Home Blog Page 23

ಮಂಗಳೂರು-ಕಾಸರಗೋಡು ಪ್ರಯಾಣಿಕರಿಗೆ ಬಿಗ್​​ ಶಾಕ್​; ಟಿಕೆಟ್ ದರ ಭಾರೀ ಏರಿಕೆ!

0

ಮಂಗಳೂರು: ಮಂಗಳೂರು–ಕಾಸರಗೋಡು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಿಗ್ ಶಾಕ್ ನೀಡಿದೆ.

ಕುಂಬಳ ಟೋಲ್ ಗೇಟ್‌ನಲ್ಲಿ ಅಧಿಕೃತ ಸಂಗ್ರಹ ಆರಂಭಕ್ಕೂ ಮುನ್ನವೇ ಟೋಲ್ ಮೊತ್ತವನ್ನು ಸೇರಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಜ.20ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ಕುಂಬಳ–ಮಂಗಳೂರು ಪ್ರಯಾಣ ದರ 67ರಿಂದ 75 ರೂ.ಗೆ ಏರಿಕೆಯಾಗಿದೆ.

ರಾಜಹಂಸ ಬಸ್‌ಗಳ ದರವೂ 80ರಿಂದ 90 ರೂ.ಗೆ ಹೆಚ್ಚಿದೆ. ಪ್ರತಿದಿನ ಸುಮಾರು 35 ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಟೋಲ್ ಪಾವತಿಗೆ ದಿನಕ್ಕೆ ಸುಮಾರು 48 ಸಾವಿರ ರೂ. ವ್ಯಯವಾಗುತ್ತಿದೆ. ಹೆದ್ದಾರಿ ಬಳಸದಿದ್ದರೂ ಟೋಲ್ ಪಾವತಿಸಬೇಕಾದ ಅನಿವಾರ್ಯತೆಯಿಂದ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ವಿನಾಯಿತಿ ಕೋರಿ ಮಂಗಳೂರು ವಿಭಾಗದ ಅಧಿಕಾರಿಗಳು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪವಿತ್ರಗೌಡಗೆ ‘ವಿಐಪಿ ಟ್ರೀಟ್‌ಮೆಂಟ್’ ಬೇಡ: ಜೈಲಿನಿಂದಲೇ ಕಠಿಣ ಸಂದೇಶ ಕೊಟ್ಟ ಡಿಜಿ ಅಲೋಕ್ ಕುಮಾರ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಪವಿತ್ರಗೌಡಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಕಾರಾಗೃಹ ಮಹಾನಿರ್ದೇಶಕ ಅಲೋಕ್ ಕುಮಾರ್ ನೀಡಿದ್ದಾರೆ.

ಶಿವಮೊಗ್ಗ ಜೈಲಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, “ಜೈಲಿನಲ್ಲಿರುವ ಎಲ್ಲ ಕೈದಿಗಳು ಸಮಾನರು. ಯಾರಿಗೂ ಪ್ರತ್ಯೇಕ ನಿಯಮ ಇಲ್ಲ” ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

ಕಾರಾಗೃಹದಲ್ಲಿ ನೀಡುವ ಊಟವನ್ನು ಎಫ್‌ಎಸ್‌ಐಎಲ್ ಮೂಲಕ ಗುಣಮಟ್ಟ ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದ ಬಳಿಕವೇ ಕೈದಿಗಳಿಗೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದ ಊಟ ತರಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

“ಒಬ್ಬರಿಗೆ ವಿನಾಯಿತಿ ಕೊಟ್ಟರೆ, ನಾಳೆ ಸಾವಿರಾರು ಕೈದಿಗಳು ಅದೇ ಬೇಡಿಕೆ ಇಡುತ್ತಾರೆ. ಇದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಿಜನರ್ಸ್ ಆಕ್ಟ್ ಪ್ರಕಾರ ಕೈದಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಆದರೆ ವಿಐಪಿ ಟ್ರೀಟ್‌ಮೆಂಟ್ ಎಂಬುದು ಕಾರಾಗೃಹ ವ್ಯವಸ್ಥೆಯಲ್ಲಿ ಇಲ್ಲ ಎಂಬ ಸಂದೇಶವನ್ನು ಅಲೋಕ್ ಕುಮಾರ್ ಸ್ಪಷ್ಟವಾಗಿ ರವಾನಿಸಿದ್ದಾರೆ.

