Home Blog Page 25

ಸುದೃಢ ಮಕ್ಕಳಿಂದ ಭವ್ಯ ಭಾರತ ನಿರ್ಮಾಣ

0

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಸುದೃಢ ಮಕ್ಕಳಿಂದ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಗದಗ ಕನಕದಾಸ ಶಿಕ್ಷಣ ಸಮಿತಿ ಮುಖ್ಯಸ್ಥರು ಹಾಗೂ ಗದಗ ಜಿ.ಪಂ ಮಾಜಿ ಅಧ್ಯಕ್ಷರಾದ ಶಕುಂತಲಾ ಬಿ.ದಂಡಿನ ನುಡಿದರು.

ಕೆವಿಎಸ್‌ಆರ್ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಯೋಧ ಶ್ರೀಶೈಲಪ್ಪ ಬಿ.ತೊಮ್ಮರಮಟ್ಟಿ, ಸಂಗಯ್ಯ ಕ.ಹಿರೇಮಠ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಮಕ್ಕಳಿಗೆ ಇಂದು ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಕ್ರೀಡಾ ಶಿಕ್ಷಣ ಅವಶ್ಯ. ಸುದೃಢ ಭಾರತ ನಿರ್ಮಾಣಕ್ಕಾಗಿ ಸುದೃಢ ಮಕ್ಕಳ ನಿರ್ಮಾಣ ಇಂತಹ ಶಾಲೆಗಳಲ್ಲಿ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಕೇತ ದಂಡಿನ, ಮುಖ್ಯ ಶಿಕ್ಷಕಿ ಪಿ.ಟಿ. ಬಿಸನಳ್ಳಿ, ಪ್ರೊ. ದೊಡ್ಡಮನಿ, ರಾಮು, ಶಿಕ್ಷಕರಾದ ಎಂ.ಕೆ. ಬೇವಿನಕಟ್ಟಿ, ಎಸ್.ಎಸ್. ಮುಧೋಳ, ದೀಪಾ ಎಂ, ದೈಹಿಕ ಶಿಕ್ಷಕ ಎಸ್.ಕೆ. ಬಸಾಪುರ, ಶಾಲಾ ಸಿಬ್ಬಂದಿ ಬಿ.ಎನ್. ಕಮ್ಮಾರ, ಆಯ್.ಎಂ. ಕುರ್ತಕೋಟಿ ಉಪಸ್ಥಿತರಿದ್ದರು. ಎಂ.ಕೆ. ಬೇವಿನಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ: ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಹೆಮ್ಮೆಯ ಸ್ತಬ್ಧಚಿತ್ರ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಈ ಪಯಣವನ್ನು ಸಂಕೇತಿಸುವಂತೆ, ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ಎನ್ನುವ ಸ್ತಬ್ಧಚಿತ್ರವನ್ನು 2026ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಕರ್ನಾಟಕವು ಪ್ರದರ್ಶಿಸುತ್ತಿದೆ.

ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‌ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದಲ್ಲಿ ತೋರಿಸಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಿವೆ.

ದೆಹಲಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರ್ಕಾರ ರಕ್ಷಣಾ ಸಚಿವಾಲಯದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 16 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದ ಪ್ರದರ್ಶನದಲ್ಲಿ (2024 ಮತ್ತು 2026ರಲ್ಲಿ) ಪಾಲ್ಗೊಳ್ಳುತ್ತಿದೆ.

