Home Blog Page 2171

ಧಾರವಾಡ ಜಿಪಂ ಸಿಇಒ ಡಾ.ಸುಶೀಲಾ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಧಾರವಾಡ
ಇಲ್ಲಿನ ಜಿಪಂ ಸಿಇಒ ಆಗಿ ಡಾ.ಸುಶೀಲಾ ಬಿ. ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ.ಬಿ.ಸಿ.ಸತೀಶ್ ಅವರು ಡಾ.ಸುಶೀಲಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹೈದರಾಬಾದ್‌ನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ.ಸುಶೀಲಾ, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ 2013ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆಗೆ ಅರ್ಹತೆ ಪಡೆದರು.
ಪುನಃ 2015ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಕರ್ನಾಟಕ ಕೇಡರ್‌ಗೆ ಆಯ್ಕೆಯಾದರು. ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರ್ಗಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಪಂಚಸೇನೆ ಹೋರಾಟದ ಎಚ್ಚರಿಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಶಾಲೆ ಆರಂಭಿಸುವ ವಿಚಾರದಲ್ಲಿ ರಾಜ್ಯ ಸರಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವುದು ಸಲ್ಲದು. ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಪಂಚಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 109 ಶಿಕ್ಷಕರು ಮರಣ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಬೆಳಗಾವಿಯ ರಾಮದುರ್ಗ ತಾಲೂಕಿನ ಎ.ತಿಮ್ಮಾಪೂರ ಗ್ರಾಮದ ಶಾಲಾ ಮಕ್ಕಳಿಗೆ ರ‍್ಯಾಪಿಡ್ ಟೆಸ್ಟ್ ಮಾಡಲಾಗಿ 130 ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳಿಗೆ ಕೊರೋನಾ ಸೋಫಂಖು ಇರುವುದು ಪತ್ತೆಯಾಗಿರುವುದು ಆತಂಕಕಾರಿ ವಿಚಾರ ಎಂದರು.
ಜನಪ್ರತಿನಿಧಿಗಳು ಸುಸಜ್ಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೂ ಮೃತಪಟ್ಟಿದ್ದಾರೆ. ಇನ್ನು ಸಾಮಾನ್ಯ ಜನರು, ಮಕ್ಕಳು, ಶಿಕ್ಷಕರ ಪಾಡೇನು ಎಂದು ಪ್ರಶ್ನಿಸಿರುವ ಅವರು, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ, ಸಚಿವರ ಮನೆಗಳಿಗೆ ಮುತ್ತಿಗೆ ಹಾಕಿ ದಿಗ್ಭಂಧನ ವಿಧಿಸಲಾಗುವುದು ಎಂದು ಪಂಚಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಆರ್. ಬೊಮ್ಮಾಯಿ ಪುಣ್ಯಸ್ಮರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ 13ನೇ ಪುಣ್ಯಸ್ಮರಣೆಯನ್ನು ನಗರದಲ್ಲಿನ ಬೊಮ್ಮಾಯಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ, ವಿಜಯಾನಂದ ಹೊಸಕೊಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ರವಿ ನಾಯಕ, ರಾಮಣ್ಣ ಬಡಿಗೇರ, ಕಿರಣ ಉಪ್ಪಾರ, ಗುರು ಹೂಗಾರ, ನಾಗರಾಜ ಕಟಾವಿ, ಚಂದ್ರು ಕಿರೇಸೂರ, ರಾಮನಗೌಡ್ರ ಶೆಟ್ಟನಗೌಡರ, ದಾವಲ್ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಅಂಚೆ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ
ರಾಷ್ಟ್ರೀಯ ಅಂಚೆ ದಿನದ ಅಂಗವಾಗಿ ಹುಬ್ಬಳ್ಳಿ ಮುಖ್ಯ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಎಲ್ಲ ಅಂಚೆ ಪೇದೆಗಳಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಾಬೂನು, ಮಾಸ್ಕ್ ಹಾಗೂ ಸಸಿ ನೀಡಿ ಸನ್ಮಾನಿಸಲಾಯಿತು.
ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಮಾತನಾಡಿ, ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಇದರ 1,55,000 ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿವೆ. ದೇಶದ ಯಾವುದೇ ಊರಿಗೆ ಹೋದರೂ ಅಂಚೆ ಕಚೇರಿ ಕಾಣಸಿಗುತ್ತವೆ. ಇದರಿಂದಾಗಿಯೇ ಸಾರ್ವಜನಿಕರು ದೇಶದ ಎಲ್ಲ ಪ್ರದೇಶಗಳೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಡೆಪ್ಯುಟಿ ಪೋಸ್ಟ್ ಮಾಸ್ಟರ್ ಎಸ್.ಎಸ್. ಸೊರಟುರ, ಅಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆರ್.ವಿ. ಕುಲಕರ್ಣಿ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ವಿ.ಸಿ. ದೊಡ್ಡಮನಿ, ಪ್ರವೀಣ ಹಟ್ಟಿಹೊಳಿ, ಪ್ರವೀಣ ಪಾಟೀಲ, ಚಂದ್ರಶೇಖರ್ ಏರಿಮನಿ, ರಾಜು ರಾಜೊಳಿ, ವೃಷಭ ಡಂಗನವರ ಮೊದಲಾದವರು ಉಪಸ್ಥಿತರಿದ್ದರು.