‘ಯೋಚಿಸದೆ ಹೆಜ್ಜೆ ಇಡಬೇಡ’- ಗಿಲ್ಲಿಗೆ ಒಂದೊಳ್ಳೆ ಕಿವಿಮಾತು ಹೇಳಿದ ಕಿಚ್ಚ ಸುದೀಪ್

ಬಿಗ್ ಬಾಸ್ ಗೆಲುವಿನ ಬಳಿಕ ಗಿಲ್ಲಿ ನಟರ ಹೆಸರು ಎಲ್ಲೆಡೆ ಗರ್ಜಿಸುತ್ತಿದೆ. ಆದರೆ ಈ ಗೆಲುವಿನ ಹಿಂದೆ ಕಿಚ್ಚ ಸುದೀಪ್ ಅವರ ಮೌನ ಶ್ರಮ, ಮಾರ್ಗದರ್ಶನ ಮತ್ತು ಕಿವಿಮಾತುಗಳು ಪ್ರಮುಖ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ.

ಬಿಗ್ ಬಾಸ್ ಮನೆಯೊಳಗೆ ಇರುವಾಗ ಆಟ, ಮಾತು, ವರ್ತನೆ ಎಲ್ಲವೂ ನಿಯಂತ್ರಣ ತಪ್ಪುವುದು ಸಹಜ. ಗಿಲ್ಲಿಯೂ ಹಲವು ಬಾರಿ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಸುದೀಪ್ ಅವರನ್ನು ಕರೆದು ತಿದ್ದುವ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಗಿಲ್ಲಿ ಹಂತಹಂತವಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

ಫಿನಾಲೆ ದಿನ ಸುದೀಪ್ ಎದುರು ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಸುದೀಪ್ ಅವರನ್ನು ಖಾಸಗಿಯಾಗಿ ಭೇಟಿಯಾಗಿ, ಮತ್ತಷ್ಟು ಮಾರ್ಗದರ್ಶನ ಪಡೆದಿದ್ದಾರೆ.

ಈ ವೇಳೆ ಸುದೀಪ್, ‘ಗೆಲುವು ಬಂದಾಗ ಮನುಷ್ಯನ ಮನಸ್ಸು ಕೈ ತಪ್ಪುತ್ತದೆ. ಆ ಸಂದರ್ಭದಲ್ಲಿ ಯೋಚಿಸದೇ ಹೆಜ್ಜೆ ಇಟ್ಟರೆ ಭವಿಷ್ಯ ಹಾಳಾಗಬಹುದು’ ಎಂದು ಗಿಲ್ಲಿಗೆ ಗಂಭೀರ ಸಲಹೆ ನೀಡಿದ್ದಾರೆ. ಈ ಮಾತು ಗಿಲ್ಲಿಯನ್ನು ಇನ್ನಷ್ಟು ಹೊಣೆಗಾರ ವ್ಯಕ್ತಿಯಾಗಿಸಿದೆ ಎನ್ನಲಾಗಿದೆ.

ಇದೇ ವೇಳೆ ಗಿಲ್ಲಿ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಶಿವಣ್ಣ ಮುಂಚಿತವಾಗಿಯೇ ಗಿಲ್ಲಿ ಗೆಲುವಿನ ಬಗ್ಗೆ ಹೇಳಿದ್ದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಭೇಟಿಯ ವೇಳೆ ಸುದೀಪ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಡಾ. ಬಸವರಾಜ ಬಳ್ಳಾರಿ ನೇಮಕ

0

ಬೆಂಗಳೂರು: ಗದಗ ಜಿಲ್ಲೆಯ ಯುವ ಸಂಘಟನಾ ಚತುರ ಹಾಗೂ ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ‌ ಡಾ. ಬಸವರಾಜ ಬಳ್ಳಾರಿ ಅವರ ನೇಮಕ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ  ಹೆಮ್ಮೆ ತರುವ ವಿಷಯವಾಗಿದೆ ಎಂದು ಜಿಲ್ಲೆಯ ನೌಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಡಾ. ಬಸವರಾಜ ಬಳ್ಳಾರಿ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ನೌಕರರ ಹಕ್ಕುಗಳು, ಸೇವಾ ಭದ್ರತೆ, ವೇತನ, ವರ್ಗಾವಣೆ ಹಾಗೂ ಕಲ್ಯಾಣ ಯೋಜನೆಗಳಿಗಾಗಿ ರಾಜ್ಯ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಜೊತೆಗೆ ಶ್ರಮಿಸಿದ್ದಾರೆ.

