Home Blog Page 24

Bengaluru Air Quality: ಬೆಂಗಳೂರಿಗಿಂತಲೂ ಶಿವಮೊಗ್ಗ, ಬಳ್ಳಾರಿ ಏರ್ ಕ್ವಾಲಿಟಿಯಲ್ಲಿ ಕುಸಿತ!

0

ಬೆಂಗಳೂರು: ಬೆಂಗಳೂರಿನ ಗಾಳಿಯ ಗುಣಮಟ್ಟ 162 AQI ತಲುಪಿದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲಿದೆ.

ಆದರೆ ಶಿವಮೊಗ್ಗ (175 AQI) ಮತ್ತು ಬಳ್ಳಾರಿ (178 AQI) ನಗರಗಳು ಬೆಂಗಳೂರಿಗಿಂತಲೂ ಹೆಚ್ಚು ಹಾನಿಕರ ವಾಯು ಗುಣಮಟ್ಟ ಹೊಂದಿರುವುದು ಗಮನ ಸೆಳೆಯುತ್ತಿದೆ. ಈ ಪರಿಸ್ಥಿತಿಯಿಂದ ಮಕ್ಕಳು, ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಕ್ಕಿಂತ ಬೆಂಗಳೂರಿನಲ್ಲಿ 5 ಪಟ್ಟು ಹೆಚ್ಚು ಸೂಕ್ಷ್ಮ ಕಣಗಳ ಪ್ರಮಾಣವು ಆತಂಕಕಾರಿಯಾಗಿದೆ.

ಕಳೆದ ಕೆಲ ದಿನಗಳಿಗಿಂತ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಏರುಪೇರು ಕಂಡರೂ, ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿಯೇ ಉಳಿದಿದೆ.

ಇಂದಿನ ನಗರಗಳ ಏರ್ ಕ್ವಾಲಿಟಿ (AQI):-

ಬೆಂಗಳೂರು – 162
ಮಂಗಳೂರು – 156
ಮೈಸೂರು – 94
ಬೆಳಗಾವಿ – 138
ಕಲಬುರ್ಗಿ – 129
ಶಿವಮೊಗ್ಗ – 175
ಬಳ್ಳಾರಿ – 178
ಹುಬ್ಬಳ್ಳಿ – 156
ಉಡುಪಿ – 157
ವಿಜಯಪುರ – 111.

ರಾಜೇಶ್ವರಿ–ಡಿವೈನ್ ಅದ್ಬುತ ಆಟ: ಯುಪಿ ವಿರುದ್ಧ ಗುಜರಾತ್‌ಗೆ 45 ರನ್‌ ಜಯ!

0

ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರ ಘಾತಕ ಬೌಲಿಂಗ್‌ ಹಾಗೂ ಸೋಫಿ ಡಿವೈನ್ ಅವರ ಆಲ್‌ರೌಂಡರ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಸ್ ವಿರುದ್ಧ 45 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಗುಜರಾತ್ ಜೈಂಟ್ಸ್ 2ನೇ ಸ್ಥಾನಕ್ಕೆ ಏರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 45 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಯುಪಿ ಪರ ಫೋಬೆ ಲಿಚ್‌ಫೀಲ್ಡ್ 32 ರನ್‌ ಹಾಗೂ ಕ್ಲೋಯ್ ಟ್ರಯಾನ್ 30 ರನ್‌ಗಳೊಂದಿಗೆ ಸ್ವಲ್ಪ ಪ್ರತಿರೋಧ ತೋರಿದರೂ, ಉಳಿದ 8 ಆಟಗಾರ್ತಿಯರು ಎರಡಂಕಿ ಅಂಕ ತಲುಪದ ಕಾರಣ ತಂಡದ ಸೋಲು ಅನಿವಾರ್ಯವಾಯಿತು. ಹ್ಯಾಟ್ರಿಕ್ ಸೋಲುಗಳಿಂದ ಸಂಕಷ್ಟದಲ್ಲಿದ್ದ ಗುಜರಾತ್‌ಗೆ ಈ ಗೆಲುವು ಪ್ಲೇಆಫ್ ಕನಸನ್ನು ಜೀವಂತವಾಗಿಟ್ಟಿದೆ.

