Home Blog Page 226

ಬೆಂಗಳೂರು ಗಾಳಿಯ ಗುಣಮಟ್ಟ ಕುಸಿತ: AQI 164, ಹಲವು ಪ್ರದೇಶಗಳಲ್ಲಿ ಅನಾರೋಗ್ಯಕರ ಮಟ್ಟ

0

ಬೆಂಗಳೂರು: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ ಇಂದಿನ ಗಾಳಿಯ ಗುಣಮಟ್ಟ 164 ದಾಖಲಾಗಿದ್ದು, ನಗರದ ಹಲವು ಭಾಗಗಳಲ್ಲಿ ಕಳಪೆ ಹಾಗೂ ಅನಾರೋಗ್ಯಕರ ಮಟ್ಟದ ವಾಯುಮಾಲಿನ್ಯ ಕಂಡುಬರುತ್ತಿದೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 74 ಇದ್ದರೆ, PM10 ಪ್ರಮಾಣ 101 ದಾಖಲಾಗಿದೆ. ಕಳೆದ ಕೆಲವು ದಿನಗಳಿಗಿಂತ ಸ್ವಲ್ಪ ಸುಧಾರಣೆ ಕಂಡುಬಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

ಕಳಪೆ ಗಾಳಿಯ ಗುಣಮಟ್ಟವಿರುವ ಬೆಂಗಳೂರು ಪ್ರದೇಶಗಳು

ಇತ್ತೀಚಿನ ವರದಿಗಳ ಪ್ರಕಾರ, ಕಲ್ಯಾಣ ನಗರದಲ್ಲಿ AQI ಆಗಾಗ್ಗೆ 170 ದಾಟುತ್ತಿದ್ದು, ಇದು ನಗರದಲ್ಲೇ ಅತ್ಯಂತ ಕಳಪೆ ಗಾಳಿಯ ಗುಣಮಟ್ಟ ಇರುವ ಪ್ರದೇಶಗಳಲ್ಲಿ ಒಂದಾಗಿದೆ. ವಾಹನ ದಟ್ಟಣೆಗೆ ಹೆಸರಾದ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO₂) ಹಾಗೂ ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದೆ.

ವೈಟ್‌ಫೀಲ್ಡ್ ಹಾಗೂ ಐಟಿಪಿಎಲ್ ಪ್ರದೇಶಗಳಲ್ಲಿ ನಿರಂತರ ನಿರ್ಮಾಣ ಕಾಮಗಾರಿಗಳು ಮತ್ತು ಭಾರೀ ಟ್ರಾಫಿಕ್ ಕಾರಣದಿಂದ ಗಾಳಿಯ ಗುಣಮಟ್ಟ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಕೈಗಾರಿಕಾ ಚಟುವಟಿಕೆಗಳ ಪರಿಣಾಮ ಜಿಗಣಿ ಪ್ರದೇಶದಲ್ಲಿ ಕೆಲವೊಮ್ಮೆ AQI 187ಕ್ಕೂ ಹೆಚ್ಚು ದಾಖಲಾಗುತ್ತಿದೆ. ಹೆಬ್ಬಾಳ ಮತ್ತು ಮೆಖ್ರಿ ಸರ್ಕಲ್ ಸೇರಿದಂತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಿರಂತರ ವಾಹನ ಸಂಚಾರದಿಂದ ವಾಯುಮಾಲಿನ್ಯ ಹೆಚ್ಚಾಗಿದೆ.

ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟ (AQI)

  • ಬೆಂಗಳೂರು – 164

  • ಮಂಗಳೂರು – 164

  • ಮೈಸೂರು – 134

  • ಬೆಳಗಾವಿ – 160

  • ಕಲಬುರ್ಗಿ – 127

  • ಶಿವಮೊಗ್ಗ – 170

  • ಬಳ್ಳಾರಿ – 200

  • ಹುಬ್ಬಳ್ಳಿ – 104

  • ಉಡುಪಿ – 160

  • ವಿಜಯಪುರ – 97

ಗಾಳಿಯ ಗುಣಮಟ್ಟದ ವರ್ಗೀಕರಣ

  • ಉತ್ತಮ: 0 – 50

  • ಮಧ್ಯಮ: 50 – 100

  • ಕಳಪೆ: 100 – 150

  • ಅನಾರೋಗ್ಯಕರ: 150 – 200

  • ಗಂಭೀರ: 200 – 300

  • ಅಪಾಯಕಾರಿ: 300 – 500+

ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ, ವೃದ್ಧರ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿರುವವರು ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಶಿಕ್ಷಣ ಸಂಸ್ಥೆಗಳು ದೇವಸ್ಥಾನ ಇದ್ದಂತೆ: ಪ್ರಭುಲಿಂಗ ದೇವರು

0

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಸಾಕ್ಷಾತ್ ದೇವರು. ಸಂಸ್ಥೆಗಳು ದೇವಸ್ಥಾನ ಇದ್ದಂತೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.

