Home Blog Page 2177

ಭಾನುವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಬೆಂಗಳೂರಿಗಿಂತ ಹುಬ್ಬಳ್ಳಿಯಲ್ಲಿ 600 ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,390 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,450 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,410 ರೂ., 24 ಕ್ಯಾರಟ್:52,810 ರೂ.
ಹುಬ್ಬಳ್ಳಿ: 22 ಕ್ಯಾರಟ್:48,908 ರೂ., 24 ಕ್ಯಾರಟ್: 53,420 ರೂ.

ಜಿಲ್ಲೆಯಲ್ಲಿ ಶನಿವಾರ 49 ಜನರಿಗೆ ಸೋಂಕು; 206 ಜನ ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 12 ರಂದು 49 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

49 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7359 ಕ್ಕೇರಿದೆ. ಶನಿವಾರ 206 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6077 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1177 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶನಿವಾರದ ಮಾಹಿತಿಯಂತೆ ಒಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 105 ಕ್ಕೇರಿದೆ.

ಗದಗ-23, ಮುಂಡರಗಿ-12, ನರಗುಂದ-02, ರೋಣ-03, ಶಿರಹಟ್ಟಿ-01, ಹೊರ ಜಿಲ್ಲೆಯ 08 ಪ್ರಕರಣ ಸೇರಿದಂತೆ ಒಟ್ಟು 49 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆಶ್ರಯ ಕಾಲೋನಿ, ಕೆ.ಸಿ.ರಾಣಿ ರಸ್ತೆ, ಕುಲಕರ್ಣಿ ಗಲ್ಲಿ, ಹೊಸಪೇಟ ಚೌಕ, ಬಜಾರ ರಸ್ತೆ, ಜಿಮ್ಸ್ ಆಸ್ಪತ್ರೆ, ಕಾಶಿ ವಿಶ್ವನಾಥ ನಗರ, ಜವಳ ಗಲ್ಲಿ, ಹಾತಲಗೇರಿ ರಸ್ತೆ, ಬಸ್ ನಿಲ್ದಾಣದ ಹತ್ತಿರ, ಸರ್ವೋದಯ ಕಾಲೋನಿ, ಬಸವನ ಬಾವಿ ಓಣಿ, ಗದಗ ತಾಲೂಕಿನ ಹೊಂಬಳ, ಮುಳಗುಂದ, ಹಲಗಲಿ, ಹರ್ತಿ, ನಾಗಾವಿ, ಕಿರಟಗೇರಿ.

ಮುಂಡರಗಿ ಪಟ್ಟಣ, ಮುಂಡರಗಿ ತಾಲೂಕಿನ ರಾಮೇನಹಳ್ಳಿ, ಹಿರೇವಡ್ಡಟ್ಟಿ, ವೆಂಕಟಾಪುರ, ನರಗುಂದ ಪಟ್ಟಣದ ಹೊಸೂರ ಓಣಿ, ನರಗುಂದ ತಾಲೂಕಿನ ದಂಡಾಪುರ, ರೋಣ ತಾಲೂಕಿನ ಸೂಡಿ, ಬೊಮ್ಮಸಾಗರ, ಜಕ್ಕಲಿ ರಸ್ತೆ, ಶಿರಹಟ್ಟಿ.