ಈ ಬಾರಿ ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ ಎಂಬ ವಿಷಯವನ್ನು ಸಮಿತಿಯು ಅಂತಿಮಗೊಳಿಸಿದ್ದು, ಅದಕ್ಕನುಗುಣವಾಗಿ ಮಣ್ಣಿನಲ್ಲಿ ಸಿರಿಧಾನ್ಯಗಳನ್ನು ಬೆಳೆಸಿದ ದೇಶೀಯ ಜ್ಞಾನದಿಂದ ಮೈಕ್ರೋಚಿಪ್‌ಗಳನ್ನು ಉತ್ಪಾದಿಸುವ ಸೂಕ್ಷ್ಮತೆಯನ್ನು ಈ ಸ್ತಬ್ಧಚಿತ್ರ ಮನಮುಟ್ಟುವಂತೆ ಕಟ್ಟಿಕೊಡುತ್ತದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ. ಕಾವೇರಿ ಅವರ ಸಲಹೆ-ಸೂಚನೆಗಳು ಸ್ತಬ್ಧಚಿತ್ರದ ಕೆಲಸವನ್ನು ಸುಗಮವಾಗಿಸಿತ್ತು ಎಂದು ವಾರ್ತಾ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ, ದೊಡ್ಡ ಮಡಿಕೆಗಳಲ್ಲಿ ವಿವಿಧ ಸಿರಿಧಾನ್ಯಗಳು, ಫಸಲನ್ನು ಎತ್ತಿಹಿಡಿದಿರುವ ರೈತ, ಮಧ್ಯ ಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‌ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತದೆ. ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‌ಗಳ ಮಧ್ಯೆ ರೋಬೋಟ್‌ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನ ಮತ್ತು ಪ್ರದರ್ಶನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು 16 ಬಾರಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಏಕಕಾಲಕ್ಕೆ 42,345 ಮನೆಗಳ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ 1,80,253 ಮನೆಗಳ ಪೈಕಿ 2ನೇ ಹಂತದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮ ಜನವರಿ 24ರಂದು ನಡೆಯಲಿದೆ.

ಇಲ್ಲಿಯವರೆಗೆ ಒಟ್ಟು 3025 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 2866 ಪ್ರದೇಶಗಳನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲಾಗಿದೆ. ಸದರಿ ಕೊಳಗೇರಿ ಪ್ರದೇಶಗಳಲ್ಲಿ ಮಂಡಳಿ ವತಿಯಿಂದ ಕೊಳಗೇರಿ ಸುಧಾರಣೆ ಯೋಜನೆಯಡಿ ಮೂಲಭೂತ ಸೌಲಭ್ಯ, ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕೈಗೊಳ್ಳಲಾಗುತ್ತಿದೆ.

ಕೊಳಗೇರಿ ಪ್ರದೇಶಗಳಲ್ಲಿ ಕಚ್ಚಾ-ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಇನ್‌ಸಿಟು ಮಾದರಿಯಲ್ಲಿ ವಸತಿ ಕಲ್ಪಿಸಲಾಗುತ್ತಿದೆ ಮತ್ತು ವಾಸಕ್ಕೆ ಯೋಗ್ಯವಲ್ಲದ ಪ್ರದೇಶಗಳಾದ ರೈಲ್ವೆ ಹಳಿಗಳ ಪಕ್ಕ, ಹೈಟೆನ್ಶನ್ ವಿದ್ಯುತ್ ತಂತಿಗಳ ಕೆಳಗೆ, ಕೆರೆ ಅಂಗಳ, ರಾಜಕಾಲುವೆ ಪಕ್ಕ ಮುಂತಾದ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಮಂಡಳಿಯ ಕಾಯ್ದೆ 11ರಡಿಯಲ್ಲಿ ಘೋಷಿಸಿ ಸರ್ಕಾರದಿಂದ ಬದಲಿ ಜಮೀನನ್ನು ಪಡೆದು, ಸ್ಥಳಾಂತರಿಸಿ ರಿಲೊಕೇಷನ್ ಮಾದರಿಯಲ್ಲಿ ಪುನರ್ ವಸತಿ ಕಲ್ಪಿಸಿ ಕೊಳಗೇರಿ ಮುಕ್ತ ಮಾಡಲು ಕ್ರಮ ವಹಿಸುತ್ತಿದೆ. ರಾಜ್ಯಾದ್ಯಂತ ವಿವಿಧ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ಆಯ್ಕೆ ಘೋಷಿತ ಕೊಳಗೇರಿ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಕೊಳಚೆ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರದ ವಸತಿ ಯೋಜನೆಗಳಾದ ಡಾ. ಅಂಬೇಡ್ಕರ್ ನಿವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಯ ಸಂಯೋಜನೆಯೊಡನೆ ಜಾರಿಗೊಳಿಸಿದ್ದು, ಯೋಜನೆಯ ಮಾರ್ಗಸೂಚಿಯನुसार ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ರಾಜ್ಯಾದ್ಯಂತ ಬರುವ ನಗರ, ಪಟ್ಟಣಗಳಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ ಸಮೀಕ್ಷೆ ಕೈಗೊಂಡಿದ್ದು, ಒಟ್ಟು 4,92,256 ಕುಟುಂಬಗಳನ್ನು ಗುರುತಿಸಲಾಗಿದೆ.

