Home Blog Page 226

ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೌನಿ ರಾಯ್ ಗ್ಲಾಮರ್ ಶೋ: ವಿಚ್ಛೇದನದ ಬಳಿಕವೂ ಹೈ-ಫ್ಯಾಶನ್

ಫ್ರಾನ್ಸ್: ವೈಯಕ್ತಿಕ ಜೀವನದ ವಿವಾದಗಳ ನಡುವೆಯೂ ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ವೃತ್ತಿಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯಮಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಫ್ರೆಂಚ್ ರಿವೇರಾದಿಂದ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ‘ಕಾನ್ ಮತ್ತು ಗೊಂದಲಗಳು! ಶುಭೋದಯ’ ಎಂಬ ಕ್ಯಾಪ್ಷನ್‌ ಸಹ ಅಭಿಮಾನಿಗಳ ಗಮನ ಸೆಳೆದಿದೆ.

ಕಪ್ಪು ಮತ್ತು ಬಿಳುಪು ಸಂಯೋಜನೆಯ ಹೈ-ಫ್ಯಾಶನ್ ಡ್ರೆಸ್‌ನಲ್ಲಿ ಮೌನಿ ರಾಯ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಕೋಟ್, ಸ್ಟಾಕಿಂಗ್ಸ್ ಮತ್ತು ಬೂಟುಗಳೊಂದಿಗೆ ಸ್ಟೈಲಿಷ್ ಲುಕ್‌ನಲ್ಲಿ ಮಿಂಚಿದ್ದಾರೆ.

‘ಬಾಂಬೆ ಸ್ಟೋರೀಸ್’ ಸಿನಿಮಾದ ಪ್ರದರ್ಶನಕ್ಕಾಗಿ ಅವರು ಸಹ-ನಟಿ ಅನುಪ್ರಿಯಾ ಗೊಯೆಂಕಾ ಜೊತೆ ಕಾನ್‌ಗೆ ತೆರಳಿದ್ದಾರೆ. ಇದು ಕಾನ್ ಫೆಸ್ಟಿವಲ್‌ನಲ್ಲಿ ಅವರ ಎರಡನೇ ಭಾಗವಹಿಸುವಿಕೆ.

ವಿಚ್ಛೇದನದ ಕುರಿತು ಹರಡಿದ್ದ ವದಂತಿಗಳಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದು, ಎಲ್ಲಾ ಸುದ್ದಿಗಳನ್ನು ಸುಳ್ಳು ಎಂದು ಹೇಳಿ, ಯಾವುದೇ ಆರ್ಥಿಕ ವಿವಾದ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ.

“ರೈತರ ಆತಂಕಕ್ಕೆ ಅಂತ್ಯ: ಚಿಕ್ಕಮಗಳೂರಿನಲ್ಲಿ ದೈತ್ಯ ಕಾಡುಕೋಣ ಸೆರೆ

ಚಿಕ್ಕಮಗಳೂರು: ರೈತರಿಗೆ ತೀವ್ರ ಕಾಟ ನೀಡುತ್ತಿದ್ದ ಕಾಡುಕೋಣಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿದ್ದ ‘ಆಪರೇಷನ್ ಕಾಡುಕೋಣ’ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮೂರು ಕಾಡುಕೋಣಗಳ ಪೈಕಿ ಒಂದು ದೈತ್ಯ ಕಾಡುಕೋಣವನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಅರಣ್ಯ ಸಿಬ್ಬಂದಿ ನಡೆಸಿದ ಸಂಘಟಿತ ಕಾರ್ಯಾಚರಣೆ ಬಳಿಕ ಈ ಯಶಸ್ಸು ಸಾಧಿಸಲಾಗಿದ್ದು, ರೈತ ಸಮುದಾಯದಲ್ಲಿ ಆತಂಕದ ವಾತಾವರಣ ಕಡಿಮೆಯಾಗಿದೆ. ಈ ರೀತಿಯ ಕಾರ್ಯಾಚರಣೆ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಸೆರೆ ಸಿಕ್ಕ ಕಾಡುಕೋಣವನ್ನು ತಕ್ಷಣವೇ ಶಿವಮೊಗ್ಗದ ತ್ಯಾವರೆಕೊಪ್ಪ ವನ್ಯಜೀವಿ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ.

ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆ ನಾಶ ಹಾಗೂ ಜನರ ಮೇಲೆ ದಾಳಿ ಭೀತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಘಟನೆ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅರಣ್ಯ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ಆದರೆ ಪರಿಸರವಾದಿಗಳು ಈ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕಾಡುಕೋಣಗಳು ಒತ್ತಡಕ್ಕೆ ಒಳಗಾದರೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ತಾಂತ್ರಿಕ ದೋಷದಿಂದ ಲಿಫ್ಟ್ ಲಾಕ್! ವಿಶಾಲ್ ಮಾರ್ಟ್‌ನಲ್ಲಿ 9 ಜನರ ರೋಚಕ ರೆಸ್ಕ್ಯೂ ಆಪರೇಷನ್

ಶಿವಮೊಗ್ಗ: ನಗರದ ವಿಶಾಲ್ ಮಾರ್ಟ್ ಕಟ್ಟಡದಲ್ಲಿ ಲಿಫ್ಟ್ ಹಠಾತ್ ಸ್ಥಗಿತಗೊಂಡ ಪರಿಣಾಮ 9 ಮಂದಿ ಗ್ರಾಹಕರು ಒಂದು ಗಂಟೆಗೂ ಹೆಚ್ಚು ಕಾಲ ಒಳಗೆ ಸಿಲುಕಿದ ಘಟನೆ ನಡೆದಿದೆ. ಅಗ್ನಿಶಾಮಕ ದಳದ ತ್ವರಿತ ಕ್ರಮದಿಂದ ಎಲ್ಲರೂ ಸುರಕ್ಷಿತವಾಗಿ ರಕ್ಷಿತರಾಗಿದ್ದಾರೆ.

ತಾಂತ್ರಿಕ ದೋಷದಿಂದ ಲಿಫ್ಟ್ ಮೊದಲ ಮಹಡಿಯಲ್ಲಿ ನಿಂತು ಹೋಗಿದ್ದು, ಒಳಗೆ ಭರತ್, ಅನುಷಾ, ಅನೀಸ್ ಫಾತಿಮಾ, ಮುಸರತ್, ಸೂಬಿಯಾ ಸೇರಿದಂತೆ ಒಟ್ಟು 9 ಮಂದಿ ಸಿಲುಕಿದ್ದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರು ಲಿಫ್ಟ್‌ನಲ್ಲೇ ಸಿಲುಕಿಕೊಂಡಿದ್ದರು.

ಘಟನೆಯ ವೇಳೆ ಕೆಲವರು ಭಯಭೀತರಾಗಿ ಕೂಗಾಡಿದ್ದು, ಮಹಿಳೆಯೊಬ್ಬರ ಆರೋಗ್ಯಕ್ಕೂ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ತಂಡ ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಲಿಫ್ಟ್ ತೆರೆಯುವ ಕಾರ್ಯಾಚರಣೆ ನಡೆಸಿದೆ. ನಂತರ ಒಳಗಿದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆ ಹಾಗೂ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಖ್ರಿ ಸವಾಲ್’ ಸಿನಿಮಾ ವೀಕ್ಷಕರಿಗೆ ಬಂಪರ್ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಫ್ರೀ

ಮುಂಬೈ: ಭಾರೀ ಚರ್ಚೆಗೆ ಕಾರಣವಾಗಿರುವ ಬಾಲಿವುಡ್ ಸಿನಿಮಾ ‘ಆಖ್ರಿ ಸವಾಲ್’ ಇದೀಗ ಪ್ರೇಕ್ಷಕರನ್ನು ಸೆಳೆಯಲು ವಿಶೇಷ ತಂತ್ರ ಅನುಸರಿಸಿದೆ. ಚಿತ್ರತಂಡ ‘ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ’ ಆಫರ್ ಘೋಷಿಸಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರದ ನಿರ್ಮಾಪಕ ನಿಖಿಲ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, AAKHRISAWAL ಪ್ರೋಮೋ ಕೋಡ್ ಬಳಸಿ ಟಿಕೆಟ್ ಬುಕ್ ಮಾಡಿದರೆ Buy 1 Get 1 Free ಆಫರ್ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಹಿನ್ನೆಲೆ, ರಾಜಕೀಯ ಟಚ್ ಮತ್ತು ತನಿಖಾ ಶೈಲಿಯ ಕಥಾಹಂದರದಿಂದ ಸಿನಿಮಾ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿಮಾ ಪರ-ವಿರೋಧ ಚರ್ಚೆಗಳು ಜೋರಾಗಿದ್ದವು.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರೀಮಿಯರ್ ಶೋಗೆ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಿದ್ದು, ರಾಷ್ಟ್ರಪತಿ ಭವನದಲ್ಲೂ ಸಿನಿಮಾ ಪ್ರದರ್ಶನಗೊಂಡಿದೆ ಎಂಬ ಮಾಹಿತಿ ಹೊರಬಂದಿದೆ.

