ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಚರಿಸಲಾಗುತ್ತಿರುವ ಕರ್ನಾಟಕ ಬಂದ್ ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಕ್ಯಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ ಸ್ಥಬ್ದವಾಗಿದ್ದ ಪರಿಣಾಮ,ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಜನರಿಂದ ಗಿಜಿಗುಡುತ್ತಿದ್ದ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸ್ಥಬ್ದವಾಗಿತ್ತು, ಮಾರುವವರು ಕೊಳ್ಳುವವರು ಇಲ್ಲದೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಖಾಲಿಯಾಗಿತ್ತು.
ಇನ್ನುಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸುವ ಮೂಲಕ ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮುದ್ರಣ ಕಾಶಿ ಗದಗನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಮುಳಗುಂದ ನಾಕಾದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು, ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
ಇನ್ನು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಹಿತಕರ ಘಟನೆಗಳು ನಡೆಯದಂತೆ, ಮುಂಜಾಗ್ರತಾ ಕ್ರಮವಾಗಿ, ಮುಳಗುಂದ ನಾಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.
ಪ್ರತಿಭಟನಾನಿರತ ಕರವೇ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಪೊಲೀಸರು ಅವಕಾಶ ನೀಡದ್ದಕ್ಕೆ, ಪೊಲೀಸರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ನಡೆದಿದ್ದು, ಟೈರ್ ಗೆ ಬೆಂಕಿ ಹಚ್ಚಿದ್ರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು. ಪೊಲೀಸರ ಈ ನಡೆಗೆ ಕುಪಿತಗೊಂದ ಕರವೇ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.
ನಿಮ್ಮ ಕೆಲಸ ನೀವು ಮಾಡಿ ನಮ್ಮ ಕೆಲಸ ನಾವು ಮಾಡ್ತೀವಿ ಎಂದ ಕಾರ್ಯಕರ್ತರು, ಸರ್ಕಾರದ ಕೈಗೊಂಬೆ ಆಗಿ ಕೆಲಸ ಬೇಡ ಅಂತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಟೈರ್ ಗೆ ಬೆಂಕಿ ಹಚ್ಚುವುದು, ಮರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದನ್ನು ನಾವು ಕೇಳಿದ್ದೀವಿ. ಆದರೆ ಇಲ್ಲಿ ಚಪ್ಪಲಿ ಶೂಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಘಟನೆ ನಡೆದಿದೆ.
ಹೌದು ಗದಗ ನಗರದ ಮುಳಗುಂದ ನಾಕಾ ಈ ಬಗೆಯ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಟೈರ್ ಗೆ ಬೆಂಕಿ ಹಚ್ಚಲು ಅವಕಾಶ ನೀಡದ ಪೊಲೀಸರ ಕ್ರಮಕ್ಕೆ ವಿರುದ್ಧವಾಗಿ ಕರವೇ ಕಾರ್ಯಕರ್ತರು ಈ ಬಗೆಯ ಪ್ರತಿಭಟನೆ ಮಾಡಿದ್ದಾರೆ.
ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು, ತಾವು ಹಾಕಿಕೊಂಡಿದ್ದ ಚಪ್ಪಲಿ ಹಾಗೂ ಶೂ ಗೆ ಬೆಂಕಿ ಹೆಚ್ಚಿ, ಸುಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಮ್ಸಿ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಲು ಒತ್ತಾಯಿಸಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಗದಗನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಬಂದ್ ಗೆ 10 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಜಯಕರ್ನಾಟಕ, ಕರವೇ ನಾರಾಯಣಗೌಡ ಬಣ ಹಾಗೂ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಗದಗನ ಕೇಂದ್ರ ಬಸ್ ನಿಲ್ದಾಣದಲ್ಲಿ ಬೇರೆ ಸ್ಥಳಗಳಿಗೆ ತಲುಪಬೇಕಾದ ಪ್ರಯಾಣಿಕರು ಪರದಾಡಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೆ.28 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ಬಂದ್ ವೇಳೆ ಶಾಂತಿ ಭಂಗ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದರು.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ಸಂಬಂಧಿಸಿದಂತೆ ಪ್ರತಿಭಟನೆಗೆ ಮುಂದಾಗಿರುವ ಸಂಘಟನೆಗಳ ಮುಖಂಡರ ಸಭೆ ನಡೆಸಲಾಗಿದೆ. ಸಂಘಟಕರಿಗೆ ಸುಪ್ರಿಂಕೋರ್ಟ ಗೈಡ್ ಲೈನ್ಸ್ ಮಾಹಿತಿ ಜೊತೆಗೆ ಕಾನೂನು ಪಾಲನೆ ಮಾಡುವಂತೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.