ಅವರು ಕಳಸಾಪೂರ ಗ್ರಾಮದ ಬ್ರೈಟ್ ಹಾರಿಜನ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ದೇವಸ್ಥಾನಕ್ಕೆ ಹೋದರೆ ಒಂದು ದೇವರು ಕಾಣಲು ಸಾಧ್ಯ. ಆದರೆ ಶಿಕ್ಷಣ ಸಂಸ್ಥೆಯಲ್ಲಿ ಯಾವ ಜಾತಿ, ಮತ, ಭೇದ-ಭಾವವಿಲ್ಲದ, ನಿಷ್ಕಲ್ಮಶ ಮನಸ್ಸುಗಳ ಸಾಕ್ಷಾತ್ ದೇವರ ಸ್ವರೂಪದ ಮಕ್ಕಳನ್ನು ಕಾಣಬಹುದು., ಶಿಕ್ಷಕರು ಸಾಕ್ಷಾತ್ ದೇವರ ಸ್ವರೂಪವಾಗಿದ್ದು, ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಮಕ್ಕಳಿಗೆ ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಿ ಮಕ್ಕಳ ಭವಿಷ್ಯಕ್ಕೆ ಸಹಕರಿಸಬೇಕು. ಬಿ.ಡಿ. ಹರ್ತಿ ನಿವೃತ್ತರಾದ ತಕ್ಷಣ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಗ್ರಾಮೀಣ ಮಟ್ಟದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲೆಂದು ಶ್ರಮಿಸುತ್ತಿರುವ ಬ್ರೈಟ್ ಹಾರಿಜನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಕೆ.ಎಚ್. ಬೇಲೂರ ಮಾತನಾಡಿ, ಮಕ್ಕಳು ಪೋಷಕರನ್ನು ನೋಡಿ ಸಾಕಷ್ಟು ಕಲಿಯುತ್ತಾರೆ. ಅದರ ಬಗ್ಗೆ ನಮನವಿಟ್ಟು ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಉತ್ತಮ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಿಕ್ಷಣವನ್ನು ಸರಿಯಾಗಿ ಪಡೆದುಕೊಂಡಲ್ಲಿ ಭವಿಷ್ಯದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆಯನ್ನು ಬಿ.ಎಂ. ಪಾಟೀಲ ವಹಿಸಿದ್ದರು. ಬಿಇಓ ವಿ.ವಿ. ನಡುವಿನಮನಿ, ಐ.ಬಿ. ಬೆನಕೊಪ್ಪ, ಬಿ.ಡಿ. ಹರ್ತಿ, ತೇಜಸ್ವಿನಿ ಹಟ್ಟಿ, ಎಚ್.ಎನ್. ಗದಗ, ವಾಯ್.ಎನ್. ಭರಮಗೌಡರ, ಎಸ್.ಎನ್. ಗದಗ, ಎಂ.ಎನ್. ದೇಸಾಯಿ, ಶ್ರೇಯಾ ಮಲ್ಲೂರ, ವೈಷ್ಣವಿ ರಾಠೋಡ, ಗಣೇಶ ಕೆಂಚಣ್ಣವರ, ಹರ್ಷಿತಾ ಅಕ್ಕಮ್ಮನವರ ಮುಂತಾದವರಿದ್ದರು.

ಗದಗ ಗ್ರಾಮೀಣ ಸಿಪಿಐ ಶಿದ್ದರಾಮೇಶ್ವರ ಗಡೇದ ಮಾತನಾಡಿ, ನಮ್ಮ ಕಾಲದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಕೂಲಿ-ನಾಲಿ ಮಾಡಿ ನಮ್ಮನ್ನು ಕಲಿಸಿದ ತಂದೆ-ತಾಯಿಗಳು, ಪ್ರೀತಿಯಿಂದ ಅಕ್ಷರಾಭ್ಯಾಸ ಮಾಡಿಸಿದ ಗುರುಗಳನ್ನು ನಾವು ಎಂದೂ ಮರೆಯಬಾರದು. ಇಂದು ಮಕ್ಕಳಿಗೆ ಪೋಷಕರು ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಮಕ್ಕಳಿಗೆ ಕಷ್ಟದ ಅರಿವು ಮೂಡಿಸಬೇಕು. ಮಕ್ಕಳು ಗುರುಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಗೌರವ, ಪ್ರೀತಿಯಿಂದ ಕಾಣಬೇಕು ಎಂದರು.

