Home Blog Page 219

KPCL 622 ಹುದ್ದೆಗಳ ಮರುಪರೀಕ್ಷೆ: ತಾತ್ಕಾಲಿಕ ಫಲಿತಾಂಶ ಪ್ರಕಟ!

0

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ಒಟ್ಟು 622 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ಮತ್ತು 28ರಂದು ನಡೆದ ಮರುಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಮರುಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ನಡೆದ ಎಂಟು ದಿನಗಳಲ್ಲೇ ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಜನವರಿ 7ರೊಳಗೆ ಸಲ್ಲಿಸಬಹುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಜೊತೆಗೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕನ್ನಡ ಕಡ್ಡಾಯ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದೂ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ: ರವಿ ಮುಂಡಗೋಡ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದಿನ ದಿನಗಳಲ್ಲಿ ಸಮಾಜದಲ್ಲಿನ ವಿವಿಧ ಹಿಂದೂ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲೆಡೆ ಇಂತಹ ಸಭೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹುಬ್ಬಳ್ಳಿಯ ರವಿ ಮುಂಡಗೋಡ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಹಿಂದೂ ಸಮ್ಮೇಳನದ ಹೋಬಳಿ ವಿಸ್ತೃತ ಬೈಠಕ್ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾಜಮುಖಿ ಕಾರ್ಯಕ್ಕೆ ಸದ್ಭಾವನಾ ಗೋಷ್ಠಿ ನಡೆಸಲಾಗುವದು. ನರೇಗಲ್ಲ ಹೋಬಳಿಯ ವ್ಯಾಪ್ತಿಯಲ್ಲಿ ಈ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಹಿಂದೂ ನಾಗರಿಕತೆ, ಹಿಂದೂ ಸಂಸ್ಕೃತಿಗಳ ಚಿಂತನ-ಮಂಥನಗಳನ್ನು ನಡೆಸುವದು ಇದರ ಉದ್ದೇಶವಾಗಿದೆ. ಜಾತಿ, ಮತ, ಪಂಥಗಳಿಂದ ಒಡೆದು ಹೋದ ಅಖಂಡ ಹಿಂದೂ ಸಮಾಜವನ್ನು ಒಗ್ಗೂಡಿಸುವದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಇತ್ತೀಚಿನ ಕೆಲವೊಂದು ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಿರಂತರ ಮಾರಣಾಂತಿಕ ಹಲ್ಲೆಗಳಾಗುತ್ತಿವೆ. ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಎಲ್ಲದಕ್ಕೂ ಉತ್ತರ ಕೊಡುವದಕ್ಕೆ ಸಂಘಟನೆಯೊಂದೇ ರಾಮಬಾಣ. ಕಳೆದ ನೂರು ವರ್ಷಗಳಿಂದ ನಡೆದು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮಹತ್ವ ಹಾಗೂ ರಾಷ್ಟ್ರೀಯ ಚಿಂತನೆಗಳ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ತಿಳಿಸೋಣ ಎಂದರು.

ಸಭೆಯಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಆನಂದ ಕುಲಕರ್ಣಿ, ರಘುನಾಥ ಕೊಂಡಿ, ಬಸವರಾಜ ವಂಕಲಕುಂಟಿ, ಶಶಿಧರ ಸಂಕನಗೌಡ್ರ, ಉಮೇಶ ಸಂಗನಾಳಮಠ, ಬಾಳಪ್ಪ ಸೋಮಗೊಂಡ, ಶಿವಾನಂದ ಇಟಗಿ, ಕಳಕಪ್ಪ ಪೂಜಾರ, ಮುತ್ತಣ್ಣ ಪಲ್ಲೇದ, ನಾರಾಯಣ ವಡ್ಡಟ್ಟಿ, ಚನಬಸಪ್ಪ ಕುಷ್ಟಗಿ, ಚಂದ್ರಾಮ ಗ್ರಾಮಪುರೋಹಿತ, ಶಿವನಾಗಪ್ಪ ದೊಡ್ಡಮೇಟಿ, ಮಲ್ಲಿಕಾರ್ಜುನ ಹರ್ಲಾಪೂರ, ಪುಂಡಪ್ಪ ಮಡಿವಾಳರ, ಹನಮಂತಗೌಡ ಪಾಟಿಲ, ಜ್ಯೋತಿ ಪಾಯಪ್ಪಗೌಡ್ರ, ಸುರೇಖಾ ರಾಯಬಾಗಿ, ಅರ್ಚನಾ ಕುಲಕರ್ಣಿ, ಜ್ಯೋತಿ ಒಂಕಲಕುಂಟಿ, ಗೀತಾ ಮುಗಳಿ, ಸುಮಾ ಕಲ್ಲೂರ ಸೇರಿದಂತೆ ಹೋಬಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುರೇಶ ರಾಯಬಾಗಿ ಸ್ವಾಗತಿಸಿದರು. ಮಂಜುನಾಥ ಹೆಗಡೆ ನಿರೂಪಿಸಿದರು. ಮೌನೇಶ ಹೊಸಮನಿ ವಂದಿಸಿದರು.

