪಾರಾಗಿದ್ದನ್ನು ಕಂಡು ಕೊನೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ನಿಟ್ಟುಸಿರುಬಿಟ್ಟರು.

ಬಾನಂಗಳದಲ್ಲಿ ರುಸ್ತುಂ ಹವಾ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚಿತ್ರದುರ್ಗ: ಚಾಲಕ ರಹಿತ ಡ್ರೋಣ್ ರುಸ್ತುಂ -2 ಪ್ರಯೋಗಾರ್ಥ ಹಾರಾಟ ಯಶಸ್ವಿಯಾಗಿದೆ. ದೇಶದ ವಾಯು ಪಡೆಗೆ ಶಕ್ತಿ ತುಂಬಲಿರುವ ರುಸ್ತುಂ-2 ಡ್ರೋಣ್ ಹಾರಾಟವನ್ನು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರದ DRDO ಪ್ರದೇಶದ ಏರೋ ನಾಟಿಕ್ ಟೆಸ್ಟ್ ರೇಂಜ್ ನಲ್ಲಿ ಯಶಸ್ವಿ ಹಾರಾಟ ನಡೆಸಲಾಗಿದೆ.

ಸತತ ಎಂಟು ಗಂಟೆ ಕಾಲ 40 KM ವ್ಯಾಪ್ತಿಯಲ್ಲಿ ರುಸ್ತುಂ-2 ಯಶಸ್ವಿಯಾಗಿ ಹಾರಾಟ ನಡೆಸಿದೆ. 16 ಸಾವಿರ ಅಡಿ ಎತ್ತರದಲ್ಲಿ ಸತತ ಹಾರಾಟ ನಡೆಸಿದ ರುಸ್ತುಂ-2 ಭಾರತೀಯ ಸೈನ್ಯಕ್ಕೆ ಬಲ ತುಂಬಲಿದೆ.

ರುಸ್ತುಂ-2 ಡ್ರೋಣ್ ಭಾರತ ದೇಶದ ಹೆಮ್ಮೆಯ ಚಾಲಕ ರಹಿತ ವಿಮಾನವಾಗಿದ್ದು, 2019 ಸೆಪ್ಟೆಂಬರ್ 17 ರಂದು ಪ್ರಾಯೋಗಿಕ ಹಾರಟದ ವೇಳೆ ಪತನವಾಗಿತ್ತು.

ಆದರೀಗ ರುಸ್ತುಂ-2 ಯಶಸ್ವಿ ಹಾರಾಟ ನಡೆಸುವ ಮೂಲಕ DRDO ಸಿಬ್ಬಂದಿಗಳಿಗೆ ಹುಮ್ಮಸ್ಸು ತುಂಬಿದೆ.

ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರಾಮನಗರ: ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 19 ವರ್ಷದ ಹೇಮಲತಾ ಮೃತ ದುರ್ದೈವಿಯಾಗಿದ್ದಾಳೆ. ಆಕ್ಟೋಬರ್ 8 ರಂದು ಹೇಮಲತಾ ಮನೆಯಿಂದ ನಾಪತ್ತೆಯಾಗಿದ್ದು, ಮರುದಿನ ಕುದೂರು ಠಾಣೆಯಲ್ಲಿ ನಾಪತ್ತೆಯಾದ ದೂರು ನೀಡಲಾಗಿತ್ತು.

ಈಗ ತಮ್ಮ ಮನೆಯ ಸಮೀಪದ ಹೇಮಲತಾಳ ದೊಡ್ಡಪ್ಪ ರವೀಂದ್ರಕುಮಾರ್ ಎಂಬುವವರ ಜಮೀನಿನಲ್ಲಿ ಶವ ಪತ್ತೆಯಾಗಿದೆ.

ಹೇಮಲತಾಳನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಆಕೆಯ ಬಟ್ಟೆಗಳನ್ನು ಬೇರೆಡೆ ಎಸೆದು, ಮಣ್ಣಿನಲ್ಲಿ ‌ಮುಚ್ಚಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರಿ ಮಳೆಗೆ ರೈತರ ಬೆಳೆ ಹಾನಿ; ಹೊಲಗಳಿಗೆ ನುಗ್ಗಿದ ನೀರು, ಸಂಕಷ್ಟದಲ್ಲಿ ರೈತ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ‌ ವಿವಿಧ ಗ್ರಾಮಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ನಾರಿಹಳ್ಳ ತುಂಬಿ ಹರಿಯುತ್ತಿದೆ.