ಬ್ಯಾಂಕಿನಲ್ಲಿನ ಸೌಲಭ್ಯಗಳ ಕೊರತೆ ನೀಗಿಸಲು ಆಗ್ರಹ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿನ ಕೊರತೆಗಳನ್ನು ಪರಿಹರಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಬ್ಯಾಂಕ್ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಬೇಕೆಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತು ವಲಯ ವ್ಯವಸ್ಥಾಪಕರಿಗೆ ಸಂಘದ ವತಿಯಿಂದ ದೂರು ನೀಡಿರುವ ಅವರು, ಬ್ಯಾಂಕಿನಲ್ಲಿ ಕಳೆದ 3-4 ತಿಂಗಳಿನಿಂದ ಪಾಸ್‌ಬುಕ್ ಎಂಟ್ರಿಯನ್ನೇ ಮಾಡುತ್ತಿಲ್ಲ. ಸಿಬ್ಬಂದಿಯವರನ್ನು ಕೇಳಿದರೆ ಪ್ರಿಂಟಿಂಗ್ ಮಶಿನ್ ಹಾಳಾಗಿದೆ ಎಂದು ಹೇಳುತ್ತಾರೆ. ತಿಂಗಳುಗಟ್ಟಲೆ ಈ ಅವ್ಯವಸ್ಥೆ ಸರಿಯಾಗದೆ ನಮಗೆ ತೀವ್ರ ತೊಂದರೆಯಾಗುತ್ತಿದೆ. ಸಿಬ್ಬಂದಿ ಕೊರತೆಯೂ ಇರುವದರಿಂದ ಒಂದು ಕೆಲಸಕ್ಕಾಗಿ ಗ್ರಾಹಕರು ಐದಾರು ಸಾರೆ ಬ್ಯಾಂಕಿಗೆ ತಿರುಗಾಡಬೇಕು.

ನಿಯಮದ ಪ್ರಕಾರ ಬ್ಯಾಂಕಿನಲ್ಲಿ ಏಳು ಜನ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಆದರೆ ಕಾರ್ಯ ನಿರ್ವಹಿಸುತ್ತಿರುವುದು ಕೇವಲ ನಾಲ್ಕೇ ಜನ. ಇದರಿಂದ ವಾರದ ಎಲ್ಲ ದಿನಗಳಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿರುವ ಬ್ಯಾಂಕಿನಲ್ಲಿ ಸಮರ್ಪಕ ಸೇವೆಯನ್ನು ಒದಗಿಸಲು ಸಿಬ್ಬಂದಿಯವರಿಂದ ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ರಜೆಯ ಮೇಲೆ ಹೋಗಿರುವ ಸಿಬ್ಬಂದಿಯ ಸ್ಥಾನದಲ್ಲಿ ಮತ್ತಾರೂ ಬಂದಿಲ್ಲ. ಇದೆಲ್ಲವನ್ನೂ ತಕ್ಷಣವೇ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಅವಶ್ಯಕತೆ ಇರುವ ಗ್ರಾಹಕರಿಗೆ ನಾವು ಸ್ಟೇಟ್‌ಮೆಂಟ್ ಕೊಡುತ್ತಿದ್ದೇವೆ. ನಮ್ಮಲ್ಲಿ ಸಮರ್ಪಕವಾದ ಸಿಬ್ಬಂದಿ ಇದ್ದರೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಆದರೂ ಇರುವ ಸಿಬ್ಬಂದಿಯಿಂದಲೇ ನಾವು ಉತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇವೆ.

  • ವೆಂಕಟೇಶ ಸಿ.
    ವ್ಯವಸ್ಥಾಪಕರು.

ಜಿ.ಪಿ.ಎಲ್. ಆವೃತ್ತಿ-3: ಗದಗ ವಾರಿಯರ್ಸ್ ತಂಡ ಚಾಂಪಿಯನ್

0

ವಿಜಯಸಾಕ್ಷಿ ಸುದ್ದಿ, ಗದಗ: ಜಿ.ಪಿ.ಎಲ್ 3ನೇ ಆವೃತ್ತಿಯ ಫೈನಲ್ ಪಂದ್ಯ ಗದಗ ವಾರಿಯರ್ಸ್ ಹಾಗೂ ಗದಗ ಸ್ಟ್ರೈಕರ್ಸ್ ನಡುವೆ ನಡೆಯಿತು. ಈ ಪಂದ್ಯದ ಮುಖ್ಯ ಅತಿಥಿಗಳಾಗಿ ಆದರ್ಶ ಶಿಕ್ಷಣ ಸಮಿತಿ ಕಾಲೇಜಿನ ಚೇರಮನ್ ಆನಂದ ಪೋತ್ನಿಸ್ ಮತ್ತು ಯುವ ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ ಆಗಮಿಸಿದ್ದರು.

