Home Blog Page 23

ಮದುವೆಯಾದ 6ನೇ ದಿನವೇ ವರನಿಗೆ ಶಾಕ್..! ಮೊದಲು ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ಮರುಮದುವೆ ಆರೋಪ – ಬ್ರೋಕರ್‌ಗಳ ವಿರುದ್ಧವೂ ದೂರು

0

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮದುವೆಯಾದ ಕೇವಲ ಆರು ದಿನಗಳಲ್ಲೇ ವರನ ಜೀವನದಲ್ಲಿ ಅಚ್ಚರಿ ತಿರುವು ಕಂಡ ಘಟನೆ ಬೆಳಕಿಗೆ ಬಂದಿದೆ. ಮದುವೆಗೆ ಮುನ್ನ ನೀಡಿದ ಮಾಹಿತಿ ಸುಳ್ಳು ಎಂದು ಆರೋಪಿಸಿ ವರ ರವಿ ಜವಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತುಮ್ಮಿನಕಟ್ಟಿ ಗ್ರಾಮದ ನಿವಾಸಿ ರವಿ ಜವಳಿ ಅವರು ಫೆಬ್ರವರಿ 06ರಂದು ಹೀರೆಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗಿರಿಯಾಪುರ ಗ್ರಾಮದ ರೇಖಾ ಕೆ ಅವರೊಂದಿಗೆ ಮದುವೆಯಾಗಿದ್ದರು. ದಂಜನ್ ನಾಯಕ್ ಹಾಗೂ ಶಾರದಮ್ಮ ಎಂಬವರು ಬ್ರೋಕರ್‌ಗಳಾಗಿ ಮಧ್ಯವರ್ತಿತ್ವ ವಹಿಸಿದ್ದರೆಂದು ತಿಳಿದುಬಂದಿದೆ.

ಮದುವೆಗೂ ಮುನ್ನ ರೇಖಾ ತಮ್ಮ ಬಳಿ ಇರುವ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಆದರೆ ಮದುವೆಯ ನಂತರ, ಆ ಇಬ್ಬರು ಮಕ್ಕಳು ರೇಖಾ ಅವರ ಹಿಂದಿನ ಮದುವೆಯಿಂದ ಜನಿಸಿದ್ದವರು ಎಂಬ ವಿಚಾರ ರವಿಗೆ ತಿಳಿದು ಬಂದಿದೆ ಎಂದು ಆರೋಪಿಸಲಾಗಿದೆ.

ಈ ಬೆಳವಣಿಗೆ ರವಿಗೆ ತೀವ್ರ ಆಘಾತ ತಂದಿದ್ದು, ತನ್ನನ್ನು ಉದ್ದೇಶಪೂರ್ವಕವಾಗಿ ವಂಚಿಸಲಾಗಿದೆ ಎಂದು ಆರೋಪಿಸಿ ರೇಖಾ ಹಾಗೂ ಮಧ್ಯವರ್ತಿಗಳ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹಲಗೇರಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮದುವೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿ ಪರಿಶೀಲನೆ ನಡೆಸುತ್ತಿದ್ದಾರೆ. ಮದುವೆ ಸಂಬಂಧಗಳಲ್ಲಿ ಪಾರದರ್ಶಕತೆ ಮತ್ತು ಪೂರ್ವ ಪರಿಶೀಲನೆಯ ಅಗತ್ಯತೆ ಈ ಘಟನೆ ಮತ್ತೊಮ್ಮೆ ಹೀಗೇ ಸದ್ದು ಮಾಡಿಸಿದೆ.

