ಲಕ್ಷ್ಮೇಶ್ವರ: ಎಸ್‌ಟಿಪಿಎಮ್‌ಬಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕರಾದ ಪ್ರಭುಗೌಡ ಎಕಿಕೊಪ್ಪ, ಸ್ವಾತಿ ಪೈ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಳೆ ವಿವರ ದಾಖಲಿಸಿ: ಶಿವಕುಮಾರ ಕಾಶಪ್ಪನವರ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:2025-26ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದೆ. ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್‌ನಿಂದ `ಹಿಂಗಾರು ರೈತರ ಬೆಳೆ ಸಮೀಕ್ಷೆ 2025’ನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕು.
ಇದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಯೋಜನೆ, ಬೆಳೆನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ಈ ಯೋಜನೆಗಳ ಲಾಭದಿಂದ ವಂಚಿತರಾಗಬೇಕಾಗುತ್ತದೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ಭಾಗದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಅಥವಾ ಸಹಾಯವಾಣಿ ಸಂಖ್ಯೆ: 1800 3553ಗೆ ಕರೆ ಮಾಡಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದುವೆಗೆ ಒಪ್ಪದ ಮಹಿಳೆಯ ಮೇಲೆ ನಡು ರಸ್ತೆಯಲ್ಲೇ ಭೀಕರ ದಾಳಿ: ಯುವಕ ಎಸ್ಕೇಪ್
ಕಾರವಾರ, ಜನವರಿ 3: ಮದುವೆಗೆ ಒಪ್ಪದ ಕಾರಣಕ್ಕೆ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಸಂಭವಿಸಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.
ಯಲ್ಲಾಪುರ ಪಟ್ಟಣದ ನಿವಾಸಿ ರಂಜಿತಾ ಮೃತ ಮಹಿಳೆಯಾಗಿದ್ದು, ಆರೋಪಿ ರಫೀಕ್ ಎಂಬ ಯುವಕ ಕಳೆದ ಹಲವು ವರ್ಷಗಳಿಂದ ಆಕೆಯೊಂದಿಗೆ ಪ್ರೀತಿಯಲ್ಲಿದ್ದ ಎಂದು ತಿಳಿದುಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ವಿಚ್ಛೇದನಗೊಂಡಿದ್ದ ರಂಜಿತಾಳಿಗೆ ಒಂದು ಮಗು ಕೂಡ ಇದೆ. ಆಕೆ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಚ್ಛೇದನದ ಕೆಲ ತಿಂಗಳ ನಂತರ ರಫೀಕ್ ಮತ್ತು ರಂಜಿತಾಳ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಕುಟುಂಬಗಳ ನಡುವೆಯೂ ಉತ್ತಮ ಸಂಬಂಧವಿದ್ದು, ರಫೀಕ್ ನಿರಂತರವಾಗಿ ರಂಜಿತಾಳ ಮನೆಗೆ ಬರುತ್ತಿದ್ದನೆಂದು ಸ್ಥಳೀಯರು ಹೇಳುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ರಫೀಕ್ ಮದುವೆಗೆ ಒತ್ತಡ ಹೇರುತ್ತಿದ್ದ. ಇದಕ್ಕೆ ರಂಜಿತಾ ತೀವ್ರ ವಿರೋಧ ವ್ಯಕ್ತಪಡಿಸಿ, “ನನಗೆ ಮತ್ತೆ ಮದುವೆ ಬೇಡ” ಎಂದು ಸ್ಪಷ್ಟವಾಗಿ ತಿಳಿಸಿದ್ದಳು.
ಶನಿವಾರ ಶಾಲೆಯ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ, ರಫೀಕ್ ನಡು ರಸ್ತೆಯಲ್ಲೇ ಆಕೆಯನ್ನು ತಡೆದು ಮದುವೆ ವಿಚಾರವಾಗಿ ಜಗಳ ನಡೆಸಿದ್ದಾನೆ. ಈ ವೇಳೆ ಕೋಪಗೊಂಡ ರಫೀಕ್ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ತೀವ್ರ ಗಾಯಗೊಂಡ ರಂಜಿತಾಳನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿದಿದೆ.
