Home Blog Page 2172

ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಯ್ಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಇಕ್ಬಾಲ್ ಅನ್ಸಾರಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಹುದ್ದೆಗೆ ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಮಾಧ್ಯಮ ಕ್ಷೇತ್ರದೊಂದಿಗಿನ ಉತ್ತಮ ನಂಟು, ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಆಧರಿಸಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಉದ್ದೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ವಕ್ತಾರ ಹುದ್ದೆಗೆ ನೇಮಿಸಿರುವುದಾಗಿ ಡಿ.ಕೆ. ಶಿವಕುಮಾರ್​ ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ಬಾರಿ ಸಚಿವರಾಗಿದ್ದ ಅನ್ಸಾರಿ ಅವರು, ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿನ್ನೆಲೆ ಅವರಿಗೆ ಕೆಪಿಸಿಸಿ ಮಣೆ ಹಾಕಿದ್ದು, ಅನ್ಸಾರಿಯವರ ಆಯ್ಕೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ.

ಚಕ್ಕಡಿಗೆ ಬೈಕ್ ಡಿಕ್ಕಿ; ಸವಾರರಿಬ್ಬರ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಎತ್ತಿನ ಚಕ್ಕಡಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಕ್ರಾಸ್ ಬಳಿ ನಡೆದಿದೆ.

ಪರಶುರಾಮ ಉಪ್ಪಾರ್(25), ಆಸೀಮ್ ಸಾಬ್ ಸುಂಕದ್(26) ಮೃತ ದುರ್ದೈವಿಗಳಾಗಿದ್ದು, ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಮೃತರಲ್ಲಿ ಪರಶುರಾಮ್ ಉಪ್ಪಾರ್ ಸ್ಥಳದಲ್ಲೇ ಮೃತಪಟ್ಟರೆ, ಆಸೀಮ್ ಸಾಬ್ ಸುಂಕದ್ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಶಿರಹಟ್ಟಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವೀರಶೈವ-ಲಿಂಗಾಯತ’ ಪ್ರಮಾಣಪತ್ರಕ್ಕೆ ತೀವ್ರ ವಿರೋಧ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ನಗರದ ಬಸವಪರ ಸಂಘಟನೆಗಳು `ವೀರಶೈವ ಲಿಂಗಾಯತ’ ದ ಬದಲು ಹಿಂದಿದ್ದಂತೆ`ಲಿಂಗಾಯತ’ ಎಂದು ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿವೆ.

2002ಕ್ಕಿಂತ ಪೂರ್ವದಲ್ಲಿ`ಲಿಂಗಾಯತ’ ಎಂದಿತ್ತು. ಆದರೆ ಹಲವು ಮನುವಾದಿ ಕುತಂತ್ರಿಗಳ ಸಂಚಿನ ಫಲವಾಗಿ ಏಕಾಏಕಿ, ಯಾರ ಒತ್ತಾಯವಿರದಿದ್ದರೂ, ಯಾರನ್ನು ಕೇಳದೇ `ವೀರಶೈವ-ಲಿಂಗಾಯತ’ ಎಂದು ಬದಲಾವಣೆ ಮಾಡಲಾಯಿತು. ಇದು ಸಂವಿಧಾನಬಾಹಿರ ಕೃತ್ಯವಾಗಿದೆ. ಈ ದೇಶದ ಸಂವಿಧಾನದ ಪ್ರಕಾರ ಜಾತಿ, ಧರ್ಮಗಳ ಆಚರಣೆಯು ಆಯಾ ವ್ಯಕ್ತಿಯ ವೈಯಕ್ತಿಕ  ಹಕ್ಕಾಗಿರುತ್ತದೆ. ಈ ಜಾತಿ ತಿದ್ದುಪಡಿಯನ್ನು ವಿಧಾನಸಭೆಯಲ್ಲಾಗಲಿ, ವಿಧಾನ ಪರಿಷತ್ತಿನಲ್ಲಾಗಲಿ ಚರ್ಚಿಸದೇ ಬದಲಾಯಿಸಿದ್ದು ಕೂಡಾ ಅಸಂವಿಧಾನಿಕವಾದುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

