Home Blog Page 2180

ಯಡಿಯೂರಪ್ಪ ರಾಜಾಹುಲಿ, ಕಬ್ಬಡ್ಡಿ ಕ್ಯಾಪ್ಟನ್: ಅಶೋಕ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ರಾಜಾಹುಲಿ. ನಮ್ಮ ತಂಡದ ಕಬ್ಬಡ್ಡಿ ತಂಡದ ಕ್ಯಾಪ್ಟನ್. ಅವರಿಗೆ ರೈಟ್ ಮಾಡೋದು ಗೊತ್ತು, ಕ್ಯಾಚ್ ಹಾಕೋದು ಗೊತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯವೇ ಇಲ್ಲ, ಮುಂದೆಯೂ ಅವರೇ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದರು.

ಈಗಾಗಲೇ ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಗುರುವಾರ ಕೊಪ್ಪಳ ಮತ್ತು ಗದಗ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲಿಸಲಾಗುವುದು. ಈಗಷ್ಟೇ ಕೊಪ್ಪಳದಲ್ಲಿ ಸಭೆ ಮುಗಿದಿದ್ದು, ಮಳೆಹಾನಿ ಮತ್ತು ಕೊವಿಡ್-19 ಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ತಿಳಿಸಿದರು.

ಕೊವಿಡ್-19 ಗೆ ಸಂಬಂಧಿಸಿದಂತೆ ಕೊಪ್ಪಳಕ್ಕೆ 9.83 ಕೋಟಿ ಸರ್ಕಾರ ಹಣ ನೀಡಿದೆ. 3 ಕೋಟಿ ರೂಪಾಯಿ ಹಣ ಜಿಲ್ಲಾಡಳಿತ ಬಳಿ ಇನ್ನೂ ಇದೆ. ವೆಂಟಿಲೇಟರ್ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರವಾಹದಿಂದಾಗಿ 38 ಜಾನುವಾರು ಸತ್ತಿವೆ, 465 ಮನೆ ಬಿದ್ದಿವೆ. ಕೊಪ್ಪಳ ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಗೆ 23 ಕೋಟಿ ಪರಿಹಾರ ನೀಡಲಾಗಿದೆ. 3 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಡಿಸಿ ಅವರ ಪಿಡಿ ಖಾತೆಯಲ್ಲೂ ಸಾಕಷ್ಟು ಹಣ ಇದೆ. ಖಾತೆಯಲ್ಲಿ 5 ಕೋಟಿಗೂ ಕಡಿಮೆ ಹಣ ಇದ್ದರೆ ಕೂಡಲೇ ಹಣ ಹಾಕ್ತಿವಿ. 1 ಲಕ್ಷ 71 ಸಾವಿರಕ್ಕೂ ಹೆಚ್ಚು ಸಾಮಾಜಿಕ ಭದ್ರತೆಯ ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಬ್ಯಾಂಕ್ ಮೂಲಕ ಹಣ ನೀಡಲು ಸೂಚಿಸಲಾಗಿದೆ. ಆಧಾರ ಲಿಂಕ್ ಮಾಡಲು ಹೇಳಲಾಗಿದೆ. ಇದರಿಂದ 5 ರಿಂದ 6 ಕೋಟಿ ಹಣ ಸರ್ಕಾರಕ್ಕೆ ಉಳಿಯಲಿದೆ.
ಅರಣ್ಯ ಮತ್ತು ರೆವಿನ್ಯೂ ಜಮೀನಿನ ಬಗ್ಗೆ ಸಮಸ್ಯೆ ಇದೆ. ಅರಣ್ಯ ಇಲಾಖೆಯ ಭೂಮಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 334 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 8 ಸಾವಿರದ 71 ಕೋಟಿ ರೂಪಾಯಿ ಹಾನಿಯಾಗಿದೆ. ಸಿಎಂ ಯಡಿಯೂರಪ್ಪ ನಾಳೆ ದೆಹಲಿಗೆ ಹೋಗುತ್ತಿದ್ದಾರೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಕೇಳಲು ದೆಹಲಿಗೆ ಹೋಗುತ್ತಿದ್ದಾರೆ. ಸಿಎಂ ಕೇಂದ್ರದ ನಾಯಕರನ್ನು ಭೇಟಿ ಮಾಡಿ, ಹೆಚ್ಚು ಅನುದಾನ ತರುವ ಕೆಲಸ ಮಾಡ್ತಿದ್ದಾರೆ ಎಂದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ವಿಚಾರ