ನ್ಯೂಜಿಲೆಂಡ್ ವಿರುದ್ಧ ODI ಸರಣಿ: ಬಲಿಷ್ಠ ಟೀಂ ಇಂಡಿಯಾ ಪ್ರಕಟ..! ಶುಭಮನ್ ಗಿಲ್ ನಾಯಕ
ಮುಂಬೈ: ಜನವರಿ 11ರಿಂದ ಆರಂಭವಾಗಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಶುಭಮನ್ ಗಿಲ್ ಅವರನ್ನು ನಾಯಕನಾಗಿ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕನಾಗಿ ನೇಮಿಸಲಾಗಿದೆ.
2027ರ ಐಸಿಸಿ ಏಕದಿನ ವಿಶ್ವಕಪ್‌ನ್ನು ಗಮನದಲ್ಲಿರಿಸಿಕೊಂಡು ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹಲವಾರು ಹಿರಿಯ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಕ್ಕೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ಆದರೆ ಇತ್ತೀಚೆಗೆ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್, ಸರ್ಫರಾಜ್ ಖಾನ್ ಹಾಗೂ ದೀರ್ಘಕಾಲದಿಂದ ತಂಡದಿಂದ ಹೊರಗಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಸೇರಿದಂತೆ ಹಲವರನ್ನು ಈ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಈ ಸರಣಿಯನ್ನು ಮುಂದಿನ ದೊಡ್ಡ ಟೂರ್ನಿಗಳಿಗೆ ಸಿದ್ಧತೆಯ ಭಾಗವಾಗಿ ಬಿಸಿಸಿಐ ನೋಡುತ್ತಿರುವುದರಿಂದ ಯುವ ಆಟಗಾರರಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಏಕದಿನ ಸರಣಿಗೆ ಭಾರತ ತಂಡ ಹೀಗಿದೆ
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್‌ದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅರ್ಷ್‌ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.
ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು. 127 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಮಹತ್ವವನ್ನು ದೇಶಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಪ್ರದರ್ಶನದಲ್ಲಿ 1898ರಲ್ಲಿ ನಡೆದ ಉತ್ಖನನ ಹಾಗೂ 1971–1975ರ ಅವಧಿಯಲ್ಲಿ ಪಿಪ್ರಹ್ವಾ ಸ್ಥಳದಲ್ಲಿ ನಡೆದ ಉತ್ಖನನದ ವೇಳೆ ಪತ್ತೆಯಾದ ಬುದ್ಧನ ರತ್ನದ ಅವಶೇಷಗಳು ಮತ್ತು ಇತರೆ ಪುರಾತನ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪ್ರದರ್ಶನವು ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಒಂದು ಶತಮಾನಕ್ಕೂ ಹೆಚ್ಚು ಕಾಲದ ಬಳಿಕ ಪಿಪ್ರಹ್ವಾ ಅವಶೇಷಗಳನ್ನು ಮರಳಿ ತರುವಲ್ಲಿ ಯಶಸ್ಸು ಸಾಧಿಸಲಾಗಿದೆ. ಈ ಅಮೂಲ್ಯ ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರದರ್ಶನವು ಭಗವಾನ್ ಬುದ್ಧನ ಉದಾತ್ತ ಚಿಂತನೆಗಳು ಮತ್ತು ಸಂದೇಶಗಳನ್ನು ಇನ್ನಷ್ಟು ಜನಪ್ರಿಯಗೊಳಿಸುವ ಪ್ರಯತ್ನವಾಗಿದೆ. ನಮ್ಮ ಯುವಜನರು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನಡುವೆ ಗಟ್ಟಿಯಾದ ಬಾಂಧವ್ಯವನ್ನು ನಿರ್ಮಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಎಲ್ಲರನ್ನು ಕೃತಜ್ಞತೆಯಿಂದ ಶ್ಲಾಘಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಜಿ ರಾಮ್ ಜಿ ಯೋಜನೆ ವಿರೋಧಿಸಿ ರೈತ, ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ: ಬೊಮ್ಮಾಯಿ
ಬೆಂಗಳೂರು: ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಅಂಶಗಳನ್ನು ಹೇಳಿ ರಾಜ್ಯದ ಬಡವರ ಕೂಲಿಕಾರರ ದಾರಿ ತಪ್ಪಿಸುತ್ತಿದೆ. ಹಿಂದಿನ ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಈಗ 125 ದಿನಗಳಿಗೆ ಹೆಚ್ಚಿಗೆ ಮಾಡಿದೆ.