2002ರಲ್ಲಿ ಹಠಾತ್ತನೇ ತಂತ್ರಾಂಶದಲ್ಲಿ ಬದಲಾವಣೆ ಮಾಡಿ`ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇದು ಲಿಂಗಾಯತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಎಲ್ಲ ಜಾತಿಯವರು ಅವರವರ ಜಾತಿ ಪ್ರಮಾಣಪತ್ರ ಪಡೆಯುತ್ತಿರುವಾಗ ಲಿಂಗಾಯತರು ಮಾತ್ರ ತಮ್ಮದಲ್ಲದ, ತಮ್ಮ ಇಚ್ಛೆಗೆ ವಿರೋಧವಾದ ‘ವೀರಶೈವ ಲಿಂಗಾಯತ’ ಪ್ರಮಾಣಪತ್ರ ಪಡೆಯುವ ದುರ್ದೈವ ಒದಗಿ ಬಂದಿದೆ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಈ ಪರಿಣಾಮವಾಗಿ `ಲಿಂಗಾಯತ’ರಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. `ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರವನ್ನು ಪಡೆಯುವುದರಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗದಲ್ಲಿ ಪ್ರವೇಶ ದೊರಕಲಾರದ ಸ್ಥಿತಿ ಬಂದಿದೆ. ಇತ್ತೀಚೆಗೆ ನವೋದಯ ಪ್ರವೇಶ ಪರೀಕ್ಷಾ ಸಂದರ್ಭದಲ್ಲೂ ಇದರ ಪರಿಣಾಮ ಕಂಡಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಇದ್ದರೂ ಕೂಡಾ `ವೀರಶೈವ-ಲಿಂಗಾಯತ’ ಜಾತಿ ಪ್ರಮಾಣಪತ್ರದಿಂದಾಗಿ ನವೋದಯ ಶಾಲೆಗಳಲ್ಲಿ ಪ್ರವೇಶ ದೊರಕದೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟ ಪ್ರಸಂಗ ಜರುಗಿದೆ.

ಇಂಥಹ ದುರ್ದೆಸೆ, ಅನ್ಯಾಯ ತಪ್ಪಿಸಲು ಲಿಂಗಾಯತರಿಗೆ ಅವರದೇ ಜಾತಿಯಾದ `ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡುವುದು ಅವಶ್ಯವಾಗಿದೆ ಎಂದು  ಗದುಗಿನ ಬಸವಪರ ಸಂಘಟನೆಗಳಾದ ಲಿಂಗಾಯತ ಪ್ರಗತಿಶೀಲ ಸಂಘ, ಬಸವ ದಳ, ಬಸವ ಕೇಂದ್ರ, ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಮೊದಲಿನಂತೆ ಜಾತಿ ಪ್ರಮಾಣಪತ್ರ ವಿತರಿಸಲು ಆಗ್ರಹಿಸಿವೆ.

ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ, ಬಸವಕೇಂದ್ರದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಹಾಗೂ ಬಿ.ವಿ.ಕಾಮಣ್ಣನವರ, ಕೆ.ವಿ.ಗೋಣಿ, ಮಲ್ಲಿಕಾರ್ಜುನ ಖಂಡೆಮ್ಮನವರ, ವೀರಣ್ಣ ಮುದಗಲ್ಲ, ಸಿದ್ಧಣ್ಣ ಅಂಗಡಿ, ರಾಮಣ್ಣ ಕಳ್ಳಿಮನಿ, ಎಂ.ಬಿ. ಲಿಂಗದಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

‘ಪರರಾಜ್ಯಕ್ಕೆ ಪೂರೈಸುತ್ತೀರಿ, ಇಲ್ಲಿ ಆಮ್ಲಜನಕವಿಲ್ಲದೇ ಜನ ಸಾಯ್ತಿದ್ದಾರೆ’: ಸದನದಲ್ಲಿ ಸರ್ಕಾರಕ್ಕೆ ಎಚ್ ಕೆ ಪಾಟೀಲ್ ತರಾಟೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿಗಳಿಗೆ ಪೂರೈಕೆ ಮಾಡ್ತೀರಿ. ಇಲ್ಲಿ ಆಮ್ಲಜನಕ ಕೊರತೆಯಿಂದ ಕೊವಿಡ್ ರೋಗಿಗಳು ಸಾಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅವರು ಮಂಗಳವಾರ ಸದನದಲ್ಲಿ ವೈದ್ಯಕೀಯ ಕಿಟ್ ಖರೀದಿ ಹಗರಣದ ಕುರಿತು ಮಾತನಾಡುತ್ತ,  ಕೊವಿಡ್ ಸೋಂಕಿತರಿಗೆ ಲಿಕ್ವಿಡ್ ಆಕ್ಸಿಜನ್ ಕೊರತೆಯಾಗಿದೆ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಮ್ಲಜನಕ ಪೂರೈಕೆ ಮಾಡಲು ನಿಮಗೆ ತೊಂದರೆಯೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ಸತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೆ ಬೀದರ್, ಬೆಳಗಾವಿ, ಬೆಂಗಳೂರಿನಲ್ಲಿ ಕೊವಿಡ್ ರೋಗಿಗಳು ಸತ್ತಿದ್ದಾರೆ. ಇದರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಎಚ್‌ಕೆ ಪಾಟೀಲ್ ಆಗ್ರಹಿಸಿದರು. 