ಅನುದಾನ ವಿಳಂಬದ ದೋಷವೇ? ಗದಗ ಅಂಗನವಾಡಿಗಳಲ್ಲಿ ಮೊಟ್ಟೆ ಹಣವೇ ಇಲ್ಲ, ಕಳಪೆ ಗೋಧಿ ಪೂರೈಕೆ ಆರೋಪ

0

ಗದಗ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರದ ಕೊರತೆ ಗಂಭೀರ ಸ್ವರೂಪ ಪಡೆದಿದೆ. ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಅಂಗನವಾಡಿಗಳಲ್ಲಿ ಜನವರಿ ತಿಂಗಳ ಮೊಟ್ಟೆ ಹಣ ಫೆಬ್ರವರಿ 11ರವರೆಗೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮಕ್ಕಳಿಗೆ ಸರಿಯಾದ ಆಹಾರ ಸಿಗದೆ ಸಂಕಷ್ಟ ಎದುರಾಗಿದೆ.

ಗ್ರಾಮಸ್ಥರ ಆರೋಪದಂತೆ, ಅನುದಾನ ವಿಳಂಬದಿಂದಾಗಿ ಒಂದು ಮೊಟ್ಟೆಯನ್ನು ಮೂವರು ಮಕ್ಕಳಿಗೆ ಹಂಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ಪೌಷ್ಟಿಕಾಹಾರ ಯೋಜನೆಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎತ್ತಿದೆ. ಮಕ್ಕಳಿಗೆ ನೀಡಬೇಕಾದ ಹಾಲಿನ ಪೂರೈಕೆ ಕೂಡ ಅಸಮರ್ಪಕವಾಗಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ, ಅಂಗನವಾಡಿಗಳಿಗೆ ಪೂರೈಕೆಯಾಗುವ ಗೋಧಿಯಲ್ಲಿ ನುಸಿಗಳು ಪತ್ತೆಯಾಗಿರುವುದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳು ಕಾಗದದಲ್ಲೇ ಸೀಮಿತವಾಗಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಅನುದಾನ ಬಿಡುಗಡೆ ಮಾಡಿ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಅನುದಾನ ಬಿಡುಗಡೆ ಆಗದೆ ಇರುವುದೇ ಸಮಸ್ಯೆಯೋ, ಅಥವಾ ಬಿಡುಗಡೆಯಾದ ಹಣ ಅಂಗನವಾಡಿಗಳಿಗೆ ತಲುಪದೇ ಮಧ್ಯದಲ್ಲಿ ಅಡಕವಾಗುತ್ತಿದೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ.

ಯಶ್ ‘ಟಾಕ್ಸಿಕ್’ಗೆ ಮತ್ತೊಂದು ಸಂಕಷ್ಟ: ದೇವದೂತ ಅವಮಾನ ಆರೋಪ, ಸೆನ್ಸಾರ್ ಹಂತದಲ್ಲೇ ಅಡ್ಡಿ?

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿದೆ. ಅಡಲ್ಟ್ ದೃಶ್ಯಗಳು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ದೃಶ್ಯಗಳ ಕಾರಣಕ್ಕೆ ಕ್ರೈಸ್ತ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ಟೀಸರ್‌ನಲ್ಲಿ ನಾಯಕ ರಾಯ ಕಾರಿನೊಳಗೆ ಲೈಂಗಿಕ ಕ್ರಿಯೆ ನಡೆಸುವ ದೃಶ್ಯ ಕಾಣಿಸುತ್ತದೆ. ಕಾರು ಅಲುಗಾಡಿ ಡೆಟೋನೇಟರ್ ಸಕ್ರಿಯವಾಗಿ ಬಾಂಬ್ ಸ್ಫೋಟಗೊಳ್ಳುವ ಸನ್ನಿವೇಶವೂ ಇದೆ. ಈ ದೃಶ್ಯ ದೇವದೂತ ಸಂತ ಮಿಕಯೇಲ್ ಮೂರ್ತಿಯ ಹಿನ್ನೆಲೆಯಲ್ಲೇ ತೋರಿಸಲಾಗಿದೆ ಎಂಬುದು ದೂರುದಾರರ ಆರೋಪ.

ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ ಚಲನಚಿತ್ರ ವಾಣಿಜ್ಯ ಮಂಡಳಿ, ರಾಜ್ಯ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದೆ. “ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಟೀಸರ್‌ನ್ನು ತಕ್ಷಣ ತೆಗೆದುಹಾಕಬೇಕು” ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಸಾರ್ವಜನಿಕ ಕ್ಷಮೆಯಾಚನೆ ಮಾಡದಿದ್ದರೆ ಕಾನೂನು ಹೋರಾಟ ಅನಿವಾರ್ಯ ಎಂದು ಎಚ್ಚರಿಸಲಾಗಿದೆ.

ಸಾಮಾನ್ಯವಾಗಿ ಈ ರೀತಿಯ ವಿವಾದಗಳು ಸೆನ್ಸಾರ್ ಹಂತದಲ್ಲಿ ಗಂಭೀರ ಚರ್ಚೆಗೆ ಕಾರಣವಾಗುತ್ತವೆ. ‘ಟಾಕ್ಸಿಕ್’ ಚಿತ್ರದ ಭವಿಷ್ಯವೂ ಇದೇ ರೀತಿಯ ಪರೀಕ್ಷೆಗೆ ಒಳಗಾಗುತ್ತದೆಯೇ ಎಂಬ ಪ್ರಶ್ನೆ ಈಗ ಸಿನಿ ವಲಯದಲ್ಲಿ ಮೂಡಿದೆ.

ರಾಷ್ಟ್ರಗೀತೆಗೂ ಮುನ್ನ “ವಂದೇ ಮಾತರಂ” ಕಡ್ಡಾಯ: ಕೇಂದ್ರ ಗೃಹ ಸಚಿವಾಲಯದ ಹೊಸ ಮಾರ್ಗಸೂಚಿ

0

ನವದೆಹಲಿ: ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಷ್ಟ್ರಗೀತೆ ‘ಜನ ಗಣ ಮನ’ಗೂ ಮುನ್ನ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಅಥವಾ ನುಡಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರ್ತಿಯಾದ ಹಿನ್ನೆಲೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭಗಳು ಸೇರಿದಂತೆ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಚಿತ್ರಮಂದಿರಗಳಲ್ಲಿ ಹಾಗೂ ಇತರ ಸರ್ಕಾರೀ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆ ನುಡಿಸಬೇಕು ಅಥವಾ ಹಾಡಬೇಕು ಎಂದು ಸೂಚಿಸಲಾಗಿದೆ.

3 ನಿಮಿಷ 10 ಸೆಕೆಂಡುಗಳ ಅವಧಿಯ, 6 ಚರಣಗಳನ್ನು ಒಳಗೊಂಡ ‘ವಂದೇ ಮಾತರಂ’ ಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ತ್ರಿವರ್ಣ ಧ್ವಜಾರೋಹಣದ ಸಂದರ್ಭಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ವೇಳೆ, ಅವರ ಭಾಷಣಗಳ ಮೊದಲು ಮತ್ತು ನಂತರ, ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಗಳ ಸಂದರ್ಭಗಳಲ್ಲಿ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಹಾಗೂ ನಂತರವೂ ಈ ನಿಯಮ ಅನ್ವಯವಾಗಲಿದೆ.

ಇನ್ನೂ, ‘ರಾಷ್ಟ್ರದ ಗೌರವಕ್ಕೆ ಅಪಮಾನ ತಡೆ’ ಕಾಯ್ದೆಯ ಅಡಿಯಲ್ಲಿ ರಾಷ್ಟ್ರಗೀತೆಗೆ (ಮತ್ತು ಈಗ ರಾಷ್ಟ್ರೀಯ ಗೀತೆಗೂ) ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ತಿಳಿಸಲಾಗಿದೆ.