Crime News: ಮಕ್ಕಳಿಲ್ಲವೆಂದು ಕಿರಿಕಿರಿ; ಪತ್ನಿ ಉಸಿರುಗಟ್ಟಿಸಿ ಹತ್ಯೆಗೈದ ಗಂಡ!

0

ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜರುಗಿದೆ.

21 ವರ್ಷದ ಪತ್ನಿ ರಾಜೇಶ್ವರಿಯನ್ನು ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಮಾಡಿದ್ದಾನೆ. ಬಳಿಕ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ ಎನ್ನಲಾಗಿದೆ. ಮದುವೆಯಾಗಿ 3 ವರ್ಷಗಳಾದ್ರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟ ಕೊಡುತ್ತಿದ್ದಳು. ಕಿರಿಕಿರಿಗೆ ಬೇಸತ್ತಿದ್ದ ಪತಿ ಆ ದಿನ ಸಿಟ್ಟಿಗೆದ್ದು ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಬಳಿಕ ಸಂಬಂಧಿಕರೆಲ್ಲರಿಗೂ ಪತ್ನಿ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಫೋನ್ ಮಾಡಿದ್ದ. ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತ ರಾಜೇಶ್ವರಿ ಕೊರಳಲ್ಲಿ ಕಾಣಿಸಿದ್ದ ಗುರುತೊಂದನ್ನು ನೋಡಿ ಅನುಮಾನ ವ್ಯಕ್ತವಾಗಿದೆ.

ತಕ್ಷಣವೇ ಪೋಷಕರು ಬೈಲಹೊಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆ ಎಂಬುದು ದೃಢವಾಗಿದೆ. ಕೂಡಲೇ ಪೊಲೀಸರು ಆರೋಪಿ ಫಕೀರಪ್ಪ ಗಿಲಕ್ಕನವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಕೊಲೆಗೈದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

ಸತತ ಪ್ರಯತ್ನವೇ ಸಾಧನೆಗೆ ದಾರಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳು ಸಾಧನೆಗೆ ಸತತ ಪ್ರಯತ್ನ ಬೇಕು. ಮಕ್ಕಳು ಪ್ರಾಥಮಿಕ ಹಂತದಲ್ಲಿ ಸತತ ಪ್ರಯತ್ನಶೀಲರಾಗಬೇಕು. ಅಂದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಫಾತೀಮಾ ಖವಾಸ ಹೇಳಿದರು.

ಅವರು ಪಟ್ಟಣದ ಬಿ.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಬದ್ರುನಿಸಾ ಯಳವತ್ತಿ ಗದಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಿಮಿತ್ತ ಗೌರವಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಮಾ ಬ್ಯಾಳಿ, ಆಸ್ಮಾ ಸೌದತ್ತಿ, ಪೂಜಾ ಮ್ಯಾಗೇರಿ, ಗೀತಾ ಕುಲಕರ್ಣಿ ಇದ್ದರು.

ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ: ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿನಾಯ್ಕ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಮತ್ತು ಕಲಿಕೆಯನ್ನು ಸಂತೋಷದಾಯಕ ಅನುಭವವನ್ನಾಗಿ ಮಾಡಲು ಎಫ್‌ಎಲ್‌ಎನ್ ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮಕ್ಕಳನ್ನು ಚಟುವಟಿಕೆಗಳ ಮೂಲಕ ಗುರುತಿಸಬಹುದು. ಕಲಿಕೆ ಎನ್ನುವುದು ಪುಸ್ತಕದಿಂದ ಕಲಿಯುವದಷ್ಟೇ ಅಲ್ಲ, ಅದು ಅನುಭವದಿಂದ ಕಲಿಯುವದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹೆಬ್ಬಾಳ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಬ್ಬಾಳ ಸಿಆರ್‌ಪಿ ತಿರಕಪ್ಪ ಪೂಜಾರ, ಈ ಕಲಿಕಾ ಹಬ್ಬದಲ್ಲಿ ಒಟ್ಟು 11 ಸ್ಪರ್ಧೆಗಳಿರುತ್ತವೆ. ಆದರೆ ನಾವು ಇಲಾಖೆಯ ವತಿಯಿಂದ 7 ಸ್ಪರ್ಧೆಗಳಿಗೆ ಅವಕಾಶ ನೀಡಿದ್ದು, ಅದರಲ್ಲಿ ಗಟ್ಟಿ ಓದು, ಕತೆ ಹೇಳುವದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಪೋಷಕರ ಹಾಗೂ ಶಿಕ್ಷಕರ ಸಂಬಂಧ ಕುರಿತು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಕನ್ನಡ ಮತ್ತು ಗಣಿತ ವಿಷಯಗಳಲ್ಲಿ ಸ್ಪರ್ಧೆ ಹಾಗೂ ಚಟುವಟಿಕೆ ಮೂಲಕ ತಿಳಿಯಲು ಸಹಕಾರಿಯಾಗಿದ್ದು, ಮಕ್ಕಳು ಶಾಲೆಯನ್ನು ತಪ್ಪಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದಾಗಿರುತ್ತದೆ. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.

ಸರಕಾರಿ ನೌಕರರ ಸಂಘದ ಶಿರಹಟ್ಟಿ ಘಟಕದ ಗೌರವಾಧ್ಯಕ್ಷ ಎಸ್.ಕೆ. ಪಾಟೀಲ ಮಾತನಾಡಿ, ಶಾಲೆಯಲ್ಲಿ ಕಲಿತರೂ ಕೂಡ ಮನೆಯಲ್ಲಿ ಪುನರಾವರ್ತನೆ ಆಗಬೇಕು. ಅಂದಾಗ ವಿದ್ಯಾರ್ಥಿ ಕಲಿಕೆಗೆ ಮನದಟ್ಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಉಪನಿರ್ದೇಶಕ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಕ್ಕಿರಪ್ಪ ನರಸಮ್ಮನವರ, ಎಸ್‌ಡಿಎಂಸಿ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಉಪಾಧ್ಯಕ್ಷರಾದ ನೀಲಮ್ಮ ನಡುವಿನಕೇರಿ, ಸಿಆರ್‌ಪಿಗಳಾದ ತಿರಕಪ್ಪ ಪೂಜಾರ, ಸತೀಶ ಪಶುಪತಿಹಾಳ, ಆರ್. ಮಾಂತೇಶ, ಸಿ.ವಿ. ವಡಕಣ್ಣನವರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಫ್.ವಾಯ್. ಪಾಟೀಲ, ಬನಶಂಕರಿ ದೇವಿ ಕಾಲೇಜಿನ ಪ್ರಾಚಾರ್ಯ ನವೀನ ಅಳವಂಡಿ, ಶಾಲೆಯ ಪ್ರಧಾನ ಗುರುಗಳಾದ ವಿ.ಎನ್. ಪಾಟೀಲ ಸೇರಿದಂತೆ ಹೆಬ್ಬಾಳ ಕ್ಲಸ್ಟರಿನ ಎಲ್ಲಾ ಶಾಲೆಗಳ ಪ್ರಧಾನ ಗುರುಗಳು, ಸಿಬ್ಬಂದಿ ವರ್ಗ, ನಿರ್ಣಾಯಕರು, ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು. ಆರ್.ಟಿ. ಶಿವಪ್ಪಯ್ಯನಮಠ ಕಾರ್ಯಕ್ರಮ ನಿರ್ವಹಿಸಿದರು. ಕಲಿಕಾ ಹಬ್ಬದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಣ ಎನ್ನುವುದು ಹುಲಿ ಹಾಲು ಇದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು. ಉತ್ತಮ ಶಿಕ್ಷಣ ಪಡೆದುಕೊಂಡವರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯ. ತಾಯಿ ಮೊದಲ ಗುರುವಾಗಿದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಮಗುವಿನ ಕಡೆಗೆ ಗಮನ ನೀಡಬೇಕು. ಮಕ್ಕಳ ಕೈಗೆ ಮೊಬೈಲ್ ನೀಡದೇ ಪುಸ್ತಕ ನೀಡಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಎಚ್. ನಾಣಕಿನಾಯ್ಕ ಕಿವಿಮಾತು ಹೇಳಿದರು.