ನಿವೃತ್ತ ಸೈನಿಕ ಸೇರಿ ಅಂತಾರಾಜ್ಯ ಕಳ್ಳರ ಬಂಧನ, 30 ಲಕ್ಷ ರೂ, 224 ಗ್ರಾಂ ಚಿನ್ನ ವಶ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಸುರತ್ಕಲ್: ತಿಂಗಳ ಹಿಂದೆ ಕಳ್ಳತನ ಮಾಡಿ, ಅಪಾರ ಹಣ ಮತ್ತು ಚಿನ್ನ ಹೊತ್ತೊಯ್ದ ಒಂದು ಅಂತರ್‌ರಾಜ್ಯ ಕಳ್ಳರ ತಂಡವನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕೇರಳ ಮತ್ತು ಕರ್ನಾಟಕ ಕರಾವಳಿಯ ವ್ಯಕ್ತಿಗಳು ಈ ತಂಡದ ಸದಸ್ಯರಾಗಿದ್ದಾರೆ.

ಸೇನೆಯಿಂದ ನಿವೃತ್ತರಾದ ಒಬ್ಬ ವ್ಯಕ್ತಿಯೂ ಈ ಸಂಚು ರೂಪಿಸುವುದರಲ್ಲಿ ಭಾಗಿಯಾಗಿದ್ದು ಆತನನ್ನೂ ಅರೆಸ್ಟ್ ಮಾಡಲಾಗಿದೆ.

ಬಂಧಿತರಿಂದ 30 ಲಕ್ಷ 85 ಸಾವಿರ 710 ರೂ., 224 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಉಳಿದ ಸಂಪತ್ತನ್ನು ಆರೋಪಿಗಳು ಖರ್ಚು ಮಾಡಿದ್ದಾರೆ.

ಆಗಸ್ಟ್ 17ರಂದು ಸುರತ್ಕಲ್ ಬಳಿಯ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ಮೆಂಟಿನ ನಿವಾಸಿ ವಿದ್ಯಾಪ್ರಭು ಎನ್ನುವವರ ಮನೆಯನ್ನು ಬಾಲ್ಕನಿ ಮೂಲಕ ಪ್ರವೇಶಿಸಿದ್ದ ಕಳ್ಳರು ಅಪಾರ ಹಣ ಮತ್ತು ಚಿನ್ನವನ್ನು ಕದ್ದಿದ್ದರು. ತನಿಖೆ ಆರಂಭಿಸಿದ್ದ ಸುರತ್ಕಲ್ ಪೊಲೀಸರು, ಸೆ. 15ರಂದು ಕೇರಳದ ತಿರುವನಂತಪುರಂನ ರಘು ಮತ್ತು ಅಮೇಶ್ ಎಂಬಿಬ್ಬರನ್ನು ಬಂಧಿಸಿದ್ದರು.

ಅದೇ ಅಪಾರ್ಟ್ಮೆಂಟಿನ ನಿವಾಸಿ, ಅಪಾರ್ಟ್ಮೆಂಟಿನ ಸೆಕ್ರೆಟರಿಯೂ ಆಗಿರುವ ಮತ್ತು ಸ್ಥಳೀಯ ಬಾರ್/ವೈನ್‌ಶಾಪ್‌ನಲ್ಲಿ ಮ್ಯಾನೇಜರ್ ಆಗಿರುವ ನವೀನ್ ಮತ್ತು ಬಾರ್‌ನಲ್ಲಿ ವೇಟರ್ ಆಗಿರುವ ಬೆಳ್ತಂಗಡಿಯ ಸಂತೋಷ್ ಈ ಕಳ್ಳತನದ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿತ್ತು. ಸದ್ಯ ಇವರಿಬ್ಬರನ್ನೂ ಬಂಧಿಸಲಾಗಿದ್ದು, ನವೀನ್ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದಾನೆ ಎನ್ನಲಾಗಿದೆ.

