Home Blog Page 2179

ಗ್ರಾಮೀಣ ಪ್ರದೇಶದ ಆಸ್ತಿ ಗುರುತಿಗೆ ಸ್ವಮಿತ್ವ ಯೋಜನೆ ವರದಾನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ:
ತಾಲೂಕಿನ ತಿಮ್ಮಾಪೂರ ಗ್ರಾಮದ  ಗ್ರಾಮ ಪಂಚಾಯಿತಿ ಸಂಯೋಗದಲ್ಲಿ ಮಂಗಳವಾರ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಸ್ವಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಉದ್ಘಾಟಿಸಲಾಯಿತು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಅಧಿಕಾರಿಗ ಶೈಲೇಂದ್ರ ಬಿರಾದಾರ, ಸ್ವಮಿತ್ವ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮಿಣ ಭಾಗದ ಗ್ರಾಮ ಪಂಚಾಯತಿಗೆ ಒಳಪಡುವ ಎಲ್ಲಾ ಮನೆ ಹಾಗೂ ಪ್ಲಾಟುಗಳನ್ನು ದ್ರೋಣ್ ಕ್ಯಾಮೆರಾ ಮೂಲಕ ಸರ್ವೆ ಮಾಡಿ ಕಂಪ್ಯೂಟರ್ ಉತಾರಗಳನ್ನು ಮಾಡಿಕೊಡಲಾಗುವುದು.


ಈ ಯೋಜನೆಯಿಂದ ಗ್ರಾಮದ ಎಲ್ಲಾ ಆಸ್ತಿ ಕಂಪ್ಯೂಟರೀಕರಣಗೊಂಡು, ತಮಗೆ ಬೇಕಾದಾಗ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಿಮ್ಮ ಆಸ್ತಿ ಮನೆ ಹಾಗೂ ಪ್ಲಾಟುಗಳ ಈ ಸ್ವತ್ತು ಉತ್ತಾರಗಳನ್ನು ಪಡೆಯಬಹುದು ಎಂದರು.


ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಸ್ವಮಿತ್ವ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದು ಮನೆ ಹಾಗೂ ಪ್ಲಾಟುಗಳನ್ನು ಖರೀದಿ ಮಾಡಲು, ಕಂಪ್ಯೂಟರ್ ಉತಾರಗಳ ಅವಶ್ಯಕತೆಯಿದ್ದು ಈ ಯೋಜನೆಯಿಂದ ಗ್ರಾಮದ ಎಲ್ಲಾ ಆಸ್ತಿ ಕಂಪ್ಯೂಟರೀಕರಣಗೊಂಡು ಯಾವುದೇ ಸಮಯದಲ್ಲಿ ಉತಾರಗಳನ್ನು ಪಡೆಯಬಹುದು. ಯೋಜನೆಯ ಪ್ರಯೋಜನವನ್ನು ಗ್ರಾಮದ ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಂಗಲಾ ಪತ್ತಾರ, ಕಾರ್ಯದರ್ಶಿ ಕೋಟೇಶ್ವರ ಓಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವೀರೇಶ್ವರ ಪುಣ್ಯಾಶ್ರಮ, ಹುಚ್ಚಿರೇಶ್ವರ ಮಠಕ್ಕೆ ಬೇಟಿ ನೀಡಿದ ಕಾಮಿಡಿ ಕಿಲಾಡಿ;
ಭಾವೈಕ್ಯ ಬ್ರಹ್ಮ ಚಿತ್ರ ಯಶಸ್ಸಿಗೆ ಮಠಗಳ ಆಶೀರ್ವಾದ ಪಡೆದ ಮಾಸ್ಟರ್ ಆನಂದ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ/ನರೇಗಲ್ಲ:
ಚಲನಚಿತ್ರ ನಟ ಮಾಸ್ಟರ್ ಆನಂದ ಮಂಗಳವಾರ ಗದಗ ನಗರದ ವೀರೇಶ್ವರ ಪುಣ್ಯಾಶ್ರಮ ಹಾಗೂ ಕೋಡಿಕೊಪ್ಪದ ಶ್ರೀ ಹಠಯೋಗಿ ಹುಚ್ಚಿರೇಶ್ವರ ಮಠಕ್ಕೆ ಭೇಟಿ ನೀಡಿ ದರ್ಶನ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡ್ರಗ್ಸ್ ಪ್ರಕರಣಗಳಲ್ಲಿ ಈಗಾಗಲೇ ಸಾಕಷ್ಟು ಚನಲಚಿತ್ರ ನಟ, ನಟಿಯರ ಹೆಸರು ಕೇಳಿಬರುತ್ತಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶೇಷವಾಗಿ ಕಲಾವಿದರಿಗೆ ಶಾರೀರಿಕ ಸೌಂದರ್ಯ ಅತೀ ಮುಖ್ಯವಾಗಿದ್ದು, ಡ್ರಗ್ಸ್ ಸೇರಿದಂತೆ ಮಾದಕ ದ್ರವ್ಯಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ. ಮಾದಕ ದ್ರವ್ಯ ಸೇವನೆ ಯಾರು ಮಾಡಿದರೂ ಅದು ತಪ್ಪೇ. ಚಿತ್ರರಂಗ ವರ್ಣರಂಜಿತವಾಗಿರುವುದರಿಂದ ಮಾದಕ ದ್ರವ್ಯ ಪ್ರಕರಣವು ಹೆಚ್ಚು ಪ್ರಚಾರಗೊಳ್ಳುತ್ತಿದೆ.