ತರಬೇತಿ ಪಡೆದು ಆರ್ಥಿಕ ಸದೃಢತೆ ಹೊಂದಿ: ಎಚ್.ಜಿ. ಹಿರೇಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂದಿನ ಕಾಲದಿಂದಲೂ ಮಹಿಳೆ ಸಂಗೋಪನೆಯ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಇದು ಆಕೆಗೆ ಜನ್ಮ ಜಾತವಾದ ಕೌಶಲ್ಯವಾಗಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ. ಮಹಿಳೆಯರು ಸರ್ಕಾರದ ಹಾಗೂ ಇಂತಹ ಕಾರ್ಯಕ್ರಮದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿಗಳನ್ನು ಪಡೆದು ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು, ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ ನಿರ್ದೇಶಕ, ಸಹಕಾರ ರತ್ನ ಪುರಸ್ಕೃತ ಎಚ್.ಜಿ. ಹಿರೇಗೌಡ್ರ ಅಭಿಪ್ರಾಯಪಟ್ಟರು.

ಸಹಕಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಗದಗ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್. ಪಾಟೀಲ ಮಾತನಾಡಿ, ಬಸವಾದಿ ಶರಣರ ಕಾಲಕ್ಕಿಂತ ಮೊದಲು ಮಹಿಳೆಯರನ್ನು ಅಬಲೆಯರು ಎಂದು ಕರೆಯುತ್ತಾ ಬಂದಿದ್ದೇವೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ ಇರುತ್ತಿರಲಿಲ್ಲ. ಅಂತಹ ಕಾಲದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಕೂಡಾ ಸಮಾನ ಸ್ಥಾನಮಾನ ಸಿಗಬೇಕೆಂದು ಹೊರಾಟ ಮಾಡುತ್ತಾ ಬಂದು ಇಂದಿನ ಕಾಲದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಮಾಜದ ದುರ್ಬಲ, ಶೋಷಿತ ಮತ್ತು ಅಸಹಾಯಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸ್ಥಾಪಿಸಲ್ಪಟ್ಟಿರುವ ಮತ್ತು ರಾಜ್ಯದ ಮಹಿಳೆಯರಿಗೆ ನೆರವು ನೀಡುವ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಂಡಾಪೂರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದ್ಯಾಮಣ್ಣ ಸವದತ್ತಿ, ತಾಮ್ರಗುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಗಂಗಮ್ಮ ಕಡಕೋಳ, ರಡ್ಡೇರನಾಗನೂರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಸುನಿತಾ ಪಾಟೀಲ, ಒಕ್ಕಲಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪುಷ್ಪಾ ಜಂತ್ಲಿ, ಹಾಲಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ದಾಕ್ಷಾಯಣಿ ಹೊಕ್ಕಳದ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಧಿಕಾರಿ ಬಿ.ಆರ್. ನಿಡಗುಂದಿ, ಗದಗ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಎಚ್.ಎಂ. ಶಾಂತಾ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಅಧೀಕ್ಷಕರಾದ ಜಿ.ಎಂ. ಉಳವಿ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಡಾ. ಪ್ರಸನ್ನ ಎಸ್. ಪಟ್ಟೇದ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸಿ.ಎಸ್. ಕಲ್ಲನಗೌಡರ, ಜಿ.ಸಿ. ಸಾಲೋಟಗಿಮಠ, ಬಸವರಾಜ ಜುಮ್ಮಣ್ಣವರ, ಡಿ.ಐ. ನದಾಫ್, ಮಲ್ಲಿಕಾರ್ಜುನ ಉಣಚಗೇರಿ, ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಲಲಿತಾ ಎಸ್. ಅಳವುಂಡಿ, ಡಾ. ಮಲ್ಲೂರ ಬಸವರಾಜ ಎನ್ ಉಪನ್ಯಾಸ ನೀಡಿದರು. ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ ವಂದಿಸಿದರು.

ಗದಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಹಿಳೆಯರಿಗೆ ಸರ್ಕಾರದ ಹಲವಾರು ಸ್ವ-ಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿಗಳನ್ನು ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಸ್ವಾಭಿಮಾನ, ಆತ್ಮ ವಿಶ್ವಾಸದಿಂದ ಬದುಕಬೇಕು: ವಿ.ಪ ಸದಸ್ಯ ಎಸ್.ವಿ. ಸಂಕನೂರ

0

ವಿಜಯಸಾಕ್ಷಿ ಸುದ್ದಿ, ಗದಗ: ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದವರು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬಿಗರ ಚೌಡಯ್ಯನವರು 12ನೇ ಶತಮಾನದ ಶಿವಶರಣರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದ್ದಾಗಿತ್ತು. ಬಸವಣ್ಣನವರಿಂದ ಲಿಂಗದ ದೀಕ್ಷೆಯನ್ನು ಪಡೆದರು. ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಇವರ ವಚನಗಳ ಅಂಕಿತವಾಗಿದೆ. ಅಂಬಿಗರ ಚೌಡಯ್ಯನವರು ನೇರವಾದ ನುಡಿ, ದಿಟ್ಟವಾದ ನಡೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದು, ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಹೊಡೆದೋಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿದವರು. ನಾವು ವೈಚಾರಿಕವಾಗಿ ಬದುಕಲು ಕಲಿಯಬೇಕು. ಸ್ವಾಭಿಮಾನ, ಆತ್ಮ ವಿಶ್ವಾಸದಿಂದ ಬದುಕಬೇಕು. ಅಂಬಿಗರ ಚೌಡಯ್ಯನವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನಿಸಲಾಯಿತು.

ನರೇಗಲ್ಲದ ಉಪನ್ಯಾಸಕ ಶಿವಾನಂದ ಗೋಗೇರಿ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಡಿವೈಎಸ್‌ಪಿ ವಿದ್ಯಾಧರ ನಾಯಕ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹನಬರಟ್ಟಿ, ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷ ಜೆ.ಬಿ. ಗಾರವಾಡ, ಉಪಾಧ್ಯಕ್ಷ ಸಿ.ಪಿ. ಬಾರಕೇರ, ತಾಲೂಕಾಧ್ಯಕ್ಷ ಡಾ. ಗಣೇಶ ಸುಲ್ತಾನಪುರ, ಪ್ರಮುಖರಾದ ಯಶೋಧಾ ಜಾಲಗಾರ, ಶಕುಂತಲಾ ಜಕನೂರ, ಪ್ರೇಮಾ ಮನಗೂಳಿ, ಕೀರ್ತಿ ಜಕನೂರ, ಪ್ರಕಾಶ ಪೂಜಾರ, ಕೆ.ಎನ್. ಸುಣಗಾರ, ಮಂಜುನಾಥ ಸುಣಗಾರ, ಸುಭಾಸ ಕದಡಿ, ಮಾಲತೇಶ ಬಾರ್ಕಿ, ಮಾರುತಿ ಕೌದಿ, ಚಂದ್ರಶೇಖರ ಅಂಬಿಗೇರ, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಪ್ರಮುಖರು, ಗಣ್ಯರು, ಹಿರಿಯರು ಹಾಜರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಅಂಬಿಗರ ಚೌಡಯ್ಯನವರು ನೇರ ನಿಷ್ಠುರವಾದಿಗಳಾಗಿದ್ದರು. ಕಾಯಕ ನಿಷ್ಠೆಗೆ ಹೆಸರಾದ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಸಮಾಜ ಸುಧಾರಣೆಯಾಗಬೇಕಾದರೆ ಶಿಕ್ಷಣವೊಂದೇ ಮಾರ್ಗವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದರು.