ಇನ್ನಿಬ್ಬರು ಕೇರಳ ಮೂಲದ ಆರೋಪಿಗಳಿಗಾಗಿ ಪೊಲೀಸರು ಶೊಧ ನಡೆಸಿದ್ದಾರೆ. ಕದ್ದ ಹಣದಲ್ಲಿ ಸಾಕಷ್ಟು ಹಣವನ್ನು ಆರೋಪಿಗಳು ಮಜಾ ಮಾಡಿ, ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಉಳಿದ ಹಣ, ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ವಾರಸುದಾರರಿಗೆ ನೀಡಿದ್ದಾರೆ.

ಅಮಾನತ್ತು ಹಿಂಪಡೆಯುವವರೆಗೆ ರಾಜ್ಯಸಭಾ ಕಲಾಪ ಬಹಿಷ್ಕಾರ: ವಿಪಕ್ಷಗಳ ನಿರ್ಧಾರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಎಂಟು ರಾಜ್ಯಸಭಾ ಸದಸ್ಯರ ಅಮಾನತ್ತನ್ನು ಹಿಂಪಡೆಯುವವರೆಗೆ ರಾಜ್ಯಸಭಾ ಕಲಾಪವನ್ನು ಬಹಿಷ್ಕರಿಸಲು ವಿಪಕ್ಷಗಳು ನಿರ್ಧರಿಸಿವೆ ಎಂದು ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಮಂಗಳವಾರ ಶೂನ್ಯವೇಳೆಯ ನಂತರ ಮಾತನಾಡಿದ ಅವರು, ಇದಲ್ಲದೇ ಇನ್ನು ಎರಡು ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಪೋರೇಟ್ ಕಂಪನಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಉತ್ಪನ್ನ ಖರೀದಿಸುವಂತಿಲ್ಲ ಎಂಬ ನಿಯಮವನ್ನು ಮಾಡಬೇಕು. ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲು ಡಾ. ಸ್ವಾಮಿನಾಥನ್ ಆಯೋಗ ಸೂಚಿಸಿರುವ ಮಾರ್ಗಸೂಚಿ ಅನುಸರಿಸಬೇಕು. ಈ ಮೂರೂ ಬೇಡಿಕೆ ಈಡೇರುವವರೆಗೆ ರಾಜ್ಯಸಭಾ ಕಲಾಪ ಬಹಿಷ್ಕಾರ ಮಾಡಲು ವಿಪಕ್ಷಗಳು ನಿರ್ಧರಿಸಿವೆ ಎಂದು ಹೇಳಿದರು.

ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಿಂಗ್ ಪ್ರತಿಭಟನಾ ನಿರತ ಎಂಟು ಸಂಸದರಿಗೆ ಚಹಾ ನೀಡಲು ಹೋದಾಗ ಅವರು ನಿರಾಕರಿಸಿದ್ದರು. ನಂತರ ಪ್ರಧನಿ ಮೋದಿ, ‘ತಮ್ಮನ್ನು ಅವಮಾನಿಸಿದವರಿಗೆ ಚಹಾ ನೀಡಿ ಉಪಚರಿಸಲು ಹೋದ ಹರಿವಂಶ್ ಅವರದ್ದು ವಿಶಾಲ ಹೃದಯ’ ಎಂದು ಹೊಗಳಿದ್ದರು. ಈ ನಡುವೆ ಭಾನುವಾರ ತಮಗೆ ಅವಮಾನವಾಗಿದ್ದನ್ನು ಪ್ರತಿಭಟಿಸಿ ಉಪ ಸಭಾಪತಿ ಹರಿವಂಶ್ ಸಿಂಗ್ ಕೂಡ ಒಂದು ದಿನದ ಉಪವಾಸ ವೃತದಲ್ಲಿದ್ದಾರೆ.

