Home Blog Page 2183

ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಹೈಸ್ಕೂಲ್‌ ಗಿಂತ ಜಾಸ್ತಿ ಓದಿದವರಿಲ್ಲ. ಸಾಮಾನ್ಯ ರೈತ ಕುಟುಂಬ. ಅತಿ ಹಿಂದುಳಿದ ತಾಲೂಕಿನ ಹಿಂದುಳಿದ ಗ್ರಾಮದ ನಿವಾಸಿ.
ಇವು ಯಾವುದೂ ಸಹನಾ ಎಂಬ ಯುವತಿಗೆ ಅಡ್ಡಿಯಾಗಲಿಲ್ಲ. ಶುಕ್ರವಾರ ಪ್ರಕಟವಾದ ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 26ನೇ ರ‍್ಯಾಂಕ್ ಗಳಿಸುವ ಮೂಲಕ ಪಿಎಸ್‌ಐ ಆಗುತ್ತಿದ್ದಾಳೆ ಸಹನಾ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರು ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ್ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವಜನರಿಗೆ ಅದರಲ್ಲೂ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.

ಇಬ್ಬರು ಅಕ್ಕಂದಿರು ಹೈಸ್ಕೂಲ್‌ವರೆಗೆಷ್ಟೇ ಓದಿ ಮದುವೆಯಾಗಿ ಹೋದರು. ಅಣ್ಣಂದಿರು ಕಾಲೇಜ್ ಮೆಟ್ಟಿಲು ಹತ್ತದೇ, ಕೃಷಿಯಲ್ಲಿ ನಿರತರಾದರು. ಗ್ರಾಮಗಳ ಬಹುಪಾಲು ಕುಟುಂಬಗಳು ಹೆಣ್ಣು ಮಕ್ಕಳನ್ನು ಬಹಳವೆಂದರೆ ಪಿಯುಸಿವರೆಗೆ ಓದಿಸಿ, ಮದುವೆ ಮಾಡಿ ಗಂಡನ ಮನೆಗೆ ಕಳಿಸುತ್ತಾರೆ. ಆದರೆ ಸಹನಾ ಮನೆಯವರು ಎಂದೂ ಓದಿಗೆ ತಡೆ ಹಾಕಲಿಲ್ಲ.

‘ನಮ್ ಮನಿಮಂದಿ ಸಪೋರ್ಟೆ ಇದಕ್ಕೆಲ್ಲ ಕಾರಣ ನೋಡ್ರಿ. ಎಂಎ ಓದಲು ಧಾರವಾಡಕ್ಕೆ ಕಳಿಸಿದರು. ವಿದ್ಯಾಭಾಸದ ಖರ್ಚಿಗೆ ಹಿಂದೆಮುಂದೆ ನೋಡಲಿಲ್ಲ’ ಎಂದು ತನ್ನ ಮನೆಯವರ ಪ್ರೋತ್ಸಾಹವನ್ನು ನೆನೆಯುತ್ತಾರೆ ಸಹನಾ.

ಪಿಯುಸಿ ಹೊರತುಪಡಿಸಿ ಸಹನಾ ಓದಿದ್ದೆಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೇ. ಅವರ ಪೂರ್ತಿ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಿದೆ. ಇದು ಕೂಡ ನಮ್ಮ ಯುವಜನತೆಗೆ ಹೊಸ ಪ್ರೇರಣೆ ನೀಡಬಹುದು. ತೆಗ್ಗಿನ ಭಾವನೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಪೌಢ ಶಿಕ್ಷಣ ಪಡೆದ ಸಹನಾ ಪಿಯುಸಿಯನ್ನು ಶಿರಹಟ್ಟಿಯ ಡಬಾಲಿ ಕಾಲೇಜಿನಲ್ಲಿ ಓದಿದರು. ನಂತರ ಶಿರಹಟ್ಟಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದಿದರು. ಐದು ವರ್ಷ ಸತತವಾಗಿ ತಮ್ಮೂರಿನಿಂದ ಶಿರಹಟ್ಟಿಗೆ ಬಸ್ ಪ್ರಯಾಣ ಮಾಡಿ ಕಾಲೇಜು ಮುಗಿಸಿದರು.
ಆಕೆಯ ಬಹುಪಾಲು ಸಹಪಾಠಿಗಳು ಪದವಿ ನಂತರ ಓದನ್ನು ನಿಲ್ಲಿಸಿದರೆ, ಸಹನಾ ಎಂಎ ಓದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದರು.