ಬಂದ್ ವೇಳೆ ದೈನಂದಿನ ಕೆಲಸದಲ್ಲಿ ನಿರತರಾದವರಿಗೆ ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಬಾರದು. ಒಂದು ವೇಳೆ ಬಲವಂತ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಂದ್ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 26 ರಂದು 45 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
45 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8802 ಕ್ಕೇರಿದೆ. ಶನಿವಾರ 95 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7935 ಜನ ಗುಣಮುಖರಾಗಿದ್ದಾರೆ. 739 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಶನಿವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇದುವರೆಗೂ ಜಿಲ್ಲೆಯಲ್ಲಿ 128 ಜನ ಕೊವಿಡ್ ಗೆ ಮೃತಪಟ್ಟಿದ್ದಾರೆ.
ವಿಜಯಸಾಕ್ಷಿ ಕನ್ನಡದಿನಪತ್ರಿಕೆ, ಗದಗ: ಮೊನ್ನೆ ಮೊನ್ನೆ ತಾನೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ೩ ಕೋಟಿ ರೂ. ಬಿಡುಗಡೆ ಮಾಡಿದೆ. ಆಗಿಂದ ಮತ್ತೆ ಸುದ್ದಿಯಲ್ಲಿದೆ ಲಕ್ಕುಂಡಿ. ಆದರೆ ಹತ್ತಿರದಿಂದ ನೋಡಿದವರಿಗೆ ಲಕ್ಕುಂಡಿ ಕಸದ ಗುಂಡಿಯೇ ಆಗಿದೆ.
101 ದೇವಾಲಯಗಳು, 101 ಬಾವಿಗಳು ಎಂಬ ಕೀರ್ತಿಯ ಜೊತೆಗೆ ಉತ್ತರ ಕರ್ನಾಟಕದ ದೇವಾಲಯಗಳ ತೊಟ್ಟಿಲು ಎನಿಸಿರುವ ಲಕ್ಕುಂಡಿಯಲ್ಲಿ ಇಲ್ಲಿವರೆಗೆ ಪ್ರವಾಸಿಗರ ಕಣ್ಣಿಗೆ ಕಾಣ ಸಿಗುವುದು ಹತ್ತೋ, ಹನ್ನೆರಡೋ ದೇವಾಲಯಗಳು ಮಾತ್ರ. ಉಳಿದವು ಮಾಯವಾದವೇ ಅನ್ನಬೇಡಿ. ಇವೆ, ಆದರೆ ಅವು ಸ್ಥಳೀಯ ಕುಟುಂಬಗಳ ಸ್ಟೋರ್ ರೂಂ ಆಗಿ ಪರಿವರ್ತನೆಯಾಗಿವೆ ಅಷ್ಟೇ.
ಹಾಗಂತ ‘ಚರಿತ್ರೆಯ ಅರಿವಿಲ್ಲದವರು’ ಅಂತಾ ಅವರನ್ನು ತೆಗಳುತ್ತ ಕೂಡಬೇಡಿ. ಪ್ರಾಚ್ಯ ವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ದೇವಾಲಯಗಳು ಅವಕೃಪೆಗೆ ಒಳಗಾಗಿವೆ. ರಣ ರಣ ಹೊಡೆಯುವ ದೇವಾಲಯಗಳನ್ನು ಸ್ಥಳೀಯ ಕುಟುಂಬಗಳು ತಮ್ಮ ನಿತ್ಯದ ಬದುಕಿಗೆ ಹೊಂದುವಂತೆ ಮಾರ್ಪಡಿಸಿಕೊಂಡಿವೆ.
ಕೆಲವರಿಗೆ ದೇವಾಲಯದ ಗೋಡೆಗಳು ಕುಳ್ಳು ಉತ್ಪಾದನೆಯ ಕೇಂದ್ರಗಳು. ಗುಡಿಯ ಗೋಡೆಗೆ ರಪ್ಪಂತ ಪೆಂಡಿ ಸೆಗಣಿ ಒಗೆದರೆ ಫಟ್ಟಂತ ಗೋಡೆಯನ್ನು ಅಪ್ಪಿಕೊಳ್ಳುತ್ತದೆ. ಎರಡು ದಿನ ಬಿಸಲಿಗೆ ಬಿದ್ದರೆ ಕುಳ್ಳು ರೆಡಿ. ಆ ಮೂಲಕ ಅವರ ಒಲೆಯಲ್ಲಿ ಬೆಂಕಿ ಬಿದ್ದು ಪಟ್‌ಪಟ್ ಸಪ್ಪಳದೊಂದಿಗೆ ರೊಟ್ಟಿಯೂ ಸಿದ್ಧ.