ಈ 125 ದಿನಗಳನ್ನು ಗ್ರಾಮ ಪಂಚಾಯತಿಗಳೇ ನಿರ್ಧಾರ ಮಾಡಬಹುದು. ಆದರೆ ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ ಎಂಬ ಭೀತಿಯನ್ನು ಕಾರ್ಮಿಕರಲ್ಲಿ ಹುಟ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ರೈತರಿಗೆ ಅನುಕೂಲವಾಗಲು ಆರವತ್ತು ದಿನ ಕಾಲ ಕೃಷಿಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ದೃಷ್ಡಿಯಿಂದ ವರ್ಷದಲ್ಲಿ ಎರಡು ಬಾರಿ ಉದ್ಯೋಗ ಖಾತ್ರಿಯ ಕೆಲಸಗಳನ್ನು ಕೃಷಿಗೋಸ್ಕರ ರಜೆ ನೀಡಲಾಗಿದೆ.
ಇದನ್ನು ರಾಜ್ಯ ಸರ್ಕಾರ ಆಕ್ಷೇಪ ಮಾಡುವ ಮುಖಾಂತರ ರೈತ ವಿರೋಧಿ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಇಡೀ ದೇಶದ ರೈತರಿಂದ ಬೇಡಿಕೆಯ ಅನುಗುಣವಾಗಿದೆ. ಅಲ್ಲದೇ ಹೇಗಿದ್ದರೂ ವರ್ಷದಲ್ಲಿ 125 ದಿನ ಬಿಟ್ಟರೆ ಬೇರೆ ದಿನದಲ್ಲಿ ಬೇರೆ ರಂಗದಲ್ಲಿ ಕೆಲಸ ಮಾಡುವುದು ಅನಿವಾರ್ಯವಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ
ಜಿ ರಾಮ್ ಜಿ ಯೋಜನೆಯಲ್ಲಿ ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕರ ವೇತನ ಕೊಡುವ ಬಗ್ಗೆ ಸ್ಪಷ್ಟವಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ಅನುದಾನ ಸಿಗದೇ ಇರುವ ವಿಚಾರವನ್ನು ಹೇಳಿ ಕಾರ್ಮಿಕರಿಗೆ ಈ ಯೋಜನೆಯಿಂದ ದೂರ ಮಾಡುತ್ತಿದೆ.