ನಟ, ನಟಿಯರು ಹತ್ತು ಹಲವಾರು ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿರುತ್ತವೆ. ಅಲ್ಲಿ ಸಾಕಷ್ಟು ಜನರು ಸೇರುತ್ತಾರೆ ಅವರೆಲ್ಲರೂ ನಮ್ಮಗೆ ಪರಿಚಯವಿರುದಿಲ್ಲ ಅವರ ಹಿನ್ನೆಲೆ ನಮಗೆ ತಿಳಿದಿರುವುದಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿರುವುದು ಅವಶ್ಯ ಎಂದರು.


ಹುಚ್ಚೀರೇಶ್ವರ ಮಠದಿಂದ ಗದಗನ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದ ನಟ ಆನಂದ್, ಪೂಜ್ಯ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು, ಪಂಚಾಕ್ಷರಿ ಗವಾಯಿಗಳು ಹಾಗೂ ಕುಮಾರೇಶ್ವರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
ಈ ವೇಳೆ ಗದಗ ನಂಟಿನ ಬಗ್ಗೆ ಮಾತನಾಡಿದ ಅವರು, 8 ವರ್ಷಗಳ ಹಿಂದೆ ಗದಗ ನಗರದಲ್ಲಿ ಬನ್ನಿ ಎಂಬ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಹಠಯೋಗಿ ಹುಚ್ಚೀರೇಶ್ವರ ಅಜ್ಜನವರ ಪವಾಡಗಳನ್ನು ಕೇಳಿದ್ದೆ ಇಂದು ಮಠದ ದರ್ಶನ ಮಾಡಿದ್ದೇನೆ. ಪುಟ್ಟರಾಜ ಕವಿ ಗವಾಯಿಗಳು ನನಗೆ ಈ ಹಿಂದೆಯೇ ಆಶೀರ್ವಾದ ಮಾಡಿದ್ದಾರೆ ಎಂದು ನೆನೆದರು.

ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಂಕಲಿ ಮಠದ ಪೂಜ್ಯರ ಜೀವನ ಆಧಾರಿತ ಚಲನಚಿತ್ರವಾದ ಭಾವೈಕ್ಯ ಬ್ರಹ್ಮದ ಚಿತ್ರೀಕರಣವು ಪ್ರಗತಿಯಲ್ಲಿದ್ದು, ಚಿತ್ರೀಕರಣ ಮುಗಿದ ನಂತರ ಹಠಯೋಗಿ ವೀರಪ್ಪಜ್ಜನ ಜೀವನ ಆಧಾರಿತ ಚಲನಚಿತ್ರವನ್ನು ಮಾಡುವ ಯೋಜನೆ ಹೊಂದಿದ್ದೇವೆ. ಈಗಾಗಲೇ ನಿರ್ಮಾಪಕರು ಆಸಕ್ತಿ ತೊರಿದ್ದಾರೆ ಎಂದರು.

ನಾಗರಾಜ ಹುಯಿಲಗೋಳ, ಡಾ. ಸಂಜೀವ ರಡ್ಡೇರ, ಗೌಡಪ್ಪಗೌಡ ಗೌಡಪ್ಪಗೌಡ್ರ, ಬಿ.ಎಂ. ಪಾಟೀಲ, ಡಾ. ಕಿರಣ ಮುಂಡಗೋಡ, ಸಂತೋಷ ಕೆ, ಮಲ್ಲಯ್ಯ ಗುಂಡಗೋಪುರಮಠ, ಮರಿಯಪ್ಪ ಶಿರಗುಂಪಿ, ಮಲ್ಲಪ್ಪ ಧೂಸಲ್, ಅಮರೇಶ ಬಡಿಗೇರ, ಹನಮಂತಪ್ಪ ಬಂಡಿವಡ್ಡರ, ಮೋಹನ ಬಡಿಗೇರ, ಮುತ್ತಪ್ಪ ಜಂತ್ಲಿ, ಬಸವರಾಜ ಕಡೇತೋಟದ, ಚಂದ್ರು ಅಣ್ಣೀಗೇರಿಮಠ ಸೇರಿದಂತೆ ಇತರರಿದ್ದರು. 

ಸೈನಿಕ ತರಬೇತಿ ಕೇಂದ್ರ ಆರಂಭಕ್ಕೆ ಅಡ್ಡಿಪಡಿಸುತ್ತಿರುವವರ ಕಿರುಕುಳಕ್ಕೆ ಬೇಸತ್ತ ಯೋಧ; ಕುಟುಂಬದೊಂದಿಗೆ ದಯಾ ಮರಣಕ್ಕೆ ಅರ್ಜಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಡ ಮಕ್ಕಳಿಗಾಗಿ ಉಚಿತ ಸೈನಿತ ತರಬೇತಿ ಕೇಂದ್ರ ಆರಂಭಿಸಲು ಮುಂದಾದ ನಿವೃತ್ತ ಯೋಧನಿಗೆ ಕೆಲ ಪುಢಾರಿಗಳು ತರಬೇತಿ ಕೇಂದ್ರ ಆರಂಭಿಸಲು ಅಡ್ಡಿಪಡಿಸಿದ್ದಲ್ಲದೆ, ಮಾನಸಿಕ ಕಿರಿಕಿರಿ ನೀಡಿದ್ದರಿಂದ ಬೇಸತ್ತ ಯೋಧ ಕುಟುಂಬ ಸಹಿತ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರು ಗ್ರಾಮದ ನಿವೃತ್ತ ಯೋಧ ಈರಣ್ಣ ಅಣ್ಣಿಗೇರಿ ಮತ್ತು ಆತನ ಕುಟುಂಬ ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದು ಪರಿಸ್ಥಿತಿಯ ಭೀಕರತೆಯನ್ನು ತೋರಿಸುತ್ತದೆ.

