Home Blog Page 2172

ಪುರಸಭೆ ಮೀಸಲಾತಿ ಪ್ರಕಟ; ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಬಹುನಿರೀಕ್ಷಿತ ಸ್ಥಳೀಯ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
2019ರ ನವೆಂಬರ್ 12 ರಂದು ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನ.14ರಂದು ಮತಗಳ ಎಣಿಕೆ ನಡೆದಿತ್ತು. ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಭಾಜಪ ಅಭ್ಯರ್ಥಿಗಳು ಹಾಗೂ 10 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ಈ ಮುಂಚೆ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಸಾಮಾನ್ಯ ಮಹಿಳೆಗೆ ಮೀಸಲಾದ ಕಂಪ್ಲಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷದಿಂದ ಜಯ ಗಳಿಸಿರುವ 10 ಮಹಿಳೆಯರು ಅರ್ಹರಿದ್ದರೂ ಸಹಿತ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಸಾಮಾನ್ಯ ವರ್ಗದ ಮಹಿಳೆ 14ನೇ ವಾರ್ಡಿನಿಂದ ಜಯಗಳಿಸಿರುವ ಶಾಂತಲಾ ವಿ. ವಿದ್ಯಾಧರ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಬಹುಮತ ಪಡೆದಿರುವ ಭಾಜಪದಲ್ಲಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಗೆದ್ದಿರುವ ಏಕೈಕ ಮಹಿಳೆ 14ನೇ ವಾರ್ಡಿನ ಶಾಂತಲಾ ವಿ.ವಿದ್ಯಾಧರ. ಆದರೆ ಈ ಪಕ್ಷದಿಂದ ಜಯ ಗಳಿಸಿರುವ ಉಳಿದ ಐವರು ಮಹಿಳಾ ಅಭ್ಯರ್ಥಿಗಳಲ್ಲಿ 11ನೇ ವಾರ್ಡಿನ ಪಾರ್ವತಿ, 19ನೇ ವಾರ್ಡಿನ ಗಂಗಮ್ಮ ಉಡೇಗೋಳ್, 21ನೇ ವಾರ್ಡಿನ ಎಚ್.ಹೇಮಾವತಿ ಎಚ್.ಪಿ. ಚಂದ್ರು ಸಹಿತ ಆಕಾಂಕ್ಷಿಗಳಾಗಿದ್ದಾರೆ.
ಇದೀಗ ಸಾಮಾನ್ಯ ಮಹಿಳಾ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಿರುವುದರಿಂದ ಹಾಗೂ ಬಹುವರ್ಷಗಳ ನಂತರ ವೀರಶೈವ ಲಿಂಗಾಯತ ಧರ್ಮದ ಅಭ್ಯರ್ಥಿ ಇರುವುದರಿಂದ ಇವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದೆನ್ನುವ ಮಾತುಗಳು ಕೇಳಿ ಬರುತ್ತಿರುವುದರ ಜೊತೆಗೆ ಭಾಜಪ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಬಹುತೇಕ ಅಧ್ಯಕ್ಷರಾಗಿ ಆಯ್ಕೆಯಾಗಬಹುದಾಗಿದೆ.
