ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 55,040 ರೂ. ಇದೆ. ಮುಂಬೈನಲ್ಲಿ ಕನಿಷ್ಠ ೫೧,೪೬೦ ರೂ. ಇದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಡುಗೆ ಸಿಲಿಂಡರ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಕೆಲಕಾಲ ಆತಂಕ ಮನೆಮಾಡಿದ್ದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ 22ನೇ ವಾರ್ಡ್ ನ ರಫೀಕ್ ಬಾಗೇವಾಡಿ ಎನ್ನುವವರ ಮನೆಯಲ್ಲಿ ಸಿಲಿಂಡರ್ ಗೆ ಬೆಂಕಿ ಹತ್ತಿದ ಪರಿಣಾಮ, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಅಧಿಕಾರವಿದ್ದರೆ ಸುಲಭ ನಿಜ. ಹಾಗಂತ ಅಧಿಕಾರವಿಲ್ಲದೆಯೂ ಸಮಾಜ ಸುಧಾರಣೆಯ ಕೆಲಸಗಳನ್ನು ಮಾಡಬಹುದು. ಇಂತಹ ಕೆಲಸಗಳಿಗೆ ಹಣ ಕೊಡಲು ನೂರಾರು ಜನ ಸಿದ್ಧರಿದ್ದಾರೆ. ನಮ್ಮಂತವರು, ದಾನಿಗಳು ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಈಗ ನಾನೂ ಒಂದು ಸೇತುವೆ ತರಹ ಅಷ್ಟೇ’ ಎಂದರು ಬಿಜೆಪಿ ಯುವನಾಯಕ ಅನಿಲ್ ಮೆಣಸಿನಕಾಯಿ.
ಭಾನುವಾರ ನಗರದ ಹೆರಿಗೆ ಆಸ್ಪತ್ರೆಗೆ ಅತ್ಯಾಧುನಿಕ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಸುರಕ್ಷತೆಗೆ ಸ್ಪಂದಿಸಿದ ಅನಿಲ್, ಈ ನಂತರದಲ್ಲಿ ಇನ್ನಷ್ಟು ಉತ್ಸಾಹ ಪಡೆದುಕೊಂಡಿದ್ದಾರೆ. ಒಟ್ಟು ಅವರ ಕನಸು, ಆಶಯ ಮತ್ತು ಯೋಜನೆಗಳ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.
ವಿಜಯಸಾಕ್ಷಿ: ಈ ಬಯೊ-ಪ್ಯೂರಿಫೈಯರ್ ಯಂತ್ರ ನೀಡುವ ಆಲೋಚನೆ ಹೊಳೆದಿದ್ದು ಹೇಗೆ? ಅನಿಲ್: ‘ಮನುಕುಲಕ್ಕಾಗಿ ಭಿಕ್ಷಾಟನೆ’ ಹಮ್ಮಿಕೊಂಡಾಗಲೇ ಕೊರೋನಾ ಕಾರಣಕ್ಕೆ ತೀವ್ರ ಆತಂಕದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ನೆರವಾಗುವ ಯೋಚನೆಯಿತ್ತು. ಬೆಂಗಳೂರಿನ ವೈದ್ಯ ಮಿತ್ರರು ಇಂತಹ ಒಂದು ಸದುಪಯೋಗಿ ಯಂತ್ರ ಆವಿಷ್ಕರಿಸಿದ ಕುರಿತು ಹೇಳಿದರು. ಸೆಪ್ಟೆಂಬರ್ ೧ ರಂದು ಯಂತ್ರ ತಯಾರಿಸಿದ ರೆಡಾರ್ಕ್ ಕಂಪನಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಬಯೊ-ಪ್ಯೂರಿಫೈಯರ್ ಯಂತ್ರವನ್ನು ಉಚಿತವಾಗಿ ನೀಡಿತ್ತು. ಈ ಯಂತ್ರದ ಉಪಯೋಗದ ಕುರಿತಾಗಿ ‘ದಿ ಹಿಂದೂ’ ಪ್ರಕಟಿಸಿದ ವಿವರ ಓದಿದ ನಂತರ ಕೂಡಲೇ ಸಕ್ರಿಯರಾದೆವು. ಇಲ್ಲಾಗಲೇ ವೈದ್ಯ ಸೇರಿದಂತೆ ಇಬ್ಬರು ಆರೋಗ್ಯ ಸಿಬ್ಬಂದಿ ಸೋಂಕಿನ ಕಾರಣಕ್ಕೆ ಮೃತಪಟ್ಟಿದ್ದರು. ಜಿಲ್ಲೆಗೆ ಈ ಯಂತ್ರದ ತುರ್ತು ಅಗತ್ಯವಿದೆ ಎಂದು ಕಂಪನಿ ಜೊತೆ ಮಾತನಾಡಿ ಖರೀದಿಸಿದೆವು.