ದಿ.ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಮತ್ತಿಕಟ್ಟಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಳಗಾವಿ: ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಬೆಳಗಾವಿಯ ನಿವಾಸಕ್ಕೆ ಮಾಜಿ ಸಭಾಪತಿ, ಹಿರಿಯ ಕಾಂಗ್ರೆಸ್ ನಾಯಕ ವೀರಣ್ಣ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಗರದ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯ ನಿವಾಸದಲ್ಲಿ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿಯರಾದ ಶ್ರದ್ಧಾ, ಸ್ಫೂರ್ತಿ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳ ರಾಜ್ಯಾಧ್ಯಕ್ಷ ಡಾ. ಶರಣಪ್ಪ ಕೊಟಗಿ, ಹಿರಿಯ ನ್ಯಾಯವಾದಿ ರಾಜು ಬಾಗೇವಾಡಿ, ಅನಿಲ ಗುರುವ, ಸಂಭ್ರಮ ವಿಭೂತಿ ಸೇರಿದಂತೆ ಮುಂತಾದವರು ಇದ್ದರು.

ಇನ್ನರ್‌ವೀಲ್ ಕ್ಲಬ್‌ನಿಂದ ಶಿಕ್ಷಕರಿಗೆ ಸನ್ಮಾನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಇನ್ನರ್ ವೀಲ್ ಕ್ಲಬ್ ಗದಗ-ಬೆಟಗೇರಿ ವತಿಯಿಂದ ’ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ ಪುರಸ್ಕೃತರಾದ ಎಂ.ಎಂ. ಜೋಗಿನ್, ಪ್ರೊ.ಸುಮಿತ್ರಾ ಎಂ.ಜೋಗಿನ್ ಹಾಗೂ ಪ್ರೊ.ವೀಣಾ ತಿರ್ಲಾಪುರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀ.ಎಂ.ಎಂ.ಜೋಗಿನ ಶಿಕ್ಷಕರ ನಿವಾಸದಲ್ಲಿ ಏರ್ಪಡಿಸಲಾಗಿತ್ತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುಮಾ ಪಾಟೀಲ್ ಅಧ್ಯಕ್ಷತೆ ವಹಿಸಿ ಬದುಕಿಗೆ ಶಿಕ್ಷಣ ತುಂಬಾ ಅವಶ್ಯಕ. ಎಲ್ಲರೂ ಶಿಕ್ಷಣ ಪಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಎಂ.ಎಂ. ಜೋಗಿನ್, ಕ್ಲಬ್‌ನ ಕಾರ್ಯ ಶ್ಲಾಘನೀಯ. ಸಮಾಜಮುಖಿ ಕಾರ್ಯಗಳನ್ನು ಮಾಡುವುದರೊಂದಿಗೆ ಕ್ಲಬ್ ಮೇಲ್ಪಂಕ್ತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಲಬ್‌ನ ಕಾರ್ಯದರ್ಶಿ ಸುಮಾ ವಸ್ತ್ರದ, ಕೋಶಾಧ್ಯಕ್ಷೆ ಅಶ್ವಿನಿ ಜಗತಾಪ, ಐ ಎಸ್‌ಒ ಮಂಜುಳಾ ಅಕ್ಕಿ ಹಾಗೂ ಪ್ರತೀಕ, ಅನುಶ್ರೀ ಉಪಸ್ಥಿತರಿದ್ದರು.

