Home Blog Page 230

‘ತುಳು ಚಿತ್ರರಂಗಕ್ಕೆ ನನ್ನಿಂದಾದ ಬೆಂಬಲ ನೀಡುವೆʼ: ನಟ ಸುನಿಲ್ ಶೆಟ್ಟಿ

ಬಾಲಿವುಡ್‌ನಲ್ಲಿ ದಶಕಗಳ ಕಾಲ ಸ್ಟಾರ್ ಆಗಿ ಮಿಂಚಿದರೂ, ಸುನಿಲ್ ಶೆಟ್ಟಿ ಅವರಿಗೆ ತಮ್ಮ ಮೂಲ ಎಂದರೆ ತುಳುನಾಡು. ಮಂಗಳೂರು ಮೂಲದ ನಟ ಸುನಿಲ್ ಶೆಟ್ಟಿ ಇದೀಗ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ನಟಿಸಿರುವ ‘ಜೈ’ ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಹಿಂದಿಯ ಜನಪ್ರಿಯ ಶೋ ‘ಲಲ್ಲನ್ಟಾಪ್’ನಲ್ಲಿ ಮಾತನಾಡಿದ ಅವರು, “ತುಳು ಸಿನಿಮಾಗಳಿಗೆ ಬಹಳ ಕಡಿಮೆ ವೀಕ್ಷಕರಿದ್ದಾರೆ. ಆದರೂ ಆ ಚಿತ್ರರಂಗಕ್ಕೆ ಬೆಂಬಲ ನೀಡಬೇಕು ಎಂಬ ಕಾರಣಕ್ಕೆ ನಾನು ‘ಜೈ’ ಸಿನಿಮಾನಲ್ಲಿ ನಟಿಸಿದೆ” ಎಂದು ಹೇಳಿದ್ದಾರೆ.

ಸಿನಿಮಾಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಭಾವುಕರಾಗಿ ಮಾತನಾಡಿದ ಸುನಿಲ್ ಶೆಟ್ಟಿ, “ಬಹುಷಃ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕ ಮೆಚ್ಚುಗೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ. ಇದು ನನಗೆ ತುಂಬಾ ಸಂತೋಷ ನೀಡಿದೆ” ಎಂದರು.

ಭಾಷೆ ಮತ್ತು ಸಿನಿಮಾ ಕುರಿತು ತಮ್ಮ ನಿಲುವು ಹಂಚಿಕೊಂಡ ಅವರು, “ಇಂದು ಭಾಷೆ ಅಡ್ಡಿಯಾಗುವುದಿಲ್ಲ. ಕಂಟೆಂಟ್ ಚೆನ್ನಾಗಿದ್ದರೆ ಯಾವುದೇ ಭಾಷೆಯ ಸಿನಿಮಾ ಜನರಿಗೆ ಇಷ್ಟವಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಜೈ’ ಸಿನಿಮಾ ದುಬೈ, ಕತಾರ್, ಮುಂಬೈ, ಗೋವಾ ಸೇರಿದಂತೆ ಹಲವೆಡೆ ಬಿಡುಗಡೆಯಾಗಿದ್ದು, 50 ದಿನಗಳನ್ನು ಪೂರೈಸಿ ಉತ್ತಮ ಗಳಿಕೆ ಮಾಡುತ್ತಿದೆ. ತುಳು ಚಿತ್ರರಂಗಕ್ಕೆ ಸುನಿಲ್ ಶೆಟ್ಟಿ ನೀಡಿರುವ ಈ ಬೆಂಬಲವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