ತಾಜ್‌ಮಹಲ್ ಪುನರಾರಂಭ: ಮೊದಲ ಸಂದರ್ಶಕ ಯಾರು ಗೊತ್ತಾ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಕ್‌ಡೌನ್ ಮತ್ತು ಕೊವಿಡ್ ಬಿಕ್ಕಟ್ಟುಗಳ ಕಾರಣದಿಂದ ಹಲವು ತಿಂಗಳಿನಿಂದ ಪ್ರವಾಸಿಗರಿಗೆ ಮುಚ್ಚಲ್ಪಟ್ಟಿದ್ದ ತಾಜ್‌ಮಹಲ್ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ. ಕುತೂಹಲದ ವಿಷಯ ಎಂದರೆ, ಪುನರಾರಂಭದ ನಂತರ ಮೊದಲ ವಿಸಿಟರ್ ಚೀನಾದ ನಾಗರೀಕ ಎನ್ನುವುದು!

ಸೋಮವಾರ ಬೆಳಿಗ್ಗೆ 5.39ಕ್ಕೆ ಚೀನಾದ ಲಿಯಾಂಗ್ ಚಿಯಾಚೆಂಗ್ ಎಂಬ ವ್ಯಕ್ತಿಯ ಪ್ರವೇಶದೊಂದಿಗೆ ಮಾರ್ಚ್ ನಿಂದ ಬಂದ್ ಆಗಿದ್ದ ತಾಜ್‌ಮಹಲ್ ಮತ್ತೆ ಜನರಿಗೆ ತೆರೆದುಕೊಂಡಿದೆ. ಇದೇನೂ ವಿಶೇಷ ಸುದ್ದಿಯಲ್ಲವಾದರೂ, ಕೆಲವು ಗುಂಪುಗಳಿಗೆ ಇದು ಆಘಾತಕಾರಿ ಸುದ್ದಿಯೇ ಅನಿಸಬಹುದು!

ಸದ್ಯ ದಿನಕ್ಕೆ 5 ಸಾವಿರ ಜನರಿಗೆ ಮಾತ್ರ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಮೊದಲ ದಿನ ಶೇ.25ರಷ್ಟು ಟಿಕೆಟ್ ಮಾತ್ರ ಮಾರಾಟವಾಗಿದ್ದವು.

ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಮ್ಯಾಚ್: ಗದಗ ಹುಡುಗ ಅನಿರುದ್ಧ ಜೋಶಿ ಆಡುವನೇ ಐಪಿಎಲ್ ಮ್ಯಾಚ್?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗದಗ ಮಣ್ಣಿನಲ್ಲಿ ಪ್ಯಾಡು, ಗ್ಲೌವ್ಸ್ ಹಾಕದೇ ಗಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದ್ದ ‘ನಮ್ಮೂರ ಹುಡುಗ’ ಅನಿರುದ್ಧ ಜೋಶಿ ಈಗ ಸಮುದ್ರದಾಚೆ ಹಾರಿದ್ದಾನೆ. ಅಲ್ಲಿ ಅರಬ್ಬರ ನಾಡಿನಲ್ಲಿ ಈ ಸಲ ಆಡುವ 11ರ ತಂಡದಲ್ಲಿ ನಮ್ಮೂರ ಹುಡುಗನಿಗೆ ಅವಕಾಶ ಸಿಗಲಿದೆಯೇ ಎಂದು ಗದಗ-ಧಾರವಾಡ ಮತ್ತು ಈ ಭಾಗದ ಕ್ರಿಕೆಟ್ ಪ್ರೇಮಿಗಳೆಲ್ಲ ಉತ್ಸಾಹದಿಂದ ಕಾದಿದ್ದಾರೆ.

ಕಳೆದ ವರ್ಷ 2019ರ ಐಪಿಎಲ್ 12ನೇ ಆವೃತ್ತಿಯಲ್ಲಿ ಅನಿರುದ್ಧ ಜೋಶಿ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅನಿರುದ್ಧ ನಂತರದಲ್ಲಿ ಕರ್ನಾಟಕದ ಟ್ವೆಂಟಿ-20 ಮತ್ತು ಏಕದಿನ ತಂಡಗಳ ಪರ ಆಡಿ ಗಮನಾರ್ಹ ಸಾಧನೆ ಮಾಡಿದ್ದಾನೆ.