ಮನಿಷಾ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಭೀಕರ ಹತ್ಯೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಕಂಪ್ಲಿಯಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಶ್ರೀ ಉದ್ಭವಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ಬೃಹತ್ ಪಂಜಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ, ಹಳೇ ಬಸ್ ನಿಲ್ದಾಣ ಹತ್ತಿರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ವಾಲ್ಮೀಕಿ ಸಮುದಾಯದ ಯುವತಿಯ ಅತ್ಯಾಚಾರ ಘಟನೆ ಅತ್ಯಂತ ಅಮಾನವೀಯವಾದದ್ದು. ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಮೂಲಕ ರಾಮರಾಜ್ಯ ಮಾಡುತ್ತೇವೆ ಎಂದು ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಬಳಿಕ ರಾವಣ ರಾಜ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೆಪಿಸಿಸಿ ಸದಸ್ಯ ಎಚ್. ಮುಹಮ್ಮದ್ ಗೌಸ್ ಮಾತನಾಡಿ, ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟುತ್ತಿವೆ. ಸಾರ್ವಜನಿಕರನ್ನು ಒಡೆದಾಳುವ ನೀತಿಯನ್ನು ಅನುಸರಿಸುವ ಮೂಲಕ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ತಮ್ಮ ಮಾತನ್ನು ಕೇಳದ ವಿರೋಧ ಪಕ್ಷದವರ ವಿರುದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜ ಗೌಡ ಮಾತನಾಡಿದರು.
ಪಂಜಿನ ಮೆರವಣಿಗೆ ಮತ್ತು ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ತಾಪಂ ಸದಸ್ಯರು, ಜಿಪಂ ಸದಸ್ಯರು, ಪುರಸಭೆ ಸದಸ್ಯರು, ತಾಲೂಕಿನ ವಿವಿಧ ಗ್ರಾಮಗಳ ಪಕ್ಷದ ಮುಖಂಡರು, ಮಹಿಳೆಯರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

ರೈತರು ಕೃಷಿ ವಿವಿಯ ತಾಂತ್ರಿಕತೆ ಬಳಸಿಕೊಳ್ಳಿ: ಪಾಟೀಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಕೊಪ್ಪಳ: ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ ಅಂದಾಜು 1,55,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು , ಉತ್ತಮವಾಗಿ ಮಳೆಯಾಗುತ್ತಿರುತ್ತದೆ . ಕೊಪ್ಪಳ ಜಿಲ್ಲೆಯಲ್ಲಿ ಜೋಳ , ಕಡಲೆ ಹಾಗೂ ಶೇಂಗಾ ಬೆಳೆಗಳು ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿರುತ್ತವೆ.