ಅಬಕಾರಿ ಸಿಬ್ಬಂದಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ರೋಣ: ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟಗಳಲ್ಲಿ ಜರುಗಿದ ಭಾರ ಎತ್ತುವ ಸ್ಪರ್ಧೆಯಲ್ಲಿ ರೋಣ ತಾಲೂಕಿನ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಜಯ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರೋಣ ಅಬಕಾರಿ ಉಪ ನಿರೀಕ್ಷಕ ಜಗದೀಶ ಆಲದಕಟ್ಟಿ 108 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ, ದ್ವಿತೀಯ ದರ್ಜೆ ಸಹಾಯಕರು ಹಾಗೂ ತಾಲೂಕಾ ನೌಕರರ ಸಂಘದ ಉಪಾಧ್ಯಕ್ಷ ಭರತಕುಮಾರ ಹಾದಿಮನಿ 56 ಕೆಜಿ ವಿಭಾಗದಲ್ಲಿ ಪ್ರಥಮ ಹಾಗೂ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ ಪೇದೆ ನಿಂಗಪ್ಪ ಶಿರಗುಪ್ಪಿ 86 ಕೆಜಿ ವಿಭಾಗದಲ್ಲಿ ಜಯಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲಾ ಮಟ್ಟದ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ವಿಜೇತ ಕ್ರೀಡಾಳುಗಳನ್ನು ಅಭಿನಂದಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆ ಪ್ರಥಮ: ಹೆಚ್.ಎಂ. ರೇವಣ್ಣ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಗ್ಯಾರಂಟಿ ಯೋಜನೆಗಳು ತಲುಪಬೇಕು. ಧಾರವಾಡ ಜಿಲ್ಲೆಯ ಶೇ. 98ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಹಣವನ್ನು ನೇರವಾಗಿ ತಲುಪಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ರಾಜ್ಯದಲ್ಲೇ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಹೇಳಿದರು.

ಅವರು ಸೋಮವಾರ ಧಾರವಾಡದ ಕೆ.ಸಿ.ಡಿ ಕಾಲೇಜು ಆವರಣದಲ್ಲಿರುವ ಶ್ರೀ ಅಣ್ಣಾಜಿರಾವ ಶಿರೂರ (ಸೃಜನಾ) ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ 60 ಸಾವಿರ ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಹಣವನ್ನು ನಿಮಗೆ ನೀಡುತ್ತಿದ್ದೇವೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಹ ಕಾರ್ಮಿಕ ಇಲಾಖೆಯಿಂದ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಈ ದೇಶವು 145 ಕೋಟಿ ಜನರ ಆಸ್ತಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಬೆಳಗಾವಿ ವಿಭಾಗದಲ್ಲಿ ನಡೆಯುತ್ತಿರುವ ಮೂರನೇ ಕಾರ್ಯಕ್ರಮ ಇದಾಗಿದೆ. ಈಗಾಗಲೇ ಹಾವೇರಿ, ಬೆಳಗಾವಿ ಜಿಲ್ಲೆಯಲ್ಲಿ ಗ್ಯಾರಂಟಿ ಉತ್ಸವವನ್ನು ಯಶಸ್ವಿಯಾಗಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳು ನಾಳಿನ ಭರವಸೆಗೆ ಬೆಳಕಾಗಿವೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪುತ್ತಿವೆ ಎಂದರು.

ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಪ್ರತಿ ಮನೆ ಮನೆಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜನೆ ಮಾಡಿ, ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಕುರಿತು ವಿಶೇಷ ಉಪನ್ಯಾಸದಲ್ಲಿ ಡಾ. ವಾಸು ಎಚ್ ಮಾತನಾಡಿ, 15 ಜಿಲ್ಲೆಗಳಲ್ಲಿ ಗ್ಯಾರಂಟಿ ಕಾರ್ಯಾಗಾರ ಯಶಸ್ವಿಯಾಗಿ ನಡೆದಿದೆ. ಇಂದು ಧಾರವಾಡದಲ್ಲಿ ಬಹಳ ವಿಜೃಂಭಣೆಯಯಿಂದ ಜರುಗುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಸೌಲಭ್ಯ ತಲುಪಿಸುವ ಕಾರ್ಯಕ್ರಮಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಅಜೀಮ್‌ಪೀರ್ ಎಸ್.ಖಾದ್ರಿ, ವಿ.ಪ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಶರೀಫ್ ದೊಡ್ಡಮನಿ ಮತ್ತು ತಂಡದವರು ನಾಡಗೀತೆ ಹಾಡಿದರು. ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸ್ವಾಗತಿಸಿದರು. ಡಾ. ರೇಣುಕಾ ಅಮಲಝರಿ ಕಾರ್ಯಕ್ರಮ ನಿರೂಪಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳನ್ನು 5 ವರ್ಷಗಳ ಕಾಲ ನಿರಂತರವಾಗಿ ನೀಡುತ್ತೇವೆ. ಮಹಿಳೆಯರ ಮನದಾಳ ಮಾತುಗಳಿಂದ ಗ್ಯಾರಂಟಿ ಯೋಜನೆಗಳು ಯಾವ ರೀತಿಯಲ್ಲಿ ತಲುಪುತ್ತಿವೆ ಎಂಬುದನ್ನು ತಿಳಿಯಬಹುದಾಗಿದೆ. ಈ ಹಿಂದೆ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ, ವಿದ್ಯುತ್ ಕಟ್ ಮಾಡುತ್ತಿದ್ದರು. ಆದರೆ ಈಗ ಗೃಹಜ್ಯೋತಿ ಯೋಜನೆಯಿಂದ ಎಲ್ಲರಿಗೂ ಅನುಕೂಲವಾಗಿದೆ. ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರ ಜನರ ಪರವಾಗಿದೆ ಎಂದು ಹೇಳಿದರು.

ಎಲ್‌ಪಿಜಿ ಬಳಸುವಾಗ ಎಚ್ಚರಿಕೆ ವಹಿಸಿ: ಸಚಿವ ಸಂತೋಷ ಲಾಡ್

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇತ್ತೀಚೆಗೆ ಧಾರವಾಡ ಜನ್ನತ ನಗರದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡ ಗಾಯಾಳುಗಳನ್ನು ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ)ಯಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ಸೋರಿಕೆಯಾಗಿ ಮನೆ ತುಂಬಿಕೊಂಡು ಅವಘಡ ಸಂಭವಿಸಿದೆ. ಆಫ್ರಿನ್ ಎಂಬ ಮಹಿಳೆ ಶೇ. 80ರಷ್ಟು ಸುಟ್ಟು ಹೋಗಿದ್ದಾರೆ. ಉಳಿದವರು ಬೆಂಕಿಯಿಂದ ಸುಟ್ಟು ಗಾಯಗೊಂಡಿದ್ದಾರೆ. ಅವರ ಚಿಕಿತ್ಸಾ ಕಾರ್ಯ ಮುಂದುವರೆದಿದೆ. ಚಳಿಗಾಲದಲ್ಲಿ ಅಡುಗೆ ಅನಿಲ ಸೋರಿಕೆ ಆಗುತ್ತಿದೆ. ಕಳೆದ ಬಾರಿ ಸಹ ಇದೇ ರೀತಿಯಾಗಿತ್ತು. ಈ ಬಗ್ಗೆ ಅಧ್ಯಯನ ಮಾಡಬೇಕಿದೆ. ಸಾರ್ವಜನಿಕರು ಅಡುಗೆ ಅನಿಲ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಗಾಯಾಳುಗಳ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಸಚಿವರು ಗಾಯಾಳುಗಳ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಡಿಸಿಪಿ ಮಹಾನಿಂಗ ನಂದಗಾವಿ, ಹುಬ್ಬಳ್ಳಿ ಶಹರ ತಹಸೀಲ್ದಾರರಾದ ಮಹೇಶ ಭಗವಂತ ಗಸ್ತೆ, ಕೆಎಂಸಿಆರ್‌ಐ ವೈದ್ಯರು ಉಪಸ್ಥಿತರಿದ್ದರು.