ಸತತ ಎರಡು ವರ್ಷ ಸಯೀದ್ ಮುಷ್ತಾಕ್ ಅಲಿ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆದ ಕರ್ನಾಟಕ ತಂಡದಲ್ಲಿದ್ದ ಅನಿರುದ್ಧ ಜೋಶಿ, ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದ. ಡೆತ್ ಓವರ್‌ಗಳಲ್ಲಿ ಭರ್ಜರಿ ಹೊಡೆತಗಳ ಆಟವಾಡಿ ಕೆಲವು ಕಠಿಣ ಗೆಲವುಗಳನ್ನು ತಂದು ಕೊಟ್ಟಿದ್ದ. ಹೀಗಾಗಿಯೇ ಈ ಸಲ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಆಯ್ಕೆ ಆಗಿದ್ದಾನೆ.

ಇಂದು ರಾಜಸ್ತಾನ್ ರಾಯಲ್ಸ್ ಮೊದಲ ಪಂದ್ಯ ಆಡಲಿದ್ದು, ಅನಿರುದ್ಧನಿಗೆ ಆಡುವ 11ರ ತಂಡದಲ್ಲಿ ಅವಕಾಶ ಸಿಗಲಿದೆ ಎಂದೇ ಕ್ರಿಕೆಟ್ ಪ್ರೇಮಿಗಳು ಆಶಾಭಾವನೆ ಇಟ್ಟುಕೊಂಡಿದ್ದಾರೆ.

        ಗದಗಿನಿಂದ ಜರ್ನಿ ಆರಂಭ

ಸಣ್ಣ ನಗರಗಳ ಎಲ್ಲ ಹುಡುಗರಂತೆ ಗಲ್ಲಿ ಕ್ರಿಕೆಟ್‌ನಲ್ಲಿ ಆಡುತ್ತ ಬೆಳೆದ ಅನಿರುದ್ಧ, ನಂತರ ಸ್ವತಃ ಕ್ರಿಕೆಟರ್ ಆಗಿದ್ದ ಅವರ ತಂದೆ ದಿ. ಅಶೋಕ್ ಜೋಶಿಯವರು ಸ್ಥಾಪಿಸಿದ್ದ ಗದಗ ಕ್ರಿಕೆಟ್ ಅಕಾಡೆಮಿಯಲ್ಲಿ ತಂದೆಯಿಂದ ತರಬೇತಿ ಪಡೆದ. ಮುಂದೆ ಚಿಕ್ಕಪ್ಪ ಸುನೀಲ್ ಜೋಶಿಯ ಮಾರ್ಗದರ್ಶನವೂ ಸಿಕ್ಕಿತು. ಅಶೋಕ್ ಜೋಶಿಯವರ ಅಕಾಡೆಮಿ ಕಾರ್ಯ ಸ್ಥಗಿತಗೊಳಿಸಿದ ನಂತರ, ಮುನ್ನಾ ಗುಳೇದಗುಡ್ಡ ಅವರ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗನಲ್ಲಿ ಕೋಚಿಂಗ್ ಪಡೆದ.

ಈ ಕ್ಲಬ್ ಪರವಾಗಿ ಕರ್ನಾಟಕ ಕ್ರಿಕೆಟ್ ಮಂಡಳಿ ನಡೆಸುತ್ತಿದ್ದ ಧಾರವಾಡ ವಲಯ ಲೀಗ್ ಪಂದ್ಯಗಳಲ್ಲಿ ಈ ಕ್ಲಬ್ ಪರವಾಗಿಯೇ ಆಡಿ ಮಿಂಚಿದ 2002ರಲ್ಲಿ ರಾಜ್ಯ ಅಂಡರ್-15 ತಂಡದ ಪರ ವಿವಿಧ ರಾಜ್ಯಗಳ ವಿರುದ್ಧ ಆಡಿದ. ನಂತರ ಅಂಡರ್-17, ಅಂಡರ್-19 ತಂಡಗಳಲ್ಲಿ ಸ್ಥಾನ ಗಿಟ್ಟಿಸಿ ಅದರಲ್ಲೂ ಸೈ ಅನಿಸಿಕೊಂಡ.