ಎಕನಾಮಿಕ್ಸ್ ನಲ್ಲಿ ಎಂಎ ಮುಗಿಸಿದ ನಂತರ ತೆಗ್ಗಿನ ಭಾವನೂರಿಗೆ ಮರಳಿದ ಸಹನಾ, ಮನೆಯಲ್ಲೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದತೊಡಗಿದರು. ಇದು ಪಿಎಸ್‌ಐ ಪರೀಕ್ಷೆಯಲ್ಲಿ ಅವರ 2ನೇ ಪ್ರಯತ್ನ. ಮಾರ್ಚ್ 8ರಂದು ಕೊರೋನಾ ಸಂಕಷ್ಟದ ನಡುವೆ 300 ಹುದ್ದೆಗಳಿಗಾಗಿ ನಡೆದ ಪಿಎಸ್‌ಐ ಪರೀಕ್ಷೆಯನ್ನು ಲಕ್ಷಾಂತರ ಅಭ್ಯರ್ಥಿಗಳು ಬರೆದಿದ್ದರು. ತೀವ್ರ ಸ್ಪರ್ಧೆಯ ನಡುವೆಯೂ ಸಹನಾ ಮಹಿಳಾ ಕೆಟಗರಿಯಲ್ಲಿ 26ನೇ ರ‍್ಯಾಂಕ್ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಅವರು, ‘ಮೊದಲಿನಿಂದಲೂ ಪೊಲೀಸ್ ಇಲಾಖೆ ಸೇರುವ ಬಯಕೆ ಇತ್ತು. ಈಗ ಅದು ಈಡೇರಿದೆ’ ಎಂದರು. ಯಾವುದೇ ಕೋಚಿಂಗ್ ಕೇಂದ್ರಕ್ಕೆ ಹೋಗದ ಸಹನಾ ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದರು. ಹಲವಾರು ಪುಸ್ತಕಗಳನ್ನು ರೆಫರ್ ಮಾಡಿದರು. ಮೊಬೈಲ್ ನೆರವಿನಿಂದ ಆನ್‌ಲೈನ್ ಮಾಹಿತಿಯನ್ನು ಅಭ್ಯಾಸ ಮಾಡಿದರು. ನಿಯತಕಾಲಿಕೆಗಳನ್ನು ತರಿಸಿ ಓದಿ ಅಪ್ಡೇಟ್ ಆದರು.
‘ನನಗೆ ಸದ್ಯಕ್ಕೆ ನಾನೇ ರೋಲ್ ಮಾಡೆಲ್. ಹಲವು ಅಧಿಕಾರಿಗಳ ಸಾಧನೆ ನೋಡಿದಾಗ ಅದರಿಂದ ಸ್ಪೂರ್ತಿ ಪಡೆದಿದ್ದೇನೆ. ನನ್ನ ಹೈಸ್ಕೂಲ್ ಶಿಕ್ಷಕರು ಸಾಕಷ್ಟು ಬೆಂಬಲ ನೀಡಿದರು’ ಎಂದು ಸಹನಾ ಹೇಳುತ್ತಾರೆ.

‘ಪೊಲೀಸ್ ಠಾಣೆಯಲ್ಲಿ ಗ್ರಾಮೀಣ ಭಾಗದ ಪ್ರಕರಣಗಳೇ ಜಾಸ್ತಿ. ಗ್ರಾಮಭಾಗದ ಸಾಮಾಜಿಕ ಸಂರಚನೆ ಮತ್ತು ಕುಟುಂಬಗಳ ಸಂಬಂಧಗಳನ್ನು ಹತ್ತಿರದಿಂದ ಬಲ್ಲ ನಮ್ಮಂಥವರು ಪಿಎಸ್‌ಐ ಹುದ್ದೆಯಲ್ಲಿದ್ದರೆ ಸಮಸ್ಯೆ ಬಗೆಹರಿಸುವುದು ಸುಲಭವಾಗುತ್ತದೆ. ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರಬೇಕು’ ಎಂದು ಸಹನಾ ಸಲಹೆ ನೀಡುತ್ತಾರೆ.

‘ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿದಷ್ಠೂ ಒಳ್ಳೆಯದೇ. ಒಬ್ಬ ಮಹಿಳಾ ಅಧಿಕಾರಿ ಮಹಿಳಾ ಸಂತ್ರಸ್ತರ ನೋವುಗಳನ್ನು ಸರಿಯಾಗಿ ಗ್ರಹಿಸಬಲ್ಲಳು. ನೊಂದ ಮಹಿಳೆಯರಿಗೆ ರಕ್ಷಣೆ, ನೆರವು ನೀಡುವುದೇ ನನ್ನ ಉದ್ದೇಶ’ ಎಂದು ಸಹನಾ ತಮ್ಮ ಮನದಾಳದ ಮಾತು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವ್ಯಾಪಕ ವಿರೋಧ: ತೀವ್ರಗೊಂಡ ರೈತರ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಹರಿಯಾಣದಲ್ಲಿ ಶನಿವಾರವೂ ರೈತರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಗುರುವಾರ ಆರಂಭಗೊಂಡಿರುವ ಹೋರಾಟವನ್ನು 3ನೇ ದಿನವೂ ಮುಂದುವರೆಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ 3 ಮಸೂದೆಗಳನ್ನು, ಅದರಲ್ಲಿ ಮುಖ್ಯವಾಗಿ ಎಪಿಎಂಸಿ ತಿದ್ದಪಡಿ ಮಸೂದೆಯನ್ನು ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ಸಂಘಟನೆಯ ಅಡಿ ವಿರೋಧಿಸಲಾಗುತ್ತಿದೆ. ಶುಕ್ರವಾರ ಸಂಘಟನೆಯ ನಾಯಕ ಗುರ್ನಮ್ ಸಿಂಗ್ ಚದುಲಿ ಅವರನ್ನು ಬಂಧಿಸಲಾಗಿದ್ದು, ಅವರ ಮೇಲೆ ಸಾಕಷ್ಟು ಕೇಸುಗಳನ್ನು ದಾಖಲಿಸಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಈ 3 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಎಪಿಎಂಸಿಗಳನ್ನು ದುರ್ಬಲಗೊಳಸುವ ಹುನ್ನಾರದ ಹಿಂದೆ ಇನ್ನಷ್ಟು ಸಂಚುಗಳಿವೆ. ಮುಂದೆ ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಕೊಳ್ಳುವ ಯೋಜನೆಯನ್ನು ಕೈಬಿಡಲಿದ್ದಾರೆ’ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಹರಿಯಾಣದ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನ್‌ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕೂಡ ಮಸೂದೆ ವಿರೋಧಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರೈತರ ಹೋರಾಟಕ್ಕೆ ಹರಿಯಾಣ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಬೆಂಬಲಿಸಿವೆ.