ಈ ಪೈಕಿ 1,80,253 ಮನೆಗಳ ನಿರ್ಮಾಣ ಮಂಜೂರಾತಿ ನೀಡಿರುವ ಒಟ್ಟಾರೆ ಯೋಜನೆಯ ಮಾರ್ಗಸೂಚಿಯನुसार ಮಂಜೂರಾದ ಮನೆಗಳ ಘಟಕ ವೆಚ್ಚ ಸರಾಸರಿ ರೂ.7.52 ಲಕ್ಷಗಳಾಗಿದ್ದು, ಕೇಂದ್ರ ಸರ್ಕಾರದ ರೂ.1.50 ಲಕ್ಷಗಳು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಕ್ಕೆ ರೂ.2 ಲಕ್ಷಗಳು ಹಾಗೂ ಇತರೇ ವರ್ಗಕ್ಕೆ ರೂ.1.20 ಲಕ್ಷಗಳು ಮತ್ತು ಫಲಾನುಭವಿಗಳ ವಂತಿಕೆ ಮೊತ್ತವನ್ನು ಫಲಾನುಭವಿಗಳೇ ಸ್ವತಃ ಭರಿಸುವುದು ಅಥವಾ ಬ್ಯಾಂಕ್‌ಗಳಿಂದ ಫಲಾನುಭವಿಗಳ ಹೆಸರಿನಲ್ಲಿ ಸಾಲಸೌಲಭ್ಯ ಪಡೆದು ನಿರ್ಮಾಣವನ್ನು ಪೂರ್ಣಗೊಳಿಸಬೇಕಾಗಿತ್ತು.

ಈ ಪೈಕಿ ಫಲಾನುಭವಿಗಳ ವಂತಿಕೆಗೆ ಎದುರಾಗಿ ರೂ.960.75 ಕೋಟಿಗಳನ್ನು ಮತ್ತು ಮೂಲಭೂತ ಸೌಲಭ್ಯ ಒದಗಿಸಲು ರೂ.174.64 ಕೋಟಿಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಳಿಸಲಾದ ಕೇಂದ್ರ, ರಾಜ್ಯ ಮತ್ತು ಫಲಾನುಭವಿ ವಂತಿಕೆಗಾಗಿ ರಾಜ್ಯ ಸರ್ಕಾರದಿಂದ ಅನುದಾನ ಹಾಗೂ ಫಲಾನುಭವಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಬಳಸಿಕೊಂಡು ಈ ಯೋಜನೆಯಡಿ ಒಟ್ಟು 86,651 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 42,190 ಮನೆಗಳು ಮತ್ತು ಇತರೆ ವರ್ಗದ 44,461 ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಯೋಜನೆಯಡಿ ಪೂರ್ಣಗೊಂಡಿರುವ ಮನೆಗಳ ಪೈಕಿ 36,789 ಮನೆಗಳನ್ನು ಪ್ರಥಮ ಹಂತದಲ್ಲಿ ಮುಖ್ಯಮಂತ್ರಿಯವರಿಂದ ಮಾರ್ಚ್-2024ರಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಪ್ರಸ್ತುತ 42,345 ಮನೆಗಳನ್ನು 2ನೇ ಹಂತದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ, ಒತ್ತಡ ನಿವಾರಣೆಗೆ ಒತ್ತು | ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ವೇಕ್‌ಅಪ್ ಕಾಲ್

0

ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ಜಿಲ್ಲೆಯ ಮುಂಡರಗಿ, ಗದಗ, ನರಗುಂದ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ತಾಲೂಕುಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಎರಡಂಕಿಯಿಂದ ಒಂದಂಕಿಯೊಳಗೆ ತರಲು ಶ್ರಮಿಸುತ್ತಿರುವ ಶಿಕ್ಷಣ ಇಲಾಖೆ, ಅದಕ್ಕಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಶಾಲೆಗಳಲ್ಲಿ 29 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಇಲಾಖೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತು ಕೊಟ್ಟಿದೆ.