‘ರಣವೀರ್ ಪಾತ್ರ ಸುಲಭವಲ್ಲ, ಅಕ್ಷಯ್ ಖನ್ನಾ ಅಮೇಜಿಂಗ್’: ಧುರಂಧರ್ ಮೆಚ್ಚಿದ ಶಿವರಾಜ್‌ ಕುಮಾರ್

‘45’ ಸಿನಿಮಾವನ್ನು ಹಿಂದಿ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ನಟ ಶಿವರಾಜ್ಕುಮಾರ್ ಮುಂಬೈನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶಿವಣ್ಣ, ಬಾಲಿವುಡ್ ಸಿನಿಮಾ ‘ಧುರಂಧರ್’ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಣವೀರ್ ಸಿಂಗ್ ಹಾಗೂ ಅಕ್ಷಯ್ ಖನ್ನಾ ಅಭಿನಯದ ‘ಧುರಂಧರ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಆ ಸಿನಿಮಾದ ಮೇಕಿಂಗ್ ಮತ್ತು ಎಮೋಷನ್ ಬಗ್ಗೆ ಶಿವರಾಜ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ಎಲ್ಲರ ನಟನೆ ಚೆನ್ನಾಗಿದೆ. ಅಕ್ಷಯ್ ಖನ್ನಾ ಅವರ ಪಾತ್ರಕ್ಕೆ ಏನು ಬೇಕಾದರೂ ಮಾಡುವ ಅವಕಾಶ ಇದೆ. ಆದರೆ ರಣವೀರ್ ಸಿಂಗ್ ಮಾಡಿದ ಪಾತ್ರ ಅಷ್ಟು ಸುಲಭವಲ್ಲ. ಪಾತ್ರಕ್ಕೆ ಬೇಕಾದ ಸೂಕ್ಷ್ಮ ಅಭಿನಯವನ್ನು ಅವರು ಅದ್ಭುತವಾಗಿ ನೀಡಿದ್ದಾರೆ’ ಎಂದರು.

ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತನಾಡಿದ ಶಿವಣ್ಣ, ಕೇವಲ ಪಾತ್ರಕ್ಕಾಗಿ ಅಲ್ಲ, ಜನರ ಹೃದಯ ತಲುಪುವಂತಹ ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ‘ನನ್ನನ್ನು ಜನರು ನಟನಾಗಿ ಅಲ್ಲ, ಪಾತ್ರವಾಗಿ ನೋಡಬೇಕು. ಸಿನಿಮಾ ಭಾರತೀಯ ಸಂಸ್ಕೃತಿಯ ಭಾಗವಾಗಿರಬೇಕು’ ಎಂದಿದ್ದಾರೆ.

ಕನ್ನಡ ಚಿತ್ರರಂಗವನ್ನು ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ಬಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿವೆ ಎಂಬುದನ್ನೂ ಶಿವಣ್ಣ ಸ್ಮರಿಸಿದರು. ‘ಅವರು ಧೈರ್ಯ ತೋರಿಸಿದ್ದರಿಂದಲೇ ಇಂದು ಕನ್ನಡ ಸಿನಿಮಾಗಳ ಬಗ್ಗೆ ಹಿಂದಿ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಈಗ ನಾವು ‘45’ ತಂಡದವರು ಬಂದಿದ್ದೇವೆ. ಏನಾಗುತ್ತದೋ ನೋಡೋಣ’ ಎಂದು ಹೇಳಿದರು.

ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾದಲ್ಲಿ ಉಪೇಂದ್ರ, ರಾಜ್ ಬಿ. ಶೆಟ್ಟಿ ಹಾಗೂ ಶಿವರಾಜ್ಕುಮಾರ್ ಒಟ್ಟಾಗಿ ಅಭಿನಯಿಸಿದ್ದು, ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಕನ್ನಡದಲ್ಲಿ ಬಿಡುಗಡೆಯಾದ ಬಳಿಕ, ಸಿನಿಮಾ ಬೇರೆ ಭಾಷೆಗಳಿಗೂ ವಿಸ್ತರಿಸುತ್ತಿರುವುದರಿಂದ ಶಿವಣ್ಣ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಹಾವೇರಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಪುರಸಭೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

0

ಹಾವೇರಿ: ಬಂಕಾಪುರ ಇಂದು ಭಯದ ನೆರಳಿನಲ್ಲಿ ಬದುಕುತ್ತಿದೆ. ಬೀದಿ ನಾಯಿಗಳ ನಿಯಂತ್ರಣದ ಕೊರತೆಯಿಂದ ಮಕ್ಕಳು ಮತ್ತು ವೃದ್ಧರು ಹೊರಗೆ ಕಾಲಿಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ದಿನೇದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಇದೀಗ ನಿರ್ಲಕ್ಷ್ಯಕ್ಕೆ ಭೀಕರ ಉದಾಹರಣೆಯಾಗಿ ಪರಿಣಮಿಸಿದೆ.