17 ವರ್ಷ ದೇಶದ ಗಡಿಯಲ್ಲಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡಿದ ಯೋಧ ತನ್ನವರ ಜೊತೆಗಿನ ಯುದ್ಧದಲ್ಲಿ ಸೋತು ದಯಾ ಮರಣ ಕೋರಿರುವುದು ವಿಪರ್ಯಾಸ.
ವರ್ಷದ ಹಿಂದಷ್ಟೆ ನಿವೃತ್ತಿಯಾದ ಯೋಧ ಏನಾದರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ಹಂಬಲದೊಂದಿಗೆ ಸೇನೆಗೆ ಸೇರಬೇಕೆಂಬ ಹಂಬಲವಿರುವ ಬಡಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಕಟ್ಟಡ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಿಯ ಅಧಿಕಾರಿಗಳು ಹಾಗೂ ಪುಡಿರೌಡಿಗಳು ತರಬೇತಿ ಕೇಂದ್ರ ಆರಂಭಿಸಲು ಅಡ್ಡಿಪಡಿಸಿದ್ದಲ್ಲದೆ, ಕಿರುಕುಳವನ್ನೂ ನೀಡಿದ್ದಾರೆ. ಈ ಬಗ್ಗೆ ಯೋಧ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗದೆ ಇದ್ದಾಗ, ಅಂತಿಮವಾಗಿ ದಯಾ ಮರಣ ಕೋರಿ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಆಗಿದ್ದೇನು

ಬಾಲೆಹೊಸೂರ ಗ್ರಾಮದ ಈ ಮಾಜಿ ಸೈನಿಕ ಈರಣ್ಣ ಅಣ್ಣಿಗೇರಿ ತನ್ನ ಕುಟುಂಬದೊಂದಿಗೆ ಅಣ್ಣಿಗೇರಿಯಲ್ಲಿ ವಾಸವಾಗಿದ್ದಾರೆ. ಎಂಟು ವರ್ಷದ ಹಿಂದೆ ಲಕ್ಷ್ಮೇಶ್ವರ ಪಟ್ಟಣದ ಈಶ್ವರ ನಗರದಲ್ಲಿ ಜಾಗ ಖರೀದಿಸಿದ್ದಾರೆ. ಈ ಜಾಗೆಯಲ್ಲಿ ಮನೆ ಹಾಗೂ ಸೈನ್ಯಕ್ಕೆ ಸೇರಬೆಕೇಂದ ಬಡ ಮಕ್ಕಳಿಗೆ ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ. ಆದರೆ ಸ್ಥಳೀಯರಾದ ಗಂದಾಧರ ಗುಡಗೇರಿ ಹಾಗೂ ಮಂಜುನಾಥ ಮಾಗಡಿ ಎಂಬುವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಯೋಧನ ಆರೋಪ.

ಯಾವುದೇ ಹುರುಳಿಲ್ಲದೇ ಕಟ್ಟಡ ಕಟ್ಟಲು ಅನುಮತಿ ನೀಡದೇ, ಸೈನಿಕನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ. ಇದರಿಂದ ಹಂತಕರ ಕೈನಲ್ಲಿ ಸಾವನ್ನಪ್ಪುವುದಕ್ಕಿಂತ ಸರ್ಕಾರದ ಎದುರು ಸಾವಿಗೆ ಶರಣಾಗುವುದೆ ಒಳ್ಳೆಯದು ಎಂದು ನೊಂದು ದಯಾಮರಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಮಾಜಿ ಸೈನಿಕ.


ಎಂಟು ಜನರಿಂದ ಅರ್ಜಿ
ಮಾಜಿ ಸೈನಿಕ ಈರಣ್ಣ ಮತ್ತು ಅವರ ಪತ್ನಿ, ಮೂರು ವರ್ಷದ ಹೆಣ್ಣು ಮಗು, ಐದು ತಿಂಗಳು ಹಸುಗೂಸು, ಯೋಧ ಈರಣ್ಣನ ಸಹೋದರ ಶಿವಾನಂದ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಜನ ರಾಷ್ಟ್ರಪತಿ, ಪ್ರಧಾನಮಂತ್ರಿ, ಸುಪ್ರಿಂಕೋರ್ಟ ನ್ಯಾಯಾಧೀಶರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸರಕಾರ, ರಾಷ್ಟ್ರಪತಿಗಳು ನನಗೆ ನ್ಯಾಯ ಕೊಡಿಸಬೇಕು. ಇಲ್ಲವೇ ದಯಾ ಮರಣ ಕೊಡಬೇಕು. ಇನ್ನು ಮುಂದಾದರೂ ನನ್ನ ಸಮಸ್ಯೆ ಪರಿಹಾರ ಆಗದಿದ್ದರೂ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯೋಧ ಈರಣ್ಣ ಅಣ್ಣಿಗೇರಿ ಸರಕಾರಕ್ಕೆ ಎಚ್ಚರಿಸಿದ್ದಾರೆ.