ಜನಪರವಾದ ಪತ್ರಿಕೆ ಉತ್ತುಂಗಕ್ಕೇರಲಿ: ಶ್ರೀ ಕಲ್ಲಯ್ಯಜ್ಜನವರು

0

ವಿಜಯಸಾಕ್ಷಿ ಸುದ್ದಿ, ಗದಗ: ಕರುನಾಡು ಘರ್ಜನೆ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚುರಪಡಿಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಈ ಪತ್ರಿಕೆಯು ಹಳ್ಳಿಯಿಂದ ದಿಲ್ಲಿಯವರೆಗೂ ಸಾಮಾಜಿಕ, ಧಾರ್ಮಿಕ ಮತ್ತು ಬಡವರ, ರೈತರ, ಶ್ರಮಿಕರ ಪರವಾದ ಜನಪರವಾದ ವಿಚಾರಗಳನ್ನು ಪ್ರಕಟಿಸಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುವಂತಾಗಲಿ ಎಂದು ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿದರು.

ಅವರು ಕರುನಾಡು ಘರ್ಜನೆ ಪತ್ರಿಕೆಯ ವತಿಯಿಂದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಾಶ್ರಮದಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಹಾಗೂ ಕಾಟನ್ ಸೇಲ್ ಸೊಸೈಟಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಗದಗ ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿಗಳಾದ ವಸಂತ ಮಡ್ಲೂರ ಮಾತನಾಡಿ, ಕರುನಾಡು ಘರ್ಜನೆ ಪತ್ರಿಕೆಯು ತನ್ನ ಪ್ರಾಮಾಣಿಕ ಸೇವೆ ಮತ್ತು ಜನಪರವಾದ ಉದ್ದೇಶದಿಂದ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿದೆ. ಈ ಪತ್ರಿಕೆಯು ಸಮಾಜದಲ್ಲಿನ ಅನ್ಯಾಯ, ಅಸಮಾನತೆಯನ್ನು ಎದುರಿಸಲು ಮತ್ತು ಜನರಿಗೆ ಸತ್ಯ ಮತ್ತು ನ್ಯಾಯದ ದಾರಿಯನ್ನು ತೋರಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ಮಾತನಾಡಿ, ಈ ಪತ್ರಿಕೆಯ ಸಂಪಾದಕರಾದ ಶೌಕತ್ ಕಾತರಕಿ ಮತ್ತು ಯಾಸೀನಸಾಬ ಬೋದ್ಲೆಖಾನ್ ಅವರ ನಿರಂತರ ಪ್ರಯತ್ನ ಮತ್ತು ಸಮರ್ಪಣೆಯಿಂದ ಸಮಾಜದಲ್ಲಿನ ಅಂತಿಮ ವ್ಯಕ್ತಿಗೂ ಧ್ವನಿಯಾಗುತ್ತಿದೆ. ಈ ಪತ್ರಿಕೆಯ ಮೂಲಕ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿರುವ ತಂಡದ ಸೇವೆ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಶಿವಾನಂದ ತಮ್ಮನವರ, ಕರೀಮ್ ಸುಣಗಾರ, ಗಣೇಶ ಹುಬ್ಬಳ್ಳಿ, ಪ್ರಕಾಶ್ ಬನ್ನಿಗಿಡದ, ಹನಮಂತಪ್ಪ ರಾಂಪುರ, ಹನುಮಂತ ಪಲದ್ದೊಡಿ, ಕೃಷ್ಣ ಹಡಪದ, ಮೆಹಬೂಬ್ ರೋಣ, ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತರಾದ ಉಡಚಪ್ಪ ಹಳ್ಳಿಕೇರಿ ಮಾತನಾಡಿ, ಕರುನಾಡು ಘರ್ಜನೆ ಪತ್ರಿಕೆಯು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚುರಪಡಿಸುತ್ತಿದೆ ಎಂದ ಅವರು ಕರುನಾಡು ಘರ್ಜನೆ ಪತ್ರಿಕೆಯ ತಂಡಕ್ಕೆ ಶುಭ ಹಾರೈಸಿದರು.

ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನ ಗದಗ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರೋಣ ತಾಲೂಕು ಪಂಚಾಯಿತಿಯ ವ್ಯವಸ್ಥಾಪಕರಾದ ದೇವರಾಜ್ ಸಜ್ಜನಶೆಟ್ಟರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ದೇವರಾಜ್ ಸಜ್ಜನಶೆಟ್ಟರ ಅವರಿಗೆ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಅಮಿತ್ ಬಿದರಿ ಅವರು ಜೊತೆಯಾಗಿದ್ದು, ಇಬ್ಬರೂ ಶ್ರೇಷ್ಠ ಆಟ ಪ್ರದರ್ಶಿಸಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ. ಈ ಸಾಧನೆಯ ಮೂಲಕ ದೇವರಾಜ್ ಸಜ್ಜನಶೆಟ್ಟರ ಅವರು ಆರ್‌ಡಿಪಿಆರ್ (ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್) ಇಲಾಖೆಗೆ ಹಾಗೂ ರೋಣ ತಾಲೂಕು ಪಂಚಾಯಿತಿಗೆ ಕೀರ್ತಿ ತಂದಿದ್ದಾರೆ. ಅವರ ಈ ಯಶಸ್ಸಿಗೆ ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಯುವಕರಿಗಾಗಿ ತಿಳುವಳಿಕೆ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಸೋಲಿಡಾರಿಟಿ ಯೂತ್ ಮೂವಮೆಂಟ್ ಗದಗ ಜಿಲ್ಲಾ ಘಟಕದ ವತಿಯಿಂದ `ಸಬಲ ಯುವಕರು-ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ’ ಎಂಬ ವಿಷಯದ ಕುರಿತು ಗದಗ ನಗರದ ಇಂದಿರಾ ವನದಲ್ಲಿ ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗದಗ ಡಿ.ವೈ.ಎಸ್.ಪಿ ಮಹಾಂತೇಶ್ ಸಜ್ಜನ ಸೈಬರ್ ವಂಚನೆಯ ವಿವಿಧ ವಿಧಾನಗಳನ್ನು ವಿವರಿಸಿ, ಅದರಿಂದ ತಪ್ಪಿಸಿಕೊಳ್ಳುವ ಕುರಿತು ಮಹತ್ವದ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾದ ಖತೀಬ್ ವ ಇಮಾಮ ಜಮಾತ್ ಮಸ್ಜೀದ್ ಗದಗ ಮೌಲಾನಾ ಹುಸೇನ ಅಹ್ಮದ ಬಾಗಲಿ ಮಾದಕ ದ್ರವ್ಯ, ವ್ಯಸನಗಳಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ನಗರಸಭೆ ಸದಸ್ಯ ಜೂನಸಾಬ ನಮಾಜಿ ಉತ್ತಮ ನಾಯಕತ್ವ, ವ್ಯಕ್ತಿತ್ವ ಮತ್ತು ಜೀವನ ಶೈಲಿಯಲ್ಲಿ ಮೌಲ್ಯಾಧಾರಿತ ಬದಲಾವಣೆಯ ಅಗತ್ಯತೆಯನ್ನು ತಿಳಿಸಿದರು.