ವಿಜಯಸಾಕ್ಷಿ: ಇಷ್ಟು ದೊಡ್ಡ ಮೊತ್ತದ ಯಂತ್ರ ಖರೀದಿ ಹೇಗೆ ಸಾಧ್ಯವಾಯಿತು? ಅನಿಲ್: ಇದರಲ್ಲಿ ನಾನು ಸೇತುವೆಯಷ್ಟೇ. ಜಿಲ್ಲೆಯ-ಹಲವಾರು ಸಹೃದಯರು ಧನ ಸಹಾಯ ಮಾಡಿದರು. ಕಾಂತಿಲಾಲ್ ಬನ್ಸಾಲಿ, ಎಂ ಎಂ ಹಿರೇಮಠ, ಸಂಗಮೇಶ ದುಂದೂರ, ಶಂಕ್ರಪ್ಪ ಇಂಡಿ, ಸಿದ್ದು ಪಲ್ಲೇದ, ಜಗನ್ನಾಥಸಾ ಭಾಂಡಗೆ, ಸಂಗಣ್ಣ ಬಂಗಾರಶೆಟ್ಟರ, ಪ್ರಶಾಂತ್ ನಾಯ್ಕರ್, ಮಹೇಶ್ ದಾಸರ, ರವಿ ಸಿದ್ಲಿಂಗ್, ಪ್ರಕಾಶ ಅಂಗಡಿ, ಸತೀಶ ಮುದಗಲ್ಲ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಆನಂದ ಸೇಠ್, ಈಶಣ್ಣ ಸೋಳಂಕಿ, ಈಶಣ್ಣ ಮುನವಳ್ಳಿ, ಮಂಜು ಮ್ಯಾಗೇರಿ, ಭದ್ರೇಶ್ ಕುಸ್ಲಾಪೂರ, ದ್ಯಾಮಣ್ಣ ನೀಲಗುಂದ, ಕಿಷನ್ ಮೆರವಾಡೆ ಹೇಳುತ್ತ ಹೋದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಸಹಕಾರದಿಂದ ಹಣ ಸೇರಿಸಿ ಯಂತ್ರ ಖರೀದಿಸಿದೆವು.
ವಿಜಯಸಾಕ್ಷಿ: ಈ ಯಂತ್ರ ಎಷ್ಟರ ಮಟ್ಟಿಗೆ ಪ್ರಯೋಜನಾಕಾರಿ? ಅನಿಲ್: ಈ ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ವೈರಲ್ ಲೋಡ್ ಒಂದು ಗಂಭೀರ ಸಮಸ್ಯೆಯಾಗಿದೆ. ಗೋಡೆ, ನೆಲ, ಕಾಟ್ ಇತ್ಯಾದಿ ಭೌತಿಕ ವಸ್ತುಗಳನ್ನು ಸ್ಯಾನಿಟೈಸ್ ಮಾಡಬಹುದು. ಆದರೆ ವಾತಾವರಣದಲ್ಲಿರುವ ವೈರಲ್ ಲೋಡ್ ನಿಯಂತ್ರಿಸಲು ಅಸಾಧ್ಯ. ಈ ಯಂತ್ರ ಆರು ವಿಧದಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ವೈರಸ್, ಬ್ಯಾಕ್ಟಿರಿಯಾ, ಫಂಗಸ್‌ಗಳನ್ನು ನಾಶ ಮಾಡಿ ಶುದ್ಧ ಆಮ್ಲಜನಕವನ್ನು ಹೊರಸೂಸುತ್ತದೆ. ಇದರಿಂದ ಐಸಿಯು, ವಾರ್ಡ್, ಆಪರೇಷನ್ ಥಿಯೇಟರ್‌ಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿ ಸೋಂಕಿನ ಆತಂಕವಿಲ್ಲದೇ ಕೆಲಸ ಮಾಡಬಹುದು. ಹಲವಾರು ವೈದ್ಯ ಸಿಬ್ಬಂದಿ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
‘ಸರ್ಕಾರಿ ಶಾಲೆ ದತ್ತು ಪಡೆಯಲಿದ್ದೇವೆ’