ಸುದೃಢ ಮಕ್ಕಳಿಂದ ಭವ್ಯ ಭಾರತ ನಿರ್ಮಾಣ

0

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಸುದೃಢ ಮಕ್ಕಳಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿ ಮುಖ್ಯಸ್ಥರು ಹಾಗೂ ಗದಗ ಜಿ.ಪಂ ಮಾಜಿ ಅಧ್ಯಕ್ಷರಾದ ಶಕುಂತಲಾ ಬಿ.ದಂಡಿನ ನುಡಿದರು.

ಕೆವಿಎಸ್‌ಆರ್ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧ ಶ್ರೀಶೈಲಪ್ಪ ಬಿ.ತೊಮ್ಮರಮಟ್ಟಿ, ಸಂಗಯ್ಯ ಕ.ಹಿರೇಮಠ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಮಕ್ಕಳಿಗೆ ಇಂದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಕ್ರೀಡಾ ಶಿಕ್ಷಣ ಅವಶ್ಯ. ಸುದೃಢ ಭಾರತ ನಿರ್ಮಾಣಕ್ಕಾಗಿ ಸುದೃಢ ಮಕ್ಕಳ ನಿರ್ಮಾಣ ಇಂತಹ ಶಾಲೆಗಳಲ್ಲಿ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಕೇತ ದಂಡಿನ, ಮುಖ್ಯ ಶಿಕ್ಷಕಿ ಪಿ.ಟಿ. ಬಿಸನಳ್ಳಿ, ಪ್ರೊ. ದೊಡ್ಡಮನಿ, ರಾಮು, ಶಿಕ್ಷಕರಾದ ಎಂ.ಕೆ. ಬೇವಿನಕಟ್ಟಿ, ಎಸ್.ಎಸ್. ಮುಧೋಳ, ದೀಪಾ ಎಂ, ದೈಹಿಕ ಶಿಕ್ಷಕ ಎಸ್.ಕೆ. ಬಸಾಪುರ, ಶಾಲಾ ಸಿಬ್ಬಂದಿ ಬಿ.ಎನ್. ಕಮ್ಮಾರ, ಆಯ್.ಎಂ. ಕುರ್ತಕೋಟಿ ಉಪಸ್ಥಿತರಿದ್ದರು. ಎಂ.ಕೆ. ಬೇವಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ: ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಹೆಮ್ಮೆಯ ಸ್ತಬ್ಧಚಿತ್ರ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಕರ್ನಾಟಕವು ಪ್ರದರ್ಶಿಸುತ್ತಿದೆ.

ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‌ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಿವೆ.

ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 16 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದ ಪ್ರದರ್ಶನದಲ್ಲಿ (2024 ಮತ್ತು 2026ರಲ್ಲಿ) ಪಾಲ್ಗೊಳ್ಳುತ್ತಿದೆ.