ಅಯೋಗ್ಯ ಸಚಿವ ಬಿ.ಸಿ.ಪಾಟೀಲ ಕಣ್ತೆರೆದು ನೋಡಲಿ; ಕಳಪೆ ಗೊಬ್ಬರ ಮುಂದಿಟ್ಟು ಪಾಟೀಲ ಪ್ರತಿಕೃತಿ ದಹನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರೈತರಿಗೆ ಕಳಪೆ ಬೀಜ, ಗೊಬ್ಬರ ಪೂರೈಕೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕೊಪ್ಪಳದಲ್ಲಿ ಶನಿವಾರ ಹಸಿರು ಸೇನೆ ಸಂಘಟನೆಯ ರೈತರು ಪ್ರತಿಭಟನೆ ನಡೆಸಿ, ಪಾಟೀಲ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸೆಪ್ಟೆಂಬರ್ 10 ರಂದು ಬೂದಗುಂಪಾ ರೈತನೊಬ್ಬ ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 50 ಕೆಜಿ ಗೊಬ್ಬರ ಖರೀದಿಸಿದ್ದಾನೆ. ಗೊಬ್ಬರವನ್ನು ಹೊಲಕ್ಕೆ ಹಾಕುವ ವೇಳೆ ಅನುಮಾನಗೊಂಡ ರೈತ ಅದನ್ನು ಪರೀಕ್ಷಿಸಿ ಪ್ರತಿ ಕೆಜಿಯಲ್ಲಿ 200 ಗ್ರಾಮನಷ್ಟು ಬೂದಿ ಮತ್ತು ಮಣ್ಣು ಕಂಡು ಬಂದಿದೆ. ಕೂಡಲೇ ರೈತ ಸಂಘಟನೆಯ ಮುಖಂಡರಿಗೆ ವಿಷಯ ತಿಳಿಸಿದ್ದು, ಗೊಬ್ಬರ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರನ್ನು, ಅಜ್ಞಾನಿ, ಅಯೋಗ್ಯ ಎಂದು ಜರಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಫಲಿತಾಂಶ ಬಂದ ನಂತರ ಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಹೈಸ್ಕೂಲ್‌ ಗಿಂತ ಜಾಸ್ತಿ ಓದಿದವರಿಲ್ಲ. ಸಾಮಾನ್ಯ ರೈತ ಕುಟುಂಬ. ಅತಿ ಹಿಂದುಳಿದ ತಾಲೂಕಿನ ಹಿಂದುಳಿದ ಗ್ರಾಮದ ನಿವಾಸಿ.
ಇವು ಯಾವುದೂ ಸಹನಾ ಎಂಬ ಯುವತಿಗೆ ಅಡ್ಡಿಯಾಗಲಿಲ್ಲ. ಶುಕ್ರವಾರ ಪ್ರಕಟವಾದ ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 26ನೇ ರ‍್ಯಾಂಕ್ ಗಳಿಸುವ ಮೂಲಕ ಪಿಎಸ್‌ಐ ಆಗುತ್ತಿದ್ದಾಳೆ ಸಹನಾ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರು ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ್ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವಜನರಿಗೆ ಅದರಲ್ಲೂ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.

ಇಬ್ಬರು ಅಕ್ಕಂದಿರು ಹೈಸ್ಕೂಲ್‌ವರೆಗೆಷ್ಟೇ ಓದಿ ಮದುವೆಯಾಗಿ ಹೋದರು. ಅಣ್ಣಂದಿರು ಕಾಲೇಜ್ ಮೆಟ್ಟಿಲು ಹತ್ತದೇ, ಕೃಷಿಯಲ್ಲಿ ನಿರತರಾದರು. ಗ್ರಾಮಗಳ ಬಹುಪಾಲು ಕುಟುಂಬಗಳು ಹೆಣ್ಣು ಮಕ್ಕಳನ್ನು ಬಹಳವೆಂದರೆ ಪಿಯುಸಿವರೆಗೆ ಓದಿಸಿ, ಮದುವೆ ಮಾಡಿ ಗಂಡನ ಮನೆಗೆ ಕಳಿಸುತ್ತಾರೆ. ಆದರೆ ಸಹನಾ ಮನೆಯವರು ಎಂದೂ ಓದಿಗೆ ತಡೆ ಹಾಕಲಿಲ್ಲ.

‘ನಮ್ ಮನಿಮಂದಿ ಸಪೋರ್ಟೆ ಇದಕ್ಕೆಲ್ಲ ಕಾರಣ ನೋಡ್ರಿ. ಎಂಎ ಓದಲು ಧಾರವಾಡಕ್ಕೆ ಕಳಿಸಿದರು. ವಿದ್ಯಾಭಾಸದ ಖರ್ಚಿಗೆ ಹಿಂದೆಮುಂದೆ ನೋಡಲಿಲ್ಲ’ ಎಂದು ತನ್ನ ಮನೆಯವರ ಪ್ರೋತ್ಸಾಹವನ್ನು ನೆನೆಯುತ್ತಾರೆ ಸಹನಾ.