ಹರೀಶ ಕೊಪ್ಪರ, ಶೈಲೇಶ ಬಾಗಮಾರ, ಚಿದಾನಂದ ಕ್ಷತ್ರಿಯ, ಶೈಲೇಶ, ಶಬ್ಬೀರ ನರೇಗಲ್, ಸಚಿನ್ ನಾಯ್ಕ, ಅಹ್ಮದ್‌ಖಾಜಿ, ಜಗನ್ನಾಥ ಚಾಗಿ, ತಾಹೀರ ಉಮಚಗಿ, ಸಮೀರ ನದಿಮುಲ್ಲಾ ಮತ್ತು ಪೈಜಾನ ಇರಕಲ್ ಇವರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಗದಗ ವಾರಿಯರ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ಗದಗ ವಾರಿಯರ್ಸ್ ತಂಡದ ಓಪನರ್‌ಗಳಾದ ವಿನಯ ಬಾರಕೇರ 91 ಮತ್ತು ಪವನ ಶಳ್ಳೇದ 116 ರನ್‌ಗಳ ಆಟ ಪಂದ್ಯಾಟಕ್ಕೆ ವೇಗ ನೀಡಿತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಗದಗ ಸ್ಟ್ರೈಕರ್ಸ್ನ ಓಪನರ್‌ಗಳಾದ ಜೈದ್ ಅತ್ತಾರ ಮತ್ತು ರವಿ ರಾಮಗಿರಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಜೈದ್ ಅತ್ತಾರ 73, ರವಿ ರಾಮಗಿರಿ 33, ಕಿಶೋರ 18 ರನ್ ಮಾಡಿ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 173 ರನ್ ಮಾಡಿ 63 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿತು.

ಪಂದ್ಯ ಪುರಷೋತ್ತಮ ಪ್ರಶಸ್ತಿ ವಿನಯ ಬಾರಕೇರ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಜೈದ್ ಅತ್ತಾರ, ಉತ್ತಮ ಬ್ಯಾಟ್ಸಮನ್ ವಿನಯ ಬಾರಕೇರ, ಉತ್ತಮ ಬೌಲರ್ ಕಾರ್ತಿಕ್ ಬಾಗಲಕೋಟೆ, ಉತ್ತಮ ಕ್ಯಾಚ್ ಪ್ರಜ್ವಲ್ ಮಿಟ್ಟಿ, ಎಮರ್ಜಿಂಗ್ ಫ್ಲೇಯರ್ ವೇದಾಂತ ತುರಕಾಣಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.

ಐಎಂಎ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ರಾಜಶೇಖರ ಬಳ್ಳಾರಿಗೆ ಗೌರವ ಪ್ರಶಸ್ತಿ

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಹಿರಿಯ ತಜ್ಞ ವೈದ್ಯರು, ಗದಗ ಐಎಂಎ ಹಿರಿಯ ಸದಸ್ಯರೂ ಆದ ಡಾ. ರಾಜಶೇಖರ ಬಳ್ಳಾರಿ ಅವರ ವೈದ್ಯಕೀಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿ ಐ.ಎಂ.ಎ ಕೇಂದ್ರದ ರಾಷ್ಟ್ರೀಯ ಅಧ್ಯಕ್ಷ ಡಾ. ದಿಲೀಪ ಭಾನುಸಾಲಿ ಪ್ರಶಂಸನಾ ಪ್ರಶಸ್ತಿ ನೀಡಿದ್ದಾರೆ.