ಮುಖಂಡರಾದ ಮುನ್ನಾ ರಶ್ಮಿ, ಮುಲ್ಲಾ ಜಿಲ್ಲಾಧ್ಯಕ್ಷ ಮುಹಮ್ಮದ್ ಯೂಸುಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ ಮನ್ನಾನ ಕುರಾನ್ ಪಠಣ ನೆರವೇರಿಸಿದರು. ಹಿದಾಯತ್ & ಜೆ.ಯು ಸ್ಕೂಲ್ ಅಧ್ಯಕ್ಷ ಜುನೆದ್ ಉಮಚಗಿ, ಮಹಮ್ಮದ್ ರಿಯಾಜ್ ಶೇಖ್, ಕಾರ್ಯಕರ್ತರಾದ ಅಬ್ದುಲ್ ಹಫೀಜ್ ಉಮಚಗಿ, ಮುನ್ನಾ ಕಲ್ಮನಿ, ಆಕ್ಟರ್ ಅಲಿ ಆತ್ತಾರ, ಜಹೀರ್ ಅಹ್ಮದ್ ಔಸಂಗವಾಲೆ, ಜಾವೀದ ಉಮಚಗಿ, ಖಾಸಿಂ ದರ್ಗದ್, ಮೆಹಬೂಬ್ ಅಲಿ ರೋಣ, ಮುಹಮ್ಮದ್ ಫಹಿಮ್, ಸಮೀರ್ ಅಕ್ಕಿ, ವಸೀಮ್ ಅಹ್ಮದ್, ಪುರಖಾನ ಉಮಚಗಿ, ಸಾಧಿಕ್ ಧಾರವಾಡ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ 92 ಹೊರಗುತ್ತಿಗೆ ಪೌರಕಾರ್ಮಿಕರನ್ನು, ವಾಹನ ಚಾಲಕರನ್ನು ಖಾಯಂ ಮಾಡುವಂತೆ ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ಗದಗ ಜಿಲ್ಲಾಧ್ಯಕ್ಷ ಗಣೇಶ ವಾಯ್.ಹುಬ್ಬಳ್ಳಿ, ಉಪಾಧ್ಯಕ್ಷ ರಾಜೇಶ ಶೆಟ್ಟರ್ ನೇತೃತ್ವದಲ್ಲಿ ಗದಗ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಗಣೇಶ ಹುಬ್ಬಳ್ಳಿ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 10 ವರ್ಷಗಳಿಂದ ಗದಗ-ಬೆಟಗೇರಿ ನಗರಸಭೆಯಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರಾಗಿ 92 ಜನರು ಸೇರಿದಂತೆ ಕಸ ಸಾಗಾಣಿಕೆಯ ವಾಹನ ಚಾಲಕರಾಗಿ ದುಡಿಯುತ್ತಿದ್ದಾರೆ. ಇವರೆಲ್ಲರೂ ನಗರದ ಸ್ವಚ್ಛತೆಗಾಗಿ ದುಡಿಯುತ್ತಿದ್ದು, ಎಲ್ಲರನ್ನೂ ಮಾನವೀಯತೆ ಮೇಲೆ ರಾಜ್ಯ ಸರ್ಕಾರ ನೇರ ನೇಮಕಾತಿ ಮಾಡಿ ನಮ್ಮ ಜೀವನಕ್ಕೆ ಭದ್ರತೆ ಒದಗಿಸಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಜೈ ಭೀಮ್ ಸಂಘರ್ಷ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಗಣೇಶ ವಾಯ್.ಹುಬ್ಬಳ್ಳಿ, ಉಪಾಧ್ಯಕ್ಷರಾದ ಮಂಜುನಾಥ ಎಫ್.ತೌಜಲ್, ಜೈ ಭೀಮ್ ಸಂಘರ್ಷ ಸಮಿತಿಯ ರೋಣ ತಾಲೂಕಾಧ್ಯಕ್ಷರಾದ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರೀಯ ಜೋಸೆಪ್, ಉಪಾಧ್ಯಕ್ಷ ರಾಜೇಶ ವಿ.ಶೆಟ್ಟರ್, ಯುವ ಘಟಕದ ಜಿಲ್ಲಾಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಸಮೀರ ಅಹ್ಮದ ಕುನ್ನಿಬಾವಿ, ಯುವ ಘಟಕ ಅಧ್ಯಕ್ಷ ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ರಮೇಶ ರಾಲದೊಡ್ಡಿ, ಹೇಮಂತ ಹುಬ್ಬಳ್ಳಿ, ವಿರೂಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ, ಮಲ್ಲೇಶ ಮೇಳದಾಳಮಠ ಉಪಸ್ಥಿತರಿದ್ದರು.

ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ಎಲ್ಲ ರೈತರಿಗೆ ಘೋಷಣೆ ಮಾಡಿರುವ 250 ರೂ. ಪ್ರೋತ್ಸಾಹ ಧನವನ್ನು ಏಜೆಂಟರ ಹಾವಳಿ ತಪ್ಪಿಸಿ ನೇರವಾಗಿ ರೈತರ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಂದು ವಾರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಸೋಮವಾರ ಗದಗನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸುವ ಹಾಗೂ ಖರೀದಿ ಕೇಂದ್ರದಲ್ಲಿ ಆಗಿರುವ ಲೋಪ-ದೋಷಗಳನ್ನು ಸರಿಪಡಿಸುವ ಸಲುವಾಗಿ ಜಿಲ್ಲಾಧಿಕಾರಿಗಳು ಹಾಗೂ ರೈತ ಮುಖಂಡರುಗಳ ಸಭೆ ಉದ್ದೇಶಿಸಿ ಮಾತನಾಡಿದರು.