ನರೇಗಾ ಯೋಜನೆಯಲ್ಲಿ ಹಲವಾರು ಪ್ರಕರಣಗಳು ಭ್ರಷ್ಟಾಚಾರದಿಂದ ಕೂಡಿರುವುದು ಯೋಜನೆಯ ದುರ್ಬಳಕೆ ಆಗಿರುವುದು. ಸುಳ್ಳು ಕೂಲಿಕಾರರ ಹೆಸರು ಹೇಳಿ ವೇತನ ತೆಗೆದಿರುವ ಲೋಪ ಇದ್ದು ಅದನ್ನು ಸರಿಪಡಿಸಲು ಬಯೊಮೆಟ್ರಿಕ್ ತಂತ್ರಜ್ಞಾನ ಬಳಸಿ ಸೋರಿಕೆ ತಡೆಗಟ್ಟಲು ಯೋಜನೆ ಮಾಡಿದರೆ ಇದರಿಂದ ವಂಚನೆ ಆಗುತ್ತದೆ ಎಂದು ಸುಳ್ಳನ್ನು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಶತಮಾನಗಳ ಸಂಪ್ರದಾಯ ಜೀವಂತ: ಮಾಡಲಗೇರಿಯಿಂದ ಬದಾಮಿ ದೇವಾಲಯಕ್ಕೆ ರಥ ಹಗ್ಗದ ಸಾಗಾಟ
ಗದಗ: ಇಂದು ಬದಾಮಿ ಬನಶಂಕರಿ ದೇವಿ ರಥೋತ್ಸವದ ಹಿನ್ನೆಲೆಯಲ್ಲಿ ದೇವಿಯ ತವರೂರು ಮಾಡಲಗೇರಿ ಗ್ರಾಮ ಸಡಗರ–ಸಂಭ್ರಮದಿಂದ ಕಂಗೊಳಿಸಿತು. “ತವರೂರಿನ ಹಗ್ಗ ಹೋದ್ರೆ ಮಾತ್ರ ಬನಶಂಕರಿ ರಥೋತ್ಸವ” ಎಂಬ ಶತಮಾನಗಳ ಪರಂಪರೆಯಂತೆ, ರಥ ಎಳೆಯುವ ಹಗ್ಗವನ್ನು ಮಾಡಲಗೇರಿಯಿಂದ ಐತಿಹಾಸಿಕ ಬದಾಮಿ ಬನಶಂಕರಿ ದೇವಾಲಯದತ್ತ ಅದ್ಧೂರಿಯಾಗಿ ಸಾಗಿಸಲಾಯಿತು.
ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಗ್ಗ ಸಾಗಾಟಕ್ಕೆ ಭರ್ಜರಿ ಮೆರವಣಿಗೆ ಆಯೋಜಿಸಲಾಗಿತ್ತು. ಹಗ್ಗ ಸಾಗಿಸುವ ಎತ್ತಿನ ಬಂಡಿಯನ್ನು ಬಾಳೆ ಗಿಡ, ತಳಿರು ತೋರಣ, ಹೂವುಗಳಿಂದ ಸಿಂಗಾರ ಮಾಡಲಾಗಿದ್ದು, ಕಟ್ಟು ಮಸ್ತಾದ ಎತ್ತುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.
ಹಗ್ಗ ಹಾಗೂ ಅದನ್ನು ಹೊತ್ತ ಬಂಡಿಗೆ ಪೂಜೆ ಸಲ್ಲಿಸಿ, ಬ್ಯಾಂಡ್, ಹಲಗೆ ಮಜಲುಗಳ ಅಬ್ಬರ, ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಶತಮಾನಗಳಿಂದ ಪುಂಡಿ ನಾರಿನಿಂದ ತಯಾರಿಸಲಾದ ರಥೋತ್ಸವದ ಹಗ್ಗವನ್ನು ಹದಿನಾರು ಎತ್ತುಗಳ ಹೂಡಿ ಬಂಡಿಯಲ್ಲಿ ಎಳೆಯುತ್ತಾ ಸಾಗಿಸುವ ದೃಶ್ಯ ಭಕ್ತರನ್ನು ಮಂತ್ರಮುಗ್ಧಗೊಳಿಸಿತು.