ಇನ್ನು ಕಾಂಗ್ರೆಸ್ ಪಕ್ಷವು 10 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಅದರಲ್ಲಿಯೂ ಅಧ್ಯಕ್ಷ ಆಕಾಂಕ್ಷಿಗಳಿದ್ದು, ಸ್ಥಳೀಯ ಶಾಸಕರು ಕೈಗೊಳ್ಳುವ ನಿರ್ಣಯದ ಮೇಲೆ ಪುರಸಭೆ ಆಡಳಿತ ಚುಕ್ಕಾಣಿ ಯಾರಿಗೆ ಎನ್ನುವುದು ತಿಳಿಯಲಿದೆ. ಉಪಾಧ್ಯಕ್ಷ ಸ್ಥಾನ ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಈ ವರ್ಗದಿಂದ ಇಬ್ಬರು ಮುಸ್ಲಿಂ ಪುರುಷರು, ಒಬ್ಬ ಮಹಿಳೆ ಹಾಗೂ ಸಾಮಾನ್ಯ ಕ್ಷೇತ್ರದಿಂದ ಇಬ್ಬರು ಪುರುಷರು ಆಯ್ಕೆಯಾಗಿದ್ದರೂ ಸಹಿತ ಭಾಜಪ ಬಹುಮತ ಹೊಂದಿರುವುದರಿಂದ ಈ ಪಕ್ಷದ ಕೆ.ನಿರ್ಮಲ ಅಥವಾ ಹೂಗಾರ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಭಾಜಪಕ್ಕೆ ಸಂಪೂರ್ಣ ಬಹುಮತ ಇರುವುದರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅದೇ ಪಕ್ಷದಿಂದ ಆಗಬಹುದೆನ್ನುವ ಮಾತುಗಳು ಕೇಳಿಬರುತ್ತಿದ್ದರೂ ಸಹಿತ ರಾಜಕಾರಣದಲ್ಲಿ ಏನೂ ಆಗಬಹುದೆನ್ನುವ ಮಾತುಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೂ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಸಹಕಾರ ಕ್ಷೇತ್ರಕ್ಕೆ ಸಿದ್ದನಗೌಡ ಪಾಟೀಲರ ಸೇವೆ ಸ್ಮರಣೀಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಏಷಿಯಾ ಖಂಡದಲ್ಲಿಯೇ ಮೊಟ್ಟಮೊದಲ ನೋಂದಾಯಿತ ಕಣಗಿನಹಾಳ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವುದರ ಮೂಲಕ ಸಹಕಾರ ಕ್ಷೇತ್ರಕ್ಕೆ ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲರ ಸೇವೆ ಸ್ಮರಣೀಯ ಎಂದು ಕೊಪ್ಪಳದ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಡಿ.ಬಿ.ಗಡೇದ ತಿಳಿಸಿದ್ದಾರೆ.
ನಗರದ ಕೊಪ್ಪಳದ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕೊಪ್ಪಳ ತಾಲೂಕು ಸರಕಾರಿ ಪದವಿಪೂರ್ವ ಕಾಲೇಜು ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಣಗಿನಹಾಳದಲ್ಲಿ ೨೦೦೫ರಲ್ಲಿ ಸಹಕಾರ ಸಂಘದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಇಂದು ಸಹಕಾರ ಕ್ಷೇತ್ರ ಎಲ್ಲ ರಂಗಗಳಲ್ಲಿ ಬೆಳೆದು ಬಂದಿರುವುದು ಸಂತಸದ ಸಂಗತಿ. ಕೊಪ್ಪಳದಲ್ಲಿಯೂ ಸಹಿತ ಕೊಪ್ಪಳ ತಾಲೂಕು ಸರಕಾರಿ ಪದವಿಪೂರ್ವ ಕಾಲೇಜು ನೌಕರರ ಪತ್ತಿನ ಸಹಕಾರ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಸಂಘದ ಅಧ್ಯಕ್ಷ ಎ.ವಿ. ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಜಿಲ್ಲಾ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮನಗೌಡ ಎಂ.ಪಾಟೀಲ, ತಾಲೂಕು ಅಧ್ಯಕ್ಷ ಪತ್ರೇಪ್ಪ ಛತ್ರಿಕಿ, ಭಾಗ್ಯನಗರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಶೇಖರ ಪಾಟೀಲ ಉಪಸ್ಥಿತರಿದ್ದರು.
ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಐ.ಎಂ. ಚಿಕ್ಕರೆಡ್ಡಿ, ಎಂ.ಶಂಶುದ್ದೀನ್, ಮೊಯಿನುದ್ದೀನ್ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟರಾವ್ ದೇಸಾಯಿ, ಆರ್.ಎಸ್.ಸರಗಣಚಾರ್ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಪಡೆದ ಅದಿತಿ ಬೋಸ್ಲೆ, ಪ್ರಮೋದ ಕಂಡ್ರಿ, ವೇದಾ ತೊಣಿಸಿಹಾಳ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಶೇಖರ ಅಂಗಡಿ ಸ್ವಾಗತಿಸಿದರು. ಎಚ್.ಎಸ್.ಬಾರಕೇರ ನಿರೂಪಿಸಿದರು. ರಾಚಪ್ಪ ಜಿ.ಕೇಸರಬಾವಿ ವಂದಿಸಿದರು.