ಉಚಿತ ಸೈನಿಕ ತರಬೇತಿ ಕೇಂದ್ರ ಆರಂಭಕ್ಕೆ ಅಡ್ಡಿಯಾಗಿರುವ ಪುಂಡರ ಕಿರುಕುಳದಿಂದ ಬೇಸತ್ತು ದಯಾ ಮಾರಣಕ್ಕೆ ಅರ್ಜಿ ಸಲ್ಲಿಸಿದ್ದೇನೆ. ರಾಷ್ಟ್ರಪತಿಗಳು ನನ್ನ ಮನವಿಯನ್ನು ಪರಿಗಣಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಕಿರುಕುಳ ನೀಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
– ಈರಣ್ಣ ಅಣ್ಣಿಗೇರಿ, ಮಾಜಿ ಸೈನಿಕ

ಕೇಂದ್ರ-ರಾಜ್ಯದಲ್ಲಿ ಬರ್ತಿದ್ದಾರೆ ಹೊಸ ಮಂತ್ರಿಗಳು: ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸಲವಾದರೂ ಸಿಗುತ್ತಾ ಪ್ರಾತಿನಿಧ್ಯ?

0

ಬಿಯಸ್ಕೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದು, ಕೇಂದ್ರದಲ್ಲಿ ಖಾಲಿ ಇರುವ ಸಚಿವ ಸ್ಥಾನಕ್ಕೆ ಬಹಳ ವರ್ಷಗಳ ನಂತರ ಕಲ್ಯಾಣ ಕರ್ನಾಟಕ ಭಾಗದ ಅದರಲ್ಲೂ ಕೊಪ್ಪಳ ಜಿಲ್ಲೆಯ ಸಂಸದ ಕರಡಿ ಸಂಗಣ್ಣ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಹಾಗೆಯೇ ಸದ್ಯದಲ್ಲೇ ಪುನರ್ರಚನೆಯಾಗಲಿರುವ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲು ಜಿಲ್ಲೆಯ ಶಾಸಕರಾದ ಹಾಲಪ್ಪ ಆಚಾರ್ ಮತ್ತು ಪರಣ್ಣ ಮುನವಳ್ಳಿ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.

ಕೇಂದ್ರದಲ್ಲಿ ಈ ಹಿಂದೆ ಯುಪಿಎ ಸರಕಾರ ಇದ್ದಾಗಲೂ ಈ ಭಾಗದ ಸಂಸದರು ಮಂತ್ರಿಯಾಗಿದ್ದು ತೀರಾ ವಿರಳ. ಅದರಲ್ಲೂ ಕೊಪ್ಪಳ ಜಿಲ್ಲೆಗೆ ಸಿಕ್ಕಿರುವ ಪ್ರಾತಿನಿಧ್ಯ ಶೇಕಡಾ 1ಕ್ಕಿಂತಲೂ ಎಂದು ಹೇಳಬಹುದು. ಬಿಜೆಪಿ ನೇತೃತ್ವದ ಮೋದಿ ಸರಕಾರ ಅಧಿಕಾರದಲ್ಲಿದ್ದು ದಶಕವಾಗುತ್ತಾ ಬಂದರೂ ಕಲ್ಯಾಣ ಕರ್ನಾಟಕಕ್ಕೆ ಮಂತ್ರಿಭಾಗ್ಯ ಒದಗಿ ಬಂದಿಲ್ಲ. ಈಚೆಗೆ ಸಂಸದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ಈ ಬಾರಿ ಕರ್ನಾಟಕದ ಸಂಸದರಿಗೆ ನೀಡಲು ಕೇಂದ್ರ ಯೋಚಿಸಿದೆ ಎನ್ನಲಾಗಿದೆ.

ಸಚಿವ ಸ್ಥಾನವನ್ನುಂ ಯುವ ಸಂಸದರಿಗೆ ನೀಡಬೇಕೆನ್ನುವ ಉತ್ಸಾಹ ಕೇಂದ್ರ ಸರಕಾರಕ್ಕಿದ್ದು, ಹಿರಿಯ ಸಂಸದರನ್ನು ಕಡೆಗಣಿಸುವಂತಿಲ್ಲ. ಹಾಗಾಗಿ ಈ ಸಂದಿಗ್ಧ ಸ್ಥಿತಿಯಲ್ಲಿರುವ ಕೇಂದ್ರ ಎರಡು ಬಾರಿ ಸಂಸದರಾಗಿರುವ ಸುಮಾರು 40 ವರ್ಷಗಳ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿ ಎನಿಸಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಗ್ಗೆ ಒಲವು ತೋರಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಹೈಕಮಾಂಡ್ ಇದೇ ರೀತಿ ಯೋಚಿಸಿದ್ದರೆ ಕರಡಿ ಸಂಗಣ್ಣನವರು ಸಚಿವರಾಗುವ ಹಾದಿ ಸುಗಮ. ಒಂದೊಮ್ಮೆ ಮುಂಬರುವ ಚುನಾವಣೆಯ ಲೆಕ್ಕಾಚಾರ ನಡೆಸಿ ಬೇರೆ ಏನಾದರೂ ಯೋಚನೆಗಳಿದ್ದರೆ ಮಾತ್ರ ಸಂಗಣ್ಣ ಮತ್ತೇ ಬರೀ ಸಂಸದರಾಗಿ ಮಾತ್ರ ಮುಂದುವರಿಯುತ್ತಾರೆ.

ರಾಜ್ಯದಲ್ಲೂ ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಜೋರಾಗಿ ನಡೆದಿದೆ. ಕಳೆದ ಸಲ ನಡೆದ ಪುನರ್ರಚನೆಯ ಕಾಲಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಇನ್ನೇನು ಪ್ರಮಾಣವಚನ ಸ್ವೀಕರಿಸೇ ಬಿಟ್ಟರು ಎನ್ನುವಂಥ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕೊನೆಘಳಿಗೆಯಲ್ಲಿ ಬಿಎಸ್‍ವೈ ಮುನಿಸಿನಿಂದ ಆಚಾರ್‍ಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಈಗಲೂ ಸಹ ಹಾಲಪ್ಪ ಆಚಾರ್ ಬಲವಾಗಿ ಕೇಳಿ ಬರುತ್ತಿದೆ.

