Home Blog Page 22

ಹಿಂದೂ ಸಮಾವೇಶ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ ಅಸ್ಪೃಶ್ಯತೆ ಹಾಗೂ ಅಸಮಾನತೆಯನ್ನು ಬಲಪಡಿಸುವ ಹುನ್ನಾರ ಹೊಂದಿರುವ ಬಿಜೆಪಿ-ಸಂಘ ಪರಿವಾರ ಪ್ರಾಯೋಜಿತ ಹಿಂದುತ್ವ ಸಮಾವೇಶಕ್ಕೆ ನಾಗರಿಕರು ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಹಾಗೂ ಭಾಗವಹಿಸಬಾರದು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಮನವಿ ಮಾಡಿದೆ.
ನಗರದ ಗಾಂಧಿ ಸರ್ಕಲ್‌ನಲ್ಲಿ ಸಿಪಿಐ(ಎಂ) ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಕನ್ನೇರಿ ಕಾಡುಸಿದ್ದೇಶ್ವರಸ್ವಾಮಿ ನೇತೃತ್ವದಲ್ಲಿ ಶರಣರ ಹೆಸರಿನಲ್ಲಿ ನಡೆಯುತ್ತಿರುವ ಹಿಂದುತ್ವ ಸಮಾವೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ್, ಭಾರತ ದೇಶದ ಸಮಾಜವನ್ನು ಮನುವಾದಿಗಳು ಮೂಲದಲ್ಲೇ ಅಸಮಾನತೆ ಮತ್ತು ಜಾತಿ ಅಸ್ಪೃಶ್ಯತೆಯಿಂದ ಕೂಡಿದ ಸಮಾಜವಾಗಿ ಕಟ್ಟಿಕೊಂಡು ಅದನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು. ಅದರ ವಿರುದ್ಧವಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸೂಫಿ ಸಂತರು ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದಾರೆ ಎಂದರು.
“12ನೇ ಶತಮಾನದ ಶರಣರ ಚಳುವಳಿ ಜಾಗತಿಕವಾಗಿ ಗಮನ ಸೆಳೆದ ಸಮಾನತೆಯ ಹೋರಾಟವಾಗಿದೆ. ಆದರೆ ಅಂದಿನ ಮನುವಾದಿ ಹಾಗೂ ಸನಾತನ ಶಕ್ತಿಗಳು ಶರಣ ಚಳುವಳಿಯನ್ನು ಮಟ್ಟ ಹಾಕಿ ಶರಣರನ್ನು ಕೊಲ್ಲೆ ಮಾಡಿದ್ದವು. ಅದೇ ಸನಾತನವಾದಿ ಶಕ್ತಿಗಳು ಇಂದು ಬಿಜೆಪಿ ಮತ್ತು ಸಂಘ ಪರಿವಾರದ ಹೆಸರಿನಲ್ಲಿ ಸಮಾಜದಲ್ಲಿ ಜಾತಿ ಅಸ್ಪೃಶ್ಯತೆ ಹಾಗೂ ಅಸಮಾನತೆಯನ್ನು ಜೀವಂತವಾಗಿಡಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿವೆ” ಎಂದು ಟೀಕಿಸಿದರು.
“ಲಿಂಗಾಯತ ಸಮುದಾಯದ ಕನ್ನೇರಿ ಕಾಡುಸಿದ್ದೇಶ್ವರಸ್ವಾಮಿಯನ್ನು ಮುಂದಿಟ್ಟುಕೊಂಡು ಶರಣರ ಹೆಸರಿನಲ್ಲಿ ಹಿಂದುತ್ವ ಸಮಾವೇಶ ನಡೆಸಲಾಗುತ್ತಿದೆ. ಸಮಾನತೆ ಮತ್ತು ವಚನ ಚಳುವಳಿಯಲ್ಲಿ ನಂಬಿಕೆ ಇಟ್ಟಿರುವ ಗದುಗಿನ ಜನರು ಇಂತಹ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಬೆಂಬಲ ನೀಡಬಾರದು” ಎಂದು ಅವರು ಕರೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್. ಹಡಪದ, ಕೇಂದ್ರ ಸರ್ಕಾರದ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಹಣದುಬ್ಬರದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