ಇದು ಕೇವಲ ರಾಜ್ಯದಲ್ಲಿ ಇದೆ.
ವಿದ್ಯಾವಂತ ‌ರೈತರು ಕೃಷಿ‌ ಕಡೆಗೆ ಬರಬೇಕು ಎಂಬುದು ನಮ್ಮ ಕಾಯ್ದೆ ತಿದ್ದುಪಡಿಯ ಉದ್ದೇಶ ಎಂದ ಆರ್.ಅಶೋಕ, ವೃದ್ಧಾಪ್ಯ ವೇತನಕ್ಕಾಗಿ ಇನ್ನು‌ ಮುಂದೆ ಅರ್ಜಿ ಹಾಕಬೇಕಿಲ್ಲ‌. ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ಫಲಾನುಭವಿಗಳೆಂದು ಆಯ್ಕೆ ಮಾಡಲಾಗುವುದು. ಅಧಿಕಾರಿಗಳು ಬೋಗಸ್ ಪಿಂಚಣಿ ತಡೆಯಲು ಇನ್ನೂ 15 ದಿನಗಳೊಳಗೆ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿಸಬೇಕು. ಇಲ್ಲದಿದ್ದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ರಘುನಂದನ್ ಮೂರ್ತಿ ಇತರರು ಇದ್ದರು.

2016-18: 3,005 ಯುಎಪಿಎ ಕೇಸು, ಶೇ.27 ರಲ್ಲಿ ಮಾತ್ರ ಚಾರ್ಜ್ ಶೀಟ್!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಕುರಿತ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಕೇಂದ್ರ ನೀಡಿದ ಉತ್ತರದಿಂದ, ಒಂದಿಷ್ಟು ಅಂಶಗಳು ಸ್ಪಷ್ಟವಾಗುತ್ತವೆ. 2016ರಿಂಷ ವ್ಯಾಪಕವಾಗಿ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಬಳಸುತ್ತಿದೆ. ಈ ಕೇಸುಗಳಲ್ಲಿ ತನಿಖೆ ಪೂರ್ಣಗೊಂಡಿರುವ ಕೇಸುಗಳು ತುಂಬ ವಿರಳ. ಇದರರ್ಥ ಆರೋಪಿಗಳಿಗೆ ಜಾಮೀನು ಸಿಗದೆ ಅವರು ಜೈಲಿನಲ್ಲೇ ಇರುವಂತೆ ಮಾಡುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ.

ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ, 2016-18ರ ಅವಧಿಯಲ್ಲಿ 3,005 ಯುಪಿಎ ಕೇಸು ದಾಖಲಾಗಿದ್ದು, ಅದರಲ್ಲಿ ಕೇವಲ 821 ಕೇಸುಗಳಲ್ಲಿ ಮಾತ್ರ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಾಗಿದೆ. ಅಂದರೆ ಶೇ.27 ಪ್ರಕರಣಗಳಲ್ಲಿ ಮಾತ್ರ ತನಿಖೆ ಮುಗಿದಿದೆ!

ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ, 2017-18ರಲ್ಲಿ 1,198 ಪ್ರಕರಣ ದಾಖಲಿಸಿದ್ದು 563 ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಅರ್ಧಕ್ಕೂ ಹೆಚ್ಚು ಜನ ಆರೋಪಮುಕ್ತರಾಗಿದ್ದಾರೆ ಎಂದರೆ ಆಧಾರರಹಿತ ಕೇಸುಗಳನ್ನು ಹಾಕಲಾಗಿತ್ತು ಎಂದೇ ಅರ್ಥ.