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವೇಳೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರನ್ನು ನಿಗಮವೊಂದರ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಮಂತ್ರಿಗಿರಿ ಅಪಸ್ವರ ಬಾರದಂತೆ ನೋಡಿಕೊಂಡಿದ್ದ ರಾಜ್ಯ ಸರಕಾರ ಕೊನೆಗೆ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಲಿಲ್ಲ. ಬಿಎಸ್‍ವೈ ಜೊತೆ ಗುರುತಿಸಿಕೊಂಡಿರುವ ಹಾಗೂ ಆಪ್ತರಾಗಿರುವ ಪರಣ್ಣ ಮುನವಳ್ಳಿ ಈ ಸಲದ ಸಚಿವ ಸಂಪುಟ ಪುನರ್ರಚನೆಯಲ್ಲಿ ಮಂತ್ರಿ ಭಾಗ್ಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ರಾಜಕಾರಣ ಅಷ್ಟು ಸುಲಭವಾಗಿ ಅಂದಾಜಿಸಲು ಬರುವುದಿಲ್ಲ. ಏನು ಬೇಕಾದರೂ ಆಗಬಹುದು. ಆದರೂ ಮಂತ್ರಿಸ್ಥಾನಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕರೆ ಉತ್ತಮ ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಹಾಲಪ್ಪ ಆಚಾರ್


ಬಿಜೆಪಿಯಿಂದ ಆಯ್ಕೆಯಾಗಿರುವ ಎಲ್ಲ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ನಾನು ಮಂತ್ರಿಗಿರಿ ಕೊಡಿ ಎಂದು ಯಾರಿಗೂ ದುಂಬಾಲು ಬೀಳುವುದಿಲ್ಲ. ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ನನಗಿದೆ. ಈ ವಿಷಯದಲ್ಲಿ ಹೈ ಕಮಾಂಡ್ ನಿರ್ಧಾರಕ್ಕೆ ಬದ್ಧ.
-ಹಾಲಪ್ಪ ಆಚಾರ್, ಶಾಸಕರು, ಯಲಬುರ್ಗಾ.

ಪರಣ್ಣ ಮುನವಳ್ಳಿ


ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಳೆದ 20 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದ್ದೇನೆ. ಜೊತೆಗೆ ಹಿರಿತನ ಇದೆ. ಸಚಿವ ಸಂಪುಟ ಪುನರ್ರಚನೆ ಕಾಲಕ್ಕೆ ಮಂತ್ರಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಸರಕಾರಕ್ಕೆ ಕೋರುತ್ತೇನೆ. ಅಚಿತಿಮವಾಗಿ ಹೈಕಮಾಂಡ್ ಏನೇ ನಿರ್ಣಯ ತೆಗೆದುಕೊಂಡರೂ ಬದ್ಧರಾಗಿರುತ್ತೇವೆ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ.

ಸಂಗಣ್ಣ ಕರಡಿ


ನಾನು ಮಂತ್ರಿಯಾಗಲೇಬೇಕು ಎಂದು ಅಪೇಕ್ಷಿಸಿಲ್ಲ. ನಮ್ಮ ಸರಕಾರ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂತ್ರಿ ಸ್ಥಾನ ಸಿಗದಿರುವುದು ಒಪ್ಪುವ ವಿಷಯವೇ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಆಗಿರುವುದರಿಂದ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಸಂಗಣ್ಣ ಕರಡಿ, ಸಂಸದ, ಕೊಪ್ಪಳ.

ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಸರ್ಕಾರ: ಚಂದ್ರು ಹರಿಜನ ಆರೋಪ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ವಾತಂತ್ರ್ಯ ಮತ್ತು ಹಕ್ಕನ್ನು ರಾಜ್ಯ ಸರ್ಕಾರ ಕಸಿದುಕೊಳ್ಳಲು ಯತ್ನಿಸುತ್ತಿರುವುದು ದುರಂತ ಎಂದು ಸಾಮಾಜಿಕ ಹೋರಾಟಗಾರ ಚಂದ್ರಶೇಖರ ಹರಿಜನ ಹೇಳಿದರು.


ಅವರು ನಗರದ ಗಾಂಧಿ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನ್ಯ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವ ಮೂಲಕ ನಡೆದ ಪತ್ರ ಚಳುವಳಿಯಲ್ಲಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರರ ಭ್ರಷ್ಟಾಚಾರದ ಕುರಿತು ಸುದ್ದಿ ಬಿತ್ತರಿಸಿದ ಖಾಸಗಿ ವಾಹಿನಿ ಮೇಲೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಆ ವಾಹಿನಿಯ ಪ್ರಸಾರವನ್ನು ಬಂದ್ ಮಾಡಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದರು.


ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಎಷ್ಟು ಗೌರವ ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಗೌರವ ಮಾಧ್ಯಮ ರಂಗಕ್ಕೂ ಇದೆ. ರಾಜ್ಯ ಸರ್ಕಾರ ಇದನ್ನು ಅರಿಯಬೇಕು. ತಪ್ಪು ಯಾರೇ ಮಾಡಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ. ಈಗ ಉಂಟಾಗಿರುವ ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ನ್ಯಾಯಾಂಗ ಮಧ್ಯಪ್ರವೇಶಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.