ಈ ಬಾರಿ ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ ಎಂಬ ವಿಷಯವನ್ನು ಸಮಿತಿಯು ಅಂತಿಮಗೊಳಿಸಿದ್ದು, ಅದಕ್ಕನುಗುಣವಾಗಿ ಮಣ್ಣಿನಲ್ಲಿ ಸಿರಿಧಾನ್ಯಗಳನ್ನು ಬೆಳೆಸಿದ ದೇಶೀಯ ಜ್ಞಾನದಿಂದ ಮೈಕ್ರೋಚಿಪ್‌ಗಳನ್ನು ಉತ್ಪಾದಿಸುವ ಸೂಕ್ಷ್ಮತೆಯನ್ನು ಈ ಸ್ತಬ್ಧಚಿತ್ರ ಮನಮುಟ್ಟುವಂತೆ ಕಟ್ಟಿಕೊಡುತ್ತದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ. ಕಾವೇರಿ ಅವರ ಸಲಹೆ-ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮವಾಗಿಸಿತ್ತು ಎಂದು ವಾರ್ತಾ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ, ದೊಡ್ಡ ಮಡಿಕೆಗಳಲ್ಲಿ ವಿವಿಧ ಸಿರಿಧಾನ್ಯಗಳು, ಫಸಲನ್ನು ಎತ್ತಿಹಿಡಿದಿರುವ ರೈತ, ಮಧ್ಯ ಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‌ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತದೆ. ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‌ಗಳ ಮಧ್ಯೆ ರೋಬೋಟ್‌ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನ ಮತ್ತು ಪ್ರದರ್ಶನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು 16 ಬಾರಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಏಕಕಾಲಕ್ಕೆ 42,345 ಮನೆಗಳ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ 2ನೇ ಹಂತದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮ ಜನವರಿ 24ರಂದು ನಡೆಯಲಿದೆ.

ಇಲ್ಲಿಯವರೆಗೆ ಒಟ್ಟು 3025 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 2866 ಪ್ರದೇಶಗಳನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲಾಗಿದೆ. ಸದರಿ ಕೊಳಗೇರಿ ಪ್ರದೇಶಗಳಲ್ಲಿ ಮಂಡಳಿ ವತಿಯಿಂದ ಕೊಳಗೇರಿ ಸುಧಾರಣೆ ಯೋಜನೆಯಡಿ ಮೂಲಭೂತ ಸೌಲಭ್ಯ, ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.

ಕೊಳಗೇರಿ ಪ್ರದೇಶಗಳಲ್ಲಿ ಕಚ್ಚಾ-ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಇನ್‌ಸಿಟು ಮಾದರಿಯಲ್ಲಿ ವಸತಿ ಕಲ್ಪಿಸಲಾಗುತ್ತಿದೆ ಮತ್ತು ವಾಸಕ್ಕೆ ಯೋಗ್ಯವಲ್ಲದ ಪ್ರದೇಶಗಳಾದ ರೈಲ್ವೆ ಹಳಿಗಳ ಪಕ್ಕ, ಹೈಟೆನ್ಶನ್ ವಿದ್ಯುತ್ ತಂತಿಗಳ ಕೆಳಗೆ, ಕೆರೆ ಅಂಗಳ, ರಾಜಕಾಲುವೆ ಪಕ್ಕ ಮುಂತಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಮಂಡಳಿಯ ಕಾಯ್ದೆ 11ರಡಿಯಲ್ಲಿ ಘೋಷಿಸಿ ಸರ್ಕಾರದಿಂದ ಬದಲಿ ಜಮೀನನ್ನು ಪಡೆದು, ಸ್ಥಳಾಂತರಿಸಿ ರಿಲೊಕೇಷನ್ ಮಾದರಿಯಲ್ಲಿ ಪುನರ್ ವಸತಿ ಕಲ್ಪಿಸಿ ಕೊಳಗೇರಿ ಮುಕ್ತ ಮಾಡಲು ಕ್ರಮ ವಹಿಸುತ್ತಿದೆ. ರಾಜ್ಯಾದ್ಯಂತ ವಿವಿಧ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಆಯ್ಕೆ ಘೋಷಿತ ಕೊಳಗೇರಿ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಕೊಳಚೆ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರದ ವಸತಿ ಯೋಜನೆಗಳಾದ ಡಾ. ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯ ಸಂಯೋಜನೆಯೊಡನೆ ಜಾರಿಗೊಳಿಸಿದ್ದು, ಯೋಜನೆಯ ಮಾರ್ಗಸೂಚಿಯನुसार ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯಾದ್ಯಂತ ಬರುವ ನಗರ, ಪಟ್ಟಣಗಳಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ ಸಮೀಕ್ಷೆ ಕೈಗೊಂಡಿದ್ದು, ಒಟ್ಟು 4,92,256 ಕುಟುಂಬಗಳನ್ನು ಗುರುತಿಸಲಾಗಿದೆ.