ಅಭಿಮಾನಿಗಳ ಹುಚ್ಚೆಬ್ಬಿಸಿದ ಪ್ರಿಯಾಂಕಾ ಫೋಟೊ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಸ್ ಎಂಜಲೀಸ್‌ನಲ್ಲಿ ‘ಬಾಳ್ವೆ’ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಆಗಾಗ ತನ್ನ ಫಾರಿನ್ ಗಂಡ ನಿಕ್ ಜೊತೆಗಿನ ನವಿರಾದ ಫೋಟೊಗಳನ್ನು ಹಾಕುತ್ತಿರುತ್ತಾಳೆ.
ಆದರೆ ಈ ಸಲ ‘ಕಿಸ್ಸಿಂಗ್ ದಿ ಸನ್’ ಎಂಬ ಅಡಿಬರಹದ ಫೋಟೊವೊಂದನ್ನು ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಸೂರ್ಯನೆಡೆಗೆ ಮುಖ ಮಾಡಿ, ಮೋಹಿತಳಾಗಿ ಒಂದು ಮುತ್ತನ್ನು ವರ್ಗಾಯಿಸಿದ್ದಾಳೆ.

ಆಕೆಯ ಅಭಿಮಾನಿಗಳು ಥ್ರಿಲ್ ಆಗಿದ್ದು, ‘ನಮ್ಮ ಪಿಂಕಿನೇ ಹಾಟ್ ಹುಡುಗಿ. ಸೂರ್ಯನ ಉರಿ ಆಕೆಗೆ ತಟ್ಟಲ್ಲ’ ಎಂದಿದ್ದಾರೆ. ಹೇರ್‌ಸ್ಟೈಲ್ ಬದಲಿಸಿರುವ ಫೋಟೊವನ್ನೂ ಪಿಂಕಿ ಶೇರ್ ಮಾಡಿಕೊಂಡಿದ್ದಾಳೆ. ಒಟ್ಟು ನ್ಯೂಸ್‌ನಲ್ಲಿರಲು ಏನಾದರೂ ಮಾಡುತ್ತಲೇ ಇರಬೇಕು ಅಲ್ಲವಾ?

ಗಡಿ ದಾಟಿದ್ದ ಐವರನ್ನು ಮರಳಿಸಿದ ಚೀನಾ ಸೇನೆ; ಈ ಯುವಕರು ಬೇಟೆಗಾರರೊ? ಸೇನೆಯ ‘ಪೋರ್ಟರ್’ಗಳೋ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೆಪ್ಟೆಂಬರ್ 1ರಿಂದ ಕಾಣೆಯಾಗಿದ್ದ ಅರುಣಾಚಲಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಭಾರತೀಯ ಸೇನೆಯ ಸುಪರ್ದಿಗೆ ಶನಿವಾರ ಒಪ್ಪಿಸಿದೆ.
ಸುಹಾನಸಿರಿ ಜಿಲ್ಲೆಯ ಈ ಯುವಕರು ಬೇಟೆಗಾರರಾಗಿದ್ದು, ಬೇಟೆಯಾಡುವ ಸಂದರ್ಭದಲ್ಲಿ ವಾಸ್ತವ ನಿಯಂತ್ರಣ ರೇಖೆ ದಾಟಿ ಚೀನಾ ಪ್ರದೇಶವನ್ನು ತಲುಪಿದ್ದರು. ಭಾರತೀಯ ಸೇನೆ ಮತ್ತು ಸಚಿವ ಕಿರಣ್ ರಿಜು ಐವರನ್ನು ಸುರಕ್ಷಿತವಾಗಿ ಮರಳಿಸಲು ಚೀನಾ ಸೇನೆಗೆ ಮನವಿ ಮಾಡಿದ್ದರು.