ಹೀಗಾಗಿ  ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನದ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ.

ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಬಸವರಾಜ್ ಬಳ್ಳಾರಿ ಅವರು, ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ,  ನೌಕರರ ಕಾರ್ಯಾಗಾರ, ರಾಜ್ಯವೇ ತಿರುಗಿ ನೋಡುವಂತೆ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಹಬ್ಬ ಹಾಗೂ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ಸೇವಕನಂತೆ ಕಾರ್ಯನಿರ್ವಹಿಸುವ ವೈಖರಿ ಆಧರಿಸಿ ಈ ಸ್ಥಾನ ಕೊಡಲಾಗಿದೆ ಎನ್ನಲಾಗುತ್ತದೆ.

ಈ ಐತಿಹಾಸಿಕ ನೇಮಕಕ್ಕೆ ಗದಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಗದಗ ಜಿಲ್ಲಾ ಶಾಖೆ  ಅಭಿನಂದನೆ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್. ಲಿಂಗದಾಳ, ಖಜಾಂಚಿ ಮಹಂತೇಶ ನಿಟ್ಟಾಲಿ, ಅಜಯಕುಮಾರ ಕಲಾಲ, ದೇವೇಂದ್ರಪ್ಪ ತಳವಾರ, ರಾಜು ಕೊಂಟಿಗೂಣ್ಣವರ, ಶ್ರೀಧರ ಚಿನಗುಂಡಿ, ಶರಣಯ್ಯ ಪಾರ್ವತಿಮಠ, ಮುತ್ತುರಾಜ ಮಲಕಶೆಟ್ಟಿ, ರಾಜಕುಮಾರ್ ಸೊಪ್ಪಡ್ಲ,   ಸುರೇಶ  ಹುಚ್ಚಣ್ಣವರ, ಶರಣು ಸಂಗಳದ, ದೇವಪ್ಪ ದುರಗಣ್ಣವರ, ವಾಯ್.ಎನ್. ಕಡೆಮನಿ, ಶ್ರೀಮತಿ ಸರೋಜಾ ಕಟ್ಟಿಮನಿ, ಬಿ.ಸಿ. ಹಿರೇಹಾಳ, ಮಂಜುನಾಥ ಲಿಂಗದಾಳ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ನೇಮಕದಿಂದ ರಾಜ್ಯ ಮಟ್ಟದಲ್ಲಿ ಗದಗ ಜಿಲ್ಲೆಯ ಧ್ವನಿ ಇನ್ನಷ್ಟು ಬಲಗೊಳ್ಳಲಿದ್ದು, ಜಿಲ್ಲೆಯ ನೌಕರರ ಸಮಸ್ಯೆಗಳು ಪರಿಣಾಮಕಾರಿಯಾಗಿ ಸರ್ಕಾರದ ಗಮನಕ್ಕೆ ಬರಲಿವೆ ಎಂಬ ವಿಶ್ವಾಸವನ್ನು ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕರ್ನಾಟಕ‌ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನನ್ನ ಮೇಲೆ ಬಲವಾದ ನಂಬಿಕೆ ಇಟ್ಟುಮಹತ್ವದ ಹುದ್ದೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ, ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಸಂಘ ಹಾಗೂ ನೌಕರರ ಹಿತಾಸಕ್ತಿಗಾಗಿ ಹೋರಾಟ ಮಾಡಲಾಗುವುದು.

-ಡಾ. ಬಸವರಾಜ ಬಳ್ಳಾರಿ, ನೂತನ ರಾಜ್ಯ ಉಪಾಧ್ಯಕ್ಷರು ‌ಹಾಗೂ ಗದಗ ಜಿಲ್ಲಾ ಅಧ್ಯಕ್ಷರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.