ಇತ್ತೀಚೆಗೆ ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಹಸನ್ ಮತ್ತು 3 ವರ್ಷದ ಅಕ್ರಮ್ ಮೇಲೆ ಬೀದಿ ನಾಯಿಗಳು ಹಠಾತ್ ದಾಳಿ ನಡೆಸಿದವು. ಕೈ, ಕಾಲು ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿ ಮಕ್ಕಳು ರಕ್ತಸ್ರಾವದಿಂದ ನರಳಿದರು. ತಕ್ಷಣ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಒಬ್ಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಘಟನೆ ಪೋಷಕರಲ್ಲಿ ಮಾತ್ರವಲ್ಲ, ಇಡೀ ಬಂಕಾಪುರದ ಜನರಲ್ಲಿ ಆಕ್ರೋಶ ಹುಟ್ಟಿಸಿದೆ. “ಪುರಸಭೆಯ ನಿರ್ಲಕ್ಷ್ಯವೇ ನಮ್ಮ ಮಕ್ಕಳಿಗೆ ಅಪಾಯ ತಂದಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಮತ್ತೊಂದು ಜೀವ ಬಲಿಯಾಗುವ ಮುನ್ನವೇ, ಬಂಕಾಪುರ ಪುರಸಭೆ ಬೀದಿ ನಾಯಿಗಳ ನಿಯಂತ್ರಣಕ್ಕೆ ತಕ್ಷಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿದೆ. ಇದು ಕೇವಲ ಬೇಡಿಕೆ ಅಲ್ಲ — ಸಾರ್ವಜನಿಕರ ಜೀವ ರಕ್ಷಿಸುವ ಕರೆಯಾಗಿದೆ.

ಫೇಕ್ ಫೋಟೋ ವೈರಲ್ ಮಾಡಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಾವೇದ್ ಅಖ್ತರ್

ನಾಸ್ತಿಕನಾಗಿಯೇ ಗುರುತಿಸಿಕೊಂಡಿರುವ ಹಿರಿಯ ಸಾಹಿತಿ ಜಾವೇದ್ ಅಖ್ತರ್ ಇದೀಗ ಫೇಕ್ ನ್ಯೂಸ್ ಬಲಿಯಾಗಿದ್ದಾರೆ. ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ವ್ಯಕ್ತಿಯಾಗಿರುವ ಜಾವೇದ್ ಅಖ್ತರ್ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ, ನಮಾಜ್ ಆರಂಭಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ.

ಜಾವೇದ್ ಅಖ್ತರ್ ತಲೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿರುವ ನಕಲಿ ಫೋಟೋ ಮತ್ತು ವಿಡಿಯೋವನ್ನು ವೈರಲ್ ಮಾಡಿ, “ಅವರು ಅಲ್ಲಾ ಇರುವುದನ್ನು ಒಪ್ಪಿಕೊಂಡಿದ್ದಾರೆ, ಪಕ್ಕಾ ಮುಸಲ್ಮಾನ ಆಗಿದ್ದಾರೆ” ಎಂದು ವದಂತಿ ಹಬ್ಬಿಸಲಾಗಿದೆ. ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಜಾವೇದ್ ಅಖ್ತರ್, ಇದು ಎಐ ಮೂಲಕ ಸೃಷ್ಟಿಸಿದ ಫೇಕ್ ಚಿತ್ರ ಎಂದು ಹೇಳಿದ್ದಾರೆ.

“ನಾನು ದೇವರನ್ನು ಒಪ್ಪಿಕೊಂಡಿದ್ದೇನೆ ಎಂಬುದು ಸಂಪೂರ್ಣ ಸುಳ್ಳು. ಈ ರೀತಿಯ ಫೇಕ್ ನ್ಯೂಸ್ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈ ಸುಳ್ಳಿಗೆ ಕಾರಣರಾದವರನ್ನು ಕಾನೂನಿನ ಮೂಲಕ ಹಿಡಿಯುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೇಕ್ ವಿಡಿಯೋ ಫಾರ್ವರ್ಡ್ ಮಾಡಿದವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾವೇದ್ ಅಖ್ತರ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ‘ದೇವರು ಇದ್ದಾನಾ?’ ಎಂಬ ವಿಷಯದ ಚರ್ಚೆಯಲ್ಲಿ ಜಾವೇದ್ ಅಖ್ತರ್ ಭಾಗವಹಿಸಿದ್ದರು. ಆ ಚರ್ಚೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ರೀತಿಯ ಎಐ ಫೇಕ್ ಫೋಟೋ ಹರಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬಳ್ಳಾರಿ ಬ್ಯಾನರ್–ವಾಲ್ಮೀಕಿ ಗಲಾಟೆ: ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ FIR ದಾಖಲು