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಎನ್‌ಎಸ್‌ಎ ಪ್ರಕರಣ ದಾಖಲಾಗಿವೆ. ಈ ಎರಡು ರಾಜ್ಯಗಳಲ್ಲಂತೂ ಸಾಮಾನ್ಯ ಪ್ರಕರಣಗಳಲ್ಲೂ ಭಯೋತ್ಪದನಾ ಚಟುವಟಿಕೆಗೆ ಸಂಬಂಧಿಸಿದ ಕಾಯ್ದೆ ಅಡಿ ಕೇಸು ದಾಖಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಯುಎಪಿಎ, ಎನ್‌ಎಸ್‌ಎ ದುರುಪಯೋಗ?

ಸರ್ಕಾರ ನೀಡಿದ ಅಂಕಿಅಂಶಗಳು ಮತ್ತು ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ಎರಡೂ ಕಾಯ್ದೆಗಳನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಾಣುತ್ತದೆ. ಇವೆರಡೂ ಕಾಯ್ದೆಗಳು ಭಯೋತ್ಪಾದನೆ ಮತ್ತು ತೀರಾ ಗಂಭಿರ ಪ್ರಕರಣಗಳನ್ನು ಭೇದಿಸಲೆಂದು ರೂಪಿತವಾಗಿವೆ.
ಭಾಷಣವೊಂದರ ಆಧಾರದಲ್ಲಿ (ಅದನ್ನು ತಪ್ಪಾಗಿ ಉಲ್ಲೇಖಿಸಿ) ಡಾ. ಕಫೀಲ್ ಖಾನ್‌ರನ್ನು ಎನ್‌ಎಸ್‌ಎ ಅಡಿ ಬಂಧಿಸಲಾಗಿತ್ತು. ಕೊನೆಗೆ ಕೋರ್ಟ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಬೇಕಾಯಿತು. ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಪ್ರಭುತ್ವವನ್ನು ಟೀಕಿಸುವ ಪ್ರಗತಿಪರರ ಮೇಲೆ ಎನ್‌ಎಸ್‌ಎ ಕಾಯ್ದೆ ಮತ್ತು ದೆಹಲಿ ಗಲಭೆ ಪ್ರಕರಣದಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟಗಾರರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ.

ಹ್ಯಾಪಿ ಬರ್ತಡೇ ಮೋದಿಜಿ: ರಾಹುಲ್ ಗಾಂಧಿ ಹಾರೈಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಭಾಶಯ ಕೋರಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು ಎಂದು ಸರಳ ಸಂದೇಶವನ್ನು ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಸಲ 69ನೇ ಜನ್ಮದಿನದಂದು ರಾಹುಲ್ ಮುಖತಃ ವಿಶ್ ಮಾಡಿದ್ದರು. ಈಗ ಅವರು ಸೋನಿಯಾರ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಪ್ರತಿದಿನವೂ ಸರಣಿ ಟ್ವೀಟ್‌ಗಳ ಮೂಲಕ ಮೋದಿಯವರ ಕೊರೋನಾ ನಿರ್ವಹಣೆಯ ವಿಫಲತೆ, ಆರ್ಥಿಕತೆ ಹಿನ್ನಡೆ ವಿಷಯಗಳ ಕುರಿತು ರಾಹುಲ್ ಟೀಕೆ ಮಾಡುತ್ತಲೇ ಬಂದಿದ್ದಾರೆ.

ಮೋದಿ ಜನ್ಮದಿನ: ನಿರುದ್ಯೋಗ ದಿನ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ; ಇಂದು ನರೇಂದ್ರ ಮೋದಿಯವರ ಜನ್ಮದಿನ. ಈ ನಿಮಿತ್ತ ಬಿಜೆಪಿ ದೇಶಾದ್ಯಂತ ಇಂದಿನಿಂದ ಒಂದು ವಾರ ಕಾಲ ‘ಸೇವಾ ಸಪ್ತಾಹ’ದ ಮೂಲಕ ರಕ್ತದಾನದಂತಹ ಕಾರ್ಯಕ್ರಮ ಆಯೋಜಿಸಿದೆ.
ಆದರೆ ಇಂದು #ರಾಷ್ಟ್ರಿಯ ಬೆರೋಜಗಾರ್ ದಿವಸ್ ಎಂಬ ಹ್ಯಾಷ್‌ಟ್ಯಾಗ್ ಟ್ವಿಟರಿನಲ್ಲಿ ಟ್ರೆಂಡ್ ಆಗುತ್ತಿದೆ.