ಇದುವರೆಗೆ ‘ವಂದೇ ಮಾತರಂ’ ಗೀತೆಗೆ ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ‘ಜನ ಗಣ ಮನ’ ಗೀತೆಗೆ ರಾಗ, ಅವಧಿ ಮತ್ತು ಗಾಯನ ವಿಧಾನ ಕುರಿತಂತೆ ಸ್ಪಷ್ಟ ನಿಯಮಗಳಿದ್ದವು. ಇದೀಗ ಆರು ಚರಣಗಳ ಸಂಪೂರ್ಣ ಆವೃತ್ತಿಯನ್ನು ಅಧಿಕೃತವಾಗಿ ಕಡ್ಡಾಯಗೊಳಿಸಲಾಗಿದೆ.

ವಿಶೇಷವಾಗಿ, 1937ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ ನಾಲ್ಕು ಚರಣಗಳನ್ನು ಸೇರಿಸಿ ಒಟ್ಟು ಆರು ಚರಣಗಳನ್ನೂ ಈಗಿನಿಂದ ನುಡಿಸಲು ಸೂಚಿಸಲಾಗಿದೆ. 1875ರಲ್ಲಿ ಅಕ್ಷಯ ನವಮಿಯಂದು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ್ದ ‘ವಂದೇ ಮಾತರಂ’ ಗೀತೆ, ಅದೇ ವರ್ಷದ ನವೆಂಬರ್ 7ರಂದು ಮೊದಲ ಬಾರಿ ಪ್ರಕಟಗೊಂಡಿತ್ತು.

ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮ ವಾಸ: 8 ವಿದೇಶಿ ಪ್ರಜೆಗಳು ಪೊಲೀಸರ ವಶಕ್ಕೆ

0

ಬೆಂಗಳೂರು: ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ಮಹಿಳೆ ಸೇರಿ ಎಂಟು ಮಂದಿ ವಿದೇಶಿ ಪ್ರಜೆಗಳನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಮರೂನ್ ದೇಶದ ಐವರು ಹಾಗೂ ಸುಡಾನ್‌ನ ಮೂವರು ಈ ವೇಳೆ ಪತ್ತೆಯಾಗಿದ್ದಾರೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಈ ವಿದೇಶಿ ಪ್ರಜೆಗಳು, ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ನಗರದಲ್ಲೇ ಅಕ್ರಮವಾಗಿ ವಾಸವಾಗಿದ್ದರು. ಆರಂಭದಲ್ಲಿ ನಗರದ ಗಡಿಭಾಗದಲ್ಲಿ ನೆಲೆಸಿದ್ದ ಆರೋಪಿಗಳು, ಇತ್ತೀಚೆಗೆ ಸಂಜಯನಗರದ ಭೂಪಸಂದ್ರ ಪ್ರದೇಶಕ್ಕೆ ಬಂದು ವಾಸವಾಗಿದ್ದರು ಎಂದು ತಿಳಿದುಬಂದಿದೆ.

ನಗರದ ವಿವಿಧ ಭಾಗಗಳಲ್ಲಿ ಅಕ್ರಮ ವಾಸಿಗಳ ವಿರುದ್ಧ ನಡೆಯುತ್ತಿರುವ ವಿಶೇಷ ಕಾರ್ಯಾಚರಣೆಯ ವೇಳೆ ಮಂಗಳವಾರ ಈ ಎಂಟು ಮಂದಿ ಪತ್ತೆಯಾಗಿದ್ದಾರೆ. ಎಲ್ಲರನ್ನೂ ಪ್ರಾದೇಶಿಕ ವಿದೇಶಿ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅವರನ್ನು ಮಾತೃ ದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ: ಜಲ್ಲಿಗೇರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ – ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

0

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಪರದಾಟ ಆರಂಭವಾಗಿದೆ.

ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಜಲ್ಲಿಗೇರಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಮಂದಿ ದೂರದ ಬಾವಿ ಹಾಗೂ ಬೋರವೆಲ್‌ಗಳ ಬಳಿ ನೀರಿಗಾಗಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಗ್ರಾಮ ಪಂಚಾಯತಿ ಹಾಗೂ ಪಿಡಿಓ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸದಸ್ಯರ ಆಡಳಿತ ಅವಧಿ ಮುಗಿದ ನಂತರ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. “ನಮಗೆ ನೀರು ಬೇಕು” ಎಂದು ಭಜನೆ ಹಾಡುತ್ತ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಡೋಂಟ್ ಕೇರ್‌ ಧೋರಣೆಗೆ ಬೇಸತ್ತ ಜನರು ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ PWD ಎಂಜಿನಿಯರ್, ಅಕೌಂಟೆಂಟ್ ಲೋಕಾಯುಕ್ತ ಬಲೆಗೆ

0

ವಿಜಯನಗರ: ಕಾಮಗಾರಿ ಬಿಲ್ ಮಂಜೂರು ಮಾಡಲು 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಪಿಡಬ್ಲ್ಯುಡಿ ಕಚೇರಿಯಲ್ಲಿ ಈ ಟ್ರ್ಯಾಪ್ ಕಾರ್ಯಾಚರಣೆ ನಡೆದಿದೆ.

ಹೂವಿನ ಹಡಗಲಿಯ ಮಹೇಶ್ ಹಲಗೇರಿ ಎಂಬ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿದ್ದರು. ಕಾಮಗಾರಿಯ ಬಿಲ್ ಬಿಡುಗಡೆ ಮಾಡಲು ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆ ಮಹೇಶ್ ಹಲಗೇರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್. ಛಲವಾದಿ ನೇತೃತ್ವದಲ್ಲಿ ಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಹಾಗೂ ಸಿಬ್ಬಂದಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರು.

ಲಂಚದ ಹಣ ಸ್ವೀಕರಿಸುವಾಗಲೇ ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ: ಗೃಹ ಸಚಿವರಿಂದ ಜಂಟಿ ಪೊಲೀಸ್ ಆಯುಕ್ತರಿಗೆ ತನಿಖೆ ಆದೇಶ

0

ಬೆಂಗಳೂರು: ವಿಧಾನಸೌಧದಲ್ಲಿರುವ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಚಿನ್ನ ಹಾಗೂ ಹಣ ಇರುವ ಬ್ಯಾಗ್ ನಾಪತ್ತೆಯಾಗಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಸಂಪೂರ್ಣ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧದ ಗೇಟ್‌ನಿಂದ ಆ ಬ್ಯಾಗ್ ಹೇಗೆ ಒಳಗೆ ಪ್ರವೇಶಿಸಿತು? ಯಾವ ಗೇಟ್ ಮೂಲಕ ಒಳಗೆ ಹೋಯಿತು ಎಂಬುದು ಮುಖ್ಯ. ಒಬ್ಬ ಸಚಿವರ ಕಚೇರಿವರೆಗೆ ಬ್ಯಾಗ್ ಹೋಗುತ್ತದೆ ಎಂದರೆ ಅದು ಗಂಭೀರ ವಿಷಯ. ಅದೂ ಯಾರಿಗೂ ತಿಳಿಯದೆ ಒಳಗೆ ತೆಗೆದುಕೊಂಡು ಹೋಗಿರುವುದು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ,” ಎಂದು ಅವರು ಹೇಳಿದರು.

ಕಳವು ವಿಚಾರಕ್ಕಿಂತ ಮೊದಲು ಆ ಬ್ಯಾಗ್ ವಿಧಾನಸೌಧದೊಳಗೆ ಹೇಗೆ ತಲುಪಿತು ಎಂಬುದನ್ನು ಪತ್ತೆಹಚ್ಚುವುದು ಅಗತ್ಯವೆಂದು ಅವರು ಸ್ಪಷ್ಟಪಡಿಸಿದರು. ‘ನವೀನ್’ ಎಂಬ ವ್ಯಕ್ತಿ ಬ್ಯಾಗ್ ಅನ್ನು ಒಳಗೆ ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಗ್ರಾ.ಪಂ.ಸದಸ್ಯರು ಅಧಿಕಾರ ಸ್ವೀಕರಿಸಿದ 15 ತಿಂಗಳ ಬಳಿಕ ಅವಿಶ್ವಾಸ ನಿರ್ಣಯಕ್ಕೆ ಅಡ್ಡಿಯಿಲ್ಲ: ಹೈಕೋರ್ಟ್