ಜೊತೆಗೆ ನಾರಿಹಳ್ಳ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ ಬಿಟ್ಟ ಪರಿಣಾಮ ನೀರು ರೈತರ ಹೊಲಗಳಿಗೆ ನುಗ್ಗಿದೆ.

ಮಳೆ ಹಾಗೂ ನಾರಿಹಳ್ಳ ಜಲಾಶಯದ ನೀರಿನ ರಭಸಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದ್ದು, ಸಂಡೂರು ತಾಲೂಕಿನ, ಕುರೆಕುಪ್ಪೆ, ವಡ್ಡು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ರೈತರ ಬೆಳೆ ಹಾಳಾಗಿದೆ.

ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ರೈತರು ಕಂಗಾಲಾಗಿದ್ದಾರೆ.

ನರೇಗಲ್ಲ ಪಪಂ ಮೀಸಲಾತಿ ಪ್ರಕಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರೇಗಲ್ಲ
ಪಟ್ಟಣ ಪಂಚಾಯತ್ ಚುನಾವಣೆ ಮುಗಿದು ಎರಡು ವರ್ಷದ ನಂತರ ಮೀಸಲಾಯಿತಿ ಪ್ರಕಟವಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
ನರೇಗಲ್ಲ ಪಪಂ ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿವೆ.
ಸ್ಥಳೀಯ ಪಪಂ ಅಧಿಕಾರದ ಚುಕ್ಕಾಣೆ ಹಿಡಿಯಲು ಬಿಜೆಪಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಬಿಜೆಪಿಯಿಂದ ಗೆಲುವು ಸಾಧಿಸಿದ ಅಕ್ಕಮ್ಮ ಮಣ್ಣೊಡ್ಡರ, ವಿಜಯಲಕ್ಷ್ಮೀ ಚಲವಾದಿ ಇವರ ಇಬ್ಬರ ನಡುವೆ ಎಸ್‌ಸಿ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಉಳಿದ ಬಿಜೆಪಿಯ ಎಲ್ಲ ಸದಸ್ಯರು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಅಭಿವೃದ್ಧಿ ಪರ ಆಡಳಿತ ಅಗತ್ಯ
ಕಳೆದ ಎರಡು ವರ್ಷಗಳಿಂದ ಪಟ್ಟಣ ಅಭಿವೃದ್ಧಿ ಕಾರ್ಯ ಸಂಪೂರ್ಣ ಮರೀಚಿಕೆಯಾಗಿದೆ. ಪಟ್ಟಣ ಪಂಚಾಯತ್ ಎರಡು ವರ್ಷಗಳಿಂದ ಅಧಿಕಾರಿಗಳ ಕೈಗೆ ಸಿಕ್ಕು ಅಕ್ಷರಶಃ ನಲುಗಿದೆ. ಇವೆಲ್ಲವುಗಳ ಸುಧಾರಣೆಗೆ ಪ್ರಮಾಣಿಕ, ನಿಷ್ಠೆ, ಉತ್ತಮ ಆಡಳಿತ, ಅಭಿವೃದ್ಧಿ ಪರ ಸಾರ್ವಜನಿಕರ ಸೇವೆ ಮಾಡುವ ಅಧ್ಯಕ್ಷ, ಉಪಾಧ್ಯಕ್ಷರು ಅಗತ್ಯವಾಗಿದೆ. ಈ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹತ್ತು, ಹಲವು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ನೇಮಕವಾದ ಅಧ್ಯಕ್ಷ, ಉಪಾಧ್ಯಕ್ಷರ ಹೇಗಲ ಮೇಲಿದೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ. ಪಪಂ ಒಟ್ಟು 17 ಸ್ಥಾನಗಳ ಪೈಕಿ 12 ಸ್ಥಾನ ಬಿಜೆಪಿ ಗೆಲ್ಲುವುದರ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು ಇದರಲ್ಲಿ 2 ಎಸ್‌ಸಿ ಮಹಿಳಾ ಹಾಗೂ ೩ ಸಾಮಾನ್ಯ ಮಹಿಳಾ ಸದಸ್ಯರಿದ್ದು, 7 ಪುರುಷರಿದ್ದಾರೆ.
ಉಳಿದ ಸ್ಥಾನಗಳ ಪೈಕಿ 3 ರಲ್ಲಿ ಒಂದು ಕಾಂಗ್ರೆಸ್, ಎರಡು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಪೈಪೋಟಿ ನೀಡುವ ಅಕ್ಕಮ್ಮ ಮಣ್ಣೊಡ್ಡರ ಎಸ್‌ಸಿ ಮೀಸಲಾತಿ ವಾರ್ಡ್ 16 ರಿಂದ ಗೆಲವು ಸಾಧಿಸಿದ್ದಾರೆ. ಇನ್ನೂ ವಾರ್ಡ್ 6 ರ ಎಸ್‌ಸಿ ಮೀಸಲಾಯಿತಿ ವಾರ್ಡ್‌ನಿಂದ ವಿಜಯಲಕ್ಷ್ಮೀ ಚಲವಾದಿ ಗೆಲುವು ಸಾಧಿಸಿದ್ದಾರೆ. ಇವರ ಇಬ್ಬರ ನಡುವೆ ಅಧ್ಯಕ್ಷ ಸ್ಥಾನಕ್ಕೆ ನೇರ ಹಣಾಹಣೆ ನಡೆಯಲಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ 7 ಪುರುಷರು ಹಾಗೂ 3 ಮಹಿಳೆಯರು ಸದಸ್ಯರಿದ್ದಾರೆ. ಇದರಲ್ಲಿ ಫಕೀರಪ್ಪ ಮಳ್ಳಿ, ಶ್ರೀಶೈಲಪ್ಪ ಬಂಡಿಹಾಳ, ಕುಮಾರಸ್ವಾಮಿ ಕೋರಧ್ಯಾನಮಠ, ಈರಪ್ಪ ಜೋಗಿ, ಮಲ್ಲಿಕಸಾಬ ರೋಣದ, ಫಕೀರಪ್ಪ ಬಂಬ್ಲಾಪೂರ, ಮಲ್ಲಿಕಾರ್ಜುನ ಭೂಮನಗೌಡ್ರ ಸೇರಿದಂತೆ ಮಹಿಳಾ ಸದಸ್ಯರಾದ ವಿಶಾಲಾಕ್ಷಿ ಹೊಸಮನಿ, ಜ್ಯೋತಿ ಪಾಯಪ್ಪಗೌಡ್ರ, ಸುಮಿತ್ರಾ ಕಮಲಾಪೂರ ಸೇರಿದಂತೆ ವಾರ್ಡ್ ನಂ. 11 ರಿಂದ ಗೆಲುವು ಸಾಧಿಸಿ ಬಿಜೆಪಿಗೆ ಬೆಂಬಲ ನೀಡಿರುವ ಮಂಜುಳಾ ಹುರಳಿ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ನೇರ ಸ್ಪರ್ಧೆಯಲ್ಲಿದ್ದಾರೆ.
 

ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ
ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿ.ಜಿ. ಹಿರೇಮಠ ಹಾಗೂ ಎಸ್.ಜಿ. ಅಪರಂಜಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಇನಾಮತಿ, ತರಗತಿಗಳಲ್ಲಿ ಶಿಕ್ಷಕರು ಅಂಕ ಗಳಿಕೆಗಾಗಿ ಮಾತ್ರ ಮಕ್ಕಳನ್ನು ಸಜ್ಜುಗೊಳಿಸಬಾರದು. ಅವರಿಗೆ ಜೀವನ ಪಾಠವನ್ನು ಕಲಿಸಬೇಕು. ಮಕ್ಕಳ ನೈಜ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.
ಶಿಕ್ಷಕ ವೃತ್ತಿಯು ತುಂಬಾ ಪವಿತ್ರವಾದದ್ದು. ಸಮಾಜ ಸುಧಾರಿಸುವ ಹಾಗೂ ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ರಾಷ್ಟ್ರ ಹಾಗೂ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪಿ.ಜಿ. ಹಿರೇಮಠ, ಎಸ್.ಜಿ. ಅಪರಂಜಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ.ಎಸ್. ಶೀರನಹಳ್ಳಿ, ಮಂಜುನಾಥ ಮುಧೋಳ, ಪವನ ಚೋಪ್ರಾ, ಮಹೇಶ ಎಸ್.ಎಚ್., ಪ್ರಭಾಕರ ಮುನವಳ್ಳಿ, ಪಿ.ಎನ್. ಉಮಲೂಟಿ, ಬಿ.ಎಚ್. ಹಲವಾಗಲಿ, ಪಿ.ಎನ್. ಕಲಘಟಗಿ, ಶಿವರಾಜ ಹಿರೇಮಠ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ.ನಿಂಗು ಸೊಲಗಿ ಸ್ವಾಗತಿಸಿದರು.