ಪಿಯುಸಿ ಹೊರತುಪಡಿಸಿ ಸಹನಾ ಓದಿದ್ದೆಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೇ. ಅವರ ಪೂರ್ತಿ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಿದೆ. ಇದು ಕೂಡ ನಮ್ಮ ಯುವಜನತೆಗೆ ಹೊಸ ಪ್ರೇರಣೆ ನೀಡಬಹುದು. ತೆಗ್ಗಿನ ಭಾವನೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಪೌಢ ಶಿಕ್ಷಣ ಪಡೆದ ಸಹನಾ ಪಿಯುಸಿಯನ್ನು ಶಿರಹಟ್ಟಿಯ ಡಬಾಲಿ ಕಾಲೇಜಿನಲ್ಲಿ ಓದಿದರು. ನಂತರ ಶಿರಹಟ್ಟಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದಿದರು. ಐದು ವರ್ಷ ಸತತವಾಗಿ ತಮ್ಮೂರಿನಿಂದ ಶಿರಹಟ್ಟಿಗೆ ಬಸ್ ಪ್ರಯಾಣ ಮಾಡಿ ಕಾಲೇಜು ಮುಗಿಸಿದರು.
ಆಕೆಯ ಬಹುಪಾಲು ಸಹಪಾಠಿಗಳು ಪದವಿ ನಂತರ ಓದನ್ನು ನಿಲ್ಲಿಸಿದರೆ, ಸಹನಾ ಎಂಎ ಓದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದರು.

ಎಕನಾಮಿಕ್ಸ್ ನಲ್ಲಿ ಎಂಎ ಮುಗಿಸಿದ ನಂತರ ತೆಗ್ಗಿನ ಭಾವನೂರಿಗೆ ಮರಳಿದ ಸಹನಾ, ಮನೆಯಲ್ಲೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದತೊಡಗಿದರು. ಇದು ಪಿಎಸ್‌ಐ ಪರೀಕ್ಷೆಯಲ್ಲಿ ಅವರ 2ನೇ ಪ್ರಯತ್ನ. ಮಾರ್ಚ್ 8ರಂದು ಕೊರೋನಾ ಸಂಕಷ್ಟದ ನಡುವೆ 300 ಹುದ್ದೆಗಳಿಗಾಗಿ ನಡೆದ ಪಿಎಸ್‌ಐ ಪರೀಕ್ಷೆಯನ್ನು ಲಕ್ಷಾಂತರ ಅಭ್ಯರ್ಥಿಗಳು ಬರೆದಿದ್ದರು. ತೀವ್ರ ಸ್ಪರ್ಧೆಯ ನಡುವೆಯೂ ಸಹನಾ ಮಹಿಳಾ ಕೆಟಗರಿಯಲ್ಲಿ 26ನೇ ರ‍್ಯಾಂಕ್ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಅವರು, ‘ಮೊದಲಿನಿಂದಲೂ ಪೊಲೀಸ್ ಇಲಾಖೆ ಸೇರುವ ಬಯಕೆ ಇತ್ತು. ಈಗ ಅದು ಈಡೇರಿದೆ’ ಎಂದರು. ಯಾವುದೇ ಕೋಚಿಂಗ್ ಕೇಂದ್ರಕ್ಕೆ ಹೋಗದ ಸಹನಾ ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದರು. ಹಲವಾರು ಪುಸ್ತಕಗಳನ್ನು ರೆಫರ್ ಮಾಡಿದರು. ಮೊಬೈಲ್ ನೆರವಿನಿಂದ ಆನ್‌ಲೈನ್ ಮಾಹಿತಿಯನ್ನು ಅಭ್ಯಾಸ ಮಾಡಿದರು. ನಿಯತಕಾಲಿಕೆಗಳನ್ನು ತರಿಸಿ ಓದಿ ಅಪ್ಡೇಟ್ ಆದರು.
‘ನನಗೆ ಸದ್ಯಕ್ಕೆ ನಾನೇ ರೋಲ್ ಮಾಡೆಲ್. ಹಲವು ಅಧಿಕಾರಿಗಳ ಸಾಧನೆ ನೋಡಿದಾಗ ಅದರಿಂದ ಸ್ಪೂರ್ತಿ ಪಡೆದಿದ್ದೇನೆ. ನನ್ನ ಹೈಸ್ಕೂಲ್ ಶಿಕ್ಷಕರು ಸಾಕಷ್ಟು ಬೆಂಬಲ ನೀಡಿದರು’ ಎಂದು ಸಹನಾ ಹೇಳುತ್ತಾರೆ.