ಅಲ್ಲದೆ ಕುಸುಬೆ , ಆಗಸೆ ಮತ್ತು ಹುರುಳಿಯನ್ನು ಅಲ್ಲಲ್ಲಿ ಬೆಳೆಯುತ್ತಾರೆ , ಪ್ರಮುಖ ಬೆಳೆಯಾದ ಜೋಳ- ಎಂ .35 – 1 ತಳಿಯ ಬೀಜಗಳು ಹಗರಿ ಮತ್ತು ಸಿರುಗುಪ್ಪ ಸಂಶೋಧನಾ ಕೇಂದ್ರಗಳಲ್ಲಿ , ಜಿ.ಎಸ್ . 23 ಬೀಜಗಳು ರದ್ದೇವಾಡಗಿ ಸಂಶೋಧನಾ ಕೇಂದ್ರದಲ್ಲಿ , ಕಡಲೆ ತಳಿಗಳಾದ ಜೆಜೆ -11 ಹಾಗೂ ಬಿ.ಜಿ.ಡಿ. 103 , ಜಿಬಿಎಂ -2 , ಕಾಬೂಲಿ ಕಡಲೆ ಎಂಎನ್ಕಿ -1 , ಕುಸುಬೆಏಎಸ್ಎಫ್ -764 , ನವಣೆ ಹೆಚ್ , ಎಂ.ಟಿ. – 100-1 , ಊದಲು ಡಿ.ಹಚ್.ಬಿ.ಎಂ. – 93-2 , ಹಾರಕ ಹೆಚ್.ಆರ್.ಕೆ -1 ಹಾಗೂ ಕೊರಲೆ – ಹೆಚ್.ಬಿ.ಕೆ.- ತಳಿಗಳು ಬೀಜಘಟಕ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ ಹೇಳಿದರು.

ಅಲ್ಲದೆ , ದೃಢೀಕೃತ ಬೀಜಗಳು ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ರಾಷ್ಟ್ರೀಯ ಬೀಜ ನಿಗಮ ಗಳಲ್ಲಿಯೂ ಸಹ ಲಭ್ಯವಿದ್ದು , ಅಲ್ಲಿಯೂ ಸಹ ರೈತರು ನೇರವಾಗಿ ಖರೀದಿಸಬಹುದಾಗಿದೆ . ಬೀಜೋಪಚಾರಕ್ಕಾಗಿ ಜೈವಿಕ ಶಿಲೀಂದ್ರನಾಶಕಗಳಾದ ಟ್ರೈಕೋಡರ್ಮಾ , ಸುಡೋಮೋನಸ್ ಇವು ಸಾವಯವ ಕೃಷಿ ಸಂಸ್ಥೆ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ ಎಂದರು.

ಮಣ್ಣಿಗೆ ಅಗತ್ಯವಾದ ಎರೆಹುಳು ಗೊಬ್ಬರ ಹಾಗೂ ಎರೆ ಜಲ ಕಡಲೆಯ ಹಸಿರು ಕೀಡೆ ನಿಯಂತ್ರಣಕ್ಕೆ ಟ್ರೈಕೋಗ್ರಾಮ ಪರತಂತ್ರ ದೇವಿ ಹಾಗೂ ಗೊಣ್ಣೆಹುಳು ನಿಯಂತ್ರಣಕ್ಕೆ ಮೆಟಲೈಜಿಯಂ ಜೈವಿಕ ಶಿಲೀಂದ್ರನಾಶಕ ಇವುಗಳು ಜೈವಿಕ ನಿಯಂತ್ರಣ ಪ್ರಯೋಗಾಲಯ , ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನಲ್ಲಿ ಲಭ್ಯವಿರುತ್ತವೆ . ರೈತಬಾಂಧವರು ನೂತನ ತಳಿಯ ಬೀಜಗಳಿಗಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರಿನ ಬೀಜಘಟಕದ ವಿಶೇಷಾಧಿಕಾರಿಗಳಾದ ಡಾ . ಬಸವೇಗೌಡ ( 9480696343 ) ಮತ್ತು ಜೈವಿಕ ಪರಿಕರಗಳಿಗಾಗಿ ಡಾ . ಅರುಣಕುಮಾರ್ ಹೊಸಮನಿ ( 9449762175 ) ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಈಗಾಗಲೇ ಮುಂಗಾರಿನಲ್ಲಿ ಬಿತ್ತನೆಯಾಗಿರುವ ತೊಗರಿಯು ಹೂ ಬಿಡುವ ಹಂತದಲ್ಲಿದ್ದು , ರೈತರು ಕಲಬುರಗಿ ಕೃಷಿ ಸಂಶೋಧನಾ ಕೇದ್ರದಿಂದ ಬಿಡುಗಡೆಯಾಗಿರುವ ಪಲ್ಸ್ ಮಾಜಿಕ ನ್ನು ಬಳಸಬಹುದಾಗಿದೆ . ಪಲ್ಸ್ ಮ್ಯಾಜಿಕ್ ಪಡೆಯಲು ಡಾ . ಲಕ್ಷಣ ಚಿಂಚೋಳಿ ( 8008644224 ) ರವರನ್ನು ಸಂಪರ್ಕಿಸಲು ಕೋರಿದರು.