“ಸರ್ಕಾರದ ನೀತಿಗಳ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗುತ್ತಿದ್ದು, ಪ್ರತಿಭಟನೆಗಳೂ ಆರಂಭವಾಗಿವೆ. ಈ ಪ್ರತಿಭಟನಾ ಜ್ವಾಲೆಯನ್ನು ಹತ್ತಿಕ್ಕಲು ಕಾರ್ಪೊರೇಟ್ ಮಾಧ್ಯಮಗಳು ಹಾಗೂ ಬಂಡವಾಳಶಾಹಿ ವ್ಯವಸ್ಥೆ ಕೋಮುವಾದಿ ಶಕ್ತಿಗಳ ಜೊತೆ ಕೈಜೋಡಿಸಿ ಧರ್ಮದ ಹೆಸರಿನಲ್ಲಿ ವಿಭಜನಕಾರಿ ನೀತಿಗಳನ್ನು ಮುನ್ನಲೆಗೆ ತರುತ್ತಿವೆ” ಎಂದು ಆರೋಪಿಸಿದರು.
“ಸರ್ಕಾರ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಜನರು ಧ್ವನಿ ಎತ್ತದಂತೆ ಮಾಡಲು ದೇಶದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿಯೇ ಕರ್ನಾಟಕದಲ್ಲೂ ಹಿಂದುತ್ವ ಹಾಗೂ ಸಂಘ ಪರಿವಾರದ ಶಕ್ತಿಗಳ ಕುತಂತ್ರದಿಂದ ಈ ಸಮಾವೇಶ ಗದಗದಲ್ಲಿ ನಡೆಯುತ್ತಿದೆ” ಎಂದು ಹೇಳಿದರು.
“ಮಾನವೀಯತೆ ಮತ್ತು ಸಮಾನತೆಯಲ್ಲಿ ನಂಬಿಕೆ ಇಟ್ಟಿರುವವರು ಯಾರೂ ಕೂಡ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬಾರದು. ದೇಶದ ಜನತೆ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಗದಗ ಜಿಲ್ಲೆ ಸೌಹಾರ್ದತೆಯ ನಾಡಾಗಿದ್ದು, ತೋಂಟದಾರ್ಯ ಮಠ, ಗವಾಯಿಗಳ ಮಠ, ಡಂಬಳ ಮಠ, ಹಾಲಕೆರೆ ಮಠ ಸೇರಿದಂತೆ ಅನೇಕ ಮಠಗಳು ಶರಣರ ಆಶಯವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
“ಇಂತಹ ಸಂದರ್ಭದಲ್ಲಿ ಹಿಂದುತ್ವದ ಕೋಮುವಾದಿ ಸಮಾವೇಶವನ್ನು ಗದುಗಿನ ಜನತೆ ಒಗ್ಗಟ್ಟಿನಿಂದ ವಿರೋಧಿಸಿ ವಿಫಲಗೊಳಿಸಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಪೀರೂ ರಾಠೋಡ, ಮೈಬು ಹವಾಲ್ದಾರ್, ಬಸವರಾಜ್ ಮಂತೂರ್, ಪಕ್ಷದ ಸದಸ್ಯರಾದ ಚಂದ್ರು ರಾಠೋಡ, ಕನಕರಾಯ ಹಾದಿಮನಿ, ದೇವಪ್ಪ, ಗಣೇಶ ರಾಠೋಡ, ಮರಿಯಮ್ಮ ಮುಳುಗುಂದ, ಮಂಜವ್ವ, ಫಕೀರವ್ವ ಪೂಜಾರ್, ಶಿವಕ್ಕ ಬೆವನಮರದ, ರೇಣುಕಾ ಛಲವಾದಿ, ಸರಸ್ವತಿ ಬಣಕಾರ, ನಾಗರತ್ನ ಸೇರಿದಂತೆ ಹಲವರು ಭಾಗವಹಿಸಿದ್ದರು.
“ಶರಣರ ಸಮಾನತೆಯ ಚಳುವಳಿಯನ್ನು ಸನಾತನ ಶಕ್ತಿಗಳು ಅಂದು ದಮನಿಸಿದ್ದವು. ಅದೇ ಶಕ್ತಿಗಳು ಇಂದು ಬಿಜೆಪಿ ಮತ್ತು ಸಂಘ ಪರಿವಾರದ ರೂಪದಲ್ಲಿ ಸಮಾಜದಲ್ಲಿ ಅಸಮಾನತೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿವೆ.” 
ಯು. ಬಸವರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ
“ಸೌಹಾರ್ದತೆಯ ನೆಲವಾದ ಗದಗದಲ್ಲಿ ಕೋಮುವಾದಿ ಸಮಾವೇಶವನ್ನು ಜನರು ಒಗ್ಗಟ್ಟಿನಿಂದ ವಿರೋಧಿಸಿ ವಿಫಲಗೊಳಿಸಬೇಕು.” 
ಬಾಲು ರಾಠೋಡ, ಜಿಲ್ಲಾ ಕಾರ್ಯದರ್ಶಿ
 
“ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರದ ವಿರುದ್ಧ ಜನರ ಅಸಮಾಧಾನವನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ವಿಭಜನಕಾರಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.”
ಎಂ.ಎಸ್. ಹಡಪದ, ಜಿಲ್ಲಾ ಸಮಿತಿ ಸದಸ್ಯ

ಕರ್ನಾಟಕದಾದ್ಯಂತ ಮೇ 29 ರವರೆಗೆ ಭಾರೀ ಮಳೆ! ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಮೇ 29ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಬೆಂಗಳೂರು ನಗರಕ್ಕೆ ಸಹ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಈ ಮಧ್ಯೆ, ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಭಾರಿ ಗಾಳಿ ಸಹಿತ ಮಳೆಯಿಂದ ಕೃಷಿ ಹಾನಿ ಸಂಭವಿಸಿದೆ. ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರ ಪ್ರಕಾರ, ಒಟ್ಟು 166.4 ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಲ್ಲಿ ಬಹುಪಾಲು ಬಾಳೆ ಮತ್ತು ವೀಳ್ಯದೆಲೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಜೊತೆಗೆ ಕಬ್ಬು ಬೆಳೆಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಸುರಕ್ಷಿತವಾಗಿರಲು ಇಲಾಖೆ ಸೂಚಿಸಿದೆ.

ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ; ಬಿ.ವೈ. ವಿಜಯೇಂದ್ರ ವಾಗ್ದಾಳಿ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗಿದೆ. ಆಳಂದ ಗಲಭೆ ಪ್ರಕರಣವನ್ನು ಕೈಬಿಟ್ಟಿರುವ ನಿರ್ಧಾರವೂ ವೋಟ್ ಬ್ಯಾಂಕ್ ರಾಜಕಾರಣದ ಭಾಗ ಎಂದು ಆರೋಪಿಸಿದ್ದಾರೆ.

ಆನೇಕಲ್‌ನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಫಲವತ್ತಾದ ಜಮೀನನ್ನು ಪಡೆದು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ” ಎಂದು ದೂರಿದ್ದಾರೆ. ವಿಮಾನ ನಿಲ್ದಾಣ ಸಮೀಪ ಸಾಕಷ್ಟು ಜಾಗ ಇದ್ದರೂ ರೈತರ ಭೂಮಿಯನ್ನು ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆ ಮತ್ತು ಎಚ್.ಡಿ. ದೇವೇಗೌಡ ಅವರ ಮರು ಆಯ್ಕೆ ವಿಚಾರದಲ್ಲಿ ಬಿಜೆಪಿಯ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಂತಿಮ ನಿರ್ಧಾರವನ್ನು ಕೇಂದ್ರ ನಾಯಕರು ಕೈಗೊಳ್ಳುತ್ತಾರೆ ಎಂದಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ವಿಚಾರಕ್ಕೂ ಪ್ರತಿಕ್ರಿಯಿಸಿದ ವಿಜಯೇಂದ್ರ, ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯದಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ತಿರುಗೇಟು ನೀಡಿದ್ದಾರೆ.