2024-25ರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ 17ನೇ ಸ್ಥಾನ ಗಳಿಸಿದೆ. ಪರೀಕ್ಷೆಗೆ ಹಾಜರಾದ 15,545 ವಿದ್ಯಾರ್ಥಿಗಳ ಪೈಕಿ 11,621 ವಿದ್ಯಾರ್ಥಿಗಳು ಪಾಸಾಗಿದ್ದು ಶೇ 74.76ರಷ್ಟು ಫಲಿತಾಂಶ ದಾಖಲಾದರೆ, 2025ರ ಫಲಿತಾಂಶದ ಪ್ರಕಾರ ಜಿಲ್ಲೆಯು ಶೇ. 67.7ರಷ್ಟು ಉತ್ತೀರ್ಣತೆಯ ಪ್ರಮಾಣದೊಂದಿಗೆ 17ನೇ ಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷ ಎರಡಂಕಿ ಸ್ಥಾನವನ್ನು ಒಂದಂಕಿಗೆ ಇಳಿಸುವ ಗುರಿ ಹೊಂದಿರುವ ಇಲಾಖೆ, ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.

2026ರಲ್ಲಿ ಗದಗ-4865, ಮುಂಡರಗಿ-1906, ನರಗುಂದ-1416, ರೋಣ-3783, ಶಿರಹಟ್ಟಿ-2698 ಹೀಗೆ ಒಟ್ಟು 14665 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.

29 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿದೆ. ಪ್ರತಿದಿನ ಶಾಲೆ, ಕಾಲೇಜು ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿರುವುದನ್ನು ಪರಿಶೀಲಿಸಲು ಪ್ರತಿ ದಿನ ಮುಂಜಾನೆ ಮತ್ತು ಸಂಜೆ ಶಿಕ್ಷಕರು ವೇಕ್‌ಅಪ್ ಕಾಲ್ ಮಾಡುತ್ತಿದ್ದಾರೆ.

ಕಲಿಕೆಯಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮಾನವಾಗಿ ವಿದ್ಯಾರ್ಥಿಗಳನ್ನು ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಒಪ್ಪಿಸುವ ಕಾರ್ಯವನ್ನು ಪ್ರೌಢಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರು ಮಾಡುತ್ತಿದ್ದಾರೆ.

ನಿರಂತರವಾಗಿ ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಕೇಸ್ ಸ್ಟಡಿ ನಡೆಸಿ ಪರಿಹಾರ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಪ್ರತಿ ಶಿಕ್ಷಕರಿಗೆ ಸಮಾನವಾಗಿ ವಿದ್ಯಾರ್ಥಿಗಳನ್ನು ದತ್ತು ನೀಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಲ್ಲದೆ ಉಪನ್ಯಾಸಕರು ಹಾಗೂ ವಿಷಯ ಪರಿವೀಕ್ಷಕರಿಗೆ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ದತ್ತು ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರತಿ ದಿನ ಎರಡರಿಂದ ಮೂರು ಶಾಲೆಗಳಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸುತ್ತಿದ್ದೇನೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡಲಾಗಿದೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಉಪನ್ಯಾಸಕರು ಮತ್ತು ವಿಷಯ ಪರಿವೀಕ್ಷಕರಿಗೆ ಮೇಲ್ವಿಚಾರಣಾ ಅಧಿಕಾರಿಗಳಿಗೆ ದತ್ತು ನೀಡಲಾಗಿದೆ.