ಮೋದಿ ಜನ್ಮದಿನವನ್ನು ಟಾರ್ಗೆಟ್ ಮಾಡಿಯೇ ಕಳೆದ ವಾರದಿಂದ ನಡೆಯುತ್ತಿರುವ ಈ ಟ್ವಿಟರ್ ಅಭಿಯಾನ ಇಂದು ಮುಕ್ತಾಯಗೊಳ್ಳಲಿದೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ಉಲ್ಲೇಖಿಸಿ ಲಕ್ಷಾಂತರ ಯುವಕರು ಟ್ವೀಟ್‌ಗಳನ್ನು ಮಾಡಿದ್ದಾರೆ. ಸರ್ಕಾರಿ ಮಟ್ಟದಲ್ಲೇ ಇರುವ ಖಾಲಿ ಹುದ್ದೆಗಳನ್ನು ತುಂಬಲು, ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲು ಈ ಆನ್‌ಲೈನ್ ಅಭಿಯಾನ ಆಗ್ರಹಿಸಿದೆ.
ಮೋದಿಯವರ ಉದ್ಯೋಗ ಭರವಸೆಗಳ ಬಗ್ಗೆ ಸಾಕಷ್ಟು ಯುವಕರು ಲೇವಡಿಯನ್ನೂ ಮಾಡಿದ್ದಾರೆ.

ಕಳಪೆ ಬೀಜ ಪತ್ತೆ; ಕ್ರಮಕ್ಕೆ ಶಿಫಾರಸು: ಬಿ.ಸಿ‌ ಪಾಟೀಲ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕೊಪ್ಪಳದಲ್ಲಿ ಇತ್ತಿಚೆಗೆ ರೈತರಿಗೆ ಕಳಪೆ ಬೀಜ, ಗೊಬ್ಬರ‌ ವಿತರಿಸಿದ ಪ್ರಕರಣ ಗಮನಕ್ಕೆ ಬಂದಿದ್ದು, ಪೂರೈಕೆಯಾದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು ಕಳಪೆ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವುದು ಸಾಬೀತಾಗಿದೆ. ಮಾರಾಟವಾದ ಗೊಬ್ಬರ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಕಳಪೆ ಗೊಬ್ಬರ ಪತ್ತೆಯಾಗಿದ್ದು, ಪೆರಿಗ್ರಿನ್ ಕಂಪನಿಯ ಗೊಬ್ಬರ ಕಳಪೆ ಎಂಬುದು ಗೊತ್ತಾಗಿದೆ. ಪ್ರಯೋಗಾಲಯದ ವರದಿ ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು. ಈ ಕಂಪನಿ ಕಲಬುರಗಿಯಲ್ಲಿ ಇದ್ದು, ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಪ್ಪಳದ ಶಾಂತಿ ಆಗ್ರೋದಲ್ಲಿ ಈರುಳ್ಳಿ ಬೀಜ ಕಳಪೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ‌ ನೀಡಿದ ಅವರು, ಈ ಬಗ್ಗೆ ತೋಟಗಾರಿಕೆ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಪರಿಶೀಲಿಸಿ ವರದಿ ನೀಡಲಿದೆ ಎಂದು ವಿವರಿಸಿದರು.

ಪೊಲೀಸ್ ಇಲಾಖೆಯ ಆಂತರಿಕ ಕಲಹ ಕುರಿತು ಸಾಕಷ್ಟು ಪರಸ್ಪರ ಪರ-ವಿರೋಧ ದೂರುಗಳು ಬಂದಿದ್ದು, ಅವುಗಳನ್ನು ಗೃಹಮಂತ್ರಿಗಳ ಗಮನಕ್ಕೆ ತರಲಾಗಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ತಮಗೆ ಸಂಬಂಧಿಸಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಕೊಪ್ಪಳ ಜಿಪಂ ಸಿಇಒ ರಘುನಂದನ್ ಮೂರ್ತಿ ಸೇರಿದಂತೆ ಇತರರು ಇದ್ದರು.