ವಿಜಯಸಾಕ್ಷಿ: ಮತ್ತೆ ಮುಂದಿನ ಕಾರ್ಯಕ್ರಮ? ಅನಿಲ್: ಈಗ ತುರ್ತಾಗಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗಾಗಿ ಕೆಲಸ ಮಾಡಲೇಬೇಕಿದೆ. ಶಾಲೆಗಳು ಆರಂಭವಾಗುವ ಮುಂಚೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಸುವ, ಕೊಠಡಿಗಳನ್ನು ಸ್ಯಾನಿಟೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೂ ನೆರವು ನೀಡಲು ಜಿಲ್ಲೆಯಲ್ಲದೇ ಬೆಂಗಳೂರಿನ ಮಿತ್ರರು ಮುಂದೆ ಬಂದಿದ್ದಾರೆ. ಶಾಲೆಗಳನ್ನು ದತ್ತು ಪಡೆಯುವ ವಿಚಾರವೂ ಈಗ ಚರ್ಚೆಯಲ್ಲಿದೆ. ಧನಸಹಾಯ ನೀಡುವವರಿಗೆ ಕೊರತೆಯಿಲ್ಲ, ತಳಮಟ್ಟದಲ್ಲಿ ಯೋಜನೆ ಕಾರ್ಯಗತ ಮಾಡಲು ನಮ್ಮಂತಹ ಯುವಕರ ಅಗತ್ಯವಿದೆ. ನಮ್ಮ ಸರ್ಕಾರಿ ಶಾಲೆಗಳ ವಾತಾವರಣ ಖಾಸಗಿ ಶಾಲೆಗಳ ಮಟ್ಟಕ್ಕೆ ಏರಬೇಕು ಎಂಬುದೇ ನಮ್ಮ ಆಶಯ. ಮನುಕುಲಕ್ಕಾಗಿ ಭಿಕ್ಷೆ ಕಾರ್ಯಕ್ರಮದಲ್ಲಿ ಸಾಕಷ್ಟು ದವಸಧಾನ್ಯ ನೀಡಿದ ನಮ್ಮ ರೈತರ ಮಕ್ಕಳು ಯಾವ ಆತಂಕವೂ ಇಲ್ಲದೇ ಶಾಲೆ ಕಲಿಯುವಂತಾಗಬೇಕು.
ಇನ್ನೊಂದು ಪ್ಯೂರಿಫೈಯರ್ ನೀಡಲು ತಯಾರಿ
ವಿಜಯಸಾಕ್ಷಿ: ಒಂದು ಪ್ಯೂರಿಫೈಯರ್ ಯಂತ್ರ ಸಾಕಾಗುವುದೆ? ಅನಿಲ್: ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈ ಯಂತ್ರದ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುತ್ತಿದೆ. ಆದರೆ ಈಗ ದಾನಿಗಳು ಮುಂದೆ ಬಂದಿದ್ದು ಜಿಮ್ಸ್ ಕೊವಿಡ್ ಐಸಿಯು ವಾರ್ಡಿಗೆ ಇನ್ನೊಂದು ಪ್ಯೂರಿಫೈರ್ ನೀಡಲು ತಯಾರಿ ನಡೆಸಿದ್ದೇವೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ಕಬಂಧಬಾಹು ಕೊಪ್ಪಳ ಜಿಲ್ಲೆಯಲ್ಲೂ ದಿನೇ ದಿನೇ ದೊಡ್ಡದಾಗುತ್ತಲೇ ಇದೆ. ಈಗಾಗಲೇ ವೈರಸ್‍ನ್ನು ನಿಯಂತ್ರಿಸುವ, ಹತೋಟಿಗೆ ತರುವ ಬಗೆ ಮತ್ತು ಕ್ರಮಗಳ ಕುರಿತು ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದೆ. ಆದರೂ ಜನರು ಮನೆಯಿಂದ ಹೊರಬರುವಾಗ ಮಾಸ್ಕ್ ಇಲ್ಲದೇ ರಿಸ್ಕ್ ತೆಗೆದುಕೊಳ್ಳುವುದನ್ನು ಜಿಲ್ಲಾಡಳಿತ ಗಮನಿಸಿದೆ.
ಹಾಗಾಗಿ ಕಳೆದ ಒಂದು ವಾರದಿಂದ ಬುದ್ಧಿ ಕಲಿಯದ ಜನರಿಗೆ ಜಿಲ್ಲಾಡಳಿತ ದಂಡ ಪ್ರಯೋಗಕ್ಕೆ ಮುಂದಾಗಿದೆ. ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುವವರಿಗೆ ಕೊಪ್ಪಳ ಜಿಲ್ಲೆಯಲ್ಲಿ ದಂಡ ಗ್ಯಾರೆಂಟಿ. ಅಷ್ಟೇ ಏಕೆ ಹೊಟೇಲ್, ಪಾರ್ಕ್, ಸಂತೆ, ಮಾರುಕಟ್ಟೆ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಹರಟೆ ಹೊಡೆಯುವವರಿಗೂ ದಂಡ ಕಟ್ಟಿಟ್ಟ ಬುತ್ತಿ.