0

ಬೆಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಮೊದಲ 15 ತಿಂಗಳ ಅವಧಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಮಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯರ ಮನವಿಯ ಮೇರೆಗೆ ಕೋಲಾರ ಉಪವಿಭಾಗಾಧಿಕಾರಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಈ ಕ್ರಮ ಪ್ರಶ್ನಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ವಿಚಾರಣೆ ನಡೆಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪೀಠ ಹೇಳುವಂತೆ, ಗ್ರಾಮ ಪಂಚಾಯತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ನಂತರದ ಆರಂಭಿಕ 15 ತಿಂಗಳ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಬಂಧವಿದೆ. ಅದರ ನಂತರ ಯಾವುದೇ ಸಂದರ್ಭದಲ್ಲಿ ನಿರ್ಣಯ ಮಂಡಿಸಬಹುದು.

ಅರ್ಜಿದಾರರ ಪರ ವಕೀಲರು, ಅಧ್ಯಕ್ಷರ ಅವಧಿಯ ಕೊನೆಯ ಹಂತದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಸದಸ್ಯರು ಮುಂದಾಗಿರುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು. ಆದರೆ, 15 ತಿಂಗಳ ಬಳಿಕ ಯಾವಾಗ ಬೇಕಾದರೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂಬುದರಿಂದ ಆ ವಾದವನ್ನು ಪೀಠ ತಳ್ಳಿ ಹಾಕಿದೆ. ಅವಧಿಯ ಅಂತ್ಯದ ವೇಳೆಯಲ್ಲಿ ಅವಿಶ್ವಾಸ ಮಂಡಿಸಲು ಅವಕಾಶ ನೀಡುವುದರಿಂದ ಅಧಿಕಾರ ದುರುಪಯೋಗವಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಉಪವಿಭಾಗಾಧಿಕಾರಿಗಳು ಸಭೆ ನಡೆಸಲು ದಿನಾಂಕ ನಿಗದಿ ಮಾಡಿರುವುದರಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಹಣಕಾಸಿನ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ಪರಿಶೀಲನೆ ನಡೆಸಬೇಕು. ಆದೇಶದ ಪ್ರತಿ ಸಿಕ್ಕ ಏಳು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತ್‌ಗೆ ನಿರ್ದೇಶನ ನೀಡಲಾಗಿದೆ.

ಗದಗದಲ್ಲಿ ಆಕಸ್ಮಿಕ ಬೆಂಕಿ ಅವಘಡ: ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಪೈಪ್ ಸುಟ್ಟು ಭಸ್ಮ!

0

ಗದಗ: ನಗರದ ಶಿವಬಸವ ನಗರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇಬಲ್ ಲೈನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಪೈಪ್‌ಗಳು ಹೊತ್ತಿ ಉರಿದು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಪೈಪ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು.

ಬೆಂಕಿಯಿಂದ ಉಂಟಾದ ಕಪ್ಪು ದಟ್ಟ ಹೊಗೆ ಸುತ್ತಮುತ್ತಲಿನ ಬಡಾವಣೆ ಪ್ರದೇಶವನ್ನು ಆವರಿಸಿದ್ದು, ಸ್ಥಳೀಯರು ಭಯಭೀತರಾಗಿದ್ದರು. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.

ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಆದರೆ ಪೈಪ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ನಷ್ಟದ ಪ್ರಮಾಣ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಈ ಘಟನೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡ ಕಾರಣ ಕುರಿತು ತನಿಖೆ ಮುಂದುವರೆದಿದೆ.

error: Content is protected !!