ಶಾಸಕ ದಢೇಸೂಗೂರು ಅವರಿಂದ ಧ್ವಜಾರೋಹಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಅವರು ತಾಲೂಕು ಆಡಳಿತ ಮತ್ತು ಕಾರಟಗಿ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ತಹಸೀಲ್ದಾರ್ ಕವಿತಾ, ಮುಖ್ಯಾಧಿಕಾರಿ ಶಿವಲಿಂಗಪ್ಪ, ತಾ. ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸೋಮಶೇಖರಗೌಡ ಎಪಿಎಂಸಿ ಅಧ್ಯಕ್ಷರು, ಸದಸ್ಯರಾದ ನಾಗರಾಜ್ ಅರಳಿ, ಜೆ ತಿಮ್ಮನಗೌಡ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ, ಪಿಎಸ್ಐ ಅವಿನಾಶ್ ಕಾಂಬ್ಳೆ, ಅರೋಗ್ಯ ರಕ್ಷಾ ಸಮಿತಿಯ ಶರಣಪ್ಪ ಗದ್ದಿ,ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ನಾಗರಾಜ ಬಿಲ್ಗಾರ್, ರಮೇಶ್ ನಾಡಿಗೇರ್, ಶಾಂತಾ ಪವಾರ್, ರತ್ನಕುಮಾರಿ, ಪ್ರಭುರಾಜ್ ಬೂದಿ, ಮರಿಯಪ್ಪ ಸಾಲೋಣಿ, ಮಂಜುನಾಥ್ ಮಾಲಿಪಾಟೀಲ್, LVT ಸೂಗಪ್ಪ, ಮಲ್ಲಮ್ಮ ಕನಕರೆಡ್ಡಿ, ಮತ್ತಿತರ ಮುಖಂಡರು ಇದ್ದರು.

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಮಾಡಿದ್ದೇನು? ಹೆಸರಷ್ಟೇ ಕಲ್ಯಾಣ, ಕೊಟ್ಟಿದ್ದು ಕಡಿಮೆ ಹಣ: ಖಂಡ್ರೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಲಬುರಗಿ: ಇಂದು ಗುರುವಾರ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಎಂಬ ಹೊಸ ಹೆಸರು ಪಡೆದ ಹೈದರಾಬಾದ್ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಗಮನಾರ್ಹ ನೆರವು ನೀಡಿಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ. ರಾಜ್ಯ  ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಲಾಗಿತ್ತು. ಇದೇ ವಿಚಾರದ ಮೇಲೆ ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯನ್ನೂ ಎದುರಿಸಿತ್ತು. ಆದರೆ ಅದಾದ ಬಳಿಕ ಆರ್ಟಿಕಲ್ 371(ಜೆ)ಗೆ ತಿದ್ದುಪಡಿ ತಂದಿದ್ದರೂ ಪ್ರಯೋಜವಾಗಿಲ್ಲ ಎಂದು ಜನರೇ ಆರೋಪಿಸುತ್ತಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ ಮಾತ್ರಕ್ಕೆ ತೀವ್ರ ಹಿಂದುಳಿದಿರುವ ಪ್ರದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಮನಗಾಣಬೇಕು, ಜನರನ್ನು ಮರುಳು ಮಾಡುವ ಪ್ರಯತ್ನ ಕೈಬಿಟ್ಟು ಪ್ರಾದೇಶಿಕ ಅಸಮತೋಲನದಿಂದ ಬಳಲುತ್ತಿರುವ ವಲಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.

ಮಂಜೂರಾಗಿರುವ ಯೋಜನೆಗಳು, ಟೆಂಡರ್ ಆಗಿರುವ ಕಾಮಗಾರಿಗಳೂ ಇನ್ನೂ ಆರಂಭವಾಗಿಲ್ಲ. ವಿಶೇಷ ಸ್ಥಾನಮಾನ ಪಡೆದಿರುವ ಭಾಗಕ್ಕೆ ವಿಶೇಷ ಅನುದಾನ ನೀಡುವುದಿರಲಿ, ಹಂಚಿಕೆ ಮಾಡಿದ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಒಂದೂ ಕಾಲು ವರ್ಷದಿಂದ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. 2019-20 ರ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ 1500 ಕೋಟಿ ಅನುದಾನದಲ್ಲಿ ರೂ 1125 ಕೋಟಿ ಬಿಡುಗಡೆಯಾಗಿದ್ದು ಉಳಿದ ಹಣ 375 ಕೋಟಿ ರೂ. ಇನ್ನೂ ಬಿಡುಗಡೆ ಆಗಿಲ್ಲ ಎಂದಿದ್ದಾರೆ.