ಶುಕ್ರವಾರ ಹಾಟ್‌ಲೈನ್ ಮೂಲಕ ಸಂಪರ್ಕಿಸಿದ್ದ ಚೀನಾ ಸೇನೆ ಶನಿವಾರ ಯುವಕರನ್ನು ಒಪ್ಪಿಸುವುದಾಗಿ ತಿಳಿಸಿತ್ತು. ಭಾರತೀಯ ಸೇನೆಯು ಈ ಯುವಕರು ಬೇಟೆಗಾರರು ಎಂದಿದ್ದರೆ, ಸ್ಥಳೀಯರು ಅವರನ್ನು ‘ಪೋಟರ‍್ಸ್’ ಎಂದಿದೆ. ಸೇನೆಯು ದುರ್ಗಮ ಪ್ರದೇಶದಲ್ಲಿ ತನ್ನ ಲಗೇಜ್ ಸಾಗಿಸಲು ನೇಮಿಸಿಕೊಳ್ಳುವ ಸ್ಥಳೀಯ ಸಹಾಯಕರನ್ನು ಪೋಟರ‍್ಸ್ ಎನ್ನಲಾಗುತ್ತದೆ.

ಪೋರ್ಟರ್‌ಗಳು ತಮ್ಮ ಕೆಲಸದ ನಂತರ ಇನ್ನೂ ಎತ್ತರದ ಪ್ರದೇಶಗಳಿಗೆ ಹೋಗಿ ಜಿಂಕೆ ಬೇಟೆಯಾಡುವುದು ಆಗಾಗ ನಡೆದಿದೆ. ಈ ಯುವಕರು ಪೋರ್ಟರ್‌ಗಳಾಗಿದ್ದು, ತಮ್ಮ ಕೆಲಸದ ನಂತರ ಅವರು ಬೇಟೆಗೆ ಹೋಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

‘ಮಾಸ್ಕೆಂಬ್ ತಳಿಯ ಜಿಂಕೆಯ ಮಾಂಸ ಮತ್ತು ಚರ್ಮಕ್ಕೆ ಕಾಳಸಂತೆಯಲ್ಲಿ ದೊಡ್ಡ ಬೇಡಿಕೆಯಿದ್ದು, ಅರುಣಾಚಲ ಪ್ರದೇಶದ ಯುವಕರು ಗಡಿಯಲ್ಲಿ ಇಂತಹ ಜಿಂಕೆಗಳನ್ನು ಬೇಟೆಯಾಡುವುದು ಸಾಮಾನ್ಯ ಸಂಗತಿಯಾಗಿದೆ.

ಭಿಕ್ಷಾಟನೆಗೆ ಅನ್ಯರ ಶಿಶುಗಳ ಬಳಕೆ ‘ಪಿಂಕಿ ಎಲ್ಲಿ?’: ಒಂದು ಹುಡುಕಾಟದ ಸುತ್ತ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಈ ಹಿಂದೆ ‘ರೈಲ್ವೆ ಚಿಲ್ಡ್ರನ್ ಎಂಬ ಕಿರುಚಿತ್ರ ಮಾಡಿ ಹಲವು ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರಶಂಸೆ ಗಿಟ್ಟಿಸಿದ್ದ ಪ್ರಕಾಶ್ ಕೋಣಾನಪುರ್, ಈಗ ಭಿಕ್ಷಾಟನೆಯಲ್ಲಿ ಶಿಶುಗಳ ಬಳಕೆಯ ಕುರಿತು ಕಥಾವಸ್ತುವಿರುವ ‘ಪಿಂಕಿ ಎಲ್ಲಿ?’ ಎಂಬ ಕಿರುಚಿತ್ರ ನಿರ್ದೇಶಿಸಿದ್ದು, ಅದು ಕೂಡ ಹಲವು ಫಿಲ್ಮ್ ಫೆಸ್ಟಿವಲ್‌ಗಳಿಗೆ ಆಯ್ಕೆಗೊಂಡಿದೆ.

ಮಹಾನಗರದಲ್ಲಿ ಉದ್ಯೋಗ ಮಾಡುವ ಬಿಂದುಶ್ರೀ ಎಂಬ ಪಾತ್ರ ತನ್ನ ಶಿಶುವಿಗಾಗಿ ನಡೆಸುವ ಹುಡುಕಾಟವೇ ಚಿತ್ರದ ಕತೆ. ಈ ಹುಡುಕಾಟದ ಮೂಲಕವೇ ಮಹಾನಗರಗಳಲ್ಲಿನ ಸಂಕೀರ್ಣ ಬದುಕನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ.