ಚಿನ್ಮುಲಾದ್ರಿ ಪರ್ವತದಲ್ಲಿ ಅಕ್ರಮ ಗಣಿಗಾರಿಕೆ: ನರಕದಂತಾದ ಗ್ರಾಮಸ್ಥರ ಬದುಕು!

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಅಕ್ರಮ ಮಣ್ಣು ಸಾಗಾಟದಿಂದ ಗ್ರಾಮಸ್ಥರ ಜೀವನ ಅಸ್ತವ್ಯಸ್ತವಾಗಿರುವ ಘಟನೆ ವರದಿಯಾಗಿದೆ.

ಹಗಲು–ರಾತ್ರಿ ನಿರಂತರವಾಗಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದ್ದು, ಧೂಳು ಹಾಗೂ ಶಬ್ದದಿಂದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಚಿನ್ಮುಲಾದ್ರಿ ಪರ್ವತ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆಯಿಂದ ಪ್ರತಿದಿನ ನೂರಾರು ಟ್ರ್ಯಾಕ್ಟರ್‌ಗಳು ಸಂಚರಿಸುತ್ತಿದ್ದು, ಗ್ರಾಮದೊಳಗೆ ಧೂಳು ಮನೆಮಾಡಿದೆ. ಇದರಿಂದ ಮನೆಗಳಲ್ಲಿ ಊಟ, ನಿದ್ರೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಗ್ರಾಮಸ್ಥರು ಟ್ರ್ಯಾಕ್ಟರ್‌ಗಳ ಸಂಚಾರಕ್ಕೆ ಅಡ್ಡಿ ಹಾಕಲು ಯತ್ನಿಸಿದಾಗ ಚಾಲಕರು ಜಗಳಕ್ಕೆ ಇಳಿದು, “ರಸ್ತೆ ತೆರಿಗೆ ಕಟ್ಟುತ್ತೇವೆ” ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಲವಾರು ಬಾರಿ ವಾಗ್ವಾದ ಹಾಗೂ ಗಲಾಟೆಗಳು ನಡೆದಿವೆ.

ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಸಾಗಿಸುವ ವೇಳೆ ಶಬ್ದ ಹೆಚ್ಚಿಸಲು ಟೇಪ್ ರೆಕಾರ್ಡರ್‌ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಧೂಳು ಮನೆಗಳಿಗೆ ನುಗ್ಗಿ ಮಕ್ಕಳು ಹಾಗೂ ಹಿರಿಯರು ಆರೋಗ್ಯ ಸಮಸ್ಯೆಗೆ ಒಳಗಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಕ್ರಮ ಮಣ್ಣು ಗಣಿಗಾರಿಕೆ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲೇ “ಗುಂಡು-ತುಂಡು ಪಾರ್ಟಿ”: ಎಇಇ ಸೇರಿ ಮೂವರು ಅಮಾನತು!