  • ಆರ್.ಎಸ್. ಬುರಡಿ.
    ಉಪನಿದೇಶಕರು, ಶಾಲಾ ಶಿಕ್ಷಣ ಇಲಾಖೆ.

ಜ. 29ರಿಂದ ಫೆಬ್ರವರಿ 1ರವರೆಗೆ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಗದಗ: ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಜ. 29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ನಡೆಯಲಿದೆ ಎಂದು ಸಂಸ್ಥೆಯ ಹುಬ್ಬಳ್ಳಿ ವಲಯದ ಅಧ್ಯಕ್ಷ ಗುರು ಅಂಗಡಿ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ನಡೆದಿರುವ ಮೂರು ಉದ್ಯಮ ಸಮ್ಮೇಳನಗಳು ದೊಡ್ಡ ಯಶಸ್ಸು ಕಂಡಿದ್ದು, ನೂರಾರು ಕೋಟಿ ವಹಿವಾಟು ನಡೆಸಿವೆ. ಈ ಹಿನ್ನೆಲೆಯಲ್ಲಿ 4ನೇ ವರ್ಷದ ಸಮ್ಮೇಳನವನ್ನು ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ ಎಂದರು.

2023ರಲ್ಲಿ ಆರಂಭಗೊಂಡ ಸಮ್ಮೇಳನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಆಗ 35 ಕೋಟಿ ರೂ ಮೊತ್ತದ ವ್ಯವಹಾರ ಒಡಂಬಡಿಕೆಗಳು ನಡೆದಿದ್ದವು. 2024ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ 64 ಕೋಟಿ ರೂ, 2025ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ 135 ಕೋಟಿ ರೂ ವ್ಯವಹಾರ ನಡೆದಿತ್ತು ಎಂದು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ನಾಲ್ಕನೇ ಸಮ್ಮೇಳನದಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಪ್ರದೇಶದಲ್ಲಿನ ಅತಿದೊಡ್ಡ ಸಮುದಾಯ ನೇತೃತ್ವದ ಸಮ್ಮೇಳನ ಎಂಬ ದಾಖಲೆ ಬರೆಯಲಿದೆ ಎಂದರು.

ನಾಲ್ಕು ದಿನಗಳ ಸಮ್ಮೇಳನದಲ್ಲಿ ಉದ್ಯಮಿಗಳು, ಕೈಗಾರಿಕಾ ದಿಗ್ಗಜರು, ನೀತಿ ನಿರ್ಧಾರಕರು, ಸ್ಟಾರ್ಟ್ಅಪ್‌ಗಳು, ಎಂಎಸ್‌ಎಂಇಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. ಜ. 29ರಂದು ಸಂಜೆ 4.30ಕ್ಕೆ ಸಿದ್ಧಗಂಗಾ ಶ್ರೀಗಳು ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಫೆಬ್ರವರಿ 1ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಚಿಕ್ಕಮಗಳೂರಿನ ವಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಚಿವ ಡಾ. ಶರಣಪ್ರಕಾಶ್ ಪಾಟೀಲ, ವಿಜಯಾನಂದ ಕಾಶಪ್ಪನವರ, ಶಂಕರ್ ಬಿದರಿ, ಮುರುಗೇಶ ನಿರಾಣಿ, ರಾಣಿ ಸತೀಶ್, ಐಎಲ್‌ವೈಎಫ್ ಸಂಸ್ಥಾಪಕ ಟ್ರಸ್ಟಿ ನವೀನ್ ಕೆ.ಎಸ್. ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

87ರ ವಯಸ್ಸಿನಲ್ಲಿ ಏಕೈಕ ಪುತ್ರನನ್ನು ಕಳೆದುಕೊಂಡ ಖ್ಯಾತ ಗಾಯಕಿ ಎಸ್ ಜಾನಕಿ: ಮುರಳಿ ಕೃಷ್ಣ ಹಠಾತ್ ನಿಧನ

ಸಂಗೀತ ಲೋಕದ ಕೋಗಿಲೆ ಎಂದು ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್ ಜಾನಕಿ ಅವರ ಜೀವನದಲ್ಲಿ ಇಂದು ಆಘಾತಕಾರಿ ದುಃಖದ ದಿನ. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಇಂದು (ಜನವರಿ 22) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 65 ವರ್ಷ ವಯಸ್ಸಿನ ಮುರಳಿ ಕೃಷ್ಣ ಅವರ ಅಕಾಲಿಕ ಮರಣ ಅಭಿಮಾನಿಗಳು ಮತ್ತು ಕಲಾ ಲೋಕವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.