ಸಣ್ಣಮ್ಮ ಎಂಬ ಮನೆಗೆಲಸದಾಕೆಯ ಬಳಿ ಎಂಟು ವರ್ಷದ ಶಿಶುವನ್ನು ಬಿಟ್ಟು ದಿನವೂ ಕೆಲಸಕ್ಕೆ ಬಿಂದುಶ್ರೀ ಹೋಗುತ್ತಿರುತ್ತಾಳೆ. ಬಿಂದುಶ್ರೀ ಮತ್ತು ಗಂಡ ಕೆಲಸಕ್ಕೆ ಹೋದ ಸ್ವಲ್ಪ ಸಮಯದ ನಂತರ ಸಣ್ಣಮ್ಮ ಆ ಶಿಶುವನ್ನು ಅನಸೂಯಾ ಎಂಬ ಸಂಬಂಧಿ ಕೈಗೆ ಕೊಡುವುದು, ಅನಸೂಯಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆ ಶಿಶುವನ್ನು ತೋರಿಸುತ್ತ ಭಿಕ್ಷಾಟನೆ ಮಾಡುವುದು ನಡೆದೇ ಇರುತ್ತದೆ.

ಒಂದಿನ ಶಿಶು ಕಳೆದು ಹೋದಾಗ, ಸಣ್ಣಮ್ಮ, ಅನಸೂಯಾ ಗಾಬರಿ ಬೀಳುತ್ತಾರೆ. ಅಲ್ಲಿಂದ ಶಿಶುವಿಗಾಗಿ ಬಿಂದುಶ್ರೀ ನಡೆಸುವ ಹುಡುಕಾಟದಲ್ಲಿ ಹಲವು ಆಶ್ಚರ್ಯಕರ ಸನ್ನಿವೇಶಗಳ ಎದುರಾಗುತ್ತವೆ.

ಈ ಹಿಂದೆ ಪ್ರಕಾಶ್, ರೈಲ್ವೆ ಚಿಲ್ಡ್ರನ್ ಚಿತ್ರದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಮಕ್ಕಳ ಸಂಕಷ್ಟಗಳನ್ನು ತೋರಿಸಿದ್ದರು. ಈಗ ‘ಪಿಂಕಿ ಎಲ್ಲಿ?’ ಮೂಲಕ ಮಹಾನಗರಗಳ ಇನ್ನೊಂದು ಮುಖವನ್ನು ತೆರೆದಿಡುವ ಯತ್ನ ಮಾಡಿದ್ದಾರೆ. ಸದ್ಯದಲ್ಲೇ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ಲಭ್ಯವಾಗಲಿದೆ.

ಉದ್ಧವ್ ಕಾರ್ಟೂನ್ ವ್ಯಾಟ್ಸಾಪ್‌ಗೆ ವಿರೋಧ: ನೌಕಾದಳದ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಕಾರ್ಟೂನ್ ಚಿತ್ರವೊಂದನ್ನು ಫಾರ್ವರ್ಡ್ ಮಾಡಿದ್ದಕ್ಕಾಗಿ ನೌಕಾದಳದ ನಿವೃತ್ತ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾದ 65 ವರ್ಷದ ಮದನ ಶರ್ಮಾ ಮುಖದ ಮೇಲೆ ಗಾಯಗಳಾಗಿದ್ದು, ಕಣ್ಣುಗಳಿಗೂ ಪೆಟ್ಟಾಗಿದೆ. ಖಂಡಾವಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಹಲ್ಲೆಕೋರರು ಶಿವಸೇನೆ ಕಾರ್ಯಕರ್ತರು ಎನ್ನಲಾಗಿದೆ.

ಪೂರ್ವ ಖಂಡಾವಲಿಯ ಅಪಾರ್ಟಮೆಂಟ್ ಒಂದರ ನಿವಾಸಿ ಮದನ ಶರ್ಮಾ, ತಮಗೆ ಬಂದಿದ್ದ ಉದ್ಧವ್ ಠಾಕ್ರೆಯವರನ್ನು ವ್ಯಂಗ್ಯ ಮಾಡಿರುವ ಕಾರ್ಟೂನ್ ಸಂದೇಶವನ್ನು ತಮ್ಮ ಅಪಾರ್ಟ್ಮೆಂಟ್ ಸದಸ್ಯರ ಗುಂಪಿಗೆ ಫಾರ್ವರ್ಡ್ ಮಾಡಿದ್ದರು. ಹಲ್ಲೆಕೋರರ ಪೈಕಿ ಒಬ್ಬರು ಅವರಿಗೆ ಕಾಲ್ ಮಾಡಿ ಅಪಾರ್ಟ್‌ಮೆಂಟ್ ಹೊರಗೆ ಬಂದು ಭೇಟಿಯಾಗಲು ಕೇಳಿದ್ದಾರೆ.

ಭೇಟಿಯಾಗಲು ಬಂದ ಅವರ ಮೇಲೆ ಗುಂಪು ಹಲ್ಲೆ ನಡೆಸಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿದ್ದಾರೆ.

ಶನಿವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಗಿಂತ 2,350 ದುಬಾರಿ, ದೆಹಲಿಗಿಂತ 1,630 ರೂ. ಸಸ್ತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ  54,440 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,460 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,410 ರೂ.,24 ಕ್ಯಾರಟ್: 52,810 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,968 ರೂ., 24 ಕ್ಯಾರಟ್: 53,420 ರೂ.