ಇನ್ನು 2020-21ರ ಸಾಲಿನಲ್ಲಿ 2000 ಕೋಟಿ ರೂ. ನೀಡುವಂತೆ ಕೇಳಿದ್ದರೂ, 1500 ಕೋಟಿ ಮೀಸಲಿಟ್ಟರು, ಈಗ ಅದರಲ್ಲಿ 1136.86 ಕೋಟಿ ರೂ. ಕ್ರಿಯಾ ಯೋಜನೆ ಮಾಡಿದ್ದಾರೆ. ಇದರಲ್ಲೂ ಹಣ ಕಡಿತ ಆಗಿದೆ.

2020-21 ರಲ್ಲಿ ಇಲ್ಲಿಯವರೆಗೆ ಆರು ತಿಂಗಳುಗಳಲ್ಲಿ ಒಂದೇ ಒಂದು ಕ್ರಿಯಾ ಯೋಜನೆಗೆ ಅನುಮೋದನೆ ನೀಡಿಲ್ಲ. ಇದು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಘನ ಘೋರ ಅನ್ಯಾಯ ಎಂದು ಖಂಡ್ರೆ ಹೇಳಿದ್ದಾರೆ.

ಉಪ ಚುನಾವಣೆ ನಡೆದ ಒಂದೊಂದು ಕ್ಷೇತ್ರಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾವಿರಾರು ಕೋಟಿ ರೂಪಾಯಿ ಯೋಜನೆ, ಪ್ಯಾಕೇಜ್ ಪ್ರಕಟಿಸಿದರು. ಆದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಏಕೆ ಇಂತಹ ಪ್ಯಾಕೇಜ್ ನೀಡುತ್ತಿಲ್ಲ?. ಈ ಭಾಗದ ಜನರು ಕರ್ನಾಟಕದವರಲ್ಲವೇ? ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

14 ತಿಂಗಳಲ್ಲಿ ಹೊಸ ರಸ್ತೆಯಾಗಲಿ, ನೀರಾವರಿ ಕಾಮಗಾರಿಯಾಗಲಿ, ಹೊಸ ಕಾಲೇಜುಗಳಾಗಲಿ, ವಿವಿಧ ಹುದ್ದೆಗಳ ಭರ್ತಿ ಆಗಲಿ- ಯಾವುದೂ ನಡೆಯುತ್ತಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ವಿಶೇಷ ಕಳಕಳಿ ಇರಲಿ ಕನಿಷ್ಠ ಕಾಳಜಿಯೂ ಇಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರೂ. ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದು ಅದರ ಉದ್ಘಾಟನೆಯೂ ಆಗಿದೆ. ಆದರೆ ಕ್ರಿಯಾ ಯೋಜನೆಯಾಗಿಲ್ಲ, ಅ ಸಂಘಕ್ಕೆ ಯಾವುದೇ ರೂಪುರೇಷೆಯೂ ಇಲ್ಲ. ಹೀಗೆ ಕಾಗದದ ಮೇಲೆ ಯೋಜನೆ ರೂಪಿಸುವುದರಿಂದ ಏನು ಪ್ರಯೋಜನ ಎಂದು ಈಶ್ವರ ಖಂಡ್ರೆ ಅವರು ಪ್ರಶ್ನೆ ಎತ್ತಿದ್ದಾರೆ.