ದಲಿತ ಯುವತಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಶಿರಹಟ್ಟಿ
ಉತ್ತರಪ್ರದೇಶದಲ್ಲಿನ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಶಿರಹಟ್ಟಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ, ಇತ್ತೀಚೆಗೆ ದೇಶದಾದ್ಯಂತ ಅತ್ಯಾಚಾರ, ಹಲ್ಲೆ, ಕೊಲೆ ಘಟನೆಗಳು ಮರುಕಳಿಸುತ್ತಿವೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸಣ್ಣ ನಾಯ್ಕರ, ಚಂದ್ರು ತಳವಾರ, ಮಲ್ಲೇಶ ತಳವಾರ, ರಮೇಶ ಗುಳೇದ, ಹನಮಂತ ಜಾಲಿಮರದ, ಎಂ.ಎಂ.ತಳವಾರ, ಮಲ್ಲಪ್ಪ ಬಾಗೇವಾಡಿ, ನಾಗರಾಜ ತಳವಾರ, ಹನುಮಂತ ತಳವಾರ, ಹನುಮಂತ ಕೊಡ್ಲಿ, ಚನ್ನಪ್ಪ ಬೆಟದೂರ ಮುಂತಾದವರು ಉಪಸ್ಥಿತರಿದ್ದರು.

ಆಡಳಿತ ಚುಕ್ಕಾಣಿಗೆ ತುದಿಗಾಲಲ್ಲಿ ನಿಂತ ಕಾಂಗ್ರೆಸ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,ಶಿರಹಟ್ಟಿ
ಸ್ಥಳೀಯ ಪಟ್ಟಣ ಪಂಚಾಯತ್‌ಗೆ ಕಳೆದ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅಭ್ಯರ್ಥಿಗಳಿಗೆ ಅಧಿಕಾರ ಭಾಗ್ಯ ದೊರೆತಿರಲಿಲ್ಲ. ಮೀಸಲಾತಿ ವಿಳಂಬದಿಂದ ಕಂಗೆಟ್ಟು ಹೋಗಿದ್ದ ಸದಸ್ಯರಿಗೆ ಇದೀಗ ಸರಕಾರ ಮತ್ತೆ ಹೊಸದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿಯಂತೆ ಇಬ್ಬರು ಅಭ್ಯರ್ಥಿಗಳು ಅರ್ಹರಿದ್ದು ಇವರಿಬ್ಬರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವ ವಿಷಯ ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದಲ್ಲಿ ಇಬ್ಬರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದು, ಪಕ್ಷದ ಹಿರಿಯರ ನಿರ್ಣಯದಂತೆ ಆಯ್ಕೆ ನಡೆಯಲಿದೆ. ಇದಕ್ಕೆ ಎಲ್ಲ ಸದಸ್ಯರೂ ಬದ್ಧರಿರಲಿದ್ದಾರೆ.
-ಹುಮಾಯೂನ್ ಮಾಗಡಿ,
ಶಿರಹಟ್ಟಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

 
ಕಾಂಗ್ರೆಸ್‌ಗೆ ಬಹುಮತ: ಶಿರಹಟ್ಟಿ ಪಪಂ ವ್ಯಾಪ್ತಿಗೆ ಬರುವಂತಹ ೧೮ ವಾರ್ಡುಗಳ ಪೈಕಿ ೧೦ರಲ್ಲಿ ಕಾಂಗ್ರೆಸ್, ೭ರಲ್ಲಿ ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದು, ನಂತರದ ದಿನಗಳಲ್ಲಿ ಪಕ್ಷೇತರ ಅಭ್ಯರ್ಥಿಯು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದನು. ಹೀಗಾಗಿ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಇದೇ ಪಕ್ಷದಲ್ಲಿ ನೂತನ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನವು ಹಿಂದುಳಿದ ’ಬ’ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಇದಕ್ಕೆ ಅರ್ಹತೆ ಹೊಂದಿದವರ ಪೈಕಿ ವಾರ್ಡ್ ನಂ.೫ರ ಪರಮೇಶ ಪರಬ ಹಾಗೂ ವಾರ್ಡ್ ನಂ.೧೩ರ ಗಂಗವ್ವ ಆಲೂರ ಸ್ಪರ್ಧೆಯಲ್ಲಿದ್ದಾರೆ.