ಕೆಆರ್ ಪುರ | ಅಕ್ರಮ ಫ್ಲೆಕ್ಸ್ ಬ್ಯಾನರ್ ತೆರವು ಕಾರ್ಯಾಚರಣೆ: ₹50,000 ದಂಡ ವಸೂಲಿ

0

ಬೆಂಗಳೂರು: ಕೆಆರ್ ಪುರ ಜಿಬಿಎ ವಲಯದಲ್ಲಿ ಅಕ್ರಮ ಫ್ಲೆಕ್ಸ್ ಬ್ಯಾನರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ ₹50,000 ದಂಡ ವಸೂಲಿ ಮಾಡಲಾಗಿದೆ.

ರಾತ್ರಿಯ ಸಮಯದಲ್ಲಿ ಜಂಟಿ ಆಯುಕ್ತೆ ಡಾ. ಸುಧಾ ನೇತೃತ್ವದಲ್ಲಿ 60 ಸಿಬ್ಬಂದಿಗಳೊಂದಿಗೆ ಫೀಲ್ಡ್ ಗೆ ಇಳಿದ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ನೆರೆದಿದ್ದ ಬ್ಯಾನರ್‌ಗಳು ಮತ್ತು ನೇಮ್ ಬೋರ್ಡ್‌ಗಳನ್ನು ತೆರವುಗೊಳಿಸಿದ್ದಾರೆ. ಕೆಆರ್ ಪುರ ಸಿಟಿ, ಜಿಬಿಎ ಕಛೇರಿ ಮುಂಭಾಗ, ಶ್ರೀವಿನಾಯಕ ಜ್ಯೂವೆಲ್ಲರಿ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್, ಜಿಆರ್ ಟಿ ಜ್ಯೂವೆಲ್ಲರಿ ಮತ್ತು ಬಾಲಾಜಿ ವೈನ್ಸ್ ಸೇರಿದಂತೆ ಅನೇಕ ವ್ಯವಹಾರಸ್ಥರ ಬ್ಯಾನರ್‌ಗಳಿಗೆ ದಂಡ ವಿಧಿಸಲಾಗಿದೆ.

ಫ್ಲೆಕ್ಸ್ ಬ್ಯಾನರ್‌ಗಳಿಗೆ ಅಳವಡಿಸಿದ ಎಲ್ಇಡಿ ಲೈಟ್‌ಗಳಿಗೆ ಕೂಡ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಜಿಬಿಎ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ವಲಯ ವ್ಯಾಪ್ತಿಯಲ್ಲಿನ ಎಲ್ಲಾ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಮತ್ತು ನೇಮ್ ಬೋರ್ಡ್‌ಗಳಿಗೆ ನಿರಂತರ ಪರಿಶೀಲನೆ ಜಾರಿಯಲ್ಲಿದೆ.

ಬಳ್ಳಾರಿ | ಪಡಿತರ ಅಕ್ಕಿ ಸಾಗಾಟದ ಮೇಲೆ ತಡರಾತ್ರಿ ದಾಳಿ; 523 ಚೀಲ ಅಕ್ಕಿ ವಶಕ್ಕೆ!