ಆದರೆ ಚಿತ್ರದ ವಿರುದ್ಧ ವಿವಾದವೂ ಮುಂದುವರಿದಿದೆ. ಯುಎಇ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಆದರೆ ಮೂಲ ಕಥೆಗೆ ಧಕ್ಕೆಯಾಗುತ್ತದೆ ಎಂದು ನಿರ್ಮಾಪಕರು ಬದಲಾವಣೆ ಮಾಡಲು ನಿರಾಕರಿಸಿದ ಹಿನ್ನೆಲೆ ಯುಎಇನಲ್ಲಿ ಚಿತ್ರ ಬಿಡುಗಡೆ ಸ್ಥಗಿತಗೊಂಡಿದೆ.

ಚಿತ್ರದ ಕೆಲವು ಅಂಶಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದು, ಸಿನಿಮಾ ಸದ್ಯ ಬಾಕ್ಸ್ ಆಫೀಸ್ ಜೊತೆಗೆ ರಾಜಕೀಯ ವಲಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದೆ.

ಋಷಿಕೇಶದ ಬಳಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್ ಪ್ರೆಸ್: ತಪ್ಪಿದ ಭಾರೀ ದುರಂತ

ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶದ ಖಾಂಡ್ ಗಾಂವ್ ಪ್ರದೇಶದಲ್ಲಿರುವ ಯೋಗ ನಗರಿ ರೈಲು ನಿಲ್ದಾಣದ ಸಮೀಪ ಸೋಮವಾರ ರಾತ್ರಿ ಉಜ್ಜಿಯಿನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಭಾರೀ ದುರಂತ ತಪ್ಪಿದೆ.

ಸೋಮವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರೈಲು ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಈ ವೇಳೆ ಬ್ರೇಕ್ ವೈಫಲ್ಯ ಸಂಭವಿಸಿದ ಪರಿಣಾಮ ಬೋಗಿಗಳು ಹಳಿತಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ರೈಲು ತೆರವು ಕಾರ್ಯಾಚರಣೆ ಆರಂಭಿಸಿದರು.

ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದ್ದು, ತಾಂತ್ರಿಕ ದೋಷವೋ ಅಥವಾ ನಿರ್ವಹಣಾ ಲೋಪವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಳಿತಪ್ಪಿದ ಬೋಗಿಗಳನ್ನು ಮರುಹಳಿಗೆ ಏರಿಸುವ ಕಾರ್ಯಾಚರಣೆ ಮುಂದುವರಿದಿದ್ದು, ರೈಲು ಸಂಚಾರದ ಮೇಲೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆ ಬಲಿ ಪಡೆದ ದುಬಾರೆ ಕಾದಾಟ; ಚಿಕಿತ್ಸೆ ಫಲಿಸದೆ ‘ಮಾರ್ಥಾಂಡ’ ಆನೆ ಕೂಡ ಸಾವು

0

ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ನಡೆದಿದ್ದ ಆನೆಗಳ ಕಾದಾಟ ಭೀಕರ ದುರಂತಕ್ಕೆ ತಿರುಗಿದೆ. ಕಾದಾಟದ ವೇಳೆ ಚೆನ್ನೈ ಮೂಲದ ಮಹಿಳೆ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಇಂದು ಸಾವನ್ನಪ್ಪಿದೆ.

ನಿನ್ನೆ ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಕರೆತರಲಾಗಿದ್ದ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಏಕಾಏಕಿ ಕಾದಾಟ ಆರಂಭವಾಗಿತ್ತು. ಕಂಜನ್ ಆನೆ ದಂತದಿಂದ ತಿವಿದ ಪರಿಣಾಮ ಮಾರ್ತಾಂಡ ನೆಲಕ್ಕುರುಳಿತ್ತು. ಮಾವುತರು ನಿಯಂತ್ರಿಸಲು ಹರಸಾಹಸ ಪಟ್ಟರೂ ಕಂಜನ್ ಆನೆ ಮದವೇರಿದಂತೆ ವರ್ತಿಸುತ್ತಿತ್ತು.

ಈ ವೇಳೆ ಆನೆಗಳ ನಡುವೆ ಸಿಲುಕಿದ್ದ ಚೆನ್ನೈ ಮೂಲದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ವೇಳೆ ಮಹಿಳೆಯ ಪತಿ ಹಾಗೂ ಮಗು ಅದೃಷ್ಟವಶಾತ್ ಪಾರಾಗಿದ್ದರು.

ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಶಿಬಿರದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರು ಕನಿಷ್ಠ 100 ಅಡಿ ದೂರದಿಂದಲೇ ಆನೆಗಳನ್ನು ವೀಕ್ಷಿಸಬೇಕು ಎಂದು ಆದೇಶಿಸಲಾಗಿದೆ.

ಆನೆಗಳ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು, ಮೈತೊಳೆಯುವುದು, ಆಹಾರ ನೀಡುವುದು ಸೇರಿದಂತೆ ಯಾವುದೇ ನೇರ ಸಂಪರ್ಕಕ್ಕೂ ಅವಕಾಶ ಇರಬಾರದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ನಾಯಿ ಕಡಿತ ನಿರ್ಲಕ್ಷ್ಯ ಬೇಡ: ಬೀದಿ ನಾಯಿಗಳ ತೆರವಿಗೆ ಸುಪ್ರೀಂ ಕೋರ್ಟ್ ಖಡಕ್ ಆದೇಶ

ನವದೆಹಲಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ತನ್ನ ಮಹತ್ವದ ಆದೇಶವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಕುರಿತು 2025ರ ನವೆಂಬರ್‌ನಲ್ಲಿ ನೀಡಿದ್ದ ಆದೇಶವನ್ನು ತಿದ್ದುಪಡಿ ಮಾಡಬೇಕು ಎಂದು ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸಭ್ಯ ಪೀಠ, ಹಿಂದಿನ ತೀರ್ಪು ಸಾರ್ವಜನಿಕ ಹಿತದೃಷ್ಟಿಯಿಂದ ನೀಡಲಾಗಿದ್ದು ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಅವುಗಳಿಗೆ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡಬೇಕು. ಬಳಿಕ ಅವುಗಳನ್ನು ಹಿಂದಿನ ಸ್ಥಳಗಳಿಗೆ ಮರುಬಿಡಬಾರದು ಎಂದು ಸೂಚಿಸಿತ್ತು.

ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಶ್ವಾನಪ್ರಿಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. ಬೀದಿ ನಾಯಿಗಳನ್ನು ಸ್ಥಳಾಂತರಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು ಹಾಗೂ ದಾಳಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದರು.

ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಅತಿಯಾದ ಹಾಜರಾತಿ ಆತಂಕಕಾರಿ ಎಂದು ಅಭಿಪ್ರಾಯಪಟ್ಟಿತು.

“ಪ್ರಾಣಿಗಳು ಹಾಗೂ ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಅನೇಕ ಪ್ರಕರಣಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಇದೇ ವೇಳೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹೊರಡಿಸಿದ್ದ ಮಾನದಂಡ ಕಾರ್ಯಾಚರಣಾ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಹಿಂದಿನ ಆದೇಶವನ್ನು ಹಿಂಪಡೆಯುವಂತೆ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಆದರೆ ಅವುಗಳಲ್ಲಿ ತೀರ್ಪು ಬದಲಿಸುವಂತಹ ಯಾವುದೇ ಸಮರ್ಥ ಕಾರಣ ಕಂಡುಬಂದಿಲ್ಲ ಎಂದು ಪೀಠ ತಿಳಿಸಿದೆ.

ರಾಜ್ಯ ಸರ್ಕಾರಗಳ ಕಾರ್ಯವೈಖರಿಯ ಮೇಲೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯಗಳು ವಿಫಲವಾಗಿವೆ ಎಂದು ಟೀಕಿಸಿದೆ.

ಪ್ರಾಣಿ ಜನನ ನಿಯಂತ್ರಣ ಹಾಗೂ ರೇಬಿಸ್ ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:

  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು AWBI ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  • ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪ್ರಾಣಿ ಜನನ ನಿಯಂತ್ರಣ ಕೇಂದ್ರ ಸ್ಥಾಪಿಸಬೇಕು.
  • ರೇಬೀಸ್ ವಿರೋಧಿ ಲಸಿಕೆಗಳು ಹಾಗೂ ಇಮ್ಯುನೊಗ್ಲಾಬ್ಯುಲಿನ್‌ಗಳ ಸಮರ್ಪಕ ಲಭ್ಯತೆ ಖಚಿತಪಡಿಸಬೇಕು.
  • ಈ ಕಾರ್ಯಾಚರಣೆಗೆ ನಿಯೋಜಿಸಲಾದ ಅಧಿಕಾರಿಗಳಿಗೆ ಕಾನೂನು ರಕ್ಷಣೆ ಒದಗಿಸಬೇಕು.