ರೈತ ಹೋರಾಟಗಾರ ಪ್ರಭುರಾಜಗೌಡ ಪಾಟೀಲ, ಮುಖಂಡ ವಿಜಯ ಕಲ್ಮನಿ ಮಾತನಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದ್ದು, ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆಂದು ಅಧಿಕಾರಕ್ಕೆ ಬಂದು ಎಲ್ಲ ವಲಯಗಳಲ್ಲಿಯೂ ದುರಂಹಕಾರ ವರ್ತನೆ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಧಿಕಾರ ನಡೆಸುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಗುರು ಮುಳಗುಂದ, ಬಸವರಾಜ ಬೇವಿನಮರದ, ಪ್ರಶಾಂತ ದಾಸರ, ಕನ್ನಡ ಪರ ಹೋರಾಟಗರ ಉಸ್ಮಾನ ಚಿತ್ತಾಪೂರ, ಸಂತೋಷ ಪಾಟೀಲ, ಸೋಹಿಲ್ ನವಲಗುಂದ, ರಾಮು ವಾಲ್ಮೀಕಿ, ಮುಸ್ತಾಕ್ ಬಿಜಾಪೂರ, ಮಹಾಂತೇಶ ಮ್ಯಾಗೇರಿ, ಹನಮಂತ ಮ್ಯಾಗೇರಿ, ಮೈಲಾರಪ್ಪ ಹರಿಜನ, ಗೌಸ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಮಂಗಳವಾರ 115 ಜನರಿಗೆ ಸೋಂಕು; 95 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ 30 ರಂದು 115 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

115 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 9038 ಕ್ಕೇರಿದೆ. ಮಂಗಳವಾರ 95 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 8291 ಜನ ಗುಣಮುಖರಾಗಿದ್ದಾರೆ. 617 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಇದುವರೆಗೂ ಜಿಲ್ಲೆಯಲ್ಲಿ 130 ಜನ ಕೊವಿಡ್ ಗೆ ಮೃತಪಟ್ಟಿದ್ದಾರೆ.

ತಾಲೂಕುವಾರು ಒಟ್ಟು ಸೋಂಕಿತರ ವಿವರ: ಗದಗ-43, ಮುಂಡರಗಿ-08, ನರಗುಂದ-03, ರೋಣ-18, ಶಿರಹಟ್ಟಿ-38, ಹೊರಜಿಲ್ಲೆಯ ಪ್ರಕರಣಗಳು-05.

ಎತ್ತಿನ ಮೈ ತೊಳೆಯಲು ಹೋದ ಬಾಲಕ ಶವವಾಗಿ ಪತ್ತೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಎತ್ತಿನ ಮೈ ತೊಳೆಯಲು ಹೊಲಕ್ಕೆ ಹೋದ ಬಾಲಕ ಆಯತಪ್ಪಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ, ಕುಷ್ಟಗಿ ತಾಲೂಕಿನ ಮೆಣಸಗೇರಾದಲ್ಲಿ ನಡೆದಿದೆ.

ದೇವೇಂದ್ರಪ್ಪ (ಮುತ್ತಪ್ಪ) ಯಲಗುದರಪ್ಪ ದಾಸಬಾಳ (14) ಮೃತ ಬಾಲಕ. ಸೋಮವಾರದ ಹಿನ್ನೆಲೆ ತಮ್ಮ ಜಮೀನಿನ ಕೃಷಿ ಹೊಂಡದಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಹೊಲಕ್ಕೆ ಹೋದ ಬಾಲಕ ಮರಳಿ ಮನೆಗೆ ಬಾರದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದರು. ಕೃಷಿ ಹೊಂಡದ ಬಳಿ ಎತ್ತು ಮಾತ್ರ ನಿಂತಿತ್ತು. ಅನುಮಾನಗೊಂಡು ಕೃಷಿ ಹೊಂಡದಲ್ಲಿ ಬಾಲಕನ ತಂದೆ ಹುಡುಕಿದಾಗ ಶವ ಪತ್ತೆಯಾಗಿದೆ.

ಬಾಲಕ ದೇವೇಂದ್ರಪ್ಪ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಗನ ಅಕಾಲಿಕ ಮರಣದಿಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಪಾರ್ಥಿವ ಶರೀರವನ್ನು ಕುಟುಂದವರಿಗೆ ಹಸ್ತಾಂತರಿಸಲಾಯಿತು. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ.

ಬಲೆಗೆ ಬಿದ್ದ ಕೋಳಿ ಕಳ್ಳ; ದಿನಕೊಂದು ಕೋಳಿ ನುಂಗುತ್ತಿದ್ದ ನಾಗರಹಾವು ಸೆರೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ: ಇಟ್ಟಿಗೆಯಲ್ಲಿ ಅವಿತು ಕೂತಿದ್ದ ಉರಗವೊಂದನ್ನು ಸೆರೆ ಹಿಡಿದ ಘಟನೆ ತಾಲೂಕಿನ ಕಣವಿ ಹೊಸೂರಿನ ನಡೆದಿದೆ.

ಗ್ರಾಮದ ಮಂಜುನಾಥ್ ಮಡಿವಾಳರ ಎಂಬುವರ ತೋಟದಲ್ಲಿ ಈ ನಾಗರ ಹಾವು ಮನೆಮಾಡಿ, ತೋಟದಲ್ಲಿ ಸಾಕಿದ್ದ ಕೋಳಿಗಳನ್ನು ತಿನ್ನುತ್ತಿತ್ತು.

ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮನೆಯವರು ಇಟ್ಟಿಗೆಯಲ್ಲಿ ಮನೆ ಮಾಡಿ ಅವಿತು ಕೂತಿದ್ದ ನಾಗರ ಹಾವನ್ನು ಪತ್ತೆ ಹಚ್ಚಿ ಗದಗನ ಉರಗ ಪ್ರೇಮಿ ವಿಜಯ್ ಎಂಬುವರಿಗೆ ತಿಳಿಸಿದ್ದಾರೆ.

ವಿಜಯ್ ಮಂಗಳವಾರ ಮಂಜುನಾಥ್ ಅವರ ತೋಟಕ್ಕೆ ಬಂದು ಇಟ್ಟಿಗೆಯಲ್ಲಿ ಕೂತಿದ್ದ ನಾಗರ ಹಾವನ್ನು ಸುಮಾರು ಒಂದೂವರೆ ಕಾಲ ಕಾರ್ಯಾಚರಣೆ ನಡೆಸಿ ನೀರಿನ ಡಬ್ಬಿಯಲ್ಲಿ ಹಿಡಿದಿದ್ದಾರೆ.

ಸುಮಾರು 6 ಅಡಿಯಷ್ಟು ಉದ್ದ ಇದ್ದ ನಾಗರ ಹಾವನ್ನು ಕಂಡು ಮನೆ ಮಂದಿಯಲ್ಲಾ ಗಾಬರಿಗೊಂಡಿದ್ದಾರೆ.

ಇನ್ನು ಹಿಡಿದ ಬಳಿಕ ಹಾವನ್ನು ತೆಗೆದುಕೊಂಡು ಕಪ್ಪತಗುಡ್ಡದಲ್ಲಿ ಬಿಟ್ಟಿದ್ದಾರೆ. ಇಷ್ಟುದಿನ ಹಾವಿನ ಭಯದಲ್ಲಿದ್ದ ಕೋಳಿ ಮತ್ತು ಕೋಳಿ ಮರಿಗಳು ಸದ್ಯ ಭಯಮುಕ್ತವಾಗಿದ್ದು, ಮನೆಯ ಮಾಲೀಕರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

ಗ್ರಾಪಂ ಚುನಾವಣಾ ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

0

-ರಸ್ತೆ ಮಾಡಿ‌ ಕೊಡಿ, ಆಮೇಲೆ ಓಟ್ ಕೇಳೋಕೆ ಬನ್ನಿ..
-ರಸ್ತೆ ಇಲ್ಲದ ಕಾರಣಕ್ಕೆ ಅನೇಕರು ಅಸು‌ ನೀಗಿದ್ದಾರೆ
-ಬಿಯಸ್ಕೆ
ವಿನಯಸಾಕ್ಷಿ ಸುದ್ದಿ ಕೊಪ್ಪಳ
2020-21ನೇ ಸಾಲಿನಲ್ಲಿ ನಡೆಯಲಿರುವ ರಾಜ್ಯದ ಗ್ರಾಪಂ ಚುನಾವಣೆಗಳಿಗೆ ಈಗಾಗಲೇ ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ. ಮತದಾರರ ಮನಸೆಳೆಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದ್ದಾರೆ. ಆದರೆ ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳಧಾಳ ಗ್ರಾಮಸ್ಥರು ಗ್ರಾಪಂ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವ ನಿರ್ಧಾರ ಮಾಡಿದ್ದಾರೆ.
ಗುಳಧಾಳ (ಮಸಾರಿ ಕ್ಯಾಂಪ್), ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಣವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ. ಸುಮಾರು 150 ವರ್ಷಗಳಿಂದಲೂ 200 ಕುಟುಂಬಗಳು ಅಂದರೆ ಸುಮಾರು 800 ಜನರು ವಾಸವಾಗಿದ್ದಾರೆ. ಇಷ್ಟು ವರ್ಷಗಳಿಂದಲೂ ಗ್ರಾಮಕ್ಕೆ ರಸ್ತೆ ಮಾಡಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ.‌ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಸುಸ್ತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಗುಳಧಾಳ (ಮಸಾರಿ ಕ್ಯಾಂಪ್) ಗ್ರಾಮಕ್ಕೆ ಮುಖ್ಯವಾಗಿ ರಸ್ತೆ‌ ನಿರ್ಮಿಸಬೇಕು. ಹತ್ತಾರು ವರ್ಷಗಳಿಂದ ನಡೆಯುತ್ತಿರುವ ವಿವಿಧ ಚುನಾವಣೆಗಳಲ್ಲಿ ಗ್ರಾಮಸ್ಥರು ಈ ಬೇಡಿಕೆಯನ್ನು ಹೇಳುತ್ತಲೇ ಬಂದಿದ್ದಾರೆ. ಮತ ಕೇಳಲು ಬಂದವರೆಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆಯೇ ಹೊರತು ಗೆದ್ದವರು ತಿರುಗಿ ಗ್ರಾಮದ ಕಡೆ ಸುಳಿಯುವುದೇ ಇಲ್ಲ.
ಗ್ರಾಮಕ್ಕೆ ರಸ್ತೆ‌‌ ಇಲ್ಲದ್ದರಿಂದ ಅನಾರೋಗ್ಯ ಉಂಟಾದರೆ ಪಟ್ಟಣಕ್ಕೆ ತೆರಳಲು ಕಷ್ಟವಾಗುತ್ತದೆ. ರಸ್ತೆಯೇ ಇಲ್ಲ ಎಂದ ಮೇಲೆ ವಾಹನ ಸಂಚಾರ ಎಲ್ಲಿಯದು? ಕಾಲುವೆ ಪಕ್ಕದ ಅಡ್ಡಾದಿಡ್ಡಿ ಹಾದಿಯಲ್ಲಿ ಬೈಕ್‌ಗಳು ಓಡಾಡುತ್ತವೆ. ರಾತ್ರಿಯಾದರೆ ಸಾಕು ವಿದ್ಯುತ್ ದೀಪಗಳಿಲ್ಲದೇ ಅನೇಕ ಅಪಘಾತಗಳು ಸಂಭವಿಸಿ ಸಾವು-ನೋವಿನ ಪ್ರಕರಣಗಳು ಉಂಟಾಗಿವೆ. ಅನಾರೋಗ್ಯಪೀಡಿತರು ಆಸ್ಪತ್ರೆ ಸೇರುವ ಮೊದಲೇ ಈ ಹಾದಿಯ ಕಾರಣದಿಂದ ಮಸಣದ ದಾರಿ ಹಿಡಿದಿರುವ ಅನೇಕ ಪ್ರಸಂಗಗಳು ನಡೆದಿವೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ರಸ್ತೆ. ಗ್ರಾಮಕ್ಕೆ ರಸ್ತೆ ಆಗುವವರೆಗೆ ಯಾವುದೇ ಚುನಾವಣೆ ಬರಲಿ. ಮತದಾನ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ನಡೆಯಲಿರುವ ಗ್ರಾಮ ಪಂಚಾಯಿತಿ‌ ಚುನಾವಣೆ ಗ್ರಾಮಸ್ಥರ ಮೊದಲ ಹೆಜ್ಜೆ.
ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಬಹಿಷ್ಕಾರದ ಪತ್ರವನ್ನು ಈಗಾಗಲೇ ಹಣವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ಸಲ ಹುಸಿ ಭರವಸೆಗಳಿಗೆ ಮರಳಾಗುವುದಿಲ್ಲ ಎಂಬುದು ಗ್ರಾಮಸ್ಥರ ನಿಲುವು.