ಭೂಮಿ ಸಿದ್ಧತೆ ಮತ್ತು ತಯಾರಿ: ರೈತಬಾಂಧವರು ಆಳವಾದ ಉಳುಮೆ ಮಾಡಿ ಭೂಮಿಯನ್ನು ಹದಮಾಡಿಕೊಳ್ಳುವುದು . ರೈತಬಾಂಧವರು ದೃಢೀಕೃತ ಬಿತ್ತನೆ ಬೀಜಗಳನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ , ರಾಯಚೂರು / ರೈತ ಸಂಪರ್ಕ ಕೇಂದ್ರ ಹಾಗೂ ನೋಂದಾಯಿತ ಸಂಸ್ಥೆಗಳಿಂದ ಖರೀದಿಸಿ ಜೈವಿಕ ಶಿಲೀಂದ್ರನಾಶಕಗಳಿಂದ ಸೂಕ್ತ ಬೀಜೋಪಚಾರ ಮಾಡುವುದು , ನಂತರ ಸೂಕ್ತ ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆ ಕಾರ್ಯ ಕೈಗೊಳ್ಳುವುದು , ಕಡಲೆ ಬಿತ್ತನೆ ಪೂರ್ವದಲ್ಲಿ 50 ಗ್ರಾಂ , ಚೋಳ ಆಥವಾ ಸೂರ್ಯಕಾಂತಿ ಬೀಜವನ್ನು ಮಿಶ್ರಣ ಮಾಡಿ ಬಿತ್ತುವುದು.

ಬೆಳೆಗಳ ಬದುವಿನಲ್ಲಿ ಔಡಲ ಬೀಜವನ್ನು ಆಕರ್ಷಕ ಬೆಳೆಯಾಗಿ ಬೆಳೆಯುವುದರಿಂದ ಎಲೆ ತಿನ್ನುವ ಕೀಟದ ಬಾಧೆಯನ್ನು ಕಡಿಮೆ ಮಾಡಬಹುದು . ಶೇಂಗಾ ಬೆಳೆಯ ಸುತ್ತಲು ಸಜ್ಜೆ ಅಥವಾ ಜೋಳವನ್ನು ಬಲೆ ಬೆಳೆಯಾಗಿ ಬೆಳೆಯುವುದು ಸೂಕ್ತ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಆದ ಡಾ . ಎಂ.ಬಿ.ಪಾಟೀಲ ರವರು ರೈತರಲ್ಲಿ ಮನವಿ ಮಾಡಿಕೊಂಡರು.

ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಲಿ: ಮಾಲತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಅಮಾನುಷವಾಗಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದರೂ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಮತ್ತು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆಧಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಮಾಲತಿ ನಾಯಕ್ ಆಗ್ರಹಿಸಿದರು.

ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನಗರದ ಅಶೋಕ ವೃತ್ತದಲ್ಲಿ ಉತ್ತರಪ್ರದೇಶದ ಮನೀಷಾ ವಾಲ್ಮೀಕಿ ಅತ್ಯಾಚಾರ ಕೊಲೆ ವಿರುದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ನಾಶ‌ ಮಾಡಿದ ಅಲ್ಲಿನ ಸರಕಾರವನ್ನು ವಜಾಗೊಳಿಸಲು ಒತ್ತಾಯಿಸಿದರು.

ಮನಿಷಾ ವಾಲ್ಮೀಕಿಯ ಮನೆಯವರಿಗೆ ಕೊನೆಯ ಕ್ಷಣದಲ್ಲಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇ ಏಕಾಏಕಿ ಸುಟ್ಟು ಹಾಕಿರುವುದು ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ. ಕಳೆದ 6 ವರ್ಷಗಳಿಂದ ದಲಿತರ ಮೇಲೆ ನಿರಂತವಾಗಿ ಈ ರೀತಿಯ ಘಟನೆ ನಡೆಯುತ್ತಿದ್ದರೂ ಅವನ್ನು ತಡೆಗಟ್ಟುವಲ್ಲಿ ಕೇಂದ್ರ , ಮತ್ತು ರಾಜ್ಯ ಸರಕಾರ ವಿಫಲವಾಗಿದೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರ ಯಮನೂರಪ್ಪ ನಾಯಕ ಮಾತನಾಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡಿದೆ. ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಜನತೆ ಜಾಗರೂಕರಾಗಬೇಕು, ಯೋಗಿ ಆದಿತ್ಯನಾಥ ಠಾಕೂರರ ರಕ್ತ ಬಿಸಿಯಾಗಿದೆ ಎಂದು ಹಗುರವಾಗಿ ಮಾತನಾಡುತ್ತಾರೆ. ಅಲ್ಪಸಂಖ್ಯಾತರ ಮತ್ತು ದಲಿತರ ರಕ್ತದ ಬಿಸಿಯನ್ನು ತೋರಿಸಬೇಕಾಗುತ್ತೆ ಎಂದು ಎಂದು ಎಚ್ಚರಿಸಿದರು.

ರಾಜ್ಯ ಕಾಂಗ್ರೆಸ್ ಪ್ಯಾನಲಿಸ್ಟ್ ಶೈಲಜಾ ಹಿರೇಮಠ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಟನ್‌ ಪಾಶಾ, ಪ್ರಸನ್ನ ಗಡಾದ, ರವಿ ಕುರಗೋಡ, ಮಾನವಿ ಪಾಶಾ,  ಶ್ರೀನಿವಾಸ ಪಂಡಿತ್, ಮಲ್ಲು ಪೂಜಾರ್, ಸಲೀಂ ಅಳವಂಡಿ, ಪರಶುರಾಮ, ದ್ಯಾಮಣ್ಣ ಚಿಲವಾಡಗಿ, ಗಂಗಾ ಚಿಕ್ಕೆನಕೊಪ್ಪ , ಕೆಪಿಸಿಸಿ ಸಂಚಾಲಕಿ ಕಿಶೋರಿ ಬೂದನೂರ, ನಾಗವೇಣಿ ಬಡಿಗೇರ್ ಜಿಲ್ಲಾ ಮಹಿಳಾ ಸಹ ಕಾರ್ಯದರ್ಶಿ, ರೇಣುಕಾ ಅಹುಲ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ಶಶಿಕಲಾ B ಗೌಡರ್ ಜಿಲ್ಲಾ ಮಹಿಳಾ ಕಾರ್ಯದರ್ಶಿ, ರೇಷ್ಮಾ, ರಜಿಯಾ ಮನಿಯಾರ್, ಸಿದ್ದಮ್ಮ ಅಬ್ಬೆಗೇರಮಠ, ಮಹಾದೇವಿ ಕುರಿ, ಸಿದ್ದಮ್ಮ ಸಿಂದೋಗಿ, ನಜ್ಮುನ್ನಿಸಾ, ಅಮೀನಠ ಬೀ, ನೇತರಾವತಿ, ಸುನೀತಾ, ಅಕ್ಕಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅಂಚೆ ಕಚೇರಿ ‘ಉಳಿತಾಯ ಖಾತೆ’ಯ ಇತ್ತೀಚಿನ ಬಡ್ಡಿ ದರ, PPF, SSY, NSC, FD ದ ಬಗ್ಗೆ ಇಲ್ಲಿದೆ ಮಾಹಿತಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಅಂಚೆ ಕಚೇರಿ ಯೋಜನೆಗಳು ಬಡ್ಡಿ ದರಗಳು ಅಂಚೆ ಕಚೇರಿ ಯೋಜನೆಯು ಪ್ರತಿಯೊಂದು ವರ್ಗಕ್ಕೂ ವಿವಿಧ ರೀತಿಯ ಯೋಜನೆಗಳನ್ನು ಒದಗಿಸುತ್ತದೆ.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯೊಂದಿಗೆ ನಿಶ್ಚಿತ ಠೇವಣಿ, ಆವರ್ತ ಠೇವಣಿ (ಅಂಚೆ ಕಚೇರಿ ಆರ್ ಡಿ), ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (POPPF), ಅಂಚೆ ಕಚೇರಿ ಹಿರಿಯ ನಾಗರಿಕ ಯೋಜನೆ (POSCS), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಮುಂತಾದ ಯೋಜನೆಗಳಲ್ಲಿ ಹೂಡಿಕೆ ಬಡ್ಡಿ ದರಗಳ ಬಗ್ಗೆ ತಿಳಿಯಿರಿ.