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಆರ್‌ಡಿಪಿಆರ್ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ “ಗುಂಡು-ತುಂಡು ಪಾರ್ಟಿ” ನಡೆಸಿದ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಎಇಇ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿಯಲ್ಲಿ ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್‌ಡಿಎ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಅವರು ಕಚೇರಿಯಲ್ಲೇ ಪಾರ್ಟಿ ನಡೆಸಿದ ಆರೋಪ ಕೇಳಿಬಂದಿತ್ತು. ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ಕಚೇರಿಯಲ್ಲಿ ನಿವೃತ್ತ ನೌಕರರು ಹಾಗೂ ಹೊರಗಿನ ವ್ಯಕ್ತಿಗಳನ್ನು ಕರೆಸಿ ಪಾರ್ಟಿ ನಡೆಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ನಂತರ ಇಲಾಖಾ ವಿಚಾರಣೆ ಬಾಕಿ ಇಟ್ಟು, ಮೂವರನ್ನೂ ಅಮಾನತು ಮಾಡಲಾಗಿದೆ ಎಂದು ಆರ್‌ಡಿಪಿಆರ್ ಇಲಾಖೆ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶಿಸಿದ್ದಾರೆ.

ಮುಂಗಾರು ಪೂರ್ವ ಅಬ್ಬರ: ಕೊಪ್ಪಳ–ಬೀದರ್‌ನಲ್ಲಿ ಸಿಡಿಲು ಸಹಿತ ಭಾರಿ ಮಳೆ

ಕೊಪ್ಪಳ/ಬೀದರ್: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು, ಸಿಡಿಲು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಬೀದರ್ ಜಿಲ್ಲೆಯಲ್ಲಿ ಹುಮ್ನಾಬಾದ್, ಚಿಟ್ಟಗುಪ್ಪ, ಬಸವಕಲ್ಯಾಣ, ಔರಾದ್ ಸೇರಿದಂತೆ ಹಲವು ಭಾಗಗಳಲ್ಲಿ ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಸಿಡಿಲು ಹಾಗೂ ಬಿರುಗಾಳಿಯ ಅಬ್ಬರದಿಂದ ಜನರು ಕೆಲಕಾಲ ಆತಂಕಗೊಂಡರೂ, ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪು ನೀಡಿದೆ.

ಮಳೆಯಿಂದಾಗಿ ಜಿಲ್ಲೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಮುಂಗಾರು ಪೂರ್ವ ಮಳೆಯ ಅಬ್ಬರ ಕಂಡುಬಂದಿದೆ. ಕಾರಟಗಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ತಾತ್ಕಾಲಿಕವಾಗಿ ನೀರಿನಿಂದ ತುಂಬಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ ದಾರುಣ ಘಟನೆ: ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ!

ಬೆಂಗಳೂರು: ಕತ್ತು ಕೊಯ್ದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಶೋಕ್ ನಗರದಲ್ಲಿ ನಡೆದಿದೆ.

ಮೃತನನ್ನು ವಿಲ್ಸನ್ ಗಾರ್ಡನ್ ನಿವಾಸಿ ಗೌತಮ್ (28) ಎಂದು ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ ಅಶೋಕ್ ನಗರದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಗೌತಮ್ ಪುನರ್ವಸತಿ ಕೇಂದ್ರದಿಂದ ವಾಪಸ್ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದು ಕೊಲೆ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದರೂ, ನಂತರದ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂಬುದು ದೃಢಪಟ್ಟಿದೆ.

ಈ ಸಂಬಂಧ ಅಶೋಕ್ ನಗರ ಠಾಣೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಬಿಗ್ ಗಿಫ್ಟ್: ಜೂನ್‌ನಲ್ಲೇ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ!

ಬೆಂಗಳೂರು: 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿಗಳಿಗೆ ಮಹತ್ವದ ಘೋಷಣೆ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಜೂನ್ ತಿಂಗಳಿನಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ತಾತ್ಕಾಲಿಕ ನೇಮಕಾತಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಒಟ್ಟು 51 ಸಾವಿರ ಹುದ್ದೆಗಳಲ್ಲಿ 40 ಸಾವಿರ ಅತಿಥಿ ಶಿಕ್ಷಕರನ್ನು ಪ್ರಾಥಮಿಕ ಶಾಲೆಗಳಿಗೆ ಹಾಗೂ 11 ಸಾವಿರ ಅತಿಥಿ ಶಿಕ್ಷಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಇದೇ ವೇಳೆ, ಜೂನ್ 1ರಂದು ಶಿವಮೊಗ್ಗದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (KPS) ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ 1,000 ಕೆಪಿಎಸ್ ಶಾಲೆಗಳು ಆರಂಭವಾಗಲಿದ್ದು, ಪ್ರತಿ ಶಾಲೆಯ ಅಭಿವೃದ್ಧಿಗೆ 3.5 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ.