ಅಂತಹ ಅಧಿಕಾರಿಗಳ ವಿರುದ್ಧ ಅನಗತ್ಯ ಎಫ್‌ಐಆರ್ ಅಥವಾ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಕಳೆದ ವರ್ಷ ನೀಡಿದ್ದ ಆದೇಶದಲ್ಲಿ ಆಸ್ಪತ್ರೆಗಳು, ಉದ್ಯಾನವನಗಳು, ರೈಲು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಇದೀಗ ಆ ಆದೇಶವನ್ನು ಮತ್ತೊಮ್ಮೆ ದೃಢಪಡಿಸಿದೆ.

“ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ಅನುದಾನ ಎಲ್ಲಿದೆ?”: ದಲಿತ ಸಂಘಟನೆಗಳ ಆಕ್ರೋಶ

ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ದಲಿತ ಸಂಘಟನೆಗಳು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಹಲವು ವರ್ಷಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ಸಂಘಟನೆಗಳು, ಅಂಬೇಡ್ಕರ್ ಜಯಂತಿಗೆ ಎರಡು ವಾರಗಳ ಮುಂಚಿತವಾಗಿ ನಡೆದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.

ಪಟ್ಟಣದ ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿ ಹಾಲಿ ಶಾಸಕ ಕೆ. ನೇಮಿರಾಜ್ ನಾಯ್ಕ್ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, “ನಿಜವಾಗಿಯೂ 50 ಲಕ್ಷ ರೂ. ಅನುದಾನ ಮಂಜೂರಾಗಿದೆಯೇ?, ಯಾವ ಇಲಾಖೆಯಡಿ ಕಾಮಗಾರಿ ನಡೆಯುತ್ತಿದೆ?, ಟೆಂಡರ್ ಪ್ರಕ್ರಿಯೆ ನಡೆದಿದೆಯೇ?, ಟೆಂಡರ್ ಪ್ರತಿಯನ್ನು ಕೇಳಿದಾಗ ಯಾಕೆ ನೀಡಲಾಗುತ್ತಿಲ್ಲ?, ಕಾಮಗಾರಿ ಸ್ಥಳದಲ್ಲಿ ಇಲಾಖೆಯ ನಾಮಫಲಕ ಯಾಕಿಲ್ಲ?” ಎಂದು ದಲಿತ ಸಂಘಟನೆಗಳು ಪ್ರಶ್ನೆಗಳ ಸುರಿಮಳೆಗೈದಿವೆ.

ಇದೇ ವೇಳೆ, “20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಲಾಭ ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ಯಾಕೆ ಕಾಯಬೇಕಾಯಿತು?” ಎಂದು ಸಾರ್ವಜನಿಕ ವಲಯದಲ್ಲೂ ಚರ್ಚೆ ಜೋರಾಗಿದೆ.

ಪ್ರತಿಭಟನಾಕಾರರು ಮಾತನಾಡಿ, “ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳದೇ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಾರ್ಯರೂಪಕ್ಕೆ ತರುವುದೇ ಅವರಿಗೆ ಸಲ್ಲುವ ನಿಜವಾದ ಗೌರವ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಪದಾಧಿಕಾರಿಗಳು ಹಾಗೂ ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪರಶುರಾಮ್ ಹೆಗ್ಡಳ್ ಸೇರಿದಂತೆ ಮರಿಯಪ್ಪ ದಸಮಾಪುರ, ರಾಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಮತ್ತಿತರರು ಉಪಸ್ಥಿತರಿದ್ದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: RCC ಕೋಚಿಂಗ್ ಸೆಂಟರ್ ಮಾಲೀಕ ಅರೆಸ್ಟ್!

ಮುಂಬೈ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್‌ನ ಖಾಸಗಿ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಲಾತೂರ್‌ನಲ್ಲಿರುವ ರೇಣುಕೈ ರಸಾಯನಶಾಸ್ತ್ರ ತರಗತಿಗಳ ಸಂಸ್ಥಾಪಕರಾದ ಶಿವರಾಜ್ ಮೋಟೆಗಾಂವ್ಕರ್ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಭಾನುವಾರ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆ ವೇಳೆ ಅವರ ಮೊಬೈಲ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪತ್ತೆಯಾದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಪ್ರಕಾರ, ಮೋಟೆಗಾಂವ್ಕರ್ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರಸರಣದಲ್ಲಿ ತೊಡಗಿದ್ದ ಸಂಘಟಿತ ಜಾಲದ ಸಕ್ರಿಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳೊಂದಿಗೆ ಸೇರಿ 2026ರ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಏಪ್ರಿಲ್ 23ರಂದು ಪರೀಕ್ಷೆಗೆ ಮುನ್ನವೇ ಪಡೆದು ಹಲವು ಮಂದಿಗೆ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ.