ಎಸ್ ಜಾನಕಿ ಅವರ ಹೆಸರು ಸಂಗೀತದೊಂದಿಗೆ ಅನಿವಾರ್ಯವಾಗಿ ಜೋಡಿಸಿಕೊಂಡಿರುವಂತೆ, ಅವರ ಪುತ್ರ ಮುರಳಿ ಕೃಷ್ಣ ಕೂಡ ಕಲೆಯೊಂದಿಗೆ ಆಳವಾದ ನಂಟು ಹೊಂದಿದ್ದರು. ಅವರು ಅತ್ಯುತ್ತಮ ಭರತನಾಟ್ಯ ಕಲಾವಿದರಾಗಿದ್ದು, ಹಲವು ಶೋಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಕೆಲವು ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿ ಮಾಡಿ ತಮ್ಮದೇ ಆದ ಗುರುತು ಮೂಡಿಸಿದ್ದರು.

ಭರತನಾಟ್ಯ ಮತ್ತು ಕುಚುಪುಡಿ ಪ್ರವೀಣೆಯಾಗಿದ್ದ ಉಮಾ ಅವರನ್ನು ವಿವಾಹವಾಗಿದ್ದ ಮುರಳಿ ಕೃಷ್ಣ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಆದರೆ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯದೆ, ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು. ಕೆಲ ಕಾಲ ಮೈಸೂರಿನಲ್ಲಿ ವಾಸವಿದ್ದ ಮುರಳಿ ಕೃಷ್ಣ, ಈಗ ಹರಿದಾಡುತ್ತಿರುವ ಸುದ್ದಿಯಂತೆ ತಾಯಿಯ ಮನೆಯಾದ ಹೈದರಾಬಾದ್‌ನಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. “ಜಾನಕಿ ಅಮ್ಮನಿಗೆ ಈ ದುಃಖವನ್ನು ತಾಳುವ ಶಕ್ತಿ ನೀಡಲಿ” ಎಂದು ಹಲವರು ಪ್ರಾರ್ಥಿಸಿದ್ದಾರೆ.

87 ವರ್ಷದ ಎಸ್ ಜಾನಕಿ ಅವರು ಈ ವಯಸ್ಸಿನಲ್ಲಿ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿರುವುದು ದೇಶದ ಸಂಗೀತ ಲೋಕವನ್ನೇ ನೋವಿನಲ್ಲಿ ಮುಳುಗಿಸಿದೆ. ಮುರಳಿ ಕೃಷ್ಣ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ರಾಜೀವ್ ಗೌಡ ವಿರುದ್ಧ FIR ರದ್ದತಿಗೆ ಕೋರ್ಟ್ ನಕಾರ – ಶಿಡ್ಲಘಟ್ಟ ಪೌರಾಡಳಿತ ಪ್ರಕರಣ ತನಿಖೆಗೆ ಗ್ರೀನ್ ಸಿಗ್ನಲ್

0

ಬೆಂಗಳೂರು: ಶಿಡ್ಲಘಟ್ಟ ಪೌರಾಡಳಿತದ ಮಹಿಳಾ ಅಧಿಕಾರಿಗೆ ಬೆದರಿಕೆ ನೀಡಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ದಾಖಲಾಗಿದ್ದ FIR ರದ್ದತಿಗೆ ನ್ಯಾಯಾಲಯವು ನಕಾರ ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಎರಡನೇ ಅಪರ ಸತ್ರ ನ್ಯಾಯಾಲಯ ವಿಚಾರಣೆಗೆ ಹಸಿರು ಸೂಚನೆ ನೀಡಿದ್ದು, FIRಗಳ ತನಿಖೆ ಮುಂದುವರಿಯಲಿದೆ.