‘ಪೊಲೀಸ್ ಠಾಣೆಯಲ್ಲಿ ಗ್ರಾಮೀಣ ಭಾಗದ ಪ್ರಕರಣಗಳೇ ಜಾಸ್ತಿ. ಗ್ರಾಮಭಾಗದ ಸಾಮಾಜಿಕ ಸಂರಚನೆ ಮತ್ತು ಕುಟುಂಬಗಳ ಸಂಬಂಧಗಳನ್ನು ಹತ್ತಿರದಿಂದ ಬಲ್ಲ ನಮ್ಮಂಥವರು ಪಿಎಸ್‌ಐ ಹುದ್ದೆಯಲ್ಲಿದ್ದರೆ ಸಮಸ್ಯೆ ಬಗೆಹರಿಸುವುದು ಸುಲಭವಾಗುತ್ತದೆ. ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರಬೇಕು’ ಎಂದು ಸಹನಾ ಸಲಹೆ ನೀಡುತ್ತಾರೆ.

‘ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿದಷ್ಠೂ ಒಳ್ಳೆಯದೇ. ಒಬ್ಬ ಮಹಿಳಾ ಅಧಿಕಾರಿ ಮಹಿಳಾ ಸಂತ್ರಸ್ತರ ನೋವುಗಳನ್ನು ಸರಿಯಾಗಿ ಗ್ರಹಿಸಬಲ್ಲಳು. ನೊಂದ ಮಹಿಳೆಯರಿಗೆ ರಕ್ಷಣೆ, ನೆರವು ನೀಡುವುದೇ ನನ್ನ ಉದ್ದೇಶ’ ಎಂದು ಸಹನಾ ತಮ್ಮ ಮನದಾಳದ ಮಾತು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವ್ಯಾಪಕ ವಿರೋಧ: ತೀವ್ರಗೊಂಡ ರೈತರ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಹರಿಯಾಣದಲ್ಲಿ ಶನಿವಾರವೂ ರೈತರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಗುರುವಾರ ಆರಂಭಗೊಂಡಿರುವ ಹೋರಾಟವನ್ನು 3ನೇ ದಿನವೂ ಮುಂದುವರೆಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ 3 ಮಸೂದೆಗಳನ್ನು, ಅದರಲ್ಲಿ ಮುಖ್ಯವಾಗಿ ಎಪಿಎಂಸಿ ತಿದ್ದಪಡಿ ಮಸೂದೆಯನ್ನು ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ಸಂಘಟನೆಯ ಅಡಿ ವಿರೋಧಿಸಲಾಗುತ್ತಿದೆ. ಶುಕ್ರವಾರ ಸಂಘಟನೆಯ ನಾಯಕ ಗುರ್ನಮ್ ಸಿಂಗ್ ಚದುಲಿ ಅವರನ್ನು ಬಂಧಿಸಲಾಗಿದ್ದು, ಅವರ ಮೇಲೆ ಸಾಕಷ್ಟು ಕೇಸುಗಳನ್ನು ದಾಖಲಿಸಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಈ 3 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಎಪಿಎಂಸಿಗಳನ್ನು ದುರ್ಬಲಗೊಳಸುವ ಹುನ್ನಾರದ ಹಿಂದೆ ಇನ್ನಷ್ಟು ಸಂಚುಗಳಿವೆ. ಮುಂದೆ ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಕೊಳ್ಳುವ ಯೋಜನೆಯನ್ನು ಕೈಬಿಡಲಿದ್ದಾರೆ’ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಹರಿಯಾಣದ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನ್‌ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕೂಡ ಮಸೂದೆ ವಿರೋಧಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರೈತರ ಹೋರಾಟಕ್ಕೆ ಹರಿಯಾಣ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಬೆಂಬಲಿಸಿವೆ.

ಅಭಿಮಾನಿಗಳ ಹುಚ್ಚೆಬ್ಬಿಸಿದ ಪ್ರಿಯಾಂಕಾ ಫೋಟೊ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಸ್ ಎಂಜಲೀಸ್‌ನಲ್ಲಿ ‘ಬಾಳ್ವೆ’ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಆಗಾಗ ತನ್ನ ಫಾರಿನ್ ಗಂಡ ನಿಕ್ ಜೊತೆಗಿನ ನವಿರಾದ ಫೋಟೊಗಳನ್ನು ಹಾಕುತ್ತಿರುತ್ತಾಳೆ.
ಆದರೆ ಈ ಸಲ ‘ಕಿಸ್ಸಿಂಗ್ ದಿ ಸನ್’ ಎಂಬ ಅಡಿಬರಹದ ಫೋಟೊವೊಂದನ್ನು ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಸೂರ್ಯನೆಡೆಗೆ ಮುಖ ಮಾಡಿ, ಮೋಹಿತಳಾಗಿ ಒಂದು ಮುತ್ತನ್ನು ವರ್ಗಾಯಿಸಿದ್ದಾಳೆ.