ಮುಂಜಾಗ್ರತೆ ಮೂಲಕ ಕೊವಿಡ್ ತಡೆಗಟ್ಟಬಹುದು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಮಹಾಮಾರಿ ಕೊವಿಡ್ 19 ಜಗತ್ತನ್ನೇ ತಲ್ಲಣಗೊಳಿಸಿದೆ. ಇದರಿಂದ ನಾವು ಹೊರ ಬರಬೇಕಾದರೆ ಜಾಗೃತಿ ಅಗತ್ಯವಾಗಿದೆ. ಈ ರೋಗದ ಮುಂಜಾಗ್ರತೆ ಕೈಕೊಳ್ಳುವುದರಿಂದ ಹರಡುವುದನ್ನು ತಡೆಯಬಹುದು ಎಂದು ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೆ. ಎಸ್. ಪಾಟೀಲ್ ಹೇಳಿದರು.
ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಏನ್. ಎಸ್. ಎಸ್. ಹಾಗೂ ಏನ್. ಸಿ. ಸಿ ಘಟಕಗಳ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಕೊವಿಡ್ 19 ಜಾಗೃತಿ ಜನ ಆಂದೋಲನ ಪ್ರಚಾರ ನಿಮಿತ್ತ ಕೊವಿಡ್ ಜಾಗೃತಿ ಮತ್ತು ಕೊವಿಡ್ ರಕ್ಷಣೆಯ ಪ್ರತಿಜ್ಞಾವಿಧಿ ಬೋಧನೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೊವಿಡ್‌ನಿಂದ ರಕ್ಷಿಸಿಕೊಳ್ಳಲು ಸದಾ ಜಾಗೃತರಾಗಿರಬೇಕು ಮತ್ತು ತಪ್ಪದೆ ಮಾಸ್ಕ್ ಧರಿಸಬೇಕು. ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು. ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ನಿಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ನಾಗರಿಕರಲ್ಲಿ ಇದರ ಕುರಿತು ಜಾಗೃತಿ ಮೂಡಿಸಿ ದೇಶವನ್ನು ಕೊವಿಡ್‌ನಿಂದ ರಕ್ಷಿಸುವ ಕರ್ತವ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ನಂತರ ಮಹಾವಿದ್ಯಾಲಯದ ಸೂಚನಾ ಫಲಕಗಳಲ್ಲಿ ಕೊವಿಡ್ ಜಾಗೃತಿ ಮೂಡಿಸುವ ಭಿತ್ತಿಪತ್ರ ಅಂಟಿಸಲಾಯಿತು.
ಏನ್.ಎಸ್.ಎಸ್. ಘಟಕಾಧಿಕಾರಿಗಳಾದ ರಾಜು ಹೊಸಮನಿ, ಡಾ ನಾಗರಾಜ ದಂಡೋತಿ, ಸಹ ಪ್ರಾಧ್ಯಾಪಕ ಡಾ. ಬಸವರಾಜ ಪೂಜಾರ್, ಪ್ರಾಧ್ಯಾಪಕರಾದ ಡಾ. ಚನ್ನಬಸವ, ಡಾ ಕರಿಬಸವೇಶ್ವರ, ಶ್ರೀದೇವಿ, ವೆಂಕಟೇಶ್ ನಾಯ್ಕ, ಮಂಜುನಾಥ್ ಗಾಳಿ, ಡಾ ಶರಣಪ್ಪ, ಶರಣಪ್ಪ ಜಾಲೀಹಾಳ್, ಮಹೇಶ್ ಬಿರಾದಾರ್, ವಿನೋದ ಮಡಿಬಸನಗೌಡರ, ಅರುಣ್ ಎ ಜಿ, ಡಾ. ಶಶಿಕಾಂಮ್ಮಪುರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜೈ ಭೀಮ್ ಜಿಲ್ಲಾ ಕಾರ್ಯಾಲಯ ಉದ್ಘಾಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ನಗರದ ಕುಮಾರವ್ಯಾಸ ಕಾಂಪ್ಲೆಕ್ಸ್‌ನಲ್ಲಿ ಜೈ ಭೀಮ್ ಜಿಲ್ಲಾ ಕಾರ್ಯಾಲಯವನ್ನು ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಲಿತ ಮುಖಂಡ ಸುರೇಶ ಹೊಸಮನಿ, ಮಾಜಿ ನಗರಸಭಾ ಸದಸ್ಯ ಮಂಜುನಾಥ ಮುಳಗುಂದ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಜೈ ಭೀಮ್ ಗದಗ ಜಿಲ್ಲಾಧ್ಯಕ್ಷ ಗಣೇಶ ವೈ. ಹುಬ್ಬಳ್ಳಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ರಾಷ್ಟ್ರೀನ್ ಜೋಸೆಫ್, ಹೇಮಂತ್ ಹುಬ್ಬಳ್ಳಿ, ರಾಜೇಶ ವಿ. ಶೆಟ್ಟರ್, ವಿಜಯ ಪೂಜಾರ, ಬಸವರಾಜ ಬದಾಮಿ, ಪರಶುರಾಮ ಪಾತ್ರೋಟ, ಬಾಬು ಬಳ್ಳಾರಿ, ಪ್ರೇಮ ಹುಬ್ಬಳ್ಳಿ, ಅಭಿಷೇಕ ಬಳ್ಳಾರಿ, ಪವನ ಸಕ್ರಿ, ವಿಶ್ವನಾಥ ಹುಬ್ಬಳ್ಳಿ, ವಿನಾಯಕ ಬಳ್ಳಾರಿ, ವಿರುಪಾಕ್ಷಿ ಸಂಗಾಪೂರ, ವಿಶ್ವ ಎಸ್. ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು.