ಜಿಲ್ಲಾಡಳಿತದ ಈ ದಂಡ ಪ್ರಯೋಗ ಕೆಲ ಪೊಲೀಸರಿಗೆ ದಂಡಿಸುವ ಕ್ರಮವಾಗಿ ಪರಿಣಮಿಸಿದೆ. ಹೀಗೆಂದ ಮಾತ್ರಕ್ಕೆ ಪೊಲೀಸರು ದಂಡದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದರ್ಥವಲ್ಲ. ಕಳೆದ ಸುಮಾರು 6 ತಿಂಗಳಿನಿಂದ ದಬ್ಬಾಳಿಕೆಯಿಂದ ಬಹುತೇಕ ದೂರವಿದ್ದ ಪೊಲೀಸರಿಗೆ ದಂಡ ಪ್ರಯೋಗದ ಕೆಲಸದ ದರ್ಪದ ಅಸ್ತ್ರವಾಗಿರುವುದಂತು ಸತ್ಯ.
ಗಾಡಿ ನಿಲ್ಲಿಸಿ ಕೀ ಕಿತ್ತುಕೊಳ್ಳುತ್ತಾರೆ
ದಂಡ ಪ್ರಯೋಗದ ಕೆಲಸದಲ್ಲಿ ಪೊಲೀಸರ ಜೊತೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಹ ಕೈ ಜೋಡಿಸಿದ್ದಾರೆ. ಕೊಪ್ಪಳದ ಜೆಪಿ ಮಾರುಕಟ್ಟೆ, ಗಂಜ್ ಸರ್ಕಲ್, ಅಶೋಕ ಸರ್ಕಲ್ ಸೇರಿದಂತೆ ಬೆಳಗಿನಿಂದ ಸಂಜೆವರೆಗೆ ಮಾಸ್ಕ್ ಇಲ್ಲದ ಮುಖಗಳ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣು ಬೀಳುತ್ತಲೇ ಇರುತ್ತದೆ. ವಾಹನ ಸವಾರರು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದರೆ ಗಾಡಿಯನ್ನು ಅಡ್ಡಗಟ್ಟುತ್ತಾರೆ. ಜೊತೆಗೆ ಮೊದಲು ವಾಹನದ ಕೀ ಕಿತ್ತುಕೊಳ್ಳುತ್ತಾರೆ. ದಂಡ ಕಟ್ಟಿ ಕೀ ಪಡೆಯಿರಿ, ಇಲ್ಲವೇ ಕ್ವಾರಂಟೈನ್ ಕೇಂದ್ರಕ್ಕೆ ನಡೆಯಿರಿ ಎಂದು ದಬಾಯಿಸುವುದಲ್ಲದೇ ಥೇಟ್ ಜನರನ್ನು ಪಶುಗಳಂತೆ ಕಾಣುತ್ತಾರೆ. ಈ ಸಂಬಂಧ ನಿತ್ಯ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಇದ್ದದ್ದೇ. ಸಾರ್ವಜನಿಕರು ಕಾನೂನು ಪ್ರಕಾರ ಕೀ ಕಿತ್ತುಕೊಳ್ಳುವ ಹಾಗಿಲ್ಲ ಎಂದರೆ ಮಾಸ್ಕ್ ಇಲ್ಲದ್ದಕ್ಕೆ ದಂಡದ ಜೊತೆಗೆ ಮತ್ತೇ ಮತ್ತೊಂದೆರಡು ಮೂರು ಪ್ರಕರಣ ಸೇರಿಸಿ ಜೇಬಿಗೆ ತೂತು ಗ್ಯಾರಂಟಿ. ಇಲ್ಲವಾದರೆ ಹತ್ತಿ ಜೀಪ್, ನಡೆಯಿರಿ ಕ್ವಾರಂಟೈನ್‍ಗೆ ಎಂಬ ದರ್ಪ.
ಕೊವಿಡ್-19 ನಿಯಂತ್ರಣದ ಹೆಸರಿನಲ್ಲಿ ಅಧಿಕಾರಿಗಳ ದರ್ಪ ಬೇಕಿಲ್ಲ. ಹಾಗಂತ ಸಾರ್ವಜನಿಕರು ಸಹ ಜಿಲ್ಲಾಡಳಿತದ ಈ ಕ್ರಮ ಯಾರ ಸಲುವಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಕಾರದ ಸದ್ಯದ ನಿಯಮಾವಳಿ ಪ್ರಕಾರ ಮಾಸ್ಕ್ ಬಳಕೆ ಕಡ್ಡಾಯ. ಎಲ್ಲರೂ ಅದನ್ನು ಪಾಲಿಸಬೇಕು. ಪೊಲೀಸರು ಸಹ ಮನುಷ್ಯರೇ. ಮನುಷ್ಯರ ಜೊತೆ ಮನುಷ್ಯರಂತೆ ವರ್ತಿಸಲಿ ಎಂಬುದಷ್ಟೇ ನಮ್ಮ ಆಶಯ.