ಆಕೆಯ ಅಭಿಮಾನಿಗಳು ಥ್ರಿಲ್ ಆಗಿದ್ದು, ‘ನಮ್ಮ ಪಿಂಕಿನೇ ಹಾಟ್ ಹುಡುಗಿ. ಸೂರ್ಯನ ಉರಿ ಆಕೆಗೆ ತಟ್ಟಲ್ಲ’ ಎಂದಿದ್ದಾರೆ. ಹೇರ್‌ಸ್ಟೈಲ್ ಬದಲಿಸಿರುವ ಫೋಟೊವನ್ನೂ ಪಿಂಕಿ ಶೇರ್ ಮಾಡಿಕೊಂಡಿದ್ದಾಳೆ. ಒಟ್ಟು ನ್ಯೂಸ್‌ನಲ್ಲಿರಲು ಏನಾದರೂ ಮಾಡುತ್ತಲೇ ಇರಬೇಕು ಅಲ್ಲವಾ?

ಗಡಿ ದಾಟಿದ್ದ ಐವರನ್ನು ಮರಳಿಸಿದ ಚೀನಾ ಸೇನೆ; ಈ ಯುವಕರು ಬೇಟೆಗಾರರೊ? ಸೇನೆಯ ‘ಪೋರ್ಟರ್’ಗಳೋ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೆಪ್ಟೆಂಬರ್ 1ರಿಂದ ಕಾಣೆಯಾಗಿದ್ದ ಅರುಣಾಚಲಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಭಾರತೀಯ ಸೇನೆಯ ಸುಪರ್ದಿಗೆ ಶನಿವಾರ ಒಪ್ಪಿಸಿದೆ.
ಸುಹಾನಸಿರಿ ಜಿಲ್ಲೆಯ ಈ ಯುವಕರು ಬೇಟೆಗಾರರಾಗಿದ್ದು, ಬೇಟೆಯಾಡುವ ಸಂದರ್ಭದಲ್ಲಿ ವಾಸ್ತವ ನಿಯಂತ್ರಣ ರೇಖೆ ದಾಟಿ ಚೀನಾ ಪ್ರದೇಶವನ್ನು ತಲುಪಿದ್ದರು. ಭಾರತೀಯ ಸೇನೆ ಮತ್ತು ಸಚಿವ ಕಿರಣ್ ರಿಜು ಐವರನ್ನು ಸುರಕ್ಷಿತವಾಗಿ ಮರಳಿಸಲು ಚೀನಾ ಸೇನೆಗೆ ಮನವಿ ಮಾಡಿದ್ದರು.

ಶುಕ್ರವಾರ ಹಾಟ್‌ಲೈನ್ ಮೂಲಕ ಸಂಪರ್ಕಿಸಿದ್ದ ಚೀನಾ ಸೇನೆ ಶನಿವಾರ ಯುವಕರನ್ನು ಒಪ್ಪಿಸುವುದಾಗಿ ತಿಳಿಸಿತ್ತು. ಭಾರತೀಯ ಸೇನೆಯು ಈ ಯುವಕರು ಬೇಟೆಗಾರರು ಎಂದಿದ್ದರೆ, ಸ್ಥಳೀಯರು ಅವರನ್ನು ‘ಪೋಟರ‍್ಸ್’ ಎಂದಿದೆ. ಸೇನೆಯು ದುರ್ಗಮ ಪ್ರದೇಶದಲ್ಲಿ ತನ್ನ ಲಗೇಜ್ ಸಾಗಿಸಲು ನೇಮಿಸಿಕೊಳ್ಳುವ ಸ್ಥಳೀಯ ಸಹಾಯಕರನ್ನು ಪೋಟರ‍್ಸ್ ಎನ್ನಲಾಗುತ್ತದೆ.