0

ಬಳ್ಳಾರಿ: ಬಳ್ಳಾರಿ ನಗರದ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ತಡರಾತ್ರಿ ಪಡಿತರ ಅಕ್ಕಿ ಸಾಗಾಟದ ಅಡ್ಡೆ ಮೇಲೆ ಬಳ್ಳಾರಿ ಸಹಾಯಕ ಆಯುಕ್ತ ರಾಜೇಶ್ ನೇತೃತ್ವದಲ್ಲಿ ದಾಳಿ ನಡೆಸಿ 523 ಚೀಲ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಪಡಿತರ ಅಂಗಡಿಗಳಿಂದ ಪಿಕಪ್ ಆಟೋ ಮೂಲಕ ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ಗುಜರಾತ್ ಮೂಲದ ದೊಡ್ಡ ಲಾರಿಯಲ್ಲಿ ತುಂಬಿ ಸಾಗಿಸಲು ಯತ್ನಿಸುತ್ತಿದ್ದರು. ಸಣ್ಣ ವಾಹನದಿಂದ ದೊಡ್ಡ ಲಾರಿಗೆ ಅಕ್ಕಿ ತುಂಬುತ್ತಿರುವ ಸಮಯದಲ್ಲೇ ದಾಳಿ ನಡೆದಿದೆ. ದಾಳಿ ವೇಳೆ ಒಂದು ದೊಡ್ಡ ಲಾರಿ, ಎರಡು ಪಿಕಪ್ ಆಟೋಗಳು, ಇಬ್ಬರು ಗುಜರಾತ್ ಮೂಲದ ಚಾಲಕರು, ಬಳ್ಳಾರಿ ಮೂಲದ ಒಬ್ಬ ಚಾಲಕ ಮತ್ತು ಐವರು ಹಮಾಲಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೂ ಒಬ್ಬ ಚಾಲಕ ಮತ್ತು ಐವರು ಹಮಾಲಿಗಳು ಪರಾರಿಯಾಗಿದ್ದಾರೆ. ಅಕ್ಕಿಯನ್ನು ಅಕ್ರಮವಾಗಿ ಗುಜರಾತ್ ರಾಜ್ಯಕ್ಕೆ ಸಾಗಿಸಲು ಯತ್ನಿಸಿದವರ ವಿರುದ್ಧ A.P.MC ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ| ಬೆಳ್ಳಂ ಬೆಳಗ್ಗೆ ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳ ಹಿಂಡು!

0

ಮಂಡ್ಯ:- ಬೆಳ್ಳಂ ಬೆಳಗ್ಗೆ ಕಾಡಾನೆಗಳ ಹಿಂಡು ನಾಡಿಗೆ ಲಗ್ಗೆಯಿಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೊರವನಹಳ್ಳಿಯಲ್ಲಿ ಜರುಗಿದೆ.

ಗೊರವನಹಳ್ಳಿ ಹಾಗೂ ಉಪ್ಪಿನಕೆರೆ ಗ್ರಾಮದ ಕಬ್ಬನಿಗದ್ದೆಯಲ್ಲಿ ಸುಮಾರು 5 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಅದರಲ್ಲಿ ಮೂರು ಗಂಡು ಆನೆ ಹಾಗೂ ಎರಡೂ ಮರಿ ಆನೆಗಳು ಬಂದಿದೆ. ಜಮೀನೋಂದರಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಂಡು ಜನತೆ ಆತಂಕ ಹೊರ ಹಾಕಿದ್ದಾರೆ.

ಕಾಡಾನೆಗಳ ದಾಳಿಗೆ ರೈತರು ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆನೆಗಳ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾಗಳ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ.

Bengaluru Air Quality: ಬೆಂಗಳೂರಿಗಿಂತಲೂ ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ!

0

ಬೆಂಗಳೂರು: ಬೆಂಗಳೂರಿನ ಗಾಳಿಯ ಗುಣಮಟ್ಟ 162 AQI ತಲುಪಿದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲಿದೆ.

ಆದರೆ ಶಿವಮೊಗ್ಗ (175 AQI) ಮತ್ತು ಬಳ್ಳಾರಿ (178 AQI) ನಗರಗಳು ಬೆಂಗಳೂರಿಗಿಂತಲೂ ಹೆಚ್ಚು ಹಾನಿಕರ ವಾಯು ಗುಣಮಟ್ಟ ಹೊಂದಿರುವುದು ಗಮನ ಸೆಳೆಯುತ್ತಿದೆ. ಈ ಪರಿಸ್ಥಿತಿಯಿಂದ ಮಕ್ಕಳು, ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಕ್ಕಿಂತ ಬೆಂಗಳೂರಿನಲ್ಲಿ 5 ಪಟ್ಟು ಹೆಚ್ಚು ಸೂಕ್ಷ್ಮ ಕಣಗಳ ಪ್ರಮಾಣವು ಆತಂಕಕಾರಿಯಾಗಿದೆ.