ಈ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸುತ್ತಿದ್ದು, ತೆಲಂಗಾಣದಲ್ಲಿ ಸಹ ಇದೇ ರೀತಿಯ ಪಬ್ಲಿಕ್ ಸ್ಕೂಲ್ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಾವು ಕಚ್ಚಿದಾಗ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು? ಸಂಪೂರ್ಣ ಮಾಹಿತಿ ಇಲ್ಲಿದೆ

ದೇಶದಲ್ಲಿ ಬೇಸಿಗೆ ಹಾಗೂ ಮಳೆಗಾಲದ ವೇಳೆ ಹಾವು ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹಾವು ಕಚ್ಚಿದ ತಕ್ಷಣ ಸರಿಯಾದ ಪ್ರಥಮ ಚಿಕಿತ್ಸೆ ದೊರೆಯದ ಕಾರಣ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವೈದ್ಯರ ಪ್ರಕಾರ, ಹಾವು ಕಡಿತವಾದಾಗ ಗಾಬರಿಯಾಗದೇ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಹಾವು ಕಚ್ಚಿದ ಕೂಡಲೇ ವ್ಯಕ್ತಿಯನ್ನು ಶಾಂತವಾಗಿರಿಸುವುದು ಮೊದಲ ಆದ್ಯತೆ. ಆತಂಕದಿಂದ ಹೃದಯಬಡಿತ ಹೆಚ್ಚಾಗಿ, ವಿಷ ದೇಹದಾದ್ಯಂತ ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗಿಯನ್ನು ಧೈರ್ಯವಾಗಿರಿಸಿ, ಚಲನವಲನವನ್ನು ಕಡಿಮೆ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹಾವು ಕಚ್ಚಿದ ಕೈ ಅಥವಾ ಕಾಲನ್ನು ಹೆಚ್ಚು ಆಡಿಸಬಾರದು. ಆ ಭಾಗವನ್ನು ಕೋಲು ಅಥವಾ ಗಟ್ಟಿಯಾದ ವಸ್ತುವಿನ ಸಹಾಯದಿಂದ ಸಡಿಲವಾಗಿ ಕಟ್ಟಿ ಸ್ಥಿರವಾಗಿಡಬೇಕು. ಜೊತೆಗೆ ಕಚ್ಚಿದ ಭಾಗವು ಹೃದಯದ ಮಟ್ಟಕ್ಕಿಂತ ಕೆಳಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವಿಷ ವೇಗವಾಗಿ ಹರಡುವುದನ್ನು ತಡೆಯಬಹುದು.