0

ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾನರ್ ಹಾಗೂ ವಾಲ್ಮೀಕಿ ಪುತ್ಥಳಿ ಸಂಬಂಧ ನಡೆದ ಗಲಾಟೆ ಪ್ರಕರಣದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಶುಕ್ರವಾರ (ಜ.2) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜನಾರ್ದನ ರೆಡ್ಡಿ ಅವರು ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ದೂರು ಸಲ್ಲಿಸಿದ್ದರೆ, ನಾಗರಾಜ್ ಅವರು ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪ ದಾಖಲಿಸಿದ್ದರು.

ದೂರಿನ ಆಧಾರದಲ್ಲಿ ಶಾಸಕ ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಪ್ರತಾಪ್ ರೆಡ್ಡಿ, ನಾರಾ ಸೂರ್ಯನಾರಾಯಣ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಹಲವು ನಾಯಕರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜನಾರ್ದನ ರೆಡ್ಡಿ ಮನೆ ಮುಂದೆ ಘರ್ಷಣೆ ಪ್ರಕರಣ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಬಳ್ಳಾರಿ ಎಸ್‌ಪಿಗೆ ತಲೆದಂಡ

0

ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಬ್ಯಾನರ್ ಗಲಾಟೆ ಹಾಗೂ ಘರ್ಷಣೆ ಪ್ರಕರಣ ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಭಾರಿ ಬೆಳವಣಿಗೆಗೆ ಕಾರಣವಾಗಿದೆ. ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಜನವರಿ 1ರಂದು ಮಾತ್ರವೇ ಪವನ್ ನೆಜ್ಜೂರ್ ಅವರು ಬಳ್ಳಾರಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾದ ಆರೋಪ ಇದೀಗ ಅವರ ಅಮಾನತಿಗೆ ಕಾರಣವಾಗಿದೆ.

ಬಳ್ಳಾರಿ ರೇಂಜ್ ಡಿಐಜಿ ಅವರು ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಡಿಜಿ ಮತ್ತು ಐಜಿಪಿ ಕಡೆಯಿಂದಲೂ ಸರ್ಕಾರಕ್ಕೆ ಅಮಾನತು ಶಿಫಾರಸು ಮಾಡಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಬ್ಯಾನರ್ ಗಲಾಟೆ ಪ್ರಕರಣ ಈಗಾಗಲೇ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮಗಳು ಕೈಗೊಳ್ಳುವ ಸಾಧ್ಯತೆ ಇದೆ.

ಜನಾರ್ದನ ರೆಡ್ಡಿ ವಿರುದ್ಧ ಒಂದೇ ಠಾಣೆಯಲ್ಲಿ 4 ಎಫ್‌ಐಆರ್

0

ಬಳ್ಳಾರಿ: ಬ್ಯಾನರ್ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಒಂದೇ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಎಲ್ಲದಲ್ಲೂ ಅವರು ಎ1 ಆರೋಪಿ ಆಗಿದ್ದಾರೆ.

ಶಾಸಕ ಭರತ್ ರೆಡ್ಡಿ ಅವರ ಆಪ್ತ ಚಾನಾಳ್ ಶೇಖರ್ ಅವರು ಕೊಲೆಯತ್ನ ಆರೋಪದಡಿ ದೂರು ನೀಡಿದ್ದು, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಮತ್ತೊಂದೆಡೆ, ಮೃತ ರಾಜಶೇಖರ್ ಸಹೋದರ ಈಶ್ವರ ರೆಡ್ಡಿ ಅವರು ಕೊಲೆ ಆರೋಪದಡಿ ದೂರು ಸಲ್ಲಿಸಿದ್ದು, ಜನಾರ್ದನ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸೇರಿ ಹಲವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇದಲ್ಲದೆ, ವಾಲ್ಮೀಕಿ ಬ್ಯಾನರ್ ಹರಿದು ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಲೋಕೇಶ್ ನೀಡಿದ ದೂರಿನ ಮೇರೆಗೆ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಮೂಲಕ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ಕೊಲೆ, ಕೊಲೆಯತ್ನ ಹಾಗೂ ಅಟ್ರಾಸಿಟಿ ಸೇರಿ ಗಂಭೀರ ಆರೋಪಗಳಿರುವ ನಾಲ್ಕು ಕೇಸ್‌ಗಳು ದಾಖಲಾಗಿವೆ.