ಮಾಸ್ಕ್ ಜೊತೆಗಿತ್ತು. ಮಾರ್ಕೆಟ್‍ಗೆ ಬೈಕ್ ಮೇಲೆ ಹೋಗುವಾಗ ಫೋನ್ ಬಂದಿದ್ದಕ್ಕೆ ಗಾಡಿ ಪಕ್ಕಕ್ಕೆ ನಿಲ್ಲಿಸಿ ಮಾಸ್ಕ್ ತೆಗೆದು ಮಾತನಾಡಿದೆ. ಆನಂತರ ಮಾರುಕಟ್ಟೆಗೆ ಹೋಗಬೇಕಾದ ಜೇಬಿನಲ್ಲಿದ್ದ ಮಾಸ್ಕ್ ಹಾಕುವುದನ್ನು ಮರೆತುಬಿಟ್ಟೆ. ಅದಕ್ಕೆ ದಂಡ ಹಾಕುವುದಾದರೆ ಹಾಕಲಿ. ದಂಡ ಕಟ್ಟಲೂ ಸಿದ್ಧವಿದ್ದರೂ ಏಕಾಏಕಿ ನಾವೇನೋ ಮಹಾಪರಾಧ ಮಾಡಿದ್ದೇವೆಯೇನೋ ಎಂಬಂತೆ ಗಾಡಿ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಜೊತೆಗೆ ದಂಡ ಕಟ್ಟಿದ ಮೇಲೆ ಕೀ ಮರಳಿಸಲು ಪೊಲೀಸರು, ಅಧಿಕಾರಿಗಳು ಸತಾಯಿಸ್ತಾರೆ.
-ಸಿದ್ಧಲಿಂಗೇಶ್, ಕೊಪ್ಪಳ.
ದಂಡ ಹಾಕುತ್ತಿರುವುದು ಜನರು ಮಾಸ್ಕ್ ಹಾಕುವುದನ್ನು ಮರೆಯದಿರಲಿ ಎಂಬುದಕ್ಕೆ. ಆದರೆ ಸಾರ್ವಜನಿಕರ ವಾಹನಗಳ ಕೀ ಕಿತ್ತುಕೊಳ್ಳುವುದು ಸರಿಯಲ್ಲ. ಆ ರೀತಿ ಮಾಡದಿರುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ 15 ರಂದು 39 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
39 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7692 ಕ್ಕೇರಿದೆ. ಮಂಗಳವಾರ 129 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6582 ಜನ ಗುಣಮುಖರಾಗಿದ್ದಾರೆ. 999 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಂಗಳವಾರದ ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 111 ಕ್ಕೇರಿದೆ.
ಗದಗ-12, ಮುಂಡರಗಿ-05, ನರಗುಂದ-05, ರೋಣ-11, ಶಿರಹಟ್ಟಿ-05, ಹೊರ ಜಿಲ್ಲೆಯ 01 ಪ್ರಕರಣ ಸೇರಿದಂತೆ ಒಟ್ಟು 39 ಜನರಿಗೆ ಸೋಂಕು ದೃಢಪಟ್ಟಿದೆ.
ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಜಿಮ್ಸ್, ಭೂಮರೆಡ್ಡಿ ವೃತ್ತ, ಕಳಸಾಪುರ ರಸ್ತೆ, ಶಿವಾನಂದ ನಗರ, ಮುಳಗುಂದ ರಸ್ತೆ,
ಗದಗ ತಾಲೂಕಿನ ಕಳಸಾಪುರ, ಚಿಕ್ಕ ಹಂದಿಗೋಳ, ನಾಗಾವಿ ತಾಂಡೆ, ಹೊಂಬಳ
ಮುಂಡರಗಿ ಪಟ್ಟಣದ ಬಸ ನಿಲ್ದಾಣದ ಹತ್ತಿರ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಹಾರೋಗೆರಿ,
ನರಗುಂದ ತಾಲೂಕಿನ ಸೋಮಾಪುರ, ಕೊಣ್ಣೂರ, ಸುರಕೋಡ,
ರೋಣ ಪಟ್ಟಣದ ವೀರಾಪುರ ಓಣಿ, ವಿವೇಕಾನಂದ ನಗರ, ರೋಣ ತಾಲೂಕಿನ ಅಬ್ಬಿಗೇರಿ, ನರೇಗಲ್, ಇಟಗಿ, ಯಾವಗಲ್, ಸವಡಿ,
ಶಿರಹಟ್ಟಿ ತಾಲೂಕಿನ ಹರಿಪುರ, ಬನ್ನಿಕೊಪ್ಪ, ಲಕ್ಷ್ಮೇಶ್ವರ, ಶಿಗ್ಲಿ,
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಇಲ್ಲಿವರೆಗೆ ಯಾರ ಭಯವೂ ಇಲ್ಲದೇ ಮುಂಜ್‌ಮುಂಜಾನೆಯೇ ಜನನಿಬಿಡ ಪ್ರದೇಶದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಟಗೇರಿ ಪೊಲೀಸರು ಬರೋಬ್ಬರಿ ಲಾಕ್ ಮಾಡಿದ್ದಾರೆ.