ಅಂತೂ-ಇಂತೂ ಅಧಿಕಾರ ಬಂತು?: ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದಂತಹ ಅಭ್ಯರ್ಥಿಗಳು ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟಿಸಿದ್ದರಿಂದ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಅಂತೂ-ಇಂತೂ ಅಧಿಕಾರ ಬಂತು ಎನ್ನುವ ರೀತಿಯಲ್ಲಿದೆ. ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೆ ತುದಿಗಾಲಲ್ಲಿ ನಿಂತಿದ್ದು, ಇನ್ನೂ ಸ್ಥಳೀಯ ಬಿಜೆಪಿ ನಾಯಕರು ಕೂಡ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕದೇ ಸಹಕಾರ ನೀಡುವುದಾಗಿ ಹೇಳುತ್ತಿದ್ದಾರೆ.
 

ಬಿಜೆಪಿಯಲ್ಲಿ ’ಬ’ ವರ್ಗದ ಅಭ್ಯರ್ಥಿಗಳು ಯಾರೂ ಇಲ್ಲ. ಪರಮೇಶ ಪರಬ ಇವರ ಆಯ್ಕೆಗೆ ಬೆಂಬಲ ನೀಡುತ್ತೇವೆ.
-ವಿಶ್ವನಾಥ ಕಪ್ಪತ್ತನವರ್, ಬಿಜೆಪಿ ಮುಖಂಡ
 

ಪ್ರವಾಹ ಪೀಡಿತ ಫಲಾನುಭವಿಗಳಿಗೆ ಪರಿಹಾರ ಒದಗಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಹೊಸದಾಗಿ ಗದಗ, ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ ತಾಲೂಕುಗಳು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಣೆ ಆಗಿದ್ದು, ಈ ಮೂಲಕ ಗದಗ ಪ್ರವಾಹ ಪೀಡಿತ ಜಿಲ್ಲೆಯಾಗಿದೆ. ಹೀಗಾಗಿ ಸರ್ಕಾರದ ಮಾರ್ಗದರ್ಶನದನ್ವಯ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಪ್ರಮಾಣವನ್ನು ಸಮೀಕ್ಷೆ ಮಾಡಿ, ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ತಾಲೂಕಾಧಿಕಾರಗಳ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆ ಆಗಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ಸೇರಿದಂತೆ ಪ್ರವಾಹಕ್ಕೆ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷಾ ಕಾರ್ಯ ಕೈಗೊಳ್ಳಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸಬೇಕು. ಅಲ್ಲದೇ, ಅರ್ಹ ಕುಟುಂಬಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಕಳೆದ ವರ್ಷ ಸಂಭವಿಸಿದ ನೆರೆಗೆ ಹಾನಿಗೊಳಗಾಗಿದ್ದು, ಪರಿಹಾರ ಸಿಗದೇ ಬಾಕಿ ಉಳಿದಿರುವ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಬೇಕು. ಇದಕ್ಕೆ ಸಂಬಂಧಿಸಿದಂತಹ ದೂರುಗಳನ್ನು ಆಯಾ ತಾಲ್ಲೂಕು ತಹಶೀಲ್ದಾರರು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಜಿಲ್ಲೆಯಾದ್ಯಂತ ಸುರಿದಿರುವ ನಿರಂತರ ಮಳೆಗೆ ಹಾನಿಗೊಳಗಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ರಸ್ತೆ ನಿರ್ಮಿಸಿ, ನಿರ್ವಹಣೆಯ ಅವಧಿ ಮುಗಿಯದಿರುವ ಗುತ್ತಿಗೆದಾರರು ಅಥವಾ ಸಂಬಂಧಿಸಿದ ಏಜೆನ್ಸಿಗಳಿಂದ ಸಾರ್ವಜನಿಕರ ಅವಶ್ಯಕತೆಗನುಗುಣವಾಗಿ ರಸ್ತೆ ದುರಸ್ಥಿಗೊಳಿಸಲು ಕ್ರಮ ವಹಿಸಬೇಕು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೋನಾ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಈಗಾಗಲೇ ನಿಗಾದಲ್ಲಿರುವ ಕೊರೋನಾ ಸೋಂಕಿತರು