ಕಳೆದ ಕೆಲ ದಿನಗಳಿಗಿಂತ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಏರುಪೇರು ಕಂಡರೂ, ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿಯೇ ಉಳಿದಿದೆ.

ಇಂದಿನ ನಗರಗಳ ಏರ್ ಕ್ವಾಲಿಟಿ (AQI):-

ಬೆಂಗಳೂರು – 162
ಮಂಗಳೂರು – 156
ಮೈಸೂರು – 94
ಬೆಳಗಾವಿ – 138
ಕಲಬುರ್ಗಿ – 129
ಶಿವಮೊಗ್ಗ – 175
ಬಳ್ಳಾರಿ – 178
ಹುಬ್ಬಳ್ಳಿ – 156
ಉಡುಪಿ – 157
ವಿಜಯಪುರ – 111.

ರಾಜೇಶ್ವರಿ–ಡಿವೈನ್ ಅದ್ಬುತ ಆಟ: ಯುಪಿ ವಿರುದ್ಧ ಗುಜರಾತ್‌ಗೆ 45 ರನ್‌ ಜಯ!

0

ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಘಾತಕ ಬೌಲಿಂಗ್‌ ಹಾಗೂ ಸೋಫಿ ಡಿವೈನ್ ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ 45 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಗುಜರಾತ್ ಜೈಂಟ್ಸ್ 2ನೇ ಸ್ಥಾನಕ್ಕೆ ಏರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 45 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಯುಪಿ ಪರ ಫೋಬೆ ಲಿಚ್‌ಫೀಲ್ಡ್ 32 ರನ್‌ ಹಾಗೂ ಕ್ಲೋಯ್ ಟ್ರಯಾನ್ 30 ರನ್‌ಗಳೊಂದಿಗೆ ಸ್ವಲ್ಪ ಪ್ರತಿರೋಧ ತೋರಿದರೂ, ಉಳಿದ 8 ಆಟಗಾರ್ತಿಯರು ಎರಡಂಕಿ ಅಂಕ ತಲುಪದ ಕಾರಣ ತಂಡದ ಸೋಲು ಅನಿವಾರ್ಯವಾಯಿತು. ಹ್ಯಾಟ್ರಿಕ್ ಸೋಲುಗಳಿಂದ ಸಂಕಷ್ಟದಲ್ಲಿದ್ದ ಗುಜರಾತ್‌ಗೆ ಈ ಗೆಲುವು ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟಿದೆ.

Crime News: ಮಕ್ಕಳಿಲ್ಲವೆಂದು ಕಿರಿಕಿರಿ; ಪತ್ನಿ ಉಸಿರುಗಟ್ಟಿಸಿ ಹತ್ಯೆಗೈದ ಗಂಡ!

0

ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜರುಗಿದೆ.

21 ವರ್ಷದ ಪತ್ನಿ ರಾಜೇಶ್ವರಿಯನ್ನು ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಮಾಡಿದ್ದಾನೆ. ಬಳಿಕ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ ಎನ್ನಲಾಗಿದೆ. ಮದುವೆಯಾಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟ ಕೊಡುತ್ತಿದ್ದಳು. ಕಿರಿಕಿರಿಗೆ ಬೇಸತ್ತಿದ್ದ ಪತಿ ಆ ದಿನ ಸಿಟ್ಟಿಗೆದ್ದು ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಸಂಬಂಧಿಕರೆಲ್ಲರಿಗೂ ಪತ್ನಿ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಫೋನ್ ಮಾಡಿದ್ದ. ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತ ರಾಜೇಶ್ವರಿ ಕೊರಳಲ್ಲಿ ಕಾಣಿಸಿದ್ದ ಗುರುತೊಂದನ್ನು ನೋಡಿ ಅನುಮಾನ ವ್ಯಕ್ತವಾಗಿದೆ.

ತಕ್ಷಣವೇ ಪೋಷಕರು ಬೈಲಹೊಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆ ಎಂಬುದು ದೃಢವಾಗಿದೆ. ಕೂಡಲೇ ಪೊಲೀಸರು ಆರೋಪಿ ಫಕೀರಪ್ಪ ಗಿಲಕ್ಕನವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಕೊಲೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

error: Content is protected !!