ಅಕ್ಕಿ ಅಕ್ರಮ ತಡೆಗೆ ಅಧಿಕಾರಿಗಳ ನಿರ್ಲಕ್ಷ್ಯ; ಸಚಿವ ಬಿ.ಸಿ.ಪಾಟೀಲ ಕ್ಲಾಸ್

0

ಗಂಗಾವತಿ ಅಕ್ಕಿ ಕುಳಗಳ ಮೇಲೆ “ಕೆಂಗಣ್ಣು”

*ಕೆಡಿಪಿ ಸಭೆಯಲ್ಲಿ ವಿಜಯಸಾಕ್ಷಿ ವರದಿ ಪ್ರಸ್ತಾಪ.

*ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಅಕ್ಕಿ ಅಕ್ರಮ ನಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಕಳೆದ ೫ ತಿಂಗಳ ಹಿಂದೆ ನಡೆದ ಪಡಿತರ ಅಕ್ಕಿ ಕಳ್ಳ ಸಾಗಣೆ ಬಗ್ಗೆ ಅಧಿಕಾರಿಗಳ ಉದಾಸೀನ ಧೋರಣೆ ಬಗ್ಗೆ ಸಚಿವ ಬಿ.ಸಿ.ಪಾಟೀಲ ಕೆಂಡಾಮಂಡಲರಾದ ಘಟನೆ ಕೊಪ್ಪಳದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.

ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಅಕ್ರಮಗಳಿಗೆ ಬ್ರೇಕ್ ಹಾಕುವುದು ನನ್ನ ಜವಾಬ್ದಾರಿ. ಇದಕ್ಕೆ ಅಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಮೇ ತಿಂಗಳಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಹೇಳಿದ್ದೆ. ಏಪ್ರಿಲ್-ಮೇ ನಲ್ಲಿ ಗಂಗಾವತಿಯ ಅಕ್ಕಿ ವಿವಿಧೆಡೆ ಪತ್ತೆಯಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿವೆ. ಎಫ್ಐಆರ್ ಸಹ ಆಗಿವೆ. ಆದರೂ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ‌ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ, ಜಿಲ್ಲೆಗೆ ಹೊಸದಾಗಿ ಬಂದು ಎರಡು ತಿಂಗಳಷ್ಟೇ ಆಗಿದೆ. ಈ ಬಗ್ಗೆ ಗಮನ ಹರಿಸುವುದಾಗಿಯೂ, ತಪ್ಪು ಕಂಡು ಬಂದಲ್ಲಿ ಪರವಾನಗಿ ರದ್ದುಗೊಳಿಸುವುದಾಗಿಯೂ ತಿಳಿಸಿದರು.

ಅಧಿಕಾರಿಯ ಸಮಜಾಯಿಷಿಗೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ ರದ್ದುಗೊಳಿಸುವುದಲ್ಲ, ರದ್ದಾಗಲೇಬೇಕು. ಈ ಕುರಿತು ಒಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಮೇ ತಿಂಗಳಲ್ಲಿ ನಡೆದ ಕೆಡಿಪಿ ಸಭೆಯ ಅನುಪಾಲನಾ ವರದಿ ಪರಿಶೀಲಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಜಿಲ್ಲೆಯಲ್ಲಿ ವಿಶೇಷವಾಗಿ ಗಂಗಾವತಿ ಅಕ್ಕಿಯ ಅಕ್ರಮ ಕುರಿತು ಗಂಭೀರವಾಗಿ ಚರ್ಚಿಸಿ ಅಕ್ರಮ ತಡೆಗೆ ಅಧಿಕಾರಿಗಳು ಮುಂದಾಗಲೇಬೇಕು. ಈ ವಿಷಯದಲ್ಲಿ ಉದಾಸೀನ ಧೋರಣೆ ಸಹಿಸಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಶಾಸಕರಾದ ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಅಮರೇಶ್ ಕರಡಿ ಇತರರು ಇದ್ದರು.


ಪ್ರತಿ ಮೀಟಿಂಗ್‌ನಲ್ಲಿ ನಡೆಯುವಂತೆ ಇಂದಿನ ಕೆಡಿಪಿ ಸಭೆಯಲ್ಲೂ ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದರು. ಸಭೆಯಲ್ಲಿ ಎತ್ತರದ ಯಾರದಾದರೂ ಧ್ವನಿ ಕಿವಿಗೆ ಬೀಳುತ್ತಲೇ ಹೌಹಾರಿ ಕಣ್ಣು ಬಿಟ್ಟು, ನಿದ್ದೆ ಮಾಡೇ ಇಲ್ಲ ಎನ್ನುವಂತೆ ನಟಿಸುತ್ತಿದ್ದರು. ಇನ್ನೂ ಕೆಲವರು ಅದೇ ಮೊಬೈಲ್ ಟಚ್‌ನಲ್ಲಿ ತಲ್ಲೀನರಾಗಿದ್ದರು.