ನಮ್ಮೂರಿಗೆ ರಸ್ತೆ‌ ಇಲ್ಲದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಸುಮಾರು 5 ಕಿಮೀ ನಡೆದುಕೊಂಡೇ ಶಾಲಾ-ಕಾಲೇಜುಗಳಿಗೆ ತೆರಳಬೇಕು. ಸಂಜೆ 6ರೊಳಗೆ ಗ್ರಾಮಸ್ಥರು ಮನೆ ಸೇರಬೇಕು. ಯಾಕೆಂದರೆ ವಿದ್ಯುತ್ ದೀಪ ಇಲ್ಲದ್ದರಿಂದ ಕತ್ತಲಿನಲ್ಲಿ ಕಾಲುವೆಗೆ ಜಾರುವ ಸ್ಥಿತಿ ಇದೆ. ಗ್ರಾಮದ ಯುವಕರಿಗೆ ಇದೇ ಕಾರಣಕ್ಕಾಗಿ ಕನ್ಯೆ ಸಿಗುತ್ತಿಲ್ಲ. ಹೆಣ್ಣು ನೋಡಲು ವರ ಬರುತ್ತಿಲ್ಲ. ರಸ್ತೆ‌ ನಿರ್ಮಾಣದ ನಂತರವೇ ಮತದಾನ ಮಾಡಲು ನಿರ್ಧರಿಸಿದ್ದೇವೆ.
-ಮಂಜುನಾಥ್, ಗುಳಧಾಳ ಗ್ರಾಮಸ್ಥ.

ಕಸದ ತೊಟ್ಟಿಯಾದ ವಾರ್ಡ್; ಕಣ್ಮುಚ್ಚಿ ಕುಳಿತ ಗ್ರಾಪಂ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕು ಮಂಗಳೂರು ಗ್ರಾಮದ 1 ನೇ ವಾರ್ಡ‌ನಲ್ಲಿರುವ ಬಿ ರಾಚಯ್ಯ ನಗರ ಅಕ್ಷರಶಃ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ವಾರ್ಡ್‌ನಲ್ಲಿ ಕಸದ ರಾಶಿ ಬಿದ್ದರೂ ಗ್ರಾಪಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಬೀದಿ ದೀಪದ ಕಂಬಗಳಲ್ಲಿ ಬಲ್ಬ್‌ಗಳು ಬೆಳಕು ನೀಡದೇ, ಕತ್ತಲು ಆವರಿಸಿದೆ. ನೀರಿನ ಸೌಕರ್ಯವಿಲ್ಲ . ಚರಂಡಿಯ ಕಸವನ್ನು ತೆಗೆದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ತೆಗೆದ ಸ್ಥಳದಲ್ಲೇ ಹಾಕುತ್ತಾರೆ.

ಇದರಿಂದಾಗಿ ರೋಗ ರುಜಿನಗಳು ಉಂಟಾಗುವ ಭಯ ಸುತ್ತಮುತ್ತಲಿನ ನಾಗರಿಕರಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಿಕೊಡಬೇಕು.

ಜನರು ಅನೇಕ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೂ ಒಂದು ಸಮಸ್ಯೆಯನ್ನು ಕೂಡ ಬಗೆಹರಿಸಿಲ್ಲ‌. ಇನ್ನು ಮುಂದೆ ಉದಾಸೀನ ಧೋರಣೆ ತಾಳಿದರೆ ಗ್ರಾಪಂ‌ಗೆ ಬೀಗ ಹಾಕುವುದು ಅನಿವಾರ್ಯವಾಗುತ್ತದೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.

error: Content is protected !!