ಮತ್ತು ಶಂಕಿತರ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣವೇ ನಿಗದಿತ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆ ಹೆಚ್ಚುತ್ತಿದ್ದು, ಇಂತವರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಬೃಹತ್ ಟೆಂಡರ್ ಸ್ಥಳೀಯವಾಗಿ ನೀಡಲು ಆಗ್ರಹ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಬೃಹತ್ ಮೊತ್ತದ ಟೆಂಡರ್‌ಗಳನ್ನು ವಿಂಗಡಿಸಿ ಉಪವಿಭಾಗವಾರು ಮಟ್ಟದಲ್ಲಿ ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ನೀಡಲು ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಹುಬ್ಬಳ್ಳಿಯ ಹೆಸ್ಕಾಂ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ರವೀಂದ್ರ ಬಿ. ಜೋಗಿನ್, ಹೆಸ್ಕಾಂದಿಂದ ಸ್ಥಳೀಯ ವಿದ್ಯುತ್ ಗುತ್ತಿಗೆದಾರರು ಯಾವುದೇ ರೀತಿಯ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯಿಂದ ಉಪಜೀವನ ನಿರ್ವಹಿಸಲು ಸಹಾಯ ದೊರಕಿರುವುದಿಲ್ಲ. ಬೃಹತ್ ಮೊತ್ತದ ಟೆಂಡರ್‌ಗಳನ್ನು ಕರೆದು ಬಂಡವಾಳಶಾಹಿಗಳಿಗೆ ನೀಡುವುದರಿಂದ ಸ್ಥಳೀಯ ಸಾಮಾನ್ಯ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಬೃಹತ್ ಕಾಮಗಾರಿಗಳನ್ನು ಬಂಡವಾಳಶಾಹಿಗಳು ಕಾರ್ಯವೈಖರಿಯ ಬಗ್ಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಇದೆ. ಇಲಾಖೆಯು ೧ರಿಂದ ೫ ಲಕ್ಷದ ವರೆಗಿನ ಕಾಮಗಾರಿಗಳನ್ನು ಟೆಂಡರ್ ಕರೆಯದೇ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಆಗುವುದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಅಭಿವೃದ್ಧಿ ಹೊಂದದೇ ಇರುವ ಬಡಾವಣೆಗಳಲ್ಲಿ ನಿರ್ಮಿಸಿದ ಮನೆಗಳಲ್ಲಿ ವಿದ್ಯುತ್ ಸಂಪರ್ಕ ನೀಡಲು ಕೆ.ಇ.ಆರ್.ಸಿ ೧೦ನೇ ತಿದ್ದುಪಡಿಯ ನಿಬಂಧನೆ ಪ್ರಕಾರ ವಿದ್ಯುತ್ ಸಂಪರ್ಕಕಕ್ಕೆ ಮಂಜೂರಿ ನೀಡದೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಕಡತವನ್ನು ಹಿಂದಿರುಗಿಸುವುದು ಆದರೆ ಇನ್ನೊಬ್ಬ ಗ್ರಾಹಕನಿಗೆ ಇದೇ ಕೆ.ಇ.ಆರ್.ಸಿ ಪ್ರಕಾರ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಿದೆ. ಇಂತಹ ಮಲತಾಯಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದರು.
ಹೆಸ್ಕಾಂ ಗದಗ ವಿಭಾಗೀಯ ಉಗ್ರಾಣದಲ್ಲಿ ಸ್ಥಳೀಯ ಗುತ್ತಿಗೆ ಕಾಮಗಾರಿ ನಿರ್ವಹಿಸಲು ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಗ್ರಾಣ ಅಧಿಕಾರಿಗಳು ಸರಿಯಾಗಿ ಪೂರೈಸುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಮುತ್ತಿಗೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಜಿಲ್ಲೆಯಾದ್ಯಂತ ಅನೇಕ ರಸ್ತೆಗಳು ಸಂಪೂರ್ಣ ಹದಗೆಟ್ಟು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅ.12ರಂದು ಬೆಳಿಗ್ಗೆ 11.30 ಕ್ಕೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನಮಂತ ಎಚ್. ಅಬ್ಬಿಗೇರಿ ತಿಳಿಸಿದ್ದಾರೆ.