2 FIRಗಳು ರದ್ದತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕೋರ್ಟ್ ವಜಾ ಮಾಡುವುದಕ್ಕೆ ನಿರಾಕರಿಸಿದೆ. ನ್ಯಾ. ನಾಗಪ್ರಸನ್ನ ಪೀಠ ಈ ಆದೇಶ ಹೊರಡಿಸಿದ್ದು, ಪ್ರಕರಣ ದಾಖಲಾದ ದಿನದಿಂದ ರಾಜೀವ್ ಗೌಡ ನಾಪತ್ತೆಯಾಗಿರುವುದನ್ನು ಗಮನದಲ್ಲಿಟ್ಟುಕೊಂಡಿದೆ.

ಈ ಕ್ರಮದಿಂದ ಕಾನೂನು ಪ್ರಕ್ರಿಯೆ ಗಂಭೀರವಾಗಿದ್ದು, ನ್ಯಾಯಾಂಗವು ಅಧಿಕಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಕರ್ತವ್ಯವನ್ನು ರಕ್ಷಿಸುವ ಮಹತ್ವವನ್ನು ಒತ್ತಿ ತೋರಿಸಿದೆ. ಮುಂದಿನ ತನಿಖೆ ಮತ್ತು ನ್ಯಾಯ ಪ್ರಕ್ರಿಯೆ ರಾಜಕೀಯ ಮುಖಂಡರ ಹೋರಾಟದ ಮೇಲಿನ ಕಾನೂನಾತ್ಮಕ ಪ್ರಭಾವವನ್ನು ನಿರ್ಧರಿಸುವ ಪ್ರಮುಖ ಸಿಗ್ನಲ್ ಆಗಲಿದೆ.

ಬಿಗ್‌ಬಾಸ್‌ ವಿಜೇತ ಗಿಲ್ಲಿಗೆ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: 12ನೇ ಆವೃತ್ತಿಯ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟರಾಜ್ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವೈಯಕ್ತಿಕವಾಗಿ ಅಭಿನಂದನೆ ಪಡೆದಿದ್ದಾರೆ. ಕಾವೇರಿ ನಿವಾಸದಲ್ಲಿ ನಡೆದ ಈ ಸಮಾರಂಭದಲ್ಲಿ ಸಚಿವ ಬೈರತಿ ಬಸವರಾಜ್ ಮತ್ತು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು.

ಮಂಡ್ಯದ ಮಳವಳ್ಳಿಯ ದಡದಪುರ ಗ್ರಾಮ ಮೂಲದ ಗಿಲ್ಲಿ, ತಮ್ಮ ನೈಜ ವ್ಯಕ್ತಿತ್ವ, ಬಿಗ್‌ಬಾಸ್ ಮನೆಯಲ್ಲಿನ ಶ್ರೇಷ್ಠ ಪ್ರದರ್ಶನ ಮತ್ತು ನಿರ್ಧಾರಾತ್ಮಕ ಕೌಶಲ್ಯದ ಮೂಲಕ ಬಹುಮತ ಪಡೆದು ಸ್ಪರ್ಧೆಯನ್ನು ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರು ರನ್ನರ್‌ಅಪ್ ಆಗಿ ಸ್ಪರ್ಧೆಯನ್ನು ಮುಗಿಸಿದ್ದಾರೆ.

ಇದು ಕೇವಲ ಮನರಂಜನೆಯಲ್ಲ, ರಾಜ್ಯದ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಗೌರವ ದೊರಕುವುದರಿಂದ ಗಿಲ್ಲಿಯ ಸಾಧನೆಯ ಮಹತ್ವವನ್ನು ಮತ್ತಷ್ಟು ಒತ್ತಿ ತೋರಿಸುತ್ತದೆ. ಸ್ಪರ್ಧೆಯ ಜಯವು ಯುವಜನತೆಗೆ ಸಕ್ರಿಯ, ಶ್ರಮಪರ, ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.