ಅಂಚೆ ಕಚೇರಿ ಯೋಜನೆಗಳು ಬಡ್ಡಿ ದರಗಳು: ಅಂಚೆ ಕಚೇರಿಯ ಯೋಜನೆಯು ಪ್ರತಿಯೊಂದು ವರ್ಗಕ್ಕೂ ವಿವಿಧ ಯೋಜನೆಗಳನ್ನು ಒದಗಿಸುತ್ತದೆ. ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮಾಡಬಹುದು ಮತ್ತು ನಿಶ್ಚಿತ ಠೇವಣಿ, ಆವರ್ತಠೇವಣಿ (ಪೋಸ್ಟ್ ಆಫೀಸ್ ಆರ್ ಡಿ), ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (POPPF), ಅಂಚೆ ಕಚೇರಿ ಹಿರಿಯ ನಾಗರಿಕ ಯೋಜನೆ (POSCS), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗಳಲ್ಲಿ ಉತ್ತಮ ಆದಾಯವನ್ನು ಪಡೆಯುವಿರಿ.

ಅಂಚೆ ಕಚೇರಿಯ ಉಳಿತಾಯ ಖಾತೆ: ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಹೇಳ್ಬೇಕು ಅಂದ್ರೆ, ಮೊದಲೆಯದಾಗಿ ಇದರಲ್ಲಿ ನೀವು ವರ್ಷಕ್ಕೆ 4% ಬಡ್ಡಿಯನ್ನ ಪಡೆಯುತ್ತೀರಿ. ಗ್ರಾಹಕರು 500 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ನೊಂದಿಗೆ ಉಳಿತಾಯ ಖಾತೆ ತೆರೆಯಬಹುದು. ಆದರೆ, ನೀವು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂಪಾಯಿಗಳಿಗಿಂತ ಕಡಿಮೆ ಇರಿಸಿದ್ರೆ, ಹಣಕಾಸು ವರ್ಷದ ಕೊನೆಯಲ್ಲಿ 100 ರೂಪಾಯಿ ದಂಡವನ್ನು ವಿಧಿಸಲಾಗುತ್ತೆ.