ಮಲಪ್ರಭಾ ನದಿಯ ಮಾರ್ಗವಾಗಿ ಎತ್ತಿನ ಬಂಡಿಯಲ್ಲಿ ರಥ ಹಗ್ಗವನ್ನು ಸಾಗಿಸಿ, ಬದಾಮಿ ಬನಶಂಕರಿ ದೇವಾಲಯಕ್ಕೆ ತಲುಪಿಸುವ ಈ ಐತಿಹಾಸಿಕ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಡಿಸಿಸಿ ಬ್ಯಾಂಕ್ ಯುನಿಯನ್ ಅಧ್ಯಕ್ಷನ ಮೇಲೆ ಹಲ್ಲೆ: ರಕ್ಷಣೆ ಕೊಡದಿದ್ದರೆ ಆತ್ಮಹತ್ಯೆಯ ಎಚ್ಚರಿಕೆ
ಬೆಳಗಾವಿ: ಡಿಸಿಸಿ ಬ್ಯಾಂಕ್ ಲೇಬರ್ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ್ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣದಲ್ಲಿ ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ನಿಂಗಪ್ಪ ಕರೆಣ್ಣವರ್ ನೀಡಿರುವ ಮಾಹಿತಿಯಂತೆ, ಮಾತುಕತೆಗಾಗಿ ಎಂದು ಮನೆಗೆ ಕರೆಸಿಕೊಂಡು, ಚಿದಾನಂದ ಸವದಿ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತಲೆ ಒಡೆಯುವ ಉದ್ದೇಶದಿಂದ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ನಿಂಗಪ್ಪ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಳಿಕ ಅವರು ಭಯಭೀತರಾಗಿದ್ದು, ಸರ್ಕಾರ ತಕ್ಷಣ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
“ನನಗೆ ಜೀವಭಯವಿದೆ. ಸರ್ಕಾರ ರಕ್ಷಣೆ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೇ ನನ್ನ ಮುಂದಿನ ದಾರಿ” ಎಂದು ನಿಂಗಪ್ಪ ಕರೆಣ್ಣವರ್ ನೋವಿನೊಂದಿಗೆ ಹೇಳಿದ್ದಾರೆ. ಪ್ರಕರಣ ಇದೀಗ ಕಾನೂನು ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಕ್ರಮಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
Doctor Harassed: ಬೆಂಗಳೂರಿನಲ್ಲಿ ವೈದ್ಯೆ ಮೇಲೆ ಕಿರುಕುಳಕ್ಕೆ ಯತ್ನ: ಆರೋಪಿ ಅರೆಸ್ಟ್.!
ಬೆಂಗಳೂರು: ಖಾಸಗಿ ಆಸ್ಪತ್ರೆಯ ಮಹಿಳಾ ವೈದ್ಯೆಯ ಮೇಲೆ ಅಸಭ್ಯ ವರ್ತನೆ ತೋರಲು ಯತ್ನಿಸಿದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಾಕೇಶ್(21) ಬಂಧಿತ ಆರೋಪಿಯಾಗಿದ್ದು, ಡಿಸೆಂಬರ್ 17ರಂದು ಬೆಳಗಿನ ಜಾವ, ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೈದ್ಯೆಯ ಬಳಿ ಆರೋಪಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದನು.
ವೈದ್ಯೆ ತನ್ನ ಪಿಜಿ ಮುಂಭಾಗದಲ್ಲೇ ಎದುರಾಗಿದ್ದ ರಾಕೇಶ್ ಬಸ್ ನಿಲ್ದಾಣ ವಿಳಾಸ ಕೇಳಿದ್ದನು. ಭಯದಿಂದ ವೈದ್ಯೆ ವಿಳಾಸವನ್ನು ಹೇಳಿ ಗೇಟ್ ತೆರೆಯಲು ಮುಂದಾಗುತ್ತಿದ್ದಾಗ, ಆರೋಪಿ ಬೈಕ್ ನಿಲ್ಲಿಸಿ ಹತ್ತಿರ ಬಂದಿದ್ದನು. ಆಕೆಯ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾಗ, ವೈದ್ಯೆ ಕಿರುಚಿದ ವೇಳೆ ಆರೋಪಿ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದನು. ಕಳೆದ 20 ದಿನಗಳ ಹಿಂದೆ ಘಟನೆ ನಡೆದಿದ್ದು, ಬೀದಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ವಾಯವ್ಯ ವಿಭಾಗ ಡಿಸಿಪಿ ನಾಗೇಶ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿ ರಾಕೇಶ್‌ನನ್ನು ಬಂಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ವಿಳಾಸ ಕೇಳುವ ನೆಪದಲ್ಲಿ ವೈದ್ಯೆ ಜೊತೆ ಅನುಚಿತ ವರ್ತನೆ ತೋರಿದ್ದ.
ತಡರಾತ್ರಿ ಡ್ಯೂಟಿ ಮುಗಿಸಿ ಆಟೋದಲ್ಲಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಈ ವೇಳೆ ಆಕೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಆರೋಪಿ ರಾಕೇಶ್ 21 ವರ್ಷದ ಯುವಕ. ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಮೂಲತಃ ತುಮಕೂರು ಜಿಲ್ಲೆಯವನು. ಆರೋಪಿ ರಾಕೇಶ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