ಡಾ. ರಾಜಶೇಖರ ಬಳ್ಳಾರಿ ಅವರು ಕಳೆದ 45 ವರ್ಷಗಳಿಂದ ಐಎಂಎ ಆಜೀವ ಸದಸ್ಯರಾಗಿ, ಐಎಂಎ ಗದಗ ಜಿಲ್ಲಾ, ರಾಜ್ಯ ಘಟಕದ ಅಧ್ಯಕ್ಷರಾಗಿ, ಕಳೆದ 26 ವರ್ಷಗಳಿಂದ ನವದೆಹಲಿಯ ರಾಷ್ಟ್ರೀಯ ಐಎಂಎ ಕೇಂದ್ರ ಕಾರ್ಯಕಾರಿಣಿ ಸದಸ್ಯರಾಗಿ, ಕಳೆದ ನಾಲ್ಕು ವರ್ಷಗಳಿಂದ ಐಎಂಎ ಕೇಂದ್ರ ಹಣಕಾಸು ಸಮಿತಿಯ ಸದಸ್ಯ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಕಳೆದ 40 ವರ್ಷಗಳಿಂದ ರೋಟರಿ ಕ್ಲಬ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ ಜನಮುಖಿ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಡಾ. ಬಳ್ಳಾರಿ ಅವರು ಪತ್ರಿಕೆ, ನಿಯತಕಾಲಿಕೆಗಳಲ್ಲಿ ವೈದ್ಯಕೀಯ ಹಾಗೂ ವೈಚಾರಿಕ ಲೇಖನಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿ ಇತ್ತೀಚೆಗೆ ಅಲಹಾಬಾದ್‌ದಲ್ಲಿ ಜರುಗಿದ ಐಎಂಎ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವದ ಈ ಪ್ರಶಂಸನಾ ಪತ್ರ ನೀಡಲಾಗಿದೆ.

ಡಾ. ರಾಜಶೇಖರ ಬಳ್ಳಾರಿ ಅವರಿಗೆ ರಾಜ್ಯ, ಜಿಲ್ಲಾ ಐಎಂಎ, ರೋಟರಿ ಸದಸ್ಯರು ಅಭಿನಂದಿಸಿದ್ದಾರೆ.

ಕ್ರೀಡಾಸಕ್ತಿಯದಿಂದ ಮಾನಸಿಕ, ದೈಹಿಕ ಸದೃಢತೆ: ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ನೌಕರರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಸರಿಯಾಗಿ ಕಚೇರಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಶಾಖೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ `ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ’ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ಉದ್ಘಾಟಿಸಿ, ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಧ್ಯೇಯೋದ್ದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಈ ಕ್ರೀಡಾ ಉತ್ಸವವು ಒಂದು ಸಂತಸದ ಅವಕಾಶವನ್ನು ಕೊಟ್ಟಿದೆ. ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೂ ಸಹಿತ ನೌಕರರಿಗೆ ಮಾನಸಿಕ ಸದೃಢತೆ ತಂದುಕೊಡುತ್ತವೆ. ನಿರ್ಣಾಯಕರುಗಳ ನಿರ್ಣಯಗಳಿಗೆ ಬದ್ಧರಾಗಿ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗದಗ ಜಿಲ್ಲೆಗೆ ಹೆಸರು ತರಬೇಕೆಂದು ತಿಳಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಸದೃಢತೆ ಹೊಂದಬೇಕು. ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ವೆಂ. ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನೌಕರರು ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಕಾರ್ಯಕ್ರಮಗಳನ್ನು ಆಸ್ವಾದಿಸಬೇಕು. ಎಲ್ಲ ಕ್ರೀಡಾಪಟುಗಳು ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಲಾದ ಮಳಿಗೆಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎಸ್.ಎನ್. ಬಳ್ಳಾರಿ, ರಾಜು ಕುರಡಗಿ, ಪ್ರೇಮನಾಥ ಗರಗ, ರವಿ ಗುಂಜೀಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಡಿ.ಎಸ್. ತಳವಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕಾ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಹಾಜರಿದ್ದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಸ್ವಾಗತಿಸಿದರು. ಎಂ.ಎಸ್. ಕುಚಬಾಳ ವಂದಿಸಿದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರೂಪಿಸಿದರು.

ಸರ್ಕಾರಿ ನೌಕರರ ಇಡೀ ಕುಟುಂಬವು ಅವರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಕಚೇರಿ ಕೆಲಸದ ಅತಿಯಾದ ಒತ್ತಡದಿಂದ ನೌಕರರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಅವರ ಕುಟುಂಬವು ಸಂಕಷ್ಟಕ್ಕೆ ಒಳಗಾಗುತ್ತದೆ. ಈ ನಿಟ್ಟಿನಲ್ಲಿ ಅವರು ಕೆಲಸದ ಒತ್ತಡದಿಂದ ಹೊರಬಂದು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕನಿಷ್ಠ 1 ತಾಸು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಅಥವಾ ಯೋಗ, ಧ್ಯಾನ, ವಾಕಿಂಗ್, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಒತ್ತಡಮುಕ್ತ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದು ಎಸ್.ವಿ. ಸಂಕನೂರ ತಿಳಿಸಿದರು.