ಇನ್ನು ಕೆಲವರು, ಮಳೆ-ಗಾಳಿಯಿಂದ ರಕ್ಷಿಸಲು ಕಟ್ಟಿಗೆ ತುಂಡುಗಳು, ಕಬ್ಬಿಣದ ಸಾಮಾನು ಇತ್ಯಾದಿ ವಸ್ತುಗಳನ್ನು ದೇವಾಲಯದ ಮಂಟಪದಲ್ಲಿ ಸಂಗ್ರಹಿಸುವ ‘ಹಾಬಿ’ ಹೊಂದಿದ್ದಾರೆ. ಇವೆಲ್ಲವನ್ನೂ ಟೀಕಿಸುವ ಅಥವಾ ಹೀಗಳೆಯುವ ಉದ್ದೇಶಕ್ಕೆ ಇದನ್ನು ಬರೆಯುತ್ತಿಲ್ಲ. ‘ಉಜ್ವಲ’ದಂತಹ ಸಾವಿರಾರು ಕೋಟಿ ರೂ. ಗಳ ಯೋಜನೆ ಬಂದರೂ ಒಲೆಗೆ ಕುಳ್ಳು ಹಾಕಿದರಷ್ಟೇ ಇವರ ರೊಟ್ಟಿ ಬೇಯುತ್ತಿದೆ ಎಂದರೆ, ‘ಉಜ್ವಲ’ಗಳ ಯಶಸ್ಸು ಅರ್ಥವಾಗುತ್ತದೆ. ಜನ ಅನಿವಾರ್ಯಕ್ಕೆ ಈ ದೇವಾಲಯ ಬಳಸುತ್ತಿದ್ದಾರೆಯೇ ಹೊರತು, ಅವರಿಗೇನೂ ಗುಡಿ ಒಳಗಿನ ದೇವರ ಭಕುತಿ ಕಡಿಮೆಯೇನಾಗಿಲ್ಲ.
ಆದರೆ, ಈ ದೇವಾಲಯಗಳನ್ನು ಸಂರಕ್ಷಿಸಬೇಕಾದ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಒಟ್ಟಾರೆ ಜಿಲ್ಲಾಡಳಿತ ಏನು ಮಾಡುತ್ತಿವೆ ಎಂಬ ಪ್ರಶ್ನೆ ಕಾಡುತ್ತದೆ. ಲಕ್ಕುಂಡಿಯನ್ನು ಮಾದರಿ ಪ್ರವಾಸಿ ತಾಣ ಮಾಡಲೆಂದೇ 2017 ರಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿತ್ತು. ವಾರ್ಷಿಕ 3 ಕೋಟಿ ರೂ. ಬಜೆಟ್ ನೀಡುವ ಭರವಸೆ ನೀಡಲಾಗಿತ್ತು. ಆರಂಭದಲ್ಲಿ ೫೦ ಲಕ್ಷ ರೂ. ಬಿಡುಗಡೆಯೂ ಆಗಿತ್ತು. ಆದರೆ ಕಚೇರಿ, ಸಿಬ್ಬಂದಿ ನೇಮಕದ ಕೊರತೆಯಿಂದ ಆ ರೊಕ್ಕ ವಾಪಾಸ್ ಸರ್ಕಾರಕ್ಕೆ ಹೋಗಿತ್ತು. ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ 3 ಕೋಟಿ ರೂ. ಬಿಡುಗಡೆ ಮಾಡಿದೆ. ಈಗಲಾದರೂ ಲಕ್ಕುಂಡಿ ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿ, ಐತಿಹಾಸಿಕ ವಾಸ್ತುಶಿಲ್ಪದ ಭವ್ಯ ಇತಿಹಾಸವನ್ನು ತೋರಿಸುವ ಜೀವಂತ ಮ್ಯೂಸಿಯಂ ಆಗಿ ಬದಲಾಗುವುದೇ?