ಸುಕನ್ಯಾ ಸಮೃದ್ಧಿ ಯೋಜನೆ (ಎಸ್.ಎಸ್.ವೈ): ಹೆಣ್ಣುಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ನೀವು ವಾರ್ಷಿಕ 7.6 ಪ್ರತಿಶತ ಬಡ್ಡಿಯನ್ನ ಪಡೆಯುತ್ತೀರಿ. ಈ ಯೋಜನೆಯ ಪೋಷಕರು ಕೇವಲ 14 ವರ್ಷಮಾತ್ರ ಹೂಡಿಕೆ ಮಾಡ್ಬೇಕು. ಇದಾದ ನಂತರ 21 ವರ್ಷವಿದ್ದಾಗ ಪಕ್ವತೆಯನ್ನ ಸಾಧಿಸುತ್ತೆ. 14 ವರ್ಷಗಳ ನಂತರ, ಮುಚ್ಚುವ ಮೊತ್ತದ ಮೇಲಿನ ಬಡ್ಡಿಯು ವಾರ್ಷಿಕ 7.6% ಆಗುತ್ತದೆ. ಇದರಲ್ಲಿ ನೀವು 250 ರೂಪಾಯಿಗಳಿಗೆ ಒಂದು ಖಾತೆ ತೆರೆಯಬಹುದು. ಕನಿಷ್ಠ 1000 ರೂ., ಗರಿಷ್ಠ 1.5 ಲಕ್ಷ ರೂ.ಗಳ ಹೂಡಿಕೆ ಯನ್ನು ಪ್ರತಿ ವರ್ಷ ಮಾಡಬಹುದು. ಗ್ರಾಹಕರು SSYನಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವನ್ನ ಸಹ ಪಡೆಯುತ್ತಾರೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ, ನಿಮಗೆ ವಾರ್ಷಿಕ ಶೇ.7.1ಬಡ್ಡಿ ದರ ದೊರೆಯುತ್ತದೆ. ಈ ಆರ್ಥಿಕ ವರ್ಷದಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ. ಪ್ರೌಢಿಮೆಯ ಅವಧಿ 15 ವರ್ಷಗಳು. ಪಿಪಿಎಫ್ ಖಾತೆಯಲ್ಲಿ ಕಡಿತವನ್ನ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80c ಅಡಿಯಲ್ಲಿ ಕ್ಲೇಮ್ ಮಾಡಬಹುದು. ಅದರ ಮೇಲೆ ಪಾವತಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಕೂಡ ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು. ಎನ್ ಎಸ್ ಸಿ ಮೇಲಿನ ಪ್ರಸ್ತುತ ಬಡ್ಡಿದರಶೇ.6.8 ಮತ್ತು ವಾರ್ಷಿಕ ಬಡ್ಡಿಯನ್ನ ಚಕ್ರಾ೦ಗಿಕವಾಗಿ ಮಾಡಲಾಗುತ್ತದೆ.

ಅಂಚೆ ಕಚೇರಿ ನಿಶ್ಚಿತ ಠೇವಣಿ: ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪಾಸಿಟ್ (ಪೋಸ್ಟ್ ಆಫೀಸ್ ಎಫ್ ಡಿ) ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆದಾರರಿಗೆ ಶೇ.5.8ರ ಬಡ್ಡಿ ಸಿಗಲಿದೆ. ಅಂಚೆ ಕಚೇರಿಯ ನಿಶ್ಚಿತ ಠೇವಣಿಗೆ 1-3 ವರ್ಷಗಳ ಅವಧಿಗೆ ಶೇ.5.5ರ ಬಡ್ಡಿ ಇದೆ. 5 ವರ್ಷಗಳ ನಿಶ್ಚಿತ ಠೇವಣಿಯಲ್ಲಿ ಶೇ.6.7ರಷ್ಟು ಬಡ್ಡಿ ಇದೆ. ಹೂಡಿಕೆದಾರರಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ 5 ವರ್ಷಗಳ ನಿಶ್ಚಿತ ಠೇವಣಿ ಮೇಲೆ ತೆರಿಗೆ ವಿನಾಯಿತಿ ಸಿಗಲಿದೆ.

error: Content is protected !!