ಗಾಂಜಾ ಕೃಷಿ, ಸಂಗ್ರಹಣೆ: ಆರೋಪಿ ಬಂಧನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಹೊಲದಲ್ಲಿ ಗಾಂಜಾ ಬೆಳೆದು, ನಂತರ ಅದನ್ನು ಸಂಗ್ರಹಿಸಿದ್ದ ಆರೋಪದ ಮೇಲೆ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ವ್ಯಕಿಯೋರ್ವನನ್ನು ಬಂಧಿಸಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದ ಕರೆಗೋರಿ ನಿವಾಸಿ ಶರಣಪ್ಪ ದೇವಿ ಬಂಧಿತನಾಗಿದ್ದು, ಆತನಿಂದ 39 ಸಾವಿರ ರೂ. ಮೌಲ್ಯದ 3 ಕೆಜಿ 905 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ತಾನು ಬೆಳೆದಿದ್ದ  ಗಾಂಜಾ ಒಣಗಿಸುವಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಪರಣ್ಣ ಮುನವಳ್ಳಿ ಅವರಿಂದ ಧ್ವಜಾರೋಹಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗಂಗಾವತಿ: ಶಾಸಕರ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಧ್ವಜಾರೋಹಣ ಮಾಡಿ ಮಾತನಾಡಿದ ಶಾಸಕರ ಪರಣ್ಣ ಮುನವಳ್ಳಿ ಹೈದರಾಬಾದ್ ನಿಜಾಮರ ಆಡಳಿತದಿಂದ ಮುಕ್ತಗೊಂಡ ಪ್ರದೇಶಗಳನ್ನು ಒಗ್ಗೂಡಿಸಲು ಹೋರಾಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುತ್ತಾ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ, ನಗರಸಭೆ ಸದಸ್ಯರಾದ ಉಮೇಶ ಸಿಂಗನಾಳ, ವಾಸುದೇವ ನವಲಿ, ನವೀನ್ ಮಾಲಿಪಾಟೀಲ್, ಜಿಲ್ಲಾ ಎಸ್.ಟಿ ಮೋರ್ಚ ಪ್ರಧಾನ ಕಾರ್ಯದರ್ಶಿ ರಮೇಶ ನಾಯಕ ಹೊಸಮಲ್ಲಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪುಷ್ಪಾಂಜಲಿ ಗುನ್ನಾಳ, ಹಿರಿಯರಾದ ವೀರೇಶ ಬಲಕುಂದಿ, ಟಿ.ಆರ್.ರಾಯಬಾಗಿ ಹಾಗೂ ಎಲ್ಲಾ ಮೋರ್ಚಗಳ ಪದಾಧಿಕಾರಿಗಳು ಮತ್ತು ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸ್ವಾಮಿ ಸಂಶಿಮಠ, ಶ್ರೀನಿವಾಸ ಧೂಳ ಸೇರಿದಂತೆ ಇತರರು ಇದ್ದರು.

ಕೊಪ್ಪಳ; ಕಲ್ಯಾಣ ಕರ್ನಾಟಕ ಉತ್ಸವ-ಸಚಿವ ಬಿ.ಸಿ.ಪಾಟೀಲರಿಂದ ಧ್ವಜಾರೋಹಣ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ 73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಪೋಲಿಸ್ , ಡಿಆರ್, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ , ಸೇವಾದಳದ ತುಕಡಿಗಳು ಭಾಗಿಯಾಗಿ ನಡೆಸಿಕೊಟ್ಟ ಪಥ ಸಂಚಲನ ಆಕರ್ಷಕವಾಗಿತ್ತು.

ಆಸನಗಳು ಖಾಲಿ ಖಾಲಿ….

ಕೊವಿಡ್-19 ಹಿನ್ನೆಲೆಯಲ್ಲಿ ಇನ್ನೂ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಪಾಲ್ಗೊಂಡಿರಲಿಲ್ಲ. ಹಾಗಾಗಿ ಮೈದಾನದ ಸುತ್ತ ಮುತ್ತಲಿನ ಗ್ಯಾಲರಿ ಮತ್ತು ಮುಂಭಾಗದ ಆಸನಗಳು ಬಹುತೇಕ ಖಾಲಿ ಖಾಲಿಯಾಗಿದ್ದವು.

ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಎಸ್ಪಿ ಜಿ.ಸಂಗೀತಾ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.

error: Content is protected !!