ನಿಡಗುಂದಿಕೊಪ್ಪದ ಮಠ ಆರೋಗ್ಯ ದಾಸೋಹಕ್ಕೆ ಹೆಸರುವಾಸಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಈ ನಾಡಿನ ಅನೇಕ ಮಠಗಳು ಅನ್ನ, ಅಕ್ಷರ, ದಾಸೋಹಕ್ಕೆ ಹೆಸರಾಗಿದ್ದರೆ, ನಿಡಗುಂದಿಕೊಪ್ಪದ ಶ್ರೀಮಠವು ಆರೋಗ್ಯ ದಾಸೋಹಕ್ಕೆ ಹೆಸರಾಗಿದೆ ಎಂದು ಹಾಲಕೆರೆಯ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪದಲ್ಲಿ ಶನಿವಾರ ಜರುಗಿದ ಶ್ರೀ ಚನ್ನಬಸವೇಶ್ವರರ 42ನೇ ಮತ್ತು ಶ್ರೀ ಶಿವಬಸವ ಸ್ವಾಮಿಗಳ 10ನೇ ಪುಣ್ಯಸ್ಮರಣೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಮಠವನ್ನು ಸ್ಥಾಪಿಸಿದ ಹಾನಗಲ್ಲ ಗುರು ಕುಮಾರೇಶ್ವರರು ಈ ಭಾಗದ ಜನರ ಆರೋಗ್ಯವನ್ನು ಕಾಪಾಡಲೆಂದೇ ಶ್ರೀ ಚನ್ನಬಸವ ಮಹಾಸ್ವಾಮಿಗಳಿಗೆ ಅನುಗ್ರಹಿಸಿ ಶಿವಯೋಗ ಮಂದಿರದಿಂದ ಇಲ್ಲಿಗೆ ತಂದಿರಿಸಿದರು. ಅವರಿಂದ ಈ ಮಠವು ಆರೋಗ್ಯ ದಾಸೋಹಿ ಮಠವೆಂಬ ಅಭಿದಾನವನ್ನು ಪಡೆದು ಇಂದಿಗೂ ಆ ಸೇವೆಯನ್ನು ಮುಂದುವರೆಸಿಕೊಂಡು ಬಂದಿದೆ. ಇದನ್ನೇ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಬಸವ ಮಹಾಸ್ವಾಮಿಗಳು ಮುನ್ನಡೆಸಿಕೊಂಡು ಬಂದು ಮಠದ ಕೀರ್ತಿಯನ್ನು ಬೆಳೆಸಿದರು ಎಂದರು.

ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿ, ಈ ಮಠಕ್ಕೆ ತನ್ನದೇ ಆದ ಮಹತ್ವವಿದೆ. ಶ್ರೀಗುರು ಕುಮಾರೇಶ್ವರರು ಹೆಚ್ಚಿಗೆ ಭೇಟಿ ನೀಡಿದ ಗ್ರಾಮವಿದು. ತಪಸ್ಸಿನ ಶಕ್ತಿ ಮತ್ತು ಭಕ್ತರ ಗೆದ್ದ ಮಠಗಳು ನಿಜವಾದ ಶ್ರೀಮಂತ ಮಠಗಳು. ಈ ಮಠ ಅಂತಹ ಮಠಗಳಲ್ಲೊಂದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಚನ್ನಬಸವ ಮಹಾಸ್ವಾಮಿಗಳು ಕಾಮಧೇನು, ಕಲ್ಪವೃಕ್ಷವಾಗಿದ್ದರು. ಅನ್ನ ಪ್ರಸಾದಕ್ಕಿರುವಷ್ಟೇ ಮಹತ್ವ ಜ್ಞಾನ ಪ್ರಸಾದಕ್ಕಿದೆ. ಅದಕ್ಕೂ ಮಿಗಿಲಾದದ್ದು ಆರೋಗ್ಯ ಪ್ರಸಾದ. ಅದನ್ನು ಈ ಮಠ ನೀಡಿ ಜನಮಾನಸದಲ್ಲಿ ಆರೋಗ್ಯದ ಮಠವೆಂದು ಪ್ರಸಿದ್ಧಿಯನ್ನು ಪಡೆದಿದೆ. ಜಾತ್ರಾಮಹೋತ್ಸವದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸುತ್ತಿರುವುದ ಶ್ಲಾಘನೀಯ. ಜಾತ್ರೆಗಳಲ್ಲಿ ಕಲೆ, ಸಾಹಿತ್ಯ, ಸಂಗೀತಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಅದಕ್ಕೆ ಈ ಮಠ ಹೆಸರುವಾಸಿಯಾಗಿದೆ. ಏಕೆಂದರೆ ಇಲ್ಲಿ ಹಾನಗಲ್ಲ ಕುಮಾರೇಶ್ವರರ ಮತ್ತು ಪಂ. ಪಂಚಾಕ್ಷರ ಗವಾಯಿಗಳವರ ಕೃಪೆ ಇದೆ ಎಂದರು.

ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಮಾತನಾಡಿದರು. ಮುಖಂಡ ವೀರಣ್ಣ ಶೆಟ್ಟರ ವೇದಿಕೆಯ ಮೇಲಿದ್ದರು. ದ್ಯಾಮಣ್ಣ ಮಾಸ್ತರ, ಅನ್ನಪೂರ್ಣಾ ಮನ್ನಾಪೂರ, ಗೀತಾ ಭೋಪಳಾಪೂರ ಮತ್ತು ಸಂಗಡಿಗರಿಂದ ಸಂಗೀತ ಸೇವೆ ಜರುಗಿತು. ಶಿಕ್ಷಕ ಆರ್.ವಿ. ಬೆಲ್ಲದ ನಿರೂಪಿಸಿದರು. ಎಸ್.ಎಸ್. ಹಿರೇಮಠ ಆಶಯ ನುಡಿಗಳನ್ನಾಡಿದರು.

ಪೀಠಾಧಿಪತಿಗಳಾದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಇನ್ನು ಕೆಲವೇ ದಿನಗಳಲ್ಲಿ ಶ್ರೀಮಠದಿಂದ ಚನ್ನಚೇತನ ಗುರುಕುಲ ಶಾಲೆ ಪ್ರಾರಂಭವಾಗಲಿದೆ. ಇಲ್ಲಿ 90 ದಿನಗಳ ಉಚಿತ ಹೊಲಿಗೆ ತರಬೇತಿಯೂ ನಡೆಯುತ್ತಿದೆ. ಈ ಎಲ್ಲದರ ಪ್ರಯೋಜನವನ್ನು ಆಸಕ್ತರು ಪಡೆದುಕೊಳ್ಳಬೇಕೆಂದರು.

ಮನುಷ್ಯರನ್ನು ಪ್ರೀತಿಸುವುದೇ ಮನುಷ್ಯತ್ವ: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಮಾನವನನ್ನು ಮಾನವನನ್ನಾಗಿ ಕಾಣಬೇಕು. ಮನುಷ್ಯರನ್ನು ಪ್ರೀತಿಸುವುದೇ ಮನುಷ್ಯತ್ವ. ಚಂದ್ರಲೋಕ ಸಮೀಪವಾಗಿದೆ. ಮನುಷ್ಯರ ಮನಸ್ಸುಗಳು ದೂರವಾಗುತ್ತಿವೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನೀಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2778ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕುವೆಂಪುರವರಿಗೆ ನಾಡು-ನುಡಿಯ ಬಗ್ಗೆ ಅಪಾರವಾದ ಪ್ರೀತಿ ಇತ್ತು. ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿದವರು ಕುವೆಂಪು. ಕೇವಲ 20ನೇ ವಯಸ್ಸಿನಲ್ಲಿ ನಾಡಗೀತೆಯನ್ನು ಬರೆದರು. ಕುವೆಂಪು ನಿಸರ್ಗದ ಕವಿ. ಭಾವದ ಐಶ್ವರ್ಯ, ಭಾವದ ರಸ ಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯಿಗಳನ್ನು ರೊಮಾಂಚನಗೊಳಿಸುತ್ತದೆ ಎಂದರು.

ವಿದುಷಿ ಪ್ರಭಾವತಿ ಇನಾಮದಾರ, ಸಂಗೀತ ಶಿಕ್ಷಕಿ, ಕೆ.ಎಲ್.ಇ ಪ್ರೌಢಶಾಲೆ ಬೆಂಗಳೂರು ಇವರು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ವಚನ ಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿದರು. ಧರ್ಮಗ್ರಂಥ ಪಠಣವನ್ನು ಗೌರಿ ಎಸ್. ಬಳಿಗೇರ ಹಾಗೂ ವಚನ ಚಿಂತನವನ್ನು ನಿಧಿ ಮಹಾಂತ ಕಟ್ಟಿಮನಿ ಇವರು ಪ್ರಸ್ತುತಪಡಿಸಿದರು.