ಊತ ಬರುವ ಸಾಧ್ಯತೆ ಇರುವುದರಿಂದ ಕೈ ಅಥವಾ ಕಾಲಿನಲ್ಲಿರುವ ಉಂಗುರ, ಬಳೆ, ಗಡಿಯಾರ ಹಾಗೂ ಇತರೆ ಆಭರಣಗಳನ್ನು ತಕ್ಷಣ ತೆಗೆದುಹಾಕಬೇಕು. ಗಾಯದ ಮೇಲಿರುವ ಲಾಲಾರಸವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಸೌಮ್ಯವಾಗಿ ಒರೆಸಬೇಕು. ಆದರೆ ಗಾಯವನ್ನು ಉಜ್ಜಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇನ್ನೊಂದೆಡೆ, ಹಾವು ಕಡಿತವಾದಾಗ ಕೆಲವರು ಮಾಡುವ ತಪ್ಪುಗಳು ಜೀವಕ್ಕೆ ಅಪಾಯಕಾರಿಯಾಗಬಹುದು. ಗಾಯವನ್ನು ಬಾಯಿಯಿಂದ ಹೀರಿ ವಿಷ ತೆಗೆಯಲು ಯತ್ನಿಸುವುದು, ಬ್ಲೇಡ್‌ನಿಂದ ಕತ್ತರಿಸುವುದು ಅಥವಾ ಕೈ-ಕಾಲಿಗೆ ಗಟ್ಟಿಯಾಗಿ ಕಟ್ಟು ಕಟ್ಟುವುದು ಮಾಡಬಾರದು ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದ ರಕ್ತಸಂಚಾರಕ್ಕೆ ತೊಂದರೆ ಉಂಟಾಗಿ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಮಂತ್ರ, ಬೇರು-ಎಲೆಗಳ ಔಷಧಿ ಸೇರಿದಂತೆ ಮೂಢನಂಬಿಕೆಗಳಿಗೆ ಒಳಗಾಗದೆ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಹಿಂದೂಗಳ ಮೇಲಿನ ದಾಳಿ ಕೇಸ್ ವಾಪಸ್ ಯಾಕೆ?: ಸಿ.ಟಿ ರವಿ ಪ್ರಶ್ನೆ

ಚಿಕ್ಕಮಗಳೂರು: ಹಿಂದೂಗಳ ಮೇಲಿನ ದಾಳಿ ಪ್ರಕರಣಗಳನ್ನು ಹಿಂಪಡೆದು ರಾಜ್ಯ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಡ್ಲೆ ಮಶಾಕ್ ದರ್ಗಾ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಘವ ಚೈತನ್ಯ ಬೃಂದಾವನದ ಪೂಜೆಗೆ ಹೋದಾಗ ದಾಳಿ ಮಾಡಲಾಗಿತ್ತು. ಬಂದೋಬಸ್ತ್‌ಗೆ ಇದ್ದ ಪೊಲೀಸರು, ಎಸ್‌ಪಿ ಹಾಗೂ ಸಂಸದ ಖೂಬಾ ಅವರ ಕಾರಿನ ಮೇಲೂ ದಾಳಿ ನಡೆದಿತ್ತು ಎಂದು ಹೇಳಿದರು.

ಇಂತಹ ಪ್ರಕರಣಗಳಲ್ಲಿರುವ ಆರೋಪಿಗಳ ಮೇಲಿನ ಕೇಸ್ ವಾಪಸ್ ಪಡೆಯುವ ಮೂಲಕ ಸರ್ಕಾರ ಏನು ಸಂದೇಶ ಕೊಡುತ್ತಿದೆ? ಎಂದು ಪ್ರಶ್ನಿಸಿದರು.

ನಿಮ್ಮ ಜೊತೆ ನಾವಿದ್ದೇವೆ ಎಂಬ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಮ್ಯುನಲ್ ಮತ್ತು ಕ್ರಿಮಿನಲ್ ಮನೋಭಾವದವರಿಗೆ ರಕ್ಷಣೆ ನೀಡುವ ಕಾಂಗ್ರೆಸ್‌ನ ನೀತಿ ಸಮಾಜಘಾತುಕ ಮತ್ತು ಅಪಾಯಕಾರಿಯಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ, ರೈತರು ಅಥವಾ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ ಎಂದರು.

ಚಳುವಳಿ ಸಂಬಂಧಿತ ಪ್ರಕರಣಗಳನ್ನು ವಾಪಸ್ ಪಡೆಯುವುದು ಬೇರೆ. ಆದರೆ ಬೆಂಕಿ ಹಚ್ಚಿ, ದೊಣ್ಣೆ ಹಿಡಿದು ಹಿಂಸಾಚಾರ ನಡೆಸಿದ ಪ್ರಕರಣಗಳನ್ನು ಹಿಂಪಡೆಯುವುದು ಸಂಪೂರ್ಣ ಬೇರೆ ವಿಚಾರ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.

error: Content is protected !!