ಅನಿರುದ್ಧನಿಗೆ ದೊಡ್ಡ ಬ್ರೇಕ್ ನೀಡಿದ್ದು ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್). ಮೊದಲಿಗೆ ನಮ್ಮ ಶಿವಮೊಗ್ಗ ತಂಡದ ಪರ ಆಡಿ ತಾನೊಬ್ಬ ಟ್ವೆಂಟಿ-20 ಪರ್ಫೆಕ್ಟ್ ಪ್ಲೇಯರ್ ಎಂಬುದನ್ನು ಸಾಬೀತು ಪಡಿಸಿದ. ನಂತರದ ವರ್ಷಗಳಲ್ಲಿ ವಿವಿಧ ಕೆಪಿಎಲ್ ತಂಡಗಳಲ್ಲಿ ಅವಕಾಶ ಗಿಟ್ಟಿಸಿದ. ಅಷ್ಟರಲ್ಲಾಗಲೇ, ರಾಜ್ಯ ಕ್ರಿಕೆಟ್ ಆಯ್ಕೆದಾರರ ಗಮನ ಸೆಳೆದಿದ್ದ ಅನಿರುದ್ಧ ರಾಜ್ಯದ ಏಕದಿನ ಮತ್ತು ಟ್ವೆಂಟಿ-20 ತಂಡಗಳ ಖಾಯಂ ಸದಸ್ಯನಾದ.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಸತತ ಎರಡು ವರ್ಷ ಚಾಂಪಿಯನ್ ಆಯಿತಲ್ಲ, ಆಗ ಪ್ರಮುಖ ಪಂದ್ಯಗಳಲ್ಲಿ ಅಂತಿಮ ಅಂದರೆ ಡೆತ್ ಓವರ್‌ಗಳಲ್ಲಿ ಅನಿರುದ್ಧ ‘ಗುಡ್ ಫಿನಿಶರ್’ ಎನಿಸಿ, ಗೆಲುವು ತಂದಿದ್ದ. ಈಗ ಈ ಹುಡುಗನಿಗೆ ಸೆ.22 ರಂದು ಆಡುವ ಅವಕಾಶ ಸಿಗಲಿ. ಗದಗ ಕೀರ್ತಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಬೆಳಗುವಂತಾಗಲಿ ಎಂದು ವಿಜಯಸಾಕ್ಷಿ ಹಾರೈಸುತ್ತದೆ.


      ಅವತ್ತಿನ ನಾಟ್‌ಔಟ್ 73

2018ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ತಾನದ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತ ಬೆನ್ನು ಹತ್ತಿದ್ದ ಕರ್ನಾಟಕ ತಂಡ ಸಂಕಷ್ಟದಲ್ಲಿತ್ತು. ಆಗ ಕ್ರೀಸ್‌ಗೆ ಬಂದ ಅನಿರುದ್ಧ ಬಿರುಸಿನ ಹೊಡೆತಗಳ ಮೂಲಕ 73 ರನ್ ಗಳಿಸಿ ರಾಜ್ಯಕ್ಕೆ ಜಯ ತಂದಿದ್ದ. ಈ ಬಲಗೈ ಬ್ಯಾಟ್ಸಮನ್ ಮತ್ತು ಬಲಗೈ ಆಫ್‌ಬ್ರೇಕ್ ಬೌಲರ್ ಕ್ಷಿಪ್ರ ಮಾದರಿಯ ಕ್ರಿಕೆಟ್‌ಗೆ ಸರಿ ಹೊಂದುವ ಆಟಗಾರನಂತೂ ಹೌದು.

ರಾಜಸ್ತಾನ್ ರಾಯಲ್ಸ್ ತಂಡಕ್ಕೂ ಈಗ ಅನಿರುದ್ಧನಂತಹ ಆಲ್‌ರೌಂಡರ್ ಅಗತ್ಯ ಇರುವುದರಿಂದ ಈ ಸಲ ಆಡಲು ಅವಕಾಶ ಸಿಗಲಿದೆ. ಅವಕಾಶ ಸಿಕ್ಕರೆ ಅನಿರುದ್ಧ ಸದುಪಯೋಗ ಮಾಡಿಕೊಂಡು ಬೆಳೆಯುತ್ತಾನೆ.
   
ಮುನ್ನಾ ಗುಳೇದಗುಡ್ಡ, ಕ್ರಿಕೆಟ್ ಕೋಚ್,
     ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ

ಲಾರಿಗಳ ನಡುವೆ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಇಬ್ಬರು ಸ್ಥಳದಲ್ಲೇ ಸಾವನ್ಮಪ್ಪಿರುವ ಘಟನೆ ತಾಲೂಕಿನ ನಾರಾಯಣಾಪುರದ ಬಳಿ ನಡೆದಿದೆ.