ಖರೀದಿ ಕೇಂದ್ರಕ್ಕೆ ತರುವ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು. ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆಯಲ್ಲಿ ಅವ್ಯವಹಾರ ಆಗುವ ಆತಂಕ ಇದೆ. ಹಿಂದೆ ಹುಬ್ಬಳ್ಳಿಯಲ್ಲಿ ಈರುಳ್ಳಿ ಖರೀದಿ ಸಂದರ್ಭದಲ್ಲಿ ಅವ್ಯವಹಾರ ಆಗಿತ್ತು. ಗೋವಿನ ಜೋಳ ಖರೀದಿ ಸಂದರ್ಭದಲ್ಲಿಯೂ ಆಗಿತ್ತು. ಸರ್ಕಾರದ ಯೋಜನೆಯ ದುರ್ಲಾಭ ಪಡೆದುಕೊಳ್ಳುವವರೂ ಇರುತ್ತಾರೆ. ಈ ಬಗ್ಗೆ ಎಚ್ಚರ ವಹಿಸಬೇಕು. ಈಗಾಗಲೇ ಏಜೆಂಟರು ಹುಟ್ಟಿಕೊಂಡಿರುತ್ತಾರೆ. ನಿಜವಾದ ರೈತರ ಸಂಪೂರ್ಣ ಮಾಹಿತಿ ಪಡೆದು ಅವರು ಮಾರಿರುವ ಮೆಕ್ಕೆಜೋಳದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ತಾರತಮ್ಯ, ಪಕ್ಷಪಾತ, ರಾಜಕಾರಣ ತರಬಾರದು. ಮೆಕ್ಕೆಜೋಳ ಬೆಳೆದ ರಾಜ್ಯದ ಎಲ್ಲ ರೈತರಿಗೂ ಇದರ ಸದುಪಯೋಗ ತಲುಪಬೇಕು. ಒಂದು ವಾರದಲ್ಲಿ ಸಂಪೂರ್ಣ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಸಿ.ಸಿ. ಪಾಟೀಲ ಮಾತನಾಡಿ, ಅರ್ಹರಿಗೆ ಸರ್ಕಾರದ ನೆರವು ತಲುಪಲಿ, ಈ ಪ್ರಕ್ರಿಯೆ ಅನುಷ್ಠಾನದಲ್ಲಿ ಅಕ್ರಮ ಆಗದಿರಲಿ ಎಂದರು.

ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಸೇರಿದಂತೆ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಲ್‌ಗೆ 1900 ರೂ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 250 ರೂನಂತೆ ಪಾವತಿಸಲಾಗುವುದು. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಅನುಷ್ಠಾನ ಮಾಡಲಾಗುತ್ತದೆ ಎಂದು ವಿವರಿಸಿದರು.

ಕಳೆದ ವರ್ಷ ಮೆಕ್ಕೆಜೋಳಕ್ಕೆ 2 ಸಾವಿರ ರೂ ಮೇಲೆ ದರ ಸಿಗುತ್ತಿತ್ತು. ಈ ವರ್ಷ ದರ ಸಂಪೂರ್ಣ ಕುಸಿದಿದೆ. ರೈತರು ಬಹಳ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗದಗ ಜಿಲ್ಲೆಯ ರೈತರು ವಿಶೇಷವಾಗಿ ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಅಲ್ಲಿಗೆ ಜಿಲ್ಲಾಧಿಕಾರಿಗಳು ಬಂದು ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಿದ್ದಾರೆ. ಸರ್ಕಾರ ಮೊದಲು 10 ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈಗ ಖರೀದಿ ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಒಂದು ಲಕ್ಷ ಟನ್ ಕೂಡ ಖರೀದಿಯಾಗಿಲ್ಲ. ಖರೀದಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ.

ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.

error: Content is protected !!