ಗದಗ ಜಿಲ್ಲೆಗೆ ಶುಭ ಶುಕ್ರವಾರ; ಒಂದೇ ದಿನ 530 ಜನ ಬಿಡುಗಡೆ; 195 ಜನರಿಗೆ ಸೋಂಕು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯ ಮಟ್ಟಿಗೆ ಇವತ್ತು ಶುಭದಿನ. ಕಳೆದ ಹಲವು ದಿನಗಳಿಂದ ಕೇವಲ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ ಸೋಂಕಿನಿಂದ ಗುಣಮುಖರಾಗುತ್ತಿದ್ದವರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಇವತ್ತು ಒಂದೇ ದಿನ 530 ಜನರು ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯ ಜನತೆ ನಿಟ್ಟಿಸಿರು ಬಿಡುವಂತಾಗಿದೆ. ಇದರಿಂದಾಗಿ ಇದುವರೆಗೂ 5871 ಜನ ಬಿಡುಗಡೆಯಾದಂತಾಗಿದೆ.

ಇವತ್ತು 195 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

195 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7310 ಕ್ಕೇರಿದೆ. 1335 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶುಕ್ರವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 104 ಕ್ಕೇರಿದೆ.

ಗದಗ-105, ಮುಂಡರಗಿ-21, ನರಗುಂದ-02, ರೋಣ-35, ಶಿರಹಟ್ಟಿ-26, ಹೊರ ಜಿಲ್ಲೆಯ 06 ಪ್ರಕರಣ ಸೇರಿದಂತೆ ಒಟ್ಟು 195 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ, ರಾಜೀವಗಾಂಧಿ ನಗರ, ಹುಡ್ಕೋ ಕಾಲೋನಿ, ಗೌಡರ ಓಣಿ, ಮಕಾನ ಗಲ್ಲಿ, ಜಿಮ್ಸ್ ಆಸ್ಪತ್ರೆ, ಜೆ.ಟಿ.ಕಾಲೇಜ ರಸ್ತೆ, ಗಂಗಿಮಡಿ, ಕುರಟ್ಟಿಪೇಟ, ತಾಜ ನಗರ, ಶಿವಾನಂದ ನಗರ, ಎ.ಪಿ.ಎಂ.ಸಿ, ಮಾನ್ವಿ ಚಾಳ, ಚೇತನಾ ಕ್ಯಾಂಟಿನ, ಕೆ.ಸಿ.ರಾಣಿ ರಸ್ತೆ, ರಾಮ ಮಂದಿರ ಹತ್ತಿರ, ವಿಭೂತಿ ಓಣಿ,

ಜೆ.ಟಿ.ಮಠದ ಹತ್ತಿರ, ಕೇಶವ ನಗರ, ಪಿ.ಎನ್.ಟಿ. ಕ್ವಾಟರ್ಸ್, ಶಿವಾಜಿ ನಗರ, ಹೊಸಪೇಟ ಚೌಕ, ಶಿವಾನಂದ ನಗರ, ವಿ.ಎನ್.ಟಿ. ರಸ್ತೆ, ಪಲ್ಲೇದ ಓಣಿ, ಕಳಸಾಪುರ ರಸ್ತೆ, ಮಂಜುನಾಥ ಶಾಲೆಯ ಹತ್ತಿರ, ಶಹಪುರ ಪೇಟ, ಶ್ರೀನಿವಾಸ ಭವನ ಹಿಂದುಗಡೆ, ನಂದೀಶ್ವರ ನಗರ, ರಂಗಪ್ಪಜ್ಜನ ಮಠ, ಎಸ್.ಬಿ.ನಗರ, ಅಮರೇಶ್ವರ ನಗರ, ಗಂಗಾಪುರ ಪೇಟ, ಆದರ್ಶ ನಗರ,

ಗದಗ ತಲೂಕಿನ ಮುಳಗುಂದ, ಬಿಂಕದಕಟ್ಟಿ, ಬೆನಕೊಪ್ಪ, ಹಾಳಕೇರಿ, ಚಿಂಚಲಿ, ಹೊಂಬಳ, ಅಡವಿಸೋಮಾಪುರ, ಕಣಗಿನಹಾಳ, ಸೊರಟೂರ, ನಾಗಾವಿ, ಮಲ್ಲಸಮುದ್ರ, ಹುಲಕೋಟಿ, ಚಿಕ್ಕಹಂದಿಗೋಳ, ಲಕ್ಕುಂಡಿ, ಕಣವಿ, ಹೊಸೂರ, ಅಂತೂರ-ಬೆಂತೂರ,  ಬಳಗಾನೂರ, ಕುರ್ತಕೋಟಿ, ಸಂಭಾಪುರ,  

ಮುಂಡರಗಿ ತಾಲೂಕಿನ ಮುರಡಿ ತಾಂಡಾ, ಹಮ್ಮಗಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ,

ನರಗುಂದ ತಾಲೂಕಿನ ಚಿಕ್ಕ ನರಗುಂದ ರೋಣ ಪಟ್ಟಣದ ಕೊಪ್ಪದರ ಓಣಿ, ಮಲ್ಲಮ್ಮ ದೇವಸ್ಥಾನದ ಹತ್ತಿರ, ಶಿವಾನಂದ ನಗರ,  ತಾಲೂಕು ಆಸ್ಪತ್ರೆ ಹತ್ತಿರ,

ರೋಣ ತಾಲೂಕಿನ ಮಾರನಬಸರಿ, ಹೊಳೆಆಲೂರ, ಅಬ್ಬಿಗೇರಿ, ಜಿಗಳೂರ, ರಾಜೂರ, ಹಾಳಕೇರಿ, ಮಸೂತಿ ಹತ್ತಿರ, ಹುನಗುಂಡಿ, ಹೊನ್ನಾಪುರ,  ಭೊಮ್ಮಸಾಗರ, ಸೂಡಿ, ಸವಡಿ, ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ವೃತ್ತ, ಸಂಗನಾಳ ಪ್ಲಾಟ. 