ಘಟನೆ ಸಂಬಂಧ ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ತಿರುವು ಪಡೆಯುವ ಸಾಧ್ಯತೆ ಇದೆ.

ರಾಯಲ್ ಕರಾಟೆ ಕ್ಲಬ್ ಕ್ರೀಡಾಪಟುಗಳ ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಳಸಾಪುರ ರಸ್ತೆಯಲ್ಲಿರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 4ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಯಲ್ ಕರಾಟೆ ಕ್ಲಬ್ ಹಾಗೂ ಶ್ರೀ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯ ಕ್ರೀಡಾಪಟುಗಳಾದ ಅನನ್ಯ ಆರೇರ ಕಟಾ ವಿಭಾಗದಲ್ಲಿ ಪ್ರಥಮ, ವಿಹಾನ ವಗ್ಗನವರ-ಪ್ರಥಮ, ಲಿಂಗರಾಜ ಹಾಳಕೇರಿ ತೃತೀಯ, ವರುಣ ಜಿನಗಿ ಕುಮಟೆ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಹಾಗೂ ಭರತ್ ಇರಾಳ್ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ, ತರಬೇತುದಾರ ಸುಲೇಮಾನ ದೊಡ್ಡಮನಿ ಅವರನ್ನು ಶ್ರೀ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ನಿರ್ಗತಿಕರಿಗೆ ಉಚಿತ ಕಂಬಳಿ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೊಲಿಡಾರಿಟಿ ಯೂತ್ ಮೂವ್ಮೆಂಟ್ (NGO) ವತಿಯಿಂದ ಹೊಸ ವರ್ಷದ ಅಂಗವಾಗಿ ಬಡವರಿಗೆ, ನಿರ್ಗತಿಕರು ಮತ್ತು ವೃದ್ಧರು ಹಾಗೂ ಚಳಿಗಾಲದಲ್ಲಿ ತೊಂದರೆಗೊಳಗಾದ ಸುಮಾರು 80 ಜನರಿಗೆ ಉಚಿತವಾಗಿ ಕಂಬಳಿಗಳನ್ನು ವಿತರಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಇಮಾಮಸಾಬ ಮೊರಬದ ಹಾಗೂ ಜುನೇದ್‌ಸಾಬ ಉಮಚಗಿ ಪಾಲ್ಗೊಂಡು ಮಾತನಾಡಿ, ಇಂತಹ ಸಮಾಜಮುಖಿ ಕಾರ್ಯ ಕಳೆದ ವರ್ಷದಂತೆಯೇ ಈ ವರ್ಷವೂ ಸೊಲಿಡಾರಿಟಿ ಯೂತ್ ಮೂವ್ಮೆಂಟ್ (NGO) ವತಿಯಿಂದ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ಯೂಸುಫ್ ಮುಲ್ಲಾ, ಕಾರ್ಯದರ್ಶಿ ರಿಯಾಜ್ ಶೇಖ, ಕಾರ್ಯಕರ್ತರಾದ ಅಬ್ದುಲ್ ಹಫೀಜ್ ಉಮಚಗಿ, ಮುನ್ನ ಕಲ್ಮನಿ, ಅಕ್ಬರ್‌ಅಲಿ ಅತ್ತಾರ, ಜಹೀರ್ ಅಹ್ಮದ್, ಜಾವೀದ ಉಮಚಗಿ, ಖಾಸಿಂ ದರ್ಗದ್, ಮೆಹಬೂಬ್‌ಅಲಿ, ಜೈದ್ ಸರ್ವರ್, ಅಲ್ತಾಫ್ ನದಾಫ್, ಮುಹಮ್ಮದ್ ಫಹಿಮ್, ಸಮೀರ್ ಅಕ್ಕಿ, ವಸೀಮ್ ಅಹ್ಮದ್, ತನ್ವೀರ್ ಶೇಖ, ಫುರಖಾನ ಉಮಚಗಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.

ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಿರಿ: ಸಿ.ಎಸ್. ಶಿವನಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ರಸ್ತೆ ಅಪಘಾತಗಳನ್ನು ತಡೆಗಟ್ಟುವದು, ಅಪಘಾತಗಳ ಪ್ರಮಾಣ ಕಡಿಮೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಎಲ್ಲ ಇಲಾಖೆಗಳ ಕರ್ತವ್ಯವಾಗಿದೆ. ಜ. 1ರಿಂದ 31ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಆಚರಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿಯೂ ಸಹ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಕಾರ್ಯಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಲು ಜನರಲ್ಲಿ ತಿಳುವಳಿಕೆ ಇಲ್ಲದಿರುವುದು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಮುಖ್ಯ ಕಾರಣವಾಗಿದೆ. 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವುದು ಹಾಗೂ ವಾಹನದ ಇನ್ಸುರೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವುದು, ಪೊಲೀಸರ ಕಣ್ತಪ್ಪಿಸಿ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡುವುದರಿಂದ ರಸ್ತೆ ಅಪಘಾತ ಸಂಭವಿಸಿ ಜನರು ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ರಸ್ತೆಯಲ್ಲಿನ ವೇಗ ಮಿತಿಗೊಳಿಸಿ ಅಪಘಾತ ತಪ್ಪಿಸಲು ರಸ್ತೆಗಳಲ್ಲಿ ಹಂಪ್‌ಗಳನ್ನು ನಿರ್ಮಿಸಿರುತ್ತಾರೆ. ಆದರೆ ವಾಹನ ಸವಾರರು ಆ ಹಂಪ್‌ಗಳನ್ನು ತಪ್ಪಿಸಿ ಬೇರೆ ದಾರಿಯಿಂದ ವಾಹನ ಚಲಾಯಿಸಿ ವಿನಾಕಾರಣ ಅಪಘಾತಗಳು ಸಂಭವಿಸಲು ಅನುವು ಮಾಡುತ್ತಾರೆ. ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಎಲ್ಲರಿಗೂ ಬಹಳ ಮುಖ್ಯವಾಗಿದೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮಾಡಿ ವಾಹನ ಚಾಲಕರು ಅಪಘಾತಗಳನ್ನು ತಪ್ಪಿಸಿ ತಮ್ಮ ಹಾಗೂ ಮತ್ತೊಬ್ಬರ ಪ್ರಾಣವನ್ನು ಉಳಿಸಬಹುದು. ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಲಾ ಬಸ್‌ಗಳ ಸುರಕ್ಷತೆ ಮತ್ತು ನಿರ್ವಹಣಾ ಕೈಪಿಡಿ, ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪೋಸ್ಟರ್ ಹಾಗೂ ಸ್ಟಿಕರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಸಾದಿಕ ನರಗುಂದ, ನಾಗರಾಜ ಅಸುಂಡಿ, ಅರುಣ ಕಟ್ಟಿಮನಿ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಇನ್ನಿತರರು ಹಾಜರಿದ್ದರು.

ಭೂಮಿಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಂ.ಎ. ಯರಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ ಸಜ್ಜನರ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಕುರಿತು ಶಾಲಾ-ಕಾಲೇಜುಗಳಲ್ಲಿ ಅಲ್ಲದೇ ನಮ್ಮ ನೆರೆ-ಹೊರೆಯವರಿಗೂ ಜಾಗೃತಿ ಮೂಡಿಸಬೇಕು. ವಾಹನ ಚಾಲನಾ ಸಮಯದಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಯಾರೂ ಈ ಕುರಿತು ನಿರ್ಲಕ್ಷ್ಯ ತೋರಬಾರದು. ರಾಷ್ಟ್ರದ ಅಭಿವೃದ್ಧಿಗಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಿ ವಾಹನ ಚಲಾಯಿಸಬೇಕು. ವಾಹನ ಚಾಲಕರ ನಿರ್ಲಕ್ಷ್ಯ ಹಾಗೂ ಒಂದು ಕ್ಷಣದ ಆವೇಶದಿಂದ ಅಪಘಾತಗಳು ಸಂಭವಿಸಿ ಅವರ ಜೀವನವೇ ಸಂಕಷ್ಟಮಯವಾಗುತ್ತದೆ. ಪಾಲಕರು ತಮ್ಮ 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅನುಮತಿಸಬಾರದು. ಈ ಬಗ್ಗೆ ಜಾಗೃತಿ ವಹಿಸುವುದು ಮುಖ್ಯವಾಗಿದೆ ಎಂದರು.

error: Content is protected !!