ಮೈಸೂರು ಮೂಲದ 55 ವರ್ಷದ ಮಂಜುನಾಥ್ ಹಾಗೂ ರೋಣ ತಾಲೂಕಿನ ಮೆಣಸಗಿ ಗ್ರಾಮದ 40 ವರ್ಷದ ಮೋಹನ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಗದಗನಿಂದ ಕುಷ್ಟಗಿಗೆ ಹಾಗೂ ಬೇರೆಡೆಯಿಂದ ಗದಗ ಕಡೆಗೆ ಬರಿತ್ತಿದ್ದ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಂ-ಕೇರ್ಸ್ ನಿಧಿಗೆ ನವೋದಯ ಶಾಲೆ ಕೋಟಾದಲ್ಲಿ ನೀಡಿದ್ದು ದೇಣಿಗೆಯೋ, ವಸೂಲಿಯೋ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸಾವಿರಾರು ಕೋಟಿ ರೂ.ಗಳನ್ನು ಪಿಎಂ-ಕೇರ‍್ಸ್ ನಿಧಿಗೆ ದೇಣಿಗೆ ನೀಡಿದ್ದು ಈಗ ಹಳೆಯ ವಿಷಯ. ಈಗ ಆರ್‌ಟಿಐ ಮೂಲಕ ಹೊರ ಬಂದ ಹೊಸ ಸತ್ಯ ಏನೆಂದರೆ ದೇಶದ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಹಳ್ಳಿ ಮಕ್ಕಳಿಗಾಗಿ ಇರುವ ನವೋದಯ ಶಾಲೆಗಳು ಪಿಎಂ-ಕೇರ‍್ಸ್ಗೆ 21.81 ಕೋಟಿ ರೂ. ದೇಣಿಗೆ ನೀಡಿವೆ.

ಇದು ದೇಣಿಗೆಯೋ ಅಥವಾ ಅಧಿಕಾರ ಬಳಸಿ ಒತ್ತಾಯದಿಂದ ನಡೆಸಿದ ವಸೂಲಿಯೋ ಎಂಬ ಪ್ರಶ್ನೆ ಎದ್ದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ಹಿಂದೆ ಆಗಸ್ಟ್ 19ರಂದು ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಪ್ರಕಾರ, 38 ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು 2,105 ಕೋಟಿ ರೂ. ದೇಣಿಗೆ ನೀಡಿವೆ. ಸಾಮಾಜಿಕ ಜವಾಬ್ದಾರಿ ನಿಧಿಯ ಹಣವನ್ನು ಈ ಕಂಪನಿಗಳು ಪಿಎಂ-ಕೇರ‍್ಸ್ಗೆ ನೀಡಿದ್ದವು. ಈ ಕಂಪನಿಗಳಿಗೂ ದೇಣಿಗೆ ನೀಡಲೇಬೇಕೆಂಬ ಮೌಖಿಕ ಆದೇಶವಿತ್ತು ಎನ್ನಲಾಗಿದೆ.

ಪಿಎಂ-ಕೇರ‍್ಸ್ ನಿಧಿಯ ವಿವರಗಳನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತ ಬಂದಿದೆ. ಹೀಗಾಗಿ ಸ್ವತ: ಇಂಡಿಯನ್ ಎಕ್ಸ್ ಪ್ರೆಸ್ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಆರ್‌ಟಿಐ ಸಲ್ಲಿಸಿ ಈ ಮಾಹಿತಿ ಪಡೆದಿತ್ತು. ಈಗ ನವೋದಯ ಸೇರಿದಂತೆ ಇತರ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳಿಂದ ಆರ್‌ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ಈ ಸಂಸ್ಥೆಗಳಿಂದ 21.81 ಕೋಟಿ. ರೂ ದೇಣಿಗೆ ಹರಿದು ಬಂದಿದೆ.

ಯಾವುದೇ ನಿಧಿ ಇರಲಿ, ಅದಕ್ಕೆ ಸ್ವ ಇಚ್ಛೆಯಿಂದ ಬಂದ ದೇಣಿಗೆ ಮಾತ್ರ ಸ್ವೀಕರಿಸಬೇಕು. ಆದರೆ ಸಾರ್ವಜನಿಕರಿಗೇ ಸೇರಿದ ಕಂಪನಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ದೇಣಿಗೆ ಪಡೆಯುವುದು ವಿಚಿತ್ರವಾಗಿದೆ ಅಲ್ಲವೆ?

error: Content is protected !!