ಎಲ್ಲ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕೂಡಲೇ ಕೈಗೊಳ್ಳಬೇಕಂದು ಆಗ್ರಹಿಸಿ ನಗರದ ರಾಣಿಚನ್ನಮ್ಮ ವೃತ್ತದಿಂದ ನಗರದಲ್ಲಿರುವ ಲೋಕೋಪಯೋಗಿ ಇಲಾಖೆಯವರೆಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು.
ಈ ಪಾದಯಾತ್ರೆಯನ್ನು ಕರವೇ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ ನೇತೃತ್ವದಲ್ಲಿ ಜಿಲ್ಲಾ ಕರವೇ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾಧ್ಯಕ್ಷ ಹನಮಂತ ಎಚ್. ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ತಪಾಸಣಾ ಶಿಬಿರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ವಿಶ್ವ ಹೃದಯ ದಿನದ ಅಂಗವಾಗಿ ಭಾರತ ಸರ್ಕಾರ ಅಕ್ಟೋಬರ್ 2 ರಿಂದ 23 ರವರೆಗೆ ಸದೃಢ ಆರೋಗ್ಯ ಕಾರ್ಯಕರ್ತರ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಅಸಾಂಕ್ರಾಮಿಕ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ ಹಾಗೂ ಸಾಮಾನ್ಯ ಕ್ಯಾನ್ಸರ್ (ಬಾಯಿ, ಸ್ತನ ಮತ್ತು ಗರ್ಭಾಶಯ ಕಂಠದ ಕ್ಯಾನ್ಸರ್) ತಪಾಸಣೆಯನ್ನು ಅಕ್ಟೋಬರ್ 12 ರಿಂದ 14 ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 101 ರಲ್ಲಿ ಹಮ್ಮಿಕೊಳ್ಳಲಾಗಿದೆ.
ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ
ತಾಲೂಕಿನ ವಾಸನ ಗ್ರಾಮದಲ್ಲಿ ಪ್ರಮುಖ ರಸ್ತೆಯೊಂದು ಹಾಳಾಗಿ ತಿಂಗಳು ಕಳೆದರೂ ದುರಸ್ತಿಗಾಗಿ ಗ್ರಾಪಂ ಅಥವಾ ಸಂಬಂಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿಕೊಡಲು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ತಗ್ಗು ದಿಣ್ಣೆಗಳಿಂದ ತುಂಬಿದ ರಸ್ತೆಯನ್ನು ವಾಹನ ಸಂಚಾರಕ್ಕೆ ಗ್ರಾಮಸ್ಥರು ಬಳಸುವುದನ್ನೇ ತಟಸ್ಥಗೊಳಿಸಿದ್ದಾರೆ. ಸಮಸ್ಯೆ ಪರಿಶೀಲಿಸಿ ರಸ್ತೆ ದುರಸ್ತಿಗೊಳಿಸಬೇಕು. ಇದರಿಂದ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ರಸ್ತೆ ಮತ್ತು ಗ್ರಾಮದ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆತಿರಲಿಲ್ಲ. ಪ್ರಸಕ್ತ ಒಂದು ಕೋಟಿ ರೂ. ಅನುದಾನ ದೊರೆತಿದೆ. ಇದರಲ್ಲಿ ರಸ್ತೆ ಕಾಮಗಾರಿ ಮತ್ತು ಗ್ರಾಮದಲ್ಲಿ ಸಮುದಾಯ ಭವನ ಮತ್ತು ಎರಡು ಯುವಕ ಮಂಡಳ ಕಟ್ಟಡ, ಚರಂಡಿ ಕಾಮಗಾರಿ, ಗ್ರಾಮದ ಎರಡು ಭಾಗದಲ್ಲಿ ಹೈಮಾಸ್ಕ್ ಅಳವಡಿಕೆ, ಗ್ರಾಪಂ ಕಾರ್ಯಾಲಯದಲ್ಲಿ ಕೊಠಡಿ ನಿರ್ಮಾಣಕ್ಕಾಗಿ ಅನುದಾನ ಲಭ್ಯವಾಗಿದೆ.