ಪೋರ್ಟರ್‌ಗಳು ತಮ್ಮ ಕೆಲಸದ ನಂತರ ಇನ್ನೂ ಎತ್ತರದ ಪ್ರದೇಶಗಳಿಗೆ ಹೋಗಿ ಜಿಂಕೆ ಬೇಟೆಯಾಡುವುದು ಆಗಾಗ ನಡೆದಿದೆ. ಈ ಯುವಕರು ಪೋರ್ಟರ್‌ಗಳಾಗಿದ್ದು, ತಮ್ಮ ಕೆಲಸದ ನಂತರ ಅವರು ಬೇಟೆಗೆ ಹೋಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

‘ಮಾಸ್ಕೆಂಬ್ ತಳಿಯ ಜಿಂಕೆಯ ಮಾಂಸ ಮತ್ತು ಚರ್ಮಕ್ಕೆ ಕಾಳಸಂತೆಯಲ್ಲಿ ದೊಡ್ಡ ಬೇಡಿಕೆಯಿದ್ದು, ಅರುಣಾಚಲ ಪ್ರದೇಶದ ಯುವಕರು ಗಡಿಯಲ್ಲಿ ಇಂತಹ ಜಿಂಕೆಗಳನ್ನು ಬೇಟೆಯಾಡುವುದು ಸಾಮಾನ್ಯ ಸಂಗತಿಯಾಗಿದೆ.

ಭಿಕ್ಷಾಟನೆಗೆ ಅನ್ಯರ ಶಿಶುಗಳ ಬಳಕೆ ‘ಪಿಂಕಿ ಎಲ್ಲಿ?’: ಒಂದು ಹುಡುಕಾಟದ ಸುತ್ತ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಈ ಹಿಂದೆ ‘ರೈಲ್ವೆ ಚಿಲ್ಡ್ರನ್ ಎಂಬ ಕಿರುಚಿತ್ರ ಮಾಡಿ ಹಲವು ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರಶಂಸೆ ಗಿಟ್ಟಿಸಿದ್ದ ಪ್ರಕಾಶ್ ಕೋಣಾನಪುರ್, ಈಗ ಭಿಕ್ಷಾಟನೆಯಲ್ಲಿ ಶಿಶುಗಳ ಬಳಕೆಯ ಕುರಿತು ಕಥಾವಸ್ತುವಿರುವ ‘ಪಿಂಕಿ ಎಲ್ಲಿ?’ ಎಂಬ ಕಿರುಚಿತ್ರ ನಿರ್ದೇಶಿಸಿದ್ದು, ಅದು ಕೂಡ ಹಲವು ಫಿಲ್ಮ್ ಫೆಸ್ಟಿವಲ್‌ಗಳಿಗೆ ಆಯ್ಕೆಗೊಂಡಿದೆ.

ಮಹಾನಗರದಲ್ಲಿ ಉದ್ಯೋಗ ಮಾಡುವ ಬಿಂದುಶ್ರೀ ಎಂಬ ಪಾತ್ರ ತನ್ನ ಶಿಶುವಿಗಾಗಿ ನಡೆಸುವ ಹುಡುಕಾಟವೇ ಚಿತ್ರದ ಕತೆ. ಈ ಹುಡುಕಾಟದ ಮೂಲಕವೇ ಮಹಾನಗರಗಳಲ್ಲಿನ ಸಂಕೀರ್ಣ ಬದುಕನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ.

ಸಣ್ಣಮ್ಮ ಎಂಬ ಮನೆಗೆಲಸದಾಕೆಯ ಬಳಿ ಎಂಟು ವರ್ಷದ ಶಿಶುವನ್ನು ಬಿಟ್ಟು ದಿನವೂ ಕೆಲಸಕ್ಕೆ ಬಿಂದುಶ್ರೀ ಹೋಗುತ್ತಿರುತ್ತಾಳೆ. ಬಿಂದುಶ್ರೀ ಮತ್ತು ಗಂಡ ಕೆಲಸಕ್ಕೆ ಹೋದ ಸ್ವಲ್ಪ ಸಮಯದ ನಂತರ ಸಣ್ಣಮ್ಮ ಆ ಶಿಶುವನ್ನು ಅನಸೂಯಾ ಎಂಬ ಸಂಬಂಧಿ ಕೈಗೆ ಕೊಡುವುದು, ಅನಸೂಯಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆ ಶಿಶುವನ್ನು ತೋರಿಸುತ್ತ ಭಿಕ್ಷಾಟನೆ ಮಾಡುವುದು ನಡೆದೇ ಇರುತ್ತದೆ.