ಈ ಪೈಕಿ 1,80,253 ಮನೆಗಳ ನಿರ್ಮಾಣ ಮಂಜೂರಾತಿ ನೀಡಿರುವ ಒಟ್ಟಾರೆ ಯೋಜನೆಯ ಮಾರ್ಗಸೂಚಿಯನुसार ಮಂಜೂರಾದ ಮನೆಗಳ ಘಟಕ ವೆಚ್ಚ ಸರಾಸರಿ ರೂ.7.52 ಲಕ್ಷಗಳಾಗಿದ್ದು, ಕೇಂದ್ರ ಸರ್ಕಾರದ ರೂ.1.50 ಲಕ್ಷಗಳು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಕ್ಕೆ ರೂ.2 ಲಕ್ಷಗಳು ಹಾಗೂ ಇತರೇ ವರ್ಗಕ್ಕೆ ರೂ.1.20 ಲಕ್ಷಗಳು ಮತ್ತು ಫಲಾನುಭವಿಗಳ ವಂತಿಕೆ ಮೊತ್ತವನ್ನು ಫಲಾನುಭವಿಗಳೇ ಸ್ವತಃ ಭರಿಸುವುದು ಅಥವಾ ಬ್ಯಾಂಕ್‌ಗಳಿಂದ ಫಲಾನುಭವಿಗಳ ಹೆಸರಿನಲ್ಲಿ ಸಾಲಸೌಲಭ್ಯ ಪಡೆದು ನಿರ್ಮಾಣವನ್ನು ಪೂರ್ಣಗೊಳಿಸಬೇಕಾಗಿತ್ತು.

ಈ ಪೈಕಿ ಫಲಾನುಭವಿಗಳ ವಂತಿಕೆಗೆ ಎದುರಾಗಿ ರೂ.960.75 ಕೋಟಿಗಳನ್ನು ಮತ್ತು ಮೂಲಭೂತ ಸೌಲಭ್ಯ ಒದಗಿಸಲು ರೂ.174.64 ಕೋಟಿಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಳಿಸಲಾದ ಕೇಂದ್ರ, ರಾಜ್ಯ ಮತ್ತು ಫಲಾನುಭವಿ ವಂತಿಕೆಗಾಗಿ ರಾಜ್ಯ ಸರ್ಕಾರದಿಂದ ಅನುದಾನ ಹಾಗೂ ಫಲಾನುಭವಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಬಳಸಿಕೊಂಡು ಈ ಯೋಜನೆಯಡಿ ಒಟ್ಟು 86,651 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 42,190 ಮನೆಗಳು ಮತ್ತು ಇತರೆ ವರ್ಗದ 44,461 ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಯೋಜನೆಯಡಿ ಪೂರ್ಣಗೊಂಡಿರುವ ಮನೆಗಳ ಪೈಕಿ 36,789 ಮನೆಗಳನ್ನು ಪ್ರಥಮ ಹಂತದಲ್ಲಿ ಮುಖ್ಯಮಂತ್ರಿಯವರಿಂದ ಮಾರ್ಚ್-2024ರಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಪ್ರಸ್ತುತ 42,345 ಮನೆಗಳನ್ನು 2ನೇ ಹಂತದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ.

error: Content is protected !!