ದಾಸೋಹ ಸೇವೆಯನ್ನು ಅವಿನಾಶ್ ಮತ್ತು ಅಭಿಲಾಷ ಅವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾ ಪ್ರಭು ಗಂಜಿಹಾಳ ಹಾಗೂ ಕುಟುಂಬ ವರ್ಗದವರು ಗದಗ, ಗುರುಪಾದ ಪರಪ್ಪ ಕಟ್ಟಿಮನಿ ಹಾಗೂ ಕುಟುಂಬ ವರ್ಗದವರು ಗದಗ, ಪ್ರಮೀಳಾ ಬಾಯಿ ಮಾಲಿಪಾಟೀಲ ಇಟಗಿ ಹಾಗೂ ಶಿವಪ್ಪ ತಿಮ್ಮಪ್ಪ ಯರಾಶಿ ಬನ್ನಿಕೊಪ್ಪ ಇವರುಗಳು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಮಹೇಶ್ ಗಾಣಿಗೇರ ಸ್ವಾಗತಿಸಿದರು, ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ವಿಶ್ವಮಾನವ ದಿನಾಚರಣೆ ಕುರಿತು ಮಾತನಾಡುತ್ತಾ, ಶಿವಾನುಭವ ಶಿವನಲ್ಲಿ ಒಂದಾಗುವ ಪರಿ. ಶಿವನ ಅನುಭವ ಪಡೆಯುವ ಪವಿತ್ರ ವೇದಿಕೆ. ಇಲ್ಲಿ ಕುವೆಂಪು ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಆಚರಿಸುವುದು ಸ್ತುತ್ಯ. ಕನ್ನಡಕ್ಕೆ ಕುವೆಂಪು ವಿಶ್ವಮಾನ್ಯತೆ ತಂದು ಕೊಟ್ಟರು. ಕನ್ನಡ ಸರಸ್ವತಿಯ ಕಿರೀಟದ ರತ್ನ ಬಸವಣ್ಣ ಎಂದವರು. ಪ್ರಕೃತಿಯ ಆರಾಧನೆ ಮಾಡಿ ಅಲ್ಲಿ ದೇವರಿದ್ದಾನೆ ಎನ್ನುತ್ತಾ ಪ್ರಕೃತಿ ಪ್ರೇಮದ ಮೂಲಕ ವಿಶ್ವಮಾನವ ಪ್ರಜ್ಞೆ ಸಾರಿದವರು. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಈ ಮೂರು ಸಂದೇಶಗಳನ್ನು ಕೊಟ್ಟರು ಎಂದರು.

ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿಗೆ ಗೌರವ ನಮನ

0

ಲಕ್ಷ್ಮೇಶ್ವರ: ಸರ್ಕಾರಿ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತೋತ್ಸವ ಆಚರಿಸಲಾಯಿತು. ಶಿಕ್ಷಕ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಲಾರಿ ಪಲ್ಟಿ; ತಪ್ಪಿದ ಅನಾಹುತ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ಗ್ರಾಮದ ಹೊರವಲಯದಲ್ಲಿ ಲಕ್ಷ್ಮೇಶ್ವರ ಕಡೆಗೆ ಬರುತ್ತಿದ್ದ ಮೆಕ್ಕೆಜೋಳ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.

ಹರದಗಟ್ಟಿ ಗ್ರಾಮದಿಂದ ರೈತರ ಮೆಕ್ಕೆಜೋಳ ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿನ ಕೆಂಪಿಗೆರೆ ಬಳಿ ಅಪಘಾತ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ. ಲಾರಿಯಲ್ಲಿ ಸುಮಾರು 100 ಕ್ವಿಂಟಲ್ ಮೆಕ್ಕೆಜೋಳದ ಚೀಲಗಳು ಇದ್ದವು ಎಂದು ತಿಳಿದುಬಂದಿದ್ದು, ಪಲ್ಟಿಯಾದ ಲಾರಿಯಿಂದ ಮೆಕ್ಕೆಜೋಳ ತುಂಬಿದ್ದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಕಾಳುಗಳು ರಸ್ತೆಯ ತುಂಬೆಲ್ಲ ಹರಡಿದ್ದವು.

ಇದೇ ರಸ್ತೆಯಲ್ಲಿ ಈ ಹಿಂದೆ ಹಲವಾರು ವಾಹನಗಳು ಅಪಘಾತಕ್ಕೆ ಈಡಾಗಿದ್ದು, ಇಲ್ಲಿ ತಿರುವು ಇರುವುದರಿಂದ ಅಪಘಾತಕ್ಕೆ ಕಾರಣವಾಗಿದೆ. ಈ ಅಪಾಯಕಾರಿ ತಿರುವನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸದಿರುವದರಿಂದ ಅನೇಕ ಅವಘಡಗಳು ಸಂಭವಿಸುವಂತಾಗಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.

error: Content is protected !!