ಕೊರೋನಾ ವಾರಿಯರ್ಸ್ ಮನೆಗೆ ನುಗ್ಗಿದ ನೀರು; ನರಗುಂದ ಪಟ್ಟಣದಲ್ಲಿ ಭಾರಿ ಮಳೆಯಿಂದ ಅವಾಂತರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ಪಟ್ಟಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ತಾಲೂಕು ಆಸ್ಪತ್ರೆಯ ಆವರಣದಲ್ಲಿರುವ ಕೊರೋನಾ ವಾರಿಯರ್ಸ್ ಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಘಟನೆ ನಡೆದಿದೆ.
ನೀರು ನುಗ್ಗಿದ ಪರಿಣಾಮ ಎರಡು ದಿನದ ಬಾಣಂತಿ, ಹಸುಗೂಸು ನರಳಾಟ ಪಡುವಂತಾಗಿತ್ತು. ತಾಲೂಕಾಸ್ಪತ್ರೆಯ ಆವರಣದಲ್ಲಿನ ಭಾರತಿ ಪಾಟೀಲ, ಸಂಗಮ್ಮ ಚಿತ್ತರಗಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.
ಇದರಿಂದಾಗಿ ಭಾರತಿ ಪಾಟೀಲರ ಮಗಳು ಸ್ಮೀತಾ ಜಾಧವ ತನ್ನ ಎರಡು ದಿನದ ಹಸುಗೂಸನ್ನು ರಕ್ಷಿಸಲು ಹರಸಾಹಸ ಪಡಬೇಕಾಯಿತು. ಇಷ್ಟೆಲ್ಲಾ ನಡೆದಿದ್ದರೂ ಸ್ಥಳಕ್ಕೆ ತಾಲೂಕಾಡಳಿತದ ಯಾವೊಬ್ಬ ಅಧಿಕಾರಿಯೂ ಬಾರದೇ ಇದ್ದದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

error: Content is protected !!