ಮಲೆ ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ಮುಂದುವರಿದ ಚಿರತೆ ಅಟ್ಟಹಾಸ : ಭಕ್ತರ ಸುರಕ್ಷತೆಗೆ ಗಸ್ತು ಹೆಚ್ಚಳ, ಪಾದಯಾತ್ರೆಗೆ ಸಮಯ ನಿಗದಿ ಚಿಂತನೆ

0

ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ತಾಳು ಬೆಟ್ಟದಲ್ಲಿ ಪಾದಯಾತ್ರಿಗೆ ಚಿರತೆ ದಾಳಿಯಿಂದ ಸಾವಾದ ಘಟನೆ ನಂತರವೂ ಚಿರತೆ ಚಟುವಟಿಕೆ ನಿಂತಿಲ್ಲ. ಬುಧವಾರ ರಾತ್ರಿ ಮತ್ತೆ ಅದೇ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.

ಚಿರತೆ ರಸ್ತೆ ತಡೆಗೋಡೆ ಮೇಲೆ ಕುಳಿತುಕೊಂಡಿರುವುದು ಹಾಗೂ ರಸ್ತೆಯ ಪಕ್ಕದಲ್ಲಿ ಹೊಂಚು ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ, ಜಿಲ್ಲಾಡಳಿತ ತಕ್ಷಣವೇ ಎಚ್ಚರಿಕೆ ಕ್ರಮ ಕೈಗೊಂಡಿದೆ. ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನು ಅಳವಡಿಕೆ, ಡ್ರೋನ್ ಮೂಲಕ ನಿಗಾವಹಣೆ ಹಾಗೂ ವಿಶೇಷ ಕಾರ್ಯಪಡೆ ನಿಯೋಜನೆ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸ್ಥಳದಲ್ಲಿ ಗಸ್ತು ತೀವ್ರಗೊಳಿಸಲಾಗಿದೆ.

ಸ್ಥಳೀಯ ಶಾಸಕ ಮಂಜುನಾಥ್ ಮಾತನಾಡಿ, “ಭಕ್ತರ ಸುರಕ್ಷತೆ ನಮ್ಮ ಹೊಣೆ. ಪ್ರತೀ ಜೀವವೂ ಅಮೂಲ್ಯ. ಶನಿವಾರ ಶಿವರಾತ್ರಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡುವ ಚಿಂತನೆ ಇದೆ. ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ಎರಡಕ್ಕೂ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾರ್ ಮಾಲೀಕನ ಹತ್ಯೆ: 4 ಆರೋಪಿಗಳ ಬಂಧನ

0

ಚಿಕ್ಕಮಗಳೂರು: ನಗರದ ಬಾರ್ ಮಾಲೀಕನನ್ನು ನಿರ್ದಯವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಲ್ಕತ್ತಾ ಮೂಲದ ರುದ್ರ, ಆಂಧ್ರ ಪ್ರದೇಶದ ಅದೋನಿಯ ವೀರ ಶೇಖರ್, ತುಮಕೂರಿನ ವಿನಿ ಹಾಗೂ ಸ್ಥಳೀಯ ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ. ಈ ನಾಲ್ವರೂ ಜ.20ರಂದು ನಗರದ ಬಾರ್ ಒಂದರ ಮಾಲೀಕರಾದ ತೇಜಸ್ವಿ ಅವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು.

ಹಲ್ಲೆಯ ಬಳಿಕ ಪ್ರಜ್ಞೆ ತಪ್ಪಿದ ತೇಜಸ್ವಿಯನ್ನು ಆರೋಪಿಗಳು ಸುಮಾರು ಒಂದು ಕಿಲೋ ಮೀಟರ್ ದೂರದ ಬಯಲಲ್ಲಿ ಎಸೆದು ಪರಾರಿಯಾಗಿದ್ದರು. ಜ.21ರಂದು ಬೆಳಗ್ಗೆ ಆಟೋ ಚಾಲಕರೊಬ್ಬರು ಅವರನ್ನು ಕಂಡು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಾವೇ ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

error: Content is protected !!