ಚಾಲುಕ್ಯ ವಾಸ್ತುಶಿಲ್ಪದ ತಾಣ
ಲಕ್ಕುಂಡಿಯನ್ನು ಜೈನ ದೇವಾಲಯಗಳ ತವರೆಂದೇ ಗುರುತಿಸಲಾಗುತ್ತದೆ. ಇಲ್ಲಿ 11 ನೇ ಶತಮಾನದ ಶೈವ ಪರಂಪರೆ ಸಾರುವ ದೇವಾಲಯಗಳು ಸಾಕಷ್ಟಿವೆ. ಚಾಲುಕ್ಯ ಶೈಲಿಯೆಂದೇ ಹೆಸರಾದ ಚಾಲುಕ್ಯ ವಾಸ್ತುಶಿಲ್ಪ ಇಲ್ಲಿ ಮೈದಾಳಿದೆ. ವಿಶಾಲ ದೇವಸ್ಥಾನ, ಮಂಟಪ, ದೇವಾಲಯದ ಎದುರು ನಂದಿ ವಿಗ್ರಹ, ಒಳಗೆ ಶಿವಲಿಂಗ- ಈ ಮಾದರಿಯ ದೇವಾಲಯಗಳೂ ಇವೆ, ಜೈನ ಪರಂಪರೆ ಸಾರುವ ದೇವಾಲಯಗಳೂ ಇವೆ. ಚಾಲುಕ್ಯರ ನಂತರ ಬಂದ ಹೊಯ್ಸಳರೂ ಈ ದೇವಾಲಯಗಳನ್ನು ಸಂರಕ್ಷಿಸಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ ಲಕ್ಕುಂಡಿಯ ಸೊಸೆ ಎನ್ನುವುದಕ್ಕಿಂತ ಮನೆ ಮಗಳು ಇದ್ದಂತೆ. ಶಿಲ್ಪಕಲೆ ಜೊತೆಗೆ ಸಾಹಿತ್ಯವನ್ನೂ ಪೋಷಿಸಿದ ಅತ್ತಿಮಬ್ಬೆ ನಾಡಿನ ಅನನ್ಯ ಮಹಿಳೆಯರಲ್ಲಿ ಒಬ್ಬರು.
ವಿಜಯಸಾಕ್ಷಿ ಸುದ್ದಿ ಗದಗ
ಜಿಲ್ಲೆಯ ಶುಕ್ರವಾರ ರಾತ್ರಿಯಿಡಿ ಸುರಿದ ಮಳೆಯಿಂದ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದ ಬಳಿಯ ಸೇತುವೆ ಕೊಚ್ಚಿ ಹೋಗಿದೆ.
ನರಗುಂದ ತಾಲೂಕಿನ ಹಿರೇಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ನರಗುಂದ ಹಾಗೂ ಗುರ್ಲಕಟ್ಟಿ ಸಂಪರ್ಕ ಕಲ್ಪಿಸುವ ಸೇತುವೆ ಹಿರೇಹಳ್ಳದ ರಭಸಕ್ಕೆ ಕೊಚ್ಚಿ ಹೋಗಿದೆ. ಗುರ್ಲಕಟ್ಟಿ ಹಾಗೂ ಕಣಿಕೀಕೊಪ್ಪದಿಂದ ನರಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ.
ನರಗುಂದ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಈಗಾಗಲೇ ಐದಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಕಟಾವಿಗೆ ಬಂದ ಪೈರು ನೀರುಪಾಲಾಗಿದ್ದು, ರೈತರ ಚಿಂತಾಕ್ರಾಂತರಾಗಿದ್ದಾರೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಮಂಗಳೂರು
ಡ್ರಗ್ಸ್ ದಂಧೆ ವಿಚಾರವಾಗಿ ವಿಚಾರಣೆಗೆ ಇಂದು ಅನುಶ್ರೀ ಹಾಜರಾಗಿ, ಪೊಲೀಸರ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಿದ್ದಾರೆ.
ವಿಚಾರಣೆ ನಂತರ ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದು, ಕಿಶೋರ್ ಮತ್ತು ತರುಣ್ ಎಂಬ ಕೊರಿಯೋಗ್ರಾಫರ್ ಗಳ ಪರಿಚಯ ಇತ್ತು. ಅದು ಕೊರಿಯೋಗ್ರಾಫಿ ವಿಚಾರವಾಗಿ ಅಷ್ಟೇ. ಆನಂತರ ಅವರ ಜೊತೆ ಬೇರೆ ಯಾವುದೇ ಸಂಬಂಧ ಹೊಂದಿಲ್ಲ ಎಂದಿದ್ದಾರೆ.
ಮಂಗಳೂರಿನ ಪಣಂಬೂರು ಎಸಿಪಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿದರೆ ಖಂಡಿತ ಬರುತ್ತೇನೆ. ಸಿನಿಮಾ ರಂಗದಲ್ಲಿ ಡ್ರಗ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ನಮ್ಮನ್ನು ಕಾಡುತ್ತಿರುವ ಡ್ರಗ್ ಎಂಬ, ಈ ರೋಗವನ್ನು ಹೊಡೆದೋಡಿಸಲು ಎಲ್ಲರೂ ಪೊಲೀಸರಿಗೆ ಕೈಜೋಡಿಸಬೇಕು ಎಂದರು.