ನಗರದ ಬೆಟಗೇರಿಯ ಬಸ್‌ಸ್ಟ್ಯಾಂಡ್ ಹತ್ತಿರದಲ್ಲೇ ಬಹುವರ್ಷಗಳಿಂದ ಮದ್ಯದ ಅಕ್ರಮ ಮಾರಾಟವನ್ನೇ ದಂಧೆ ಮಾಡಿಕೊಂಡು ಬಂದಿದ್ದ ವೆಂಕಟೇಶ ತುಕರಾಮಸಾ ರಾಯಬಾಗಿ 5,330 ರೂ. ಮೌಲ್ಯದ 110 ಮದ್ಯದ ಟೆಟ್ರಾಪ್ಯಾಕ್‌ಗಳೊಂದಿಗೆ ಬೆಟಗೇರಿಯ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾನೆ.
ಪಿಎಸ್‌ಐ ರಾಜೇಶ ಬಟಕುರ್ಕಿ ನೇತೃತ್ವದಲ್ಲಿ ಬೆಟಗೇರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು ಬಂಧಿತ ವೆಂಕಟೇಶನನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ದಂಧೆಯಿಂದಾಗಿ ಮುಂಜಾನೆಯೇ ಇಲ್ಲಿ ಮದ್ಯವ್ಯಸನಿಗಳು ನೆರೆಯುತ್ತಿದ್ದುದರಿಂದ ಇಲ್ಲಿನ ಗೃಹಸ್ಥರು ಮತ್ತು ಮಹಿಳೆಯರಿಗೆ ಇದೊಂದು ತಲೆನೋವಾಗಿತ್ತು.
ಈಗ ಅವರೆಲ್ಲ ನಿರಾಳರಾಗಿದ್ದು ಪಿಎಸ್‌ಐ ಬಟಕುರ್ಕಿ ಮತ್ತು ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಇಂತಹ ಅಕ್ರಮ ದಂಧೆಯಲ್ಲಿ ನಿರತರಾಗಿದ್ದು ಅಂತಹವರಿಗೆ ಪಿಎಸ್‌ಐ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಆಕೆ ನರ್ಸ್. ಅವನು ಆಸ್ಪತ್ರೆಯ ಕ್ಲರ್ಕ್. ಆಕೆಯದ್ದು ತಳಕಲ್ ಆಸ್ಪತ್ರೆಯಲ್ಲಿ ಕೆಲಸ. ಇವನದ್ದು ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ. ಆದರೆ ಇವನು ತಳಕಲ್‌ನಲ್ಲೇ ಮನೆ ಮಾಡಿದ್ದ. ಆಕೆಯ ಮನೆಗೆ ಹತ್ತಿರದಲ್ಲೇ ವಾಸವಾಗಿದ್ದ. ಆಕೆ ಗಂಡ ಮಿಲ್ಟ್ರಿಮ್ಯಾನ್. ಇವನು ಮದುವೆ ಆಗದ ಗುಂಡರಗೋವಿ. ಇಬ್ಬರಿಗೂ ಅದು ಹೇಗೋ ಲವ್ವಿ-ಡವ್ವಿ ಶುರುವಾಗಿದೆಯಂತೆ!
ಸೋಮವಾರ ನರ್ಸ್ ಗಂಡ ಬಹಳ ದಿನಗಳ ನಂತರ ಮನೆಗೆ ಬಂದಿದ್ದಾನೆ. ಆಕೆ ಅವನಿಗೆ ಮನೆಯ ಕಡೆ ಸುಳಿಯಬೇಡ ಎಂದರೂ ಕೇಳದೇ ಎಣ್ಣೆ ಗುಂಗಲ್ಲಿ ರಾತ್ರಿ ಮನೆಗೆ ನುಗ್ಗಿದ್ದಾನೆ. ಆಕೆಯನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಅಷ್ಟೇ ಅಲ್ಲ, ನೇರವಾಗಿ ಗಂಡನಿಗೆ ಫೋನ್ ಮಾಡಿ ತಗಲ್ಹಾಕೊಂಡಿದ್ದಾನೆ.