ಒಂದಿನ ಶಿಶು ಕಳೆದು ಹೋದಾಗ, ಸಣ್ಣಮ್ಮ, ಅನಸೂಯಾ ಗಾಬರಿ ಬೀಳುತ್ತಾರೆ. ಅಲ್ಲಿಂದ ಶಿಶುವಿಗಾಗಿ ಬಿಂದುಶ್ರೀ ನಡೆಸುವ ಹುಡುಕಾಟದಲ್ಲಿ ಹಲವು ಆಶ್ಚರ್ಯಕರ ಸನ್ನಿವೇಶಗಳ ಎದುರಾಗುತ್ತವೆ.

ಈ ಹಿಂದೆ ಪ್ರಕಾಶ್, ರೈಲ್ವೆ ಚಿಲ್ಡ್ರನ್ ಚಿತ್ರದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ಮಕ್ಕಳ ಸಂಕಷ್ಟಗಳನ್ನು ತೋರಿಸಿದ್ದರು. ಈಗ ‘ಪಿಂಕಿ ಎಲ್ಲಿ?’ ಮೂಲಕ ಮಹಾನಗರಗಳ ಇನ್ನೊಂದು ಮುಖವನ್ನು ತೆರೆದಿಡುವ ಯತ್ನ ಮಾಡಿದ್ದಾರೆ. ಸದ್ಯದಲ್ಲೇ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ಲಭ್ಯವಾಗಲಿದೆ.

ಉದ್ಧವ್ ಕಾರ್ಟೂನ್ ವ್ಯಾಟ್ಸಾಪ್‌ಗೆ ವಿರೋಧ: ನೌಕಾದಳದ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಕಾರ್ಟೂನ್ ಚಿತ್ರವೊಂದನ್ನು ಫಾರ್ವರ್ಡ್ ಮಾಡಿದ್ದಕ್ಕಾಗಿ ನೌಕಾದಳದ ನಿವೃತ್ತ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಒಳಗಾದ 65 ವರ್ಷದ ಮದನ ಶರ್ಮಾ ಮುಖದ ಮೇಲೆ ಗಾಯಗಳಾಗಿದ್ದು, ಕಣ್ಣುಗಳಿಗೂ ಪೆಟ್ಟಾಗಿದೆ. ಖಂಡಾವಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಹಲ್ಲೆಕೋರರು ಶಿವಸೇನೆ ಕಾರ್ಯಕರ್ತರು ಎನ್ನಲಾಗಿದೆ.

ಪೂರ್ವ ಖಂಡಾವಲಿಯ ಅಪಾರ್ಟಮೆಂಟ್ ಒಂದರ ನಿವಾಸಿ ಮದನ ಶರ್ಮಾ, ತಮಗೆ ಬಂದಿದ್ದ ಉದ್ಧವ್ ಠಾಕ್ರೆಯವರನ್ನು ವ್ಯಂಗ್ಯ ಮಾಡಿರುವ ಕಾರ್ಟೂನ್ ಸಂದೇಶವನ್ನು ತಮ್ಮ ಅಪಾರ್ಟ್ಮೆಂಟ್ ಸದಸ್ಯರ ಗುಂಪಿಗೆ ಫಾರ್ವರ್ಡ್ ಮಾಡಿದ್ದರು. ಹಲ್ಲೆಕೋರರ ಪೈಕಿ ಒಬ್ಬರು ಅವರಿಗೆ ಕಾಲ್ ಮಾಡಿ ಅಪಾರ್ಟ್‌ಮೆಂಟ್ ಹೊರಗೆ ಬಂದು ಭೇಟಿಯಾಗಲು ಕೇಳಿದ್ದಾರೆ.

ಭೇಟಿಯಾಗಲು ಬಂದ ಅವರ ಮೇಲೆ ಗುಂಪು ಹಲ್ಲೆ ನಡೆಸಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಹಲವರು ಘಟನೆಯನ್ನು ಖಂಡಿಸಿದ್ದಾರೆ.

ಶನಿವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಗಿಂತ 2,350 ದುಬಾರಿ, ದೆಹಲಿಗಿಂತ 1,630 ರೂ. ಸಸ್ತಾ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ  54,440 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,460 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,410 ರೂ.,24 ಕ್ಯಾರಟ್: 52,810 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,968 ರೂ., 24 ಕ್ಯಾರಟ್: 53,420 ರೂ.

error: Content is protected !!