ಶಿರಹಟ್ಟಿ ಪಟ್ಟಣದ ನೆಹರು ನಗರ, ವಿಜಯನಗರ, ಮಜ್ಜಗಿ ಓಣಿ, ಹನುಮಂತ ನಗರ, ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ, ಶಿಗ್ಲಿ, ಅಡರಳ್ಳಿ, ಮ್ಯಾಕಲಝರಿ, ಬನ್ನಿಕೊಪ್ಪ, ಹೊಸಳ್ಳಿ, ಗುಲಗಂಜಿಕೊಪ್ಪ, ಲಕ್ಷ್ಮೇಶ್ವರದ ಗಂಗಾಧರ ಓಣಿ, ಸೋಮೇಶ್ವರ ನಗರ, ಇಂದಿರಾನಗರ.

 

Need a quick and reliable Bangalore airport drop? Aishwarya Taxi ensures on-time service with professional drivers and comfortable vehicles. Trust us to make your airport journey safe, convenient, and stress-free.

An airport taxi is the best way to ensure a hassle-free journey to and from the airport. Arjun Cabs provides a reliable, affordable, and comfortable airport taxi service for travelers. Whether you’re traveling for business, leisure, or in a group, we have the perfect solution for you. Book your ride today and experience the convenience of a premium airport taxi service with Arjun Cabs!

ಪೊಲೀಸರ ಕಾರ್ಯಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಐವರ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಜೇಂದ್ರಗಡ: ಗಾಂಜಾ ಮಾರಾಟ ಮತ್ತು ಉತ್ಪಾದನೆ ಮಾಡುತ್ತಿದ್ದ ಐವರನ್ನು ಬಂಧಿಸಿದ ಘಟನೆ ಪಟ್ಟಣದ ಕಡ್ಡಿಯವರ ಪ್ಲಾಟ್ ನಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣದ ನಿವಾಸಿಗಳಾದ ಈರಪ್ಪ ಯಮನಪ್ಪ ರಾಠೋಡ, ವಾಸೀಮ ಅಮೀನಸಾಬ ಬಂಗಾರಗುಂಡಿ, ವೀರೇಶ ಪ್ರಭಾಕರ ಪುಡೂರ, ವೀರೇಶ ಗೋವಿಂದಪ್ಪ ದ್ಯಾವನಕೊಂಡಿ ಹಾಗೂ ಗದಗ ನಗರದ ನಿವಾಸಿ ಶಿವಕುಮಾರ ಕಾಶಪ್ಪ ಬೆಟಗೇರಿ ಬಂಧಿತ ಆರೋಪಿಗಳು. ಈರಪ್ಪ ರಾಠೋಡ ಎಂಬುವರು ತಮ್ಮ ಮನೆಯಲ್ಲಿ ಮಾರಾಟ ಮತ್ತು ಗಾಂಜಾ ಬೆಳೆಯುತ್ತಿದ್ದರು ಎನ್ನುವ ಖಚಿತ ಮಾಹಿತಿ ಮೇರಿಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಬಂಧಿತ ಆರೋಪಿಗಳಿಂದ 500 ಗ್ರಾಂ ಗಾಂಜಾ ಹಾಗೂ 3 ಕೆ.ಜಿ ಹಸಿ ಗಾಂಜಾ ಮತ್ತು ಎರಡು ಬೈಕ್ ಸಹಿತ 2 ಲಕ್ಷ 85 ಸಾವಿರ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಪಿಎಸ್ಐ ಗುರುಶಾಂತ ದಾಶ್ಯಾಳ, ಸಿಬ್ಬಂದಿಗಳಾದ ಮಹೇಶ ಬಳ್ಳಾರಿ, ಸುರೇಶ ಮಂತಾ, ಹೆಚ್.ಎಲ್. ಭಜಂತ್ರಿ, ಸಂಗಮೇಶ ಹಲಬಾಗಿಲ, ಎಂ.ಎಚ್.ಅವಾರಿ, ಶ್ರೀಕಾಂತ ಜಂಗಣ್ಣವರ, ಎಸ್.ಎಸ್.ಭಜಂತ್ರಿ, ಚಂದ್ರು ಹಾದಿಮನಿ, ಜೆ.ಬಿ.ಪೂಜಾರ, ವಿರೇಶ ಪಾಟೀಲ ಇದ್ದರು.

error: Content is protected !!