ವಿಜಯಪುರದಲ್ಲಿದ್ದ ಗಂಡ ರಾತ್ರಿ ಮನೆಗೇ ಬಂದವನೇ ಇವನ ರಾದ್ಧಾಂತ ಕಂಡು ಕೈ-ಕಾಲು ಕಟ್ಟಿ ಬೆಳಗಿನವರೆಗೆ ಥಳಿಸಿದ್ದಾನೆ. ಆನಂತರ ಕುಕನೂರು ಪೊಲೀಸರಿಗೆ ಒಪ್ಪಿಸಿದ್ದಾನೆ. ಈ ಕುರಿತು ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರ: ಡ್ರಗ್ಸ್ ದಂಧೆ ಮತ್ತು ದಗಲ್ಬಾಜಿಯ ಮೇಲೆ ಮುಗಿ ಬಿದ್ದಂತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಗಳವಾರ ಮಾಜಿ ಸಚಿವರ ಪುತ್ರನೊಬ್ಬನ ಬಂಗ್ಲೆ ಮೇಲೆ ದಾಳಿ ನಡೆಸಿದ್ದಾರೆ.
ಮಾಜಿ ಸಚಿವ, ಜನತಾ ಪರಿವಾರದ ನಾಯಕ ದಿ. ಜೀವರಾಜ್ ಆಳ್ವಾರ ಪುತ್ರ ಆದಿತ್ಯ ಆಳ್ವಾರ ಖಾಸಗಿ ಬಂಗ್ಲೆ ಮೇಲೆ ಮಂಗಳವಾರ ಡ್ರಗ್ಸ್ ರೇಡ್ ನಡೆದಿದೆ.
ಕರ್ನಾಟಕ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾದ ಮೇಲೆ ಸಮರ ಸಾರಿದ ನಂತರ, ಆರೋಪಿತರ ಪಟ್ಟಿಯಲ್ಲಿರುವ ಆದಿತ್ಯ ಆಳ್ವಾ ಪರಾರಿಯಾಗಿದ್ದಾರೆ.
ಇಲ್ಲಿವರೆಗೂ ಸಿಸಿಬಿ ಈ ಪ್ರಕರಣದಲ್ಲಿ 15 ಜನರ ಮೇಲೆ ಕೇಸು ದಾಖಲಿಸಿದ್ದು, ಅದರಲ್ಲಿ 9 ಜನರ ಬಂಧನವಾಗಿದೆ. ಸಿಗದೇ ಇರುವ 6 ಜನರಲ್ಲಿ ಆದಿತ್ಯ ಆಳ್ವಾ ಕೂಡ ಒಬ್ಬ. 4 ಎಕರೆ ವಿಸ್ತೀರ್ಣದ ಈ ಬಂಗ್ಲೆ ಆವರಣದಲ್ಲೇ ಆದಿತ್ಯ ರೇವ್ ಪಾರ್ಟಿ ಆಯೋಜಿಸುತ್ತಿದ್ದ ಎಂಬ ಅಪಾದನೆಗಳಿವೆ. ಸಿಸಿಬಿ ಪೊಲೀಸರು ಈ ದಾಳಿಯಲ್ಲಿ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಚಾದಂಗಡಿ ಸಮೀಪಾನೇ ಅಡ್ಡೆ ಹಾಕಿ, ಚಾ ಕುಡಿಯುತ್ತ, ಚೂಡಾ ಮೆಲ್ಲುತ್ತ ಪದ್ದತ್‌ಸರಿ ಅಂದರ್-ಬಾಹರ್ ಆಡುತ್ತಿದ್ದ ಐವರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿ, ಸ್ಟೇಷನ್‌ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.
ಲಕ್ಷ್ಮೇಶ್ವರ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಿಂಗಜ್ಜ ಸುಲ್ತಾನಿಯವರ ಚಾದಂಗಡಿ ಸಮೀಪ ಇಸ್ಪೀಟು ಆಡುತ್ತಿದ್ದ ಐವರಲ್ಲಿ 2ನೇ ಆರೋಪಿ ಮಲ್ಲಿಕಾರ್ಜುನ ಗೌಡ ಪಾಟೀಲ್ ಒಬ್ಬನೇ ಅಮರಾಪುರ ಗ್ರಾಮದವನಾಗಿದ್ದು, ಉಳಿದವರು ಹುಲ್ಲೂರು ಗ್ರಾಮದವರು. ಇವರಿಂದ 2,300 ರೂಪಾಯಿ ವಶಪಡಿಸಿಕೊಂಡು ಕೆಪಿ ಆ್ಯಕ್ಟ್ ಅಡಿ ಕೇಸು ದಾಖಲಿಸಲಾಗಿದೆ.