ಹಂತ ಹಂತವಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆ ಕಾಮಗಾರಿ ಭೂಸೇನಾ ನಿಗಮದವರಿಗೆ ವಹಿಸಲಾಗಿದ್ದು, ಅವರು ಕಳೆದ ಎರಡು ದಿನಗಳಿಂದ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಗ್ರಾಪಂ ಪಿಡಿಒ ಎಂ.ಎ. ವಾಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಖಂಡನೀಯ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕುಂದಗೋಳ
ನಗರದ ಗಾಳಿ ಮರೆಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿಯವರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮೇಲೆ ಪದೇ ಪದೇ ತನಿಖೆಯನ್ನು ಮಾಡುತ್ತಿರುವುದನ್ನು ಖಂಡಿಸಿ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ ನೇತೃತ್ವದಲ್ಲಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ, ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಪದೇಪದೇ ದಾಳಿ ಮಾಡುತ್ತಿರುವುದು ಖಂಡನೀಯ, ಇ.ಡಿ. ಮತ್ತು ಸಿ.ಬಿ.ಐ. ಮೇಲೆ ಒತ್ತಡ ಹೇರಿ ರಾಜಕಾರಣ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.
ಅರವಿಂದ ಕಟಗಿ ಮಾತನಾಡಿ, ಕೊರೋನಾ ರಾಜ್ಯದಲ್ಲಿ ರುದ್ರ ತಾಂಡವವಾಡುತ್ತಿದೆ. ಅದರ ಕಡೆ ಗಮನ ಕೊಡುವುದನ್ನು ಬಿಟ್ಟು ಪಕ್ಷದ ನಾಯಕರ ಮೇಲೆ ದಾಳಿ ಮಾಡುವುದು ಸಲ್ಲದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಉಮೇಶ ಹೆಬಸುರ, ಸುರೇಶ ಗಂಗಾಯಿ, ವೆಂಕನಗೌಡ್ರ ಪೊಲೀಸ್‌ಪಾಟೀಲ, ಇರ್ಷಾದ್ ಅಹ್ಮದ್ ಹುಳಗುರ, ಬೀರಪ್ಪ ಕುರಬರ, ಅಡಿವೆಪ್ಪ ಶಿವಳ್ಳಿ, ಬಸಲಿಂಗಪ್ಪ ಕೋರಿ, ರಾಯಸಾಬ ಕಳ್ಳಿಮನಿ, ನಿಂಗಪ್ಪ ಹಳ್ಳಿಕೇರಿ, ಅಪ್ಪಣ್ಣ ಹಿರೇಗೌಡ್ರ, ಸಕ್ರಪ್ಪ ಲಮಾಣಿ, ಮಲ್ಲೇಶ್ ಬೆಳವಡಿ, ಬಾಲಚಂದ್ರ, ಲಕ್ಷ್ಮೀ ಸಂಕಣ್ಣವರ, ರಾಮನಗೌಡ್ರ ಪಾಟೀಲ್, ಸಲೀಂ ಕ್ಯಾಲಕೊಂಡ, ಬಸವರಾಜ ಶಿರಸಂಗಿ, ರಮೇಶ ಲಮಾಣಿ, ಗುರುಶಾಂತ ಪಾಟೀಲ, ಸಿದ್ದಪ್ಪ ಚೂರಿ, ಮಕ್ತುಮಸಾಬ ಲಾಡಸಾಬನವರ್, ಕವಿತಾ ಸೊಟ್ಟಮನವರ್, ಯಲ್ಲಪ್ಪ ದಾಸರ್, ರಫೀಕ್ ನಧಾಪ್, ಅಶ್ಪಕ್ ಪಾಪನ್ನವರ್, ಹನಮಂತ ಲಕ್ಷ್ಮೇಶ್ವರ್, ನಿಂಗವ್ವ ಕುಮ್ಮಣ್ಣವರ್, ವೀಣಾ, ಗೀತಾ ಕೋಟಿಗೌಡ್ರ, ಸಲೀಮ್ ಕಡ್ಲಿ, ಗಿರೀಶ ಮುದಿಗೌಡ್ರ ಮತ್ತಿತರರು ಇದ್ದರು.

error: Content is protected !!