ಶಿವರಾಜ್ ರಘುನಾಥ್ ನಡೆಸುತ್ತಿದ್ದ ತರಬೇತಿ ಕೇಂದ್ರವು ಲಾತೂರ್‌ನ ಮುಖ್ಯ ಶಾಖೆಯೊಂದಿಗೆ ಒಟ್ಟು ಒಂಬತ್ತು ಶಾಖೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದೆ. ಪ್ರಕರಣದಲ್ಲಿ ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಹಾಗೂ ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.

ಶಿವರಾಜ್ ಬಂಧನಕ್ಕೂ ಮುನ್ನ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಮನೀಶಾ ಮಾಂಧರೆ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಈ ಇಬ್ಬರೂ ಮನೀಶಾ ವಾಘ್ಮಾರೆ ಎಂಬ ಮಹಿಳೆಯ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೀಶಾ ವಾಘ್ಮಾರೆ ಕೂಡ ಸಿಬಿಐ ವಶದಲ್ಲಿದ್ದಾರೆ.

“‘ಖುಷಿಯಾಗಿ ಬದುಕಿದ್ರೆ ದೇವರ ಕಣ್ಣು ಬೀಳುತ್ತೆ’ – ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಭಾವುಕ

ಬೆಂಗಳೂರು: ದಿವಂಗತ ನಟ ದಿಲೀಪ್ ರಾಜ್ ಅಗಲಿಕೆಯ ನೋವು ಅವರ ಕುಟುಂಬವನ್ನು ಇನ್ನೂ ಕಾಡುತ್ತಿದೆ. ಪತಿಯ ನೆನಪಿನಲ್ಲಿ ದಿನ ಕಳೆಯುತ್ತಿರುವ ಪತ್ನಿ ಶ್ರೀವಿದ್ಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮತ್ತೊಂದು ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.

25 ವರ್ಷಗಳ ಕಾಲ ಜೊತೆಯಾಗಿ ಬದುಕಿದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ದಂಪತಿ ಕಿರುತೆರೆ ಲೋಕದ ಆದರ್ಶ ಜೋಡಿಯಾಗಿದ್ದರು. ಪತಿಯ ಅಗಲಿಕೆಯ ಬಳಿಕ ಒಂದರ ಹಿಂದೆ ಒಂದರಂತೆ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಶ್ರೀವಿದ್ಯಾ, ಈ ಬಾರಿ ತಮ್ಮ ಮನದಾಳದ ನೋವನ್ನು ದೇವರನ್ನೇ ಪ್ರಶ್ನಿಸುವ ರೀತಿಯಲ್ಲಿ ಹೊರಹಾಕಿದ್ದಾರೆ.

“ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು. ಯಾಕೆಂದರೆ ದೇವರಿದ್ದಾನೆ. ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೋ, ಯಾರು ಖುಷಿಯಾಗಿ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಕಣ್ಣು ಇರುತ್ತದೆ” ಎಂದು ಅವರು ಬರೆದಿದ್ದಾರೆ.

ಈ ಪೋಸ್ಟ್ ನೋಡಿದ ಅಭಿಮಾನಿಗಳು ಭಾವುಕರಾಗಿದ್ದು, ಶ್ರೀವಿದ್ಯಾಗೆ ಸಾಂತ್ವನ ಹೇಳುತ್ತಿದ್ದಾರೆ. ಕೆಲವರು “ದಿಲೀಪ್ ರಾಜ್ ಅವರನ್ನು ಯಾರೂ ಮರೆತೇ ಮರೆತಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದೇ ವೇಳೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ದಿಲೀಪ್ ರಾಜ್ ಅಭಿನಯದ ವಿಡಿಯೋ ಹಂಚಿಕೊಂಡಿರುವ ಶ್ರೀವಿದ್ಯಾ, ಪತಿಯ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಅವರ ನಗು ಮತ್ತು ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಭಿಮಾನಿಗಳು ಮತ್ತೆ ಕಣ್ಣೀರಾಗಿದ್ದಾರೆ.