ಐವರಲ್ಲಿ ಮೂವರು ಚಾಲಕರಾಗಿದ್ದರೆ, ಒಂದನೇ ಆರೋಪಿ ಮತ್ತು ತಂಡದ ಲೀಡರ್ ವೀರಭದ್ರಗೌಡ ಪಾಟೀಲ್ ಕಂಪ್ಯೂಟರ್ ಪ್ರೊಫೆಸನಲ್ ಎಂಬುದು ಕುತೂಹಲದ ವಿಷಯವಾಗಿದೆ. ವೀರಭದ್ರಗೌಡ ಮಲ್ಲಿಕಾರ್ಜುನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಮೌನೇಶಗೌಡ ಪಾಟೀಲ್, ಮೊಹಮ್ಮದಲಿ ಮೌಲಾಸಾಬ್ ಪಾಟೀಲ್, ಷಣ್ಮುಖರೆಡ್ಡಿ ಕಲ್ಲಪ್ಪ ಕೋಳಿವಾಡ, ರಮೇಶ ಶಂಕ್ರಪ್ಪ ಮೂಕಿ ಎಂಬುವವರೇ ಸಿಕ್ಕಿಬಿದ್ದ ಆರೋಪಿಗಳು.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗೋಣಿ ಬಸಪ್ಪನ ಗುಡಿ ಮುಂದ ಕುಂತು ಚಕಾಚಕಾ ಎಲೆ ಒಗೆಯುತ್ತಿದ್ದ ಮತ್ತೊಂದು ಐಪಿಎಲ್( ಇಸ್ಪೀಟ್ ಪ್ಲೇಯಿಂಗ್ ಲೋಕಲ್ಸ್) ತಂಡವನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿ, ಆಟಗಾರ ಮಹಾಶಯರನ್ನು ಸ್ಟೇಷನ್‌ಬೇಲ್ ಬಿಡುಗಡೆ ಮಾಡಿದ್ದಾರೆ.
ಹೊತ್ತುಗೊತ್ತು, ನಿದ್ದಿ-ನೀರಡಿಕೆ ಯಾವುದರ ಪರಿವೆಯೇ ಇಲ್ಲದೆ ಎಲಿ ಎಳೆಯೋದು, ರೊಕ್ಕ ಹಚ್ಚೋದು, ಹಂಗನ ಬೀಡಿನೂ ಹಚ್ಚೋದು. ಆಡಬೇಕಂದ್ರ ಆಡಾಬೇಕು ಅಂತಿದ್ದ ಗದಗ ತಾಲೂಕಿನ ನೀರಲಗಿಯ 11 ಫೇಮಸ್ ಪ್ಲೇಯರ್‌ಗಳ ಅಡ್ಡಾದ ಮೇಲೆ ಪಿಎಸ್‌ಐ ಎಂ.ಜಿ. ಕುಲಕರ್ಣಿಯವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದರು.
‘ಆಟಗಾರರಿಂದ’ 4,450 ರೂ. ವಶಪಡಿಸಿಕೊಂಡು, ಕೆಪಿ ಆ್ಯಕ್ಟ್ 87ರ ಅಡಿ ಕೇಸು ಜಜ್ಜಲಾಗಿದೆ. ಗೋಣಿ ಬಸಪ್ಪನ ಮುಂದನ ಕುಂತ ಆಡಿದ್ರ ಅಂವಾ ಸುಮ್ನ ಬಿಟ್ಟಾನನು? ಶಾಪ ಹಾಕೇ ಬಿಟ್ಟಾನ ಎಂದು ಜನ ಮಾತಾಡುತ್ತಿದ್ದಾರೆ.
ಸಿಕ್ಕಿ ಬಿದ್ದವರ ಪೈಕಿ ಒಬ್ಬಾತ ಪ್ರೈವೇಟ್ ಕಂಪನಿ ನೌಕರನಂತೆ. ಎಲ್ಲ ಆಟಗಾರರು ನೀರಲಗಿಯವರೇ. ‘ಐಪಿಎಲ್’ ಆಟಗಾರರ ಪಟ್ಟಿ 1. ಶಿವನಗೌಡ ನಾಗನಗೌಡ ಹಿರೇಗೌಡ್ರ, 2. ಕಾಶಯ್ಯ ತೋಟಯ್ಯ ಹಿರೇಮಠ, 3. ವೀರನಗೌಡ ಬಸನಗೌಡ ಗೌಡರ್, 4. ಬಸಲಿಂಗಪ್ಪ ಪರಪ್ಪ ಹಾದಿಮನಿ, 5. ಷಣ್ಮುಖಪ್ಪ ಪರಪ್ಪ ಇಬ್ರಾಹಿಂಪುರ, 6. ವಿರುಪಾಕ್ಷಪ್ಪ ಫಕ್ಕೀರಪ್ಪ ನರಗುಂದ, 7. ಬಸವರಾಜ ಶಿವಪ್ಪ ಅಣ್ಣಿಗೇರಿ, 8. ಶಿವಾನಂದಪ್ಪ ಲಕ್ಕಪ್ಪ ವಾಲ್ಮೀಕಿ, 9. ಅಶೋಕ್ ಬಸವಂತಪ್ಪ ಭಾವಿ, 10. ಚಂದ್ರಶೇಖರ್ ನಾಗಪ್ಪ ಮಡಿವಾಳರ್, 11. ಬಸವರಾಜ ಸೋಮಲಿಂಗಪ್ಪ ಬಸಾಪುರ